For Quick Alerts
ALLOW NOTIFICATIONS  
For Daily Alerts

ಪಟ್ಟಣದಾಗೆ ಗಿಣ್ಣು ಎಲ್ಲಿ ಸಿಗತೈತಣ್ಣ?

By Super
|
Say cheese to protein rich cheese
ಫೋಸು(ಕೊಂಕಣಿ), ಜುನ್ನು(ತೆಲುಗು), ಕರ್‌ವಸ್(ಮರಾಠಿ) ಹೆಸರಿನ ಹಸುವಿನ ಗಿಣ್ಣು-ಹಾಲು ಕರು ಹಾಕಿದ 5 ದಿನಗಳ ಹಾಲು. ಬಹಳ ಪೌಷ್ಠಿಕ ಎಂದು ಗಿಣ್ಣು ತಯಾರಿಸಿ ತಿನ್ನುವುದುಂಟು. ಕರು ಹಾಕಿದ ಕೂಡಲೇ ಹಸುವಿನ ಕೆಚ್ಚಲಿನಿಂದ ಸ್ರವಿಸಲ್ಪಡುವ ಮೊದಲ ಹಾಲನ್ನು ಗಿಣ್ಣದ ಹಾಲು ಅಂತಾರೆ. ಈ ಹಾಲು ಅತ್ಯಧಿಕ ಪೋಷಕಾಂಶಗಳಿಂದ ಕೂಡ್ದಿದು ಇದರಲಿ ಪ್ರೊಟೀನು, ಕೊಬ್ಬು, ಖನಿಜಗಳು ಮತ್ತು ರೋಗ ನಿರೋಧಕ ಅಂಶಗಳಿರುತ್ತವೆ.

* ವಾಣಿ ರಾಮದಾಸ್, ಸಿಂಗಪುರ

ಕಳೆದ ಶನಿವಾರ ಊರಿಗೆ ಫೊನಾಯಿಸಿದಾಗ ಯಾವಾಗ್ಲೆ ಬರ್ತೀಯ, ಆಯ್ತಾ ಟಿಕೆಟ್ ಎಂದ ಅಣ್ಣನಿಗೆ ಲೋ, ಗಿಣ್ಣು ತಿನ್ನಬೇಕು ಅಂತ ಆಸೆ ಆಗ್ತಾ ಇದೆ ಸಿಗುತ್ತೇನೋ ಎಂದೆ. ಏನಂದೆ ಎಂದು ಜೋರಾಗಿ ನಗುತ್ತಾ ಗಿಣ್ಣು ತಿನ್ನಬೇಕಾ? ಜಾತ್ರೆಗ್ ಹೋದ್ರೆ-ಗೀದ್ರೆ, ಅಸ ತಂದ್ರೆ-ಗಿಂದ್ರೆ, ಕರ ಹಾಕ್ದ್ರೆ-ಗೀಕ್ದ್ರೆ ಎನ್ನಲು ಶುರು ಮಾಡಿದ. ಈ ಅಣ್ಣಂದಿರೇ ಹಾಗೆ ಕಾಯ್ತಾ ಇರ್ತಾರೆ, ತಂಗಿಯರ ಕಾಲೆಳೆಯೋಕ್ಕೆ. ಯಾವುದಕ್ಕೋ ನೆಟ್ಟಗೆ ಉತ್ತರ ಹೇಳೋಲ್ಲ.

70ರ ದಶಕದಲಿ ಮನೆಯಲ್ಲಿ 4 ಹಸುಗಳಿದ್ದವು. ಹಸು-ಕರು ಹಾಕಿದ ಮಾರನೆಯ ದಿನ ನನಗೆ, ನಮ್ಮಣ್ಣನಿಗೆ ಇಬ್ಬರಿಗೂ ಒಟ್ಟಿಗೇ ಹೊಟ್ಟೆನೋವು. ಸ್ಕೂಲಿಗೆ ಚಕ್ಕರ್, ಕರು ಜೊತೆ ಆಡೋಕೆ ಹಾಜರ್. ಎಳೇ ಕರು ಪುಟಪುಟನೆ ನೆಗೆಯುವಾಟ ನೋಡಲು ಬಲು ಚಂದ. ಜೊತೆಗೆ ಅಮ್ಮ ಮಾಡುತ್ತಿದ್ದ ಗಿಣ್ಣು... ಆಹಾ ಬಾಯಲ್ಲಿ ನೀರೂರತ್ತೆ. ಅಂದಿನ ಕಾಲದಲ್ಲಿ ಚಕ್ಕರ್ ಹೊಡೆದ್ರೂ ಲೀವ್ ಲೆಟರ್ ಬೇಕು ಅಂತೇನೊ ಇರ್ಲಿಲ್ಲ. ಯಾಕಮ್ಮಾ ಬರ್ಲಿಲ್ಲ ಅಂತ ಮೇಷ್ಟ್ರು ರಾಗವೆಳೆದ್ರೆ ಹೊಟ್ಟೆನೋವು ಸಾರ್, ನೆಂಟ್ರು ಬಂದಿದ್ರು ಸಾರ್ ಎಂಬ ಉತ್ತರ ಸದಾ ಸಿದ್ಧವಿರುತ್ತಿತ್ತು.

ಗಿಣ್ಣು ಹಾಲಿಗೆ ಬೆಲ್ಲ, ಅವಲಕ್ಕಿ, ಏಲಕ್ಕಿ ಹಾಕಿ ಕುದಿಸಿದರೆ ಒಳ್ಳೇ ಕೇಕ್ ತರ ಆಗತ್ತೆ. ಇಂದೂ ಬಾಯಲ್ಲಿ ನೀರೂರತ್ತೆ. ನಮ್ಮಗಳ ಕಾಲದಲಿ ಹೋಂ-ಮೇಡ್ ಈಗಿನ ಮಕ್ಕಳಿಗೆ ರೆಡಿ-ಮೇಡ್. ಏನ್ ಮಾಡ್ತಿರಾ ಅಂದು ಅಪ್ಪನ ಜೇಬು ದೊಡ್ಡದಿತ್ತು, ಇರುತ್ತಿತ್ತು ಬರೀ ಪುಡಿಗಾಸು. ಇಂದು ಅಪ್ಪಂದಿರ ಜೇಬು ಟೈಟಾದರೂ ಇರುತ್ತೆ ಗರಿಗರಿ ನೋಟು. ಪಿಜ್ಜ, ಬರ್ಗರ್, 'ಗೂಬೆ'ಮಂಚೂರಿ ಕಾಲವಿದು. ಗಿಣ್ಣು-ಹಾಲು, ಹಾಲುಬಾಯಿ, ಗುಲ್‌ಪಾವಟೆ (ಗುಳಪಾಟಿ), ನುಚ್ಚಿನುಂಡೆಗಳ ಕಾಲ ನಮ್ಮದು. ಏನೇ ಹೇಳಿ ನಮ್ಮ ತಲೆಮಾರಿನ ಈ ಖಾದ್ಯಗಳು ಈಗ ಹೇಳಹೆಸರಿಲ್ಲದಾಗಿದೆ.

ಫೋಸು(ಕೊಂಕಣಿ), ಜುನ್ನು(ತೆಲುಗು), ಕರ್‌ವಸ್(ಮರಾಠಿ) ಹೆಸರಿನ ಹಸುವಿನ ಗಿಣ್ಣು-ಹಾಲು ಕರು ಹಾಕಿದ 5 ದಿನಗಳ ಹಾಲು. ಬಹಳ ಪೌಷ್ಠಿಕ ಎಂದು ಗಿಣ್ಣು ತಯಾರಿಸಿ ತಿನ್ನುವುದುಂಟು. ಕರು ಹಾಕಿದ ಕೂಡಲೇ ಹಸುವಿನ ಕೆಚ್ಚಲಿನಿಂದ ಸ್ರವಿಸಲ್ಪಡುವ ಮೊದಲ ಹಾಲನ್ನು ಗಿಣ್ಣದ ಹಾಲು ಎಂದು ಕರೆಯುತ್ತೇವೆ. ಈ ಹಾಲು ಅತ್ಯಧಿಕ ಪೋಷಕಾಂಶಗಳಿಂದ ಕೂಡ್ದಿದು ಇದರಲಿ ಪ್ರೊಟೀನು, ಕೊಬ್ಬು, ಖನಿಜಗಳು ಮತ್ತು ರೋಗ ನಿರೋಧಕ ಅಂಶಗಳಿರುತ್ತವೆ. ಇದ್ಲಲದೇ ಗಿಣ್ಣದ ಹಾಲಿನಲಿ ಕರುವಿನ ಬೆಳವಣಿಗೆಗೆ ಬೇಕಾಗುವ ಹಾರ್ಮೋನುಗಳು (ಇನ್ಸುಲಿನ್, ಕಾರ್ಟಿಸಾಲ್, ಥೈರೋಕ್ಸಿನ್) ಇರುತ್ತವೆ. ನವಜಾತ ಶಿಶುಗಳಿಗೆ ತಾಯಿಯ ಹಾಲು ಅದೆಷ್ಟು ಅಗತ್ಯವೋ ಹಾಗೆಯೇ ನಿರೋಧಕ ಶಕ್ತಿ ತುಂಬಿರುವ ಗಿಣ್ಣದ ಹಾಲನ್ನು ಕರುಗಳಿಗೆ ಕುಡಿಯಲು ಬಿಡುವುದು ಅಷ್ಟೇ ಅಗತ್ಯ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅನ್ನುವ ಹಾಗೆ ಇಂದಿನ ಕರುಗಳೇ ಮುಂದಿನ ಹಸುಗಳು. ಅನ್ಯಾಯ ಏನಂದ್ರೆ ಹಸು/ಎಮ್ಮೆ ಹೆಣ್ಣು ಕರುವನ್ನು ಹಾಕಿದರೆ ಅದನ್ನು ಸಾಕ್ತಾರೆ ಆದರೆ ಗಂಡಾದರೆ ಹಾಲೇ ನೀಡದೆ ಅದನ್ನು ದನದ ಮಾಂಸ ತಿನ್ನುವವರಿಗೆ ಮಾರ್ತಾರೆ.

ಗಿಣ್ಣು ಹಾಲು ಸಿಕ್ಕಲ್ಲಿ ನೀವೂ ಮಾಡಿ :- ಗಿಣ್ಣು ಹಾಲು ಚೆನ್ನಾಗಿ ಕಾಯಲು ಇಟ್ಟು ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಕುದಿಸಿ ಗಟ್ಟಿಯಾದಂತೆ ಕೆಳಗೆ ಇಳಿಸಿ ಏಲಕ್ಕಿ ಪುಡಿ ಬೆರೆಸಿ. ಆರಿದ ನಂತರ ಇಷ್ಟವಾದಲ್ಲಿ ತಂಗಳು ಪೆಟ್ಟಿಗೆಯಲ್ಲಿಟ್ಟು ತಿನ್ನಿ. ಕೆಲವರು ಕುದಿಯುತ್ತಿದ್ದಂತೆ ಒಂದು ಹಿಡಿ ತೆಳ್ಳನೆಯ ಅವಲಕ್ಕಿ ಕೂಡ ಹಾಕುತ್ತಾರೆ.

ಗಾದೆ ಬೇರೆ ಇದೆ....
ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ.
ಬೊಮ್ಮ ಎಮ್ಮೆ ತರಲೂ ಇಲ್ಲ, ತಿಮ್ಮಿ ಗಿಣ್ಣು ಕಾಯಿಸಲೂ ಇಲ್ಲ.

X
Desktop Bottom Promotion