For Quick Alerts
ALLOW NOTIFICATIONS  
For Daily Alerts

ಹುಗ್ಗಿ ರೆಸಿಪಿ ಬಂದಿದೆ, ಹಬ್ಬ ಮಾಡಿ ಹಬ್ಬ!

By Super
|

'ಏನೋ ಮಾಡಲು ಹೋಗೀ...ಏನು ಮಾಡಿದೇ ನೀನೂ.." ಎನ್ನುವಂತಾಗಿದೆ ನಮ್ಮ ಸಂಪಾದಕರ ಸ್ಥಿತಿ. ಒಳ್ಳೆಯದೇ ಆಯಿತು ಬಿಡಿ. ಕೊನೆಗೂ ಅವರ ಗೆಳತಿಯಿಂದ ಹುಗ್ಗಿಯ ರೆಸಿಪಿ ಬಂದಿದೆ. ಹಬ್ಬ ಮಾಡಿ, ಹಬ್ಬಾ...

ಏನ್ರೀ ಎಡಿಟರ್‌ ಸಾಹೇಬ್ರೇ,

ಏನೋ ಒಳ್ಳೆ ಅಡುಗೆ ಮಾಡಿದ್ದೀನಿ ಊಟಕ್ಕೆ ಬನ್ನಿ ಅಂದ್ರೆ ಅದನ್ನೇ ಒಂದು ಇಶ್ಯೂ ಮಾಡಿ ಬರೆದುಬಿಟ್ಟಿದ್ದೀರಲ್ಲಾ!

'ಅಡುಗೆ ಸೆಕ್ಷನ್‌ ಓದದ ಗೆಳತಿ ನೀನೇನಾ?", 'ಏನೇ ಒಂದು ರೆಸಿಪಿ ಕೊಡಲಾರದಷ್ಟು ಕೆಲಸಾನಾ ನಿನಗೆ?" ಅಂತೆಲ್ಲ ನನ್ನ ಸ್ನೇಹಿತರು, ಪರಿಚಯದವರು ನಿಮ್ಮ ಅಡುಗೆ ಮನೆ ಸೆಕ್ಷನ್‌ನಿಂದ ಯಾವ್ದಾದ್ರೂ ಒಳ್ಳೆ ಅಡುಗೆ ಮಾಡಿಕೊಂಡು ತಿನ್ನುವ ಬದಲು ನನ್ನ ತಲೆ ತಿನ್ನುತ್ತಿದ್ದಾರೆ.

ನೀವ್ಯಾಕ್ರೀ ಹಾಗೆಲ್ಲಾ ಬರೆದಿರಿ? ಈ ಜರ್ನಲಿಸ್ಟಗಳೇ ಹೀಗೇ ತಾವೂ ಉಳಿಸಿಕೊಳ್ಳಲ್ಲ, ಬೇರೆಯವರಿಗೂ ಉಳಿಸಿಕೊಳ್ಳಕ್ಕೆ ಬಿಡಲ್ಲ ಖಾಸಗೀತನಾನ!

'" ಅನ್ನುವ ವ್ಯಂಗ್ಯಕ್ಕೆ ಸ್ವಲ್ಪ ಬೇಸರದಿಂದಾನೇ ಮಾಡೊ ವಿಧಾನ ಇಲ್ಲಿ ಬರೆದಿದ್ದೀನಿ ನೋಡಿ. ಆದ್ರೆ ಒಂದು ವಿಷಯ ನಾವು ಅದನ್ನು ಹುಗ್ಗಿ ಅಂತೀವಿ ನನಗೆ ಪೊಂಗಲ್‌ ಅನ್ನೋಕ್ಕೆ ತಮಿಳು ಬರಲ್ಲ, ಖಿಚಡಿ ಅನ್ನೋಕ್ಕೆ ಹಿಂದಿ, ಗುಜರಾತಿ ಭಾಷೆನೂ ಬರಲ್ಲ. ನೀವು ಈ ವಿಧಾನವನ್ನು ಪಬ್ಲಿಶ್‌ ಮಾಡೋದೇ ಆದ್ರೆ ದಯವಿಟ್ಟು ಒಂದು ಸಾಲನ್ನು ಮರೆಯದೇ ಪ್ರಿಂಟಿಸಿ....... 'ಒಂದು ಅಡುಗೆಗೆ ನೂರು ವಿಧಾನ ಇರುತ್ತೆ; ಇರಬಹುದು. ಆದರೆ ಇಲ್ಲಿ ಕೊಟ್ಟಿರುವುದು ನಾನು ಮಾಡುವ ರೀತಿ."

ನೋಡಿ ನನ್ನ ಈ ರೆಸಿಪಿ ನೋಡಿಕೊಂಡು ನಿಮ್ಮ ಓದುಗರು ಅಡುಗೆ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಎರಡು ವಿಷಯ ಅಂತೂ ಸ್ಪಷ್ಟವಾಯ್ತು. ಒಂದು, ಜರ್ನಲಿಸ್ಟಗಳ ಹತ್ತಿರ ಸ್ವಲ್ಪ ಎಚ್ಚರಿಕೆಯಿಂದಾನೇ ಸ್ನೇಹ ಮಾಡ್ಬೇಕು! ಇನ್ನೊಂದು, ನಿಮ್ಮ ಅಡುಗೆ ಮನೆ ಸೆಕ್ಷನ್‌ಅನ್ನು ಇಷ್ಟೊಂದು ಜನ ಓದುತ್ತಾರೆ; ಓದಿ ಅಡುಗೆ ಮಾಡುತ್ತಾರೆ.

ಏನೇ ಅನ್ನಿ ರುಚಿಯಾದ ಹುಗ್ಗಿ ತಿಂದು ಹಗುರವಾಗಿದ್ದ ನನ್ನನ್ನು ಬೇಸ್ತು ಬೀಳಿಸಿದಿರಿ. ಪರವಾಗಿಲ್ಲ. ಆದರೂ ಧನ್ಯವಾದಗಳು.

ತೊಗೊಳ್ಳಿ 'ಅವರೆಕಾಳು ಹುಗ್ಗಿ"ಯ ನನ್ನ ರೆಸಿಪಿ.

ಸಾಮಾನ್ಯವಾಗಿ ಬೇಕಾದ್ದು :

ಪ್ರಮಾಣ : ಅಕ್ಕಿ - ಒಂದು ಭಾಗ;
ಅವರೆಕಾಳು -ಒಂದು ಭಾಗ;
ಹೆಸರು ಬೇಳೆ -ಅರ್ಧ ಭಾಗ.
ಅರಿಶಿನ -1/4 ಚಮಚ
ಜೀರಿಗೆ -1 ಚಮಚ
ಶುಂಠಿ ಪೇಸ್ಟ್‌ -1 ಚಮಚ
ಕರಿ ಕಾಳು ಮೆಣಸಿನ (ತರಿ ತರಿಯಾದ) ಪುಡಿ -1 ಚಮಚ
ಸೀಳಿದ ಹಸಿಮೆಣಸಿನಕಾಯಿ - ನಾಲಕ್ಕು
ಎಳೆ ಕರಿಬೇವಿನ ಸೊಪ್ಪು - ಒಂದು ಹಿಡಿ
ಬೆಲ್ಲ - ನನಗೆ ಇಷ್ಟ ಬಂದಷ್ಟು
ಉಪ್ಪು - ರುಚಿಗೆ ತಕ್ಕಷ್ಟು

ವಿಶೇಷವಾಗಿ ಬೇಕಾದ್ದು :

1. ಅಡುಗೆ ರುಚಿಯಾಗಿರುತ್ತೆ ಅನ್ನುವ ವಿಶ್ವಾಸ - ಒಂದು ಮುಷ್ಠಿ
2. ತಿನ್ನುವವರಿಗೆ ನಾನು ಕೊಡಬೇಕಾದ ಪ್ರೀತಿ - ನನ್ನ ಇಷ್ಟ ಬಂದಷ್ಟು.

ಇವಿಷ್ಟರ ಜೊತೆಗೆ ನಿಮ್ಮ ಓದುಗರು ಅವರ ಅಭಿರುಚಿಗೆ ತಕ್ಕಂತೆ ಕಾಯಿತುರಿನೋ, ಜಿಡ್ಡೋ ಏನು ಬೇಕಾದ್ರೂ ಹಾಕಿಕೊಳ್ಳ ಬಹುದು ಅಂತ ನೀವು ಸೇರಿಸಿಯೇ ಸೇರಿಸ್ತೀರ!

ನಾನು ಮಾಡುವ ವಿಧಾನ : ಮೇಲೆ ಬರೆದಿದ್ದೀನಲ್ಲಾ ಆ ಎಲ್ಲಾ ಸಾಮಾನುಗಳನ್ನು ಕ್ಲೀನ್‌ ಮಾಡಿ ಎಲೆಕ್ಟ್ರಿಕಲ್‌ ರೈಸ್‌ ಕುಕ್ಕರ್ನಲ್ಲಿ ಹಾಕಿ ಸಾಮಾನಿನ ಒಂದೂವರೆಯಷ್ಟು ನೀರು ಹಾಕಿ, ಮುಚ್ಚಳ ಮುಚ್ಚಿ ಸ್ವಿಚ್‌ ಹಾಕುತ್ತೇನೆ. ಹುಗ್ಗಿ ಆದನಂತರ ಹೊರತೆಗೆದು, ಕ್ಲೀನ್‌ ಮಾಡಿ ಮೊದಲೇ ಸಣ್ಣಗೆ ಹೆಚ್ಚಿಟ್ಟುಕೊಂಡ ಫ್ರೆಶ್‌ ಕೊತ್ತಂಬರಿಸೊಪ್ಪನ್ನು ಹಾಕಿ ತಿನ್ನುತ್ತೇನೆ ಮತ್ತು ತಿನ್ನಲು ಕೊಡುತ್ತೇನೆ.

ಅಬ್ಬ, ಇನ್ನು ನೀವು ಏನಾದರೂ ಮಾಡಿಕೊಳ್ಳಿ. ಅಂದಹಾಗೆ, ಇನ್ನೊಂದು ವಾರ ನಾನು ಸ್ವಲ್ಪ ವ್ಯಸ್ತ. ಫೋನ್‌ನಲ್ಲಿ ಸಿಗೋದಿಲ್ಲಾರೀ ಎಡಿಟರ್‌ ಸಾಹೇಬ್ರೇ. ನಮಸ್ಕಾರ.

*

ಹೀಗೊಂದು ಪ್ರತಿಕ್ರಿಯೆ -

ಅಯ್ಯೋ ಶಾಮ್‌ ಅವರೆ,

ಇಷ್ಟು ವರ್ಷವಾದರೂ ನಿಮಗೆ ಅವರೆಕಾಳು ಪೊಂಗಲ್‌ , ಸಾರಿ , ಹುಗ್ಗಿ ಮಾಡಬಹುದು ಎನ್ನುವ ವಿಷವೇ ಗೊತ್ತಿಲ್ವಾ? ನಿಮ್ಮ ಜೀವನನೇ ವ್ಯರ್ಥ ಬಿಡಿ.

ಮಾಗಿಯ ಚಳಿಯ ಈ ದಿವಸಗಳಲ್ಲಿ ಅವರೆಕಾಳಿನಿಂದ ತಯಾರಿಸಿದ ಬಗೆಬಗೆಯ ಪದಾರ್ಥ ಮಾಡಿ ಸವಿಯುವ ಸೊಗಸು ಸವಿದವರಿಗೇ ಗೊತ್ತು. ಅವರೆಕಾಳು ಸಾರು, ಬಿಸಿಬೇಳೆಭಾತ್‌, ಉಸುಳಿ, ರೊಟ್ಟಿ, ಬಸ್ಸಾರು, ನುಚ್ಚಿನ ಉಂಡೆ, ಎಷ್ಟೊಂದು ಥರಹ ಮಾಡಬಹುದು. ಅವರೆಕಾಳು ಪೊಂಗಲ್‌ ಎನ್ನುವ ಪದ ಪ್ರಯೋಗವನ್ನು ನಾನು ಒಪ್ಪುವುದಿಲ್ಲ. ಅದು, ಅವರೆಕಾಳಿನ ಹುಗ್ಗಿ ಎಂದು ಬದಲಾಯಿಸಿಕೊಳ್ಳಿರಿ. ತುಂಬಾ, ತುಂಬಾ ಒಳ್ಳೆ ರುಚಿಯಾಗಿರತ್ತೆ. ನಿಮ್ಮ ಸ್ನೇಹಿತರು ತಯಾರಿಸುವ ಅವರೆ-ಹುಗ್ಗಿಯ ರೆಸಿಪಿಯನ್ನು ನಮಗೂ ಕಳಿಸಿಕೊಡಿ.

ಆದರೆ, ಭದ್ರಾವತಿಯ ಸುಧಾ ಅವರು ಹೇಳಿದ ಅವರೆಕಾಳು ಪಾಯಸವನ್ನು ನಾನು ತಿಂದಿಲ್ಲ. ನಮ್ಮ ಮನೆಯಲ್ಲಿ ಮಾಡುವುದಿಲ್ಲ.

-

X
Desktop Bottom Promotion