For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ಪೈಕಾ: ಎಚ್ಚರ ಅತ್ಯಗತ್ಯ!

|

ಸಾಮಾನ್ಯವಾಗಿ, ಗರ್ಭಾವಸ್ಥೆಯ ಎಲ್ಲಾ ಹಂತಗಳಲ್ಲಿಯೂ ನೀವು ಬಹಳಷ್ಟು ಬದಲಾವಣೆಗಳನ್ನು ಮತ್ತು ಮುಖ್ಯವಾಗಿ ರಸದೂತಗಳ ಪ್ರಭಾವದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವು ರಸದೂತಗಳು ಹುಳಿ ಅಥವಾ ವಿಶಿಷ್ಟವಾದ ರುಚಿ ಇರುವ ಅಹಾರಗಳನ್ನು ಬಯಸುವಂತೆ ಮಾಡುತ್ತವೆ. ಹಲವು ಸಂಸ್ಕೃತಿಗಳಲ್ಲಿ ಇದನ್ನು 'ಗರ್ಭಿಣಿಯ ಬಯಕೆ' ಎಂಬ ವಿಧಿಯಾಗಿಯೂ ಆಚರಿಸಲಾಗುತ್ತದೆ.

Pica In Pregnancy

ಗರ್ಭಿಣಿಯ ಆಸೆಯನ್ನು ಪೂರೈಸಲು ಕುಟುಂಬ ಸದಸ್ಯರು ಈ ರುಚಿ ಇರುವ ಆಹಾರವನ್ನು ಓಡಾಡುತ್ತಾರೆ. ಮಾವಿನ ಋತುವಲ್ಲದ ಸಮಯದಲ್ಲಿ ಹುಳಿಮಾವಿನ ಕಾಯಿ ತಿನ್ನುವ ಆಸೆಯಾದರೆ ಎಲ್ಲಿಂದ ತರಬೇಕು? ಆಗ ಅಮಟೆಕಾಯಿ ನೀಡುವಂತೆ ಹಿರಿಯರು ಸಲಹೆ ಮಾಡುತ್ತಾರೆ.

ಈ ಬಯಕೆ ಹುಳಿ ಮಾವಿನ ಕಾಯಿ, ಉಪ್ಪಿನಕಾಯಿ, ಹುಣಸೆ ಹುಳಿ, ಅಮಟೆಕಾಯಿಗಳಿಗೆ ಮೀಸಲಾಗಿದ್ದರೆ ಚಿಂತಿಸುವ ಅಗತ್ಯವೇ ಇಲ್ಲ. ಆದರೆ ತಿನ್ನಬಾರದ ವಸ್ತುಗಳನ್ನು ತಿನ್ನುವ ಬಯಕೆಯಾದರೆ? ಈಗ ಸಮಸ್ಯೆ ಗಂಭೀರವಾಗಿದೆ. ಈ ಸ್ಥಿತಿಯನ್ನು ವೈದ್ಯರು ಪೈಕಾ ಸಮಸ್ಯೆ (pica disorder) ಎಂದು ಗುರುತಿಸುತ್ತಾರೆ.

ಪೈಕಾ ಎಂದರೇನು?

ಪೈಕಾ ಎಂದರೇನು?

ಸರಳವಾಗಿ ಹೇಳಬೇಕೆಂದರೆ ಆಹಾರವಲ್ಲದ ವಸ್ತುವನ್ನು ತಿನ್ನುವ ಮನಸ್ಸಾಗಿ ಕಣ್ಣಿಗೆ ಕಂಡ ವಸ್ತುಗಳನ್ನು ಬಾಯಿಗೆ ಹಾಕಿ ನುಂಗುವುದು. ಪುಟ್ಟ ಮಕ್ಕಳಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ ಮತ್ತು ಗರ್ಭಾವಸ್ಥೆಯ ಪ್ರಾರಂಭಿಕ ತಿಂಗಳುಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಗರ್ಭವತಿ ಬಾಯಿಗೆ ಹಾಕಿಕೊಳ್ಳುವ ಆಹಾರವಲ್ಲದ ವಸ್ತುಗಳಲ್ಲಿ ಸಾಮಾನ್ಯವಾಗಿ ಧೂಳು, ಜೇಡಿ ಮಣ್ಣು, ಕಲ್ಲಿದ್ದಲು, ಮರದ ಚಿಕ್ಕ ಚೆಕ್ಕೆಗಳು, ಉಕ್ಕಿನ ಚಿಕ್ಕ ಪುಟ್ಟ ವಸ್ತುಗಳು, ಬಟ್ಟೆಗಳ ಗುಂಡಿಗಳು, ವಿಭೂತಿ ಅಥವಾ ಬಳಪ ಮೊದಲಾದವು ಸೇರಿವೆ.

ಈ ಆಹಾರವಲ್ಲದ ವಸ್ತುಗಳ ಸೇವನೆಯ ಕಡುಬಯಕೆಗಳ ವಿರುದ್ಧ ಹೋರಾಡುವುದು ಕಷ್ಟ ಆದರೆ ಇವು ನಿಮ್ಮ ದೇಹದಲ್ಲಿನ ಜೀವಸತ್ವಗಳು ಅಥವಾ ಖನಿಜಗಳ ಕೊರತೆಯ ಸೂಚಕಗಳೂ ಆಗಿವೆ. 6 ತಿಂಗಳಿನಿಂದ 11 ವರ್ಷದೊಳಗಿನ ಚಿಕ್ಕ ಮಕ್ಕಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಕಡುಬಯಕೆಗಳು 30% ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ; ಗರ್ಭಿಣಿಯರಿಗೆ ಅಂತಹ ಕಡುಬಯಕೆಗಳು ಇರುವುದು ಸಾಮಾನ್ಯವೆಂದು ಪರಿಗಣಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ಪೈಕಾ ಎದುರಾಗಲು ಕಾರಣಗಳು

ಗರ್ಭಾವಸ್ಥೆಯಲ್ಲಿ ಪೈಕಾ ಎದುರಾಗಲು ಕಾರಣಗಳು

ಗರ್ಭಿಣಿಯರಲ್ಲಿ ಪೈಕಾಕ್ಕೆ ನಿಖರವಾದ ಕಾರಣಗಳು ತಿಳಿದಿಲ್ಲವಾದರೂ, ಇದು ನಿಮ್ಮ ದೇಹ ಸ್ವಾಭಾವಿಕವಾಗಿ ನಿಮಗೇನು ಬೇಕು ಎಂದು ಪರೋಕ್ಷವಾಗಿ ಹೇಳುವ ವಿಧಾನವೂ ಆಗಿರಬಹುದು ಎಂದು ವೈದ್ಯರು ಭಾವಿಸುತ್ತಾರೆ, ಗರ್ಭಾವಸ್ಥೆಯಲ್ಲಿ ಇತರ ಸಮಯಕ್ಕಿಂತಲೂ ಬೇರೆಯ ಮತ್ತು ಹೆಚ್ಚಿನ ಬಗೆಯ ಜೀವಸತ್ವಗಳು, ಖನಿಜಗಳು ಅಥವಾ ಇತರ ಪೋಷಕಾಂಶಗಳು ಬೇಕಾಗುತ್ತವೆ. ಗರ್ಭಿಣಿ ಮಹಿಳೆಯರಲ್ಲಿ ಅಸ್ವಾಭಾವಿಕ ಕಡುಬಯಕೆಗಳು ಹೊರನೋಟಕ್ಕೆ ಕಾಣದೇ ಇರುವ ದೈಹಿಕ ಸ್ಥಿತಿಯ ಸೂಚಕವಾಗಿರಬಹುದು ಅಥವಾ ರಸದೂತಗಳಿಂದಾಗಿ ಪ್ರಚೋದಿಸಲ್ಪಡುವ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯೂ ಆಗಿರಬಹುದು ಎಂದು ವೈದ್ಯರು ಭಾವಿಸುತ್ತಾರೆ.

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ತಿನ್ನಲು ಬಯಸುವ - ಪೈಕಾಕ್ಕೆ ಕಾರಣವಾಗಬಹುದಾದ ವಸ್ತುಗಳು

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ತಿನ್ನಲು ಬಯಸುವ - ಪೈಕಾಕ್ಕೆ ಕಾರಣವಾಗಬಹುದಾದ ವಸ್ತುಗಳು

ಪೈಕಾ ಹಲವಾರು ಕಡುಬಯಕೆಗಳಿಗೆ ಕಾರಣವಾಗಬಹುದು, ಕೆಲವು ಸಾಮಾನ್ಯ ವಸ್ತುಗಳೆಂದರೆ

  • ವಿಭೂತಿ
  • ಬಳಪ
  • ಧೂಳು
  • ಸೋಪು
  • ಮರಳು
  • ಜೇಡಿಮಣ್ಣು
  • ಕಾಗದ
  • ಕೂದಲು
  • ಟೂತ್‌ ಪೇಸ್ಟ
  • ಪ್ಲಾಸ್ಟಿಕ್
  • ಮರದ ಚಿಕ್ಕ ಚೆಕ್ಕೆಗಳು
  • ಉಗುರುಗಳು
  • ಪಿಂಗಾಣಿ
  • ಕಲ್ಲಿದ್ದಲು
  • ಪ್ಲ್ಯಾಸ್ಟರ್ ಆಫ್ ಪ್ಯಾರಿಸ್
  • ಮಕ್ಕಳ ಪ್ಲ್ಯಾಸ್ಟರ್
  • ಇತ್ಯಾದಿಗಳು......................

    ಒಂದು ವೇಳೆ ಯಾವುದೋ ನಿರ್ದಿಷ್ಟ ಆಹಾರವಲ್ಲದ ವಸ್ತುವನ್ನು ತಿನ್ನುವ ಕಡುಬಯಕೆಯಾಗುತ್ತಿದ್ದರೆ ಮತ್ತು ಇದನ್ನು ನಿಲ್ಲಿಸಲು ಸಾಧ್ಯವಿಲ್ಲದಿದ್ದರೆ ತಕ್ಷಣ ನಿಮ್ಮ ಪ್ರಾಥಮಿಕ ಆರೋಗ್ಯ ತಜ್ಞರ ಸಲಹೆ ಪಡೆಯಿರಿ.

    ಇದು ನಿಮ್ಮ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

    ಇದು ನಿಮ್ಮ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

    ನಿಮ್ಮ ಕಡುಬಯಕೆಗಳ ಕಾರಣದಿಂದ ನೀವು ಸೇವಿಸುವ ಆಹಾರವಲ್ಲದ ವಸ್ತುವನ್ನು ಅನುಸರಿಸಿ ಇದು ನಿಮ್ಮ ಮಗುವಿನ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ನಿಮ್ಮ ದೇಹದ ಪೌಷ್ಠಿಕಾಂಶ-ಹೀರಿಕೊಳ್ಳುವಿಕೆಯ ಸಮಸ್ಯೆಗಳಿಂದಾಗಿ ಇದು ಅಪೌಷ್ಟಿಕತೆಗೆ ಕಾರಣವಾಗಬಹುದು ಎಂದು ಖಾದ್ಯವಲ್ಲದ ಯಾವುದನ್ನಾದರೂ ತಿನ್ನುವುದು ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ವಿಷಕಾರಿ ಗುಣಲಕ್ಷಣಗಳನ್ನು ಹೊಂದಿರುವ ಪ್ಲಾಸ್ಟಿಕ್ ಅಥವಾ ಬಣ್ಣದಂತಹ ವಸ್ತುಗಳನ್ನು ಸೇವಿಸುವ ಪ್ರಚೋದನೆಗಳೂ ಇರಬಹುದು. ಕಾರಣವೇನೇ ಇರಲಿ, ಈ ಕ್ರಿಯೆಯಿಂದ ನಿಮ್ಮ ಮಗು ಮತ್ತು ನಿಮಗೆ ಇಬ್ಬರಿಗೂ ಅತ್ಯಂತ ಹಾನಿ ಮತ್ತು ಅಪಾಯ ಎದುರಾಗಬಹುದು.

     ಪೈಕಾದಲ್ಲಿನ ಕ್ಲಿಷ್ಟತೆಗಳು

    ಪೈಕಾದಲ್ಲಿನ ಕ್ಲಿಷ್ಟತೆಗಳು

    ಪೈಕಾ ಆಹಾರ ಹೀರಿಕೊಳ್ಳುವ ಅಸಾಮರ್ಥ್ಯತೆಗೆ ಕಾರಣವಾಗಬಹುದು ಅದು ಅಂತಿಮವಾಗಿ ಅಪೌಷ್ಟಿಕತೆಗೆ ಕಾರಣವಾಗುತ್ತದೆ; ಜೀರ್ಣಿಸಿಕೊಳ್ಳಲು ಕಷ್ಟವಾಗುವಂತಹ ಆಹಾರವಲ್ಲದ ವಸ್ತುಗಳನ್ನು ಸೇವಿಸುವುದರಿಂದ ಹಲವು ಸೋಂಕುಗಳಿಗೂ ಕಾರಣವಾಗಬಹುದು, ಗಾಜು ಅಥವಾ ಮರದ ಚಿಪ್ಗಳನ್ನು ಸೇವಿಸುವ ಸಂದರ್ಭದಲ್ಲಿ ಅದು ನಿಮ್ಮ ಜೀರ್ಣಾಂಗವ್ಯೂಹದ ಉದ್ದಕ್ಕೂ ಅಂಗಗಳ ಒಳಭಾಗಗಳ ಗೋಡೆಗಳಿಗೆ ಗಾಯ ಮಾಡುತ್ತಾ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು. ನೀವು ಹೊಂದಿರುವ ಕಡುಬಯಕೆಗಳಿಗೆ ತೊಡಕುಗಳು ನಿರ್ದಿಷ್ಟವಾಗಿವೆ. ನಿಮ್ಮಲ್ಲಿರುವ ಕಡುಬಯಕೆಗಳು ಮತ್ತು ಅವುಗಳನ್ನು ಸೇವಿಸುವುದರಿಂದ ಯಾವೆಲ್ಲಾ ಅಪಾಯಗಳಿವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

    ಪೈಕಾ ಕಡುಬಯಕೆಗಳನ್ನು ನಿರ್ವಹಿಸುವುದು ಹೇಗೆ?

    ಪೈಕಾ ಕಡುಬಯಕೆಗಳನ್ನು ನಿರ್ವಹಿಸುವುದು ಹೇಗೆ?

    ಭಯಪಡದಿರುವುದು ಬಹಳ ಮುಖ್ಯ, ಏಕೆಂದರೆ ಪೈಕಾವನ್ನು ಒಂದು ಸಾಮಾನ್ಯ ಕಡುಬಯಕೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ಖಂಡಿತವಾಗಿಯೂ ನಿರ್ವಹಿಸಬಹುದು ಮತ್ತು ಸಾಮಾನ್ಯವಾಗಿ ಕೊಂಚ ಸಮಯದ ಬಳಿಕ ತಾನಾಗಿಯೇ ಹೋಗುತ್ತದೆ. ಅದರೊಂದಿಗೆ ವ್ಯವಹರಿಸುವಾಗ ಗಮನಿಸಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:

    • ನಿಮ್ಮ ವೈದ್ಯರೊಂದಿಗೆ ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಸಂಭಾಷಣೆ ನಡೆಸಿ. ನಿಮಗೆ ಎಷ್ಟು ಅಸ್ವಾಭಾವಿಕ ಅಥವಾ ಮುಜುಗರ ಎದುರಾಗುವಂತೆ ತೋರುತ್ತದೆಯಾದರೂ ಸರಿ ನಿಮ್ಮ ಕಡುಬಯಕೆಗಳ ಬಗ್ಗೆ ಎಲ್ಲವನ್ನೂ ಅವರಿಗೆ ತಿಳಿಸಿ.
    • ನಿಮ್ಮ ಆರೈಕೆಯನ್ನು ವಹಿಸುತ್ತಿರುವ ವ್ಯಕ್ತಿಗೂ ಈ ಬಗ್ಗೆ ತಿಳಿಸಿ, ಮತ್ತು ನಿಮ್ಮ ಪ್ರಚೋದನೆಗೆ ಒಳಗಾಗಿ ನೀವು ಸೇವಿಸಬಹುದಾದ ವಸ್ತುಗಳನ್ನು ತಿನ್ನುವುದರಿಂದ ಎದುರಾಗುವ ಅಪಾಯಗಳ ಬಗ್ಗೆ ಅವರಿಗೆ ತಿಳಿದಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಪ್ರೀತಿಪಾತ್ರರು ನಿಮಗೆ ಸಹಾಯ ಮಾಡುವುದರಿಂದ ಪ್ರಚೋದನೆ ಪಡೆಯದೇ ಇರಲು ಸಾಕಷ್ಟು ನೆರವು ಸಿಗುತ್ತದೆ ಹಾಗೂ ಇದನ್ನು ತಿನ್ನದಿರಲು ಮನಸ್ಸನ್ನು ನಿಗ್ರಹಿಸುವುದು ಸುಲಭವಾಗುತ್ತದೆ.
    • ನಿಮ್ಮ ಪ್ರಸವಪೂರ್ವ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆಯೇ ಎಂದು ನಿಮ್ಮ ವೈದ್ಯರನ್ನು ಕೇಳಿ, ಮತ್ತು ಅಗತ್ಯವಾದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.
    • ನಿಮ್ಮ ದೇಹದ ಪೌಷ್ಠಿಕಾಂಶಗಳ ಮಟ್ಟಗಳನ್ನು ಪರೀಕ್ಷಿಸಿಕೊಳ್ಳಿ ಮತ್ತು ನಿಮ್ಮ ವಿಟಮಿನ್ ಮತ್ತು ಖನಿಜಗಳ ಅಗತ್ಯತೆ ಮತ್ತು ಪ್ರಸ್ತುತ ಮಟ್ಟಗಳ ಬಗ್ಗೆ ಕಾಳಜಿ ವಹಿಸಿ.
    • ನಿಮ್ಮ ದೇಹದ ಕಬ್ಬಿಣ ಮತ್ತು ಸತುವಿನ ಅಗತ್ಯತೆಯನ್ನು ಮೇಲ್ವಿಚಾರಣೆ ಮಾಡಿ ಮತ್ತು ನಿಮ್ಮ ದೇಹದ ಮೆಗ್ನೀಸಿಯಮ್ ಪ್ರಮಾಣವನ್ನು ಅವಲೋಕಿಸಿ. ಯಾವುದೇ ಅಂಶದ ಕೊರತೆ ಇದ್ದರೆ ಪೂರಕ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ತೆಗೆದುಕೊಳ್ಳಿ.
    • ನಿಮ್ಮ ಗಮನವನ್ನು ಈ ಪ್ರಚೋದನೆಗಳಿಂದ ಬೇರೆಡೆಗೆ ಸೆಳೆಯಲು, ಟಿವಿ ವೀಕ್ಷಿಸಿ ಅಥವಾ ಕ್ರಿಯಾತ್ಮಕವಾದ ಏನನ್ನಾದರೂ ಮಾಡಿ.
    • ಚೂಯಿಂಗ್ ಗಮ್ ಅಥವಾ ಸಕ್ಕರೆ ರಹಿತ ಕ್ಯಾಂಡಿಯಂತಹ ಬದಲಿಗಳನ್ನು ಅನ್ವಯಿಸಲು ಪ್ರಯತ್ನಿಸಿ.
    • ಆದಷ್ಟೂ ಏಕಾಂಗಿಯಾಗಿ ಇರದಿರಿ, ನಿಮ್ಮೊಂದಿಗೆ ಮನೆಯ ಸದಸ್ಯರು ಯಾರಾದರೊಬ್ಬರು ಸದಾ ಇರುವಂತೆ ನೋಡಿಕೊಳ್ಳಿ.
    • ಪೈಕಾ ಗರ್ಭಾವಸ್ಥೆಯಲ್ಲಿ ಎದುರಾಗುವ ಬಹಳ ಸಾಮಾನ್ಯವಾದ ಸ್ಥಿತಿಯಾಗಿದೆ.

      ಪೈಕಾ ಗರ್ಭಾವಸ್ಥೆಯಲ್ಲಿ ಎದುರಾಗುವ ಬಹಳ ಸಾಮಾನ್ಯವಾದ ಸ್ಥಿತಿಯಾಗಿದೆ.

      ಆದರೆ ಈ ಪ್ರಚೋದನೆ ಮಿತಿಗಿಂತ ಹೆಚ್ಚಾದರೆ ಮಾತ್ರ ಅದು ಭೀಕರ ಪರಿಣಾಮಗಳನ್ನು ಉಂಟುಮಾಡುತ್ತದೆ; ನಿಮ್ಮ ವೈದ್ಯರೊಂದಿಗೆ ಮಾತನಾಡಲು ಮತ್ತು ಪ್ರಚೋದನೆಗಳು ದೂರವಾಗುವವರೆಗೆ ಅದನ್ನು ನಿರ್ವಹಿಸಲು ಪ್ರಾರಂಭಿಸುವಂತೆ ಹೆಚ್ಚು ಶಿಫಾರಸು ಮಾಡಲಾಗಿದೆ.

      ಮಾನಸಿಕ ಸ್ಥಿತಿಯ ಕಾರಣದಿಂದಾಗಿ ಈ ಸ್ಥಿತಿ ಇಲ್ಲ ಎಂದು ಖಚಿತಪಡಿಸಿಕೊಳ್ಳುವುದಕ್ಕೆ ಮಾನಸಿಕ ಸಲಹೆಗಾರರ ಅಗತ್ಯವೂ ಬೀಳಬಹುದು. ನಿಮ್ಮ ಸ್ಥಿತಿಯ ಬಗ್ಗೆ ನಿಮ್ಮ ಪ್ರೀತಿ ಪಾತ್ರರು ಅರಿತಿರುವುದು ಮತ್ತು ಆದಷ್ಟೂ ಈ ಬಯಕೆಯಿಂದ ನಿಮ್ಮನ್ನು ವಿಮುಖರಾಗಿಸಲು ನಿಮ್ಮ ಮನಸ್ಸನ್ನು ಬೇರೆಡೆಗೆ ಸೆಳೆಯುವುದಕ್ಕೆ ಎಲ್ಲರೂ ಸಹಕಾರ ನೀಡುವುದು ಅಗತ್ಯವಾಗಿದೆ.

      ಮನೆಯ ಸದಸ್ಯರ ಈ ಬಗೆಯ ಸಹಕಾರದೊಂದಿಗೆ ಗಂಭೀರ ಮಟ್ಟದ ಪೈಕಾಗಳೂ ಹೆಚ್ಚಿನ ಚಿಕಿತ್ಸೆಯ ನೆರವಿಲ್ಲದೇ ಗುಣವಾಗಿರುವುದನ್ನು ಗಮನಿಸಲಾಗಿದೆ. ನೆನಪಿಡಿ, ಭಯಪಡದಿರುವುದು ಮತ್ತು ನಿಮ್ಮ ವೈದ್ಯರ ಸಲಹೆಯನ್ನು ಸರಿಯಾಗಿ ಅನುಸರಿಸುವುದು ಬಹಳ ಮುಖ್ಯವಾಗಿದೆ.

English summary

Pica In Pregnancy Causes, Complications & Remedies

Here we are discussing about Pica In Pregnancy Causes, Complications & Remedies. Commonly, pregnancy has a lot of challenges that you need to overcome. One of the most common ones is the fight against cravings. As your body changes, so do your hormones, and this can lead to extreme cravings which are not always healthy. Read more.
X
Desktop Bottom Promotion