For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ರಸ್ತೆಬದಿಯ ತಿಂಡಿಗಳಿಗೆ ಮರುಳಾಗದಿರಿ

By Arshad
|

ಯಾವುದೇ ಔಷಧಗಳನ್ನು ವೈದ್ಯರು ತಮ್ಮ ಗರ್ಭಿಣಿ ರೋಗಿಗೆ ನೀಡುವಾಗ ಆ ಔಷಧಿ ಸೂಕ್ತವೇ ಎಂದು ಪರಿಶೀಲಿಸಿಯೇ ನೀಡುತ್ತಾರೆ. ಮನೆಯ ಅಡುಗೆಯಲ್ಲಿಯೂ ಅಷ್ಟೇ, ಹಿರಿಯರು ಈ ಆಹಾರ ಗರ್ಭಿಣಿಗೆ ಸೂಕ್ತವೇ ಎಂದು ಪರಾಮರ್ಶಿಸಿಯೇ ನೀಡುತ್ತಾರೆ. ಹಾಗಿರುವಾಗ ಪೇಟೆಯಲ್ಲಿ ಕಾಣಸಿಗುವ ರಸ್ತೆ ಬದಿಯ ತಿಂಡಿಗಳನ್ನು ತಿನ್ನುವುದು ಎಷ್ಟು ಸೂಕ್ತ?

ಅದರಲ್ಲೂ ಬಸಿರಿನ ಅವಧಿಯಲ್ಲಿ ಹುಳಿ ಮತ್ತಿತರ ತಿಂಡಿಗಳನ್ನು ತಿನ್ನುವ ಬಯಕೆ ಹೆಚ್ಚುತ್ತದೆ. ಹಾದಿಬದಿಯ ತಿಂಡಿಗಳಲ್ಲಿ ಹಲವು ತಿಂಡಿಗಳು ಹುಳಿ ಖಾರ ಮಸಾಲೆಯುಕ್ತವಾಗಿದ್ದು ಗರ್ಭಿಣಿಯ ಬಯಕೆಯನ್ನು ಉತ್ತುಂಗಕ್ಕೇರಿಸುತ್ತವೆ.ಈ ಬಯಕೆಯನ್ನು ಹತ್ತಿಕ್ಕಲಾಗದೇ ತಿಂಡಿ ತಿಂದು ಮನಃಪೂರ್ವ ತೃಪ್ತಿಪಟ್ಟುಕೊಳ್ಳುವವರೇ ಹೆಚ್ಚು. ಅಂಗಡಿಯವರೂ ಅಷ್ಟೇ, ತಮ್ಮ ಗಿರಾಕಿ ಗರ್ಭಿಣಿ ಎಂದು ಗೊತ್ತಾದರೆ ಸಾಕು, ಹುಳಿ ಖಾರವನ್ನು ಕೊಂಚ ಹೆಚ್ಚೇ ಹಾಕುತ್ತಾರೆ...!

 

ಗರ್ಭಿಣಿ ಸೇವಿಸುವ ಆಹಾರವೇ ಒಡಲ ಕಂದನಿಗೂ ಆಹಾರವಾಗಿದೆ. ಆಹಾರದ ಮೂಲಕ ಅನೈಚ್ಛಿಕವಾಗಿ ಸೇರುವ ವಿಷಕಾರಿ ಪದಾರ್ಥಗಳು ಕಂದನ ಹೊಟ್ಟೆಯನ್ನೂ ಸೇರುತ್ತವೆ. ಆದರೆ ಹಾದಿಬದಿ ಸಿಗುವ ಎಲ್ಲಾ ಆಹಾರಗಳು ಸ್ವಚ್ಛವಾಗಿರಬೇಕೆಂದಿಲ್ಲ, ಆರೋಗ್ಯಕರವಾಗಿರಬೇಕಾಗಿಲ್ಲ ಅಥವಾ ವಿಷಕಾರಿ ವಸ್ತುಗಳಿಂದ ಹೊರತಾಗಿರಬೇಕಾಗಿಲ್ಲ. ಆದ್ದರಿಂದ ಹಾದಿಬದಿಯ ತಿನಿಸುಗಳನ್ನು ತಿನ್ನುವ ಬಯಕೆಯನ್ನು ಪೂರ್ಣಗೊಳಿಸುವ ಮುನ್ನ ನೀವು ವಹಿಸಬೇಕಾದ ಎಚ್ಚರಿಕೆಗಳನ್ನು ಈ ಮೂಲಕ ನೀಡಲಾಗಿದೆ...

ಹಾದಿಬದಿಯ ತಿಂಡಿಗಳು ತೂಕವನ್ನು ಹೆಚ್ಚಿಸಬಹುದು

ಹಾದಿಬದಿಯ ತಿಂಡಿಗಳು ತೂಕವನ್ನು ಹೆಚ್ಚಿಸಬಹುದು

ಗರ್ಭಿಣಿಯ ತೂಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ತಿಂಗಳುಗಳು ದಾಟುತ್ತಿದ್ದಂತೆಯೇ ಒಡಲು ದೊಡ್ಡದಾಗುತ್ತಾ ಸ್ವಾಭಾವಿಕವಾಗಿ ತೂಕ ಹೆಚ್ಚುತ್ತಾ ಹೋದರೂ ಹಾದಿಬದಿಯ ತಿಂಡಿಗಳಲ್ಲಿರುವ ಅಪಾರ ಪ್ರಮಾಣದ ಪೋಷಕಾಂಶಗಳ ಕಾರಣದಿಂದ ದೇಹದ ಕೊಬ್ಬು ಅತಿಯಾಗಿ ಹೆಚ್ಚುತ್ತದೆ. ಇದಕ್ಕೆ ಹಾದಿಬದಿಯ ತಿಂಡಿಗಳನ್ನು ತಯಾರಿಸಲು ಉಪಯೋಗಿಸಿದ ಅತಿಹೆಚ್ಚು ಎಣ್ಣೆ ಮತ್ತು ಕೆಡದಂತೆ ಉಪಯೋಗಿಸುವ ಸಂರಕ್ಷಕಗಳು ಕಾರಣ. ಹೆಚ್ಚಿದ ತೂಕ ಹೆರಿಗೆಯ ಸಮಯದಲ್ಲಿ ತೊಂದರೆಗಳನ್ನು ಹೆಚ್ಚಿಸುತ್ತದೆ, ಸುಸ್ತು, ತಲೆಸುತ್ತುವಿಕೆ, ರಕ್ತದೊತ್ತಡ ಹೆಚ್ಚುವುದು ಮತ್ತು ಇನ್ನೂ ಹಲವಾರು ತೊಂದರೆಗಳನ್ನು ಗರ್ಭಿಣಿ ಎದುರಿಸಬೇಕಾಗುತ್ತದೆ. ಇನ್ನೂ ಮುಖ್ಯವಾಗಿ ಏರಿದಷ್ಟು ಸುಲಭವಾಗಿ ತೂಕ ಇಳಿಯದ ಕಾರಣ ಹೆರಿಗೆಯ ಬಳಿಕ ಸ್ಥೂಲಕಾಯ ಆವರಿಸುತ್ತದೆ. ಈ ಪರಿಸ್ಥಿತಿಯಲ್ಲಿ ನಿಮ್ಮ ಹಳೆಯ ಎಲ್ಲಾ ಬಟ್ಟೆಗಳು ವಿಪರೀತ ಬಿಗಿಯಾಗಿ ತೊಡಲು ಸಾಧ್ಯವಿಲ್ಲದೇ ಹಳಹಳಿಸುವಂತಾಗುತ್ತದೆ. ಇದು ನಿಮಗಿಷ್ಟವೇ?

ಸೋಂಕು ಹೆಚ್ಚಿಸಬಹುದು

ಸೋಂಕು ಹೆಚ್ಚಿಸಬಹುದು

ಗರ್ಭಾವಸ್ಥೆಯಲ್ಲಿ ದೇಹ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಬದಲಾದ ನೀರು ಶೀತ ಕೆಮ್ಮನ್ನು ಉಂಟುಮಾಡಬಹುದು. ಇದಕ್ಕೆ ಕಾರಣ ದೇಹದ ರಕ್ತದ ಹೆಚ್ಚಿನ ಭಾಗ ಕಂದನ ಬೆಳವಣಿಗೆಯಲ್ಲಿ ಕೇಂದ್ರೀಕೃತವಾದುದರಿಂದ ಉಳಿದ ಕ್ಷೇತ್ರಗಳಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆ ಕೊಂಚ ಸೋಮಾರಿತನ ತೋರುತ್ತದೆ. ಈ ಪರಿಸ್ಥಿತಿಯಲ್ಲಿ ಹಾದಿಬದಿಯ ಆಹಾರಗಳನ್ನು ತಿನ್ನುವುದು ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳಿಗೆ ರತ್ನಗಂಬಳಿ ಹಾಸಿ ಆಹ್ವಾನ ನೀಡಿದಂತೆ. ಅದರಲ್ಲೂ ಹಾದಿಬದಿಯ ತಿಂಡಿಗಳನ್ನು ತಯಾರಿಸುವಾಗ ಅವರೇನೂ ಅಕ್ವಾಗಾರ್ಡ್ ನೀರನ್ನು ಉಪಯೋಗಿಸಿರುವುದಿಲ್ಲ, ನೇರವಾಗಿ ನಲ್ಲಿ ನೀರನ್ನು ಸುರಿದಿರುತ್ತಾರೆ. ಈ ನೀರು ನಿಮಗೆ ಸಮ್ಮತವೇ?

ಮಗುವಿನ ತೂಕವೂ ಹೆಚ್ಚಬಹುದು
 

ಮಗುವಿನ ತೂಕವೂ ಹೆಚ್ಚಬಹುದು

ಹಾದಿಬದಿಯ ತಿಂಡಿಗಳನ್ನು ತಯಾರಿಸಲು ಉಪಯೋಗಿಸುವ ಸಾಮಾಗ್ರಿಗಳನ್ನು ಆರಿಸಲು ಅಂಗಡಿಯವರು ಉಪಯೋಗಿಸುವ ಮಾನದಂಡವೆಂದರೆ ಅದರ ಬೆಲೆ. ಲಾಭವೇ ಮುಖ್ಯವಾಗಿರುವ ಅಂಗಡಿಗಳಿಗೆ ಬೆಲೆ ಕಡಿಮೆ ಇರಬೇಕಾದುದೇ ಮುಖ್ಯ. ಇಂತಹ ವಸ್ತುಗಳಿಂದ ತಯಾರಾದ ತಿಂಡಿಗಳು ಸ್ವಾದಿಷ್ಟವಾಗಿದ್ದರೂ ಆರೋಗ್ಯಕರವಾಗಿರುವುದಿಲ್ಲ. ಉದಾಹರಣೆಗೆ ರಸ್ತೆ ಬದಿ ಮಾರಾಟವಾಗುವ ಗೋಬಿ ಮಂಚೂರಿ ಹುರಿಯಲು ಯಾವ ಎಣ್ಣೆ ಉಪಯೋಗಿಸಿದ್ದೀರಿ ಎಂದು ಕೇಳಿ. ಅಂಗಡಿಯವರು ಹೆಮ್ಮೆಯಿಂದ ಪಾಮೋಲಿನ್ ಎಣ್ಣೆಯ ಪ್ಯಾಕೆಟ್ಟನ್ನು ತೋರಿಸುತ್ತಾರೆ. ವಾಸ್ತವವಾಗಿ ಸುಮಾರು ನಲವತ್ತೇಳು ಶೇಖಡಾ ಕೆಟ್ಟ ಕೊಲೆಸ್ಟ್ರಾಲ್ ಇರುವ ಈ ಎಣ್ಣೆ ಗರ್ಭಿಣಿಯರ ಪಾಲಿನ ವಿಷ. ಈ ಆಹಾರದ ಮೂಲಕ ಕೆಟ್ಟ ಕೊಲೆಸ್ಟ್ರಾಲ್ (ಎಲ್.ಡಿ.ಎಲ್), ಕೊಬ್ಬು, ಟ್ರೈಗ್ಲಿಸರೈಡ್ ಮೊದಲಾದ ಅಂಶಗಳು ನಿಮ್ಮ ರಕ್ತ ಸೇರಿ ನಿಮ್ಮ ಕಂದನ ರಕ್ತವನ್ನೂ ಸೇರುತ್ತದೆ. ಇದು ಕಂದನ ತೂಕವನ್ನು ಸಾಮಾನ್ಯಕ್ಕಿಂತಲೂ ಹೆಚ್ಚು ಪ್ರಮಾಣಕ್ಕೆ ಹೆಚ್ಚಿಸುವುದರಿಂದ ಹೆರಿಗೆ ಅತಿ ಕಷ್ಟಕರವಾಗಬಹುದು. ಈ ಪರಿಸ್ಥಿತಿ ಬಂದರೆ ಏಳನೆಯ ಎಂಟನೆಯ ತಿಂಗಳಿಗೇ ವೈದ್ಯರು ನಿಮ್ಮ ಊಟವನ್ನು ನಿಲ್ಲಿಸಿ, ಕೇವಲ ಹಣ್ಣಿನ ರಸ ಸೇವಿಸಲು ಕಟ್ಟಪ್ಪಣೆ ಮಾಡಬಹುದು. ಆದ್ದರಿಂದ ನಿಮ್ಮ ಬಯಕೆಯನ್ನು ಕೊಂಚ ಕಡಿಮೆಗೊಳಿಸಿ ಮನೆಯ ಆಹಾರವನ್ನೇ ಸೇವಿಸಿ.

ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರಬಹದು

ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರಬಹದು

ಗರ್ಭದಲ್ಲಿ ಬೆಳೆಯುವ ಹಂತದಲ್ಲಿರುವಾಗ ಪ್ರತಿಕ್ಷಣ ಮತ್ತು ಪ್ರತಿಯೊಂದು ಕಣವೂ ಮಗುವಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಒಂದು ವೇಳೆ ಹಾದಿಬದಿಯ ತಿಂಡಿಯನ್ನು ಅರಿವಿಲ್ಲದೇ ತಿಂದಾಗ ಆ ತಿಂಡಿಯಲ್ಲಿದ್ದ ವಿಷಕಾರಿ ವಸ್ತುಗಳು ರಕ್ತಸೇರಿ ಮಗುವಿನ ಬೆಳವಣಿಗೆಯಲ್ಲಿ ಅಡ್ಡಗಾಲಿಟ್ಟು ಹಲವು ವಿಕೃತಿಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಪ್ಯಾಶ್ಚರೀಕರಿಸದ ಹಾಲು ಅಥವಾ ಹೊಗೆಯಲ್ಲಿ ಬಾಡಿಸಿದ ಮೀನು ಸೇವಿಸಿದರೆ ಅದರಲ್ಲಿರುವ ಲಿಸ್ಟೀರಿಯಾ (Listeria) ಎಂಬ ಬ್ಯಾಕ್ಟೀರಿಯಾ ದೇಹ ಸೇರಿದರ ಗರ್ಭಪಾತದ ಸಂಭವ ಶೇಖಡಾ ನೂರರಷ್ಟು ಹೆಚ್ಚುತ್ತದೆ. ಇಲ್ಲದಿದ್ದರೆ ಹುಟ್ಟುವ ಮಗುವಿನಲ್ಲಿ ಗಂಭೀರ ತೊಂದರೆಗಳಿರಬಹುದು. ಹಾದಿಬದಿಯಲ್ಲಿ ಸಿಗುವ ಬಾದಾಮಿ ಹಾಲಿಗೆ ಹಾಲು ಕಡಿಮೆಯಾಗಿದೆ, ಗಿರಾಕಿ ಸಮಯ ಎಂದು ಹಸಿ ಹಾಲನ್ನೇ ಸೇರಿಸಿ ಕೊಟ್ಟಿದ್ದರೆ ಏನಾಗಬಹುದು ಎಂದು ಯೋಚಿಸಿ. ಆರೋಗ್ಯವಂತ ಮಗು ಬೇಕೇ? ಹಾದಿ ಬದಿಯ ತಿಂಡಿಗಳತ್ತ ಕಣ್ಣೆತ್ತಿ ನೋಡಬೇಡಿ. ಬಯಕೆ ತಡೆಯಲಾಗುತ್ತಿಲ್ಲವೇ? ಕಣ್ಣುಮುಚ್ಚಿ ನಿಮಗೆ ಹುಟ್ಟಲಿರುವ ಕಂದನ ಮುಖವನ್ನು ಊಹಿಸಿ, ನಿನಗಾಗಿ ಏನನ್ನೂ ತ್ಯಾಗ ಮಾಡಬಲ್ಲೆ ಎಂದು ಮನಸ್ಸನ್ನು ಓಲೈಸಿ. ಇಂದು ದೃಢಗೊಳ್ಳುವ ಮನ ನಿಮ್ಮ ಜೀವನದ್ದುದ್ದಕ್ಕೂ ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ.

ಮಧುಮೇಹ ಆವರಿಸುವ ಸಂಭವ ಹೆಚ್ಚುತ್ತದೆ

ಮಧುಮೇಹ ಆವರಿಸುವ ಸಂಭವ ಹೆಚ್ಚುತ್ತದೆ

ಮಧುಮೇಹಕ್ಕೆ ವಂಶವಾಹಿನಿ ಕಾರಣವಾದರೂ ಯಾವ ಹಂತದಲ್ಲಿ ಇದು ಪ್ರಾರಂಭವಾಗುತ್ತದೆ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ತಂದೆ, ಅಜ್ಜ ಇಬ್ಬರಿಗೂ ಮಧುಮೇಹವಿದ್ದ ಸಹೋದರರಲ್ಲಿ ಹಿರಿಯರಿಗೆ ಐವತ್ತಾದರೂ ಬಾಧಿಸದ ಮಧುಮೇಹ ಕಿರಿಯರಿಗೆ ಮೂವತ್ತರ ಹರೆಯದಲ್ಲಿಯೇ ಆವರಿಸಿಕೊಂಡಿದ್ದುದು ನಿಸರ್ಗದ ಸೋಜಿಗ. ಆದರೆ ಗರ್ಭಾವಸ್ಥೆಯಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಬಹಳಷ್ಟು ಕುಂದುವುದರಿಂದ ಒಂದು ವೇಳೆ ಮಧುಮೇಹ ಬರುವ ಸಂಭವಿರುವುದಾದರೆ ಅದು ಈ ಸಂದರ್ಭವನ್ನು ಬಳಸಿಕೊಳ್ಳುತ್ತದೆ. ಈ ಸಂಭವವನ್ನು ಹಾದಿಬದಿಯ ತಿಂಡಿಗಳು ಬಹಳಷ್ಟು ಹೆಚ್ಚಿಸುತ್ತವೆ. ಏಕೆಂದರೆ ಇದರಲ್ಲಿರುವ ಅನಾರೋಗ್ಯಕರ ಅಂಶಗಳು ಮತ್ತು ಹೆಚ್ಚಿರುವ ಸಕ್ಕರೆ ದೇಹದಲ್ಲಿ ಭಿನ್ನವಾಗಿ ಪ್ರತಿಕ್ರಿಯಿಸಿ ರೋಗನಿರೋಧಕ ಶಕ್ತಿ ಇಲ್ಲದೇ ಇರುವ ಸಂದರ್ಭದಲ್ಲಿ ಮಧುಮೇಹ ಆವರಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದು ಗರ್ಭಿಣಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೇ ವೈದ್ಯರಿಗೆ ನಿಮ್ಮ ಮಧುಮೇಹವನ್ನು ನಿಯಂತ್ರಿಸಲು ವಿಶೇಷ ಔಷಧಿಗಳನ್ನು ನೀಡಬೇಕಾಗುತ್ತದೆ. ಹೆಚ್ಚಿನ ರಕ್ತದೊತ್ತಡ, ತಗ್ಗಿದ ಹಸಿವು, ಕೈಕಾಲುಗಳ ಒಳಗೆ ಸೂಜಿಗಳಿಂದ ಚುಚ್ಚಿದಂತೆ ನೋವಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಪದೇ ಪದೇ ವಾಂತಿಯಾಗುವುದು ಸಹಾ ಸಾಮಾನ್ಯ. ಈ ಪರಿಸ್ಥಿತಿಗೆ ಒಳಗಾಗದೇ ಇರಲು ಆರೋಗ್ಯಕರ ಮತ್ತು ಮನೆಯವರು ಪ್ರೀತಿಯಿಂದ ಮಾಡಿಕೊಟ್ಟ ಅಡುಗೆಯನ್ನೇ ಸೇವಿಸಿ, ಆರೋಗ್ಯವಂತ ಮಗುವಿಗೆ ಜನ್ಮನೀಡಿ. ನಿಮಗೆ ಶುಭವಾಗಲಿ.

English summary

Is It Safe For Pregnant Women To Eat Road Side Food?

Healthy food is the primary requirement to stay hale and healthy. The necessity for this will increase to its double when you are pregnant. You have to provide all the important nutrients needed for the growth and development of your unborn baby. Since the only nutritional source of the foetus is its mother’s food, you have the complete responsibility to make it a healthy option.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more