For Quick Alerts
ALLOW NOTIFICATIONS  
For Daily Alerts

  ಈಗೆಲ್ಲಾ ಸಮಸ್ಯೆ ಬಂದರೆ, ನಾಚಿಕೆ ಮಾಡಿಕೊಳ್ಳಬೇಡಿ! ಕೂಡಲೇ ವೈದ್ಯರಿಗೆ ತೋರಿಸಿ...

  |

  ಇಂದು ವೈದ್ಯವಿಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಕೆಲವು ದಶಕಗಳ ಹಿಂದೆ ಅಸಾಧ್ಯ ಎನಿಸಿದ್ದ ಎಲ್ಲಾ ಕಾಯಿಲೆಗಳಿಗೆ ಇಂದು ಚಿಕಿತ್ಸೆ ಲಭ್ಯವಿದೆ. ಕೆಲವು ಕಾಯಿಲೆಗಳಿಗೆ ಶಾಶ್ವತವಾದ ಪರಿಹಾರ ಸಿಗದೇ ಇದ್ದರೂ ಇದನ್ನು ನಿರ್ವಹಿಸಿಕೊಂಡು ಉತ್ತಮ ಜೀವನ ಮುಂದುವರೆಸಲು ಖಂಡಿತಾ ನೆರವಾಗುತ್ತದೆ. ವೈದ್ಯಕೀಯ ರಂಗದಲ್ಲಿ ಆಗುವಷ್ಟು ಸಂಶೋಧನೆಗಳು ಬೇರಾವ ರಂಗದಲ್ಲೂ ಆಗಲಿಕ್ಕಿಲ್ಲ, ಪರಿಣಾಮವಾಗಿ ದಿನೇ ದಿನೇ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಿಗಳು ಉನ್ನತ ಮಟ್ಟಕ್ಕೇರುತ್ತಲೇ ಹೋಗುತ್ತವೆ. ತನ್ಮೂಲಕ ಹಿಂದಿನ ದಿನಗಳಿಗೆ ಹೋಲಿಸಿದರೆ ಸಾವುಗಳ ಪ್ರಮಾಣವೂ ಕಡಿಮೆಯಾಗಿದೆ, ಅಂದರೆ ಆಯಸ್ಸು ವೃದ್ಧಿಸುತ್ತಿದೆ.

  ಇಂದು ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಕಾಯಿಲೆಗಳನ್ನೂ ನಿಯಂತ್ರಣಕ್ಕೆ ತರುವ ಮೂಲಕವೂ ಆಯಸ್ಸು ಹೆಚ್ಚುತ್ತಿದೆ. ಆದರೆ ಕೆಲವರು ತಮ್ಮ ಹಿಂದಿನ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿಯ ಮೇಲೆ ಅಪಾರ ಭರವಸೆಯನ್ನಿರಿಸಿ ವೈದ್ಯರ ಸೂಚನೆ ಅಥವಾ ಎಚ್ಚರಿಕೆಗಳನ್ನು ಕಡೆಗಣಿಸುವ ಮೂಲಕ ಇವರ ಕಾಯಿಲೆ ಉಲ್ಬಣಗೊಳ್ಳುತ್ತದೆ, ಬಳಿಕವೇ ಇವರು ಚಿಕಿತ್ಸೆಗಾಗಿ ಧಾವಿಸುತ್ತಾರೆ.

  ಹೆಚ್ಚಿನ ಸಂದರ್ಭಗಳಲ್ಲಿ ಕೆಲವರಿಗೆ ಈ ಕಾಯಿಲೆಗಳು ನೀಡುವ ಸೂಚನೆಗಳನ್ನು ವೈದ್ಯರಲ್ಲಿ ಹೇಳಿಕೊಳ್ಳಲು ಮುಜುಗರ ಅಥವಾ ಸಂಕೋಚವೂ ಇನ್ನೊಂದು ಕಾರಣವಾಗಿದೆ. ಮುಜುಗರ ತರಿಸಿದರೂ ಸರಿ, ಇವನ್ನು ವೈದ್ಯರಲ್ಲಿ ಹೇಳಿಕೊಳ್ಳಬೇಕಾದುದು ಅವಶ್ಯವಾಗಿದ್ದು ಇವನ್ನು ಕಡೆಗಣಿಸುವ ಮೂಲಕವೂ ರೋಗ ಉಲ್ಬಣಗೊಳ್ಳಲು ಸಾಧ್ಯವಾಗುತ್ತದೆ. ಬನ್ನಿ, ಮುಜುಗರ ತರಿಸುವ ಆದರೆ ಕಡೆಗಣಿಸಲೇಬಾರದ ಇಂತಹ ಕೆಲವು ಸಂದರ್ಭಗಳು ಯಾವುವು ಎಂಬುದನ್ನು ನೋಡೋಣ....

  ಸ್ತನತೊಟ್ಟುಗಳಿಂದ ದ್ರವ ಜಿನುಗುವುದು

  ಸ್ತನತೊಟ್ಟುಗಳಿಂದ ದ್ರವ ಜಿನುಗುವುದು

  ಹಾಲೂಡಿಸುವ ಸಮಯದ ಹೊರತಾಗಿಯೂ ಸ್ತನತೊಟ್ಟುಗಳಿಂದ ದ್ರವ ಸೂಸುತ್ತಿದ್ದರೆ ಇದಕ್ಕೆ ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸುವ ಪ್ರೊಲಾಕ್ಟಿನ್ ಎಂಬ ರಸದೂತವೇ ಕಾರಣವಾಗಿದೆ. ತಾಯಂದಿರಲ್ಲಿ ಹಾಲಿನ ಉತ್ಪಾದನೆಗೆ ಈ ರಸದೂತ ಬಹಳ ಅವಶ್ಯವಾಗಿದೆ. ಇದು ಮ್ಯಾಮರಿ ಗ್ರಂಥಿಗಳನ್ನು ಪ್ರಚೋದಿಸಿ ಹಾಲನ್ನು ಉತ್ಪಾದಿಸಲು ನೆರವಾಗುತ್ತದೆ. ಒಂದು ವೇಳೆ ನೀವು ಗರ್ಭಿಣಿಯಾಗಿದ್ದರೆ ಅಥವಾ ಹಾಲೂಡಿಸುತ್ತಿರುವ ಬಾಣಂತಿಯಾಗಿದ್ದರೆ ಹಾಲೂಡಿಸುವ ಸಮಯಕ್ಕೂ ಹೊರತಾಗಿ ಬೇರೆ ಸಮಯದಲ್ಲಿ ಹಾಲು ಅಥವಾ ದ್ರವ ಜಿನುಗುತ್ತಿದ್ದರೆ ಈ ಸ್ಥಿತಿ ನಿಮ್ಮನ್ನು ಮುಜುಗರಕ್ಕೊಳಿಸಬಹುದು. ಈ ಸ್ಥಿತಿಗೆ hyperprolactinemia ಎಂದು ಕರೆಯುತ್ತಾರೆ. ಪಿಟ್ಯುಟರಿ ಗ್ರಂಥಿಯ ಮೇಲೆ ಈಗತಾನೇ ಗಡ್ಡೆಯೊಂದು ಬೆಳೆಯುತ್ತಿರುವ ಅಥವಾ ಥೈರಾಯ್ಡ್ ಗ್ರಂಥಿಯ ತೊಂದರೆ (hypothyroidism) ಯಿಂದಲೂ ಈ ಸ್ಥಿತಿ ಎದುರಾಗಬಹುದು. ತಡಮಾಡದೇ ವೈದ್ಯರ ಸಲಹೆ ಪಡೆಯಬೇಕು.

  ಲೈಂಗಿಕ ಜೀವನದಲ್ಲಿ ನಿರಾಸಕ್ತಿ

  ಲೈಂಗಿಕ ಜೀವನದಲ್ಲಿ ನಿರಾಸಕ್ತಿ

  ನಮ್ಮ ನಿತ್ಯ ಜೀವನದಲ್ಲಿ ಹೊಟ್ಟೆಯ ಹಸಿವು, ನೀರಡಿಕೆಯಂತೆಯೇ ಲೈಂಗಿಕ ಬಯಕೆಯೂ ಸಹಜವಾಗಿದೆ. ಲೈಂಗಿಕ ನಿರಾಸಕ್ತಿಗೆ ದೈಹಿಕ ಹಾಗೂ ಮಾನಸಿಕ ಕಾರಣಗಳಿವೆ. ಇದರ ಮೂಲವನ್ನು ಅರಿಯಲು ವೈದ್ಯರನ್ನು ಭೇಟಿಯಾಗುವುದು ಅವಶ್ಯ. ಅದರಲ್ಲೂ ರಜೋನಿವೃತ್ತಿಯ ಹೊಸ್ತಿಲಲ್ಲಿರುವ ಮಹಿಳೆಯರು ಹೆಚ್ಚಾಗಿ ಲೈಂಗಿಕ ನಿರಾಸಕ್ತಿಗೆ ಒಳಗಾಗುತ್ತಾರೆ. ಏಕೆಂದರೆ ಈ ಸಮಯದಲ್ಲಿ ಇವರ ದೇಹದಲ್ಲಿ ಈಸ್ಟ್ರೋಜೆನ್ ಎಂಬ ರಸದೂತದ ಉತ್ಪಾದನೆ ಕಡಿಮೆಯಾಗುತ್ತದೆ ಹಾಗೂ ಜನನಾಂಗಗಳ ದ್ರವಿಸುವಿಕೆಯನ್ನು ಕಡಿಮೆಯಾಗಿಸಿ ಒಣದಾಗಿಸುತ್ತದೆ. ಅಲ್ಲದೇ ಮಾನಸಿಕವಾಗಿ ಈ ಸಮಯದಲ್ಲಿ ಮಹಿಳೆಯರು ಖಿನ್ನತೆಯ ಭಾವನೆಯನ್ನೂ ಅನುಭವಿಸುವ ಮೂಲಕ ಲೈಂಗಿಕ ನಿರಾಸಕ್ತಿಯನ್ನು ಪ್ರಕಟಿಸುತ್ತಾರೆ.

  ಅಂಗಿಯ ಮೂಲಕ ಪ್ರಕಟಗೊಳ್ಳುವ ಬೆವರು

  ಅಂಗಿಯ ಮೂಲಕ ಪ್ರಕಟಗೊಳ್ಳುವ ಬೆವರು

  ಪುರುಷರಲ್ಲಿ ಕಂಕುಳು ಹಾಗೂ ಬೆನ್ನಿನ ಕೆಳಭಾಗದಲ್ಲಿ ವಿಪರೀತ ಎನಿಸುವಷ್ಟು ಬೆವರುವ ಮೂಲಕ ಇದು ಅವರು ಧರಿಸಿರುವ ಅಂಗಿಯನ್ನು ತೋಯಿಸಿ ಪ್ರಕಟಗೊಳ್ಳುತ್ತದೆ. ನಾಲ್ಕು ಜನರ ನಡುವೆ ಇದು ಮುಜುಗರ ತರಿಸುತ್ತದೆ. ಇದಕ್ಕೆ ಸೆಖೆ, ಭಾವನೆಗಳು ಅಥವಾ ರಸದೂತಗಳ ಏರುಪೇರು ಕಾರಣವಾಗಬಹುದು. ಒಂದು ವೇಳೆ ಸುತ್ತ ಮುತ್ತಲಿರುವ ಪ್ರತಿಯೊಬ್ಬರ ಸ್ಥಿತಿಯೂ ಇದೇ ಆಗಿದ್ದರೆ ಆಗ ಮುಜುಗರ ಎದುರಾಗದು. ಬದಲಿಗೆ ನಿಮಗೆ ಮಾತ್ರವೇ ಹೀಗೆ ಆಗುತ್ತಿದ್ದರೆ ಇದಕ್ಕೆ ಬೇರೆಯೇ ಕಾರಣವಿರಬಹುದು. ಕೆಲವೊಮ್ಮೆ ಔಷಧಿಯ ಅಡ್ಡಪರಿಣಾಮದಿಂದಲೂ ಅತಿಬೆವರುವಿಕೆ ಎದುರಾಗಬಹುದು. ವೈದ್ಯರನ್ನು ಕಂಡು ಸಲಹೆ ಪಡೆಯುವುದು ಅಗತ್ಯ.

  ಜನನಾಂಗಗಳ ವಾಸನೆ

  ಜನನಾಂಗಗಳ ವಾಸನೆ

  ವಿಶೇಷವಾಗಿ ಮಹಿಳೆಯರ ಜನನಾಂಗಗಳಲ್ಲಿರುವ ದ್ರವ ಕೊಂಚ ಆಮ್ಲೀಯವಾಗಿರುತ್ತದೆ. ಈ ಭಾಗದಲ್ಲಿ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳ ಸೋಂಕು ಉಂಟಾಗದಂತೆ ನಿಸರ್ಗವೇ ರಚಿಸಿರುವ ವ್ಯವಸ್ಥೆ ಇದು. ಆದರೆ ಇಲ್ಲಿ ಆಮ್ಲೀಯತೆ ಕಡಿಮೆಯಾದರೆ ಅಥವಾ ಕ್ಷಾರೀಯತೆ ಹೆಚ್ಚಿದರೆ ಈ ಭಾಗದಿಂದ ವಾಸನೆ ಹೊರಡಬಹುದು. ಕ್ಷಾರೀಯವಾಗಲು ವೀರ್ಯಾಣುಗಳು, ಋತುಸ್ರಾವ, ಕೆಲವು ಸೋಪುಗಳು ಮೊದಲಾದವು ಕಾರಣವಾಗಿದ್ದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿರಬಹುದು. ಯಾವಾಗ ಈ ಬ್ಯಾಕ್ಟೀರಿಯಾಗಳ ಸಂಖ್ಯೆ ಒಂದು ಹಂತ ಮೀರುತ್ತದೆಯೋ ಆಗ ವಾಸನೆ ಹೊರ ಸೂಸಲು ಆರಂಭವಾಗುತ್ತದೆ. ಈಗ ವೈದ್ಯರನ್ನು ಭೇಟಿಯಾಗುವುದು ಅನಿವಾರ್ಯ! ಇದಕ್ಕೆ ಲೈಂಗಿಕವಾಗಿ ಹರಡಿರುವ ರೋಗ ಅಥವಾ ಶಿಲೀಂಧ್ರದ ಸೋಂಕು ಸಹಾ ಕಾರಣವಾಗಿರಬಹುದು.

  ಮಲವಿಸರ್ಜನೆಯ ವೇಳೆ ನೋವಾಗುವುದು

  ಮಲವಿಸರ್ಜನೆಯ ವೇಳೆ ನೋವಾಗುವುದು

  ಈ ತೊಂದರೆಗೆ ಮಲದ್ವಾರದಲ್ಲಿ ಸೂಕ್ಷ್ಮ ಗಾಯ ಅಥವಾ ಗೀರುಗಳಾಗಿರುವ ಅಥವಾ ಊದಿಕೊಂಡಿರುವುದು ಕಾರಣವಾಗಿರಬಹುದು. ಕೆಲವರಿಗೆ ಮಲದಲ್ಲಿ ರಕ್ತವೂ ಕಾಣಿಸಿಕೊಳ್ಳಬಹುದು. ಒಂದು ವೇಳೆ ಮಹಿಳೆಯರಲ್ಲಿ ಇದರೊಂದಿಗೆ ಕೆಳಬೆನ್ನಿನಲ್ಲಿ ನೋವು ಹಾಗೂ ಅತಿಯಾದ ಮಾಸಿಕಸ್ರಾವ ಕಂಡುಬಂದರೆ ಇದಕ್ಕೆ ಫೈಬ್ರಾಯ್ಡ್ ಅಥವಾ ಗರ್ಭಾಶಯದಲ್ಲಿ ದ್ರಾಕ್ಷಿಗೊಂಚಲಿನಂತಹ ಗಂಟುಗಳು ಉಂಟಾಗಿರುವ ಸಾಧ್ಯತೆ ಇದೆ ಅಥವಾ ಚಿಕ್ಕ ಗಡ್ಡೆಯೊಂದು ಮೂಡುತ್ತಿದ್ದಿರಬಹುದು. ವೈದ್ಯರಿಂದ ತಪಾಸಣೆಗೊಳಗಾಗುವುದು ಅಗತ್ಯ.

  ಲೈಂಗಿಕ ಕ್ರಿಯೆಯಲ್ಲಿ ನೋವು

  ಲೈಂಗಿಕ ಕ್ರಿಯೆಯಲ್ಲಿ ನೋವು

  ದಂಪತಿಗಳ ನಡುವಣ ಮಿಲನಸಮಯದಲ್ಲಿ ನೋವು ಅಥವಾ ಉರಿ ಅಥವಾ ಸಂವೇದನೆಯಿಲ್ಲದ ಅನುಭವವಾಗುತ್ತಿದೆಯೇ? ಇದಕ್ಕೆ ಮಹಿಳೆಯರ ಜನನಾಂಗ ತೀರಾ ಒಣಗಿರುವುದು ಒಂದು ಕಾರಣವಾಗಿರಬಹುದು. ರಜೋನಿವೃತ್ತಿಯ ಸಮಯದಲ್ಲಿ ಈ ತೊಂದರೆ ಸಾಮಾನ್ಯ. ಹೆರಿಗೆಯ ಬಳಿಕ, ಬಾಣಂತನದ ಅವಧಿಯಲ್ಲಿಯೂ ಈ ತೊಂದರೆ ಕಾಡುತ್ತದೆ. ಕೆಲವು ಗರ್ಭನಿರೋಧಕ ಗುಳಿಗೆಗಳೂ ಇದಕ್ಕೆ ಕಾರಣವಾಗಬಹುದು. ಈ ಸ್ಥಿತಿಯನ್ನು ವೈದ್ಯರಿಗೆ ವಿವರಿಸಿ ತಪಾಸಣೆಗೊಳಗಾಗುವುದು ಅಗತ್ಯ. ಕೆಲವೊಮ್ಮೆ ಗರ್ಭಕಂಠದಲ್ಲಿ ಸೋಂಕು ಅಥವಾ ಇತರ ಕಾರಣಗಳಿಂದಲೂ ನೋವು ಕಾಣಿಸಿಕೊಳ್ಳಬಹುದು.

  ವ್ಯಾಯಮದ ಸಮಯದಲ್ಲಿ ತೇಗು

  ವ್ಯಾಯಮದ ಸಮಯದಲ್ಲಿ ತೇಗು

  ಟ್ರೆಡ್ ಮಿಲ್ ಮೇಲೆ ನಡೆಯುತ್ತಿರುವಾಗ ಅಥವಾ ಇತರ ನಡಿಗೆಯ ಸಮಯದಲ್ಲಿ ಸತತವಾಗಿ ತೇಗು ಎದುರಾಗುತ್ತಿದ್ದರೆ ಇದಕ್ಕೆ ಹೊಟ್ಟೆಯಲ್ಲಿ ಸಕ್ಕರೆಯನ್ನು ಒಡೆಯಲು ಆಗುವ ಜೀರ್ಣಕ್ರಿಯೆಯ ಪರಿಣಾಮವಾಗಿರಬಹುದು. ವಿಶೇಷವಾಗಿ ಕ್ರೀಡಾಪಟುಗಳು ತಮ್ಮ ಕ್ಷಮತೆ ಹೆಚ್ಚಿಸಲು ಸಕ್ಕರೆ ಹೆಚ್ಚಿರುವ ಪೇಯಗಳು ಅಥವಾ ಅಪಾಯಕಾರಿ ಎನಜ್ರಿ ಡ್ರಿಂಕ್ ಎಂಬ ಅತಿ ಹೆಚ್ಚು ಸಕ್ಕರೆ ಇರುವ ಪೇಯಗಳನ್ನು ಕುಡಿಯುವ ಮೂಲಕ ಹೆಚ್ಚು ಹೆಚ್ಚು ತೇಗುತ್ತಾರೆ.

  ಆಗಾಗ ಅಪಾಯವಾಯು ಬಿಡುಗಡೆ

  ಆಗಾಗ ಅಪಾಯವಾಯು ಬಿಡುಗಡೆ

  ಜೀರ್ಣಕ್ರಿಯೆಯಲ್ಲಿ ಕೆಲವು ವಾಯುಗಳೂ ಉತ್ಪತ್ತಿಯಾಗುತ್ತವೆ. ಆಗಾಗ ಇವು ದೇಹದಿಂದ ಹೊರಸೂಸಬೇಕು. ಆದರೆ ಈ ಸಮಯದಲ್ಲಿ ಉಂಟಾಗುವ ಸದ್ದು ಭಾರೀ ಮುಜುಗರ ತರಿಸುತ್ತದೆ. ಕೆಲವರಲ್ಲಿ ಈ ಸ್ಥಿತಿ ಸತತವಾಗಿದ್ದು ಇವರಿಗೆ ಹುಟ್ಟಿದಾಗಿನಿಂದಲೂ ಈ ತೊಂದರೆ ಇರುತ್ತದೆ. ಆದರೆ ದಿನಕ್ಕೆ ಹದಿನಾರು ಬಾರಿ ಹೀಗೆ ಅಪಾಯವಾಯು ವಿಸರ್ಜಿಸುವವರು ಅತಿ ಸಂತೋಷದಿಂದಿರುವ ವ್ಯಕ್ತಿಗಳು ಎಂದು ಒಂದು ಸಂಶೋಧನೆ ಹೇಳುತ್ತದೆ. ಹಾಗಾಗಿ ಈ ತೊಂದರೆ ಇದ್ದರೆ ನೀವು ಅದೃಷ್ಟಶಾಲಿಗಳೆಂದೇ ಭಾವಿಸಿಕೊಳ್ಳಬಹುದು.

  English summary

  Solve Embarrassing Health Conditions

  Today, medical science has achieved a growth wherein we are able to find solution to almost all health ailments. Even if the conditions cannot be cured permanently, the symptoms can be alleviated. To offer more relief to the mankind from diseases more research is going on and mortality rate is lesser when compared to earlier times. Here is a list of embarrassing health conditions and their reasons.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more