For Quick Alerts
ALLOW NOTIFICATIONS  
For Daily Alerts

ಸಿಟ್ಟುಬಂದವಗೆ ಅಕ್ಕಿ ಹಿಟ್ಟು, ಹಸಿದವಗೆ ಥಾಲಿಪೆಟ್ಟು

By * ಪ್ರಸಾದ ನಾಯಿಕ
|
Thalipettu or Akki Rotti
ಈ ಥಾಲಿಪೆಟ್ಟಿನ ವಿಶೇಷವೆಂದರೆ ಇದರೊಂದಿಗೆ ನೆಂಜಿಕೊಳ್ಳಲು ಯಾವುದೇ ಪಲ್ಯವಾಗಲಿ ಚಟ್ನಿಯಾಗಲಿ ಬೇಕಿಲ್ಲ. ಹಾಗೆಯೇ ತಿನ್ನಬಹುದು. ಅಷ್ಟು ಸ್ವಾದಿಷ್ಟಕರ.

ಸಿಟ್ಟುಬಂದಾಗ ಹಿಟ್ಟು ಮುಕ್ಕು ಎಂಬ ಮಾತನ್ನು ಸ್ವಲ್ಪ ಬದಲಾಯಿಸಿ ಸಿಟ್ಟು ಬಂದಾಗ ಅಕ್ಕಿ ಹಿಟ್ಟು ಮುಕ್ಕು ಎಂದು ಚೇಂಜ್ ಮಾಡಿ, ಮುಕ್ಕಬೇಕಾದ ಅಕ್ಕಿಹಿಟ್ಟನ್ನೇ ತೆಗೆದುಕೊಂಡು ಬರೊಬ್ಬರಿ ಈರುಳ್ಳಿ, ಕೊಬ್ಬರಿ ಹಾಕಿ ತಟ್ಟಿದರೆ ಥಾಲಿಪೆಟ್ಟು ತಯಾರ್. ಅಲ್ಲಿಗೆ ಸಿಟ್ಟೂ ಶಮನವಾದಂತೆ ಹೊಟ್ಟೆಯೂ ತಣ್ಣಗಾದಂತೆ.

ಉತ್ತರ ಕರ್ನಾಟಕದ ಕಡೆಯಲ್ಲಿ ಅಕ್ಕಿರೊಟ್ಟಿ ಮಾಡಿ ಎಂದು ಹೇಳಿದಾಗ ನೀವು ತಿಳಿದುಕೊಂಡಿರುವ ಅಕ್ಕಿರೊಟ್ಟಿ ಸಿಗಲಿಕ್ಕಿಲ್ಲ. ಅಲ್ಲಿ ಅಕ್ಕಿರೊಟ್ಟಿಯೆಂದರೆ ಜೋಳದ ರೊಟ್ಟಿಯಂತೆ ಬರೀ ಅಕ್ಕಿ ಹಿಟ್ಟನ್ನುಪಯೋಗಿಸಿ ತಯಾರಿಸಿದ ಭಕ್ಕರಿ. ನೀವು ತಿಳಿದಿರುವ ಅಕ್ಕಿರೊಟ್ಟಿಗೆ ಅಲ್ಲಿ ಥಾಲಿಪೆಟ್ಟು ಎಂದು ಕರೆಯುತ್ತಾರೆ. ಥಾಲಿ ಅಂದರೆ ತಟ್ಟೆಯ ಮೇಲೆ ಪೆಟ್ಟು ಅಂದರೆ ತಟ್ಟಿ ಮಾಡುವ ರೊಟ್ಟಿಗೆ ಥಾಲಿಪೆಟ್ಟು ಎಂಬ ಹೆಸರು ಚಾಲ್ತಿಯಲ್ಲಿದೆ.

ಈ ಥಾಲಿಪೆಟ್ಟಿನ ವಿಶೇಷವೆಂದರೆ ಇದರೊಂದಿಗೆ ನೆಂಜಿಕೊಳ್ಳಲು ಯಾವುದೇ ಪಲ್ಯವಾಗಲಿ ಚಟ್ನಿಯಾಗಲಿ ಬೇಕಿಲ್ಲ. ಹಾಗೆಯೇ ತಿನ್ನಬಹುದು. ಅಷ್ಟು ಸ್ವಾದಿಷ್ಟಕರ. ಬೆಳಿಗ್ಗೆ ಸಾಯಂಕಾಲದ ತಿಂಡಿಯೊಂದಿಗೆ ಮಾತ್ರವಲ್ಲ ಮದ್ಯಾಹ್ನದ ಊಟದೊಡನೆಯೂ ಥಾಲಿಪೆಟ್ಟನ್ನು ಹೊಟ್ಟೆಗಿಳಿಸಬಹುದು. ಒಟ್ಟಿನಲ್ಲಿ ಬಿಸಿಬಿಸಿಯಾಗಿರಬೇಕು.

ಬೇಕಾದ ಸಾಮಗ್ರಿಗಳು

ಅಕ್ಕಿಹಿಟ್ಟು, ಅಷ್ಟೇ ಪ್ರಮಾಣದ ಉಳ್ಳಾಗಡ್ಡಿ (ಈರುಳ್ಳಿ), ಅಷ್ಟೇ ಪ್ರಮಾಣದ ಕೊಬ್ಬರಿ ತುರಿ (ಹಳಕಳಕಾಗಿದ್ದರೆ ಇನ್ನೂ ಚೆನ್ನ), ಮೆಣಸಿನಕಾಯಿ, ಹಸಿಶುಂಠಿ, ಕೊತ್ತಂಬರಿ, ರುಚಿಗೆ ಉಪ್ಪು ಮತ್ತು ಕಡಲೆಕಾಯಿ ಎಣ್ಣೆ.

ಮಾಡುವ ವಿಧಾನ

ಅಕ್ಕಿಹಿಟ್ಟಿಗೆ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳೊಂದಿಗೆ ನೀರು ಬೆರೆಸಿ ಚೆನ್ನಾಗಿ ನಾದಿಕೊಳ್ಳಬೇಕು, ಭಕ್ಕರಿ ಮಾಡುವ ಹಿಟ್ಟಿನಂತೆ. ಕಬ್ಬಿಣದ ಕಾವಲಿಯಾದರೂ ಆಯಿತು ನಾನ್ ಸ್ಟಿಕ್ ತವಾ ಆದರೂ ಆಯಿತು. ಹೆಂಚಿಗೆ ಮೊದಲು ಚೆನ್ನಾಗಿ ಕಡಲೆಕಾಯಿ ಎಣ್ಣೆ ಸವರಿಕೊಂಡು ಅದರ ಮೇಲೆ ಹಿಟ್ಟನ್ನು ಒತ್ತಬೇಕು. ಒತ್ತಿದ ಹಿಟ್ಟು ತವಾಕ್ಕೆ ಅಂಟಿಕೊಳ್ಳಲೂ ಬಾರದು, ಹೆಚ್ಚು ದಪ್ಪವಿರಲೂ ಬಾರದು. ಹಿಟ್ಟು ಒತ್ತಿದನಂತರ ಅದರ ಮೇಲೆ ಮತ್ತೆ ಎಣ್ಣೆಯನ್ನು ಸವರಬೇಕು.

ಕಬ್ಬಿಣದ ಹೆಂಚು ಮೊದಲಿನ ಕಾಲದಲ್ಲಿ ರೊಟ್ಟಿ ಬೇಯಿಸುತ್ತಿದ್ದ ತಳ ಕತ್ತರಿಸಿದ ಚೆಂಡಿನಾಕಾರದಂತೆ ಇದ್ದರೆ ಇನ್ನೂ ಒಳ್ಳೆಯದು. ಯಾಕೆಂದರೆ ಹೆಂಚಿನ ಪ್ರತಿ ಮೂಲೆಯನ್ನೂ ಚೆನ್ನಾಗಿ ಬೇಯಿಸಬಹುದು. ಹೆಂಚನ್ನು ಸ್ಟೌಮೇಲಿಟ್ಟು ಚೆನ್ನಾಗಿ ಬೇಯಿಸಬೇಕು. ಸ್ವಲ್ಪ ಕುರುಕುರುವಾಗುವಂತೆ ಬೇಯಿಸಿದರೆ ತಿನ್ನಲೂ ಚೆನ್ನಾಗಿರುತ್ತದೆ. ಥಾಲಿಪೆಟ್ಟು ಬೇಯುವಾಗ ಮುಚ್ಚಳ ಮುಚ್ಚಿದರೆ ಬೇಯುವ ಸಮಯ ಉಳಿಯುತ್ತದೆ ಮತ್ತು ಗುಣಮಟ್ಟ ಹೆಚ್ಚುತ್ತದೆ.

ಬಿಸಿಬಿಸಿಯಾದ ಥಾಲಿಪೆಟ್ಟನ್ನು ಕೊಬ್ಬರಿ ಚಟ್ನಿ ಅಥವ ಮೊಸರಲ್ಲಿ ಕಲಿಸಿದ ಚಟ್ನಿಪುಡಿ ಹಚ್ಚಿಕೊಂಡು ಪಟ್ಟು ಹಿಡಿದು ಎರಡನ್ನು ಹೊಟ್ಟೆಗಿಳಿಸಿದರೆ ಎರಡು ಮೂರು ಗಂಟೆಗಳ ಕಾಲ ಮತ್ತೆ ಊಟದ ತಂಟೆಗೆ ಹೋಗುವ ಅಗತ್ಯವೇ ಇರುವುದಿಲ್ಲ.

Story first published: Monday, January 4, 2010, 16:56 [IST]
X
Desktop Bottom Promotion