For Quick Alerts
ALLOW NOTIFICATIONS  
For Daily Alerts

ಗರ್ಭದೊಳಗಿನ ಮಗುವಿನ ಒಡೆತ ಏಕಾಏಕಿ ನಿಂತರೆ ಚಿಂತಿಸಬೇಕೇ?

|

ಗರ್ಭಾವಸ್ಥೆ ಪ್ರತಿ ಹೆಣ್ಣೂ ಬಯಸುವ ಅದ್ಭುತ ಅನುಭವವಾಗಿದೆ. ಅದರಲ್ಲೂ ಸುಮಾರು ಏಳನೆಯ ತಿಂಗಳು ಗರ್ಭದಲ್ಲಿನ ಮಗುವಿನ ಕಾಲಿನ ಚಲನೆಯಿಂದ ಆಗುವ ಅನುಭವ ವರ್ಣನಾತೀತ! ಇದನ್ನು ಮಗುವಿನ ಒದೆತ ಎಂದೂ ಕರೆಯಬಹುದು. ಇದುವರೆಗೆ ತನ್ನ ಒಡಲಲ್ಲಿ ಬೆಳೆಯುತ್ತಿರುವ ಮಗುವಿನ ಇರುವಿಕೆಯ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ದೊರಕದಿದ್ದ ಆಕೆಗೆ ಈ ಸೂಚನೆಯಿಂದ ಆಗುವ ರೋಮಾಂಚನ ಅದ್ಭುತ.

ಒಮ್ಮೆ ಪ್ರಾರಂಭವಾದ ಒದೆತ ನಿಧಾನವಾಗಿ ಹೆಚ್ಚುತ್ತಾ ಇನ್ನೊಂದು ಮಗದೊಂದು ಎಂಬಂತೆ ಆಗಾಗ ಕಾಣಿಸಿಕೊಳ್ಳುತ್ತದೆ. ಕೆಲವೇ ಒದೆತಗಳ ಅನುಭವದ ಬಳಿಕ ತಾಯಿಗೆ ಈ ಒದೆತಗಳು ಒಂದು ವಿಶಿಷ್ಟ ಸಂಯೋಜನೆಯಲ್ಲಿಯೇ ಬರುತ್ತಿವೆ ಎಂದು ಖಾತರಿಯಾಗತೊಡಗುತ್ತದೆ. ಆ ಪ್ರಕಾರ ಮುಂದಿನ ಒದೆತ ಯಾವಾಗ ಬರಬಹುದೆಂದು ಆಕೆ ಲೆಕ್ಕಾಚಾರಾ ಹಾಕುತ್ತಾಳೆ ಹಾಗೂ ಹೆಚ್ಚೂ ಕಡಿಮೆ ಅದೇ ಸಮಯಕ್ಕೆ ಇನ್ನೊಂದು ಅನುಭವ ಆಗುತ್ತದೆ.

ಈ ಹಂತದ ಬಳಿಕ ಮಗು ಮತ್ತು ತಾಯಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಯತ್ನಿಸುತ್ತಿರುವಂತೆ ಭಾಸವಾಗುತ್ತದೆ. ತಾಯಿಯೂ ಮಗು ಇದೇ ಪ್ರಕಾರ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಲೇ ಇರಬೇಕು ಎಂದು ಬಯಸುತ್ತಾಳೆ. ಮಗು ತನ್ನ ಒದೆತಗಳಿಂತ ತನ್ನೊಂದಿಗೆ ಸಂವಹಿಸುತ್ತಿದೆ ಎಂದು ಆಕೆಗೆ ಅನ್ನಿಸುತ್ತದೆ. ದಿನ ಕಳೆದಂತೆ ಮಗು ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಾ ಜಗತ್ತಿಗೆ ಬರುವ ದಿನಗಳು ಹತ್ತಿರಾಗುತ್ತಿವೆ ಎಂದು ತಿಳಿಸುತ್ತದೆ. ತಾಯಿ ಎಚ್ಚರಿದ್ದಾಗಲೂ ಮಲಗಿದ್ದಾಗಲೂ ಒದೆತಗಳ ಮೂಲಕ ಏನನ್ನೋ ಹೇಳಲು ಯತ್ನಿಸುತ್ತದೆ. ಇದು ತಾಯಿಗೆ ಮಗುವಿನ ಮೇಲೆ ಅಪಾರವಾದ ಪ್ರೀತಿ ಮತ್ತು ಬಾಂಧವ್ಯವನ್ನು ಈಗಲೇ ಹೊಂದಲು ಸಾಧ್ಯವಾಗಿಸುತ್ತದೆ.

ಒಂದು ವೇಳೆ ಈ ಒದೆತಗಳು ಏಕಾಏಕಿ ಕಡಿಮೆಯಾಗುತ್ತಾ ಹೋದರೆ ಅಥವಾ ನಿಂತೇ ಹೋದರೆ ಏನಾಗಬಹುದು? ಮಗುವಿಗೆ ಏನಾದರೂ ಆಯಿತೋ ಎಂದು ತಾಯಿ ಗಾಬರಿಯಾಗಬಹುದು. ಆದರೆ ವಾಸ್ತವದಲ್ಲಿ ಇದಕ್ಕೆ ಗಾಬರಿ ಪಡುವ ಅವಶ್ಯಕತೆಯೇ ಇಲ್ಲ. ಒದೆತಗಳು ನಿಲ್ಲಲು ಕೆಲವಾರು ಕಾರಣಗಳಿವೆ ಹಾಗೂ ಹೆಚ್ಚಿನವು ಆತಂಕ ಪಡಬಾರದಂತಹವೇ ಆಗಿವೆ. ಆದರೆ ಕೆಲವು ಮಾತ್ರ ಕಾಳಜಿ ವಹಿಸಬೇಕಾದಂತಹದ್ದಾಗಿದ್ದು ವೈದ್ಯರು ಸೂಕ್ತ ಪರೀಕ್ಷೆಗಳ ಮೂಲಕ ಇದರ ಮೂಲವನ್ನು ಪತ್ತೆ ಹಚ್ಚಿ ಸೂಕ್ತ ಸಲಹೆ ನೀಡುತ್ತಾರೆ. ಇಂದಿನ ಲೇಖನದಲ್ಲಿ ಈ ಒದೆತ ಕುಸಿಯುವಿಕೆಗೆ ಕಾರಣಗಳನ್ನು ಹಾಗೂ ಇದರಿಂದ ಆತಂಕಕ್ಕೆ ಆಸ್ಪದವಿದೆಯೇ ಇಲ್ಲವೇ ಎಂಬುದನ್ನು ವಿವರಿಸಲಾಗಿದೆ, ಬನ್ನಿ ನೋಡೋಣ:

ದಿನಕ್ಕೆ ಕೆಲವೇ ಒದೆತಗಳು : ಆತಂಕಕ್ಕೆ ಆಸ್ಪದವಿಲ್ಲ

ದಿನಕ್ಕೆ ಕೆಲವೇ ಒದೆತಗಳು : ಆತಂಕಕ್ಕೆ ಆಸ್ಪದವಿಲ್ಲ

ಒಂದು ವೇಳೆ ಗರ್ಭದಲ್ಲಿನ ಮಗುವಿನ ಒದೆತ ಕಡಿಮೆಯಾದ ಕೂಡಲೇ ಕೆಲವು ಗರ್ಭಿಣಿಯರು ಅತಿಯಾಗಿ ಹೆದರತೊಡಗುತ್ತಾರೆ. ಹಿಂದಿನ ದಿನಗಳಲ್ಲಿ ಕೆಲವಾರು ಬಾರಿ ಆಗುತ್ತಿದ್ದುದು ಈಗ ಏಕಾ ಏಕಿ ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ಇರುವುದು ಅವರಿಗೆ ಆತಂಕ ತರುತ್ತದೆ. ಏನೋ ತೊಂದರೆ ಇದೆ ಎಂದು ಅವರು ಗಾಬರಿ ಬೀಳುತ್ತಾರೆ. ಆದರೆ ವಾಸ್ತವದಲ್ಲಿ ಇದು ಸಹಜವಾಗಿದ್ದು ಆತಂಕಕ್ಕೆ ಒಳಗಾಗುವ ಅವಶ್ಯಕತೆಯೇ ಇಲ್ಲ.

ಮಗು ಆರೋಗ್ಯವಾಗಿಯೇ ಇರುತ್ತದೆ. ಒದೆಯುವಿಕೆ ಕಡಿಮೆಯಾಗಲು ಕೆಲವಾರು ಕಾರಣಗಳಿವೆ. ಮಗುವಿಗೆ ಆಯಾಸವಾಗಿರುವುದು, ತಾಯಿಯ ನಿದ್ದೆಯ ಸಮಯಕ್ಕೆ ಬದಲಾಗಿರುವುದು ಮೊದಲಾದವು ಪ್ರಮುಖವಾಗಿವೆ. ಯಾವಾದಲಾದರೊಮ್ಮೆ ಆದರೂ ಸಾಕು, ತಾಯಿಗೆ ಆತಂಕ ಪಡದಿರಲು ಇಷ್ಟೇ ಸಾಕು. ಆದರೆ ಅತಿ ಕಡಿಮೆ ಅನಿಸಿದರೆ ತಮ್ಮ ವೈದ್ಯರ ಬಳಿ ವಿಚಾರಿಸಬೇಕು.

ಒದೆತಗಳೇ ಇಲ್ಲ ಮತ್ತು ರಕ್ತಸ್ರಾವ ಕಾಣಿಸಿಕೊಳ್ಳುವುದು : ಆತಂಕಕ್ಕೆ ಆಸ್ಪದವಿದೆ

ಒದೆತಗಳೇ ಇಲ್ಲ ಮತ್ತು ರಕ್ತಸ್ರಾವ ಕಾಣಿಸಿಕೊಳ್ಳುವುದು : ಆತಂಕಕ್ಕೆ ಆಸ್ಪದವಿದೆ

ಗರ್ಭಿಣಿ ಯಾವಾಗ ಒದೆಗಳನ್ನು ಅನುಭವಿಸಿಯೇ ಇಲ್ಲವೋ ಮತ್ತು ರಕ್ತಸ್ರಾವ ಕಾಣಿಸಿಕೊಳ್ಳುತ್ತದೆಯೋ ಆಗ ತಕ್ಷಣ ಇದರನ್ನು ವೈದ್ಯರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಈ ಹಂತ ಬೆಳವಣಿಗೆಯ ಪ್ರಮುಖ ಹಂತವಾಗಿದ್ದು ಮಗುವಿಗೆ ಹಾಗೂ ಗರ್ಭಿಣಿಯ ಆರೋಗ್ಯಕ್ಕೆ ಏನೂ ತೊಂದರೆ ಇಲ್ಲ ಹಾಗೂ ಹೆರಿಗೆಯೂ ಯಾವ ತೊಂದರೆಯೂ ಆಗದಂತೆ ನಿರ್ವಹಿಸುತ್ತದೆ ಎಂಬುದನ್ನು ವೈದ್ಯರು ಕೆಲವು ಪರೀಕ್ಷೆಗಳ ಮೂಲಕ ಖಾತ್ರಿಪಡಿಸಿಕೊಳ್ಳುತ್ತಾರೆ.

ಗರ್ಭಾವಸ್ಥೆಯಲ್ಲಿ ರಕ್ತಸ್ರಾವ ಕಾಣಿಸಿಕೊಂಡರೆ ಇದಕ್ಕೆ ಒಂದು ಪ್ರಮುಖ ಕಾರಣ ಹೆರಿಗೆಯ ಬಳಿಕ ಹೊರಬೀಳಬೇಕಾಗಿದ್ದ ಗರ್ಭಕೋಶದ ಒಳಪದರ ಅಥವಾ ಮಾಸು (ಪ್ಲಾಸೆಂಟಾ) ಹೆರಿಗೆಗೂ ಮುನ್ನವೇ ಭಾಗಶಃ ಅಥವಾ ಪೂರ್ಣವಾಗಿ ಕಳಚಿ ಬೀಳುವುದಾಗಿದೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಹೀಗಾದರೆ ಮಗುವಿಗೆ ಅಗತ್ಯವಾಗಿ ದೊರಕಬೇಕಾಗಿದ್ದ ಆಮ್ಲಜನಕ ಮತ್ತು ಇತರ ಪೋಷಕಾಂಶಗಳು ದೊರಕದೇ ಹೋಗಬಹುದು. ಈ ಸ್ಥಿತಿಯಲ್ಲಿ ಅತಿಯಾದ ರಕ್ತಸ್ರಾವ ಕಾಣಿಸಿಕೊಂಡು ಮಗುವಿಗೂ ತಾಯಿಗೂ ಅಪಾಯ ಎದುರಾಗಬಹುದು.

ಒಂದು ವೇಳೆ ಪ್ಲಾಸೆಂಟಾ ಮುಂದಿನ ದಿನಗಳಲ್ಲಿ ಕಳಚಿ ಬೀಳುವ ಹಂತದಲ್ಲಿದ್ದರೆ ಮಗುವಿಗೆ ಅಗತ್ಯವಾಗಿದ್ದ ಪೋಷಕಾಂಶಗಳು ದೊರಕದೇ ಮಗುವಿನ ಬೆಳವಣಿಗೆ ಸಾಧ್ಯವಾಗದೇ ಹೋಗಬಹುದು ಅಥವಾ ಅವಧಿಪೂರ್ವವೇ ಜನಿಸಬಹುದು. ಈ ಸ್ಥಿತಿಯನ್ನು ಆದಷ್ಟೂ ಬೇಗನೇ ಕಂಡುಕೊಳ್ಳುವುದು ಅಗತ್ಯವಾಗಿರುತ್ತದೆ.

ಸುಮಾರು ನೂರೈವತ್ತು ಗರ್ಭಿಣಿಯರಲ್ಲಿ ಒಬ್ಬರಿಗೆ ಈ ಸ್ಥಿತಿ ಸುಮಾರು ಇಪ್ಪತ್ತನೆಯ ವಾರದ ಬಳಿಕ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಗರ್ಭಿಣಿ ಯಾವುದೇ ದಿನದಲ್ಲಿ ಜನನಾಂಗದಿಂದ ರಕ್ತಸ್ರಾವ ಆಗಿರುವುದು ಕಂಡುಬಂದರೆ ತಕ್ಷಣವೇ ವೈದ್ಯರ ಗಮನಕ್ಕೆ ತರಬೇಕು. ಇದರ ಜೊತೆಗೇ ಹೊಟ್ಟೆಯ ಸೆಡೆತ, ನೋವು ಸಹಾ ಕಾಣಿಸಿಕೊಳ್ಳಬಹುದು. ಈ ಸ್ಥಿತಿಯ ಜೊತೆಗೆ ಕೆಳಬೆನ್ನ ಭಾಗ ಅತಿಯಾದ ಸಂವೇದನೆ ಪಡೆಯುವುದು ಮತ್ತು ಗರ್ಭಕೋಶದ ನೋವು ಸಹಾ ಕಾಣಿಸಿಕೊಂಡು ಅವಧಿಪೂರ್ವ ಪ್ರಸವವಾಗಬಹುದು.

ಇಪ್ಪತ್ತನಾಲ್ಕನೆಯ ವಾರದಲ್ಲಿ ಕಾಣಿಸಿಕೊಳ್ಳುವ ಒದೆತ: ಆತಂಕಕ್ಕೆ ಆಸ್ಪದವಿಲ್ಲ

ಇಪ್ಪತ್ತನಾಲ್ಕನೆಯ ವಾರದಲ್ಲಿ ಕಾಣಿಸಿಕೊಳ್ಳುವ ಒದೆತ: ಆತಂಕಕ್ಕೆ ಆಸ್ಪದವಿಲ್ಲ

ಕೆಲವು ಶಿಶುಗಳ ಒದೆತ ಒಂದು ತಿಂಗಳ ಮೊದಲೇ ಕಾಣಿಸಿಕೊಳ್ಳಬಹುದು. ಅಂದರೆ ಏಳನೆಯ ತಿಂಗಳು ಬರಬೇಕಾಗಿದ್ದುದು ಆರನೆಯ ತಿಂಗಳೇ ಕಾಣಿಸಿಕೊಳ್ಳಬಹುದು. ಗರ್ಭಿಣಿಯರ ಕಾಳಜಿ ವಹಿಸುವ ದಾದಿಯರು ತಮ್ಮ ಅನುಭವದ ಪ್ರಕಾರ 16-24 ವಾರಗಳ ನಡುವೆ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು ಎಂದು ವಿವರಿಸುತ್ತಾರೆ. ಕೆಲವರಿಗೆ ಬೇಗ, ಕೆಲವರಿಗೆ ತಡ. ಯಾವುದಕ್ಕೂ ಇದು ತಾಯಿ ಮತ್ತು ಮಗುವಿನ ನಡುವಣ ಬಾಂಧವ್ಯವನ್ನು ಅವಲಂಬಿಸಿರುತ್ತದೆ.

ಬೇಗ ಅನುಭವ ಆಗಿದೆ ಎಂದಾಕ್ಷಣ ಗರ್ಭಿಣಿಗೆ ಯಾವುದೇ ತರಹದ ಮುನ್ನೆಚ್ಚರಿಕೆಗಳನ್ನು ನೀಡುವುದಾಗಲೀ ತಪ್ಪು ಸೂಚನೆಗಳನ್ನು ನೀಡುವುದಾಗಲೀ ಮಾಡಬಾರದು. ಏನೇ ಸೂಚನೆ ನೀಡುವುದಿದ್ದರೂ ಪ್ರಸೂತಿ ತಜ್ಞರೇ ನೀಡುತ್ತಾರೆ. ಹಾಗಾಗಿ ಗರ್ಭಿಣಿ ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ತಜ್ಞರಲ್ಲಿ ನೇರವಾಗಿ ಕೇಳಿ ತನ್ನ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು.

ಖಾಲಿಹೊಟ್ಟೆಯ ಅನುಭವ: ಆತಂಕಕ್ಕೆ ಆಸ್ಪದವಿಲ್ಲ

ಖಾಲಿಹೊಟ್ಟೆಯ ಅನುಭವ: ಆತಂಕಕ್ಕೆ ಆಸ್ಪದವಿಲ್ಲ

ಸಾಮಾನ್ಯವಾಗಿ ಗರ್ಭಿಣಿ ಕೊಂಚ ಹೊತ್ತಿನವರೆಗೆ ಆಹಾರ ಸೇವಿಸದೇ ಇದ್ದಾಗ ಮಗು ಕಡಿಮೆ ಒದೆಯಬಹುದು ಅಥವಾ ಒದೆಯದೇ ಇರಬಹುದು. ಏಕೆಂದರೆ ಗರ್ಭಿಣಿ ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಉಪವಾಸ ಇರಕೂಡದು. ಉಪವಾಸದ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ಹಸಿವು ನೀರಡಿಕೆಗಳು ಗರ್ಭಿಣಿಯ ಜೊತೆಗೇ ಮಗುವಿಗೂ ಆಹಾರದ ಮತ್ತು ನೀರಿನ ಕೊರತೆಯನ್ನು ಉಂಟುಮಾಡುತ್ತವೆ.

ಇದು ಇಬ್ಬರ ಆರೋಗ್ಯಕ್ಕೂ ಅಪಾಯಕಾರಿಯಾಗಬಹುದು. ಆದ್ದರಿಂದ ಯಾವಾಗ ಮಗುವಿನ ಒದೆತ ಕಡಿಮೆಯಾಗಿರುವ ಬಗ್ಗೆ ಗರ್ಭಿಣಿ ವೈದ್ಯರಲ್ಲಿ ಸಲಹೆ ಪಡೆಯುತ್ತಾಳೋ ಆಗ ವೈದ್ಯರು ಮೊದಲಾಗಿ ನೀಡುವ ಸಲಹೆ ಎಂದರೆ ಏನಾದರೂ ಸಿಹಿ ಇರುವ ದ್ರವಾಹಾರವನ್ನು ಸೇವಿಸಿ ಎಂಬುದಾಗಿದೆ. ಉದಾಹರಣೆಗೆ ಸೇಬಿನ ರಸ ಅಥವಾ ಕಿತ್ತಳೆ ರಸ. ಇದರಲ್ಲಿರುವ ಸಕ್ಕರೆಯ ಅಂಶ ಮಗುವಿಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ನಿಸರ್ಗವೂ ಮಾತೆಯೇ ಅಲ್ಲವೇ? ತಾಯಿ ಕುಡಿದ ಈ ಹಣ್ಣಿನ ರಸ ಆಕೆಯ ದೇಹವನ್ನು ತಲುಪುವ ಮುನ್ನ ಮಗುವಿಗೆ ರವಾನಿಸಲ್ಪಡುತ್ತದೆ.

ನಿಸರ್ಗದ ಈ ಶಕ್ತಿಯನ್ನು ಎಷ್ಟು ಕೊಂಡಾಡಿದರೂ ಸಾಲದು. ಹಾಗಾಗಿ, ಒದೆತ ನಿಂತ ಬಳಿಕ ತಾಯಿ ಹಣ್ಣಿನ ರಸ ಕುಡಿದ ಸುಮಾರು ಅರ್ಧ ಘಂಟೆಯಲ್ಲಿಯೇ ಒದೆತ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಇನ್ನೂ ಜೀರ್ಣವಾಗಬೇಕಾಗಿರುವ ಅಹಾರವೂ ಮಗುವಿನ ಒದೆತದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ಒದೆತ ಕಾಣಿಸಿಕೊಳ್ಳದೇ ಕೊಂಚ ಹೊತ್ತಾಯಿತು ಅನ್ನಿಸಿದಾಗ ತಾಯಿಯೇ ತನ್ನ ಹೊಟ್ಟೆಯನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಮಗುವಿಗೆ ಅವಶ್ಯಕವಾಗಿರುವ ಚಲನೆಯನ್ನು ನೀಡಬಹುದು.

ಯಾವುದೇ ಚಲನೆ ಕಾಣಿಸದಿರುವುದು ಮತ್ತು ತಲೆ ಸುತ್ತು: ಆತಂಕಕ್ಕೆ ಆಸ್ಪದವಿದೆ

ಯಾವುದೇ ಚಲನೆ ಕಾಣಿಸದಿರುವುದು ಮತ್ತು ತಲೆ ಸುತ್ತು: ಆತಂಕಕ್ಕೆ ಆಸ್ಪದವಿದೆ

ಮಗುವಿಗೂ ನಮ್ಮಂತೆಯೇ ಪ್ರತಿ ಕ್ಷಣವೂ ಆಮ್ಲಜನಕದ ಅವಶ್ಯಕತೆ ಇರುತ್ತದೆ. ಯಾವಾಗ ಆಮ್ಲಜನಕದ ಕೊರತೆ ಎದುರಾಗುತ್ತದೆಯೋ ಆಗ ಮಗುವಿನ ಆರೋಗ್ಯಕ್ಕೆ ಕೆಲವಾರು ಕ್ಲಿಷ್ಟತೆಗಳು ಎದುರಾಗಬಹುದು. ಈ ಸ್ಥಿತಿಗೆ Fetal hypoxia ಎಂದು ಕರೆಯುತ್ತಾರೆ.

ಯಾವಾಗ ತನ್ನ ಒಡಲಿನಲ್ಲಿರುವ ಮಗುವಿನ ಚಲನೆ ಇಲ್ಲದಿರುವುದನ್ನು ಗರ್ಭಿಣಿ ಕಂಡುಕೊಳ್ಳುತ್ತಾಳೋ ಆಗಲೇ ತಲೆಸುತ್ತುವಿಕೆ, ಸುಸ್ತು ಮೊದಲಾದವುಗಳನ್ನೂ ಆಕೆ ಅನುಭವಿಸಬಹುದು. ತಕ್ಷಣವೇ ಈ ಸ್ಥಿತಿಯ ಬಗ್ಗೆ ಆಕೆ ಹತ್ತಿರವಿರುವ ಆಪ್ತರಿಗೆ ತಿಳಿಸಿ ವೈದ್ಯಕೀಯ ನೆರವನ್ನು ಪಡೆದುಕೊಳ್ಳಬೇಕು. ಮನೆಯಲ್ಲಿ ಈ ಸ್ಥಿತಿ ಎದುರಾದರೆ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಬೇಕು.

ವೈದ್ಯರು ಈ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತಾಯಿ ಮತ್ತು ಮಗುವಿಗೆ ದೊರಕುತ್ತಿರುವ ಆಮ್ಲಜನಕದ ಪ್ರಮಾಣವನ್ನು ಅಳೆದು ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆ. ಈ ಸ್ಥಿತಿ ಎಷ್ಟು ಬೇಗ ಪತ್ತೆಯಾಯಿತೋ ಅಷ್ಟೂ ಉತ್ತಮ.

ತಡವಾದಷ್ಟೂ ಮಗುವಿನ ಆರೋಗ್ಯ ಕ್ಷೀಣಿಸಬಹುದು ಹಾಗೂ ಅವಧಿ ಪೂರ್ವವೇ ಸಿ ಸೆಕ್ಷನ್ ಅಥವಾ ಸಿಸರೇನಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆಯಬೇಕಾಗಿ ಬರಬಹುದು. ಹಾಗಾಗಿ, ಗರ್ಭಾವಸ್ಥೆಯ ಎಲ್ಲಾ ಹಂತಗಳಲ್ಲಿ ಗರ್ಭಿಣಿ ಮತ್ತು ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ದೊರಕುತ್ತಾ ಇರುವುದು ಅವಶ್ಯವಾಗಿದೆ.

ಮಗುವಿಗೆ ಕಾಲಾಡಿಸಲು ಸ್ಥಳಾವಕಾಶಾದ ಕೊರತೆ ಆತಂಕಕ್ಕೆ ಆಸ್ಪದವಿಲ್ಲ

ಮಗುವಿಗೆ ಕಾಲಾಡಿಸಲು ಸ್ಥಳಾವಕಾಶಾದ ಕೊರತೆ ಆತಂಕಕ್ಕೆ ಆಸ್ಪದವಿಲ್ಲ

ಒದೆತ ನೀಡಲೂ ಕೊಂಚ ಸ್ಥಳಾವಕಾಶ ಬೇಕಾಗುತ್ತದೆ. ಇದುವರೆಗೆ ಒದೆಯುತ್ತಿದ್ದ ಮಗು ಈಗ ಏಕಾ ಏಕಿ ಕಡಿಮೆ ಮಾಡಿದೆ ಎಂದರೆ ಮಗು ಕೊಂಚ ಬೆಳೆದಿದ್ದು ಕಾಲು ಆಡಿಸಲು ಸ್ಥಳಾವಕಾಶ ಕಡಿಮೆಯಾಗಿರುವುದು ಇನ್ನೊಂದು ಕಾರಣವಾಗಿದೆ. ಸಾಮಾನ್ಯವಾಗಿ ಗರ್ಭಾವಸ್ಥೆಯ ಕಡೆಯ ದಿನಗಳಲ್ಲಿ ಹೀಗಾಗುತ್ತದೆ. ಬೆಳೆಯುತ್ತಿರುವ ಮಗುವಿಗೆ ಅನುಗುಣವಾಗಿ ಹೊಟ್ಟೆಯ ಗಾತ್ರ ಬೆಳೆದರೂ ಮಗುವಿಗೆ ಸಾಕಷ್ಟು ಸ್ಥಳಾವಕಾಶ ಇರುವುದಿಲ್ಲ.

ಏಕೆಂದರೆ ಉಬ್ಬಿರುವ ಹೊಟ್ಟೆಯ ಅಷ್ಟೂ ಭಾಗ ಕೇವಲ ಮಗುವಿನ ದೇಹ ಮಾತ್ರವಲ್ಲ ಆಮ್ನಿಯಾಟಿಕ್ ದ್ರವ ಅಥವಾ ಮಗುವನ್ನು ಸುತ್ತುವರೆದಿರುವ ದ್ರವವನ್ನು ಒಳಗೊಂಡಿರುತ್ತದೆ. ಪುಟ್ಟ ಸ್ಥಳದಲ್ಲಿಯೇ ಮಗು ಇರಬೇಕಾದ ಕಾರಣ ಮಗುವಿನ ದೇಹ ಅರ್ಧವೃತ್ತಾಕರದಲ್ಲಿ ಬಾಗಿರುತ್ತದೆ.

ಹಾಗಾಗಿ ಹೆರಿಗೆಯ ದಿನ ಹತ್ತಿರ ಬರುತ್ತಿದ್ದಂತೆಯೇ ಸ್ವಾಭಾವಿಕವಾಗಿ ಒದೆತಗಳೂ ಕಡಿಮೆಯಾಗುತ್ತವೆ. ಎಲ್ಲಿಯವರೆಗೆ ತುಂಬಾ ಅವಧಿಯವರೆಗೂ ಕೊಂಚವೂ ಒದೆತದ ಅನುಭವ ಆಗದೇ ಇದ್ದಾಗ ಮಾತ್ರ ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಬೇಕೇ ವಿನಃ ಚಿಂತಿಸುವ ಅಗತ್ಯವಿಲ್ಲ. ಇದರ ಹೊರತಾಗಿ ತಾಯಿ ತನ್ನ ಅನುಭವಕ್ಕೆ ಬರುವ ಹಾಗೂ ವಿವರಿಸಲಾಗದ ಬೇರಾವುದೇ ವಿಷಯವನ್ನು ವೈದ್ಯರಿಗೆ ತಿಳಿಸಿ ಅನುಮಾನವನ್ನು ಪರಿಹರಿಸಿಕೊಳ್ಳಬೇಕು.

ಮಗುವಿನ ಚಲನೆಯ ಅನುಭವವೇ ಇಲ್ಲ - ಚಡಪಡಿಕೆ : ಆತಂಕಕ್ಕೆ ಆಸ್ಪದವಿದೆ

ಮಗುವಿನ ಚಲನೆಯ ಅನುಭವವೇ ಇಲ್ಲ - ಚಡಪಡಿಕೆ : ಆತಂಕಕ್ಕೆ ಆಸ್ಪದವಿದೆ

ಮೂವತ್ತೇಳನೇ ವಾರದಲ್ಲಿ ಅಂದರೆ ನವಮಾಸಗಳು ಪೂರ್ಣವಾದ ಬಳಿಕ ಗರ್ಭಕೋಶದ ಮಾಸು ಅಥವಾ ಪ್ಲಾಸೆಂಟಾ ಬಿರಿದು ಹೆರಿಗೆಯ ಕ್ಷಣ ಆಗಮಿಸಿರುವುದನ್ನು ತಿಳಿಸುತ್ತದೆ. ಒಂದು ವೇಳೆ ಈ ಸೂಚನೆ ನವಮಾಸಕ್ಕೂ ಮುನ್ನವೇ ಕಾಣಿಸಿಕೊಂಡರೆ ಇದು ಹೆರಿಗೆ ಕ್ಲಿಷ್ಟವಾಗುವ ಸ್ಪಷ್ಟ ಸಂಕೇತವಾಗಿದೆ. ಅವಧಿಪೂರ್ವ ಆಗುವ ಹೆರಿಗೆಯ ಮಗುವಿನ ಆರೋಗ್ಯಕ್ಕೆ ಕೆಲವಾರು ಕಾಯಿಲೆಗಳ ಮತ್ತು ಅಪಾಯಗಳ ಸಾಧ್ಯತೆ ಇರುತ್ತದೆ.

ಗರ್ಭಕೋಶದಲ್ಲಿರುವ ದ್ರವ (ಆಮ್ನಿಯಾಟಿಕ್ ಲಿಕ್ವಿಡ್) ಅತಿಯಾಗಿರುವುದು ಅಥವಾ ಅಪಘಾತ ಅಥವಾ ಹೊಡೆತದ ಕಾರಣ ಎದುರಾದ ಸೋಂಕು ಅಥವಾ ಆಘಾತದಿಂದಲೂ ಎದುರಾಗಬಹುದು. ಈ ತೊಂದರೆಗಳ ಮುನ್ಸೂಚನೆಯನ್ನು ಮಗುವಿನ ಚಲನೆ ಕಡಿಮೆಯಾಗಿರುವ ಮೂಲಕ ಊಹಿಸಿಕೊಳ್ಳಬಹುದು. ನವಮಾಸ ತುಂಬುವ ಮುನ್ನ ನೋವು ಕಾಣಿಸಿಕೊಂಡರೆ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯನ್ನು ಮೊದಲೇ ಮಾಡಿಟ್ಟುಕೊಂಡಿರಬೇಕು.

ಹಾಗಾಗಿ, ಹೆರಿಗೆಗೂ ಮುನ್ನ ಮಗುವಿನ ಚಲನೆಯ ಯಾವುದೇ ಅನುಭವವೇ ಇರದಿದ್ದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆಯಬೇಕು. ಇದಕ್ಕೆ ಏನು ಕಾರಣ ಎಂದು ಇದುವರೆಗೆ ನಿಖರಾಗಿ ಹೇಳಲು ಸಾಧ್ಯವಾಗಿಲ್ಲ. ಮಗುವಿನ ಚಲನೆ ಇಲ್ಲದ ಸಮಯದಲ್ಲಿ ಗರ್ಭಕೋಶದ ಒಳಪದರಗಳು ಬಿರಿಯತೊಡಗಿದರೆ ಮಾತ್ರ ವೈದ್ಯರು ಇದನ್ನು ಗಂಭೀರ ಸ್ಥಿತಿ ಎಂದು ಪರಿಗಣಿಸುತ್ತಾರೆ.

ಮಗು ಪ್ರತಿಬಾರಿ ಇಪ್ಪತ್ತು ನಿಮಿಷದವರೆಗೆ ನಿದ್ರಿಸುತ್ತದೆ: ಆತಂಕಕ್ಕೆ ಆಸ್ಪದವಿಲ್ಲ

ಮಗು ಪ್ರತಿಬಾರಿ ಇಪ್ಪತ್ತು ನಿಮಿಷದವರೆಗೆ ನಿದ್ರಿಸುತ್ತದೆ: ಆತಂಕಕ್ಕೆ ಆಸ್ಪದವಿಲ್ಲ

ಯಾವಾಗ ಮಗುವಿನ ಒದೆತದ ಅನುಭವ ಆಗುವುದಿಲ್ಲವೋ ಆಗ ಮಗು ನಿದ್ರಿಸುತ್ತಿದೆ ಎಂದೂ ಪರಿಗಣಿಸಬಹುದು. ಗರ್ಭದಲ್ಲಿರುವ ಮಗುವಿನ ನಿದ್ರಾವಸ್ಥೆ ಇಪ್ಪತ್ತು ನಿಮಿಷಗಳದ್ದಾಗಿರುತ್ತದೆ. ಈ ಸಮಯದಲ್ಲಿ ಮಗು ಅತಿ ಕಡಿಮೆ ಚಟುವಟಿಕೆಯನ್ನು ಪ್ರದರ್ಶಿಸುತ್ತದೆ. ಇಪ್ಪತ್ತು ನಿಮಿಷ ಎಂಬುದು ಒಂದು ಸಾಮಾನ್ಯ ಪರಿಗಣನೆಯೇ ಹೊರತು ಪ್ರತಿ ಮಗುವಿನ ನಿದ್ರಾ ಸಮಯ ಕೊಂಚ ಹೆಚ್ಚೂ ಕಡಿಮೆಯಾಗಬಹುದು.

ಈ ಸಮಯದಲ್ಲಿ ಮಗು ಸಾಮಾನ್ಯವಾಗಿ ಯಾವುದೇ ಚಲನವಲವನ್ನು ತೋರಿಸುವುದಿಲ್ಲ. ಆದರೆ ನಿದ್ದೆಯಿಂದ ಎದ್ದ ಬಳಿಕ ಒದೆಯಲು ಪ್ರಾರಂಭಿಸುತ್ತದೆ. ಈ ಸಮಯವನ್ನು ಗುರುತು ಮಾಡಿಟ್ಟು ಮುಂದಿನ ಒದೆತದ ಅನುಭವವನ್ನು ಹಿಂದಿನ ಗುರುತಿನೊಂದಿಗೆ ತಾಳೆ ಹಚ್ಚಿ ನೋಡಿದಾಗ ಮುಂದಿನ ಒದೆತ ಯಾವಾಗ ಬರಬಹುದು ಎಂಬುದನ್ನು ಸ್ಥೂಲವಾಗಿ ಅಂದಾಜಿಸಬಹುದು. ಇತರ ಮಹಿಳೆಯರ ಅನುಭವವನ್ನೂ ಈಕೆ ಪರಿಗಣಿಸಬಹುದು. ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಪ್ರತಿ ಎರಡು ಘಂಟೆಗಳ ಅವಧಿಯಲ್ಲಿ ಎಷ್ಟು ಒದೆತಗಳು ಕಾಣಿಸಿಕೊಂಡವು ಎಂಬುದನ್ನು ಲೆಕ್ಕಾಚಾರ ಹಾಕಬೆಕು. ಒಂದು ವೇಳೆ ಇದು ಹನ್ನೊಂದಕ್ಕಿಂತ ಕಡಿಮೆ ಇದ್ದರೆ ಈ ವಿಷಯವನ್ನು ವೈದ್ಯರಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಗರ್ಭಿಣಿ ಅತಿಯಾದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ : ಆತಂಕಕ್ಕೆ ಆಸ್ಪದವಿಲ್ಲ

ಗರ್ಭಿಣಿ ಅತಿಯಾದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ : ಆತಂಕಕ್ಕೆ ಆಸ್ಪದವಿಲ್ಲ

ಯಾವಾಗ ಮಗುವಿನ ಚಲನೆ ಕಡಿಮೆಯಾಯ್ತೋ ಗರ್ಭಿಣಿಯ ಆತಂಕವೂ ಹೆಚ್ಚುತ್ತದೆ ಹಾಗೂ ಮಾನಸಿಕ ಒತ್ತಡವೂ ಹೆಚ್ಚುತ್ತದೆ. ಗರ್ಭಿಣಿಗೆ ಯಾವುದೇ ಬಗೆಯ ಮಾನಸಿಕ ಒತ್ತಡವನ್ನು ನೀಡಬಾರದು ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ. ಆದರೆ ಬಾಹ್ಯ ಕಾರಣಗಳಿಗಿಂತಲೂ ಮಗುವಿನ ಚಾಲನೆಯ ಅನುಭವ ದೊರಕದ ಗರ್ಭಿಣಿ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾಳೆ.

ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಕೆ ಮಾನಸಿಕ ಒತ್ತಡವನ್ನು ನಿರ್ವಹಿಸಲೇಬೇಕಾಗುತ್ತದೆ. ಮಾನಸಿಕ ಒತ್ತಡ ಈ ಹಂತದಲ್ಲಿ ಸಾಮಾನ್ಯವಾಗಿದೆ ಹಾಗೂ ಮಗುವಿನ ಆರೋಗ್ಯವೂ ಚೆನ್ನಾಗಿರುತ್ತದೆ. ಮಗುವಿನ ಬೆಳವಣಿಗೆಗೂ ತಾಯಿಯ ಮನಃಸ್ಥಿತಿಗೂ ನಿಕಟ ಸಂಬಂಧವಿದೆ. ತಾಯಿಯ ಮಾನಸಿಕ ಒತ್ತಡ ಹೆಚ್ಚಿದಷ್ಟೂ ಗರ್ಭದಲ್ಲಿರುವ ಮಗುವಿಗೆ ಅಪಾಯ ಹೆಚ್ಚುತ್ತದೆ. ತಾಯಿಯ ಮಾನಸಿಕ ಒತ್ತಡ, ಆವೇಶ ಅಥವಾ ಉದ್ರೇ ಕ ಹೆಚ್ಚಿದಷ್ಟೂ ಮಗುವಿನ ಚಲನೆಯೂ ಕಡಿಮೆಯಾಗುತ್ತದೆ. ಹಾಗಾಗಿ ಮಾನಸಿಕ ಒತ್ತಡದ ಸಮಯದಲ್ಲಿ ಮಗುವಿನ ಚಲನೆ ಕಾಣಬರದಿದ್ದರೆ ಆತಂಕಕ್ಕೆ ಕಾರಣವಿಲ್ಲ.

ಚಲನೆ ಇಲ್ಲದಿರುವುದು ಮತ್ತು ಪೋಷಕಾಂಶಗಳ ತೊಂದರೆ: ಆತಂಕಕ್ಕೆ ಆಸ್ಪದವಿದೆ

ಚಲನೆ ಇಲ್ಲದಿರುವುದು ಮತ್ತು ಪೋಷಕಾಂಶಗಳ ತೊಂದರೆ: ಆತಂಕಕ್ಕೆ ಆಸ್ಪದವಿದೆ

ಒಂದು ವೇಳೆ ಗರ್ಭಿಣಿ ಸತತವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದರೆ, ಗರ್ಭಾವಸ್ಥೆಯಲ್ಲಿ ಸಾಕಷ್ಟು ಪೌಷ್ಟಿಕ ಆಹಾರ ಪಡೆದುಕೊಳ್ಳದೇ ಇದ್ದರೆ ಮಗುವಿನ ಚಲನೆಯ ಅನುಭವವೂ ಕಡಿಮೆಯಾಗುತ್ತದೆ. ಈ ಬಗ್ಗೆ ವೈದ್ಯರಲ್ಲಿ ತಿಳಿಸುವುದು ಅವಶ್ಯವಾಗಿದೆ.

ಈಕೆಯ ಪ್ರಕರಣವನ್ನು ವೈದ್ಯರು "ಅತಿ ಸೂಕ್ಷ್ಮ" ಎಂದು ಪರಿಗಣಿಸಬಹುದು ಹಾಗೂ ಹೆರಿಗೆಯ ದಿನದವರೆಗೂ ಸೂಕ್ತ ವೈದ್ಯಕೀಯ ಕಾಳಜಿ ನೀಡುವಂತೆ ವ್ಯವಸ್ಥೆ ಮಾಡಬಹುದು. ಈ ಮೂಲಕ ಗರ್ಭಿಣಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವುದು ವೈದ್ಯರ ಗುರಿಯಾಗಿರುತ್ತದೆ. ಗರ್ಭಿಣಿಯ ದೇಹದ ಇತರ ಅನಾರೋಗ್ಯಗಳಿಂದಲೂ ಮಗುವಿನ ಚಲನೆಯಲ್ಲಿ ಕುಸಿತ ಕಂಡು ಬರಬಹುದು.

ಇದೇ ಕಾರಣದಿಂದ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಗರ್ಭಿಣಿಯ ಆರೋಗ್ಯ ಇತಿಹಾಸ, ಇತರ ಯಾವುದೋ ಕಾಯಿಲೆಗೆ ಪಡೆದುಕೊಳ್ಳುತ್ತಿರುವ ಚಿಕಿತ್ಸೆ, ಔಷಧಿಗಳು ಎಲ್ಲವನ್ನೂ ವಿವರಿಸುವುದು ಅಗತ್ಯವಾಗಿದೆ. ಈ ಮೂಲಕ ಗರ್ಭಿಣಿ ಮತ್ತು ಮಗು ಇಬ್ಬರಿಗೂ ಉತ್ತಮ ಆರೋಗ್ಯ ದೊರಕುವಂತಾಗಲು ಮತ್ತು ಸಹಜ ಹೆರಿಗೆಯಾಗಿಸಲು ವೈದ್ಯರು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ವೈದ್ಯರು ಎಲ್ಲವೂ ಸರಿಯಾಗಿದೆ ಎಂದರೆ : ಆತಂಕಕ್ಕೆ ಆಸ್ಪದವಿಲ್ಲ

ವೈದ್ಯರು ಎಲ್ಲವೂ ಸರಿಯಾಗಿದೆ ಎಂದರೆ : ಆತಂಕಕ್ಕೆ ಆಸ್ಪದವಿಲ್ಲ

ಒಂದು ವೇಳೆ ಗರ್ಭಿಣಿಗೆ ಕೆಲವಾರು ಅನುಮಾನಗಳಿದ್ದರೂ ವೈದ್ಯರು ಅಥವಾ ಅನುಭವಿ ದಾದಿಯರು ಸೂಕ್ತ ಪರೀಕ್ಷೆಗಳು ಮತ್ತು ದೈಹಿಕ ಲಕ್ಷಣಗಳನ್ನು ಪರಿಗಣಿಸುವ ಮೂಲಕ ಯಾವುದೇ ತೊಂದರೆ ಇಲ್ಲ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದರೆ ಗರ್ಭಿಣಿ ನಿರಾತಂಕವಾಗಿರಬಹುದು. ಮಗುವಿನ ಹೃದಯದ ಬಡಿತ ಮತ್ತು ಇತರ ಲಕ್ಷಣಗಳನ್ನು ಪರಿಶೀಲಿಸಲು ವೈದ್ಯರು ಸೂಕ್ತ ಉಪಕರಣಗಳನ್ನು ಬಳಸುತ್ತಾರೆ.

ಈ ಪರೀಕ್ಷೆಗಳ ಮೂಲಕ ಗರ್ಭಾವಸ್ಥೆಯ ಎಲ್ಲಾ ಹಂತಗಳಲ್ಲಿ ಮಗುವಿನ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಎಲ್ಲವೂ ಸಹಜವಾಗಿದ್ದರೆ ವೈದ್ಯರೇ ನಿಮಗೆ ಎಲ್ಲವೂ ಸರಿಯಾಗಿದೆ ಎಂದು ತಿಳಿಸುತ್ತಾರೆ. ಒಂದು ವೇಳೆ ಯಾವುದಾದರೂ ತೊಂದರೆ ಕಂಡು ಬಂದರೆ ಈ ಬಗ್ಗೆ ಗರ್ಭಿಣಿಗೆ ಮುಂಚಿತವಾಗಿಯೇ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ಅಷ್ಟೇ ಅಲ್ಲ, ಗರ್ಭಿಣಿಯ ಕೆಲವು ಚಟುವಟಿಕೆಗಳು ಅಥವಾ ಆಹಾರಕ್ರಮ ಒಂದು ವೇಳೆ ಆಕೆಯ ಮತ್ತು ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟಾಗುವಂತಿದ್ದರೂ ವೈದ್ಯರು ಈ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಕೆಲವು ವ್ಯಾಯಾಮಗಳು, ನಡಿಗೆ ಮೊದಲಾದವುಗಳನ್ನು ನಿಲ್ಲಿಸಲು ಅಥವಾ ಪ್ರಾರಂಭಿಸಲು ವೈದ್ಯರು ಸಲಹೆ ಮಾಡಬಹುದು.

ಇವುಗಳನ್ನು ಆಕೆ ಅನುಸರಿಸಬೇಕಾದುದು ಅವಶ್ಯವಾಗಿದೆ. ಈ ಸೂಚನೆಗಳನ್ನು ವೈದ್ಯರು ಆಕೆಯ ಆರೋಗ್ಯವನ್ನು ಪರಿಗಣಿಸಿಯೇ ನೀಡಿರುತ್ತಾರೆ ಎಂಬುದನ್ನು ಆಕೆ ನೆನಪಿನಲ್ಲಿರಿಸಿಕೊಳ್ಳಬೇಕು. ಒಂದು ವೇಳೆ ಯಾವುದೇ ಅನುಮಾನ ಉಂಟಾದರೂ ಬೇರೊಬ್ಬ ನಂಬಲರ್ಹ ವೈದ್ಯರನ್ನು ಕಂಡು ಪರ್ಯಾಯ ಸಲಹೆಯನ್ನು ಪಡೆಯಬೇಕು.

ಕೆಲವು ಮಕ್ಕಳು ಅತಿಯಾಗಿ ಮಲಗುತ್ತಾರೆ: ಆತಂಕಕ್ಕೆ ಆಸ್ಪದವಿಲ್ಲ

ಕೆಲವು ಮಕ್ಕಳು ಅತಿಯಾಗಿ ಮಲಗುತ್ತಾರೆ: ಆತಂಕಕ್ಕೆ ಆಸ್ಪದವಿಲ್ಲ

ಗರ್ಭದಲ್ಲಿರುವ ಮಗುವಿನ ಮಲಗುವ ಸಮಯದಲ್ಲಿ ಹೆಚ್ಚೂ ಕಡಿಮೆ ಇರಬಹುದು. ಅಂದರೆ ಕೆಲವು ಮಕ್ಕಳು ಕಡಿಮೆ ನಿದ್ರಿಸಿದರೆ ಕೆಲವು ಹೆಚ್ಚು ನಿದ್ರಿಸಬಹುದು. ಎಚ್ಚರಿದ್ದಾಗ ಒದೆತ ನೀಡುವ ಮಗು ನಿದ್ರಿಸಿರುವ ಅಷ್ಟೂ ಹೊತ್ತು ಒಂದೂ ಒದೆತ ನೀಡದಿರಬಹುದು. ತನ್ನ ಮಗು ಹೆಚ್ಚು ನಿದ್ರಿಸುತ್ತಿದೆ ಎಂಬ ಅರಿವಿಲ್ಲದ ಗರ್ಭಿಣಿ ವಿನಾಕಾರಣ ಆತಂಕಕ್ಕೆ ಒಳಗಾಗಬಹುದು.'

ಆದರೆ, ಮಗು ನಿದ್ದೆಯಿಂದ ಎದ್ದ ಬಳಿಕ ಒದೆತ ನೀಡುವುದು ಮಾತ್ರ ನಿಜ. ಹಾಗಾಗಿ ಕಡಿಮೆ ಅವಧಿಯಲ್ಲಿ ಒದೆತ ನೀಡುತ್ತಿದೆ ಎಂಬ ಕಾರಣದಿಂದ ಆತಂಕ ಪಡಬೇಕಾಗಿಲ್ಲ. ಕೆಲವೇ ದಿನಗಳಲ್ಲಿ ತನ್ನ ಮಗು ಹೆಚ್ಚು ಹೊತ್ತು ನಿದ್ರಿಸುವುದು ಆಕೆಯ ಗಮನಕ್ಕೆ ಬರುತ್ತದೆ. ವಾಸ್ತವದಲ್ಲಿ, ಈ ಅಭ್ಯಾಸ ಮಗು ಹುಟ್ಟಿದ ಬಳಿಕವೂ ಮುಂದುವರೆಯುತ್ತದೆ ಹಾಗೂ ದಿನದ ಹೆಚ್ಚು ಹೊತ್ತು ಮಕ್ಕಳು ನಿದ್ರಿಸುತ್ತಾರೆ. ಹೆಚ್ಚು ಹೊತ್ತು ನಿದ್ರಿಸಿದಷ್ಟೂ ಮಕ್ಕಳು ಅರೋಗ್ಯಕರವಾಗಿರುವ ಕಾರಣ ಗರ್ಭದಲ್ಲಿರುವ ಮಗು ಹೆಚ್ಚು ನಿದ್ರಿಸುತ್ತಿದ್ದರೆ ಇದು ತಾಯಿಯ ಪಾಲಿಗೆ ಸಂತೋಷಕರ ವಿಷಯ ಎಂದೇ ಪರಿಗಣಿಸಬಹುದು.

ಯಾವುದೇ ಚಲನೆಯ ಅನುಭವವಿಲ್ಲ ಮತ್ತು ನಿದ್ದೆಯ ಸಮದಲ್ಲಿಯೂ ಬದಲಾವಣೆ: ಆತಂಕಕ್ಕೆ ಆಸ್ಪದವಿದೆ

ಯಾವುದೇ ಚಲನೆಯ ಅನುಭವವಿಲ್ಲ ಮತ್ತು ನಿದ್ದೆಯ ಸಮದಲ್ಲಿಯೂ ಬದಲಾವಣೆ: ಆತಂಕಕ್ಕೆ ಆಸ್ಪದವಿದೆ

ಆರನೆಯ ತಿಂಗಳಿನಿಂದಲೇ ಒದೆತದ ಅನುಭವವನ್ನು ಪಡೆಯುವ ಗರ್ಭಿಣಿಗೆ ಕೆಲವೇ ದಿನಗಳಲ್ಲಿ ತನ್ನ ಮಗುವಿನ ನಿದ್ದೆಯ ಸಮಯದ ಅವಧಿಗಳು ತಿಳಿಯುತ್ತಾ ಹೋಗುತ್ತದೆ. ಒಂದು ವೇಳೆ, ವಿಶೇಷವಾಗಿ ಮೂರನೆಯ ತ್ರೈಮಾಸಿಕದಲ್ಲಿ ತನ್ನ ಮಗುವಿನ ನಿದ್ದೆಯ ಅವಧಿಗಳು ಬದಲಾಗಿದ್ದರೆ ಇದು ಯಾವುದೋ ತೊಂದರೆ ಇರುವ ಸಂಕೇತವಾಗಿರಬಹುದು.

ಒಂದು ವೇಳೆ ಆಕೆ ತಿನ್ನದೇ ಇದ್ದಾಗ ಮಗು ಒದೆಯದೇ ಇದ್ದರೆ, ಸುಸ್ತು ಆವರಿಸಿದ್ದಾಗ ಒದೆಯದೇ ಇದ್ದರೆ ಅಥವಾ ಬೇರಾವುದೋ ಕಾರಣಗಳಿಂದ ಒದೆತದ ಅನುಭವವಾಗದೇ ಇದ್ದರೆ ಈ ತೊಂದರೆ ಅನ್ವಯಿಸುವುದಿಲ್ಲ. ಏಕೆಂದರೆ ಈ ತೊಂದರೆಗಳ ಕಾರಣಗಳು ಸರಿಹೋದ ತಕ್ಷಣ ಒದೆತಗಳೂ ಸರಿಹೋಗುತ್ತವೆ.

ಬದಲಾದ ನಿದ್ದೆಯ ಅವಧಿಯ ಬಗ್ಗೆ ಗರ್ಭಿಣಿ ವೈದ್ಯರಲ್ಲಿ ಸಮಾಲೋಚಿಸಬೇಕು ಹಾಗೂ ಯಾವುದೇ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಬೇಕು. ಒಂದು ವೇಳೆ ಆಕೆ ಮಗುವಿನ ನಿದ್ದೆಯ ಅವಧಿಗಳನ್ನು ಗುರುತು ಹಾಕಿಟ್ಟುಕೊಂಡರೆ ಮತ್ತು ಬೇರೆ ಯಾವುದೇ ಲಕ್ಷಣವನ್ನು ಆಕೆ ಗಮನಿಸಿ ವೈದ್ಯರಿಗೆ ಒದಗಿಸಿದರೆ ಈ ಲಕ್ಷಣಗಳನ್ನು ಪರಿಗಣಿಸಿ ವೈದ್ಯರಿಗೆ ಮುಂದಿನ ಕ್ರಮವನ್ನು ಅನುಸರಿಸಲು ಸುಲಭವಾಗುತ್ತದೆ.

ಒಂದು ವೇಳೆ ಮಗು ಎಚ್ಚರಿರುವ ಸಮಯದಲ್ಲಿ ಸುಮಾರು ಎರಡು ಘಂಟೆಗಳವರೆಗೂ ಯಾವುದೇ ಒದೆತ ಕಾಣಿಸದೇ ಇದ್ದಾಗ ವೈದ್ಯರನ್ನು ಕಾಣುವುದು ಅವಶ್ಯವಾಗುತ್ತದೆ.

ಮಗುವಿನ ಒದೆತ ಗಮನವಿರಲಿ

ಮಗುವಿನ ಒದೆತ ಗಮನವಿರಲಿ

ಅಂತಿಮವಾಗಿ, ಪ್ರತಿ ಗರ್ಭಿಣಿಗೂ ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳು, ಮಾನಸಿಕ ಹೊಯ್ದಾಟ ಮೊದಲಾದವು ಮಗುವಿನ ಬಗ್ಗೆ ಒಂದು ಬಗೆಯ ಅಂತಃಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ. ಈ ಅಂತಃಪ್ರಜ್ಞೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ಆದರೆ ಇದು ನಿಸರ್ಗ ನೀಡಿರುವ ಅತಿ ದೊಡ್ಡ ಕೊಡುಗೆಯಾಗಿದೆ. ಗರ್ಭಿಣಿಗೆ ಮಗುವಿನ ಆರೋಗ್ಯದ ಬಗ್ಗೆ ಇರುವ ಕಾಳಜಿ ಈ ಅಂತಃಪ್ರಜ್ಞೆಯ ಮೂಲಕ ದೊರಕಿಯೇ ದೊರಕುತ್ತದೆ. ಇದನ್ನೇ ತಾಯಿಯ ಕರುಳು ಎನ್ನುತ್ತಾರೇನೋ! ತನ್ನ ಮಗು ಒದೆಯುವ ಸೂಚನೆಯನ್ನು ಆಕೆ ಅನುಭವಿಸಿ. ಅನುಭಾವಿಸಿ, ಮಗುವಿನ ಆರೋಗ್ಯವನ್ನು ಕಾಪಾಡಲು ಅಗೋಚರವಾದ ಅನುಭೂತಿಯನ್ನು ಪಡೆಯುವುದು ಮಾತ್ರ ಸತ್ಯ.

English summary

When To Worry If Baby Suddenly Stop Kicking

In this article explained if baby suddenly stop kicking when to worry, Read on.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X