For Quick Alerts
ALLOW NOTIFICATIONS  
For Daily Alerts

ತಲೆಗೂದಲ ಎಣ್ಣೆ ಜಿಡ್ಡು ಸಮಸ್ಯೆಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

|

ಸೊಂಪಾದ ಮತ್ತು ನೀಳ ಕೂದಲನ್ನು ಹೊಂದುವುದು ಪ್ರತಿ ಮಹಿಳೆಯ ಕನಸಾಗಿದೆ. ಆದರೆ ಈ ಕೂದಲು ಬಿಡಿಬಿಡಿಯಾಗಿ, ಸಿಕ್ಕಿಲ್ಲದೇ ಎಣ್ಣೆಜಿಡ್ಡಿಲ್ಲದೇ ಇರುವಂತೆ ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆ. ರೇಶ್ಮೆಯಂತೆ ಹೊಳೆಯುವ, ಗಾಳಿಗೆ ಹಾರುವ, ಆರೋಗ್ಯಕರ ಕೂದಲು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೇ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಕೂದಲಿನಲ್ಲಿ ಎಣ್ಣೆಜಿಡ್ಡಿಗೆ ಕೂದಲಿನಲ್ಲಿರುವ ಕಲ್ಮಶಗಳು ಒಂದು ಕಾರಣವಾದರೆ ಪ್ರಮುಖವಾಗಿ ತಲೆಯ ಚರ್ಮದಲ್ಲಿ ದೇಹದ ಇತರ ಭಾಗಕ್ಕಿಂತಲೂ ಹೆಚ್ಚಾಗಿರುವ ಸ್ವೇದಗ್ರಂಥಿಗಳು (sebaceous glands) ಸ್ರವಿಸುವ ತೈಲಗಳು ಕೂದಲಿಗೆ ಅಂಟಿಕೊಂಡು ಎಣ್ಣೆಜಿಡ್ಡಿಗೆ ಕಾರಣವಾಗುತ್ತವೆ. ಕೂದಲ ಹಾಗೂ ತಲೆಯ

ಚರ್ಮದ ಆರೈಕೆಗೆ ಈ ತೈಲಗಳು ಅತ್ಯಾವಶ್ಯ. ಆದರೆ ಕೆಲವರಲ್ಲಿ ಇದು ಅಗತ್ಯಕ್ಕೂ ಹೆಚ್ಚಾಗಿ ಸ್ರವಿಸಿ ಕೂದಲ ಜಿಡ್ಡು ಹೆಚ್ಚಾಗಿರಲು ಕಾರಣವಾಗಿರುತ್ತದೆ. ಭಾರತದ ಮಹಿಳೆಯರು ಈ ತೊಂದರೆಯನ್ನು ಇತರ ಮಹಿಳೆಯರಿಗಿಂತ ಹೆಚ್ಚು ಎದುರಿಸುತ್ತಾರೆ. ಈ ಜಿಡ್ಡು ಅನಾರೋಗ್ಯಕರವಂತೂ ಅಲ್ಲ, ಆದರೆ ಕೂದಲ ಆರೈಕೆಯನ್ನು ಸರಿಯಾಗಿ ಇಟ್ಟುಕೊಳ್ಳದೇ ಇದ್ದರೆ ಈ ಎಣ್ಣೆಜಿಡ್ಡಿಗೆ ಅಂಟಿಕೊಳ್ಳುವ ಗಾಳಿಯ ಕೊಳೆ, ಧೂಳು ಹಾಗೂ ಇತರ ಕಲ್ಮಶಗಳು ಕೂದಲ ಜಿಡ್ಡುತನವನ್ನು ಇನ್ನಷ್ಟು ಹೆಚ್ಚಿಸಿ ಸೌಂದರ್ಯದ ಜೊತೆಗೇ ಕೂದಲ ಆರೋಗ್ಯವನ್ನೂ ಕುಂದಿಸುತ್ತವೆ. ಸೂಕ್ತ ಆರೈಕೆಯಿಂದ ಈ ಜಿಡ್ಡನ್ನು ಖಂಡಿತವಾಗಿಯೂ ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಕೂದಲನ್ನು ಪಡೆಯಬಹುದು.

haircare

ಕೂದಲ ನಿಯಮಿತ ಆರೈಕೆಯಿಂದ ನಿಮ್ಮ ಎಣ್ಣೆಜಿಡ್ಡಿನ ಕೂದಲು ಸಹಾ ಆರೋಗ್ಯದಿಂದ ಕಂಗೊಳಿಸುವಂತೆ ಮಾಡಬಹುದು. ಈ ಜಿಡ್ಡಿಗೆ ಸಮರ್ಪಕವಾದ ಆರೈಕೆಯನ್ನು ಹುಡುಕುತ್ತಿರುವಿರಾದರೆ ದೂರ ಎಲ್ಲೂ ಹೋಗಬೇಕಾಗಿಲ್ಲ, ನಿಮ್ಮ ಅಡುಗೆಮನೆಯಲ್ಲಿರುವ ಸಾಮಾಗ್ರಿಗಳೇ ಇದಕ್ಕೆ ಸಾಕು. ಈ ಜಿಡ್ಡು ನಿವಾರಣೆಗೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ, ಪ್ರಬಲ ರಾಸಾಯನಿಕಗಳಿಂದ ತಯಾರಿಸಿರುವ ಪ್ರಸಾದನಗಳಿವೆ, ಆದರೆ ಇವು ಎಣ್ಣೆಜಿಡ್ಡಿನ ಜೊತೆಗೇ ಅವಶ್ಯಕ ಕೂದಲ ತೈಲವನ್ನೂ ಸೆಳೆದು ನಿವಾರಿಸಿ ಕೂದಲಿಗೆ ತಾತ್ಕಾಲಿಕ ಹೊಳಪನ್ನು ನೀಡುತ್ತವೆಯೇ ಹೊರತು ಆರೋಗ್ಯವನ್ನೂ ಕಸಿದು ಬಿಡುತ್ತವೆ. ಬನ್ನಿ, ಕೊಂಚ ನಿಧಾನವಾಗಿ ಪರಿಣಾಮ ಬಿರುವುದಾದರೂ ಸಮರ್ಪಕವಾಗಿ, ಯಾವುದೇ ಹಾನಿಯಿಲ್ಲದೇ ಹೆಚ್ಚುವರಿ ಎಣ್ಣೆಜಿಡ್ಡನ್ನು ನಿವಾರಿಸಿ ನೈಸರ್ಗಿಕ ಸೌಂದರ್ಯವನ್ನು ನೀಡುವ ಕೆಲವು ಮನೆಮದ್ದುಗಳ ಬಗ್ಗೆ ಅರಿಯೋಣ...

ಮೊಟ್ಟೆಯ ಹಳದಿಭಾಗದ ಲೇಪ:

ಮೊಟ್ಟೆಯ ಹಳದಿಭಾಗದಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ ಹಾಗೂ ಇವು ಕೂದಲ ದೃಢತೆಯನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ಹೊಳಪು ಮತ್ತು ನುಣುಪುತನವನ್ನೂ ನೀಡುತ್ತದೆ. ಈ ಮೂಲಕ ಎಣ್ಣೆಜಿಡ್ಡಿನ ಪಸೆ ಕಡಿಮೆ ಇರುವಂತೆ ತೋರ್ಪಡಿಸುತ್ತದೆ.

ಬಳಕೆಯ ವಿಧಾನ: ಒಂದು ಅಥವಾ ಎರಡು ಮೊಟ್ಟೆಗಳ ಹಳದಿ ಭಾಗವನ್ನು ಬೇರ್ಪಡಿಸಿ ಕೊಂಚ ಜೇನು, ಟೀ ಟ್ರೀ ಅಥವಾ ಆಲಿವ್ ಎಣ್ಣೆಯನ್ನು ಬೆರೆಸಿ ಕೂದಲ ಬುಡದಿಂದ ತುದಿಯವರೆಗೆ ಹಚ್ಚಿ ಸುಮಾರು ಐದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ಚೆನ್ನಾಗಿ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ.

ಲಿಂಬೆ:

ಕೂದಲು ಮತ್ತು ತ್ವಚೆಗೆ ಲಿಂಬೆ ಅಧ್ಬುತವೆನಿಸುವ ಆರೈಕೆಯನ್ನು ನೀಡುತ್ತದೆ. ಕೂದಲ ಬಳಕೆಗಾಗಿ ಎರಡು ಲಿಂಬೆಗಳ ರಸವನ್ನು ಎರಡು ಕಪ್ ನೀರಿನಲ್ಲಿ ಬೆರೆಸಿ ಒಂದು ಚಿಕ್ಕ ಬಾಟಲಿಯಲ್ಲಿ ಹಾಕಿಡಿ. ಪ್ರತಿ ಬಾರಿ ತಲೆಸ್ನಾನ ಮಾಡಿದ ಬಳಿಕ ಕೊಂಚವೇ ದ್ರವವನ್ನು ಕೈಗಳಲ್ಲಿ ತೆಗೆದುಕೊಂಡು ನೆತ್ತಿಯ ಮೇಲೆ ಸುರಿದುಕೊಂಡು ನಯವಾಗಿ ತಟ್ಟಿಕೊಳ್ಳಿ ಹಾಗೂ ಕೂದಲ ತುದಿಯವರೆಗೆ ಬರುವಂತೆ ಒರೆಸಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ಕೇವಲ ತಣ್ಣೀರಿನಿಂದ ಕೂದಲನ್ನು ತೋಯಿಸಿ ದಪ್ಪ ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿಕೊಳ್ಳಿ.

hair care

ಬಿಯರ್

ಅಗತ್ಯವಿರುವ ಸಾಮಾಗ್ರಿಗಳು:

ಒಂದೂವರೆ ಕಪ್ ಬಿಯರ್, ಒಂದು ಕಪ್ ಶಾಂಪೂ

ವಿಧಾನ: ಬಿಯರ್ ಅನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಚಿಕ್ಕ ಉರಿಯಲ್ಲಿ ಹದಿನೈದು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಪೂರ್ಣವಾಗಿ ತಣ್ಣಗಾದ ಬಳಿಕ ಇದಕ್ಕೆ ಒಂದು ಕಪ್ ಶಾಂಪೂ ಬೆರೆಸಿ. ಈ ಶಾಂಪೂವನ್ನು ನಿಮ್ಮ ನಿತ್ಯದ ಶಾಂಪೂ ಬದಲಿಗೆ ಬಳಸಿ ಬಳಿಕ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಪ್ರತಿ ಬಾರಿ ತಲೆಸ್ನಾನದ ಸಮಯದಲ್ಲಿ ಈ ಶಾಂಪೂ ಬಳಸುವ ಮೂಲಕ ಎಣ್ಣೆಜಿಡ್ಡು ಕಡಿಮೆಯಾಗುತ್ತದೆ.

ಓಟ್ಸ್ ರವೆ

ಓಟ್ಸ್ ರವೆಯಲ್ಲಿರುವ ಪೋಷಕಾಂಶಗಳು ಕೂದಲನ್ನು ಎಣ್ಣೆಜಿಡ್ದು ರಹಿತವಾಗಿಸಲು ನೆರವಾಗುತ್ತವೆ. ಇದಕ್ಕಾಗಿ ಒಂದು ಕಪ್ ಓಟ್ಸ್ ರವೆಯನ್ನು ಸುಮಾರು ಮೂರು ಕಪ್ ನೀರಿನಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ ಬಳಿಕ ಉರಿ ಆರಿಸಿ ತಣಿಸಿ. ಈ ಲೇಪನವನ್ನು ತಲೆಸ್ನಾನಕ್ಕೂ ಅರ್ಧ ಘಂಟೆ ಮುನ್ನ ಕೊಂಚವೇ ಕೂದಲನ್ನು ತೇವಗೊಳಿಸಿ ತಲೆಯ ಚರ್ಮದಿಂದ ಹಿಡಿದು ತುದಿಯವರೆಗೂ ಆವರಿಸುವಂತೆ ಹಚ್ಚಿಕೊಳ್ಳಿ. ಬಳಿಕ ನಿಮ್ಮ ನಿತ್ಯದ ಶಾಂಪೂ ಬಳ಼ಸಿ ಸ್ನಾನ ಮಾಡಿ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.

ಸಾಮಾನ್ಯ ಉಪ್ಪು

ಎಣ್ಣೆಜಿಡ್ಡು ನಿವಾರಣೆಗೆ ಸಾಮಾನ್ಯ ಉಪ್ಪು ಸಹಾ ಉತ್ತಮ ಆಯ್ಕೆಯಾಗಿದೆ. ನಿಮ್ಮ ತಲೆಸ್ನಾನಕ್ಕೂ ಮುನ್ನ ಕೊಂಚ ಉಪ್ಪಿನ ಪುಡಿಯನ್ನು ತೇವಗೊಳಿಸಿ ತಲೆಗೂದಲಿಗೆ ಹಚ್ಚಿಕೊಳ್ಳಿ ಹಾಗೂ ನಯವಾಗಿ ಮಸಾಜ್ ಮಾಡಿಕೊಳ್ಳಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಹಾಗೂ ಶೀಘ್ರ ಪರಿಣಾಮಕ್ಕಾಗಿ ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ.

ಸೇಬಿನ ಶಿರ್ಕಾ (Apple Cider Vinegar)

ಕೂದಲಿನ ಹೆಚ್ಚುವರಿ ಎಣ್ಣೆಜಿಡ್ಡನ್ನು ನಿವಾರಿಸಲು ಸೇಬಿನ ಶಿರ್ಕಾ ಸಹಾ ಉತ್ತಮ ಆಯ್ಕೆಯಾಗಿದೆ ಹಾಗೂ ಕೂದಲನ್ನು ಹೊಳಪುಳ್ಳ ಮತ್ತು ಕಡಿಮೆ ಎಣ್ಣೆಜಿಡ್ಡಿನಿಂದಿರುವಂತಿರಲು ನೆರವಾಗುತ್ತದೆ. ಅಲ್ಲದೇ ತಲೆಯ ಚರ್ಮದಲ್ಲಿ ಆಮ್ಲೀಯ-ಕ್ಷಾರೀಯ ಮಟ್ಟ (ಪಿ ಎಚ್ ಮಟ್ಟ) ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಭಾಗ ಸೇಬಿನ ಶಿರ್ಕಾವನ್ನು ಮೂರು ಭಾಗ ನೀರಿನೊಂದಿಗೆ ಮಿಶ್ರಣ ಮಾಡಿ. ಈ ದ್ರಾವಣವನ್ನು ನಿಮ್ಮ ತಲೆಸ್ನಾನದ ಶಾಂಪೂ ಬಳಕೆಯ ಬಳಿಕ ಅಂತಿಮವಾಗಿ ಹಚ್ಚಿಕೊಳ್ಳಿ. ಈ ದ್ರಾವಣವನ್ನು ಹಚ್ಚಿಕೊಂಡು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಲೋಳೆಸರ (Aloe Vera Gel)

ಲೋಳೆಸರ ಸಹಾ ತಲೆಯ ಚರ್ಮಕ್ಕೆ ಉತ್ತಮ ಆರೈಕೆ ನೀಡುತ್ತದೆ. ತಲೆಯ ಚರ್ಮದಲ್ಲಿರುವ ಸ್ವೇದಗ್ರಂಥಿಗಳಿಗೆ ಹೆಚ್ಚಿನ ಆರ್ದ್ರತೆಯನ್ನು ಒದಗಿಸಿ ತೈಲಸ್ರವಿಕೆಯನ್ನು ಕಡಿಮೆಯಾಗಿಸುತ್ತದೆ. ಇದಕ್ಕಾಗಿ ಅವಶ್ಯವಿರುವ ಸಾಮಾಗ್ರಿಗಳೆಂದರೆ ಒಂದು ದೊಡ್ಡ ಚಮಚ ಲೋಳೆಸರದ ತಿರುಳಿನ ಭಾಗ ಹಾಗೂ ಎರಡು ದೊಡ್ಡ ಚಮಚ ನಿಮ್ಮ ನಿತ್ಯದ ಶಾಂಪೂ. ಲೋಳೆಸರದ ತಿರುಳನ್ನು ಈಗತಾನೇ ಮುರಿದ ಕೋಡಿನಿಂದ ಸಂಗ್ರಹಿಸಿದ್ದರೆ ಒಳಿತು. ಇವೆರಡನ್ನೂ ಬೆರೆಸಿದ ದ್ರಾವಣವನ್ನು ತಲೆಗೂದಲಿಗೆ ಹೆಚ್ಚಿ ತಲೆಯ ಚರ್ಮಕ್ಕೆ ನಯವಾಗಿ ಮಸಾಜ್ ಮಾಡಿ. ಬಳಿಕ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಸಾಮಾನ್ಯ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

hair care

ಕೆಲವು ಅಮೂಲ್ಯ ಸಲಹೆಗಳು:

ಆಗಾಗ ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳಿ:

ಸಾಮಾನ್ಯವಾಗಿ ಮಹಿಳೆಯರು ಅತಿ ಶೀಘ್ರವಾಗಿ ತಲೆಸ್ನಾನ ಮಾಡಬಾರದು. ಆದರೆ ನಿಮ್ಮ ತಲೆಗೂದಲಲ್ಲಿ ಎಣ್ಣೆಜಿಡ್ದು ವಿಪರಿತವಾಗಿದ್ದರೆ ದಿನ ಬಿಟ್ಟು ದಿನ ತಲೆಸ್ನಾನ ಮಾಡಬೇಕು. ಈ ಮೂಲಕ ಹೆಚ್ಚುವರಿ ಎಣ್ಣೆಯ ಸ್ರವಿಕೆಯನ್ನು ನಿವಾರಿಸಬಹುದು. ಆದರೆ ನೆನಪಿರಲಿ, ದಿನ ಬಿಟ್ಟು ದಿನದ ಸ್ನಾನದಲ್ಲಿ ಉಪಯೋಗಿಸುವ ಶಾಂಪೂ ಅತಿ ಸೌಮ್ಯವಾಗಿರಬೇಕು. ಪ್ರಬಲ ಶಾಂಪೂಗಳನ್ನು ಇಷ್ಟು ಶೀಘ್ರವಾಗಿ ಉಪಯೋಗಿಸುವ ಮೂಲಕ ಕೂದಲು ಮತ್ತು ತ್ವಚೆಗೆ ಗಂಭೀರ ಪರಿಣಾಮವುಂಟಾಗಬಹುದು.

ತಲೆಗೂದಲ ಎಲ್ಲಾ ಭಾಗಗಳನ್ನೂ ತೊಳೆದುಕೊಳ್ಳಿ.

ಶಾಂಪೂ ಉಪಯೋಗಿಸುವಾಗ ಇದು ಕೂದಲ ಬುಡದಿಂದ ತುದಿಯವರೆಗೂ, ಎಲ್ಲಾ ಕೂದಲುಗಳೂ ಸಮನಾಗಿ ಆರೈಕೆ ಪಡೆಯುವಂತೆ ಮಾಡಿ. ಹಾಗೂ ತೊಳೆದುಕೊಳ್ಳುವಾಗ ಕೊಂಚವೂ ಶಾಂಪೂ ಉಳಿಯದಂತೆ ನೋಡಿಕೊಳ್ಳಿ. ಕೊಂಚ ಉಳಿದರೂ ಇದು ತೆಳುವಾದ ಪೊರೆಯಂತೆ ತಲೆಯ ಚರ್ಮದಲ್ಲಿ ಆವರಿಸಿ ಎಣ್ಣೆ ಹೆಚ್ಚು ಬಿಡುಗಡೆಯಾಗಲು ಪರೋಕ್ಷವಾಗಿ ಕಾರಣವಾಗುತ್ತದೆ. ಆದ್ದರಿಂದ ಮುಂದಿನ ಬಾರಿ ಶಾಂಪೂ ಉಪಯೋಗಿಸುವಾಗ ಶಾಂಪೂ ಒಂದಿನಿತೂ ಉಳಿದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಕಂಡೀಶನರ್ ಬಳಕೆಯನ್ನು ಕಡಿಮೆ ಮಾಡಿ:

ಕಂಡೀಶನರ್ ಕೂದಲ ದೃಢತೆಯ ಮೇಲೆ ಪ್ರಭಾವ ಬೀರಿ ಕೂದಲನ್ನು ನೆಟ್ಟಗಾಗಿಸುತ್ತದೆ. ಆದರೆ ಈ ಕಂಡೀಶನರ್ ಗಳು ಕೂದಲ ಬುಡಕ್ಕೆ ತಲುಪಬಾರದು. ಹಾಗಾಗಿ ಈ ದ್ರಾವಣವನ್ನು ಕೇವಲ ಕೂದಲ ತುದಿಭಾಗಗಳಿಗೆ ಮಾತ್ರವೇ ತಗಲುವಂತೆ ಎಚ್ಚರ ವಹಿಸಿ, ಅದೂ ಕೂದಲ ತುದಿಗಳು ತೀರಾ ಒಣಗಿದೆ ಎಂದಿದ್ದಾಗ ಮಾತ್ರ! ಎಣ್ಣೆ ಜಿಡ್ಡಿರುವ ಕೂದಲಿಗೆ ಕಂಡೀಶನರ್ ಬಳಕೆಯನ್ನು ಸಲಹೆ ಮಾಡಲಾಗುವುದಿಲ್ಲ ಏಕೆಂದರೆ ಇವು ಎಣ್ಣೆ ಜಿಡ್ಡನ್ನು ನಿವಾರಿಸುವ ಬದಲು ಆ ಜಿಡ್ಡಿನ ಮೇಲೆಯೇ ಕುಳಿತುಬಿಡುತ್ತವೆ! ಅಲ್ಲದೇ ಕಂಡೀಶನರ್ ಆರ್ದ್ರತೆಯನ್ನು ಒದಗಿಸುವ ಮೂಲಕ ಎಣ್ಣೆಜಿಡ್ಡು ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ.

ತಲೆಯ ನೆಚ್ಚಿಯನ್ನು ಉಜ್ಜಿಕೊಳ್ಳಬೇಡಿ:

ಹಳೆಯ ಸಂಪ್ರದಾಯದಂತೆ ತಲೆಯ ಚರ್ಮವನ್ನು ಗಸಗಸ ಉಜ್ಜಬೇಡಿ ಅಥವಾ ಕೆರೆದುಕೊಳ್ಳಬೇಡಿ. ಇದು ಎಣ್ಣೆ ಇನ್ನಷ್ಟು ಹೆಚ್ಚು ಸ್ರವಿಸಲು ಪ್ರಚೋದನೆ ನೀಡಬಹುದು ಅಲ್ಲದೇ ತಲೆಗೂದಲ ಬುಡಗಳನ್ನೂ ಅಲ್ಲಾಡಿಸಿ ಶಿಥಿಲಗೊಳಿಸಬಹುದು. ಪರಿಣಾಮ-ತಲೆಹೊಟ್ಟು! ಆದ್ದರಿಂದ ಉಜ್ಜುವುದು, ಕೆರೆಯುವುದು ಮೊದಲಾದವುಗಳನ್ನು ಎಂದಿಗೂ, ವಿಶೇಷವಾಗಿ ತಲೆಸ್ನಾನದ ಬಳಿಕ ಸರ್ವಥಾ ಮಾಡಕೂಡದು.

ಬೇಬಿ ಪೌಡರ್ ಉಪಯೋಗಿಸಿ

ಪುಟ್ಟ ಮಕ್ಕಳ ಮೈಗೆ ಹಚ್ಚುವ ಬೇಬಿ ಪೌಡರ್ ಸಹಾ ಕೂದಲ ಎಣ್ಣೆಜಿಡ್ಡನ್ನು ನಿವಾರಿಸಲು ಉತ್ತಮ ಆಯ್ಕೆಯಾಗಿದೆ. ಒಂದು ವೇಳೆ ನಿಮ್ಮ ತಲೆಗೂದಲನ್ನು ತೊಳೆದು ಒಣಗಿಸಿಕೊಳ್ಳುವಷ್ಟು ಸಮಯಾವಕಾಶ ಇಲ್ಲದಿದ್ದರೆ ಕೊಂಚವೇ ಬೇಬಿ ಪೌಡರ್ ಅನ್ನು ತಲೆಗೂದಲಿಗೆ ಸಿಂಪಡಿಸಿಕೊಳ್ಳಿ ಹಾಗೂ ನಿಮ್ಮ ನಿತ್ಯದ ಬಾಚಣಿಗೆಯಿಂದ ಬಾಚಿಕೊಳ್ಳಿ. ಬಾಚಣಿಗೆಯಲ್ಲಿ ಬರುವ ಈ ಪುಡಿ ಹೆಚ್ಚುವರಿ ಎಣ್ಣೆಯಂಶವನ್ನು ತಕ್ಷಣವೇ ಹೀರಿಕೊಂಡಿರುತ್ತದೆ ಹಾಗೂ ಕೂದಲಿನಲ್ಲಿ ನಸುವಾದ ಪರಿಮಳವೂ ಇರುವಂತೆ ನೋಡಿಕೊಳ್ಳುತ್ತದೆ.

English summary

Home Remedies And Tips To Get Rid Of Oily Hair

Oily and greasy scalp is always a nightmare for all the ladies out there. After all, smooth, silky and healthier hair adds on to one's own personality along with enhancing the beauty. While having unclean hair can definitely cause it, greasy hair is generally the result of excess secretion of sebum by the sebaceous glands of the scalp. While some secretion is normal and should happen for a healthy scalp and hair, too much secretion creates that oily look This issue is something in common faced by most of the Indian women. But we do not realize that this can be cured if you take care of it properly.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more