For Quick Alerts
ALLOW NOTIFICATIONS  
For Daily Alerts

ವಿಶ್ವ ಸ್ತನ್ಯಪಾನ ಸಪ್ತಾಹ 2021: ಮನೆಯಲ್ಲೇ ಎದೆಹಾಲನ್ನು ಸಂಗ್ರಹಿಸುವುದು ಹೇಗೆ?

|

ತಾಯಿಯ ಎದೆಹಾಲು ಸರ್ವಶ್ರೇಷ್ಠವಾದುದು, ಮಗು ಹುಟ್ಟಿದ ಒಂದು ಗಂಟೆಯ ಒಳಗೆ ತಾಯಿ ಮಗುವಿಗೆ ಎದೆಹಾಲು ಉಣಿಸುವುದರಿಂದ ಶಿಶುಗಳ ಮರಣವನ್ನು ತಪ್ಪಿಸಬಹುದು, ಅಷ್ಟು ಶಕ್ತಿ, ಸಾಮರ್ಥ್ಯ ಎದೆಹಾಲಿಗಿದೆ. ಕನಿಷ್ಠ ಆರು ತಿಂಗಳು ಮಗುವಿಗೆ ತಾಯಿ ಎದೆಹಾಲು ನೀಡಲೇಬೇಕು, ಇದು ಮಗು ಹಾಗೂ ತಾಯಿ ಇಬ್ಬರ ಆರೋಗ್ಯಕ್ಕೂ ಉತ್ತಮ.

ಆದರೆ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಅಲ್ಲದೆ ಮಗು ಎದೆಹಾಲು ಚೀಪಿ ಕುಡಿಯುವುದರಿಂದ ಅದು ತನ್ನ ಬಾಯಿ, ವಸಡು, ತುಟಿ, ಮಾಂಸಖಂಡಗಳ ಸಹಾಯದಿಂದ ಹಾಲನ್ನು ಹೀರುತ್ತದೆ. ಈ ಪ್ರಕ್ರಿಯೆಯಿಂದ ಮಗುವಿನ ಹಲ್ಲುಗಳ ಆರೋಗ್ಯ ಸಹ ಹೆಚ್ಚುತ್ತದೆ. ಇನ್ನು ಹಲವಾರು ಆರೋಗ್ಯ ಲಾಭಗಳಿಗಾಗಿ ಮಗುವಿಗೆ ಎರಡು ವರ್ಷದ ಹಾಲುಣಿಸಲು ಹಿರಿಯರು ಹಾಗೂ ತಜ್ಞ ವೈದ್ಯರು ಸಲಹೆ ನೀಡುತ್ತಾರೆ. ಹಾಲುಣಿಸುವ ಬಯಕೆ ಇದ್ದರೂ ಉದ್ಯೋಗಸ್ಥ ಮಹಿಳೆಯರು ರಜೆ ಕಳೆದ ನಂತರ ಕೆಲಸಗಳಿಗೆ ಮರಳಲೇಬೇಕಾದ ಒತ್ತಡದಿಂದಾಗಿ ಮಕ್ಕಳಿಗೆ ತಾಜಾ ಎದೆಹಾಲುಣಿಸುವುದು ಅಸಾಧ್ಯದ ಮಾತಾಗಿರುತ್ತದೆ. ಬೆಳಗ್ಗೆ ಹಾಗೂ ಸಂಜೆಗೆ ಮಾತ್ರ ಮಗುವಿಗೆ ಬೆಚ್ಚನೆಯ ಎದೆಹಾಲನ್ನು ನೀಡಲು ಸಾಧ್ಯವಾಗುತ್ತದೆ.

ಈ ಸಮಸ್ಯೆಯಿಂದ ಬಳಲುವ ತಾಯಂದಿರಿಗೆ ಎದೆಹಾಲು ಪಂಪ್‌ ಮಾಡಿ ಸಂಗ್ರಹಿಸಿ ಮಗುವಿಗೆ ನೀಡಲು ಸಲಹೆ ನೀಡುತ್ತಾರೆ. ಆದರೆ ಪಂಪ್ ಮಾಡಿದ ಹಾಲನ್ನು ಅಷ್ಟೇ ಶುದ್ಧವಾಗಿ ಮನೆಯಲ್ಲೇ ಹೇಗೆ ಶೇಖರಿಸುವುದು, ಇದು ಮಗುವಿಗೆ ಎಷ್ಟು ಸುರಕ್ಷಿತ ಎಂಬೆಲ್ಲಾ ಗೊಂದಲ ತಾಯಂದಿರಿಗೆ ಕಾಡುವುದು ಸಹಜ.

ವಿಶ್ವ ಸ್ತನ್ಯಪಾನ ಸಪ್ತಾಹದ ಹಿನ್ನೆಲೆ ನಿಮ್ಮ ಈ ಎಲ್ಲಾ ಗೊಂದಲಗಳಿಗೂ ಉತ್ತರ ನೀಡಲಿದೆ ಈ ಲೇಖನ.

ಎದೆಹಾಲನ್ನು ಮನೆಯಲ್ಲೇ ಶೇಖರಿಸುವುದು ಹೇಗೆ? ಯಾವ ರೀತಿಯ ಪಾತ್ರೆಗಳಲ್ಲಿ ಶೇಖರಿಸಬಹುದು?

ಎದೆಹಾಲನ್ನು ಮನೆಯಲ್ಲೇ ಶೇಖರಿಸುವುದು ಹೇಗೆ? ಯಾವ ರೀತಿಯ ಪಾತ್ರೆಗಳಲ್ಲಿ ಶೇಖರಿಸಬಹುದು?

 • ತಾಯಿ ಮಗುವಿಗೆ ಎದೆಹಾಲನ್ನು ಸಂಗ್ರಹಿಸುವಾಗ ಮೊದಲು ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ಹಾಲನ್ನು ಸಂಗ್ರಹಿಸುವ ಸಾಧನವನ್ನು ಸಂಪೂರ್ಣವಾಗಿ ಕ್ರಿಮಿನಾಶಕದಿಂದ ಶುದ್ಧವಾಗಿಸಿ. ಇಲ್ಲವಾದಲ್ಲಿ ಶೇಖರಿಸುವ ವೇಳೆಯೇ ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇರುತ್ತದೆ.
 • ನೀವು ಕೈಗಳಿಂದ ಹಾಲನ್ನು ತೆಗೆಯುವುದಾದರೆ ಎದೆಯ ಸುತ್ತ ನಯವಾಗಿ ಹಾಲು ಹೊರಬರುವಂತೆ ಅರ್ಧ ವೃತ್ತಾಕಾರದಲ್ಲಿ ಮಸಾಜ್ ಮಾಡಿ, ನೆನಪಿಡಿ ನಿಪ್ಪಲ್‌ ಮೇಲೆ ಹೆಚ್ಚು ಒತ್ತಡ ಹಾಕಬೇಡಿ.
 • ಆದಷ್ಟು ಎಲೆಕ್ಟ್ರಿಕ್‌ ಎದೆಹಾಲು ಸಂಗ್ರಹದಿಂದ ಹಾಲನ್ನು ಹೆಚ್ಚು ಸಂಗ್ರಹಿಸಬೇಡಿ, ಇದು ದೀರ್ಘಕಾಲದಲ್ಲಿ ನಿಮ್ಮ ಸ್ತನದ ಮೇಲೆ ಪರಿಣಾಮ ಬೀರಬಹುದು.
 • ಮಗುವಿಗೆ ಸ್ತನ್ಯಪಾನ ಮಾಡಿಸಿದ ನಂತರದ ಹಾಲು ಸಂಗ್ರಹಿಸಲು ಉತ್ತಮವಾಗಿರುತ್ತದೆ. ಆದ್ದರಿಂದ ಮಗು ಹಾಲು ಕುಡಿದ ನಂತರವೇ ಹಾಲನ್ನು ಪಂಪ್ ಮಾಡಿದ್ದರೆ ಮಗು ನಿಮ್ಮ ಜತೆ ಇಲ್ಲದಿರುವಾಗ ಆ ಹಾಲನ್ನು ನಿಮ್ಮ ಮಗುವಿಗೆ ನೀಡಬಹುದು.
 • ಎದೆ ಹಾಲನ್ನು ಸಂಗ್ರಹಿಸಲು ಶುದ್ಧವಾದ ಎದೆ ಹಾಲು ಶೇಖರಣಾ ಬಾಟಲಿಗಳನ್ನೇ ಬಳಸಿ.
 • ಲೀಕ್ ಪ್ರೂಫ್ ಮುಚ್ಚಳವನ್ನು ಹೊಂದಿರುವ ಗ್ಲಾಸ್, ಹಾರ್ಡ್, ಬಿಪಿಎ ಮುಕ್ತ ಪ್ಲಾಸ್ಟಿಕ್ ಎದೆ ಹಾಲು ಫ್ರೀಜರ್ ಚೀಲಗಳು ಸೂಕ್ತ.
 • ನೀವು ಫ್ರೀಜರ್‌ನಲ್ಲಿ ಹಾಲನ್ನು ಸಂಗ್ರಹಿಸುವುದಾದರೆ ತೆಳುವಾದ ಅಥವಾ ಬಿಸಾಡಬಹುದಾದ ಫೀಡಿಂಗ್ ಬಾಟಲ್‌ಗಳು ಅಥವಾ ಪ್ಲಾಸ್ಟಿಕ್ ಕವರ್‌ಗಳಲ್ಲಿ ಯಾವುದೇ ಕಾರಣಕ್ಕೂ ಸಂಗ್ರಹಿಸಬೇಡಿ.
 • ಎದೆಹಾಲನ್ನು ಪದೇ ಪದೇ ಸಂಗ್ರಹಿಸುವುದಾದರೆ ಕನಿಷ್ಠ ಮೂರು ಗಂಟೆಗಳ ಅಂತರವಿರಲಿ. ಅಂದಾಜು 10 ಗಂಟೆಗಳಲ್ಲಿ ಮೂರು ಬಾರಿ ಮಾತ್ರ ಎದೆಹಾಲನ್ನು ಸಂಗ್ರಹಿಸುವ ಬಗ್ಗೆ ಜಾಗ್ರತೆವಹಿಸಿ.
 • ಹಲವು ಬಾಟಲಿಗಳನ್ನು ಸಂಗ್ರಹಿಸಲು ಬಳಸುತ್ತೀರಾದರೆ ಬಾಟಲಿಗಳ ಮೇಲೆ ದಿನ, ಸಮಯವನ್ನು ನಮೂದಿಸಲು ಮರೆಯಬೇಡಿ.
 • ಎಷ್ಟು ದಿನ ಹಾಲು ಶೇಖರಿಸಬಹುದು?

  ಎಷ್ಟು ದಿನ ಹಾಲು ಶೇಖರಿಸಬಹುದು?

  • ನಿಮ್ಮ ಎದೆಹಾಲನ್ನು ತಾಜಾ ಆಗಿಡಲು ಕೋಣೆಯ ಉಷ್ಣಾಂಶದಲ್ಲಿ 25 ಡಿಗ್ರಿ ಸಿ ಗಿಂತ ಹೆಚ್ಚಿಲ್ಲದಂತೆ ಇರಲಿ, ಈ ಹಾಲನ್ನು ಗರಿಷ್ಠ ಆರು ಗಂಟೆಗಳವರೆಗೆ ಮಾತ್ರ ಸಂಗ್ರಹಿಸಬಹುದು.
  • ತಂಪಾದ ಪೆಟ್ಟಿಗೆ ಅಥವಾ ಐಸ್‌ ಪ್ಯಾಕ್‌ ಸಹಾಯದಿಂದ ಇಡುವುದಾದರೆ 24 ಗಂಟೆಗಳವರೆಗೆ ಸಹ ಇಡಬಹುದು.
  • ಇನ್ನು ಫ್ರಿಡ್ಜ್‌ನಲ್ಲಿ ನಾಲ್ಕು ಡಿಗ್ರಿ ಸೆಲ್ಸಿಯಸ್‌ನಲ್ಲಿ ಗರಿಷ್ಠ ಐದು ದಿನಗಳವರೆಗೆ ಶೇಖರಿಸಬಹುದು.
  • ಫ್ರೀಜರ್ ನಲ್ಲಿ ಎರಡು ವಾರಗಳವರೆಗೆ ಸಹ ಸಂಗ್ರಹಿಸಬಹುದು ಎಂದು ವೈಜ್ಞಾನಿಕವಾಗಿ ಸಂಶೋಧಿಸಿ ಹೇಳಲಾಗಿದೆ.
  • ಶಿಶುವೈದ್ಯರ ಪ್ರಕಾರ ಹೆಪ್ಪುಗಟ್ಟಿದ ಎದೆ ಹಾಲನ್ನು ಮೂರು ತಿಂಗಳವರೆಗೆ ಸಂಗ್ರಹಿಸಬಹುದು, ಆದರೆ ಇದು ರುಚಿಯ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
  • ಫ್ರಿಜ್‌ನಲ್ಲಿ ಹೇಗೆ ಶೇಖರಿಸಬೇಕು?

   ಫ್ರಿಜ್‌ನಲ್ಲಿ ಹೇಗೆ ಶೇಖರಿಸಬೇಕು?

   • ಫ್ರಿಜ್ ನಲ್ಲಿ ಎದೆಹಾಲನ್ನು ಸಂಗ್ರಹಿಸುವಾಗ ಅದರ ಜತೆ ಮಾಂಸ, ಮೊಟ್ಟೆ ಅಥವಾ ಬೇಯಿಸದ ಆಹಾರಗಳಿಂದ ದೂರವಿರುವಂತೆ ನೋಡಿಕೊಳ್ಳಿ.
   • ಈಗಾಗಲೇ ಫ್ರಿಜ್‌ನಲ್ಲಿರುವ ಎದೆಹಾಲಿಗೆ ಮತ್ತೆ ನೀವು ಹೊಸದಾಗಿ ಸಹ ಹಾಲನ್ನು ಸೇರಿಸಬಹುದು.
   • ಶಿಶುಗಳಿಗೆ ಫ್ರಿಜ್‌ನ ತಣ್ಣನೆಯ ಹಾಲು ಇಷ್ಟಪಟ್ಟು ಕುಡಿಯುತ್ತಾರೆ, ಆದರೂ ಅದನ್ನು ನಯವಾಗಿ ಶೇಕ್‌ ಮಾಡಿ, ಸ್ವಲ್ಪ ಬೆಚ್ಚಗಾಗಿಸಿಯೇ ಕುಡಿಸಬೇಕು.
   • ಮಗುವಿಗೆ ಹಾಲು ಕುಡಿಸುವ ಸಮಯಕ್ಕೆ ಫ್ರಿಜ್‌ನಿಂದ ತೆಗೆಯಬೇಡಿ, ಕನಿಷ್ಠ ಅರ್ಧ ಗಂಟೆ ಮುಂಚೆ ತೆಗೆದಿಡಿ.
   • ಯಾವುದೇ ಕಾರಣಕ್ಕೂ ಮೈಕ್ರೊವೇವ್ ಅನ್ನು ನಿಮ್ಮ ಎದೆಹಾಲನ್ನು ಕರಗಿಸಲು ಅಥವಾ ಬೆಚ್ಚಗಾಗಲು ಬಳಸಬೇಡಿ.
   • ಪ್ರಿಡ್ಜ್‌ನ ಬಾಗಿಲ ಬಳಿಯಲ್ಲಿಯೇ ಎದೆಹಾಲನ್ನು ಇಡಬೇಡಿ, ಕಾರಣ ಬಾಗಿಲು ತೆರೆಯುವ ಮತ್ತು ಮುಚ್ಚುವಿಕೆಯಿಂದ ತಾಪಮಾನದಲ್ಲಿ ಬದಲಾವಣೆಯಾಗಬಹುದು. ಬಿಸಿ ವಾತಾವರಣ ಪದೇ ಪದೇ ಬದಲಾಗುವುದರಿಂದ ಸಂಗ್ರಹ ಕಷ್ಟವಾಗಿಸುತ್ತದೆ.
   • ಎದೆ ಹಾಲನ್ನು ಘನೀಕರಿಸುವಾಗ, ಪಾತ್ರೆಯ ಮೇಲ್ಭಾಗದಲ್ಲಿ ಒಂದು ಇಂಚು ಜಾಗವನ್ನು ಬಿಡಿ ಏಕೆಂದರೆ ಎದೆ ಹಾಲು ಹೆಪ್ಪುಗಟ್ಟಿದಂತೆ ವಿಸ್ತರಿಸುತ್ತದೆ.
   • ಎದೆಹಾಲು ಕೆಟ್ಟಿರುವ ಬಗ್ಗೆಯೂ ಇರಲಿ ಎಚ್ಚರ

    ಎದೆಹಾಲು ಕೆಟ್ಟಿರುವ ಬಗ್ಗೆಯೂ ಇರಲಿ ಎಚ್ಚರ

    • ಎದೆಹಾಲು ಮೊಸರಿನಂತೆ ಕಂಡರೆ, ಸ್ವಲ್ಪ ಸಮಯ ಶೇಕ್‌ ಮಾಡಿದ ನಂತರವೂ ಕೆನೆಯ ಅಂಶ ಕಂಡುಬಂದರೆ ಹಾಲು ಕೆಟ್ಟಿದೆ ಎಂದರ್ಥ. ಆದ್ದರಿಂದ ಇಂಥಾ ಹಾಲನ್ನು ಸರ್ವಥಾ ಮಗುವಿದೆ ನೀಡಲೇಬೇಡಿ.
    • ಎದೆಹಾಲು ಬಣ್ಣದಲ್ಲಿ ಬದಲಾಗಬಹುದು. ಕೆಲವು ಹಾಲು ನೀಲಿ, ಹಳದಿ ಅಥವಾ ಕೆಲವೊಮ್ಮೆ ಕಂದು ಬಣ್ಣದಲ್ಲಿ ಕಾಣಿಸುತ್ತದೆ.
    • ಎದೆಹಾಲು ಸಂಗ್ರಹಿಸಿದಾಗ ಕೊಬ್ಬಿನ ಕೆನೆ ಹೆಚ್ಚಾಗಿ ಮೇಲ್ಭಾಗಕ್ಕೆ ಹೋಗುವುದು ಸಾಮಾನ್ಯ. ಈ ಹಾಲನ್ನು ಶಿಶುಗಳಿಗೆ ಕುಡಿಸುವ ಮುನ್ನ ಕೊಂಚ ಶೇಕ್‌ ಮಾಡಿ.
    • ನಿಮ್ಮ ಮಗುವಿಗೆ ಹಾಲುಣಿಸುವ ಮೊದಲು ನೀವು ಹಾಲಿನ ವಾಸನೆ ನೋಡಿ, ಅದು ಕೆಟ್ಟ ವಾಸನೆ ಬೀರಿದರೆ ಅದನ್ನು ಅವರಿಗೆ ನೀಡಬೇಡಿ.
    • ಶಿಶುವಿಗೆ ಎಷ್ಟು ಎದೆಹಾಲು ಅಗತ್ಯ, ಎಷ್ಟು ಸಮಯಕ್ಕೆ ಎಂದು ಅಂದಾಜಿಸಿ ಅಷ್ಟು ಮಾತ್ರ ಸಂಗ್ರಹಿಸಿ. ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಬೇಡಿ.
    • ಮಗು ಸಂಗ್ರಹಿಸಿದ ಹಾಲನ್ನು ಸೇವಿಸಲು ಪದೇ ಪದೇ ನಿರಾಕರಿಸಿದರೆ ಮಗುವಿಗೆ ಒತ್ತಡಪೂರಿತವಾಗಿ ಹಾಲನ್ನು ನೀಡಬೇಡಿ.
    • ಅಂತಿಮವಾಗಿ ಒಂದು ವಿಷಯ ನೆನಪಿಡಿ

     ಅಂತಿಮವಾಗಿ ಒಂದು ವಿಷಯ ನೆನಪಿಡಿ

     ಈ ಎಲ್ಲಾ ನಿಯಮಗಳನ್ನು ಪಾಲಿಸುವುದಿಂದ ನೀವು ಮಗುವಿಗೆ ಯಾವುದೇ ಹಾನಿಯಾಗದಂತೆ ನಿಮ್ಮದೇ ಎದೆಹಾಲನ್ನು ನೀಡಬಹುದಷ್ಟೇ. ಆದರೆ ನೀವು ನೇರವಾಗಿ ಎದೆಹಾಲನ್ನು ಕುಡಿಸಿದಾಗ ಮಗುವಿಗೆ ಹಿತವೆನಿಸುವ ಬೆಚ್ಚನೆಯ ಹಾಲು ಪೌಷ್ಠಿಕಾಂಶದ ಸಮೇತ ಮಗುವಿಗೆ ಸೇರುತ್ತದೆ. ಬದಲಾಗಿ, ಎದೆಹಾಲನ್ನು ಶೇಖರಿಸಿ ಮಗುವಿಗೆ ನೀಡುವುದರಿಂದ ಅದರಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ಸಂಗ್ರಹಿತ ಹಾಲಿನಲ್ಲಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

English summary

World Breast Feeding Week 2021: How to Store Breast Milk at Home in Kannada

Here we are discussing about How to Store Breast Milk at Home in Kannada. How you store your breastmilk depends on how soon you want to use it. If you plan to use it within a few days, refrigerating is better than freezing. Read more.
X
Desktop Bottom Promotion