For Quick Alerts
ALLOW NOTIFICATIONS  
For Daily Alerts

ಮಳೆಗಾಲಕ್ಕೆ ವಿಶೇಷ ತಿಂಡಿ-ಪತ್ರೊಡೆ

|
Tasty Pathrode Recipe
ಪತ್ರೊಡೆ ಅಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ, ಮಳೆಗಾಲದ ಸಮಯದಲ್ಲಿ ಈ ಪತ್ರೊಡೆ ಮಾಡುವುದು ಸಾಮಾನ್ಯ. ಇದನ್ನು ಕೆಸುವಿನ ಎಲೆ ಬಳಸಿ ಮಾಡುವುದರಿಂದ ಬೇರೆ ಸಮಯದಲ್ಲಿ ಮಾಡಿದರೆ ಗಂಟಲು ತುರಿಸುತ್ತದೆ ಆದ್ದರಿಂದ ಇದನ್ನು ಮಳೆಗಾಲದಲ್ಲಿ ಮಾತ್ರ ಮಾಡಲಾಗುವುದು.

ಅಲ್ಲದೆ ಮಳೆಗಾಲದ ಸಮಯದಲ್ಲಿ ದೇಹವನ್ನು ಬೆಚ್ಚಗಿಡುವ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು. ಹೀಗೆ ದೇಹವನ್ನು ಬೆಚ್ಚಗಿಡುವ ಪದಾರ್ಥಗಳಲ್ಲಿ ಪತ್ರೊಡೆ ಕೂಡ ಒಂದು ಆಹಾರ ಪದಾರ್ಥವಾಗಿದೆ. ಈ ಪತ್ರೊಡೆಯನ್ನು ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು :
* 7 ರಿಂದ 8 ಕೆಸುವಿನ ಎಲೆ
* 2 ಕಪ್ ಅಕ್ಕಿ
* 1/4 ಕಪ್ ತೊಗರಿಬೇಳೆ
* 1/4 ಕಪ್ ಹೆಸರು ಬೇಳೆ
* 1/4 ಕಪ್ ಕಡಲೆ ಬೇಳೆ
* 1/4 ಕಪ್ ಉದ್ದಿನ ಬೇಳೆ
* 6-8 ಒಣಮೆಣಸಿನ ಕಾಯಿ (ಖಾರಕ್ಕೆ ತಕ್ಕಷ್ಟು)
* 2-3ಚಮಚ ಕೊತ್ತಂಬರಿ ಬೀಜ
* 2 ಚಮಚ ಜೀರಿಗೆ
* 1/4 ಚಮಚ ಇಂಗು
* ರುಚಿಗೆ ತಕ್ಕ ಉಪ್ಪು
* ಹುಣಸೆ ಹಣ್ಣಿನ ರಸ
(ನಿಂಬೆ ಹಣ್ಣಿಗಿಂತ ಸ್ವಲ್ಪ ದೊಡ್ಡ ಹುಣಸೆ ಹಣ್ಣಿನ ಉಂಡೆ ತಗೊಂಡು ಅದನ್ನು ನೀರಿನಲ್ಲಿ ಹಾಕಿ ಅದರಿಂದ ರಸ ಹಿಂಡಿ ಒಂದು ಪಾತ್ರೆಯಲ್ಲಿ ಇಟ್ಟುಕೊಳ್ಳಬೇಕು).

ತಯಾರಿಸುವ ವಿಧಾನ:

1. ಅಕ್ಕಿ, ತೊಗರಿಬೇಳೆ, ಹೆಸರು ಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆಯನ್ನು 3 ತಾಸುಗಳ ಕಾಲ ನೆನೆಹಾಕಬೇಕು.

2. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಬೇಕು.

3. ತವಾದಲ್ಲಿ ಒಣ ಮೆಣಸು, ಜೀರಿಗೆ, ಇಂಗು, ಕೊತ್ತಂಬರಿ ಬೀಜ ಹಾಕಿ ಸಣ್ಣ ಉರಿಯಲ್ಲಿ ಹುರಿದು ಮಿಕ್ಸಿಯಲ್ಲಿ ಹಾಕಿ ಪುಡಿಪುಡಿಯಾಗಿ ರುಬ್ಬಿಕೊಳ್ಳಬೇಕು.

4. ಕೆಸುವಿನ ಎಲೆಯನ್ನು ತೊಳೆದು, ಅದರ ನಾರು ತೆಗೆದು, ಚಿಕ್ಕದಾಗಿ ಕತ್ತರಿಸಿ ಹಿಟ್ಟಿನ ಜೊತೆ ಹಾಕಿ, ಅದಕ್ಕೆ ಪುಡಿ-ಪುಡಿಯಾಗಿ ರುಬ್ಬಿದ ಮಸಾಲೆ ಪುಡಿ ಮತ್ತು ಹುಣಸೆ ಹಣ್ಣಿನ ರಸ ರುಚಿಗೆ ತಕ್ಕ ಉಪ್ಪು ಹಾಕಿ 3 ವಿಶಲ್ ಬರುವರೆಗೆ ಕುಕ್ಕರ್ ನಲ್ಲಿ ಬೇಯಿಸಿ, ನಂತರ ಕುಕ್ಕರ್ ನಿಂದ ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಅದನ್ನು ಪುಡಿಪುಡಿ ಮಾಡಿದರೆ ರುಚಿಕರವಾದ ಪತ್ರೊಡೆ ರೆಡಿ.

ಇದನ್ನು ಈ ಕೆಳಗಿನ ವಿಧಾನದಿಂದ ಕೂಡ ತಯಾರಿಸಬಹುದು.

1. ಪತ್ರೊಡೆಗೆ ಹಿಟ್ಟು ರುಬ್ಬಿಕೊಂಡು ಅದಕ್ಕೆ ರುಬ್ಬಿದ ಮಸಾಲೆ ಪುಡಿ ಮತ್ತು ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ನಂತರ ಕೆಸುವಿನೆಲೆಗಳನ್ನು ನೀಟಾಗಿ ಒದ್ದೆ ಬಟ್ಟೆಯೊಂದರಲ್ಲಿ ಒರಸಿ. ಎಲೆಯ ಹಿಂಭಾಗದಲ್ಲಿರುವ ದಪ್ಪನೆಯ ನಾರುಗಳನ್ನು ನಯವಾಗಿ ಕಿತ್ತು ತೆಗೆಯಬೇಕು. ಪತ್ರೊಡೆ ನೀಟಾಗಿರಬೇಕಾಗರೆ, ಎಲೆ ಎಲ್ಲಿಯೂ ತೂತಾಗಿರಬಾರದು.

2. ಈಗ ಕೆಸುವಿನೆಲೆಗಳನ್ನು ಹರಡಿಕೊಂಡು ಎಲೆಯ ಹಿಂಬದಿ ಮೇಲೆ ಹಿಟ್ಟನ್ನು ತೆಳ್ಳಗೆ ಹಚ್ಚಿ. ಅದರ ಮೇಲೆ ಇನ್ನೊಂದು ಎಲೆ ಇಟ್ಟು ಮತ್ತೆ ಅದರ ಮೇಲೆ ಹಿಟ್ಟು ಹಚ್ಚಿ. ಎರಡೂ ಎಲೆಯ ಬದಿಗಳನ್ನು ತುಸುವೇ ಒಳಕ್ಕೆ ಮಡಚಿಕೊಂಡು ಎಲೆಯನ್ನು ನಿಮ್ಮ ಹಾಸಿಗೆ ಸುರುಳಿ ಸುತ್ತಿದ ಹಾಗೆ ಸುತ್ತಿ. ಕುಕ್ಕರಿನಲ್ಲಿ 3 ವಿಶಲ್ ಬರುವವರೆಗೆ ಬೇಯಿಸಿದರೆ ಪತ್ರೊಡೆ ರೆಡಿ.

ಈ ತಿಂಡಿಯನ್ನು ತುಪ್ಪ ಅಥವಾ ಬೆಣ್ಣೆ ಹಚ್ಚಿಕೊಂಡು ತಿನ್ನಬಹುದು. ಇದನ್ನು ಕಾಯಿ ಚಟ್ನಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Tasty Pathrode Recipe | Food For Rainy Season | ರುಚಿಕರವಾದ ಪತ್ರೊಡೆ ರೆಸಿಪಿ | ಮಳೆಗಾಲದಲ್ಲಿ ತಿನ್ನಲು ಸೂಕ್ತವಾದ ಆಹಾರ

Pathrode is a best food for rainy season, if you prepare this some other season you can't eat, So this is the best season to prepare this. Here is a easy pathrode recipe
X
Desktop Bottom Promotion