For Quick Alerts
ALLOW NOTIFICATIONS  
For Daily Alerts

ನೋವನ್ನು ನುಂಗುವ ವಿದ್ಯೆ ಕಲಿಸಿದ ದೇವತೆಯೇ

By * ಅಚ್ಯುತಕುಮಾರ. ಯಲ್ಲಾಪುರ
|
Episode 4 : ಪ್ರೀತಿಸಿ ಮೋಸ ಮಾಡಿದವಳ ಸೊಕ್ಕು ಇಳಿಸಿದ ಪ್ರೇಮಿ..?
Achyutkumar, Yellapur, Uttara Kannada
ಹಾಯ್ ನನ್ನೊಲಮೆ...

ತುಂಬಾ ದಿನದಿಂದ ಕಾಪಾಡಿಕೊಂಡು ಬಂದ ಪ್ರೀತಿಯ ವಸ್ತುವೊಂದು ಕಳೆದು ಹೋದಾಗ... ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಪುಟ್ಟ ಕಂದನ ನೋಡಿದಾಗ... ಇಷ್ಟವಾದವರನ್ನು ಅಗಲಿ ದೂರವಾಗಲೇಬೇಕಾದ ಅನಿವಾರ್ಯತೆ ಬಂದಾಗ ಆಗುವ ವೇದನೆ ಅನುಭವಿಸಲಾಗದು ಕಣೇ ಹುಡುಗಿ. ತೀರ ಮುಗ್ಧ ಹುಡುಗಿ ಕಣೇ ನೀನು ಇದಾವುದರ ಪರಿವೇ ನಿನಗಿರದು.

ನಿನ್ನ ನೆರಳಾಗುವ ಬಯಕೆಯಲ್ಲಿ ನಿನ್ನ ಗೆಳೆಯನಾಗಿ ಸ್ನೇಹದ ನಂಬಿಕೆಯಿಂದ ವಂಚಿತನಾಗಿ ಒಬ್ಬಂಟಿಯಾದವನ ನೆರಳು ನಿನ್ನ ಪಾದ ಸೇರಿ ಹೋಯಿತಲ್ಲೆ ಪ್ರೀತಿಯ ಚಿಲುಮೆ. ನೀ ದೂರವಾಗುವ ಕೊನೆಯ ಸಮಯದವರೆಗೂ ಅಲೆಗಳ ಅಪ್ಪಳಿಸುವಿಕೆಯ ನಡುವೆ ಸಮುದ್ರ ನೀರಿನ ಮುಂದೆ ನಿಂತು ನಿನ್ನ ಹೆಸರು ಹೇಳಿ ಕೂಗಿ ಕರೆಯುತ್ತಿತ್ತು ನನ್ನ ಧ್ವನಿ. ಆ ನಿನ್ನ ಮಹತ್ವಾಕಾಂಕ್ಷೆಗಳ ವಿಚಾರ, ಮೌನದಲ್ಲೆ ಎದ್ದು ಕಾಣುವ ಮುಗ್ದತೆ, ಒಮ್ಮೊಮ್ಮೆ ಹಾಗೆ ಗಂಭೀರ, ಮತ್ತೊಮ್ಮೆ ಮುನಿಸು, ಒಂದಿಷ್ಟು ಕುಚೇಷ್ಟೆ, ಬೇಸರದಲ್ಲಿನ ಸಾಂತ್ವನ, ದುಃಖ ಮಿತಿ ಮೀರಿದರೆ ಕಣ್ಣಂಚಲ್ಲಿ ಕಣ್ಣೀರಿನ ಭೋರ್ಗರೆತ ಎಲ್ಲವು ನಿನ್ನೆಯಷ್ಟೆ ಕಳೆದು ಹೋದ ದಿನಗಳಂತೆ ಕಾಡುತ್ತಲಿತ್ತು. ಅಂದು ನನ್ನ ಸ್ನೇಹವನ್ನು ದಿಕ್ಕರಿಸಿದ ಆ ನಿನ್ನ ಗಟ್ಟಿ ನಿರ್ಧಾರ ಕಷ್ಟವಾದರೂ ಇಷ್ಟವಾಯಿತು ಕಣೇ..

ಬಹುಷಃ ನೆನಪುಗಳೇ ಹೀಗೆ ಎಂದು ಅನಿಸುತ್ತದೆ. ಬೇಡ ಬೇಡವೆಂದರೂ ಮತ್ತೆ ಮತ್ತೆ ಮರುಕಳಿಸುತ್ತದೆ. ಅತ್ತ ಅನುಭವಿಸಲೂ ಆಗದೇ ಮರೆಯಲು ಆಗದೆ ಪೇಚಿಗೆ ಸಿಲುಕಿಸುವಂತಹ ವೇದನೆಯನ್ನು ತಂದೊಡ್ಡುತ್ತವೆ. ನನ್ನ ಬದುಕಿಗೆ ನೀ ಬಂದ ಘಳಿಗೆಯಿದೆಯಲ್ಲ. ನನಗರಿವೇ ಇರಲಿಲ್ಲ ನೀ ಹೇಗೆ ಬಂದಿಯೆಂದು. ಅಂದು ನಾನೇಕೊ ಕೊಂಚ ಬೇಸರದಲ್ಲಿದ್ದೆ. ಏಕಾಂತವನ್ನು ಬಯಸಿದ್ದೆ. ನಿನ್ನ ಮೊದಲ ದರ್ಶನವಾದದ್ದು ಆವಾಗಲೇ. ಕ್ಷಣಮಾತ್ರದಲ್ಲಿಯೇ ಬೇಸರವೆಲ್ಲ ಮಾಯವಾಗಿ ಹೊಸ ಹುರುಪನ್ನು ಹುಟ್ಟುಹಾಕಿತ್ತು ನಿನ್ನ ಮೊದಲ ನೋಟ. ಅದಕ್ಕೇ ಅಂತಾರಾ ಲವ್ ಅಟ್ ಫಸ್ಟ್ ಸೈಟ್? ಒಂಟಿಯಾದಾಗ ಸಿಕ್ಕು ಒಂಟಿತನವ ನೀಗಿ ಮತ್ತೆ ಒಂಟಿಯನ್ನಾಗಿಸಿ ಸದ್ದಿಲ್ಲದೇ ಎದ್ದು ಹೋಗುತ್ತಿರುವ ನಿನಗೆ ಹೇಗೆತಾನೆ ಅರ್ಥವಾಗಬಲ್ಲದು ನನ್ನ ಕಾಡುತ್ತಿರುವ ಒಂಟಿಬಾವ..?

ನನ್ನ ಜೀವನದ ಪಯಣದಲ್ಲಿ ಯಾವುದೋ ಒಂದು ಹಂತದಲ್ಲಿ ಪರಿಚಯವಾಗಿ, ಸ್ನೇಹದ ಹೂವಾಗಿ ಬಾಡಿಹೋದ ಬಳ್ಳಿ ನೀನಾದೆ. ಬಾಡಿಹೋದ ಬಳ್ಳಿಯ ಮುಳ್ಳೊಂದು ಮನಸಿನಲ್ಲಿ ನಾಟಿ ಚುಚ್ಚುತ್ತಲಿದೆ ಕಣೇ. ಮುಳ್ಳಿನ ಮೇಲೆ ಅರಳಿದ ಹೂಗಳ ಸೌಂದರ್ಯ.. ಆ ಸುವಾಸನೆ.. ನೀನು ಉಳಿಸಿಹೋದ ನೆನಪುಗಳು, ಮನ ಕೆರಳಿಸುವ ಭಾವನೆಗಳು ಬದುಕಲು ಬಿಡಲಾರೆಯೆನ್ನುತ್ತಲಿವೆ. ಇಂದು ಭೌತಿಕವಾಗಿ ನೀ ನನ್ನೊಂದಿಗಿಲ್ಲದಿರಬಹುದು. ಆದರೆ ಮಾನಸಿಕವಾಗಿ ನನ್ನ ಹೃದಯದಲ್ಲಿ ಬೆಚ್ಚಗಿನ ನೆನಪುಗಳನ್ನು ಇರಿಸಿ ಅದರೊಂದಿಗೆ ಕಚಗುಳಿ ಇಡುತ್ತಿರುವೆಯಲ್ಲೆ ನಿನಗರಿವಿಲ್ಲದೆಯೇ. ನಿನ್ನ ಹೆಸರು ಚಿರಪರಿಚಿತವಾದರೂ ನೋವನ್ನು ನುಂಗುವ ವಿದ್ಯೆ ಕಲಿಸಿದ ದೇವತೆಯೇ ನಿನಗೆ ಎನೆಂದು ಕರೆಯಲಿ. ಮನದ ಕರೆ ನಿನಗೆ ಕೇಳುವದೆಂದು?

English summary

Darling You hurt me, but still I love you | ನೋವನ್ನು ನುಂಗುವ ವಿದ್ಯೆ ಕಲಿಸಿದ ದೇವತೆಯೇ..

My salute to the girl who taught me how to swallow pain. My darling, my love you have hurt me by distancing from me, but still I love you, just because you taught me how to love too. A love letter by Achyutkumar, Yellapur, Uttara Kannada.
X
Desktop Bottom Promotion