For Quick Alerts
ALLOW NOTIFICATIONS  
For Daily Alerts

Ugadi Rashi Bhavishya 2021: ಪ್ಲವ ನಾಮ ಸಂವತ್ಸರದ ದ್ವಾದಶ ರಾಶಿಗಳ ರಾಶಿಫಲ

|

ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಎಂದರೆ ಅದು ಯುಗಾದಿ. ಸಂಕ್ರಾಂತಿಯ ನಂತರದ ಮೊದಲ ಅಮವಾಸ್ಯೆ ಮುಗಿದು ಹೊಸ ಚಂದ್ರ ಮೂಡುವ ದಿನವನ್ನು ಯುಗಾದಿ ಎಂದು ಆಚರಿಸಲಾಗುವುದು. 2021ರಲ್ಲಿ ಯುಗಾದಿಯನ್ನು ಏಪ್ರಿಲ್‌ 13ರಂದು ಆಚರಿಸಲಾಗುತ್ತಿದೆ.

Ugadi Bhavishya 2021

ಏಪ್ರಿಲ್ 13ಕ್ಕೆ ಶಾರ್ವರಿ ನಾಮ ಸಂವತ್ಸರ ಕಳೆದು ಪ್ಲವ ನಾಮ ಸಂವತ್ಸರ ಆರಂಭವಾಗುವುದು. ಜ್ಯೋತಿಷ್ಯದಲ್ಲಿ ಪಂಚಾಂಗ ನೋಡಿ ಹೊಸ ವರ್ಷ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಪಂಚಾಂಗದ ಪ್ರಕಾರ ಯುಗಾದಿ ಭವಿಷ್ಯ ಹೇಗಿದೆ ಎಂದು ನೋಡೋಣ:

ಮೊದಲಿಗೆ ಎಲ್ಲರಿಗೂ ಪ್ಲವ ನಾಮ ಸಂವತ್ಸರದ ಶುಭಾಶಯಗಳು:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯೆಂದರೆ ಧೈರ್ಯ, ಸಾಹಸ ಎಲ್ಲರ ಜೊತೆ ಬೆರೆಯುವ ಗುಣವಿರುತ್ತದೆ, ಈ ವರ್ಷದ ಪ್ರಥಮದಲ್ಲಿ ಲಗ್ನಾಧಿಪತಿಯಾದ ಅಂಗಾರಕ ನಿಮ್ಮ ರಾಶಿಯ ಎರಡನೇ ಮನೆಯಲ್ಲಿ ರಾಹು ಜೊತೆ ಸೇರುವುದರಿಂದ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಚಂದ್ರ-ಬುಧ ಯೋಗವಿರುವುದರಿಂದ ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತವೆ. ಮೇಷ ರಾಶಿಯವರಿಗೆ ಸರ್ಕಾರಿ ಉದ್ಯೋಗ, ಆಸ್ತಿ ಗಳಿಸಲು ಎಲ್ಲದಕ್ಕೂ ಪರಿಸ್ಥಿತಿ ಅನುಕೂಲಕರವಾಗಿದೆ. ರಾಹು ಎರಡನೇ ಮನೆಯಲ್ಲಿದ್ದು ಕೇತು ಎಂಟನೇ ಮನೆಯಲ್ಲಿ ಈ ವರ್ಷ ಪ್ರಾರಂಭದಲ್ಲಿ ಇರುವುದರಿಂದ ವರ್ಷದ ಆರಂಭದಲ್ಲಿ ವಾಹನದಲ್ಲಿ ಪ್ರಯಾಣ ಮಾಡುವಾಗ ಎಚ್ಚರವಾಗಿರಬೇಕು, ಗಣೇಶನ ಪ್ರಾರ್ಥನೆ ಮಾಡಿ. ನಿಮ್ಮ ಭಾಗ್ಯಾಧಿಪತಿಯಾಗಿರುವ ಬೃಹಸ್ಮತಿ ಹತ್ತನೇ ಮನೆಯಲ್ಲಿ ಶನೀಶ್ವರ ಜೊತೆ ಇರುವುದರಿಂದ ಪ್ರಾರಂಭದ ಈ ಸಮಯದಲ್ಲಿ ಸ್ವಲ್ಪ ಕಷ್ಟವಾಗುವುದು. ನವೆಂಬರ್‌ 23ರ ಬಳಿಕ ನಿಮ್ಮ ರಾಶಿಯ 11ನೇ ಮನೆಗೆ ಬೃಹಸ್ಪತಿ ಬರುತ್ತದೆ ಆಗ ಸಾಕಷ್ಟು ಲಾಭ ಗಳಿಸುವಿರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಲಾಭವಾಗುವುದು. ರಾಜಕೀಯ, ಉದ್ಯೋಗ, ವ್ಯಾಪಾರ , ವಿದ್ಯಾಭ್ಯಾಸ ಹೀಗೆ ಎಲ್ಲವುದಕ್ಕೂ ಈ ವರ್ಷ ಒಳ್ಳೆಯದಿದೆ.

ನೀವು ಮಾಡುವ ಕಾರ್ಯದಲ್ಲಿ ಯಶಸ್ಸು ದೊರೆಯಲು ಸಿಂಧೂರ ಗಣಪತಿಗೆ ಗರಿಕೆ ಅರ್ಪಿಸಿ.

* ನಿಮ್ಮ ರಾಶಿಗೆ ಹೊಂದುವ ಹರಳು ಅಥವಾ ರತ್ನ ಧರಿಸಿ.

* ಸುಬ್ರಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ.

ವೃಷಭ ರಾಶಿ

ವೃಷಭ ರಾಶಿ

ನಿಮ್ಮ ಲಗ್ನದಲ್ಲಿ ರಾಹು ಮತ್ತು ಮಂಗಳ ಇರುವುದರಿಂದ ದೂರ ಪ್ರಯಾಣ ಮಾಡುವಾಗ ಎಚ್ಚರವಾಗಿರಬೇಕು. ಇನ್ನು ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಾಗಿರಬೇಕು. ಏಳನೇ ಮನೆಯಲ್ಲಿ ಕೇತು ಇರುವುದರಿಂದ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವಾಗ ತುಂಬಾ ಎಚ್ಚರವಾಗಿರಬೇಕು. ಬುಧ ಹತ್ತನೇಯ ಮನೆಯಲ್ಲಿ ಸೂರ್ಯನ ಜೊತೆ ಇರುವುದರಿಂದ ಆದಿತ್ಯ ಯೋಗವಿದೆ. ಮೊದಲನೇ ಭಾಗದಲ್ಲಿ ಸ್ವಲ್ಪ ಕಷ್ಟ ಎದುರಾದರೂ ನಂತರ ಉತ್ತಮ ಫಲ ಅನುಭವಿಸುವಿರಿ. ಶುಕ್ರವಾರ ಮುತ್ತೈದೆಯರಿಗೆ ತಾಂಬೂಲ ನೀಡಿ. ಬಟ್ಟೆ ವ್ಯಾಪಾರ ಮಾಡುವವರಿಗೆ ಒಳ್ಳೆಯದು. ಶ್ರಾವಣ, ಭಾದ್ರಪದ ಮಾಸದಲ್ಲಿ ಉನ್ನತಿ ಕಾಣುವಿರಿ. ನೀವು ಲಕ್ಷ್ಮೀ ನಾರಾಯಣನನ್ನು ಆರಾಧನೆ ಮಾಡಿ.

ಮಿಥುನ ರಾಶಿ

ಮಿಥುನ ರಾಶಿ

ಈ ವರ್ಷದಲ್ಲಿ ನಿಮ್ಮ ರಾಶಿಯಾಧಿಪತಿಯಾದ ಬುಧ ನಿಮ್ಮ 10ನೇ ಮನೆಯಲ್ಲಿ ಇರುವುದರಿಂದ ಅದೇ ಮನೆಯಲ್ಲಿ ಸೂರ್ಯನು ಇರುವುದರಿಂದ ಆದಿತ್ಯ-ಬುಧ ಯೋಗ ಇರುತ್ತದೆ. ಅದರ ಜೊತೆಗೆ ಚಂದ್ರ ಮತ್ತು ಶುಕ್ರ ಇರುವುದರಿಂದ ಆಸ್ತಿ, ಹಣ ಎಲ್ಲವೂ ಇರುತ್ತದೆ. ಆದರೆ 12ನೇ ಮನೆಯಲ್ಲಿ ರಾಹು 6ನೇ ಮನೆಯಲ್ಲಿ ಕೇತು ಇರುವುದರಿಂದ ಸ್ವಲ್ಪ ಅಡೆತಡೆ ಇರಬಹುದು. ಇದರ ನಿವಾರಣೆಗೆ ಆಶ್ಲೇಷ ಬಲಿ, ರಾಹು-ಕೇತು ಶಾಂತಿ ಮಾಡಿಸಿ. ಈ ವರ್ಷದಲ್ಲಿ ಕರ್ಮಾಧಿಯಾದ ಶನೀಶ್ವರನಿಂದ ಒಳ್ಳೆಯ ಫಲವೇ ಇದೆ. ಗುರುವಿನ ಫಲ ಕಡಿಮೆ ಇರುವುದರಿಂದ ಮಕ್ಕಳಿಗೆ ಕಬ್ಬಿನ ಹಾಲು, ಗುರುವಾರ ಬಿಳಿ ಬಟ್ಟೆಯನ್ನು ಧರಿಸುವುದರಿಂದ ಚಂದ್ರ-ಗುರು ಯೋಗ ಲಭಿಸುವುದು, ನೀವು ಸಾಕಷ್ಟು ಉನ್ನತ್ತಿ ಹೊಂದುತ್ತೀರಿ. ಗುರುವಿನ ಅನುಗ್ರಹಕ್ಕಾಗಿ ಬಡ ಮಕ್ಕಳಿಗೆ ಬುಕ್, ಪೆನ್ನು ಇಂಥವುಗಳನ್ನು ದಾನ ಮಾಡಿ. ಏಕಾದಶಿಯಂದು ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ. ವಿದೇಶಕ್ಕೆ ಹೋಗುವುದಾದರೆ ಈ ಸಂವತ್ಸರದ ಎರಡನೇ ಭಾಗದಲ್ಲಿ ಪ್ರಯತ್ನ ಮಾಡಿ. ಮಿಥುನ ರಾಶಿಯವರು ಎಲ್ಲಾ ರಂಗದಲ್ಲೂ ಯಶಸ್ವಿ ಕಾಣಬಹುದು.

ಕರ್ಕ ರಾಶಿ

ಕರ್ಕ ರಾಶಿ

ಈ ರಾಶಿಯ ಅಧಿಪತಿ ಚಂದ್ರ ಶುಕ್ರನ ಜೊತೆ ಮೇಷರಾಶಿಯಲ್ಲಿ ಇರುವುದರಿಂದ ಚಂದ್ರ-ಶುಕ್ರ ಫಲ ಸಿಗುತ್ತದೆ. ದ್ರವ ಪದಾರ್ಥ ವ್ಯಾಪಾರ ಮಾಡುವವರು ಜಾಗ್ರತರಾಗಿರುವುದು ಉತ್ತಮ. ನಿಮಗೆ ಈ ವರ್ಷ ಆದಿತ್ಯ ಬಲ ಯೋಗ ಇರುವುದರಿಂದ ಆಸ್ತಿ ಕೊಳ್ಳಬಹುದು, ವ್ಯಾಪಾರಕ್ಕಾಗಿ ಹೊರ ರಾಷ್ಟ್ರಕ್ಕೆ ಹೋಗಿ ಲಾಭ ಗಳಿಸಬಹುದು. ಸಂತಾನ ಅಪೇಕ್ಷಿತರು ನಿರೀಕ್ಷಿತ ಫಲ ಪಡೆಯಲು ಋಣ ವಿಮೋಚನ ಗಣಪತಿ ಹೋಮ ಮಾಡಿಸಿ. ನಾಲ್ಕು ಗ್ರಹಗಳೂ ಉತ್ತಮ ಸ್ಥಾನದಲ್ಲಿ ಇರುವುದರಿಂದ ರಾಜಯೋಗ ಅನುಭವಿಸುವಿರಿ. ಅವಾಹಿತರಿಗೆ ಒಳ್ಳೆಯ ಬಾಳ ಸಂಗಾತಿ ಸಿಗುವರು. ಒಟ್ಟಿನಲ್ಲಿ ಈ ವರ್ಷ ಸಾಕಷ್ಟು ಒಳ್ಳೆಯದಿದೆ. ಅದೃಷ್ಟ ಬಣ್ಣ ಬಿಳಿ, ಹಳದಿ, ಕೆಂಪು

ನೀರು, ಪಾನಕ ದಾನ ಮಾಡಿ. ರಾಮನವಮಿ ಮತ್ತಿತರ ಶುಭ ದಿನದಂದು ದಾನ ಮಾಡಿ.

ಸಿಂಹ ರಾಶಿ

ಸಿಂಹ ರಾಶಿ

ಸೂರ್ಯನ ಅಧಿಪತಿಯಾಗಿರುವ ರಾಶಿ ಸಿಂಹರಾಶಿ. ಸೂರ್ಯ ಪ್ರಾರಂಭದಲ್ಲಿ ಮೀನ ರಾಶಿಯಲ್ಲಿ ಇದ್ದರೂ ಎರಡನೇ ಮನೆಯಂದು ಕರೆಯಲ್ಪಡುವ ಮೇಷ ರಾಶಿಯಲ್ಲಿ ಹಬ್ಬದ ಮೂರನೇ ದಿನ ಬರುವುದರಿಂದ ನಿಮಗೆ ಆದಿತ್ಯ ಬಲ ಯೋಗವಿದೆ. ಈ ವರ್ಷ ಗುರುವಿನ ಸ್ಥಾನ ಉತ್ತಮವಾಗಿಲ್ಲ, ಆದ್ದರಿಂದ ಪಿತೃರಿಗೆ ಮಾಡಬೇಕಾದ ಕಾರ್ಯಗಳನ್ನು ತಪ್ಪದೇ ಮಾಡಿ, ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುದು. ಮನೆಯಲ್ಲಿರುವ ಅಡೆತಡೆಗಳಿದ್ದರೆ ಗಣಪತಿ ಹೋಮ ಮಾಡಿಸಿ. ಹತ್ತನೇಯ ಮನೆಯಲ್ಲಿ ರಾಹು ಇರುವುದರಿಂದ ಎಲ್ಲಾ ಕ್ಷೇತ್ರದಲ್ಲಿ ಉನ್ನತ್ತಿಯನ್ನು ಅನುಭವಿಸುವಿರಿ. ಆರನೇಯ ಮನೆಯಲ್ಲಿ ಶನಿ ಮತ್ತು ಗುರು ಇರುವುದರಿಂದ ಕಾರಗೃಹ ವಾಸ ಯೋಗವಿದೆ, ಇಂಥ ಸಂದರ್ಭದಲ್ಲಿಗರುಡನ ದೇವಾಲಯಕ್ಕೆ ಪೂಜೆ ಸಲ್ಲಿಸಿದರೆ ಒಳಿತಾಗುವುದು. ಮೊದಲ 5 ತಿಂಗಳು ಸಾಕಷ್ಟು ಉನ್ನತ್ತಿಯನ್ನು ನೀಡುತ್ತದೆ. ಉನ್ನತ ಸ್ಥಾನ ಸಿಗುವುದು. ಸಿಂಹ ರಾಶಿಯ ರಾಜಕಾರಣಿಗಳಿಗೂ ಒಳ್ಳೆಯದಿದೆ. ನಿಮಗೆ ಕೇಸರಿ ಶುಭ ಬಣ್ಣವಾಗಿದೆ. ತಿಂಗಳಿನಲ್ಲಿ ಪುಬ್ಬ ನಕ್ಷತ್ರದಂದು ಮೊಸರನ್ನು ದಾನ ಮಾಡಿ ಹಾಗೂ ಮೊಸರನ್ನು ಸೇವಿಸಿ. ಇದರಿಂದ ಮನಸ್ಸಿಗೆ ಶಾಂತಿ ಸಿಗುವುದು, ಧನ ವೃದ್ಧಿ ಉಂಟಾಗುವುದು. ಗಣಪತಿಗೆ ಪೂಜೆ ಸಲ್ಲಿಸಿ.

 ಕನ್ಯಾ ರಾಶಿ

ಕನ್ಯಾ ರಾಶಿ

ವರ್ಷ ಪ್ರಾರಂಭದಲ್ಲಿ ಸೂರ್ಯ ಮತ್ತು ಬುಧ ಜೊತೆಗೆ ಇರುವುದರಿಂದ ಆದಿತ್ಯ ಬಲ ಯೋಗವಿದೆ. ವರ್ಷ ಪ್ರಾರಂಭವಾಗಿ ಒಂದು ತಿಂಗಳಿಗೆ ಅಷ್ಟಮ ಸ್ಥಾನಕ್ಕೆ ಅಂದ್ರೆ ಮೇಷ ರಾಶಿಗೆ ಸೂರ್ಯ ಬರುವುದರಿಂದ ವಾಹನಗಳ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರಬೇಕಾಗುತ್ತದೆ. ತೆರಿಗೆ ಇತ್ಯಾದಿ ವಿಷಯಗಳಿಗೆ ಹಣ ನಷ್ಟವಾಗುವುದು. ಕೇತು ಮೂರನೇಯ ಮನೆಯಲ್ಲಿ ಇರುವುದರಿಂದ ಫುಡ್‌ ಪಾಯಿಸನ್ ಆಗಬಹುದು, ಆದ್ದರಿಂದ ಹೊರಗಿನ ಆಹಾರ ಸೇವಿಸಲು ಹೋಗಬೇಡಿ. ಅಷ್ಟಾಮಧಿತಿ ಜೊತೆ ರಾಹು ಸೇರುವುದರಿಂದ ಶ್ವಾಸಕೋಶದ ರೋಗ ಬರಬಹುದು. ರಿಯಲ್‌ ಎಸ್ಟೇಟ್‌ ದಾಖಲೆಯಲ್ಲಿ ಸ್ವಲ್ಪ ಜಾಗ್ರತೆವಹಿಸಿ. ಜೂನ್‌ನಿಂದ-ನವೆಂಬರ್‌ವರೆಗೆ ಸಮಯ ಅನುಕೂಲಕರವಾಗಿದೆ. ಬುಧವಾರ ಗರಿಕೆ ಹುಲ್ಲನ್ನು ಗಣಪತಿಗೆ ಅರ್ಪಿಸಿ. ನಿಮಗೆ ತೆಳು ಹಸಿರು ಶುಭ ಬಣ್ಣವಾಗಿದೆ. 5 ಶುಭ ಸಂಖ್ಯೆಯಾಗಿದೆ.

 ತುಲಾ ರಾಶಿ

ತುಲಾ ರಾಶಿ

ನಿಮ್ಮ ರಾಶಿಯಾಧಿಪತಿ ಶುಕ್ರ ಸಪ್ತಮ ಸ್ಥಾನದಲ್ಲಿ ಚಂದ್ರನ ಜೊತೆ ಇರುವುದರಿಂದ ಚಂದ್ರ-ಶುಕ್ರ ಯೋಗದಿಂದ ವಾಹನ ಕೊಳ್ಳಬಹುದು. ಆದರೆ ಎರಡನೇ ಮನೆಯಲ್ಲಿ ಕೇತು ಇರುವುದರಿಂದ ಹೃದಯ ಹಾಗೂ ಶಿರಸ್ಸು ರೋಗ ಬರಬಹುದು, ವಾಹನದಲ್ಲಿ ಹೋಗುವಾಗ ಜಾಗ್ರತೆವಹಿಸಬೇಕು. ನೀವು ಮಹಾವಿಷ್ಣುವನ್ನು ಪೂಜಿಸಿ. ವರ್ಷದ ಪ್ರಾರಂಭದಲ್ಲಿ ಮಿಶ್ರ ಫಲ ಇದ್ದರೂ ಎರಡನೇ ಭಾಗದಲ್ಲಿ ಒಳ್ಳೆಯ ಫಲ ಅನುಭವಿಸುವಿರಿ. ಅಷ್ಟಮ ಸ್ಥಾನದಲ್ಲಿರುವ ರಾಹು ಮತ್ತು ಎರಡನೇ ಸ್ಥಾನದಲ್ಲಿರುವ ಕೇತುವಿಗೆ ಸರ್ಪ ಶಾಂತಿ ಮಾಡಿಸುವುದು, ದುರ್ಗಾ ದೇವಿ ಪೂಜೆ ಮಾಡುವುದು ಒಳ್ಳೆಯದು. ನಿಮಗೆ ಬಿಳಿ ಅಥವಾ ಕ್ರೀಮ್ ಬಣ್ಣ ಅದೃಷ್ಟದ ಬಣ್ಣವಾಗಿದೆ. ಹಾಲು, ಅರಿಶಿಣ, ಏಲಕ್ಕಿ, ಪನ್ನೀರು, ಕುಂಕುಮ, ಹೂ ಈ ರೀತಿಯ ಮಂಗಳ ದ್ರವ್ಯವನ್ನು ದಂಪತಿ ಸಹ ಅಂದ್ರೆ ಶಿವ-ಪಾರ್ವತಿ ಇರುವ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ. ಅಷ್ಟಮ ಸ್ಥಾನದಲ್ಲಿ ರಾಹು ಇರುವುದರಿಂದ ಸರ್ಪ ಶಾಂತಿ ಮಾಡಿಸಬೇಕು. ಆರು ನಿಮ್ಮ ಅದೃಷ್ಟ ಸಂಖ್ಯೆಯಾಗಿದೆ. ಶುಕ್ರವಾರ ಮೊಸರನ್ನ ದಾನ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಈ ವರ್ಷದಲ್ಲಿ ನಿಮ್ಮ ಲಗ್ನದಲ್ಲಿಯೇ ಕೇತು ಇರುವುದರಿಂದ ಸ್ವಲ್ಪ ಅಡೆತಡೆಗಳು ಉಂಟಾಗುವುದು. ಆಷಾಢ ಕಳೆದ ಮೇಲೆ ಸ್ವಲ್ಪ ಕಷ್ಟದ ಪರಿಸ್ಥಿತಿ ಇರುವುದರಿಂದ ಆಂಜನೇಯನನ್ನು ಪೂಜಿಸುವುದರಿಂದ ಸಾಕಷ್ಟು ಒಳ್ಳೆಯ ಫಲಿತಾಂಶ ಸಿಗುತ್ತದೆ. ಕೆಮಿಕಲ್ಸ್ ವ್ಯಾಪಾರ ಮಾಡುವವರು ಸ್ವಲ್ಪ ಹುಷಾರಾಗಿರಬೇಕು. ಕೇತು ಅಡೆತಡೆ ಇದ್ದರೂ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಅವುಗಳು ನೀಗುವುದು. ಕೆಂಪು ಹವಳ ಧರಿಸಿ. ಒಂಭತ್ತು ಅದೃಷ್ಟದ ಸಂಖ್ಯೆಯಾಗಿದೆ.

ಧನು ರಾಶಿ

ಧನು ರಾಶಿ

ನಿಮ್ಮ ರಾಶಿಯ ದ್ವಾದಶಿ ಸ್ಥಾನದಲ್ಲಿ ಕೇತು ಅಷ್ಟಮ ಸ್ಥಾನದಲ್ಲಿ ರಾಹು ಇರುವುದರಿಂದ ಆತಂಕ, ವಿಘ್ನಗಳು ಎದುರಾಗಬಹುದು. ಪ್ರಯಾಣ ಮಾಡುವಾಗ ಎಚ್ಚರ. ಜೂಜು ಇವುಗಳಿಂದ ದೂರವಿರಿ. ಹಿರಿಯರ ಸಲಹೆ ಪಾಲಿಸಿ, ಗೋ ಸೇವೆ ಮಾಡಿ. ವಿದ್ಯಾರ್ಥಿಗಳು ಸಾಧನೆ ಮಾಡುವಿರಿ. ಮಕ್ಕಳಿಗೆ ಪಠ್ಯದ ಪರಿಕರ ದಾನ ನೀಡಿ. ಅಂಗವಿಕಲರಿಗೆ ಸಹಾಯ ಮಾಡಿ. ಗುರುವಾರ ಸಿಹಿ ಪದಾರ್ಥಗಳಿಂದ ನೈವೇದ್ಯ ಮಾಡಿ. ಶನಿವಾರ ಶನಿ ದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆ ನೀಡಿ.

ಅದೃಷ್ಟದ ಬಣ್ಣ: ಹಳದಿ

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಹನ್ನೊಂದರಲ್ಲಿ ಕೇತು, ಐದನೇ ಸ್ಥಾನದಲ್ಲಿ ರಾಹು, ಲಗ್ನದಲ್ಲಿ ಗುರು-ಶನಿ ಇರುವುದರಿಂದ ನಿಮಗೆ ಶನಿ ಉನ್ನತ್ತಿ ಸ್ಥಾನ ನೀಡುತ್ತದೆ, ಕೇತುವಿನಿಂದ ಅಡೆತಡೆ ಉಂಟಾಗಬಹುದು, ಇದರ ನಿವಾರಣೆಗೆ ಕೇತು ಜಪ, ಗಣಪತಿಗೆ ಸಹಸ್ರ ಮೋದಕ ಅರ್ಪಿಸುವುದು, ಆಂಜನೇಯ ಪೂಜೆ ಮಾಡುವುದು ಇವುಗಳಿಂದ ಉತ್ತಮ ಫಲ ಸಿಗುವುದು. ರಾಜಕೀಯ-ವ್ಯಾಪಾರಗಳಲ್ಲಿ ಅಡೆತಡೆ ಉಂಟಾಗುವುದು, ಇದನ್ನು ತಡೆಯಲು ಮಹಾಗಣಪತಿ ಹೋಮ ಮಾಡಿಸಿ. ನೀ ರತ್ನ ಬಳಸಿ, ನೀಲ ವಸ್ತ್ರ ದಾನ ಮಾಡಿ, ಎಳ್ಳನ್ನು ನಿಮ್ಮ ಆಹಾರದಲ್ಲಿ ಬಳಸಿ, ಎಳ್ಳನ್ನು ದಾನ ಮಾಡಿ.

ಅದೃಷ್ಟ ಸಂಖ್ಯೆ: 19, 7

ಕುಂಭ ರಾಶಿ

ಕುಂಭ ರಾಶಿ

ಈ ವರ್ಷದಲ್ಲಿ ನಿಮಗೆ ಹನ್ನೆರಡನೇಯ ಮನೆಯಲ್ಲಿ ಶನಿ, ರಾಹು ಇರುವುದರಿಂದ ಪ್ರಾರಂಭದಲ್ಲಿ ಅನಾನುಕೂಲ ಉಂಟಾಗುವುದು, ಸಾಡೇಸಾತಿಯಿಂದಾಗಿ ನಷ್ಟ ಅನುಭವಿಸಬಹುದು. ಲಗ್ನದ ಹತ್ತನೇಯ ಮನೆಯಲ್ಲಿ ಕೇತು ಇದ್ದು ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ಹೊಸ ಮನೆ ಅಥವಾ ಮನೆ ನವೀಕರಣ ಮಾಡಬಹುದು. ಸರ್ಪ ದೇವತೆಯ ಆರಾಧನೆ ಮಾಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಶ್ವಾಸಕೋಶ, ಮಂಡಿಯ ಸಮಸ್ಯೆ ಇರಬಹುದು, ವೈದ್ಯರ ಸಲಹೆಯನ್ನು ಪಾಲಿಸಿ. ಕಾನೂನು ವಿಚಾರದಲ್ಲಿ ಎಚ್ಚರವಾಗಿರಬೇಕು. ಮೂಕಾಂಬಿಕ ದೇವೆಯ ಆರಾಧನೆ ಮಾಡಿ. ನೀಲಿ ವಸ್ತ್ರ ಹಾಗೂ ಎಳ್ಳನ್ನು ದಾನ ಮಾಡಿ, ವೃದ್ಧರಿಗೆ ಆಹಾರ ನೀಡಿ. ಇದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುವುದು.

ಮೀನ ರಾಶಿ

ಮೀನ ರಾಶಿ

ನಿಮ್ಮ ರಾಶಿಯಾಧಿಪತಿ ಬೃಹಸ್ಪತಿ ಏಕಾದಶಿ ಸ್ಥಾನದಲ್ಲಿ ಇರುವುದರಿಂದ ಎಲ್ಲಾ ವಿಧದಲ್ಲೂ ಒಳಿತಾಗುವುದು. ಆದರೆ ನಿಮ್ಮ ರಾಶಿಯ ಮೂರನೇಯ ಮನೆಯಲ್ಲಿ ರಾಹು ಹಾಗೂ ಒಂಭತ್ತನೇ ಮನೆಯಲ್ಲಿ ಕೇತು ಇರುವುದರಿಂದ ಸ್ವಲ್ಪ ಪ್ರತಿಕೂಲ ಪರಿಸ್ಥಿತಿ ಇರಬಹುದು, ಗಣಪತಿ ಹಾಗೂ ವಿಷ್ಣುವನ್ನು ಆರಾಧಿಸಿ. ಎಲ್ಲಾ ರಂಗದಲ್ಲೂ ಜಯ ಪಡೆಯುವಿರಿ. ನಿಮ್ಮ ಅದೃಷ್ಟದ ಸಂಖ್ಯೆ 3, ಅದೃಷ್ಟದ ಬಣ್ಣ ಎಂದರೆ ಹಳದಿ. ನಿಮಿಷಾಂಭೆ ದೇವಿಯ ದರ್ಶನ ಪಡೆಯಿರಿ.

English summary

Ugadi Rashi Bhavishya 2021: Plava Nama Samvatsara Ugadi Horsocope Predictions 2021-22 in Kannada

Here is the plava nama samvatsara ugadi rashi bhavishya predictions for 2021-22 in kannada. Read on.
X
Desktop Bottom Promotion