For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ವ್ರತ 2021: ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆ, ಪೂಜಾ ವಿಧಿ ವಿಧಾನ

By Lekhaka
|

ಭಾರತದ ದಕ್ಷಿಣದ ಭಾಗಗಳಲ್ಲಿ ಹೆಚ್ಚು ವಿಜೃಂಭಣೆಯಿಂದ ನಡೆಸುವ ವರಮಹಾಲಕ್ಷ್ಮಿ ಪೂಜೆಯನ್ನು ಉತ್ತರದ ಭಾಗಗಳಲ್ಲಿ ಮಹಾಲಕ್ಷ್ಮಿ ವ್ರತದ ಮೂಲಕ ಆಚರಿಸುತ್ತಾರೆ. ಎರಡೂ ಭಾಗಗಳಲ್ಲೂ ಒಂದೇ ದೇವರಾದ ಲಕ್ಷ್ಮಿಯನ್ನು ಕುಟುಂಬದ ಅಭ್ಯುದಯ ಮತ್ತು ಪ್ರಗತಿಗಾಗಿ ಪೂಜಿಸಲಾಗುತ್ತದೆ.

ಇಲ್ಲಿ ವರ ಎಂದರೆ ದೇವರ ಕೃಪಾಕಟಾಕ್ಷವಾಗಿದೆ. ಅಂದರೆ ವರವನ್ನು ನೀಡುವ ದೇವರು ವರಮಹಾಲಕ್ಷ್ಮಿಯಾಗಿದ್ದಾರೆ ಎಂಬುದು ನಂಬಿಕೆಯಾಗಿದೆ. ವರಮಹಾಲಕ್ಷ್ಮಿ ವ್ರತವನ್ನು ವಿವಾಹವಾದ ಮುತ್ತೈದೆಯರು ಕೈಗೊಳ್ಳುತ್ತಾರೆ. ವರಮಹಾಲಕ್ಷ್ಮಿ ವ್ರತವನ್ನು ಮಾಡುವುದು ಅಷ್ಟಲಕ್ಷ್ಮಿಯರ (ಎಂಟು ಲಕ್ಷ್ಮಿಯರು) ವ್ರತಕ್ಕೆ ಸಮನಾದುದು ಎಂಬುದು ಹಿಂದಿನಿಂದಲೂ ಬಂದ ನಂಬಿಕೆ.

ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಮತ್ತು ಶಕ್ತಿಯ ಎಂಟು ದೇವತೆಗಳನ್ನು ಪೂಜಿಸಿದ ಮಹತ್ವ ಪುಣ್ಯ ವರಮಹಾಲಕ್ಷ್ಮಿ ದೇವರನ್ನು ಪೂಜಿಸುವುದರಲ್ಲಿದೆ ಎಂದು ಹೇಳುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನಕ್ಕಿಂತ ಮೊದಲು ಶುಕ್ರವಾರದಂದು ಈ ವ್ರತವನ್ನು ಕೈಗೊಳ್ಳಲಾಗುತ್ತದೆ. 2021ನೇ ಸಾಲಿನಲ್ಲಿ ವರಮಹಾಲಕ್ಷ್ಮಿ ವ್ರತ ಆಗಸ್ಟ್ 20ರಂದು ಆಚರಿಸಲಾಗುತ್ತಿದೆ.

ವಿವಾಹವಾದ ಮಹಿಳೆಯರು ಹೆಚ್ಚು ಶ್ರದ್ಧೆ ಭಕ್ತಿಯಿಂದ ಈ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲೇ ಸ್ನಾನವನ್ನು ಮುಗಿಸಿ ದಿನದ ಅರ್ಧ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ. ಕುಟುಂಬ ಶಾಂತಿ ಸಮಾಧಾನಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಾರೆ. ಅಷ್ಟ ಲಕ್ಷ್ಮಿಯರ ಪೂಜೆಯನ್ನು ಮಾಡಿದಂತಹ ಪುಣ್ಯ ವರಮಹಾಲಕ್ಷ್ಮಿ ವ್ರತದಲ್ಲಿ ದೊರೆಯುವುದರಿಂದ ಶ್ರದ್ಧೆ ಭಕ್ತಿ ಪೂಜಿಸುವಾಗ ಇರಲೇಬೇಕು.

ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುವುದು ಹೇಗೆ?

ವರಮಹಾಲಕ್ಷ್ಮಿ ವ್ರತ ಮೂಲ

ವರಮಹಾಲಕ್ಷ್ಮಿ ವ್ರತ ಮೂಲ

ಪುರಾಣದ ಕಥೆಯಂತೆ ಸರ್ಮಾದಿ ಎಂಬ ಮಹಿಳೆಯ ಕನಸಿನಲ್ಲಿ ಲಕ್ಷ್ಮೀ ದೇವರು ಕಾಣಿಸಿಕೊಂಡು ನಿನ್ನ ಭಕ್ತಿಗೆ ನಾನು ಸಂಪ್ರೀತರಾಗಿದ್ದು ನನ್ನನು ಪೂಜಿಸುವಂತೆ ಹೇಳಿ ಅಪ್ರತ್ಯಕ್ಷಗೊಳ್ಳುತ್ತಾರೆ. ಕನಸಿನಲ್ಲಿ ದೇವರು ಹೇಳಿದಂತೆಯೇ ಸರ್ಮಾದಿಯು ಪ್ರಾತಃ ಕಾಲದಲ್ಲೇ ಎದ್ದು ಸ್ನಾನಾದಿಗಳನ್ನು ಪೂರೈಸಿ ದೇವರ ವ್ರತವನ್ನು ಮಾಡುತ್ತಾಳೆ. ಇದರಿಂದ ಆಕೆಗೆ ಶ್ರೀಮಂತಿಕೆ, ಸಮಾಧಾನ ಪ್ರಾಪ್ತವಾಗಿ ಆಕೆ ನೆಮ್ಮದಿಯ ಜೀವನ ನಡೆಸುತ್ತಾಳೆ. ಇದನ್ನು ಕೇಳಿದ ಹಳ್ಳಿಯ ಇನ್ನೊಬ್ಬ ಮಹಿಳೆ ಕೂಡ ವ್ರತವನ್ನು ಕೈಗೊಳ್ಳುತ್ತಾಳೆ, ಹೀಗೆ ವರಲಕ್ಷ್ಮೀ ವ್ರತಾಚರಣೆ ಪ್ರವರ್ಧಮಾನಕ್ಕೆ ಬಂದಿತು ಎಂಬುದು ಪ್ರತೀತಿ.

ಪ್ರಾತಃ ಕಾಲದ ಸ್ನಾನ

ಪ್ರಾತಃ ಕಾಲದ ಸ್ನಾನ

ಈ ಪೂಜೆಯನ್ನು ಸಾಮಾನ್ಯವಾಗಿ ಮಹಿಳೆಯರು ನಿರ್ವಹಿಸುತ್ತಾರೆ. ಆದ್ದರಿಂದ ಅವರು ಮುಂಜಾನೆಯೇ ಎದ್ದು, ಸ್ನಾನವನ್ನು ಪೂರ್ಣಗೊಳಿಸುತ್ತಾರೆ. ಸಾಂಪ್ರದಾಯಿಕವಾಗಿ ಅವರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನವನ್ನು ಮುಗಿಸಿ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ.

ರಂಗೋಲಿ

ರಂಗೋಲಿ

ಪೂಜಾ ಸ್ಥಳವನ್ನು ಶುದ್ಧಗೊಳಿಸಿದ ನಂತರ ಪೂಜಾ ಸ್ಥಳದಲ್ಲಿ ಸುಂದರವಾದ ರಂಗೋಲಿಯನ್ನು ಬಿಡಿಸುತ್ತಾರೆ. ಮನೆಯ ಮಧ್ಯಭಾಗಕ್ಕೆ ಸರಿಹೊಂದುವಂತೆ ರಂಗೋಲಿ ಇರಬೇಕು. ಇದು ಅದೃಷ್ಟವನ್ನು ತರುವ ಧನಲಕ್ಷ್ಮಿಗೆ ಸ್ವಾಗತವನ್ನು ಕೋರುವ ರೀತಿಯಾಗಿದೆ.

ಕಲಶ ಸಿದ್ಧಪಡಿಸುವುದು

ಕಲಶ ಸಿದ್ಧಪಡಿಸುವುದು

ಕಲಶವನ್ನು ಬೆಳ್ಳಿ ಅಥವಾ ಹಿತ್ತಾಳೆಯಿಂದ ತಯಾರಿಸಲಾಗುತ್ತದೆ. ಗಂಧದಿಂದ ಸ್ವಸ್ತಿಕ ಚಿಹ್ನೆಯನ್ನು ಕಲಶದ ಮೇಲೆ ಬರೆಯಲಾಗುತ್ತದೆ. ಅಕ್ಕಿ, ನೀರು, ನಾಣ್ಯ, ಪೂರ್ಣ ಲಿಂಬೆ, ಐದು ಪ್ರಕಾರದ ಎಲೆಗಳು, ಅಡಿಕೆಯನ್ನು ಕಲಶದಲ್ಲಿ ಇರಿಸುತ್ತಾರೆ. ಕೆಲವರು ಅರಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಳೆಗಳು ಕಪ್ಪು ಮಣಿಗಳನ್ನು ಇರಿಸುತ್ತಾರೆ. ನಂತರ ಅರಶಿನದ ಮಿಶ್ರಣವನ್ನು ತೆಂಗಿನ ಕಾಯಿಗೆ ಹಚ್ಚಿ ಕಲಶದ ಬಾಯಿಗೆ ಇರಿಸಲಾಗುತ್ತದೆ. ಎಲೆಯಿಂದ ಆವೃತವಾದ ಕುಂಭದ ಬಾಯಿಗೆ ತೆಂಗಿನಕಾಯಿಯನ್ನು ಇರಿಸುವುದು ವಾಡಿಕೆ. ನಂತರ ಇದರ ಮೇಲೆ ಲಕ್ಷ್ಮೀ ದೇವರ ಫೋಟೋವನ್ನಿಟ್ಟು ಪೂಜಿಸಲಾಗುತ್ತದೆ.

ಪೂಜೆಯನ್ನು ಪ್ರಾರಂಭಿಸುವುದು

ಪೂಜೆಯನ್ನು ಪ್ರಾರಂಭಿಸುವುದು

ಗಣೇಶನ ನಾಮವನ್ನು ಪ್ರಾರಂಭಿಸುವುದರೊಂದಿಗೆ ಪೂಜೆಯನ್ನು ಆರಂಭಿಸಲಾಗುತ್ತದೆ. ನಂತರ ಲಕ್ಷ್ಮಿ ಸ್ತ್ರೋತ್ರವನ್ನು ಪಠಿಸಲಾಗುತ್ತದೆ. ನಂತರ ದೇವಿಗೆ ಆರತಿಯನ್ನು ಬೆಳಗಿ ಪ್ರಸಾದವನ್ನು ಅರ್ಪಿಸಲಾಗುತ್ತದೆ. ಕೆಲವು ಮಹಿಳೆಯರು ದೇವಿಯ ಪ್ರಸಾದವೆಂದು ಹಳದಿ ದಾರವನ್ನು ಕೈಗಳಿಗೆ ಕಟ್ಟಿಕೊಳ್ಳುತ್ತಾರೆ. ಪೂಜೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಅಡಿಕೆ ವೀಳ್ಯದೆಲೆಯೊಂದಿಗೆ ತಾಂಬೂಲವನ್ನು ನೀಡಲಾಗುತ್ತದೆ. ನಂತರ ಅಕ್ಕಪಕ್ಕದಲ್ಲಿರುವ ಮಹಿಳೆಯರನ್ನು ಸಂಜೆಯ ಆರತಿಗೆ ಆಹ್ವಾನಿಸುತ್ತಾರೆ.

ಪೂಜೆಯನ್ನು ಮುಗಿಸುವುದು

ಪೂಜೆಯನ್ನು ಮುಗಿಸುವುದು

ಮುಂದಿನ ದಿನ, ಶನಿವಾರದಂದು ಸ್ನಾನವನ್ನು ಮುಗಿಸಿದ ನಂತರ ಕಲಶವನ್ನು ಕೆಡವಲಾಗುತ್ತದೆ ಮತ್ತು ಕಲಶದ ನೀರನ್ನು ಮನೆಯೊಳಗೆ ಪ್ರೋಕ್ಷಿಸಲಾಗುತ್ತದೆ. ನಂತರ ಅಕ್ಕಿಯನ್ನು ಅನ್ನ ತಯಾರಿಸಲು ಬಳಸುವ ಅಕ್ಕಿಯೊಂದಿಗೆ ಮಿಶ್ರ ಮಾಡಲಾಗುತ್ತದೆ. ಪೂಜೆಯ ವಿಧಿ ವಿಧಾನಗಳು ತುಂಬಾ ಸರಳವಾಗಿದ್ದು ಯಾವುದಾದರೂ ವಿಧಾನ ಬಿಟ್ಟು ಹೋದಲ್ಲಿ ಚಿಂತಿಸದಿರಿ ಏಕೆಂದರೆ ದೇವಿಗೆ ನೀವು ಅರ್ಪಿಸುವ ಪ್ರಾರ್ಥನೆ ಇಲ್ಲಿ ಅತೀ ಮುಖ್ಯವಾಗಿರುತ್ತದೆ.

English summary

Varalakshmi Vratha 2021: Significance and Fasting Rituals in Kannada

Varalakshmi puja is one of the most popular celebration in the Southern states of India. It is also known by the name of Mahalakshmi vrata in the North. However this puja is dedicated to the same deity, Goddess Lakshmi for the prosperity and welfare of the family.
X
Desktop Bottom Promotion