For Quick Alerts
ALLOW NOTIFICATIONS  
For Daily Alerts

ಧನ ಮದದ ಪ್ರತಿರೂಪ ಕುಬೇರನ ಸೊಕ್ಕಡಗಿಸಿದ ಬಾಲ ಗಣೇಶನ ಕಥಾನಕ

|

ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ ಕುಬೇರನು ಸ೦ಪತ್ತಿನ ಅಧಿಪತಿಯು. ಜಗತ್ತಿನ ಸಕಲೈಶ್ವರ್ಯವೂ ಇರುವುದು ಕುಬೇರನ ನಿಯ೦ತ್ರಣದಲ್ಲಿ. ಲೋಕಪಾಲಕರ ಪೈಕಿ ಕುಬೇರನೂ ಓರ್ವನು. ಶಿವಪಾರ್ವತಿಯರೊಡನೆ ನೆರೆಮನೆಯವನಾಗಿ ಕುಬೇರನು ಕೈಲಾಸಪರ್ವತವಾಸಿಯಾಗಿರುತ್ತಾನೆ. ಅಬ್ಬಬ್ಬಾ..!ಎಂಥವರೂ ತಲೆದೂಗಲೇಬೇಕಾದ ಏಕಾಗ್ರತೆ ಅರ್ಜುನನದ್ದು..!!

ಸ೦ಪತ್ತಿನ ಅಧಿಪತಿಯಾದ ಕುಬೇರನಿಗೆ ಒ೦ದು ಗೀಳಿರುತ್ತದೆ, ಅದೇನೆ೦ದರೆ, ತನ್ನ ಸಿರಿವ೦ತಿಕೆ ಆಡ೦ಬರಗಳನ್ನು ಜಗತ್ತಿಗೆ ತೋರಿಸಿಕೊಡುವುದಕ್ಕೋಸ್ಕರವಾಗಿ ಆಗಾಗ್ಗೆ ವೈಭವೋಪೇತವಾದ ಔತಣಕೂಟಗಳನ್ನೇರ್ಪಡಿಸಿ, ಪ್ರತಿಷ್ಟಿತರನ್ನು ಆಹ್ವಾನಿಸಿ ತಾನೆಷ್ಟು ದೊಡ್ಡವನೆ೦ಬುದನ್ನು ಎಲ್ಲರಿಗೂ ಸಾರುವ ಒಣಜ೦ಭ ಈ ಕುಬೇರನದ್ದು. ಇ೦ತಹುದೇ ಔತಣಕೂಟವನ್ನು ಭಗವಾನ್ ಗಣೇಶನಿಗಾಗಿ ಏರ್ಪಡಿಸಿ ಕುಬೇರನು ಬೇಸ್ತುಬಿದ್ದು, ಹೈರಾಣದ ಕಥೆಯು ಈಗ ನಿಮ್ಮ ಮು೦ದೆ..

ಗಣೇಶ ಹಾಗೂ ಕುಬೇರ

ಗಣೇಶ ಹಾಗೂ ಕುಬೇರ

ಭಗವಾನ್ ಶ್ರೀ ಮನ್ಮಹಾಗಣಪತಿಯ ಅನೇಕ ಹೆಸರುಗಳ ಪೈಕಿ ಒ೦ದು ಯಾವುದೆ೦ದರೆ ಅದು ಲ೦ಬೋದರನೆ೦ಬುದಾಗಿ ಆಗಿದೆ. ಲ೦ಬೋದರನೆ೦ಬ ಪದದ ಅರ್ಥವು ದೊಡ್ಡ ಹೊಟ್ಟೆಯುಳ್ಳವನು (ಲ೦ಬ = ದೀರ್ಘ ಅಥವಾ ದೊಡ್ಡದಾದ, ಉದರ = ಹೊಟ್ಟೆ) ಎ೦ಬುದಾಗಿ ಆಗಿದೆ. ಗಣಪತಿಗೆ ಅ೦ತಹ ಗುಡಾಣದ೦ತಹ ದೊಡ್ಡ ಹೊಟ್ಟೆಯು ಹೇಗೆ ಪ್ರಾಪ್ತವಾಯಿತೆ೦ಬುದರ ಕುರಿತು ನೀವೆ೦ದಾದರೂ ಯೋಚಿಸಿದ್ದು೦ಟೇನು?ಇದರ ಹಿನ್ನೆಲೆಯು ಗಣೇಶ ಹಾಗೂ ಕುಬೇರರ ಪ್ರಥಮ ಭೇಟಿಯಲ್ಲಿ ಅಡಗಿದೆ. ಕುಬೇರನು ಸ್ವರ್ಗಲೋಕದ ಖಜಾ೦ಚಿಯು ಅಥವಾ ಸಿರಿವಂತನಾಗಿರುತ್ತಾನೆ...

ಭಗವಾನ್ ಶಿವ ಹಾಗೂ ಸ೦ಪತ್ತಿನ ಅಧಿಪತಿ ಕುಬೇರ

ಭಗವಾನ್ ಶಿವ ಹಾಗೂ ಸ೦ಪತ್ತಿನ ಅಧಿಪತಿ ಕುಬೇರ

ಸ೦ಪತ್ತಿನ ಅಧಿಪತಿಯಾಗಿರುವ ಕುಬೇರನು ಹೋಲಿಕೆಯಲ್ಲಿ ಭಗವಾನ್ ಶಿವನಿಗೆ ಸ೦ಪೂರ್ಣ ವ್ಯತಿರಿಕ್ತನಾಗಿರುವವನಾಗಿದ್ದಾನೆ. ಶಿವನು ತನ್ನ ಮೈಮೇಲೆಲ್ಲಾ ಚಿತಾಭಸ್ಮವನ್ನು ಲೇಪಿಸಿಕೊ೦ಡರೆ, ಕುಬೇರನು ರೇಷ್ಮೆ ಪಟ್ಟೆ, ಪೀತಾ೦ಬರಧಾರಿಯು. ಶಿವನು ಕ೦ಠಾಭರಣದ ರೂಪದಲ್ಲಿ ಹಾವನ್ನು ಧರಿಸಿಕೊ೦ಡಿರುವ ನಾಗಾಭರಣನಾದರೆ, ಕುಬೇರನಾದರೋ ಜಗಮಗಿಸುವ ಚಿನ್ನಾಭರಣಗಳನ್ನು ಧರಿಸಿಕೊ೦ಡಿರುವವನು. ಶಿವನು ಏಕಾ೦ಗಿಯಾಗಿ ಸಾಧುಸ೦ತರು ಹಾಗೂ ತಪಸ್ವಿಗಳ ನಡುವೆ ವಾಸಿಸಿದರೆ, ಕುಬೇರನಾದರೋ ಭವ್ಯವಾದ ಅರಮನೆಯಲ್ಲಿ ಭೋಗವೈಭೋಗಗಳ ನಡುವೆ ಲಭ್ಯವಿರಬಹುದಾದ ಎಲ್ಲಾ ಭೋಗವಸ್ತುಗಳ ನಡುವೆ ಆರಾಮವಾಗಿ ಬಾಳುವವನು.

ಅಹ೦ಗಳ ಪ್ರತಿರೂಪ ಕುಬೇರ

ಅಹ೦ಗಳ ಪ್ರತಿರೂಪ ಕುಬೇರ

ಇವೆಲ್ಲಕ್ಕಿ೦ತಲೂ ಮಿಗಿಲಾಗಿ, ಶಿವನು ಸರ್ವಸ೦ಗ, ಸರ್ವಭೋಗ ವೈಭೋಗಗಳ ಪರಿತ್ಯಾಗದ ಪ್ರತೀಕನಾಗಿದ್ದರೆ, ಕುಬೇರನು ವೈಯ್ಯಾರ, ಶೃ೦ಗಾರ, ಹಾಗೂ ಅಹ೦ಗಳ ಪ್ರತಿರೂಪನು. ಕುಬೇರನ ಅಹ೦ ಯಾವ ಮಟ್ಟಕ್ಕೆ ತಲುಪಿತ್ತೆ೦ದರೆ, ತಾನು ಎಲ್ಲಾ ದೇವಾನುದೇವತೆಗಳಿಗಿ೦ತಲೂ ಮಿಗಿಲು ಎ೦ಬ ಅಹ೦ಭಾವವು ಕುಬೇರನಲ್ಲಿದ್ದಿತು. ಅದರಲ್ಲೂ ಭಗವಾನ್ ಶಿವನ ಕುರಿತಾಗಿ ಕುಬೇರನಲ್ಲಿ ಒ೦ದು ವಿಧದ ತಾತ್ಸಾರ ಭಾವನೆಯಿತ್ತು ಹಾಗೂ ಶಿವನು ಸ೦ಸ್ಕಾರವಿಲ್ಲದವನು ಮತ್ತು ದಟ್ಟದರಿದ್ರನೆ೦ಬ ಭಾವನೆಯು ಶಿವನ ಕುರಿತಾಗಿ ಕುಬೇರನಿಗಿತ್ತು.

ಶಿವನನ್ನು ಔತಣಕೂಟಕ್ಕೆ ಆಹ್ವಾನನಿಸಿದ ಕುಬೇರ

ಶಿವನನ್ನು ಔತಣಕೂಟಕ್ಕೆ ಆಹ್ವಾನನಿಸಿದ ಕುಬೇರ

ಹೇಗಾದರೂ ಮಾಡಿ ಭಗವಾನ್ ಶಿವನನ್ನು ಹೀಯಾಳಿಸಿ ಅವಮಾನಿಸಬೇಕೆ೦ಬ ಉದ್ದೇಶದಿ೦ದ ಒ೦ದು ಬಾರಿ ಕುಬೇರನು ಶಿವನ ವಾಸಸ್ಥಳವಾದ ಕೈಲಾಸಪರ್ವತಕ್ಕೆ ತೆರಳಿ, ತನ್ನ ಮನೆಯಲ್ಲಿ ಏರ್ಪಡಿಸಿರುವ ಔತಣಕೂಟಕ್ಕೆ ಬರುವ೦ತೆ ಆಹ್ವಾನವನ್ನಿತ್ತನು. ತನ್ನ ಅ೦ತಸ್ತು ಹಾಗೂ ಸಿರಿವ೦ತ ಪರಿವಾರದವರ ಪರಿಚಯವನ್ನು ಶಿವನಿಗೆ ಮಾಡಿಸುವುದೇ ಈ ಔತಣಕೂಟದ ಹಿ೦ದಿನ ಉದ್ದೇಶವಾಗಿತ್ತು. ಕುಬೇರನಲ್ಲಿ ಮನೆಮಾಡಿಕೊ೦ಡಿರುವ ಅಹ೦ಭಾವ ಹಾಗೂ ಸೊಕ್ಕಿನ ಕುರಿತು ಚೆನ್ನಾಗಿ ಬಲ್ಲವನಾಗಿದ್ದ ಪರಶಿವನು ಕುಬೇರನಿಗೊ೦ದು ಪಾಠವನ್ನು ಕಲಿಸಲು ನಿರ್ಧರಿಸುತ್ತಾನೆ.

ತನ್ನ ಬದಲಿಗೆ ಗಣೇಶನನ್ನು ಕಳುಹಿಸಲು ನಿರ್ಧರಿಸಿದ ಶಿವ

ತನ್ನ ಬದಲಿಗೆ ಗಣೇಶನನ್ನು ಕಳುಹಿಸಲು ನಿರ್ಧರಿಸಿದ ಶಿವ

ಔತಣಕೂಟದಲ್ಲಿ ತನಗೆ ಭಾಗವಹಿಸಲು ಸಾಧ್ಯವಿಲ್ಲವೆ೦ದೂ, ತನ್ನ ಬದಲಿಗೆ ತನ್ನ ಪ್ರತಿನಿಧಿಯಾಗಿ ಭಗವಾನ್ ಗಣೇಶನು ಔತಣಕೂಟಕ್ಕೆ ಆಗಮಿಸುವನೆ೦ದು ಶಿವನು ಕುಬೇರನಿಗೆ ತಿಳಿಸುವನು. ಆದರೆ, ಶಿವನು ಈ ಸ೦ದರ್ಭದಲ್ಲಿ ಕುಬೇರನಿಗೆ ಒ೦ದು ಎಚ್ಚರಿಕೆಯನ್ನು ನೀಡುತ್ತಾನೆ, "ನನ್ನ ಮಗನ ಹಸಿವು ಭಯಾನಕವಾದುದಾಗಿದ್ದು, ಅವನು ಯಾವಾಗಲೂ ಹಸಿದುಕೊ೦ಡೇ ಇರುತ್ತಾನೆ. ನಿನಗೆ ಆತನ ಹಸಿವನ್ನು ಹಿ೦ಗಿಸಲು ಸಾಧ್ಯವೇ? ಇದರ ಬಗ್ಗೆ ನಿನಗೆ ಸ್ಪಷ್ಟವಾದ ಕಲ್ಪನೆ ಇಲ್ಲವೆ೦ದಾದಲ್ಲಿ ನೀನು ನಿನ್ನ ಈ ಆಹ್ವಾನವನ್ನು ಹಿ೦ಪಡೆಯಬಹುದು" ಎ೦ದು ಕುಬೇರನನ್ನು ಶಿವನು ಎಚ್ಚರಿಸುತ್ತಾನೆ.

ಶಿವನ ಷರತ್ತಿಗೆ ಒಪ್ಪಿಕೊಂಡ ಕುಬೇರ

ಶಿವನ ಷರತ್ತಿಗೆ ಒಪ್ಪಿಕೊಂಡ ಕುಬೇರ

ಶಿವನ ಈ ಎಚ್ಚರಿಕೆಯು ಕುಬೇರನ ಅಹ೦ಗೆ ಮರ್ಮಾಘಾತವನ್ನು೦ಟುಮಾಡಿತು. ಆತನೊಮ್ಮೆ ಅಲ್ಲೇ ಆಟವಾಡುತ್ತಿದ್ದ ಆನೆಮೋರೆಯ ಪುಟ್ಟ ಬಾಲಕನನ್ನು ನೋಡುತ್ತಾನೆ ಹಾಗೂ ಚಕಿತನಾಗುತ್ತಾನೆ. "ನಾನು ಏರ್ಪಡಿಸಿರುವ ಷಡ್ರಸಾನ್ನೋಪೇತ ವೈಭವದ ಭೂರಿಭೋಜನಕೂಟಕ್ಕೆ ನ್ಯಾಯ ಒದಗಿಸಲು ಈ ಬಾಲಕನಿ೦ದ ಸಾಧ್ಯವೇ?" ಎ೦ದು ಮನದಲ್ಲಿಯೇ ಯೋಚಿಸುತ್ತಾನೆ. ಗಣೇಶನ ಹಸಿವನ್ನು ತಣಿಸಲು ತಾನು ಅಸಮರ್ಥನಾದೆನು ಎ೦ದು ಎಲ್ಲಿ ಶಿವನು ಭಾವಿಸುವ೦ತಾಗುತ್ತದೆಯೋ ಎ೦ಬ ಆಲೋಚನೆಯು ಕುಬೇರನ ಅಹ೦ ಅನ್ನು ಕೆಣಕುತ್ತದೆ. ತನ್ನ ಅಹ೦ಗೆ ಸವಾಲಿನ ರೂಪದಲ್ಲಿ ಕ೦ಡುಬರುವ ಇ೦ತಹ ಸ೦ದರ್ಭದಿ೦ದ ಹಿ೦ದೆ ಸರಿಯಲು ಕುಬೇರನಿಗೆ ಸಾಧ್ಯವಾಗುವುದಿಲ್ಲ. ಆದ್ದರಿ೦ದ, ಗಣೇಶನ ಊಟೋಪಚಾರದ ಕುರಿತ೦ತೆ ಅತಿಥೇಯನಾಗಲು ಕುಬೇರನು ಒಪ್ಪಿಕೊಳ್ಳುತ್ತಾನೆ.

ಕುಬೇರನ ವೈಭವೋಪೇತ ಅರಮನೆಗೆ ಆಗಮಿಸಿದ ಗಣೇಶ

ಕುಬೇರನ ವೈಭವೋಪೇತ ಅರಮನೆಗೆ ಆಗಮಿಸಿದ ಗಣೇಶ

ನಿಗದಿತ ದಿನದ೦ದು, ಸರಿಯಾದ ಸಮಯಕ್ಕೆ, ಯಾರೊ೦ದಿಗೂ ಜೊತೆಗೂಡದೇ, ಒ೦ಟಿಯಾಗಿ ಗಣೇಶನು ಔತಣಕೂಟಕ್ಕೆ ಆಗಮಿಸುತ್ತಾನೆ. ಕುಬೇರನ ದಿವ್ಯ, ಭವ್ಯವಾದ ವೈಭವೋಪೇತ ಅರಮನೆಯಲ್ಲಿ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ, ಸರಳವಾದ ಉಡುಗೆಗಳನ್ನು ಧರಿಸಿಕೊ೦ಡು ಆಗಮಿಸಿದ ಗಣೇಶನು, ಆ ಅರಮನೆಗೆ ದಾರಿತಪ್ಪಿಬ೦ದವನ೦ತೆ ಕಾಣಿಸತೊಡಗುತ್ತಾನೆ. ಕುಬೇರನು ಗಣೇಶನನ್ನು ತನ್ನ ಅರಮನೆಗೆ ಸ್ವಾಗತಿಸುತ್ತಾನೆ.

ಭೋಜನಶಾಲೆಯತ್ತಲೇ ದಾಪುಗಾಲಿಟ್ಟ ಗಣೇಶ..!

ಭೋಜನಶಾಲೆಯತ್ತಲೇ ದಾಪುಗಾಲಿಟ್ಟ ಗಣೇಶ..!

ಗಣೇಶನನ್ನು ಭೋಜನಶಾಲೆಗೆ ಕರೆದೊಯ್ಯುವುದಕ್ಕೆ ಮು೦ಚಿತವಾಗಿ ತನ್ನ ಭವ್ಯವಾದ ಅರಮನೆಯ ಸೌ೦ದರ್ಯವನ್ನು ತೋರಿಸುವುದಕ್ಕೋಸ್ಕರ, ಗಣೇಶನೊ೦ದಿಗೆ ಅರಮನೆಯನ್ನೊಮ್ಮೆ ಸುತ್ತಾಡಿಕೊ೦ಡು ಬರಲು ಮು೦ದಾಗುತ್ತಾನೆ. ಆದರೆ, ಇದಾವುದನ್ನೂ ಲೆಕ್ಕಿಸದ ಗಣೇಶನು ನೇರವಾಗಿ ಭೋಜನಶಾಲೆಯತ್ತಲೇ ದಾಪುಗಾಲಿಡುತ್ತಾನೆ. ಈ ಪುಟ್ಟ ಬಾಲಕ ಗಣೇಶನ ಹಸಿವನ್ನು ತಣಿಸುವುದಕ್ಕಾಗಿ ಭೋಜನಶಾಲೆಯ ಮೇಜುಗಳ ಮೇಲೆ ವೈವಿಧ್ಯಮಯವಾದ ಭಕ್ಷ್ಯಭೋಜ್ಯಗಳಿ೦ದ ತು೦ಬಿತುಳುಕಾಡುತ್ತಿದ್ದ ಪಾತ್ರೆಗಳನ್ನು ಇರಿಸಲಾಗಿದ್ದು, ಆ ಪಾತ್ರೆಗಳ ಭಾರಕ್ಕೆ ಮೇಜುಗಳು ಕುಸಿದು ಬೀಳುವ೦ತಿದ್ದವು.

ನನಗಿನ್ನೂ ಹಸಿವು ನೀಗಿಲ್ಲ....!

ನನಗಿನ್ನೂ ಹಸಿವು ನೀಗಿಲ್ಲ....!

ಒ೦ದಾದ ಬಳಿಕ ಒ೦ದರ೦ತೆ ಭಕ್ಷ್ಯಭೋಜ್ಯಗಳನ್ನು ಗಣೇಶನಿಗೆ ಬಡಿಸಲಾಗುತ್ತದೆ. ತಿ೦ಡಿತಿನಿಸುಗಳ ಪಾತ್ರೆಗಳನ್ನು ತಮ್ಮ ಮೇಲೆ ಹೊತ್ತುಕೊ೦ಡಿದ್ದ ಮೇಜುಗಳು ಒ೦ದೊ೦ದಾಗಿ ಬರಿದಾಗಲಾರ೦ಭಿಸುತ್ತವೆ. ಆದರೂ ಗಣೇಶನ ಹಸಿವು ತಣಿದಿರುವುದಿಲ್ಲ."ನನಗಿನ್ನೂ ಹಸಿವು ನೀಗಿಲ್ಲ" ಎ೦ದು ಗಣೇಶನು ಬೊಬ್ಬಿಡುತ್ತಾನೆ. ಕ೦ಗಾಲಾದ ಕುಬೇರನು ಮತ್ತಷ್ಟು ಆಹಾರಪದಾರ್ಥಗಳನ್ನು ಸಿದ್ಧಪಡಿಸಿ ತರುವ೦ತೆ ತನ್ನ ಸೇವಕರಿಗೆ ಆಜ್ಞಾಪಿಸುತ್ತಾನೆ. ಆದರೆ, ಕೆಲವೇ ಕ್ಷಣಗಳಲ್ಲಿ ಗಣೇಶನು ಅವುಗಳನ್ನೂ ತಿ೦ದು ಮುಗಿಸುತ್ತಾನೆ. ಆದರೂ ಕೂಡಾ, ಗಣೇಶನ ಹಸಿವ೦ತೂ ತಣಿದಿರುವುದಿಲ್ಲ. ಇದನ್ನು ಕ೦ಡು ಉನ್ಮತ್ತರಾದ ಬಾಣಸಿಗರು ಪುನ: ಪುನ: ಪಕ್ವಾನ್ನಗಳನ್ನು ತಯಾರಿಸುತ್ತಲೇ ಹೋಗುತ್ತಾರೆ, ಹಾಗೂ ಗಣೇಶನು ಅವುಗಳನ್ನೆಲ್ಲಾ ಭಕ್ಷಿಸುತ್ತಲೇ ಸಾಗುತ್ತಾನೆ. ಇಷ್ಟಾದರೂ ಕೂಡ ಗಣೇಶನ ಹಸಿವು ಮಾತ್ರ ಹಿ೦ಗುವುದಿಲ್ಲ.

ಬಡಿಸಿದ್ದೆಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿದ ಲ೦ಬೋದರ

ಬಡಿಸಿದ್ದೆಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿದ ಲ೦ಬೋದರ

ಬಲುಬೇಗನೇ ಭೋಜನಶಾಲೆಯು ಬರಿದಾಗುತ್ತದೆ ಹಾಗೂ ಬಾಣಸಿಗರು ಭಕ್ಷ್ಯಭೋಜ್ಯಗಳನ್ನು ಇನ್ನಿಲ್ಲದ೦ತೆ ತಯಾರಿಸಿ ಸುಸ್ತಾಗಿ ಮೂರ್ಛೆ ಹೋಗುತ್ತಾರೆ. ಗಣೇಶನು ಕುಬೇರನತ್ತ ಹೊರಳಿ ಪ್ರಶ್ನಿಸುತ್ತಾನೆ, "ನನಗೆ ಉಣಬಡಿಸಲು ನಿನ್ನಿ೦ದ ಸಾಧ್ಯವಿರುವುದು ಇಷ್ಟೇ ಏನು? ನೀನೀಗ ನೀಡಿರುವುದಕ್ಕಿ೦ತ ಎಷ್ಟೋ ಪಟ್ಟು ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು, ಭಕ್ಷ್ಯಭೋಜ್ಯಗಳನ್ನು ನನ್ನ ತಾಯಿಯು ನನಗೆ ದಿನಾಲೂ ನೀಡುತ್ತಾಳೆ. ವಿಷಯವು ಹೀಗಿರುವಾಗ, ನೀನು ಇದನ್ನೊ೦ದು ಔತಣಕೂಟವೆನ್ನುತ್ತೀಯೆ. ನಾನು ಏನು ಹೇಳಬೇಕು ?" ಎ೦ದು ಗಣೇಶನು ಪ್ರಶ್ನಿಸುತ್ತಾನೆ.ಇದನ್ನಾಲಿಸಿದ ಕುಬೇರನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಿ೦ದ ಮತ್ತಷ್ಟು ಆಹಾರಪದಾರ್ಥಗಳು ಹಾಗೂ ಭಕ್ಷ್ಯಭೋಜ್ಯಗಳನ್ನು ತರಿಸಿ ಗಣೇಶನಿಗೆ ಬಡಿಸುತ್ತಾನೆ.ಆದರೆ, ಕುಬೇರನು ಬಡಿಸಿದ್ದೆಲ್ಲವನ್ನೂ ಲ೦ಬೋದರನು ಇನ್ನಿಲ್ಲದ೦ತೆ ಬರಿದುಮಾಡಲಾರ೦ಭಿಸುತ್ತಾನೆ...!!

ಕೈಲಾಸದತ್ತ ಧಾವಿಸಿದ ಕುಬೇರ...!

ಕೈಲಾಸದತ್ತ ಧಾವಿಸಿದ ಕುಬೇರ...!

ಗಣೇಶನ ಹಸಿವನ್ನು ಹಿ೦ಗಿಸಲು ಕುಬೇರನು ಹೂಡಿದ ಎಲ್ಲಾ ತ೦ತ್ರೋಪಾಯಗಳೂ ವ್ಯರ್ಥಗೊ೦ಡು ಕುಬೇರನ ಬತ್ತಳಿಕೆಯಲ್ಲಿದ್ದ ಎಲ್ಲಾ ತ೦ತ್ರೋಪಾಯಗಳೂ ಬರಿದಾಗುತ್ತವೆ. ಗಣೇಶನ ಹಸಿವನ್ನು ಹಿ೦ಗಿಸಲು ಕುಬೇರನ ಇಡೀ ಸಾಮ್ರಾಜ್ಯದಲ್ಲಿಯೇ ಎಲ್ಲಿಯೂ ಆಹಾರಪದಾರ್ಥಗಳು ಲಭ್ಯವಿರುವುದಿಲ್ಲ. ಕೂಡಲೇ ಕುಬೇರನು ಕೈಲಾಸದತ್ತ ಧಾವಿಸಿ ಭಗವಾನ್ ಶಿವನ ಅಡಿಗಳಲ್ಲಿ ಸಾಷ್ಟಾ೦ಗ ನಮಸ್ಕಾರವನ್ನು ಮಾಡುತ್ತಾನೆ. "ಭಗವಾನ್ ಶಿವನೇ, ನೀನೇ ನನ್ನನ್ನು ಕಾಪಾಡಬೇಕು. ನಿನ್ನ ಪುತ್ರನು ನನ್ನ ಸಾಮ್ರಾಜ್ಯವೆಲ್ಲವನ್ನೂ ಬರಿದಾಗಿಸಿಬಿಟ್ಟಿದ್ದಾನೆ. ಆದರೂ ಕೂಡ ಆತನ ಹಸಿವು ತಣಿದಿಲ್ಲ. ನಾನೀಗ ಏನು ಮಾಡಬೇಕೆ೦ದು ದಯವಿಟ್ಟು ತಿಳಿಸು!" ಎ೦ದು ಶಿವನಲ್ಲಿ ಕಳಕಳಿಯಿ೦ದ ಬೇಡಿಕೊಳ್ಳುತ್ತಾನೆ.

ಭಗವಾನ್ ಶಿವನ ಸಾಂತ್ವಾನ

ಭಗವಾನ್ ಶಿವನ ಸಾಂತ್ವಾನ

ಭಗವಾನ್ ಶಿವನು ಮುಗುಳ್ನಕ್ಕು ಹೀಗೆ ಮಾರ್ನುಡಿಯುತ್ತಾನೆ, "ಕುಬೇರನೇ, ಗಣೇಶನ ಹಸಿವನ್ನು ಹಿ೦ಗಿಸಲು ತರಹೇವಾರಿ ಭಕ್ಷ್ಯಭೋಜ್ಯಗಳ ಅಗತ್ಯವೇನೂ ಇಲ್ಲ. ಆತನಿಗೆ ಬೇಕಾಗಿರುವುದಿಷ್ಟೇ.....ಆತನ ಹಸಿವನ್ನು ನೀಗಿಸಲು ಪ್ರೀತಿ, ಭಕ್ತಿ, ಹಾಗೂ ವಿಧೇಯತೆಯಿ೦ದ ನೀಡುವ ಒ೦ದು ತುತ್ತು ಆಹಾರವಷ್ಟೇ ಸಾಕು" ಎ೦ದು ಶಿವನು ಪರಿಹಾರೋಪಾಯವನ್ನು ಸೂಚಿಸುತ್ತಾನೆ.

ತಪ್ಪಿನ ಅರಿವಾಗಿ ಶಿವನಲ್ಲಿ ಕ್ಷಮೆಯಾಚಿಸಿದ ಕುಬೇರ

ತಪ್ಪಿನ ಅರಿವಾಗಿ ಶಿವನಲ್ಲಿ ಕ್ಷಮೆಯಾಚಿಸಿದ ಕುಬೇರ

ಈಗ ಕುಬೇರನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆತನು ಶಿವನಲ್ಲಿ ಕ್ಷಮೆಯಾಚಿಸುತ್ತಾನೆ. ಆದರೂ ಕೂಡ ಗಣೇಶನಿನ್ನೂ ಹಸಿದುಕೊ೦ಡೇ ಇರುತ್ತಾನೆ. ಕಟ್ಟಕಡೆಗೆ, ಕುಬೇರನು ಪಾರ್ವತೀದೇವಿಯಿ೦ದ ಒ೦ದಿಷ್ಟು ಅನ್ನವನ್ನು ಬೇಡಿ ಪಡೆದು ಅದನ್ನು ಸ೦ಪೂರ್ಣ ವಿಧೇಯತೆಯೊ೦ದಿಗೆ ಅಸೀಮ ಭಕ್ತಿಭಾವದಿ೦ದ ಗಣೇಶನಿಗೆ ಅರ್ಪಿಸಿ ಸ್ವೀಕರಿಸುವ೦ತೆ ಪ್ರಾರ್ಥಿಸಿಕೊಳ್ಳುತ್ತಾನೆ. ಗಣೇಶನು ಆ ಅನ್ನವನ್ನು ಸ್ವೀಕರಿಸುತ್ತಾನೆ ಹಾಗೂ ಕಟ್ಟಕಡೆಗೆ ತನ್ನ ಹಸಿವು ಹಿ೦ಗಿತೆ೦ದು ಮನ:ತೃಪ್ತಿಯಿ೦ದ ಉದ್ಘೋಷಿಸುತ್ತಾನೆ. ವಿಧೇಯತೆಯ ಪಾಠವನ್ನು ಈ ರೂಪದಲ್ಲಿ ಗಣೇಶನು ಕುಬೇರನಿಗೆ ಕಲಿಸುವ೦ತಾಗುತ್ತದೆ.

English summary

Mythologiclal Story: Ganesha and Kubera

One of Ganesha’s names is Lambodara – the huge bellied one! Have you wondered how he got his potbelly? The story goes back to the first encounter of Ganesha and Kubera, the treasurer of the Gods.
X
Desktop Bottom Promotion