For Quick Alerts
ALLOW NOTIFICATIONS  
For Daily Alerts

ನಾಡ ಹಬ್ಬ ದಸರಾಕ್ಕೆ ಗೊಂಬೆಗಳ ತೇರು....

By Manasa K M
|

ದಸರಾ ಹಬ್ಬ ಕರ್ನಾಟಕದ ಜನತೆಯ ಮನಸ್ಸಿಗೆ ಧಾರ್ಮಿಕವಾಗಿಯೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಬಹಳ ಹತ್ತಿರವಾದ ಹಬ್ಬ. ಮೈಸೂರು ದಸರಾ, ಆನೆ ಅಂಬಾರಿ ಹತ್ತಿ ಲೋಕವನ್ನು ಹರಿಸುವ ಚಾಮುಂಡೇಶ್ವರಿ ದೇವಿ, ಅರಮನೆಯ ಸಡಗರಗಳಷ್ಟೇ ಅಲ್ಲದೆ, ಮನೆ ಮನೆಗಳಲ್ಲಿ ಕೂರಿಸುವ ಗೊಂಬೆಗಳು ಕೂಡ ದಸರಾ ಹಬ್ಬದ ವಿಶೇಷ.

Doll Festival

ಇನ್ನೂ ಹಬ್ಬಕ್ಕೆ ತಿಂಗಳಿರುವಾಗಲೇ ಮನೆಯಲ್ಲಿ ಗೊಂಬೆಗಳ ತೇರು ಶುರು. ಅಟ್ಟದ ಮೇಲೆ, ಹಳೆಯ ಪೆಟ್ಟಿಗೆಗಳಲ್ಲಿ, ಹತ್ತಿ ಬಟ್ಟೆಯಲ್ಲಿ ಸುತಿಟ್ಟ ಹಳೆಯ ಮಣ್ಣಿನ ಗೊಂಬೆಗಳು, ತಲೆಮಾರಿನ ಮರದ ಆಟಿಕೆಗಳು, ಹೊಸದಾಗಿ ಕೊಂಡ ಇತ್ತೀಚಿನ ಗೊಂಬೆಗಳನ್ನು ಕೆಳಗಿಳಿಸಿ, ಧೂಳು ಹೊಡೆದು ತೆಗೆದಿರಿಸುತ್ತಾರೆ. ದುರ್ಗಾ ಮಾತೆಯ ಒಂಬತ್ತು ಅವತಾರದ ವೈಶಿಷ್ಟ್ಯ

ಹಳೆಯ ಬೊಂಬೆಗಳಿಗೆ ಸಣ್ಣ ಸಣ್ಣ ರಿಪೇರಿ ಅಥವಾ ಮಾಸಿ ಹೋದ ಬಣ್ಣ ಮತ್ತೆ ಬಳಿಯುವುದು ಹೀಗೆ ಕೆಲವು ಕೆಲಸಗಳು ಕೂಡ ಇರುತ್ತವೆ. ದಸರಾ ಹಬ್ಬದ ಮೊದಲನೆಯ ದಿನ ಎಲ್ಲವನ್ನೂ ಅಲಂಕಾರಿಕವಾಗಿ ಮನೆಯಲ್ಲಿ ಜೋಡಿಸುತ್ತಾರೆ. ಬಹಳಷ್ಟು ಮನೆಗಳಲ್ಲಿ ಐದು ಅಥವಾ ಏಳು ಹಂತಗಳು / ಮೆಟ್ಟಿಲುಗಳಂತೆ ಮಾಡಿ ಇಡುತ್ತಾರೆ.

Doll Festival

ಈ ರೀತಿ ಇಡುವ ಗೊಂಬೆಗಳಲ್ಲಿ ಮುಖ್ಯವಾದುವು ಮರದ ಪಟ್ಟದ ಗೊಂಬೆಗಳು, ದಶಾವತಾರ, ಗಿರಿಜಾ ಕಲ್ಯಾಣ, ನರಸಿಂಹಾವತಾರ, ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಹಸು-ಕರು, ಕೃಷ್ಣ ರಾಧಾ , ಮದುವೆ ಮಂಟಪ, ಕಾಮಧೇನು, ಗಣೇಶ ಸುಬ್ರಮಣ್ಯ ಮುಂತಾದುವು. ಹಲವಾರು ಮನೆಗಳಲ್ಲಿ ಸ್ವತಂತ್ರ ಯೋಧರ ಚಿಕ್ಕ ಚಿಕ್ಕ ಪ್ರತಿಮೆಗಳು ಇರುತ್ತವೆ.

ಮರದ ಪಟ್ಟದ ಗೊಂಬೆಗಳಿಗೆ ಬಣ್ಣದ ಕಾಗದ ಹಾಗೂ ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸುತ್ತಾರೆ. ಇವು ನಮ್ಮ ಅಜ್ಜಿ ತಾತಂದಿರು ನಮ್ಮ ದೇಶದ ಯೋಧರಿಗೆ ಎಷ್ಟು ಬೆಲೆ ಕೊಡುತ್ತಿದ್ದರು ಎಂಬುದನ್ನು ಸಾರುತ್ತದೆ. ಇನ್ನೂ ಕೆಲವು ಮನೆಗಳಲ್ಲಿ ಕೈಯಿಂದಲೇ ಪುಟ್ಟ ಪುಟ್ಟ ಗೊಂಬೆಗಳನ್ನು ಮಾಡಿ ಪುರಾಣದ ಅಥವಾ ಇತಿಹಾಸದ ಕಥೆಗಳನ್ನು ನಿರೂಪಿಸುತ್ತಾರೆ.

Doll Festival

ಉದಾಹರಣೆಗೆ ಲವ-ಕುಶ, ಶ್ರೀನಿವಾಸ ಕಲ್ಯಾಣ, ಭೂ ಕೈಲಾಸ, ಪಾರ್ವತಿ ಪರಿಣಯ, ಬಾಲ ಕೃಷ್ಣ ಲೀಲೆ ಮುಂತಾದುವು. ಸಣ್ಣ ತಂತಿಯನ್ನು ಬೇಕಾದ ಆಕಾರದಲ್ಲಿ ಬಗ್ಗಿಸಿಕೊಂಡು ಅದಕ್ಕೆ ಹತ್ತಿ ಅಥವಾ ಉಣ್ಣೆಯನ್ನು ಮೆತ್ತುತ್ತ ಮನುಷ್ಯರ ಅಥವಾ ಪ್ರಾಣಿಗಳ ಆಕಾರ ಕೊಡುತ್ತಾರೆ.

ನಂತರ ಅದಕ್ಕೆ ಕಥೆಯಲ್ಲಿನ ಪಾತ್ರಗಳಿಗೆ ತಕ್ಕಂತೆ ವಸ್ತ್ರಗಳನ್ನು ಹೊಲೆದು, ಕೂದಲನ್ನು ಮೆತ್ತಿ ಇತರ ಅಲಂಕಾರಗಳನ್ನು ಕೂಡ ಮಾಡುತ್ತಾರೆ. ಇವನ್ನೂ ಕಥೆಯ ಹಂದರಕ್ಕೆ ತಕ್ಕಂತೆ ಜೋಡಿಸಿ ನಿರೂಪಿಸುತ್ತಾರೆ. ಇದೆಲ್ಲ ಮನೆಯ ಹೆಣ್ಣು ಮಕ್ಕಳೇ ಮಾಡುವುದು ಅವರ ಸೃಜನಶೀಲ ಆಸಕ್ತಿ ಹಾಗೂ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಮನೆಗೆ ಕುಂಕುಮಕ್ಕೆ, ಹಬ್ಬಕ್ಕೆ ಬಂದ ಮಹಿಳೆಯರು, ಪುರುಷರು ಮಕ್ಕಳಾಗಿ ತಮ್ಮ ಮಕ್ಕಳೊಡನೆ ಕೂಡಿ ಕತೆಗಳನ್ನು ಕೇಳಿ ಹೇಳಿ ನಲಿಯುತ್ತಾರೆ.

Doll Festival

ಈ ರೀತಿ ಗೊಂಬೆ ಕೂರಿಸುವುದಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಮ್ಮ ಪುರಾಣಗಳು, ಪರಂಪರೆ, ಇತಿಹಾಸ, ಸಂಸ್ಕೃತಿಗಳನ್ನು ಈ ಗೊಂಬೆಗಳು ಸಾರುತ್ತವೆ. ನಮ್ಮ ಪುರಾಣಗಳನ್ನು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಆಸಕ್ತಿಕರ ರೀತಿಯಲ್ಲಿ ಹೇಳಲು ಗೊಂಬೆಗಳಿಗಿಂತ ಉತ್ತಮ ಇನ್ನೇನಿದೆ ಹೇಳಿ? ನಮ್ಮ ಸಂಸ್ಕೃತಿಯನ್ನು ಪುಟ್ಟ ಪುಟ್ಟ ಮಕ್ಕಳಿಗೆ ಹೇಳಲು ಕಥೆಗಳು ಹಾಗೂ ಗೊಂಬೆಗಳು ಸಹಕಾರಿ. ಮಕ್ಕಳಿಗೆ ನಾವು ಎಷ್ಟೋ ನೀತಿಕಥೆಗಳನ್ನು ಈ ಹಬ್ಬದ ಮೂಲಕ ಪರಿಚಯಿಸಬಹುದು. ಝಗಮಗಿಸುವ ಮೈಸೂರು ದಸರಾದ ವರ್ಣಮಯ ಹಿನ್ನೆಲೆ

ನಮ್ಮ ಬೆಂಗಳೂರಿನಲ್ಲಿ ಗಾಂಧಿ ಬಜಾರು, ಮಲ್ಲೇಶ್ವರಂ ಹಾಗೂ ಇತರ ಅನೇಕ ಸ್ಥಳಗಳಲ್ಲಿ ಈಗಲೂ ಹಲವಾರು ಅಂಗಡಿಗಳನ್ನು ದಸರಾ ಹಬ್ಬ ಶುರು ಆಗುವುದರ ಮುಂಚಿನಿಂದಲೇ ತೆಗೆಯುತ್ತಾರೆ. ಇಲ್ಲಿ ಅನೇಕಾನೇಕ ವಿಧ ಬೊಂಬೆಗಳ ಜಾತ್ರೆಯೇ ಇರುತ್ತದೆ. ಈಗಲೂ ಕೆಲವರು ವರುಷಕ್ಕೆ ಒಮ್ಮೆ ಒಂದಾದರೂ ಹೊಸ ಗೊಂಬೆಯನ್ನು ತಮ್ಮ ಸಂಗ್ರಹಕ್ಕೆ ಸೇರಿಸುತ್ತಾರೆ.

ಎಲ್ಲಕ್ಕಿಂತ ಹೆಚ್ಚು ಉತ್ತಮ ಹಾಗೂ ಪ್ರಮುಖ ಎಂದರೆ ಮಣ್ಣಿನ ಹಾಗೂ ಮರದ ಗೊಂಬೆಗಳು. ಈ ಹಬ್ಬದ ಒಂದು ಮುಖ್ಯ ಅಂಶವೆಂದರೆ ಇಲ್ಲಿ ಯಾರು ಪ್ಲಾಸ್ಟಿಕ್ ಗೊಂಬೆಗಳನ್ನು ಕೊಳ್ಳುವುದಿಲ್ಲ ಹಾಗೂ ಕೂರಿಸುವುದಿಲ್ಲ. ಸುಮಾರು ಎಲ್ಲರೂ ಮಣ್ಣಿನ, ಮರದ ಹಾಗೂ ಪಿಂಗಾಣಿಯ ಗೊಂಬೆಗಳನ್ನೇ ಕೂರಿಸುತ್ತಾರೆ.

ಮನೆಯಲ್ಲಿ ಗೊಂಬೆ ಕೂರಿಸಿದ ದಿನದಿಂದ ದಸರಾ ಹಬ್ಬ ಮುಗಿಯುವ ವರೆಗೂ ದಿನಕ್ಕೊಂದು ಸಿಹಿ ನೈವೇದ್ಯ ಮಾಡಿ ಬೆಳಗಿನ ಹೊತ್ತು ಹಾಗೂ ಸಂಜೆ ಪೂಜೆ ಮಾಡುತ್ತಾರೆ. ಹಾಗೆಯೇ ಅಕ್ಕ ಪಕ್ಕದ ಮನೆಯವರು, ನೆಂಟರು ಸ್ನೇಹಿತರು ತಮ್ಮ ಮಕ್ಕಳೊಡನೆ ಕೂಡಿ ಕುಂಕುಮಕ್ಕೆ ಬರುತ್ತಾರೆ.

Doll Festival

ಅವರೆಲ್ಲರಿಗೂ ಪ್ರೀತಿಯಿಂದ ಕಥೆಗಳನ್ನು ಹೇಳಿ, ತಾಂಬೂಲ ನೀಡಿ, ಸಿಹಿ ತಿಂಡಿಗಳನ್ನು ಕೊಟ್ಟು ಉಪಚರಿಸುತ್ತಾರೆ. ಮನೆಗೆ ಬಂದ ಮಕ್ಕಳ ಕಣ್ಣುಗಳನ್ನು ನೋಡಬೇಕು ನೀವು. ಇಷ್ಟು ಗೊಂಬೆಗಳನ್ನು ಒಂದೇ ಕಡೆ ನೋಡಿ ಮಕ್ಕಳ ಕಣ್ಣುಗಳು ಅರಳುತ್ತವೆ. ಅವರ ಉತ್ಸಾಹಕ್ಕೆ ಮಿತಿಯೇ ಇರುವುದಿಲ್ಲ. ಕೆಲವು ಮಕ್ಕಳಾದರು ದೊಡ್ಡವರ ಕಣ್ಣು ತಪ್ಪಿಸಿ ಗೊಂಬೆಗಳನ್ನು ಮುಟ್ಟಲು ಹಿಂಜರಿಯುವುದಿಲ್ಲ.

ಈ ಗೊಂಬೆ ಹಬ್ಬದ ಆಚರಣೆ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ನಾಡು ಹಾಗೂ ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ಕೂಡ ಇದೆ. ನಮ್ಮ ಈ ಸಂಸ್ಕೃತಿಯು ಬಹಳ ಅನುರೂಪ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಈ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಹೋಗುವುದು ಸಂತೋಷದಿಂದ ನಾವು ಹೊರಬೇಕಿರುವ ಜವಾಬ್ದಾರಿಯಾಗಿದೆ.

English summary

Dasara - significance of Doll Festival

‘Gombe Habba' (‘Festival of dolls') is a unique tradition practised during the Dasara festivities. The dolls are adored through ritual worship and offerings during the celebrations. The dolls are neatly arranged on a stepped platform after diligently wiping and cleaning them. The display is arranged in nine steps to coincide with nine days of the festival.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more