For Quick Alerts
ALLOW NOTIFICATIONS  
For Daily Alerts

  ಗುಂಗುರು ಕೂದಲಿನ ಸಮಸ್ಯೆಗೆ ಪರಿಹಾರಗಳು

  By Satish Kalagi
  |

  ಮೃದುವಾದ ಹಾಗೂ ಕಾಂತಿಯುತ ಗುಂಗುರು ಕೇಶರಾಶಿ ಹೊಂದಿರುವುದು ಎಲ್ಲ ಹೆಂಗಳೆಯರಿಗೆ ಇಷ್ಟವಾಗುವ ಸಂಗತಿಯಾಗಿದೆ. ಆಧುನಿಕ ಮಹಿಳೆ ಆಗಿರಲಿ ಅಥವಾ ಸಂಪ್ರದಾಯಸ್ಥ ಮಹಿಳೆಯರೇ ಆಗಿರಲಿ ಎಲ್ಲರಿಗೂ ಸುಂದರವಾದ ಮುಂಗುರುಳು ಹೊಂದುವುದು ಅತಿ ಇಷ್ಟ. ಆಕರ್ಷಕ ಮುಂಗುರುಳು ಹೊಂದಲು ತಾವೂ ಅನೇಕ ಬಾರಿ 'ಕರ್ಲಿಂಗ್ ಐರನ್' ಅಥವಾ ಸೆಟ್ಟಿಂಗ್ ಜೆಲ್ ಮೊರೆ ಹೋಗಿರಬಹುದು. ಸೌಂದರ್ಯವರ್ಧನೆ ಹಾಗೂ ಸುಂದರ ಕೇಶರಾಶಿಗಾಗಿ ದೊಡ್ಡ ಮೊತ್ತದ ಹಣವನ್ನು ಸಹ ಖರ್ಚು ಮಾಡಿರಬಹುದು.

  ಆದರೆ ಇಂತಹ ಅನೇಕ ಕ್ರಮಗಳನ್ನು ಆಗಾಗ ಬಳಸುವುದರಿಂದ ಕೇಶರಾಶಿ ತನ್ನ ಹೊಳಪು ಕಳೆದುಕೊಂಡು, ತಲೆಯಲ್ಲಿ ಹೊಟ್ಟು, ಒಣಗಿದ ನೆತ್ತಿ, ಕೂದಲುದುರುವಿಕೆ ಸೇರಿದಂತೆ ಇನ್ನೂ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಿರಬಹುದು. ಹೇರ್ ಸ್ಟೈಲ್ ಹಾಗೂ ಗುಂಗುರು ಕೂದಲು ಹೊಂದುವ ಅನೇಕ ಪ್ರಯತ್ನಗಳ ಹೊರತಾಗಿಯೂ ಯಾವುದೇ ಪ್ರಯೋಜನವಾಗದೆ, ಜೊತೆಗೆ ಹೆಚ್ಚಿನ ತೊಂದರೆಗಳು ಉದ್ಭವಿಸಿ ಇನ್ನು ಈ ಹೇರ್ ಸ್ಟೈಲ್ ಸಹವಾಸವೇ ಬೇಡ ಎಂದು ಒಮ್ಮೊಮ್ಮೆ ಅನಿಸಿದರೂ ಆಶ್ಚರ್ಯವಿಲ್ಲ.

  ಆದರೆ, ಸುಂದರ ಗುಂಗುರು ಕೇಶರಾಶಿಯನ್ನು ಮನೆಯಲ್ಲಿಯೇ ಕೆಲ ವಿಧಾನಗಳ ಮೂಲಕ, ಅದೂ ಸಹ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆಯೇ ಪಡೆಯಬಹುದು ಎಂಬುದು ನಿಮಗೆ ತಿಳಿದರೆ ಸೋಜಿಗವಾಗುವುದು. ಅತ್ಯಂತ ಸಹಜ ಹಾಗೂ ನೈಸರ್ಗಿಕವಾದ ಏಳು ಕ್ರಮಗಳ ಮೂಲಕ ಹೇಗೆ ನಿಮ್ಮ ಕೇಶರಾಶಿಯನ್ನು ಗುಂಗುರಾಗಿಸಬಹುದು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ ಬನ್ನಿ...

  Curl

  ಸ್ಕ್ರಂಚಿಂಗ್

  ಇಂಗ್ಲಿಷ್ ನಲ್ಲಿ ಸ್ಕ್ರಂಚಿಂಗ್ ಎಂದು ಕರೆಯಲಾಗುವ, ಇದು ಕೂದಲನ್ನು ನಿರ್ದಿಷ್ಟ ಮಾದರಿಯಲ್ಲಿ ನಿಧಾನವಾಗಿ ಕೈಗಳಿಂದ ಉಜ್ಜುವ ಕ್ರಮವಾಗಿದೆ. ಸ್ಕ್ರಂಚಿಂಗ್ ಮೂಲಕ ಅತಿ ಸುಲಭವಾಗಿ ಮನೆಯಲ್ಲಿಯೇ ಕೂದಲನ್ನು ಸುಂದರವಾಗಿ ಗುಂಗುರಾಗಿಸಬಹುದು. ಮೊದಲಿಗೆ ಒಳ್ಳೆಯ ಗುಣಮಟ್ಟದ ವಾಲ್ಯುಮೈಸಿಂಗ್ ಶಾಂಪೂ ಉಪಯೋಗಿಸಿ ಸಹಜವಾಗಿ ತಲೆಗೂದಲನ್ನು ತೊಳೆದುಕೊಳ್ಳಿ. ನಂತರ ಕೂದಲಿನ ಸಿಕ್ಕುಗಳನ್ನು ನಿಧಾನವಾಗಿ ಬಿಡಿಸಿ, ಕಂಡೀಷನರ್ ಹಚ್ಚಿ. ಇಷ್ಟಾದ ಬಳಿಕ ಕೂದಲನ್ನು ಸಂಪೂರ್ಣವಾಗಿ ತೊಳೆದುಕೊಳ್ಳಿ. ಕಂಡೀಷನರ್‌ನ ಯಾವುದೇ ಅಂಶ ಉಳಿಯದಂತೆ ಜಾಗೃತಿ ವಹಿಸಿ. ಟವೆಲ್ ಮೂಲಕ ಕೂದಲನ್ನು ಹಿಂಡಿ ನೀರನ್ನು ಸಂಪೂರ್ಣವಾಗಿ ತೆಗೆದು ಹಾಕಿ.

  ನಂತರ ಒಂದು ಕಡಲೆ ಕಾಳಿನಷ್ಟು ಕೂದಲು ಪೋಷಣೆಯ ಕ್ರೀಂ (Hair Nourishing Cream) ತೆಗೆದುಕೊಂಡು ಕೈಗಳ ಮಧ್ಯೆ ಕೂದಲುಗಳನ್ನು ಉಜ್ಜಿರಿ. ಒಂದು ಹಾಳೆಯನ್ನು ಹೇಗೆ ಮುದುರಬಹುದೋ ಆ ರೀತಿ ನಿಮ್ಮ ಕೈಗಳ ಚಲನೆ ಇರಲಿ. ಹಾಗೆಯೇ ಉಜ್ಜುತ್ತ ಕೂದಲುಗಳ ಮೇಲ್ಭಾಗಕ್ಕೆ ಬನ್ನಿ. ಹೀಗೆ ಮಾಡಿದಲ್ಲಿ ನಿಮ್ಮ ಕೂದಲು ಗುಂಗುರಾಗುವುದು. ಈ ವಿಧಾನ ಅನುಸರಿಸುವಾಗ ನೆತ್ತಿಯ ಚರ್ಮಕ್ಕೆ ಕ್ರೀಂ ಹತ್ತದಂತೆ ಕಾಳಜಿ ವಹಿಸುವುದು ಅಗತ್ಯ. ಕೂದಲಿನ ಬೇರುಗಳಿಗೆ ಕ್ರೀಂ ಹತ್ತುವುದರಿಂದ ಕೂದಲು ಉದುರುವ ಸಮಸ್ಯೆ ಎದುರಾಗಬಹುದು.

  ಹೆಡ್ ಬ್ಯಾಂಡ್ ವಿಧಾನ

  ಹಸಿಯಾಗಿರುವ ಕೂದಲಿಗೆ ಮೊದಲು ಹೆಡ್ ಬ್ಯಾಂಡ್ ಧರಿಸಿಕೊಳ್ಳಿ. ಬಾಚಣಿಗೆಯ ಮೂಲಕ ಕೂದಲುಗಳನ್ನು ಮೇಲೆತ್ತಿ ನಿಧಾನವಾಗಿ ಹೆಡ್ ಬ್ಯಾಂಡ್ ನಲ್ಲಿ ಸುರುಳಿಯಾಗಿ ತೂರಿಸಿ. ಇದೇ ರೀತಿ ಎಲ್ಲ ಕೂದಲುಗಳನ್ನು ಹೆಡ್ ಬ್ಯಾಂಡ್ ನೊಳಗೆ ಹಾಕಿ. ಈ ಹಂತದಲ್ಲಿ ಗಟ್ಟಿಯಾಗಿ ಕೂರದ ಕೆಲ ಕೂದಲುಗಳು ಹೊರಗೆ ಉಳಿದಿದ್ದರೆ ಅವುಗಳಿಗೆ ಹೇರ್ ಕ್ಲಿಪ್ ಅಳವಡಿಸಿ ಬ್ಯಾಂಡ್ ನೊಳಕ್ಕೆ ತೂರಿಸಿ. ಇದನ್ನು ಕೆಲ ತಾಸುಗಳವರೆಗೆ ಹಾಗೆಯೇ ಇರಲು ಬಿಡಿ. ಒಮ್ಮೆ ಕೂದಲುಗಳು ಸಂಪೂರ್ಣ ಒಣಗಿದ ನಂತರ ಹೇರ್ ಪಿನ್ ಗಳನ್ನು ತೆಗೆದು ಕೂದಲುಗಳನ್ನು ಬಿಡಿಸಿಕೊಳ್ಳಿ. ಈಗ ನಿಮ್ಮ ಕೂದಲು ಮೃದು ಹಾಗೂ ಹೊಳಪಿನಿಂದ ಕೂಡಿ ಗುಂಗುರಾಗಿರುತ್ತವೆ.

  ವೆಲ್‌ಕ್ರೊ ರೋಲರ್ ವಿಧಾನ

  ವೆಲ್‌ಕ್ರೊ ರೋಲರ್ ಗಳು ಸಾಮಾನ್ಯವಾಗಿ ಮನೆಯಲ್ಲಿರುತ್ತವೆ. ಒಂದು ವೇಳೆ ಇರದಿದ್ದರೆ ಮಾರುಕಟ್ಟೆಯಲ್ಲಿ ದೊರೆಯುವ ವೆಲ್‌ಕ್ರೊ ರೋಲರ್ ಗಳನ್ನು ತಂದಿಟ್ಟುಕೊಳ್ಳಿ. ತೇವವಾಗಿರುವ ನಿಮ್ಮ ತಲೆಕೂದಲನ್ನು ಕೆಲ ಭಾಗಗಳಲ್ಲಿ ವಿಂಗಡಿಸಿ, ಮೇಲ್ಮುಖವಾಗಿ ಕ್ಲಿಪ್ ಮಾಡಿ. ಕೂದಲುಗಳ ಉದ್ದ ಹಾಗೂ ದಪ್ಪ ನೋಡಿಕೊಂಡು 2 ರಿಂದ 5 ಭಾಗಗಳಾಗಿ ಮಾಡಿಕೊಳ್ಳಬಹುದು. ಈಗ ಪ್ರತಿ ಭಾಗವನ್ನೂ ಮೇಲ್ಭಾಗದ ದಿಕ್ಕಿನಲ್ಲಿ ರೋಲರ್‌ಗೆ ಸುತ್ತುತ್ತ ಹೋಗಿ. ತಲೆಗೆ ಸರಿಯಾಗಿ ಫಿಟ್ ಆಗಿ ಕುಳಿತುಕೊಳ್ಳುವ ಹಾಗೆ ರೋಲ್ ಮಾಡಬೇಕು.

  ರೋಲರ್ ಗಳಿಗೆ ಹೇರ್ ಪಿನ್ ಬಳಸುವ ಅಗತ್ಯ ಇರುವುದಿಲ್ಲ. ಅತಿ ಹೆಚ್ಚು ಕೂದಲನ್ನು ರೋಲ್ ಮಾಡುವುದರಿಂದ ಅಥವಾ ರೋಲರ್ ಗಳು ಹಳೆಯದಾಗಿದ್ದರೆ ಕ್ಲಿಪ್ ಗಳು ಸರಿಯಾಗಿ ಕೂರುವುದಿಲ್ಲ ಎಂಬ ಅಂಶ ಗಮನದಲ್ಲಿರಲಿ. ಆದ್ದರಿಂದ ಕಡಿಮೆ ಪ್ರಮಾಣದ ಕೂದಲು ರೋಲ್ ಮಾಡಲು ಯತ್ನಿಸಿ. ಇದೂ ಫಲ ನೀಡದಿದ್ದರೆ ಹೊಸ ವೆಲ್‌ಕ್ರೊ ರೋಲರ್ ಖರೀದಿಸುವುದು ಉತ್ತಮ. ರೋಲರ್ ಗಳನ್ನು ಕೆಲ ಗಂಟೆಗಳವರೆಗೆ ಬಿಡಿ. ಕೇಶ ಒಣಗಿದ ನಂತರ ರೋಲರ್ ಗಳನ್ನು ತೆಗೆದಾಗ ಆಕರ್ಷಕ ಹಾಗೂ ಸಹಜವಾಗಿ ಮೂಡಿದ ಗುಂಗುರು ಕೂದಲು ನಿಮ್ಮದಾಗಿರುತ್ತವೆ. ಅದೂ ಯಾವುದೇ ರೀತಿಯ ಬಿಸಿ ಅಥವಾ ಹಬೆಯನ್ನು ಬಳಸದೆ.

  ಪೇಪರ್ ಟವೆಲ್ ವಿಧಾನ

  ಪೇಪರ್ ಟವೆಲ್‌ಗಳನ್ನು ತೆಗೆದುಕೊಂಡು ಅವುಗಳನ್ನು ನಾಲ್ಕೈದು ಇಂಚು ಉದ್ದ ಹಾಗೂ ಒಂದಿಂಚು ಅಗಲದ ತುಣುಕುಗಳಾಗಿ ಮಡಚಿಕೊಳ್ಳಿ. ಇಂಥ 10 ರಿಂದ 12 ತುಣುಕುಗಳನ್ನು ರೆಡಿ ಮಾಡಿಟ್ಟುಕೊಳ್ಳಬೇಕು. ಕೂದಲನ್ನು ತೇವಗೊಳಿಸಿ ಯಾವ ತುದಿಯಲ್ಲಿ ಗುಂಗುರಾಗಿಸಬೇಕಿದೆಯೋ ಅಲ್ಲಿ ಕೂದಲುಗಳಿಗೆ ಪೇಪರ್ ಟವೆಲ್ ಗಳನ್ನು ಸುತ್ತಿ. ನಂತರ ನೆತ್ತಿಯವರೆಗೆ ಕೂದಲುಗಳನ್ನು ರೋಲ್ ಮಾಡುತ್ತ ಸಾಗಿ. ನೆತ್ತಿಗೆ ತಾಗುವಂತೆ ಹೇರ್ ಪಿನ್ ಹಾಕಿ. ಹೀಗೆ 30 ರಿಂದ 40 ನಿಮಿಷ ಬಿಡಿ. ಈಗ ಇವುಗಳನ್ನು ತೆರೆದು ನೋಡಿ. ನಿಮ್ಮ ಕೂದಲು ಗುಂಗುರಾಗಿರುತ್ತವೆ.

  ಕಾಲುಚೀಲ ಬಳಸುವ ವಿಧಾನ

  ತೇವವಾದ ಕೂದಲುಗಳನ್ನು ಮೊದಲು ಶೇ.೮೦ ರಷ್ಟು ಒಣಗಿಸಿ. ನಂತರ ಎತ್ತರಕ್ಕೆ ಪೋನಿ ಟೇಲ್ ಕಟ್ಟಿ ಪಿನ್ ಮಾಡಿ. ಒಂದು ಹಳೆಯ ಆದರೆ ಸ್ವಚ್ಛವಾದ ಕಾಲುಚೀಲ (ಸಾಕ್ಸ್) ತೆಗೆದುಕೊಂಡು ಅದರ ಬೆರಳಿನ ಭಾಗ ಕತ್ತರಿಸಿ ತೆಗೆಯಿರಿ. ಸಂಪೂರ್ಣ ಕೂದಲಿನ ಗೊಂಚಲನ್ನು ಚೀಲದ ಮೂಲಕ ಹಾಯಿಸಿ. ಚೀಲದ ಕೊನೆಗೆ ಕೂದಲನ್ನು ಸುತ್ತಿ, ಹಾಗೆಯೇ ಮೇಲ್ಭಾಗದವರೆಗೆ ಸುರುಳಿ ಮಾಡಿ. ತಲೆಯ ಬಳಿ ಬಂದಾಗ ಬಾಬಿ ಪಿನ್ ಹಾಕಿ. ಹೀಗೆ ಒಂದು ತಾಸು ಇರಲು ಬಿಡಿ. ಈಗ ಚೀಲ ತೆಗೆದು, ಕೂದಲನ್ನು ಸಾಮಾನ್ಯ ರೀತಿಯಲ್ಲಿಯೇ ಬಾಚಿಕೊಳ್ಳಿ. ನಿಮ್ಮ ಗುಂಗುರು ಕೇಶರಾಶಿ ರೆಡಿ.

  ಟ್ವಿಸ್ಟ್ ಮತ್ತು ಕರ್ಲ್ ವಿಧಾನ

  ಸಹಜವಾದ ರೀತಿಯಲ್ಲಿಯೇ ತಲೆ ಸ್ನಾನ ಮಾಡಿ, ಕೂದಲುಗಳನ್ನು ಮೃದುವಾದ ಟವೆಲ್ ನಿಂದ ಒಣಗಿಸಿಕೊಳ್ಳಿ. ನಂತರ ಬಾಚಿಕೊಂಡು ಮಧ್ಯದಲ್ಲಿ ಬೈತಲೆ ಮಾಡಿಕೊಳ್ಳಿ. ಎರಡೂ ಭಾಗಗಳನ್ನು ಪ್ರತ್ಯೇಕವಾಗಿ ಸುರುಳಿಯಾಗಿ ಟ್ವಿಸ್ಟ್ ಮಾಡಿ. ನಂತರ ಇವುಗಳನ್ನು ಗಟ್ಟಿಯಾಗಿ ಪಿನ್ ಮಾಡಿಕೊಳ್ಳಿ. ಒಂದು ರಾತ್ರಿಯ ನಂತರ ಕ್ಲಿಪ್ ಗಳನ್ನು ತೆಗೆದು ನೋಡಿದರೆ ನಿಮ್ಮ ಕೂದಲು ಸುಂದರವಾಗಿ ಸುರುಳಿಯಾಗಿರುತ್ತವೆ.

  ಬ್ರೇಡಿಂಗ್ ಅಥವಾ ಜಡೆ ಹಾಕುವುದು

  ಸ್ವಚ್ಛವಾಗಿ ಕೂದಲನ್ನು ತೊಳೆದುಕೊಂಡು ಶೇ.70 ರಷ್ಟು ಒಣಗಲು ಬಿಡಿ. ಈಗ ಮಧ್ಯದಲ್ಲಿ ಎರಡು ಭಾಗ ಮಾಡಿ ಗಟ್ಟಿಯಾಗಿ ಜಡೆ ಹೆಣೆಯಿರಿ. ಯಾವ ರೀತಿ ಕೂದಲು ಗುಂಗುರಾಗಿಸಬೇಕೆಂಬುದರ ಆಧಾರದಲ್ಲಿ ನೀವು ಜಡೆಯ ವಿನ್ಯಾಸವನ್ನು ನಿರ್ಧರಿಸಬಹುದು. ಬಹಳ ಕಾಲದವರೆಗೆ ಗುಂಗುರು ಕೂದಲು ಉಳಿಯುವಂತಾಗಲು ಈ ರೀತಿ ಹೆಣೆದ ಜಡೆಯನ್ನು ಒಂದು ರಾತ್ರಿ ಹಾಗೆಯೇ ಬಿಡಬೇಕು. ಬೆಳಗ್ಗೆ ಜಡೆ ತೆಗೆದು ನೋಡಿ. ಗುಂಗುರಾದ ಕೂದಲು ನಿಮ್ಮದಾಗಿರುತ್ತವೆ. ಬೆರಳುಗಳ ಮೂಲಕ ಕೂದಲುಗಳನ್ನು ಬಿಡಿಸಿ ಸ್ಟೈಲ್ ಮಾಡಿಕೊಳ್ಳಬಹುದು.

  English summary

  7 Ways To Curl Your Hair Naturally At Home

  Soft and lustrous curls are the desire of most women. Irrespective of whether you are the modern woman or are a traditional beauty, beautiful curls is what you'd want. And in order to get there, you may have tried all the different forms of curling irons and setting gels possible. You may have spent a hefty sum of money in beauty and hair treatments as well.All of those may have not just taken a toll on the shine of your hair but also may have paved the way for dandruff, flaky scalp, split ends, hair fall and number of other hair-related problems. This article tells you seven such easy ways in which you can achieve curls in a natural way.
  Story first published: Monday, June 4, 2018, 15:28 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more