For Quick Alerts
ALLOW NOTIFICATIONS  
For Daily Alerts

ಮಾವಿನಕೊಂಬೆಯ ಹೀರೇಕಾಯಿ ಪಾಯಸ

By Super
|
Heerekai or Ridge gourd
ನನ್ನ ಡಿಸ್ಕವರಿಯ ಕ್ಷೇತ್ರ ಪಲ್ಯ, ಸಾರು, ತಂಬುಳಿ, ಗಿಡಮೂಲಿಕೆಗಳ ಚಟ್ನಿ ಮತ್ತು ಸಿಹಿ ತಿಂಡಿಗಳನ್ನು ತಯಾರಿಸುವುದಾಗಿದೆ. ಒಂದು ಸಿಹಿ ತಿಂಡಿಯಿಂದ ನಮ್ಮ ಅಡಿಗೆ ಮನೆಯ ರುಚಿಯನ್ನು ನಿಮಗೆ ತಲುಪಿಸುವ ಇಷ್ಟವಾಗಿದೆ. ಮೊದಲಿಗೆ ಹೀರೇಕಾಯಿ ಪಾಯಸ ಅಥವಾ ಖೀರು.

* ಲೀನಾ ಅಬು ಬಲ್ಲಾಳ್, ಮಾವಿನಕೊಂಬೆ ಕಳಸ

ಪಶ್ಚಿಮ ಘಟ್ಟ ಸಾಲಿನ ರಮಣೀಯ ಪರ್ವತಗಳ ನಡುವೆ ತಲೆ ಎತ್ತಿ ನಿಂತಿದೆ ನಮ್ಮ ಮನೆ. ಕಳಸ ಹೋಬಳಿಯ ಸಂಸೆ ಗ್ರಾಮದಲ್ಲಿ ನೆಲೆಯಾಗಿರುವ ನಮ್ಮ ಸಮಾಜ ಸೇವಾ ಉದ್ದೇಶದ, ಲಾಭ ರಹಿತ ಸಂಸ್ಥೆಯ ಹೆಸರು ಉಪಾಸನ. ಮನೆಯ ಮೂಲ ಹೆಸರು ಮಾವಿನಕೊಂಬೆ ಎಂದು. ಇಲ್ಲಿ ನಾವು, ಅಂದರೆ ನಮ್ಮ ಸಹವರ್ತಿ ಸುಕುಮಾರ್ ಮತ್ತು ನನ್ನ ಪತಿ ಅಬು ಕಟ್ಟಿರುವ ಅತಿಥಿಗೃಹಕ್ಕೆ ಪುರುಸೊತ್ತಾದಾಗ ಬನ್ನಿ. ಇದು ಹೋಟೆಲು ಅಲ್ಲ, ರೆಸಾರ್ಟ್ ಅಲ್ಲ, ಹೋಂಸ್ಟೇ ಅಲ್ಲ. ಪ್ರಕೃತಿದತ್ತ ಶುದ್ಧ ಆಮ್ಲಜನಕವನ್ನು ಯಥೇಶ್ಚವಾಗಿ 24x7 ಪೂರೈಸುವ ಆರಾಮ ನಿವಾಸ. ಸುಸಜ್ಜಿತ ಕೊಠಡಿಗಳು, ಬಿಸಿ ನೀರು ಸ್ನಾನ, ರುಚುರುಚಿಯಾದ ಸಸ್ಯಾಹಾರಿ ಊಟ, ಕಾಫಿ. ಈಜುಕೊಳ ಮತ್ತು ವನವಿಹಾರಕ್ಕೆ ಹೇಳಿಮಾಡಿಸಿದ ಸ್ಥಳ. ನಮ್ಮ ಮನೆಯಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇಗುಳಕ್ಕೆ 16 ಕಿಲೋಮೀಟರ್ ದೂರ.

ನಮ್ಮ ಉಪಾಸನಾ ಸಂಸ್ಥೆಯಲ್ಲಿ ಆಸಕ್ತ ಅತಿಥಿಗಳಿಗೆ ಸುಕುಮಾರ್ ಧ್ಯಾನ ಶಿಬಿರಗಳನ್ನು ನಡೆಸಿಕೊಡುವುದೂ ಉಂಟು. ಮಾನಸಿಕ ಒತ್ತಡ, ಗೊಂದಲ ಮನೋಸ್ಥಿತಿಯಿಂದ ಪಾರಾಗಲು ಹಾಗೂ ದೈನಂದಿನ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆಯನ್ನು ಪುನಃ ಸಾಧಿಸಲು ಅವರು ಉಪಯುಕ್ತ ಮಾರ್ಗದರ್ಶನ ಕೊಡುತ್ತಾರೆ. ಇಲ್ಲಿಗೆ ಭೇಟಿಕೊಟ್ಟ ಎಷ್ಟೋ ಮಂದಿಗೆ ಸುಕುಮಾರ್ ನೀಡುವ ಏಕಾಗ್ರತೆಯ ಗುಳಿಗೆಗಳ ಅವಶ್ಯಕತೆ ಕೆಲವೊಮ್ಮೆ ಕಾಣಿಸುವುದಿಲ್ಲ. ಏಕೆಂದರೆ ಇಲ್ಲಿನ ಪ್ರಶಾಂತ ವಾತಾವರಣ ಮತ್ತು ತಂಪಾದ ಹವಾಮಾನವು ಮನೋನಿಗ್ರಹ ಮತ್ತು ಒತ್ತಡದ ಸ್ಥಿತಿಯನ್ನು ಮನಸ್ಸಿನಿಂದ ಹೊರಗಟ್ಟುವ ಪಾಠಗಳನ್ನು ತನ್ನಷ್ಟಕ್ಕೆ ತಾನೇ ಕಲಿಸುತ್ತದೆ!

ನನ್ನ ಕೆಲಸವೆಂದರೆ ಬಂದವರಿಗೆ ಕಾಫಿ, ತಿಂಡಿ, ಊಟಕ್ಕೆ ಅಣಿಮಾಡುವುದು. ಉಪಾಸನಾ ನಿವಾಸ ಕೊಠಡಿಗಳ ಶುಚಿತ್ವ ಮತ್ತು ಅತಿಥಿಸೇವೆಗೆ ಅಗತ್ಯ ಏರ್ಪಾಟುಗಳ ಮೇಲ್ವಿಚಾರಣೆ ಮಾಡುವುದು. ಪ್ರತಿನಿತ್ಯ ಯಥಾಪ್ರಕಾರದ ಇಡ್ಲಿ, ದೋಸೆ, ಉಪ್ಪಿಟ್ಟು, ಬನ್ಸ್, ಸಾಂಬಾರು, ಸಾರು, ಚಪಾತಿ ಮುಂತಾದ ಪದಾರ್ಥಗಳನ್ನು ಬಿಟ್ಟು ಬೇರೆ ಏನಾದರು ಹೊಸ ರುಚಿ ಮಾಡುವುದಕ್ಕೆ ಚಿಂತಿಸುವುದು. ಮುಖ್ಯವಾಗಿ ನನ್ನ ಡಿಸ್ಕವರಿಯ ಕ್ಷೇತ್ರ ಪಲ್ಯ, ಸಾರು, ತಂಬುಳಿ, ಗಿಡಮೂಲಿಕೆಗಳ ಚಟ್ನಿ ಮತ್ತು ಸಿಹಿ ತಿಂಡಿಗಳನ್ನು ತಯಾರಿಸುವುದಾಗಿದೆ. ಒಂದು ಸಿಹಿ ತಿಂಡಿಯಿಂದ ನಮ್ಮ ಅಡಿಗೆ ಮನೆಯ ರುಚಿಯನ್ನು ನಿಮಗೆ ತಲುಪಿಸುವ ಇಷ್ಟವಾಗಿದೆ. ಮೊದಲಿಗೆ ಹೀರೇಕಾಯಿ ಪಾಯಸ ಅಥವಾ ಖೀರು.

ಎಂಟು ಜನಕ್ಕೆ,ಎಂಟು ಬೌಲ್ ಪಾಯಸಕ್ಕೆ ಪದಾರ್ಥ:

ಅರ್ಧ ಪಾವು ಅಂದರೆ 125 ಗ್ರಾಂ ಅಕ್ಕಿ
ಒಂದು ಇಡೀ ತೆಂಗಿನಕಾಯಿ
ಒಂದೂವರೆ ಅಚ್ಚು ಬೆಲ್ಲ
ಎರಡು ಅಥವಾ ಮೂರು ಎಳೇ ಹೀರೆಕಾಯಿ
ಗೋಡಂಬಿ, ದ್ರಾಕ್ಷಿ, ಬಾದಾಮಿ, ಏಲಕ್ಕಿ

ಸಿದ್ಧತೆ :

ಅಕ್ಕಿಯನ್ನು ಎರಡು ಗಂಟೆ ನೆನೆ ಹಾಕಬೇಕು. ತೆಂಗಿನಕಾಯಿ ತುರಿದಿಟ್ಟುಕೊಳ್ಳಿರಿ. ಹೀರೇಕಾಯಿಯನ್ನು ಸಿಪ್ಪೆ ಸಮೇತ ಸಣ್ಣ ಸಣ್ಣ ಹೋಳಾಗಿ ಹೆಚ್ಚಿಕೊಂಡು ಸ್ವಲ್ಪ ಹೊತ್ತು ಬೇರೆ ಪಾತ್ರೆಯಲ್ಲಿ ಬೇಯಿಸಬೇಕು. ಗೋಡಂಬಿ ಮತ್ತು ಬಾದಾಮಿಯ ಚೂರುಗಳನ್ನು ನಾಲಕ್ಕು ಚಮಚ ತುಪ್ಪದಲ್ಲಿ ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಬೇಕು. ಸಣ್ಣ ಕಪ್ ನಲ್ಲಿ ದ್ರಾಕ್ಷಿಯನ್ನು ನೆನೆ ಇಟ್ಟಿರಬೇಕು.

ಪ್ರಯೋಗ :

ಎಂಟು ಲೋಟ ನೀರಿಗೆ ಬೆಲ್ಲದ ಅಚ್ಚು ಹಾಕಿ ಕುದಿಯುವುದಕ್ಕೆ ಬಿಟ್ಟಿರಬೇಕು. ನೆನೆದ ಅಕ್ಕಿ ಮತ್ತು ಕಾಯಿತುರಿಯನ್ನು ನುಣ್ಣಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳುವುದು ಇನ್ನೊಂದು ಕೆಲಸ. ಬೆಲ್ಲ ಕುದ್ದು ರಸವಾದ ನಂತರ ರುಬ್ಬಿಕೊಂಡ ಪದಾರ್ಥ ಮತ್ತು ಬೆಂದ ಹೀರೆಕಾಯಿಯನ್ನು ಹಾಕಿ ಇನ್ನಷ್ಟು ಕುದಿಸಬೇಕು. ಕೊನೆಗೆ ಗೋಡಂಬಿ, ಬಾದಾಮಿ, ಏಲಕ್ಕಿ ಮತ್ತು ನೆನೆದ ದ್ರಾಕ್ಷಿಯನ್ನು ಹಾಕಬೇಕು. ಪಾಯಸ ಕುದಿಯುತ್ತಿರುವಾಗ ಕೈಯಾಡಿಸುತ್ತಿರಬೇಕು. ಪಾತ್ರೆಯ ತಳಕ್ಕೆ ಪಾಯಸ ಅಂಟಿಕೊಳ್ಳದಂತೆ ಜಾಗ್ರತೆ. ಪಾಯಸದ ಥಿಕ್ ನೆಸ್ ಟೊಮೆಟೋ ಸೂಪಿನಷ್ಟು ಇರಬೇಕು. ಇದು ಕುಡಿಯುವ ಪಾಯಸವಾಗಿರದೆ ಚಮಚೆಯನಲ್ಲಿ ಸವಿಯುವ ಸಿಹಿತಿಂಡಿ ಎನಿಸುತ್ತದೆ. ಪಾಯಸವನ್ನು ಬಿಸಿಬಿಸಿಬಿಸಿ ಬಡಿಸಬೇಕು. ಡೈನಿಂಗ್ ಟೇಬಲ್ಲಿಗೆ ಲೇಟಾಗಿ ಬರುವವರಿಗೆ ಈ ಪಾಯಸದ ಮೂಲ ರುಚಿ ತಪ್ಪಿಹೋಗುತ್ತದೆ. ಇದೇ ವಿಧಾನ ಅನುಸರಿಸಿ ಪಾಯಸಗಳನ್ನು ವಿವಿಧ ತರಕಾರಿ ಬಳಸಿ ಮಾಡಬಹುದು. ಎಳೆ ಸೋರೆಕಾಯಿ ಚೆನ್ನಾಗಿರುತ್ತದೆ.

X
Desktop Bottom Promotion