For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಐಟಿ ಬ್ರಹ್ಮಚಾರಿಗಳ ಹದಗೆಟ್ಟ ಬದುಕು

By * ಮೋಹನ್ ವಂಜೇರಿ
|
Haywire lifestyle of Bangalore bachelors
ಬೆಂಗಳೂರಿನಂಥ ಮಹಾನಗರದಲ್ಲಿ ಹಗಲು ರಾತ್ರಿಯೆನ್ನದೆ ಸಾಫ್ಟ್ ವೇರ್ ಕಂಪನಿಗಳಲ್ಲಿ ದುಡಿಯುವ ಯುವಕರ ಜೀವನ ಎಷ್ಟು ಅಸ್ತವ್ಯಸ್ತವಾಗಿರುತ್ತದೆ ಮತ್ತು 'ಚಲ್ತಾ ಹೈ' ಎಂಬ ಧೋರಣೆಯಿಂದಾಗಿ ಎಂತೆಂಥ ಅವಘಡಗಳು ಸಂಭವಿಸುತ್ತವೆ ಎಂಬುದಕ್ಕೆ ಕೆಳಗಿನ ಘಟನೆಯೇ ಸಾಕ್ಷಿ.

ಮದುವೆಯ ಹೊಸ್ತಿಲಲ್ಲಿರುವ ದುಡಿಮೆಯ ಕಾಯಕವನ್ನು ಮಾಡಿಕೊಂಡಿರುವ ಐದು ಯುವಕರಿರುವ ಮನೆಯಿಂದ ಮಂಗಳವಾರ ಬೆಳ್ಳಂಬೆಳಿಗ್ಗೆ ಒಂದು ಲ್ಯಾಪ್‌ಟಾಪ್ ಕಳ್ಳತನವಾಗಿದೆ. ಅಯ್ಯೋ ಅಷ್ಟೇನಾ ಅಂತ ನಿರ್ಲಕ್ಷ್ಯ ಮಾಡಬೇಡಿ. ಇಲ್ಲಿ ಲ್ಯಾಪ್‌ಟಾಪ್ ಕಳ್ಳತನವಾಗಿದೆ ಎನ್ನುವುದಕ್ಕಿಂತ ಈ ಯುವಕರ ಜೀವನಶೈಲಿ ಆ ಕಳ್ಳತನಕ್ಕೆ ಹೇಗೆ ಕಾರಣವಾಯಿತು ಎಂಬುದು ಇಲ್ಲಿ ಮುಖ್ಯ.

ಇರುವ ಐದು ಜನರಲ್ಲಿ ಒಬ್ಬೊಬ್ಬರು ಒಂದೊಂದು ಕಂಪನಿಯಲ್ಲಿ ಕೆಲಸಕ್ಕಿದ್ದಾರೆ, ಹೆಚ್ಚಾಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ. ಒಬ್ಬ ಹಿರಿಯ ತಾಯಿಯನ್ನು ಅಡುಗೆ ಮಾಡಿಕೊಡಲು ನೇಮಿಸಿಕೊಂಡಿದ್ದಾರೆ. ಜೀವನ ಆರಾಮವಾಗಿದೆ. ಕಂಪನಿಯಲ್ಲಿ ಕೈತುಂಬ ಸಂಬಳ, ಮನೆಯಲ್ಲಿ ಊಟ, ತಿಂಡಿ, ನಿದ್ದೆ, ಮಸ್ತಿ ಮಜಾಕ್ಕೇನೂ ಕೊರತೆಯಿಲ್ಲ.

ಒಬ್ಬೊಬ್ಬರದೂ ಒಂದೊಂದು ಟೈಮಿಂಗ್. ಒಬ್ಬ ಇನ್ನೂ ನಕ್ಷತ್ರಗಳು ಮಿಣುಕುತ್ತಿರುವ ಹೊತ್ತಿನಲ್ಲಿ ಬೆಳಿಗ್ಗೆ 4.30ಕ್ಕೆ ಮನೆಯಿಂದ ಅಡಿಯಿಟ್ಟರೆ, ಇನ್ನೊಬ್ಬ ಸುತ್ತಮುತ್ತಲಿನವರು ಜಾಗಿಂಗ್ ಶುರು ಮಾಡುವ ಹೊತ್ತಿನಲ್ಲಿ. ಮಗದೊಬ್ಬ ಪೇಪರಿನವ ಪೇಪರ್ ಬಿಸಾಕಿ ಹೋಗುವ ಹೊತ್ತು. ಉಳಿದಿಬ್ಬರು ಚಳಿಗೆ ರಗ್ಗುಹೊದ್ದು ಮಲಗಿರುತ್ತಾರೆ.

ಪ್ರತಿಯೊಬ್ಬರ ಕೈಯಲ್ಲೂ ಬೀಗವಿಲ್ಲದ ಕಾರಣ ಕೆಲಸಕ್ಕೆ ಹೋಗುವಾಗ, ಯಾರನ್ನೂ ಎಬ್ಬಿಸದೆ ಸುಮ್ಮನೆ ಬಾಗಿಲೆಳೆದುಕೊಂಡು ಕಚೇರಿಯ ಹಾದಿ ಹಿಡಿಯುತ್ತಾರೆ. ಇದು ದಿನಂಪ್ರತಿ ನಡೆದುಕೊಂಡು ಬಂದಿರುವ ರೀತಿರಿವಾಜು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ತೆರೆದಿದೆ ಮನೆ ಓ ಬಾ ಅತಿಥಿ ಎಂದರೂ ಯಾರೂ ಬಂದಿರಲಿಲ್ಲ.

ಆದರೆ, ಪ್ರತಿದಿನ ಸೂರ್ಯ ಪೂರ್ವ ದಿಕ್ಕಿನಲ್ಲೇ ಹುಟ್ಟುತ್ತಾನಾದರೂ, ಎಲ್ಲ ದಿನವೂ ಒಂದೇ ರೀತಿಯಿರುವುದಿಲ್ಲವಲ್ಲ? ಇಂದಿನ ಬೆಳಗಿನ ಮುಹೂರ್ತವನ್ನು ಆಯ್ದುಕೊಂಡ ಕಿಲಾಡಿ ಕಳ್ಳನೊಬ್ಬ, ಉಳಿದಿಬ್ಬರು ಮಲಗಿದ ಕೋಣೆಗೇ ನುಗ್ಗಿ ಸದ್ದಿಲ್ಲದಂತೆ ಲ್ಯಾಪ್ ಟಾಪ್ ಎಗರಿಸಿಕೊಂಡು ಹೋಗಿದ್ದಾನೆ. ಬೆಳಕು ಹರಿದು ಕಣ್ಣು ಉಜ್ಜುವಾಗ ಇವರಿಗೆ ಜ್ಞಾನೋದಯವಾಗಿದೆ.

ಹೀಗಿದೆ ನೋಡಿ ನಮ್ಮ ಬೆಂಗಳೂರಿನ ಬ್ರಹ್ಮಚಾರಿಗಳ ಜೀವನ. ಇದು ಇವರ ಕಥೆ ಮಾತ್ರವಲ್ಲ. ಕೆಲಸಕ್ಕೆಂದು ರಾಜ್ಯದ ಅನೇಕ ಕಡೆಗಳಿಂದ ಗುಳೆಯೆದ್ದು ಬಂದಿರುವ ಅನೇಕರ ಕಥೆಯೂ ಇದೇ ರೀತಿಯಾಗಿರಬಹುದು. ಈಗ ಎಚ್ಚೆತ್ತುಕೊಳ್ಳುವ ಸರದಿ ಯುವ ಬ್ಯಾಚುಲರ್ ಗಳದ್ದು.

English summary

Haywire lifestyle of Bangalore bachelors | Techies lifestyle in Bengaluru | ಬೆಂಗಳೂರು ಐಟಿ ಬ್ರಹ್ಮಚಾರಿಗಳ ಹದಗೆಟ್ಟ ಬದುಕು

How is the lifestyle of bachelors of Bangalore? Though they have pocket full of money, routine life is not full of roses, honey. Here is an example how haywire lifestyle of techies in Bangalore can throw them into disarray.
Story first published: Tuesday, November 22, 2011, 15:39 [IST]
X
Desktop Bottom Promotion