For Quick Alerts
ALLOW NOTIFICATIONS  
For Daily Alerts

ಮೈಸೂರು ಪಾಕಲ್ಲ ಬಾದಾಮಿ ಪಾಕ್!

By Super
|

ನಾವೆಲ್ಲಾ ಮೈಸೂರ್‌ಪಾಕ್ ಕೇಳಿದ್ದೀವಪ್ಪಾ ಇದೇನಿದು ಬಾದಾಮಿಪಾಕ್ ಅಂತ ಆಶ್ಚರ್ಯಪಡಬೇಡಿ. ನಿಜಾರೀ... ಬಾದಾಮಿಯಿಂದಲೂ ಈ ರೀತಿಯ ವೈವಿಧ್ಯಮಯವಾದ ಹೊಸರುಚಿಗಳನ್ನು, ಸವಿಸವಿ ತಿಂಡಿಗಳನ್ನು ತಯಾರಿಸಬಹುದು. ಬಾದಾಮಿ ಪಾಕನ್ನು ಮಾಡುವುದು ತುಂಬಾ ಸುಲಭ. ಬೇಕಾಗುವ ಪದಾರ್ಥಗಳೂ ಕಮ್ಮಿ, ಹಾಗಿದ್ದರೆ ತಡ ಯಾಕೆ ಪ್ರಯತ್ನಿಸಿ ನೋಡಿ.

  • ಭವ್ಯಾ ರೈ, ಉಡುಪಿ.

ಬೇಕಾದ ಪದಾರ್ಥಗಳು :

ಬಾದಾಮಿ : ಅರ್ಧ ಕೆ.ಜಿ
ತುಪ್ಪ : 300 ಗ್ರಾಂ
ಸಕ್ಕರೆ : 400 ಗ್ರಾಂ
ಏಲಕ್ಕಿ : ಒಂದು ಚಿಟಿಕೆ
ನೀರು : ಕುದಿಸಲು ಬೇಕಾದಷ್ಟು

ತಯಾರಿಸುವ ವಿಧಾನ :

ಬಾದಾಮಿಯನ್ನು ನೀರಿನಲ್ಲಿ ಬೇಯಿಸಿ. ತಣ್ಣಗಾದ ನಂತರ ಬಾದಾಮಿಯ ಸಿಪ್ಪೆ ತೆಗೆಯಬೇಕು (ಕೈನಲ್ಲಿ ಉಜ್ಜುವುದರಿಂದ ಸಿಪ್ಪೆ ಸುಲಭವಾಗಿ ಬಿಟ್ಟುಹೋಗುತ್ತದೆ). ಈಗ ಸ್ವಲ್ಪ ನೀರನ್ನು ಬಳಸಿ ಇದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು. ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಕರಗಿಸಿಕೊಳ್ಳಿ. ಅದಕ್ಕೆ ಬಾದಾಮಿ ಪೇಸ್ಟನ್ನು ಹಾಕಿ ಹೊನ್ನಿನ ಬಣ್ಣ ಬರುವರೆಗೆ ಸಣ್ಣ ಜ್ವಾಲೆಯಲ್ಲಿ ಹುರಿಯಬೇಕು.

ಈಗ ಮತ್ತೊಂದು ಬಾಣಲೆಯಲ್ಲಿ ಸಕ್ಕರೆಯ ಪಾಕವನ್ನು ತಯಾರಿಸಿಕೊಳ್ಳಿ (ಸಕ್ಕರೆಯ ಪಾಕ ಬೆರಳಲ್ಲಿ ಮುಟ್ಟಿಕೊಂಡರೆ ಉಂಡೆಯಂತೆ ಆಗಬೇಕು). ಹೀಗೆ ತಯಾರಿಸಿಕೊಂಡ ಪಾಕಕ್ಕೆ ಮೊದಲೇ ಸಿದ್ಧಪಡಿಸಿದ್ದ ಬಾದಾಮಿ ಪೇಸ್ಟ್‌ನ್ನು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ಈ ಮಿಶ್ರಣವನ್ನು ಸಣ್ಣ ಉರಿಯ ಮೇಲೆ ಇಟ್ಟು ಮಗುಚುವ ಕೈಯಿಂದ ಗಟ್ಟಿಯಾಗುವರೆಗೂ ಕಲಸುತ್ತಿರಬೇಕು.

ತುಪ್ಪ ಲೇಪಿಸಿದ ಪ್ಲೇಟಿನ ಮೇಲೆ ಈ ಮಿಶ್ರಣವನ್ನು ಹರಡಿ ತಣ್ಣಗಾದ ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಬಾಯಲ್ಲಿ ನೀರೂರಿಸುವ ಬಾದಾಮಿ ಪಾಕ್ ತಯಾರಾದಂಗೆ.

(ರುಚಿರುಚಿ ಅಡುಗೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ವಿಳಾಸ : [email protected])

X
Desktop Bottom Promotion