For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಯಾವ ಕೆಲಸ ಮಾಡಬಹುದು, ಯಾವುದನ್ನು ಮಾಡಲೇಬಾರದು?

|

ಗರ್ಭಾವಸ್ಥೆ ಎನ್ನುವುದು ಮಹಿಳೆಯರಿಗೆ ತುಂಬಾ ಸೂಕ್ಷ್ಮವಾದ ಸಮಯ ಎಂದು ಹೇಳುತ್ತಾರೆ. ಇದನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಆನಂದಮಯ ಸಮಯವನ್ನಾಗಿ ಕಳೆಯಲು ಸಾಧ್ಯ. ಮುಖ್ಯವಾಗಿ ಗರ್ಭಿಣಿ ಮಹಿಳೆ ತನ್ನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಜೀವನಶೈಲಿಯನ್ನು ಮತ್ತು ಆಹಾರ ಅಭ್ಯಾಸವನ್ನು ರೂಢಿ ಮಾಡಿಕೊಂಡರೆ ಸುಲಭವಾದ ಹೆರಿಗೆಯನ್ನು ಮತ್ತು ಆರೋಗ್ಯಕರವಾದ ಮಗುವನ್ನು ಪಡೆಯಲು ಅನುಕೂಲವಾಗುತ್ತದೆ.

pregnant

ಸಂಪೂರ್ಣವಾದ ಜಡ ಜೀವನಶೈಲಿ ಸಹ ಗರ್ಭಿಣಿ ಮಹಿಳೆಯರಿಗೆ ಅಷ್ಟು ಒಳ್ಳೆಯದಲ್ಲ. ಗರ್ಭಿಣಿ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಕೆಲವೊಂದು ಸುಲಭವಾದ ಮನೆಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವುದರಿಂದ ದೇಹಕ್ಕೆ ವ್ಯಾಯಾಮ ನೀಡಿದಂತೆ ಆಗುತ್ತದೆ. ಇದರಿಂದ ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿನ ಆರೋಗ್ಯಕ್ಕೆ ಸಾಕಷ್ಟು ಅನುಕೂಲಕರವಾಗಿರುತ್ತದೆ. ಆದರೆ ಕೆಲವೊಂದು ಕಷ್ಟಕರ ಕೆಲಸಗಳನ್ನು ಈ ಸಮಯದಲ್ಲಿ ಮಾಡಬಾರದು ಎಂದು ಹೇಳುತ್ತಾರೆ.

ಈ ಲೇಖನದಲ್ಲಿ ಮನೆಯಲ್ಲಿ ಯಾವೆಲ್ಲ ಚಿಕ್ಕಪುಟ್ಟ ಕೆಲಸಗಳನ್ನು ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಮಾಡಬಹುದು ಮತ್ತು ಯಾವ ಕೆಲಸಗಳನ್ನು ಮಾಡುವ ಹಾಗಿಲ್ಲ ಮತ್ತು ಅವುಗಳಿಂದ ದೇಹದ ಆರೋಗ್ಯದ ಮೇಲೆ ಉಂಟಾಗುವ ವಿವಿಧ ಬಗೆಯ ತೊಂದರೆಗಳನ್ನು ತಿಳಿದುಕೊಳ್ಳಬಹುದು.

1 ಗರ್ಭವಸ್ಥೆಯಲ್ಲಿ ಮನೆ ಕೆಲಸಗಳನ್ನು ಮಾಡಲು ಮುಂದಾಗುವುದು ಗರ್ಭಿಣಿ ಮಹಿಳೆಯರಿಗೆ ನಿಜವಾಗಿಯೂ ಸುರಕ್ಷಿತವೇ?

1 ಗರ್ಭವಸ್ಥೆಯಲ್ಲಿ ಮನೆ ಕೆಲಸಗಳನ್ನು ಮಾಡಲು ಮುಂದಾಗುವುದು ಗರ್ಭಿಣಿ ಮಹಿಳೆಯರಿಗೆ ನಿಜವಾಗಿಯೂ ಸುರಕ್ಷಿತವೇ?

ಒಬ್ಬ ಗರ್ಭಿಣಿ ಮಹಿಳೆ ತನ್ನ ಗರ್ಭಾವಸ್ಥೆಯ ದಿನಗಳನ್ನು ಸಂಪೂರ್ಣವಾಗಿ ಆನಂದಮಯ ದಿನಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಮಾತ್ರ ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ದೂರವಾಗಲು ಸಾಧ್ಯ. ಕೆಲಸ ಹಾಗೂ ಆಕೆ ತೆಗೆದುಕೊಳ್ಳುವ ವಿಶ್ರಾಂತಿ ಸಮತೋಲನವಾಗಿರಬೇಕು. ಹಾಗೆಂದು ದೇಹಕ್ಕೆ ಕಷ್ಟಕರ ಎನಿಸುವ ಕೆಲಸಗಳನ್ನು, ಹೊಟ್ಟೆಯ ಭಾಗಕ್ಕೆ ಅತಿಯಾದ ಒತ್ತಡವನ್ನು ಉಂಟು ಮಾಡುವ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಹೋಗಬಾರದು. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಸ್ತ್ರೀರೋಗ ತಜ್ಞರು ಹೇಳುವ ಹಾಗೆ ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸುಮ್ಮನೆ ಒಂದು ಕಡೆ ಕುಳಿತು ಕಾಲ ಕಳೆಯುವುದಕ್ಕಿಂತ ತಮ್ಮ ಮನೆಗೆ ಸಂಬಂಧಪಟ್ಟಂತೆ ಇರುವ ಸಣ್ಣ ಪುಟ್ಟ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಒಳ್ಳೆಯದು.

2 ಹಾಗಾದರೆ ಯಾವೆಲ್ಲ ಕೆಲಸಗಳನ್ನು ಗರ್ಭಿಣಿ ಮಹಿಳೆಯರು ಮಾಡಬಹುದು?

2 ಹಾಗಾದರೆ ಯಾವೆಲ್ಲ ಕೆಲಸಗಳನ್ನು ಗರ್ಭಿಣಿ ಮಹಿಳೆಯರು ಮಾಡಬಹುದು?

* ಪ್ರತಿ ದಿನ ಮನೆಯಲ್ಲಿ ಮಾಡುವಂತಹ ಚಿಕ್ಕ ಪುಟ್ಟ ಕೆಲಸಗಳಿಗೆ ಗರ್ಭಾವಸ್ಥೆಯಲ್ಲಿ ಸಹ ಯಾವುದೇ ಅಡ್ಡಿ ಇಲ್ಲ. ಸಾಮಾನ್ಯ ದಿನಗಳಂತೆ ಸುಲಭವಾಗಿ ಇವುಗಳನ್ನು ಮಾಡಿ ಮುಗಿಸಬಹುದು. ಆದರೆ ಕೆಲವು ಪ್ರಕಾರದ ಸುಲಭವಾದ ಕೆಲಸಗಳಿಗೆ ಸ್ವಲ್ಪ ತಯಾರಿ ಮಾಡಿಕೊಳ್ಳಬೇಕು.

* ಉದಾಹರಣೆಗೆ, ಈ ಮೊದಲು ಸಾಂಬಾರ್ ಮಾಡುವ ಸಂದರ್ಭದಲ್ಲಿ ತರಕಾರಿಗಳನ್ನು ಆರಾಮವಾಗಿ ನೆಲದ ಮೇಲೆ ಕುಳಿತು ಕತ್ತರಿಸಬಹುದಿತ್ತು. ಆದರೆ ಗರ್ಭಾವಸ್ಥೆಗೆ ತಲುಪಿದ ನಂತರ ಇದು ಸಾಧ್ಯವಾಗುವುದಿಲ್ಲ. ಒಂದು ಚೇರ್ ಮೇಲೆ ಕುಳಿತು ಮುಂದೆ ಟೀಪಾಯಿ ಇಟ್ಟುಕೊಂಡು ಅಥವಾ ಡೈನಿಂಗ್ ಟೇಬಲ್ ಮೇಲೆ ತರಕಾರಿಗಳನ್ನು ಕಟ್ ಮಾಡಬಹುದು.

* ಇದೇ ರೀತಿ ಮನೆಯನ್ನು ಸ್ವಚ್ಛ ಮಾಡುವ ವಿಚಾರಕ್ಕೆ ಬರುವುದಾದರೆ, ಮೊದಲಿನ ಹಾಗೆ ತುಂಬಾ ಮುಂದಕ್ಕೆ ಬಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ನೇರವಾಗಿ ನಿಂತು ಉದ್ದನೆಯ ಹ್ಯಾಂಡಲ್ ಇರುವ ಪೊರಕೆ ಮತ್ತು ಮೋಪ್ ಹಿಡಿದು ಸ್ವಚ್ಛ ಮಾಡಲು ಮುಂದಾಗಬಹುದು. ಗರ್ಭಾವಸ್ಥೆಗೆ ಮುಂಚೆ ಹೆಚ್ಚು ಹೊತ್ತು ನಿಂತುಕೊಳ್ಳುವ ರೀತಿಯಲ್ಲಿ ಅಥವಾ ಬಾಗುವ ರೀತಿಯಲ್ಲಿ ಗರ್ಭಿಣಿ ಮಹಿಳೆಯರು ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಮಗುವಿನ ಬೆಳವಣಿಗೆಯಿಂದ ದೇಹದ ತೂಕ ಕ್ರಮೇಣವಾಗಿ ಹೆಚ್ಚಾಗುತ್ತ ಹೋಗುತ್ತದೆ. ಹಾಗಾಗಿ ದೈಹಿಕವಾಗಿ ಒತ್ತಡವನ್ನು ಅನುಭವಿಸಬೇಕಾಗಿ ಬರುತ್ತದೆ.

* ಗರ್ಭಾವಸ್ಥೆಯಲ್ಲಿ ಹೆಚ್ಚು ಹೊತ್ತು ಬಾಗಿ ನಿಂತು ಕೆಲಸ ಮಾಡುವುದರಿಂದ ಸೊಂಟದ ಭಾಗದಿಂದ ಕಾಲಿನ ಭಾಗದವರೆಗೆ ಹರಿದಿರುವ ನರದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದು ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಕೊಡುತ್ತದೆ. ಈ ಸಂದರ್ಭದಲ್ಲಿ ದೇಹದ ಆಯಾಸವನ್ನು ಕೂಡ ಕಡೆಗಣಿಸುವ ಹಾಗಿಲ್ಲ. ಅಪ್ಪಿತಪ್ಪಿ ಮನೆ ಕೆಲಸ ಮಾಡುವಾಗ ಸುಸ್ತು, ಆಯಾಸ ಎದುರಾದರೆ, ಮೊದಲು ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ತೆಗೆದುಕೊಂಡು ಆನಂತರ ಕೆಲಸವನ್ನು ಮುಂದುವರಿಸುವುದು ಒಳ್ಳೆಯದು. ಮನೆಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಯಾವ ಸಮಯದಲ್ಲಿ ನಿಮಗೆ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತಿದೆ ಎನಿಸುತ್ತದೆ, ಆಗ ಅಂತಹ ಕೆಲಸವನ್ನು ಬೇರೆಯವರಿಂದ ಮಾಡಿಸಿ.

* ಬಾತ್ರೂಮ್ ಅಥವಾ ಟಾಯ್ಲೆಟ್ ಕ್ಲೀನಿಂಗ್ ಮಾಡುವುದು ಗರ್ಭಾವಸ್ಥೆಯಲ್ಲಿ ಅಷ್ಟು ಸಮಂಜಸವಲ್ಲ. ಏಕೆಂದರೆ ಈ ಸಂದರ್ಭದಲ್ಲಿ ಬಳಸುವ ಕೆಲವೊಂದು ರಾಸಾಯನಿಕ ಅಂಶಗಳು ಗರ್ಭಿಣಿ ತಾಯಿಯ ಹಾಗೂ ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಹಾಗಾಗಿ ನಿಂಬೆಹಣ್ಣಿನ ರಸ, ಬೇಕಿಂಗ್ ಸೋಡಾ, ವೈಟ್ ವಿನೆಗರ್ ಇತ್ಯಾದಿಗಳನ್ನು ಮಾತ್ರ ಸ್ವಚ್ಛ ಮಾಡಲು ಬಳಸಬಹುದು. ಇವುಗಳು ಅಷ್ಟು ದುಬಾರಿ ಕೂಡ ಅಲ್ಲ. ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ. ಜೊತೆಗೆ ಪರಿಣಾಮಕಾರಿಯಾಗಿ ಸ್ವಚ್ಛತಾ ಕೆಲಸವನ್ನು ಮಾಡಿ ಮುಗಿಸುತ್ತವೆ. ಒಂದು ವೇಳೆ ಸ್ವಚ್ಛ ಮಾಡಲು ಇಂತಹ ಆರೋಗ್ಯಕ್ಕೆ ಅನುಕೂಲಕರವಾದ ಉತ್ಪನ್ನಗಳು ನಿಮಗೆ ಕೈಗೆ ಸಿಗದೇ ಇದ್ದ ಪಕ್ಷದಲ್ಲಿ, ಸಾಧ್ಯವಾದಷ್ಟು ಈ ಕೆಲಸಗಳನ್ನು ನಿಮ್ಮ ಮನೆಯ ಇತರ ಸದಸ್ಯರಿಗೆ ವಹಿಸಿ ನೀವು ಆರಾಮವಾಗಿ ಕಾಲ ಕಳೆಯಿರಿ.

* ಪಾತ್ರೆಗಳನ್ನು ತೊಳೆಯುವ ಸಂದರ್ಭದಲ್ಲೂ ಸಹ ಹೆಚ್ಚು ಹೊತ್ತು ನಿಂತುಕೊಳ್ಳುವ ಹಾಗಿಲ್ಲ. ಸಾಧ್ಯವಾದಷ್ಟು 15 ರಿಂದ 20 ನಿಮಿಷಗಳ ಒಳಗೆ ಸಣ್ಣ ಪುಟ್ಟ ಪಾತ್ರೆಗಳನ್ನು ತೊಳೆದು ಬಿಡಬಹುದು. ತುಂಬಾ ದೊಡ್ಡದಾದ ಪಾತ್ರೆಗಳನ್ನು ತೊಳೆಯಲು ಅಥವಾ ಹೆಚ್ಚು ಹೊತ್ತು ನಿಂತುಕೊಳ್ಳುವ ಸಂದರ್ಭ ಬಂದಾಗ ಇತರರ ಸಹಾಯ ತೆಗೆದುಕೊಳ್ಳುವುದು ಗರ್ಭಿಣಿ ಮಹಿಳೆಯರಿಗೆ ಅನಿವಾರ್ಯವಾಗುತ್ತದೆ.

 3. ಯಾವೆಲ್ಲ ಕೆಲಸಗಳನ್ನು ಗರ್ಭಿಣಿ ಮಹಿಳೆಯರು ಮಾಡುವ ಹಾಗಿಲ್ಲ ಎಂದು ಹೇಳುತ್ತಾರೆ ಎಂಬ ಬಗ್ಗೆ ನೋಡುವುದಾದರೆ

3. ಯಾವೆಲ್ಲ ಕೆಲಸಗಳನ್ನು ಗರ್ಭಿಣಿ ಮಹಿಳೆಯರು ಮಾಡುವ ಹಾಗಿಲ್ಲ ಎಂದು ಹೇಳುತ್ತಾರೆ ಎಂಬ ಬಗ್ಗೆ ನೋಡುವುದಾದರೆ

* ಮನೆಗೆ ಸಂಬಂಧಪಟ್ಟ ಬಹುತೇಕ ಕೆಲಸಗಳನ್ನು ಗರ್ಭಿಣಿ ಮಹಿಳೆಯರು ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಸುಲಭವಾಗಿ ಮಾಡಬಹುದು. ಮೊದಲೇ ಹೇಳಿದಂತೆ ಯಾವ ಕೆಲಸಗಳಿಂದ ದೈಹಿಕವಾಗಿ ಮಗುವಿನ ಮೇಲೆ ಒತ್ತಡ ಉಂಟು ಮಾಡುವ ಅನುಭವ ಆಗುತ್ತದೆ, ಅಂತಹ ಕೆಲಸಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಬೇಕು. ಒಂದೇ ಬಗೆಯ ಕೆಲಸಗಳನ್ನು ನಿರಂತರವಾಗಿ ಆಗಾಗ ಮಾಡುವುದು ಕೂಡ ದೇಹದಲ್ಲಿ ಒತ್ತಡಕ್ಕೆ ಸಂಬಂಧಪಟ್ಟ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಹಾಗಾಗಿ ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಇದು ಕೂಡ ತುಂಬಾ ಡೇಂಜರ್ ಎಂದು ಹೇಳಬಹುದು.

* ಇದಕ್ಕೆ ಉದಾಹರಣೆಯನ್ನು ನೋಡುವುದಾದರೆ, ಮನೆಯಲ್ಲಿರುವ ಫರ್ನಿಚರ್ ವಸ್ತುಗಳನ್ನು ದೂಡುವುದು, ಹೆಚ್ಚು ಭಾರ ಇರುವ ವಸ್ತುಗಳನ್ನು ಎತ್ತಲು ಮುಂದಾಗುವುದು, ತಲೆಯ ಭಾಗ ಅಥವಾ ಹೆಗಲ ಮೇಲೆ ಹೆಚ್ಚು ಭಾರವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಇತ್ಯಾದಿಗಳನ್ನು ಯಾವುದೇ ಕಾರಣಕ್ಕೂ ಪ್ರಯತ್ನ ಪಡಬಾರದು. ಇದರಿಂದ ಅವಧಿಗೆ ಮುನ್ನ ಹೆರಿಗೆಯಾಗುವ ಸಾಧ್ಯತೆಯ ಲಕ್ಷಣಗಳು ಕಂಡುಬರುತ್ತದೆ. ಜೊತೆಗೆ ದೇಹದ ರಕ್ತದ ಒತ್ತಡ ಕೂಡ ಹೆಚ್ಚಾಗುವ ಸಾಧ್ಯತೆಯಿದೆ.

* ಇನ್ನು ಗರ್ಭಾವಸ್ಥೆಯಲ್ಲಿ ಯಾವುದಾದರೂ ವಸ್ತುಗಳನ್ನು ಏಣಿ ಹಾಕಿ ಎತ್ತಿಕೊಳ್ಳಲು ಹೋಗುವುದು, ಸ್ಟೂಲ್ ಮೇಲೆ ನಿಂತುಕೊಳ್ಳುವುದು ತುಂಬಾ ಅಪಾಯಕಾರಿ. ಕೆಲವರಿಗೆ ತಲೆಸುತ್ತು ಬಂದು ಈ ಸಮಯದಲ್ಲಿ ತಮಗೆ ಹಾಗೂ ತಮ್ಮ ಮಗುವಿಗೆ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಕೆಲಸಗಳನ್ನು ಅಪ್ಪಿತಪ್ಪಿಯೂ ಕೂಡ ಮಾಡಲು ಹೋಗಬೇಡಿ.

* ಕುತ್ತಿಗೆಯನ್ನು ಹೆಚ್ಚು ಹೊತ್ತು ಮೇಲ್ಭಾಗಕ್ಕೆ ಎತ್ತಿ ಮಾಡುವ ಯಾವುದೇ ಕೆಲಸಗಳು ಕೂಡ ಈ ಸಂದರ್ಭದಲ್ಲಿ ಒಳ್ಳೆಯದಲ್ಲ. ಉದಾಹರಣೆಗೆ ಚಾವಣಿಯ ಧೂಳು ಸ್ವಚ್ಛ ಮಾಡುವುದು, ಫ್ಯಾನ್ ಕ್ಲೀನ್ ಮಾಡುವುದು, ಕರ್ಟನ್ ಗಳನ್ನು ಚೇಂಜ್ ಮಾಡುವುದು ಇತ್ಯಾದಿಗಳನ್ನು ಮನೆಯಲ್ಲಿರುವ ಬೇರೆಯವರಿಗೆ ಹೇಳಿ.

* ಇನ್ನು ಒಂದು ವೇಳೆ ನೀವು ಪ್ರಾಣಿ ಪ್ರಿಯರಾಗಿದ್ದು, ನಿಮ್ಮ ಮನೆಯಲ್ಲಿ ಅವುಗಳ ಮಲ ಮೂತ್ರವನ್ನು ಗರ್ಭಾವಸ್ಥೆಯ ಸಂದರ್ಭದಲ್ಲಿ ಸ್ವಚ್ಛ ಮಾಡಲು ಹೋಗಬೇಡಿ. ಏಕೆಂದರೆ ಇವುಗಳಲ್ಲಿ ಸೂಕ್ಷ್ಮ ಕಾರಕ ರೋಗಾಣುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವುಗಳಿಂದ ನಿಮ್ಮ ಆರೋಗ್ಯಕ್ಕೆ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಸಾಕಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ. ಈ ಕೆಲಸವನ್ನು ಸಹ ನೀವು ಬೇರೆಯವರಿಗೆ ಹೇಳಬಹುದು. ಒಂದು ವೇಳೆ ನೀವು ಅನಿವಾರ್ಯವಾಗಿ ಸ್ವಚ್ಛ ಮಾಡುವ ಪರಿಸ್ಥಿತಿ ಬಂದಾಗ ನಿಮ್ಮ ಕೈಗಳಿಗೆ ಕೈಗವಸುಗಳನ್ನು ಹಾಕಿಕೊಂಡು ಸ್ವಚ್ಛ ಮಾಡಲು ಮುಂದಾಗಿ. ನಂತರ ಕೈಗಳನ್ನು ಒಂದೆರಡು ಬಾರಿ ಸೋಪು ಹಾಕಿ ನೀರಿನಲ್ಲಿ ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಿ. ತುಂಬಾ ಉದ್ದನೆಯ ಉಗುರುಗಳನ್ನು ಈ ಸಮಯದಲ್ಲಿ ಬೆಳೆಸಲು ಹೋಗಬೇಡಿ. ಇದು ಕೈಗಳನ್ನು ಸ್ವಚ್ಛ ಮಾಡಿಕೊಳ್ಳಲು ಕಷ್ಟ ಆಗುವಂತೆ ಮಾಡಬಹುದು.

* ನಿಮ್ಮ ಮನೆಯ ಅಂಗಳದಲ್ಲಿ ಬೆಳೆದ ಯಾವುದೇ ಸೊಪ್ಪು ತರಕಾರಿಗಳನ್ನು ತಿನ್ನುವ ಮೊದಲು ಬಹಳಷ್ಟು ಸ್ವಚ್ಛ ಮಾಡಿ ಆನಂತರ ಸೇವನೆ ಮಾಡಿ.

* ಮನೆಯಲ್ಲಿ ಬಳಸುವ ಕೀಟನಾಶಕಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು. ಜಿರಲೆ, ಇರುವೆ, ಪಲ್ಲಿ ಇತ್ಯಾದಿಗಳ ನಿವಾರಣೆಗೆ ಬಳಸುವ ಉತ್ಪನ್ನಗಳು ಅಷ್ಟೇನೂ ಹಾನಿಕಾರಕ ಎನಿಸದಿದ್ದರೂ ಅವುಗಳಿಂದ ದೂರವೇ ಉಳಿಯಬೇಕು. ವಿಷಕಾರಿ ಅಂಶಗಳನ್ನು ಒಳಗೊಂಡ ರಾಸಾಯನಿಕ ಸ್ಪ್ರೇ ಗಳನ್ನು ಬಳಕೆ ಮಾಡಲೇಬೇಡಿ. ಇವುಗಳು ಸಹ ನಿಮ್ಮ ಆರೋಗ್ಯಕ್ಕೆ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ತುಂಬಾ ಮಾರಕವಾದ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ.

* ಒಂದು ವೇಳೆ ನಿಮ್ಮ ಮನೆಯನ್ನು ಪೇಂಟ್ ಮಾಡಿಸಬೇಕು ಎಂದುಕೊಂಡರೆ, ನೀವು ನಿಮಗೆ ಡೆಲಿವರಿ ಆಗುವವರೆಗೆ ಸ್ವಲ್ಪ ತಾಳ್ಮೆಯಿಂದ ಕಾಯುವುದು ಒಳ್ಳೆಯದು. ಏಕೆಂದರೆ ಗೋಡೆಗೆ ಹಚ್ಚಿದ ಪೇಂಟ್ ಸಂಪೂರ್ಣವಾಗಿ ಒಣಗುವವರೆಗೆ ತನ್ನ ರಾಸಾಯನಿಕ ಅಂಶಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದು ನಿಮ್ಮ ಉಸಿರಾಟದ ಮೂಲಕ ನಿಮ್ಮ ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದು ವೇಳೆ ನೀವು ಪೇಂಟ್ ಮಾಡಿಸಲೇಬೇಕು ಎಂದುಕೊಂಡರೆ, ನೀವು ಬೇರೆಡೆಗೆ ಶಿಫ್ಟ್ ಆಗುವುದು ಒಳ್ಳೆಯದು.

* ನೋಡಿದಿರಲ್ಲ! ಒಬ್ಬ ಗರ್ಭಿಣಿ ಮಹಿಳೆಯಾಗಿ ನಿಮ್ಮ ಹುಟ್ಟುವ ಮಗುವಿನ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಮನೆಯ ಸಂಸಾರದ ಜವಾಬ್ದಾರಿ ಕೂಡ ನಿಮ್ಮ ಹೆಗಲೇರಿರುತ್ತದೆ. ಎರಡನ್ನು ಸಮತೋಲನವಾಗಿ ನಿರ್ವಹಿಸುವ ಕಾರ್ಯಚಟುವಟಿಕೆ ನಿಮ್ಮದಾಗಬೇಕು. ನಿಮ್ಮ ಆರೋಗ್ಯವನ್ನು ಅಚ್ಚುಕಟ್ಟಾಗಿ ರಕ್ಷಿಸಿಕೊಂಡು ದೇಹಕ್ಕೆ ಸಣ್ಣಪುಟ್ಟ ಮನೆ ಕೆಲಸಗಳ ಮೂಲಕ ಆರಾಮದಾಯಕ ವ್ಯಾಯಾಮವನ್ನು ಒದಗಿಸಿ ಆರೋಗ್ಯಕರವಾದ ಜೀವನಶೈಲಿಯನ್ನು ರೂಡಿ ಮಾಡಿಕೊಳ್ಳಿ.

English summary

Household Work During Pregnancy – What to Do and What to Avoid In Kannada

here we are going to tell you Household Work During Pregnancy – What to Do and What to Avoid In Kannada. Read more.
X
Desktop Bottom Promotion