For Quick Alerts
ALLOW NOTIFICATIONS  
For Daily Alerts

ಕಡಲೆಬೇಳೆ ಹಾಗು ಹೂಕೋಸು ಪಲ್ಯ

|
Cauliflower, bengalgram palya
ವೈವಿಧ್ಯಮಯ ಪಲ್ಯಗಳನ್ನು ತಯಾರಿಸುವುದರ ಜೊತೆಗೆ ಈ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರಿಗೆ ತಿನ್ನಿಸುವುದನ್ನು ರೂಢಿ ಮಾಡಿಸುವುದು ದೊಡ್ಡವರ ಕರ್ತವ್ಯ. ಯಾಕೆಂದರೆ, ಗೋಬಿ ಮಂಚೂರಿಯನ್ನು ಚಪ್ಪರಿಸಿ ತಿನ್ನುವ ಮಕ್ಕಳು (ದೊಡ್ಡವರು ಕೂಡ) ಹೂಕೋಸಿನ ಪಲ್ಯ ಅಂದ ಕೂಡಲೆ ಮುಖ ಸಿಂಡರಿಸುತ್ತಾರೆ.

ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ತರಕಾರಿಗಳು ಬಹು ಅವಶ್ಯಕ. ಅದರಲ್ಲೂ, ಹೂಕೋಸು ತಿನ್ನುವುದರಿಂದ ಹೃದಯ ಸುಸ್ಥಿತಿಯಲ್ಲಿರುತ್ತದೆ ಮತ್ತು ಪಾರ್ಶ್ವವಾಯುವಿನಿಂದ ದೂರವಿಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಗೆ ಹೂಕೋಸು ಇಂಬು ನೀಡುತ್ತದೆ. ಮಗುವಿನ ನಿರೀಕ್ಷೆಯಲ್ಲಿರುವವರು ಇದನ್ನು ಖಂಡಿತವಾಗಿ ತಿನ್ನಬೇಕು. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಬರದಂತೆ ತಡೆಯಲು ಹೂಕೋಸು ಸಹಕಾರಿ.

* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು :

* ಕಡಲೆಬೇಳೆ - 1/2 ಕಪ್
* ಹೂಕೋಸು - 8 ಹೂ (ಬಿಡಿಸಿದ್ದು)
* ಈರುಳ್ಳಿ - 1 (ನಿಮ್ಮಿಷ್ಟ)
* ಗರಂ ಮಸಾಲ - 1/4 ಚಮಚ
* ಅಚ್ಚ ಕಾರದಪುಡಿ - 1/2 ಚಮಚ
* ಹುಚ್ಚೆಳ್ಳು ಪುಡಿ - 1/2 ಚಮಚ
* ಅರಿಶಿಣ ಪುಡಿ
* ರುಚಿಗೆ ತಕ್ಕ ಉಪ್ಪು
* ಒಗ್ಗರೆಣೆಗೆ ಸಾಸಿವೆ, ಜೀರಿಗೆ, ಕರಿಬೇವು
* ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ :

ಮೊದಲಿಗೆ ಹುಕೋಸನ್ನು ಬಿಡಿಸಿ ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಕುದಿಯುವ ನೀರಿಗೆ ಸ್ವಲ್ಪ ಅರಿಷಿಣಪುಡಿ ಅಥವಾ ಸ್ವಲ್ಪ ಉಪ್ಪು ಸೇರಿಸಿದರೂ ಆಯಿತು. ಹೂಕೋಸಲ್ಲಿ ಸೇರಿದ್ದು ಹುಳಗಳು ಹೊರಬೀಳುತ್ತವೆ. ನಂತರ ಕಡಲೆಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿರಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿ ಬಳಸುವುದು ಬಿಡುವುದು ನಿಮಗೆ ಬಿಟ್ಟಿದ್ದು. ಬಳಸದಿದ್ದರೆ ರುಚಿಯೇನೂ ಕೆಟ್ಟುಹೋಗುವುದಿಲ್ಲ.

ನಂತರ ಬಾಣಲೆಗೆ 2 ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಅರಿಷಿಣ, ಕರಿಬೇವು ಹಾಗು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ತಾಳಿಸಿಟ್ಟುಕೊಳ್ಳಿ. ಅದಕ್ಕೆ ಬೇಯಿಸಿದ ಕಡಲೆಬೇಳೆ ಹಾಗು ಹೂಕೋಸನ್ನು ಸುರುವಿ ಗರಂ ಮಸಾಲ, ಹುಚ್ಚೆಳ್ಳು ಪುಡಿ, ಕಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ.

ಇದು ಚಪಾತಿ, ಜೋಳದ ರೊಟ್ಟಿಗೆ ಚೆನ್ನಾಗಿರುತ್ತದೆ.

Story first published: Monday, October 26, 2009, 10:36 [IST]
X
Desktop Bottom Promotion