For Quick Alerts
ALLOW NOTIFICATIONS  
For Daily Alerts

ಬಾರ್ಲಿ ನೀರು ಕುಡಿದರೆ, ದೇಹದ ಕ್ಯಾಲೋರಿ ಇಳಿಯುತ್ತೆ ಹಾಗೂ ಸಪಾಟಾದ ಹೊಟ್ಟೆ ಪಡೆಯಿರಿ!

|

ನೋಡಲು ಗೋಧಿಯಂತೆಯೇ ಇರುವ ಬಾರ್ಲಿ ಏಕದಳ ಧಾನ್ಯವಾಗಿದ್ದು ಹೆಚ್ಚಿನ ಪ್ರಮಾಣದ ಕರಗದ ನಾರು ಹೊಂದಿದೆ ಹಾಗೂ ತೂಕ ಇಳಿಸುವಲ್ಲಿ ಅತಿ ಹೆಚ್ಚು ನೆರವು ನೀಡುತ್ತದೆ. ಬಾರ್ಲಿಯ ನೀರನ್ನು ಕುಡಿಯುವ ಮೂಲಕ ಆರೋಗ್ಯಕ್ಕೆ ಹಲವಾರು ಅದ್ಭುತವಾದ ಪ್ರಯೋಜನಗಳಿವೆ. ಇಂದಿನ ಲೇಖನದಲ್ಲಿ ಬಾರ್ಲಿ ನೀರು ಕುಡಿಯುವ ಮೂಲಕ ನೈಸರ್ಗಿಕವಾಗಿ ತೂಕವನ್ನು ಕಡಿಮೆಗೊಳಿಸುವುದು ಹೇಗೆ ಎಂಬುದನ್ನು ನೋಡೋಣ. ಬಾರ್ಲಿಯ ಸೇವನೆಯಿಂದ ತೂಕ ಇಳಿಯುವುದು ಮಾತ್ರವಲ್ಲ ಹಲವಾರು ಇತರ ಪ್ರಯೋಜನಗಳೂ ಇವೆ.

ತೂಕ ಇಳಿಸುವ ವಿಧಾನಗಳಲ್ಲಿ ಹೆಚ್ಚು ಪ್ರಚಲಿತವಾದವು ಎಂದರೆ ಆಹಾರಕ್ರಮದಲ್ಲಿ ಬದಲಾವಣೆ ಹಾಗೂ ಕಷ್ಟಕರ ಮತ್ತು ಶ್ರಮದಾಯಕ ವ್ಯಾಯಾಮಗಳು. ಆದರೆ ಜಾಣತನದ ಕ್ರಮಗಳಿಂದಲೂ ಹೆಚ್ಚಿನ ಪ್ರಯಾಸವಿಲ್ಲದೇ ಹುರಿಗಟ್ಟಿದ ಮತ್ತು ತೆಳ್ಳಗಿನ ಕಾಯವನ್ನು ಪಡೆಯಲು ಸಾಧ್ಯವಿದೆ ಹಾಗೂ ಇದಕ್ಕಾಗಿ ನಿಮ್ಮ ಮನಸ್ಸಿಗೆ ಹಿಡಿಸುವ ಆಹಾರಗಳಿಂದ ವಿಮುಖರಾಗುವ ಅವಶ್ಯಕತೆಯೂ ಇಲ್ಲ ಅಥವಾ ಕ್ಯಾಲೋರಿಗಳ ಮಿತಿಯೊಳಗೇ ತಿನ್ನಬೇಕಾದ ಕಟ್ಟುಪಾಡು ಸಹಾ ಇರುವುದಿಲ್ಲ. ಆದರೆ ಹಾಗೆಂದ ಮಾತ್ರಕ್ಕೇ ಭರ್ಪೂರಿ ಮಟ್ಟದ ಘನ ಮತ್ತು ದ್ರವಾಹಾಗಳನ್ನು ಸೇವಿಸಬಹುದು ಎಂದೂ ಅಲ್ಲ.

ಆರೋಗ್ಯವನ್ನೂ ಉಳಿಸಿಕೊಂಡು ಹೆಚ್ಚಿನ ತೂಕವನ್ನೂ ಕಳೆದುಕೊಳ್ಳುವಂತಾದರೆ ಮಾತ್ರ ಇದು ನಿಜವಾದ ತೂಕ ಇಳಿಕೆಯಾಗಿದೆ. ಈ ಬಗೆಯ ಜಾಣತನದ ಕ್ರಮ ಅನುಸರಿಸುವವರಿಗೆ ಬಾರ್ಲಿ ಅತ್ಯುತ್ತಮ ಆಹಾರವಾಗಿದೆ ಹಾಗೂ ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರು ಅಧಿಕ ತೂಕವನ್ನು ಇಳಿಸಿ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ. ಇದರ ಪ್ರಯೋಜನಗಳನ್ನು ಅರಿತವರು ಬಾರ್ಲಿಯ ನೀರನ್ನು ನಿಯಮಿತವಾಗಿ ಸೇವಿಸಿ ಹೊಟ್ಟೆಯ ಕೊಬ್ಬನ್ನು ಹಾಗೂ ಹಠಮಾರಿಯಾಗಿರುವ ಇತರ ಕೊಬ್ಬನ್ನು ಕರಗಿಸಿಕೊಳ್ಳುತ್ತಿದ್ದಾರೆ.

ಬಾರ್ಲಿ ಸೇವನೆಯ ಪ್ರಯೋಜನಗಳು

ಬಾರ್ಲಿ ಸೇವನೆಯ ಪ್ರಯೋಜನಗಳು

ಬಾರ್ಲಿಯ ಸೇವನೆಯಿಂದ ತೂಕದ ಇಳಿಕೆಯ ಹೊರತಾಗಿ ಲಭಿಸುವ ಇತರ ಆರೋಗ್ಯಕರ ಪ್ರಯೋಜನಗಳಲ್ಲಿ ಪ್ರಮುಖವಾದುದೆಂದರೆ ಹಲವಾರು ಅಪಾಯಕಾರಿಯಾಗಿ ಪರಿಣಮಿಸಬಹುದಾದ ಕಾಯಿಲೆಗಳು ಆವರಿಸುವ ಸಾಧ್ಯತೆಗಳನ್ನು ತಗ್ಗಿಸುವುದಾಗಿದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಹೃದಯದ ತೊಂದರೆಗಳು, ಮಧುಮೇಹ, ಸ್ಥೂಲಕಾಯ, ಸಂಧಿವಾತ, ಅಸ್ತಮಾ, ಪಿತ್ತಕೋಶದ ಕಲ್ಲುಗಳು, ನಪುಂಸಕತ್ವ, ಇತ್ಯಾದಿ. ಅಲ್ಲದೇ ಬಾರ್ಲಿಯ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಉತ್ತಮಗೊಳ್ಳುತ್ತದೆ ಹಾಗೂ ತ್ವಚೆಯ ಆರೋಗ್ಯವೂ ವೃದ್ಧಿಸುತ್ತದೆ. ಸಾಮಾನ್ಯವಾಗಿ ಬಾರ್ಲಿಯನ್ನು ಬೇಯಿಸಿ ಅಥವಾ ಹಿಟ್ಟಿನಿಂದ ಬ್ರೆಡ್ ತಯಾರಿಸಿ ಸೇವಿಸಲಾಗುತ್ತದೆ. ಕೆಲವೊಮ್ಮೆ ಅಕ್ಕಿಯ ಪರ್ಯಾಯವಾಗಿಯೂ ಬಾರ್ಲಿಯನ್ನು ಸೇವಿಸಲಾಗುತ್ತದೆ. ಈ ಅದ್ಭುತ ಧಾನ್ಯದ ಸೇವನೆಯನ್ನು ನಿಯಮಿತವಾಗಿ ಸೇವಿಸಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಇದರ ಪ್ರಯೋಜನಗಳು ಹೇಗೆ ಒದಗುತ್ತವೆ ಎಂಬುದನ್ನು ಸ್ವತಃ ಕಾಣಬಹುದು.

Most Read: ಪ್ರತಿದಿನ ಬಾರ್ಲಿ ನೀರು ಕುಡಿದ್ರೆ ಈ 11 ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

ತೂಕ ಇಳಿಕೆಗೆ ಬಾರ್ಲಿ ನೀರಿನ ಕುಡಿಯುವುದರ ಮಹತ್ವ

ತೂಕ ಇಳಿಕೆಗೆ ಬಾರ್ಲಿ ನೀರಿನ ಕುಡಿಯುವುದರ ಮಹತ್ವ

ಬಾರ್ಲಿಯಲ್ಲಿ ಅಧಿಕಾಂಶವಿರುವ ಕರಗದ ನಾರೇ ತೂಕ ಇಳಿಸಲು ಪ್ರಮುಖ ಕಾರಣವಾದ ಪೋಷಕಾಂಶವಾಗಿದೆ. ಇದೇ ಗುಣವನ್ನು ಓಟ್ಸ್ ರವೆ, ಇಡಿಯ ಗೋಧಿ ಹಾಗೂ ಇತರ ಧಾನ್ಯಗಳು ಹೊಂದಿವೆ. ಅಲ್ಲದೇ ಈ ಅಧಿಕ ನಾರಿನಂಶ ಇರುವ ಆಹಾರಗಳನ್ನು ಸೇವಿಸಿದ ಬಳಿಕ ಹೆಚ್ಚು ಹೊತ್ತಿನವರೆಗೆ ಹಸಿವಾಗದಂತೆ ತಡೆಯುವ ಮೂಲಕ ಅನಗತ್ಯ ಆಹಾರ ಸೇವನೆಯಿಂದ ರಕ್ಷಿಸುತ್ತದೆ. ತನ್ಮೂಲಕ ಅಧಿಕ ಕ್ಯಾಲೋರಿಗಳು ದೇಹ ಸೇರದಂತೆ ತಡೆಯುತ್ತದೆ. ಅಲ್ಲದೇ ಈ ಕರಗದ ನಾರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಮಲಬದ್ದತೆಯಿಂದ ರಕ್ಷಿಸುತ್ತದೆ ಹಾಗೂ ಇತರ ಜೀರ್ಣಕ್ರಿಯೆಗಳಿಗೆ ಸಂಬಂಧಿಸಿದ ತೊಂದರೆಗಳಿಂದಲೂ ರಕ್ಷಿಸುತ್ತದೆ. ಈ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಇದರಲ್ಲಿ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳಿವೆ

ಇದರಲ್ಲಿ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳಿವೆ

ಇಡಿಯ ಧಾನ್ಯಗಳ ಪಟ್ಟಿಯಲ್ಲಿರುವ ಇತರ ಧಾನ್ಯಗಳಿಗೆ ಹೋಲಿಸಿದರೆ ಬಾರ್ಲಿಯಲ್ಲಿ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳಿವೆ. ಅಲ್ಲದೇ ಉತ್ತಮ ಪ್ರಮಾಣದ ಪ್ರೋಟೀನ್ ಸಹಾ ಇದ್ದು ಹಸಿವನ್ನು ನಿಗ್ರಹಿಸುತ್ತದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಈ ಎಲ್ಲಾ ಗುಣಗಳನ್ನು ಕ್ರೋಢೀಕರಿಸಿದರೆ ತೂಕ ಇಳಿಸುವ ಇರಾದೆಯುಳ್ಳ ವ್ಯಕ್ತಿಗಳಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.

ಬಾರ್ಲಿ ನೀರನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳುವ ವಿಧಾನ

ಬಾರ್ಲಿ ನೀರನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳುವ ವಿಧಾನ

*ಅಗತ್ಯವಿರುವ ಸಮಾಗ್ರಿಗಳು:

*1 ಕಪ್ ಸಾವಯವ ವಿಧಾನದಲ್ಲಿ ಬೆಳೆದ ಬಾರ್ಲಿ

*3-4 ಕಪ್ ನೀರು

*ಒಂದು ಚಿಕ್ಕ ಚಮಚ ಲಿಂಬೆ ರಸ ಅಥವಾ ಕಿತ್ತಳೆಯ ರಸ ಅಥವಾ ವನಿಲ್ಲಾ ರುಚಿಯ ಎಸೆನ್ಸ್ (ಕೇವಲ ರುಚಿಗಾಗಿ, ಐಚ್ಛಿಕ)

*ಒಂದು ಚಿಕ್ಕ ತುಂಡು ಬೆಲ್ಲ ಅಥವಾ ಎರಡು ಚಿಕ್ಕ ಚಮಚ ಜೇನು (ಕೇವಲ ರುಚಿಗಾಗಿ, ಐಚ್ಛಿಕ)

*ನೀರಿನಲ್ಲಿ ಬಾರ್ಲಿಯನ್ನು ಹಾಕಿ ಚಿಕ್ಕ ಉರಿಯಲ್ಲಿ ಬಾರ್ಲಿ ಮೆದುವಾಗುವವರೆಗೂ ಬೇಯಿಸಿ.

*ಈ ನೀರನ್ನು ಸೋಸಿ ತಣಿಯಲು ಬಿಡಿ

*ತಣಿದ ಬಳಿಕ ನಿಮ್ಮ ಇಚ್ಛೆಯ ಸಾಮಾಗ್ರಿಗಳನ್ನು ಬೆರೆಸಿ (ಜೇನು. ಲಿಂಬೆ, ಕಿತ್ತಳೆ, ಬೆಲ್ಲ- ಕೇವಲ ರುಚಿಗಾಗಿ)

*ನಿಮ್ಮ ಬಾರ್ಲಿ ನೀರು ಈಗ ಸೇವಿಸಲು ಸಿದ್ಧವಾಗಿದೆ.

*ಹೀಗೇ ತಯಾರಿಸಿಟ್ಟ ನೀರನ್ನು ಫ್ರಿಜ್ಜಿನಲ್ಲಿ ಹಾಳಾಗದಂತೆ ಹೆಚ್ಚು ಕಾಲ ಸಂರಕ್ಷಿಸಿಡಬಹುದು. ಅಲ್ಲದೇ ಬಾರ್ಲಿ ನೀರನ್ನು ತಣ್ಣಗಿದ್ದಂತೆ ಕುಡಿಯುವುದು ಉತ್ತಮ. ತೂಕದ ಇಳಿಕೆಯ ಸಹಿತ ಇತರ ಎಲ್ಲಾ ಪ್ರಯೋಜನಗಳನ್ನು ಪಡೆಯಲು ದಿನದಲ್ಲಿ ಸುಮಾರು ಮೂರು ಲೋಟಗಳಷ್ಟು ಬಾರ್ಲಿ ನೀರನ್ನು ಕುಡಿಯಬೇಕು.

Most Read: ಬಾಡಿ ಹೀಟ್ ಕಡಿಮೆ ಮಾಡಲು ಸೇವಿಸಬಹುದಾದ ಬೇಸಿಗೆಯ ಆಹಾರಗಳು ಮತ್ತು ಪಾನೀಯಗಳು

ಸೂಚನೆ

ಸೂಚನೆ

ಗೋಧಿಯಂತೆಯೇ ಬಾರ್ಲಿಯಲ್ಲಿಯೂ ಗ್ಲುಟೆನ್ ಇದೆ. ಹಾಗಾಗಿ ಗ್ಲುಟೆನ್ ಅಸಹಿಷ್ಣುಗಳು ಅಥವಾ ಸೀಲಿಯಾಕ್ ಕಾಯಿಲೆ ಇರುವ ವ್ಯಕ್ತಿಗಳಿಗೆ ಬಾರ್ಲಿ ಸೂಕ್ತವಲ್ಲ! ಅಲ್ಲದೇ ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಗಳು ಕೇವಲ ಶಿಕ್ಷಣಕ್ಕಾಗಿಯೇ ಹೊರತು ಇದನ್ನೇ ವೈದ್ಯಕೀಯ ಸಲಹೆಯಾಗಿ ಬಳಸಬಾರದು. ತೂಕದ ಇಳಿಕೆಗೆ ಬಾರ್ಲಿಯ ಅಥವಾ ಯಾವುದೇ ಬಗೆಯ ಆಹಾರಕ್ರಮದ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮುನ್ನ ನಿಮ್ಮ ವೈದ್ಯರ ಅಥವ ಆಹಾರತಜ್ಞರ ಸಲಹೆ ಪಡೆದೇ ಮುಂದುವರೆಯಬೇಕು.

English summary

Drink Barley water to burn more calories and flatten your tummy

Barley, also known as Jau in Hindi, is a fibre-rich grain that is highly beneficial when it comes to shedding those extra pounds. It is claimed that drinking barley water can do wonders for your health in various forms. This article explains how consuming barley water can help in weight loss naturally.
X