For Quick Alerts
ALLOW NOTIFICATIONS  
For Daily Alerts

ನವರಾತ್ರಿ ಸ್ಪೆಷಲ್: ಆಲೂ ಪನ್ನೀರ್ ಕೋಫ್ತಾ ರೆಸಿಪಿ

By Arshad
|

ನವರಾತ್ರಿಯ ಉತ್ಸವ ಶುರುವಾಗಿ ಬಿಟ್ಟಿದೆ. ಸಡಗರ, ಸಂಭ್ರಮ ಎಲ್ಲೆಡೆ ಗರಿಗೆದರುತ್ತಿದೆ. ಹೊಸಬಟ್ಟೆ, ಸಿಹಿತಿಂಡಿ, ವಿಶೇಷ ಖಾದ್ಯಗಳ ಪರಿಮಳ ಎಲ್ಲೆಡೆ ಹರಡುತ್ತದೆ. ಹೆಚ್ಚಿನ ಭಕ್ತರು ಈ ಒಂಬತ್ತೂ ದಿನಗಳಂದು ಅಪ್ಪಟ ಸಸ್ಯಾಹಾರಿಗಳಾಗಿ ನವರಾತ್ರಿಯ ಕಟ್ಟುಪಾಡುಗಳನ್ನು ಚಾಚೂತಪ್ಪದೆ ಆಚರಿಸುತ್ತಾರೆ. ಇನ್ನೂ ಕೆಲವರು ನವರಾತ್ರಿ ಹಬ್ಬದ ಸಮಯದಲ್ಲಿ ಈರುಳ್ಳಿ ಹಾಕಿದ ಸಾಂಬರ್ ಅನ್ನು ಸೇವಿಸುವುದಿಲ್ಲ.

ಹಾಗಾಗಿ ಈ ಸಂಭ್ರಮದಲ್ಲಿ ನೀವು ತಯಾರಿಸುವ ವಿಶೇಷ ಖಾದ್ಯವೂ ಎಲ್ಲರಿಗೂ ರುಚಿಸುವಂತಾಗಲು ಈ ಸೂಚನೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಅರಿವಿಲ್ಲದೇ ಈರುಳ್ಳಿ ಹಾಕಿದ ಖಾದ್ಯವನ್ನು ನಿಮ್ಮ ಅತಿಥಿಗಳಿಗೆ ಬಡಿಸಿದ ಬಳಿಕ ಅವರು ನವರಾತ್ರಿಯ ಸಮಯದಲ್ಲಿ ಈರುಳ್ಳಿಯಿಂದ ದೂರವಿರುವ ಸಂಗತಿ ತಿಳಿದುಬಂದರೆ ನಿಮಗೆಷ್ಟು ಸಂಕಟವಾಗಬಹುದು! ಆದ್ದರಿಂದ ನವರಾತ್ರಿಗಾಗಿಯೇ ಇರುವ ಖಾದ್ಯಗಳನ್ನು ಆಯ್ದುಕೊಳ್ಳುವುದು ಗೃಹಿಣಿಯರಿಗೊಂದು ಸವಾಲು.

ಇಂದಿನ ವಿಶೇಷ ಖಾದ್ಯ ನಿಮ್ಮ ದ್ವಂದ್ವವನ್ನು ಪೂರ್ಣವಾಗಿ ನಿವಾರಿಸುತ್ತದೆ. ಅಪ್ಪಟ ಸಸ್ಯಾಹಾರಿಯಾದ ಆಲು ಪನೀರ್ ಕೋಫ್ತಾ ಗಸಿಯಲ್ಲಿ ಈರುಳ್ಳಿಯನ್ನು ಬಳಸದೇ ಇರುವ ಕಾರಣ ನಿಮ್ಮ ಅತಿಥಿಗಳು ನಿರಾಳವಾಗಿ ಈ ಸ್ವಾದಿಷ್ಟ ಗಸಿಯನ್ನು ರೊಟ್ಟಿ, ಚಪಾತಿ, ಕುಲ್ಛಾ, ನಾನ್ ಮೊದಲಾದವುಗಳ ಜೊತೆ ಹಾಗೂ ಅನ್ನದೊಂದಿಗೂ ಸೇವಿಸಬಹುದು. ಪನ್ನೀರ್ ಉಪಯೋಸಿರುವ ಕಾರಣ ಈ ಖಾದ್ಯ ಅತಿಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು ನವರಾತ್ರಿಯ ಉಪವಾಸದ ಬಳಿಕ ಸೇವಿಸಲು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರ ರುಚಿಯನ್ನು ಮಾತ್ರ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ರುಚಿಕರ ಗಸಿಯನ್ನು ತಯಾರಿಸುವ ವಿಧಾನವನ್ನು ಕೆಳಗೆ ನೀಡಲಾಗಿದೆ: 8 ಬಗೆಯ ಸ್ವಾದಿಷ್ಟಕರ ಪನ್ನೀರ್ ರೆಸಿಪಿ

Aloo Paneer Kofta Curry For Navratri

*ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು.

ಅಗತ್ಯವಿರುವ ಸಾಮಾಗ್ರಿಗಳು:
*ಕೋಫ್ತಾ ತಯಾರಿಸಲು:
*ಪನ್ನೀರ್ - ಇನ್ನೂರು ಗ್ರಾಂ (ಚಿಕ್ಕದಾಗಿ ತುರಿದದ್ದು)
*ಆಲುಗಡ್ಡೆ - ಮೂರು (ಚೆನ್ನಾಗಿ ಬೇಯಿಸಿ, ಸಿಪ್ಪೆ ನಿವಾರಿಸಿದ್ದು)
*ಬಾದಾಮಿಯ ಪುಡಿ: 1 ದೊಡ್ಡಚಮಚ
*ಕಾಳುಮೆಣಸಿನ ಪುಡಿ- ½ ಚಿಕ್ಕಚಮಚ
*ಗರಂ ಮಸಾಲಾ ಪುಡಿ- ½ ಚಿಕ್ಕಚಮಚ
*ಕೊತ್ತಂಬರಿ ಸೊಪ್ಪು- 2 ದೊಡ್ಡಚಮಚ (ದಂಟುಗಳನ್ನು ನಿವಾರಿಸಿ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿದ್ದು)
*ಮೆಕ್ಕೆಜೋಳದ ಹಿಟ್ಟು (cornflour)- 2 ದೊಡ್ಡಚಮಚ
*ವಿವಿಧ ಒಣಫಲಗಳು- 4 ದೊಡ್ಡಚಮಚ (ಎಲ್ಲವನ್ನೂ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿದ್ದು)
*ಉಪ್ಪು: ರುಚಿಗನುಸಾರ
*ಎಣ್ಣೆ : ಕರಿಯಲು ಅಗತ್ಯವಿದ್ದಷ್ಟು ನವರಾತ್ರಿ ಉಪವಾಸ ಮಾಡುವವರಿಗಾಗಿ ಈ 12 ರೆಸಿಪಿ

ಕರಿಗೆ ಬೇಕಾಗುವ ಸಾಮಾಗ್ರಿ
*ಜೀರಿಗೆ: 1 ದೊಡ್ಡಚಮಚ
*ದಾಲ್ಚಿನ್ನಿ ಎಲೆ- 1
*ಬೆಳ್ಳುಳ್ಳಿ ಪೇಸ್ಟ್- 1 ದೊಡ್ಡಚಮಚ
*ಟೊಮೇಟೊ ಪ್ಯೂರಿ- 1 ದೊಡ್ಡಚಮಚ
*ಬಾದಾಮಿ ಪುಡಿ - 2 ದೊಡ್ಡಚಮಚ
*ಜೀರಿಗೆ ಪುಡಿ- 1 ದೊಡ್ಡಚಮಚ
*ಚಾಟ್ ಮಸಾಲಾ - 1 ಚಿಕ್ಕಚಮಚ
*ಕೆಂಪು ಮೆಣಸಿನ ಪುಡಿ- ½ ಚಿಕ್ಕಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದು ಚಿಕ್ಕಚಮಚ)
*ಅರಿಶಿನ ಪುಡಿ - ½ ಚಿಕ್ಕಚಮಚ
*ಗರಂ ಮಸಾಲಾ ಪುಡಿ- ½ ಚಿಕ್ಕಚಮಚ
*ದೊಡ್ಡ ಜೀರಿಗೆ ಪುಡಿ (ಸೌಂಫ್)- ¼ ಚಿಕ್ಕಚಮಚ
*ಉಪ್ಪು ರುಚಿಗನುಸಾರ
*ಕೊತ್ತಂಬರಿ ಸೊಪ್ಪು- 2 ದೊಡ್ಡಚಮಚ (ದಂಟುಗಳನ್ನು ನಿವಾರಿಸಿ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿದ್ದು)
*ಎಣ್ಣೆ - 2 ದೊಡ್ಡಚಮಚ (ಆಲಿವ್, ಶೇಂಗಾ, ಮೆಕ್ಕೆಜೋಳ ಇತ್ಯಾದಿ. ಪಾಮ್, ಡಾಲ್ಡಾ ಬೇಡ)

ಕೋಫ್ತಾ ಮಾಡುವ ವಿಧಾನ:
1) ಒಂದು ಒಣಪಾತ್ರೆಯಲ್ಲಿ ಒಣಫಲ ಮತ್ತು ಎಣ್ಣೆಯನ್ನು ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ
2) ಬೆಂದಿರುವ ಆಲುಗಡ್ಡೆಯನ್ನು ಮರದ ಚಮಚ ಉಪಯೋಗಿಸಿ ಚೆನ್ನಾಗಿ ಜಜ್ಜಿಕೊಳ್ಳಿ. ಎಲ್ಲೂ ಗಂಟುಗಳಿರದಂತೆ ನೋಡಿಕೊಳ್ಳಿ.
3) ಜಜ್ಜಿದ ಆಲುಗಡ್ಡೆಯನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಕೈಯಲ್ಲಿಯೇ ಒತ್ತಿ ಚಿಕ್ಕ ರೊಟ್ಟಿಯಾಗಿಸಿ. (ಕೈಗಳಿಗೆ ಕೊಂಚ ಎಣ್ಣೆ ಹಚ್ಚಿಕೊಂಡರೆ ಆಲುಗಡ್ಡೆ ಅಂಟಿಕೊಳ್ಳುವುದಿಲ್ಲ)
4) ಈ ರೊಟ್ಟಿನ ನಡುವೆ ಒಂದು ಚಿಕ್ಕ ಚಮಚದಷ್ಟು ಒಣಫಲಗಳನ್ನು ಹಾಕಿ.
5) ಬದಿಗಳನ್ನು ನಿಧಾನವಾಗಿ ಒತುತ್ತಾ ಒಣಫಲ ಒಳಬರುವಂತೆ ಮುಚ್ಚಿ.
6) ಒಂದು ವೇಳೆ ಎಲ್ಲಾದರೂ ಒಣಫಲ ಹೊರಚಾಚಿದ್ದುದು ಕಂಡುಬಂದರೆ ಕೊಂಚ ಆಲುಗಡ್ಡೆಯನ್ನು ಸೇರಿಸಿ ಮುಚ್ಚಿ. ಒಟ್ಟಾರೆ ಎಲ್ಲೂ ಒಣಫಲ ಕಾಣದಂತಿರಲಿ.
7) ಇದೇ ರೀತಿ ಎಲ್ಲಾ ಉಂಡೆಗಳನ್ನು ತಯಾರು ಮಾಡುವಷ್ಟರಲ್ಲಿ ಕರಿಯುವ ಎಣ್ಣೆಯನ್ನು ಬಿಸಿಯಾಗಿಸಿ.
8) ಬಿಸಿ ಎಣ್ಣೆ ಸಿಡಿಯದಂತೆ ನಿಧಾನವಾಗಿ ಎಲ್ಲಾ ಉಂಡೆಗಳನ್ನು ಹಾಕಿ ಕರಿಯಿರಿ.
9) ಮಧ್ಯಮ ಉರಿಯಲ್ಲಿ ಎಲ್ಲ ಉಂಡೆಗಳು ಬೇಯಲು ಸುಮಾರು ಮೂರರಿಂದ ನಾಲ್ಕು ನಿಮಿಷಗಳು ಬೇಕು. ಎಲ್ಲ ಉಂಡೆಗಳು ಸರಿಸುಮಾರು ಕಂದು ಬಣ್ಣ ಬಂದ ಬಳಿಕ ಎಣ್ಣೆಯಿಂದ ಹೊರತೆಗೆದು ಎಣ್ಣೆ ಬಸಿಯಿರಿ.
10) ಈ ಉಂಡೆಗಳನ್ನು ಟಿಶ್ಯೂ ಪೇಪರ್ ಇರಿಸಿದ ತಟ್ಟೆಯ ಮೇಲಿರಿಸಿ ಒಣಗಲು ಬಿಡಿ.

ಕರಿ ಮಾಡುವ ವಿಧಾನ:
1) ಒಂದು ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಜೀರಿಗೆ ದಾಲ್ಚಿನ್ನಿ ಎಲೆ ಹಾಕಿ ಒಂದು ನಿಮಿಷದವರೆಗೆ ಹುರಿಯಿರಿ.
2) ಬಳಿಕ ಒಂದಾದ ಬಳಿಕ ಒಂದರಂತೆ ಶುಂಠಿ ಪೇಸ್ಟ್, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ, ಕರಿಮೆಣಸಿನ ಪುಡಿ, ದೊಡ್ಡಜೀರಿಗೆ ಪುಡಿ, ಗರಂ ಮಸಾಲಾ ಪುಡಿ ಹಾಕಿ ಮಧ್ಯಮ ಉರಿಯಲ್ಲಿ ಸುಮಾರು ಮೂರರಿಂದ ನಾಲ್ಕು ನಿಮಿಷ ಹುರಿಯಿರಿ.
3) ಬಳಿಕ ಟೊಮೇಟೊ ಪ್ಯೂರಿ ಹಾಕಿ ಇನ್ನೊಂದು ನಾಲ್ಕು ನಿಮಿಷಗಳ ಕಾಲ ಹುರಿಯಿರಿ. ತಳ ಹಿಡಿಯದಂತೆ ಎಚ್ಚರವಹಿಸಿ.
4) ಬಳಿಕ ಬಾದಾಮಿ ಪುಡಿ, ಉಪ್ಪು ಹಾಕಿ ಇನ್ನೊಂದು ಎರಡು ನಿಮಿಷ ಹುರಿಯಿರಿ.
5) ಈಗ ಕೊಂಚವೇ ನೀರು ಹಾಕಿ ಕದಡಿ. ಬಳಿಕ ಉಂಡೆ ಕಟ್ಟಿದ್ದ ಅಷ್ಟೂ ಕೋಫ್ತಾಗಳನ್ನು ಹಾಕಿ.
6) ಕೋಫ್ತಾ ಒಡೆಯದಂತೆ ಎಚ್ಚರಿಕೆ ವಹಿಸಿ ನಿಧಾನವಾಗಿ ತಿರುವಿ ಕುದಿಬರಲು ಬಿಡಿ.
7) ಕರಿ ಕುದಿಯಲು ಪ್ರಾರಂಭವಾದೊಡನೆ ಉರಿ ನಂದಿಸಿ. ಕರಿಯ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸಿಂಗರಿಸಿ. ಎಲ್ಲರ ಮನಗೆಲ್ಲಲು ಆಲು ಪನ್ನೀರ್ ಕೋಫ್ತಾ ಗಸಿ ತಯಾರಾಗಿದೆ. ಇದು ಎಲ್ಲಾ ರೀತಿಯ ರೊಟ್ಟಿಗಳೊಂದಿಗೂ ಅನ್ನವಿಲ್ಲದ ಊಟವೇ ಅಲ್ಲ ಎಂದು ಗಾಢವಾಗಿ ನಂಬಿದವರಿಗೆ ಅನ್ನದೊಂದಿಗೆ ಕಲಸಿಕೊಂಡು ತಿನ್ನಲೂ ಅತ್ಯುತ್ತಮವಾಗಿದೆ.

ಸಲಹೆ:
*ಅನ್ನದೊಂದಿಗೆ ಸೇವಿಸುವುದಾದರೆ ನೀರನ್ನು ಕೊಂಚ ಹೆಚ್ಚಾಗಿ ಹಾಕಿ. ಕೊಂಚವೇ ಗಾಢವಾಗಲು ಅರ್ಧ ಚಮಚ ಅಥವಾ ಒಂದು ಚಮಚ ಅಕ್ಕಿಹಿಟ್ಟನ್ನು ಸೇರಿಸಿ ಕಲಕಿ.
*ಪನ್ನೀರ್ ಮತ್ತು ಒಣಫಲಗಳ ಕಾಲ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಸ್ಥೂಲಕಾಯದವರು ಹಬ್ಬದ ನೆಪ ಹೇಳಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿರಿ.

English summary

Aloo Paneer Kofta Curry For Navratri

Since the Navratri season is on, most people are on a vegetarian diet for nine days. Some people even abstain from eating onions and garlic during this time. So, keeping this in mind today we have a grand vegetarian trea for you, which surprisingly is made without onions and garlic. Aloo paneer kofta curry is a delicious vegetarian recipe which is a must try during this Navratri.
X
Desktop Bottom Promotion