For Quick Alerts
ALLOW NOTIFICATIONS  
For Daily Alerts

ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುವುದು ಹೇಗೆ?

By Super Admin
|

ಪ್ರತಿ ಬಿಸಿರಕ್ತದ ಪ್ರಾಣಿಯ ಜೀವ ರಕ್ತಸಂಚಾರದ ಮೇಲೆ ಅವಲಂಬಿತವಾಗಿದೆ. ರಕ್ತ ಎಂದರೆ ನಮ್ಮ ಕಣ್ಣಿಗೆ ಕಟ್ಟುವುದು ಕೆಂಪು ಬಣ್ಣ. ಈ ಬಣ್ಣಕ್ಕೆ ಕಾರಣ ರಕ್ತದಲ್ಲಿರುವ ಹಿಮೋಗ್ಲೋಬಿನ್ ಎಂಬ ಕಬ್ಬಿಣ ಆಧಾರಿತ ಪ್ರೋಟೀನು. ರಕ್ತದ ಮುಖ್ಯ ಕೆಲಸವೆಂದರೆ ಶ್ವಾಸಕೋಶಗಳಿಂದ ಹೀರಲ್ಪಟ್ಟ ಆಮ್ಲಜನಕವನ್ನು ಕೊಂಡು ಹೃದಯದ ಒತ್ತಡದಿಂದ ನರಮಂಡಲದ ಮೂಲಕ ದೇಹದ ಪ್ರತಿ ಜೀವಕೋಶದ ಬಳಿ ಸಾಗಿ ಆಮ್ಲಜನಕ ನೀಡಿ ಅಲ್ಲಿಂದ ಇಂಗಾಲದ ಡೈ ಆಕ್ಸೈಡ್ ಅನ್ನು ಹಿಂದೆ ತಂದು ಶ್ವಾಸಕೋಶಕ್ಕೆ ಮರಳಿಸಿ ದೇಹದಿಂದ ಹೊರಹೋಗುವಂತೆ ಮಾಡುವುದು. ಆದ್ದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಆರೋಗ್ಯಕರ ಮಟ್ಟದಲ್ಲಿರುವುದು ಅತ್ಯಂತ ಅವಶ್ಯವಾಗಿದೆ. ವೈದ್ಯ ವಿಜ್ಞಾನದ ಪ್ರಕಾರ ಈ ಕೆಳಗಿನಂತಿರಬೇಕು.

ವಯಸ್ಕ ಪುರುಷರಲ್ಲಿ 14 ರಿಂದ 18 mg/dl (ಮಿಲಿಗ್ರಾಂ/ಡೆಸಿಲೀಟರ್)
ಮತ್ತು ವಯಸ್ಕ ಮಹಿಳೆಯರಲ್ಲಿ : 12 ರಿಂದ 16 mg/dl (ಮಿಲಿಗ್ರಾಂ/ಡೆಸಿಲೀಟರ್)

ಒಂದು ವೇಳೆ ಈ ಮಟ್ಟಕ್ಕಿಂತಲೂ ಕಡಿಮೆಯಾದರೆ ದೇಹ ಹಲವಾರು ತೊಂದರೆಗಳನ್ನು ಅನುಭವಿಸುತ್ತದೆ. ಮುಖ್ಯವಾಗಿ ತಲೆತಿರುಗುವಿಕೆ, ಸುಸ್ತು, ಶ್ವಾಸ ಹಿಡಿದುಕೊಳ್ಳಲು ಕಷ್ಟವಾಗುವುದು, ಕಣ್ಣು ಮಂಜಾಗುವುದು, ತಲೆನೋವು, ಚರ್ಮ ಬಿಳಿಚಿಕೊಳ್ಳುವುದು, ಉಗುರುಗಳು ಸುಲಭವಾಗಿ ಬಿರುಕು ಬಿಡುವುದು, ಹೃದಯಬಡಿತ ಹೆಚ್ಚಾಗುವುದು ಮತ್ತು ಹಸಿವೆಯಿಲ್ಲದಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಈ ಪರಿಸ್ಥಿತಿಗೆ ರಕ್ತಹೀನತೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಋತುಮತಿಯಾದ ಯುವತಿಯರು ತಮ್ಮ ತಿಂಗಳ ರಜಾದಿನಗಳಲ್ಲಿ ಬಹಳಷ್ಟು ರಕ್ತವನ್ನು ಕಳೆದುಕೊಳ್ಳುವುದರಿಂದ ಈ ತೊಂದರೆಗೆ ಒಳಗಾಗುತ್ತಾರೆ. ಆದರೆ ಒಂದೆರಡು ದಿನಗಳಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ದೇಹ ಮರುಚೈತನ್ಯ ಪಡೆಯುತ್ತದೆ. ಆದರೆ ಒಂದು ವೇಳೆ ಈ ಕಾರಣವಲ್ಲದೇ ಬೇರೆ ಕಾರಣಗಳಿಂದ ರಕ್ತಹೀನತೆ ಉಂಟಾಗಿದ್ದರೆ ಇದಕ್ಕೆ ಕಾರಣವನ್ನು ಹುಡುಕಬೇಕಾಗುತ್ತದೆ. ವೈದ್ಯರ ಅನುಭವದ ಪ್ರಕಾರ ಈ ಕೊರತೆಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಸಿ ಮತ್ತು ಬಿ12 ಗಳನ್ನು ಆಹಾರ ಒಳಗೊಳ್ಳದೇ ಇರುವುದು ಮೂಲಕಾರಣವಾಗಿದೆ. ಸಸ್ಯಾಹಾರಿಗಳು ದೂರ ಮಾಡಬಾರದ ಆಹಾರಗಳಿವು!

ರಕ್ತಹೀನತೆಗೆ ಇನ್ನೂ ಹಲವು ಕಾರಣಗಳಿವೆ. ಶಸ್ತ್ರಚಿಕಿತ್ಸೆ, ಒಳಹೊಡೆತ, ಸತತ ರಕ್ತದಾನ, ರಕ್ತ ಉತ್ಪತ್ತಿಯಾಗುವ ಸ್ಥಳವಾದ ಅಸ್ಥಿಮಜ್ಜೆ ರೋಗಗ್ರಸ್ಥವಾಗಿರುವುದು, ಕ್ಯಾನ್ಸರ್, ಮೂತ್ರಕೋಶಗಳ ತೊಂದರೆ, ಸಂಧಿವಾತ, ಮಧುಮೇಹ, ಜಠರದ ಹುಣ್ಣು, ಹೊಟ್ಟೆ ಮತ್ತು ಜೀರ್ಣಾಂಗಗಳ ಕಾಯಿಲೆ ಮೊದಲಾದವು ಸಹಾ ರಕ್ತಹೀನತೆಗೆ ಕಾರಣವಾಗಬಲ್ಲವು.

ರಕ್ತಹೀನತೆ ಎಂದರೆ ಶರೀರದಲ್ಲಿ ರಕ್ತ ಕಡಿಮೆಯಾಗುವುದು ಎಂದರ್ಥವಲ್ಲ. ನಮ್ಮ ಶರೀರದಲ್ಲಿ ಸುಮಾರು ಐದೂವರೆ ಲೀಟರ್ ರಕ್ತವಿದೆ. ರಕ್ತಹೀನತೆಯಿಂದ ಬಳಲುತ್ತಿರುವವರ ಶರೀರದಲ್ಲೂ ಸರಿಯಾಗಿ ಐದೂವರೆ ಲೀಟರ್ ಇರುತ್ತದೆ. ಆದರೆ ಈ ಐದೂವರೆ ಲೀಟರಿನಲ್ಲಿ ಕೆಂಪುರಕ್ತಕಣಗಳು ಕಡಿಮೆಯಾಗಿ ಇತರ ಕಣಗಳು ಹೆಚ್ಚಾಗಿರುತ್ತವೆ. (ಮುಖ್ಯವಾಗಿ ರಕ್ತದ ನೀರು ಅಥವಾ ಪ್ಲಾಸ್ಮಾ). ರಕ್ತದ ಕ್ಯಾನ್ಸರ್ ಇರುವ ರೋಗಿಗಳಲ್ಲಿ ಬಿಳಿರಕ್ತಕಣಗಳು ಭಾರೀ ಪ್ರಮಾಣದಲ್ಲಿದ್ದು ಕೆಂಪು ರಕ್ತಕಣಗಳನ್ನೇ ಇಲ್ಲದಂತೆ ಮಾಡಿಬಿಡುತ್ತವೆ. ರಕ್ತಹೀನತೆಯಿಂದ ಪಾರಾಗಲು ನಿಸರ್ಗ ನಮಗೆ ಹಲವು ಆಹಾರಗಳನ್ನು ನೀಡಿದೆ. ಈ ಪ್ರಬಲ ಆಹಾರಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಹತ್ತು ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದೆ.

ಕಬ್ಬಿಣ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಕಬ್ಬಿಣ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಅಮೇರಿಕಾದ National Anemia Action Council ಪ್ರಕಾರ ರಕ್ತಹೀನತೆಗೆ ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ ಇರದಿರುವುದು ಕಾರಣವಾಗಿದೆ. ಕಬ್ಬಿಣ ಹೆಚ್ಚಿರುವ ಆಹಾರಗಳಾದ ಯಕೃತ್, ಕೆಂಪು ಮಾಂಸ, ಸಿಗಡಿ, ಟೋಫು, ಪಾಲಕ್ ಸೊಪ್ಪು, ಬಾದಾಮಿ, ಖರ್ಜೂರ, ಅವರೆಕಾಳು, ಬಲವರ್ಧಿಸಿದ ಬೆಳಗ್ಗಿನ ಸಿದ್ಧ ಉಪಾಹಾರಗಳು, ಚಿಪ್ಪು ಮತ್ತು ಶತಾವರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ. ಆದರೆ ನಮ್ಮ ಹಿತ್ತಲಲ್ಲಿಯೇ ಬೆಳೆಯುವ ಬಸಲೆ ಸೊಪ್ಪು ರಕ್ತಹೀನತೆಯನ್ನು ನೀಗಿಸುವಲ್ಲಿ ಅತ್ಯುತ್ತಮ ಆಹಾರವಾಗಿದೆ. ಜೊತೆಗೇ ವೈದ್ಯರ ಸಲಹೆಯ ಮೇರೆಗೆ ಮಾತ್ರೆಗಳ ರೂಪದಲ್ಲಿರುವ ಕಬ್ಬಿಣದ ಅಂಶವನ್ನೂ ಸೇವಿಸಬಹುದು.

ವಿಟಮಿನ್ ಸಿ ಹೆಚ್ಚು ಸೇವಿಸಿ

ವಿಟಮಿನ್ ಸಿ ಹೆಚ್ಚು ಸೇವಿಸಿ

ಒಂದು ವೇಳೆ ವಿಟಮಿನ್ ಸಿ ಕೊರತೆಯಿಂದ ರಕ್ತಹೀನತೆಯುಂಟಾಗಿದ್ದರೆ ವಿಟಮಿನ್ ಸಿ ಹೆಚ್ಚಿರುವ ಆಹಾರಗಳು, ಅದರಲ್ಲಿಯೂ ಮುಖ್ಯವಾಗಿ ಹಣ್ಣುಗಳನ್ನು ಸೇವಿಸುವುದು ಅಗತ್ಯವಾಗಿದೆ. ಅಲ್ಲದೇ ವಿಟಮಿನ್ ಸಿ ಇಲ್ಲದಿದ್ದರೆ ಕಬ್ಬಿಣವನ್ನು ನಮ್ಮ ದೇಹ ಅರಗಿಸಿಕೊಳ್ಳಲಾರದು. ಹಣ್ಣುಗಳಾದ ಪೊಪ್ಪಾಯಿ, ಕಿತ್ತಳೆ, ಲಿಂಬೆ, ಸ್ಟ್ರಾಬೆರಿ, ದೊಣ್ಣೆಮೆಣಸು, ಬ್ರೋಕೋಲಿ, ಚಕ್ಕೋತ, ಟೊಮೇಟೊ ಮತ್ತು ಪಾಲಕ್ ಸೊಪ್ಪುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ. ಇದೆ. ಜೊತೆಗೆ ವೈದ್ಯರ ಸಲಹೆಯ ಮೇರೆಗೆ ಔಷಧಿಯ ರೂಪದಲ್ಲಿ ಲಭ್ಯವಿರುವ ವಿಟಮಿನ್ ಸಿ ಮಾತ್ರೆ ಅಥವಾ ಸಿರಪ್ ಗಳನ್ನೂ ಸೇವಿಸಬಹುದು.

ಫೋಲಿಕ್ ಆಮ್ಲ ಸೇವಿಸಿ

ಫೋಲಿಕ್ ಆಮ್ಲ ಸೇವಿಸಿ

ಬಿ-ಕಾಂಪ್ಲೆಕ್ಸ್ ವಿಟಮಿನ್ ಪಂಗಡಕ್ಕೆ ಸೇರಿದ ಫೋಲಿಕ್ ಆಮ್ಲ ಕೆಂಪುರಕ್ತಕಣಗಳನ್ನು ಹೊಸದಾಗಿ ಬೆಳೆಸಲು ಅತ್ಯಂತ ಅಗತ್ಯವಾದ ಸಾಮಾಗ್ರಿಯಾಗಿದೆ. ಫೋಲಿಕ್ ಆಮ್ಲ ಹೆಚ್ಚಿರುವ ಆಹಾರಗಳಾದ ಹಸಿರು ದಪ್ಪ ಎಲೆಗಳಿರುವ ಸೊಪ್ಪು, ಯಕೃತ್, ಅಕ್ಕಿ (ಕುಚ್ಚಿಗೆ ಅಕ್ಕಿ), ಬ್ರೋಕೋಲಿ, ಮೊಳಕೆಬರಿಸಿದ ಕಾಳುಗಳು, ಒಣಗಿಸಿದ ಅವರೆಕಾಳು, ಗೋಧಿಕಾಳು, ವಿವಿಧ ಕಾಳುಗಳ ಮಿಶ್ರಣ, ಶೇಂಗಾಬೀಜ, ಬಾಳೆಹಣ್ಣು ಮೊದಲಾದವು ರಕ್ತಹೀನತೆ ಕಡಿಮೆಗೊಳಿಸಲು ಪೂರಕವಾಗಿವೆ. ಜೊತೆಗೆ ವೈದ್ಯರ ಸಲಹೆ ಮೇರೆಗೆ ಇನ್ನೂರರಿಂದ ನಾನೂರು ಮಿಲಿಗ್ರಾಂ ಫೋಲೇಟ್ ಹೆಚ್ಚುವರಿ ಔಷಧಿ, ಮಾತ್ರೆ ಅಥವಾ ಸಿರಪ್ ಗಳನ್ನೂ ಸೇವಿಸಬಹುದು.

ಬೀಟ್ ರೂಟ್ ಸೇವಿಸಿ

ಬೀಟ್ ರೂಟ್ ಸೇವಿಸಿ

ಕತ್ತರಿಸಿದರೆ ರಕ್ತದಂತೆ ಕೆಂಪುಕೆಂಪಾದ ದ್ರವವನ್ನು ಹೊಂದಿರುವ ಬೀಟ್ ರೂಟ್ ನಿಜಕ್ಕೂ ರಕ್ತಹೀನತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೀಟ್ ರೂಟ್ ನಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಫೋಲಿಕ್ ಆಮ್ಲಗಳಿದ್ದು ರಕ್ತಹೀನತೆಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ. ಜೊತೆಗೆ ಉತ್ತಮ ಪ್ರಮಾಣದಲ್ಲಿರುವ ಕರಗುವ ನಾರು ಮತ್ತು ಪೊಟ್ಯಾಶಿಯಂ ಸುಲಭವಾಗಿ ಜೀರ್ಣವಾಗಿ ರಕ್ತದಲ್ಲಿ ಕೆಂಪುರಕ್ತಕಣಗಳು ಹೆಚ್ಚಲು ನೆರವಾಗುತ್ತವೆ.

ಬೀಟ್‌ರೂಟ್ ಸೇವನೆ

* ಒಂದು ಅಥವಾ ಎರಡು ಬೀಟ್‌ರೂಟ್‌ಗಳನ್ನು ಸಿಪ್ಪೆ ಸುಲಿಯದೇ ಮೈಕ್ರೋವೇವ್‌ನಲ್ಲಿ ಅಥವಾ ನೇರವಾಗಿ ಬೆಂಕಿಯಲ್ಲಿ ಹುರಿದು ತಣಿದ ಬಳಿಕ ಸಿಪ್ಪೆ ಸುಲಿದು ಸೇವಿಸುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

* ಒಂದು ಸಾಮಾನ್ಯ ಗಾತ್ರದ ಬೀಟ್‌ರೂಟ್‌, ಮೂರು ಕ್ಯಾರೆಟ್ ಮತ್ತು ಒಂದು ಸಾಮಾನ್ಯ ಗಾತ್ರದ ಗೆಣಸಿನ ಅರ್ಧಭಾಗಗಳ ಸಿಪ್ಪೆ ಸುಲಿದು ಹಾಲು ಮತ್ತು ನೀರಿನೊಂದಿಗೆ ಚೆನ್ನಾಗಿ ಅರೆದು ಜ್ಯೂಸ್ ಮಾಡಿಕೊಂಡು ಪ್ರತಿದಿನ ಒಂದು ಲೋಟ ಕುಡಿದರೆ ರಕ್ತಹೀನತೆ ಕಡಿಮೆಯಾಗುತ್ತದೆ.

ದಿನಕ್ಕೊಂದು ಸೇಬುಹಣ್ಣು ರಕ್ತಹೀನತೆಗೂ ನೆರವಾಗಬಲ್ಲುದು

ದಿನಕ್ಕೊಂದು ಸೇಬುಹಣ್ಣು ರಕ್ತಹೀನತೆಗೂ ನೆರವಾಗಬಲ್ಲುದು

ಸೇಬುಹಣ್ಣಿನಲ್ಲಿ ಉತ್ತಮಪ್ರಮಾಣದ ಕಬ್ಬಿಣ ಮತ್ತು ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳಿವೆ. ಪ್ರತಿದಿನ ಒಂದು ಸೇಬುಹಣ್ಣನ್ನು ಸೇವಿಸುವುದು ಉತ್ತಮ. ಅದರಲ್ಲೂ, ರಕ್ತಹೀನತೆಗೆ ಹಸಿರು ಸೇಬು ಉತ್ತಮವಾಗಿದೆ.

ಸೇಬುಹಣ್ಣಿನ ಸೇವನೆ:

* ಸೇಬುಹಣ್ಣಿನ ರಸ ಮತ್ತು ಬೀಟ್ ರೂಟ್ ನ ರಸಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಕೊಂಚ ಶುಂಠಿ ಮತ್ತು ಅರ್ಧ ಲಿಂಬೆಯ ರಸ ಸೇರಿಸಿ ಜ್ಯೂಸ್ ತಯಾರಿಸಿ. ಪ್ರತಿದಿನ ಒಂದು ಕಪ್ ಜ್ಯೂಸ್ ಕುಡಿಯುವುದರಿಂದ ರಕ್ತಹೀನತೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ಜೋನಿಬೆಲ್ಲ (Blackstrap Molasses) ಮತ್ತು ಶಿರ್ಕಾ ಸೇವಿಸಿ

ಜೋನಿಬೆಲ್ಲ (Blackstrap Molasses) ಮತ್ತು ಶಿರ್ಕಾ ಸೇವಿಸಿ

ಕಬ್ಬಿನ ಹಾಲಿನಿಂದ ಬೆಲ್ಲ ತಯಾರಿಸಿದ ಬಳಿಕ ಕಡೆಗೆ ಉಳಿಯುವ ಕಪ್ಪುದ್ರವವೇ ಜೋನಿಬೆಲ್ಲ. ಈ ದ್ರವದಲ್ಲಿ ಕಬ್ಬಿಣ, ಫೋಲಿಕ್ ಆಮ್ಲ, ಹಲವು ಬಿ ವಿಟಮಿನ್ ಪೋಷಕಾಂಶಗಳು ಕೆಂಪುರಕ್ತಕಣಗಳ ಬೆಳವಣಿಗೆಗೆ ಸಹಕಾರಿಯಾಗಿವೆ.

ಜೋನಿಬೆಲ್ಲದ ಸೇವನೆ:

* ಒಂದು ಕಪ್ ನೀರಿನಲ್ಲಿ ಎರಡು ದೊಡ್ಡಚಮಚಸೇಬಿನ ಶಿರ್ಕಾ (apple cider vinegar) ಮತ್ತು ಎರಡು ದೊಡ್ಡಚಮಚ ಜೋನಿಬೆಲ್ಲದ ದಪ್ಪನೆಯ ದ್ರವವನ್ನು ಸೇರಿಸಿ ಕದಡಿರಿ. ಈ ಮಿಶ್ರಣವನ್ನು ದಿನಕ್ಕೊಂದು ಲೋಟ ಕುಡಿಯಿರಿ (ಪ್ರತಿದಿನ ರಾತ್ರಿ)

ದಾಳಿಂಬೆಹಣ್ಣು ಸೇವಿಸಿ

ದಾಳಿಂಬೆಹಣ್ಣು ಸೇವಿಸಿ

ದಾಳಿಂಬೆಯ ಬೀಜಗಳಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಪ್ರೋಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ ಮತ್ತು ಕರಗುವ ನಾರು ಇದೆ. ಈ ಎಲ್ಲಾ ಪೋಷಕಾಂಶಗಳು ರಕ್ತದಲ್ಲಿ ಹೀಮೋಗ್ಲೋಬಿನ್ ಹೆಚ್ಚಿಸಲು ನೆರವಾಗುತ್ತವೆ ಹಾಗೂ ಸುಗಮವಾದ ರಕ್ತಸಂಚಾರಕ್ಕೆ ಸಹಕರಿಸುತ್ತವೆ. ದಿನಕ್ಕೊಂದು ಮಧ್ಯಮಗಾತ್ರದ ದಾಳಿಂಬೆಯನ್ನು ಸೇವಿಸುವುದು ಅತ್ಯುತ್ತಮವಾಗಿದೆ. ಒಂದು ವೇಳೆ ತಾಜಾ ಹಣ್ಣು ಲಭ್ಯವಿಲ್ಲದಿದ್ದರೆ ಎರಡು ಒಣಗಿದ ಬೀಜಗಳನ್ನು ಪ್ರತಿದಿನ ಒಂದು ಲೋಟ ಬಿಸಿಹಾಲಿನಲ್ಲಿ ಬೆರೆಸಿ ಕುಡಿಯಬಹುದು.

ತುರಿಕೆ ಸೊಪ್ಪು (Nettle)

ತುರಿಕೆ ಸೊಪ್ಪು (Nettle)

ತುರಿಕೆ ಸೊಪ್ಪಿನಲ್ಲಿ ಕಬ್ಬಿಣ, ವಿಟಮಿನ್ ಬಿ, ಸಿ ಮತ್ತು ಹೀಮೋಗ್ಲೋಬಿನ್ ಹೆಚ್ಚಿಸುವ ಇನ್ನೂ ಹಲವು ಪೋಷಕಾಂಶಗಳಿವೆ. ಇದನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲದಿರುವುದರಿಂದ ಕೆಳಗಿನ ವಿಧಾನ ಅನುಸರಿಸಿ:

* ಒಂದು ಕಪ್ ಕುದಿಯುವ ನೀರಿಗೆ ಎರಡು ಚಮಚದ ಪ್ರಮಾಣದಲ್ಲಿ ಒಣಗಿದ ತುರಿಕೆಸೊಪ್ಪನ್ನು ಹಾಕಿ ಸುಮಾರು ಹತ್ತು ನಿಮಿಷಗಳವರೆಗೆ ಹಾಗೇ ಬಿಡಿ. (ಕುದಿಸಬೇಡಿ)

* ಈ ದ್ರವವನ್ನು ಸೋಸಿ ಸ್ವಲ್ಪ ಜೇನುತುಪ್ಪ ಸೇರಿಸಿ. (ಬಟ್ಟೆಯಲ್ಲಿ ಶೋಧಿಸಿದರೆ ಉತ್ತಮ)

* ಈ ದ್ರವವನ್ನು ಸುಮಾರು ಅರ್ಧ ಲೋಟ ಪ್ರತಿದಿನ ಕುಡಿಯಿರಿ.

ಕಬ್ಬಿಣ ಹೀರಲು ತಡೆಯೊಡ್ಡುವ ಆಹಾರಗಳನ್ನು ತ್ಯಜಿಸಿ

ಕಬ್ಬಿಣ ಹೀರಲು ತಡೆಯೊಡ್ಡುವ ಆಹಾರಗಳನ್ನು ತ್ಯಜಿಸಿ

ಆಹಾರದಲ್ಲಿನ ಕಬ್ಬಿಣವನ್ನು ಹೀರಿಕೊಳ್ಳುವುದು ನಮ್ಮ ಶರೀರಕ್ಕೆ ಕೊಂಚ ಪ್ರಯಾಸವಾದ ಕೆಲಸವಾಗಿದೆ. ಕೆಲವು ಆಹಾರಗಳು ಈ ಕ್ರಿಯೆಗೆ ಅಡ್ಡಿಯುಂಟುಮಾಡುತ್ತವೆ. ಇಂತಹ ಆಹಾರಗಳನ್ನು ರಕ್ತಹೀನತೆ ಕಡಿಮೆಯಾಗುವವರೆಗೂ ತ್ಯಜಿಸುವುದು ಒಳ್ಳೆಯದು. ಈ ಆಹಾರಗಳಲ್ಲಿ ಪ್ರಮುಖವಾದವು ಎಂದರೆ ಟೀ, ಕಾಫಿ, ಕೋಲಾ, ವೈನ್, ಬಿಯರ್, ಗ್ಯಾಸ್ಟ್ರಿಕ್ ಕಡಿಮೆಗೊಳಿಸುವ ಉಪ್ಪುಗಳು (antacid), ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು (ಉದಾಹರಣೆಗೆ ಹಾಲಿನ ಚಾಕಲೇಟು, ಕ್ಯಾಲ್ಸಿಯಂ ಮಾತ್ರೆಗಳು) ಮೊದಲಾದವುಗಳಿಗೆ ರಕ್ತಹೀನತೆ ಕಡಿಮೆಯಾಗುವರೆಗೂ ಶುಭವಿದಾಯ ಹೇಳುವುದೇ ಉತ್ತಮ.

ನಿಯಮಿತವಾಗಿ ವ್ಯಾಯಾಮ ಮಾಡಿ

ನಿಯಮಿತವಾಗಿ ವ್ಯಾಯಾಮ ಮಾಡಿ

necessitiy is the mother of invention ಎಂಬ ಆಂಗ್ಲ ಗಾದೆ ನಮ್ಮ ದೇಹಕ್ಕೂ ಅನ್ವಯಿಸುತ್ತದೆ. ನಮ್ಮ ದೇಹದಲ್ಲಿ ಸ್ನಾಯುಗಳು ಹೆಚ್ಚು ಬೆಳೆಯಬೇಕೆಂದರೆ ವ್ಯಾಯಾಮದ ಎಷ್ಟು ಅಗತ್ಯವಿದೆಯೋ ಅಂತೆಯೇ ಹೆಚ್ಚಿನ ಕೆಂಪುರಕ್ತಕಣಗಳು ಬೇಕು ಎಂದು ವ್ಯಾಯಾಮದ ಮೂಲಕ ದೇಹಕ್ಕೆ ಹೇಳುತ್ತಲೇ ಇರಬೇಕಾಗಿದೆ. ಇದಕ್ಕಾಗಿ ಮಧ್ಯಮ ಪರಿಯ ಮತ್ತು ವೇಗದ (ಉದಾಹರಣೆಗೆ ಹಗ್ಗಜಿಗಿತ) ವ್ಯಾಯಾಮಗಳು ಅಗತ್ಯವಾಗಿವೆ. ಜೊತೆಗೇ ಸ್ವಲ್ಪ ಭಾರವನ್ನು ಹೊರುವ ವ್ಯಾಯಾಮಗಳನ್ನೂ ಮಾಡುವ ಮೂಲಕ ಹೀಮೋಗ್ಲೋಬಿನ್ ಹೆಚ್ಚಿಸಲು ದೇಹವನ್ನು ಪ್ರಚೋದಿಸಲು ಸಾಧ್ಯ.

ಕೆಲವು ಉಪಯುಕ್ತ ಮಾಹಿತಿಗಳು

ಕೆಲವು ಉಪಯುಕ್ತ ಮಾಹಿತಿಗಳು

* ಗ್ಲುಟೆನ್ (ಅಂಟು) ಸೇರಿಸಿರುವ ಆಹಾರಗಳ ಸೇವನೆಯಿಂದ ದೂರವಿರಿ (ಉದಾಹರಣೆಗೆ ಬಾರ್ಲಿ, ಗೋಧಿ ಹೊಟ್ಟು, ಗೋಧಿ ರವೆ, ಮೈದಾ ಹಿಟ್ಟು ಮೊದಲಾದವು)

* ಇಡಿಯ ಕಾಳುಗಳ ಹಿಟ್ಟಿನ ಖಾದಗಳನ್ನು ಸೇವಿಸಿ (ಉದಾಹರಣೆಗೆ ಗೋಧಿ ಹಿಟ್ಟು, ಪಾಸ್ತಾ)

* ಮಹಿಳೆಯರು ತಮ್ಮ ತಿಂಗಳ ರಜಾದಿನಗಳ ಅವಧಿಯಲ್ಲಿ ಮತ್ತು ಹೆರಿಗೆಯ ಬಳಿಕ ಕಬ್ಬಿಣ ಹೆಚ್ಚಿರುವ ಆಹಾರಗಳನ್ನು ಸೇವಿಸಿ.

* ವೈದ್ಯರ ಸಲಹೆಯಿಲ್ಲದೇ ಯಾವುದೇ ಶಕ್ತಿವರ್ಧಕ ಮಾತ್ರೆ, ಔಷಧಿ ಅಥವಾ ಆಹಾರಗಳನ್ನು ಸೇವಿಸಬೇಡಿ.

* ಬಿಸಿನೀರಿಗಿಂತಲೂ ರಕ್ತಹೀನತೆಗೆ ತಣ್ಣೀರಿನ ಸ್ನಾನ ಹಿತಕರ. ತಣ್ಣೀರು ರಕ್ತಸಂಚಾರವನ್ನು ಹೆಚ್ಚಿಸಿ ಕೆಂಪುರಕ್ತಕಣಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

English summary

10 Ways To Increase Your Hemoglobin Level

Hemoglobin is an iron-rich protein present in red blood cells. This protein is responsible for carrying oxygen throughout the body. Its main function is to transport oxygen from the lungs to the body’s tissues Here are the top 10 ways to increase your hemoglobin naturally.
X
Desktop Bottom Promotion