For Quick Alerts
ALLOW NOTIFICATIONS  
For Daily Alerts

ಬೆಳಗಿನ ತಿಂಡಿಗೆ ಇವರ ಮನೆಗೆ ಹೋಗೋಣ, ಪ್ರತಿದಿನ!!

By Staff
|
Mr and Mrs Pejathaya
ವಿಚಿತ್ರಾನ್ನ ಅಂಕಣದಲ್ಲಿ ಪ್ರಕಟವಾಗಿರುವ ಗಂಜಿ ಮತ್ತು ಖಂಡಾಂತರ ಉಪಾಹಾರ ಲೇಖನಕ್ಕೆ ಪ್ರತಿಕ್ರಿಯೆ : ಓದಿದರೆ ಯಾರಿಗಾದರೂ ಅಸೂಯೆ ಬರುತ್ತೆ!

ಪೆಜತ್ತಾಯ, ಬೆಂಗಳೂರು

ಸಾರ್‌,

ನನಗೆ ಸಾಮಾನ್ಯವಾಗಿ ಮನೆಯಲ್ಲಿ ಬಡಿಸಲಾಗುವ ಬೆಳಗಿನ ಉಪ +ಆಹಾರ = ಉಪಾಹಾರದ ವಿವರ ಕೊಡುತ್ತೇನೆ.

ಭಾನುವಾರ : ಮೈದಾ ದೋಸೆ ಅಥವಾ ಉದ್ದಿನ ದೋಸೆ + ಚಟ್ನಿ
ಸೋಮವಾರ : ಪರೋಟ + ಮೊಸರು + ಉಪ್ಪಿನಕಾಯಿ
ಮಂಗಳವಾರ : ಇಡ್ಲಿ + ಸಾಂಬಾರ್‌
ಬುಧವಾರ : ಇಡ್ಲಿ ಹಿಟ್ಟಿನ ಬಾಣಲೆ ದೋಸೆ + ಚಟ್ನಿ ಪುಡಿ
ಗುರುವಾರ : ಅವಲಕ್ಕಿ ಉಪ್ಕರಿ + ಮೊಸರು + ಉಪ್ಪಿನಕಾಯಿ ( ನನ್ನ ಹೆಂಡತಿ ಸರೋಜಮ್ಮನವರ ಗುರುವಾರ = ಮುಸುರೆ ಇಲ್ಲ! )
ಶುಕ್ರವಾರ : ನೀರು ದೋಸೆ = ಚಟ್ನಿ + ಬಾಳೆಹಣ್ಣು ಸೀಕರಣೆ
ಶನಿವಾರ : ಖಾರ ದೋಸೆ ಅಥವಾ ಟೊಮಟೊ ಉತ್ತಪ್ಪ + ಚಟ್ನಿ
(ಸಾರ್‌, ಇನ್ನೊಂದು ವಿಷಯ! ವಾರಕ್ಕೆ ಬರೇ ಏಳುದಿನ ಇರುವುದು! - ಎಂಬ ಬೇಜಾರು ಕೂಡಾ ನನಗೆ ಇದೆ.)

ಒಂದೊಂದು ದಿನ ಮೇಲಿನ ಪಟ್ಟಿಯ ತಿಂಡಿಗಳ ಏಕತಾನ ಕಳೆಯಲು :

ಅಕ್ಕಿ ರೊಟ್ಟಿ, ಗೋಧಿ ರೊಟ್ಟಿ, ಖೊಟ್ಟಿಗೆ ಅಥವಾ ಲೋಟ ಕಡುಬು, ತಟ್ಟೆ ಇಡ್ಲಿ, ಪುಂಡಿ ಗಟ್ಟಿ, ಪೆಸರಟ್ಟು, ರಾಗಿ ದೋಸೆ, ಮಸಾಲೆ ದೋಸೆ, ಅವಲಕ್ಕಿ ದೋಸೆ. ಗುಳಿ ಅಪ್ಪ ( ಪಡ್ಡು ), ಚಪಾತಿ, ಪೂರಿ, ಒತ್ತು ಶಾವಿಗೆ ಅಥವಾ ಒಡೆಯಕ್ಕಿ ಮುದ್ದೆ ಮಾಡಿ ಬಡಿಸುತ್ತಾರೆ.

ಮನೆಯಲ್ಲಿ ತಿಂಡಿ ಜತೆಗೆ ಮನೆಯ ಯಜಮಾನತಿ ಸರೋಜಮ್ಮ ಏನಾದರೂ ಹಣ್ಣು ಹೆಚ್ಚಿ ಕೊಡುತ್ತಾರೆ.

ಕಾಫಿ ಅಥವಾ ಟೀ ಮಲೆನಾಡು ಪದ್ಧತಿಯಂತೆ ಧಾರಾಳವಾಗಿ ಸಿಗುತ್ತೆ. ಮಕ್ಕಳಿಗೆ ತುಪ್ಪ, ಬೆಣ್ಣೆ, ಜೇನು ಅಂತ ಮೇಲು ಉಪಚಾರ ಇದ್ದೇ ಇದೆ. ( ನನಗೆ ಸ್ವಲ್ಪ ಕೊಲೆಸ್ತೆರಾಲ್‌ ಮತ್ತು ಸಕ್ಕರೆ ಜಾಸ್ತಿ ಇರುವುದರಿಂದ ಇವು ನನಗೆ ಇಲ್ಲ! )

ಊರು ಬಿಟ್ಟು ಪರವೂರಿಗೆ ಹೋದಾಗ, ಅಂದರೆ, ಪಂಚತಾರಾ ಹೋಟೆಲ್‌ ವಾಸದಲ್ಲಿ ಇದ್ದಾಗ ಮಾತ್ರ, ನೀವು ಹೇಳಿದಾಗ ಕಾಂಟಿನೆಂಟಲ್‌ ಅಥವಾ ಅಮೆರಿಕನ್‌ ಉಪಹಾರ ತಿನ್ನಬೇಕಾಗುತ್ತೆ.

ಸರೋಜಮ್ಮ ದಕ್ಷಿಣ ಕನ್ನಡದ ಮೂಲದವರಾದರೂ, ಘಟ್ಟ ಪ್ರದೇಶದಲ್ಲಿ ಬೆಳೆದವರು. ಅವರಿಗೆ ನಮ್ಮ ದಕ್ಷಿಣ ಕನ್ನಡದ ಬೆಳಗಿನ ಗಂಜಿ ಊಟದ ಪದ್ಧತಿ ರೂಢಿ ಕಡಿಮೆ. ಆದರೂ, ಈಗ ನಮ್ಮ ಮನೆಯಲ್ಲಿ ತಿಂಗಳಿಗೆ ಎರಡು ಮೂರು ಬಾರಿ ರಾತ್ರಿ ಹೊತ್ತಿನ ಊಟಕ್ಕೆ ಸರೋಜಮ್ಮ ಕುಚ್ಚಿಲು ಅಕ್ಕಿಯ ಗಂಜಿ ತಯಾರಿಸುತ್ತಾರೆ. ಹಾಗಾಗಿ, ನಾನು ನಮ್ಮ ಕುಚ್ಚಿಲು ಅಕ್ಕಿಯ ಗಂಜಿ 'ಮಿಸ್‌" ಮಾಡುತ್ತಾ ಇಲ್ಲ.

ನನಗೆ ಮದುವೆ ಆಗಿ 35 ವರ್ಷಗಳು ಕಳೆದುವು. ಸರೋಜಮ್ಮನವರ ದಯದಿಂದ, ನಾನು ಅಂದಿನಿಂದ ಇಂದಿಗೆ ಬರೇ ಇಪ್ಪತ್ತ ಆರು ಕಿಲೋ ತೂಕ ಹೆಚ್ಚಿಸಿಕೊಂಡಿದ್ದೇನೆ. ಸಣ್ಣ ಮಟ್ಟಿನ ಗಣೇಶನ ಹೊಟ್ಟೆ ಕೂಡಾ ನನಗೆ ಅಂಟಿಕೊಂಡಿದೆ.

ಈ ಗಣೇಶನ ಹೊಟ್ಟೆಯ ದಿಸೆಯಿಂದಾಗಿ, ನನ್ನ ಗುರುತು ಇಲ್ಲದವರು ಕೂಡಾ ......... 'ನಿಮ್ಮ ಯಜಮಾನತಿ ಚೆನ್ನಾಗಿ ಅಡುಗೆ ಮಾಡಿ ಬಡಿಸುತ್ತಾರೆ!" - ಎಂದು ನನ್ನನ್ನು ಅಭಿನಂದಿಸುತ್ತಾರೆ! ಮತ್ತು, ಹಲವು ಮಿತ್ರರು ಬೆಳಗಿನ ತಿಂಡಿಗೆ ನಮ್ಮ ಮನೆಗೆ ಅತಿಥಿಗಳಾಗಿ ಆಗಮಿಸುತ್ತಾರೆ!

ಅಭ್ಯಾಗತರು ಬಂದರೆ, ಮನೆಯಾಡತಿ ಸರೋಜಮ್ಮನವರಿಗೆ ತಿಂಡಿ ಮಾಡಿ ಬಡಿಸಲು ಇನ್ನಷ್ಟು ಹುರುಪು!

ಇಲ್ಲಿಗೆ ನಿಲ್ಲಿಸಲೇ ನನ್ನ ಬ್ರೇಕ್‌ಫಾಸ್ಟ್‌ ಪುರಾಣ?

Story first published: Wednesday, April 21, 2010, 15:54 [IST]
X
Desktop Bottom Promotion