For Quick Alerts
ALLOW NOTIFICATIONS  
For Daily Alerts

ತುಪ್ಪ ಕೊಬ್ಬರಿ ಹೋಳಿಗೆ ಹೊಡಿನಮ್ಮಪ್ಪ

By Prasad
|
Ghee dry coconut holige (Photo by Vani)
ಸಿಹಿ ಅಂದರೆ ಹುಣಸೆಹಣ್ಣು ತೋರಿದಾಗ ಬಾಯಲ್ಲಿ ನೀರೂರಿದಷ್ಟೇ ನೀರುವವರು ತುಪ್ಪ ಕೊಬ್ಬರಿ ಹೋಳಿಗೆಯನ್ನು ಖಂಡಿತ ಇಷ್ಟಪಡುತ್ತಾರೆ. ಅದ್ಭುತ ಕೈಯಿರುವ ಬಾಣಸಿಗರು ಈ ಹೊಸರುಚಿಯನ್ನು ಯಾವುದೇ ಸಂದರ್ಭದಲ್ಲಿ ತಯಾರಿಸಬಹುದು. ಈ ಸಿಹಿ ತಿನಿಸು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ.

* ವಾಣಿ ನಾಯಿಕ, ಬೆಂಗಳೂರು

ಬೇಕಾಗುವ ಪದಾರ್ಥಗಳು

ಮೈದಾ ಹಿಟ್ಟು 2 ಬಟ್ಟಲು
ಚಿರೋಟಿ ರವೆ 1 ಬಟ್ಟಲು
ತುಪ್ಪ 1 ಬಟ್ಟಲು
ಒಣ ಕೊಬ್ಬರಿ (ಹೆರೆದುಕೊಂಡಿದ್ದು) 1 ಬಟ್ಟಲು
ಸಕ್ಕರೆ 1 ಬಟ್ಟಲು
ಏಲಕ್ಕಿ
ಹಾಲು ಸ್ವಲ್ಪ

ತಯಾರಿಸುವ ವಿಧಾನ

ಮೈದಾ ಹಿಟ್ಟು ಮತ್ತು ಚಿರೋಟಿ ರವೆ ಹುದು ಹದಗೆಡದಂತೆ ತಯಾರಿಸಿಕೊಂಡರೆ ತುಪ್ಪು ಕೊಬ್ಬರಿ ಹೋಳಿಗೆ ತಯಾರಿಸುವಾಗಿನ ಅರ್ಧ ಕೆಲಸ ಯಶಸ್ವಿಯಾಗಿ ಮುಗಿದಂತೆ. ಸೋ, ಈ ಹುದು ತಯಾರಿಸುವಾಗ ಹೆಚ್ಚು ತಾಳ್ಮೆ ಮತ್ತು ನಿಗಾ ಅಗತ್ಯ.

ಒಂದು ಬೋಗುಣಿಯಲ್ಲಿ ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಸೇರಿಸಿ ಅದಕ್ಕೆ ತುಸು ತುಪ್ಪ ಮತ್ತು ಅಗತ್ಯಕ್ಕೆ ತಕ್ಕಷ್ಟು ನೀರನ್ನು ಹಾಕಿ ಚಪಾತಿ ಹುದುವಿಗಿಂತ ಸ್ವಲ್ಪ ಅಳ್ಳಕಾಗಿ ಹುದು ತಯಾರಿಸಿಕೊಳ್ಳಬೇಕು.

ಇದಾದ ನಂತರ, ಹೆರೆದಿಟ್ಟುಕೊಂಡ ಒಣ ಕೊಬ್ಬರಿ, ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಇನ್ನೊಂದು ಬೋಗುಣಿಯಲ್ಲಿ ಹಾಕಿಕೊಂಡು, ಅದಕ್ಕೆ ತುಸುವೇ ಹಾಲು ಹಾಕಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಎಲ್ಲಾ ಮಿಶ್ರಣವನ್ನು ಒಟ್ಟಿಗೇ ಉಂಡೆಗಳನ್ನಾಗಿ ಮಾಡಬೇಡಿ, ನಾಲ್ಕಾರು ಹೋಳಿಗೆ ಮುಗಿಯುವ ಹೊತ್ತಿಗೆ ಮಿಶ್ರಣ ನೀರು ಬಿಟ್ಟುಬಿಡುತ್ತದೆ.

ನಾಲ್ಕಾರು ಸಕ್ಕರೆ, ಕೊಬ್ಬರಿ ಉಂಡೆ ತಯಾರಿಸಿಕೊಂಡ ನಂತರ ಹಿಟ್ಟನ್ನು ಕೈಯಲ್ಲಿ ದುಂಡಗೆ ತಟ್ಟಿಕೊಂಡು ಅದರಲ್ಲಿ ಸಕ್ಕರೆ, ಕೊಬ್ಬರಿ ಉಂಡೆ ಹಾಕಿ ಹಿಟ್ಟಿನಿಂದ ಪೂರ್ತಿ ಮುಚ್ಚಿರಿ. ಕೈಯಲ್ಲಿ ಪೂರಿಯಾಕಾರಕ್ಕಿಂತ ಸ್ವಲ್ಪ ದೊಡ್ಡದಾಗಿ ಮತ್ತೆ ತಟ್ಟಿಕೊಳ್ಳಿ. ಲಟ್ಟಿಸದಿರುವುದು ಉತ್ತಮ. ತಟ್ಟಿಕೊಂಡ ಹಿಟ್ಟಿನ ಎರಡೂ ಮೈಗೆ ತುಪ್ಪ ಸವರಿ ಕಾದ ಕಾವಲಿಯ ಮೇಲೆ ಎರಡೂ ಭಾಗಗಳನ್ನು ಕಂದು ಬಣ್ಣ ಬರುವವರೆಗೆ ಬೇಯಿಸಿ.

ದಟ್ಸಾಲ್, ರುಚಿರುಚಿಯಾದ, ಸಿಹಿಸಿಹಿಯಾದ ತುಪ್ಪ ಕೊಬ್ಬರಿ ಹೋಳಿಗೆ ತಯಾರ್. ಇದನ್ನು ಬಿಸಿಯಾಗಿರುವಾಗಲೇ ಬಟ್ಟಲಲ್ಲಿ ತುಪ್ಪವನ್ನು ಸುರಿದುಕೊಂಡು (ಬೇಕಿದ್ದರೆ) ಅದರಲ್ಲಿ ಹೋಳಿಗೆಯನ್ನು ಅದ್ದಿ ತಿನ್ನಬಹುದು. ಬಲು ಸ್ವಾದಿಷ್ಟವಾಗಿರುತ್ತದೆ. ಕೊಲೆಸ್ಟ್ರಾಲ್ ಗೆ ಹೆದರುವವರು ತುಪ್ಪ ಕಡಿಮೆ ಬಳಸಿ.

X
Desktop Bottom Promotion