For Quick Alerts
ALLOW NOTIFICATIONS  
For Daily Alerts

ಚೈನಾ ಗ್ರಾಸ್ ಹಲ್ವಾ; ಬರೀ ಹುಲ್ಲಲ್ಲಾ ಇದು!

By Super
|

ಏನಪ್ಪಾ ಇದು ಯಾವುದ್ಯಾವುದೋ ಹುಲ್ಲು ತಿನ್ನಿಸಲು ಪ್ರಯತ್ನಿಸುತ್ತಿದ್ದಾರೆ ಅಂತ ತಿಳಕೋಬೇಡಿ. ಇದೊಂದು ರೀತಿ ಸಂಜೀವಿನಿ ಇದ್ದಂತೆ. ಚೈನಾ'ಗ್ರಾಸ್' ಎಂದು ಹೆಸರಲ್ಲಷ್ಟೇ ಹುಲ್ಲು ಬೆರೆತಿದೆ. ಆದರೆ ಇದು ಹುಲ್ಲಲ್ಲ ಚೈನಾಗ್ರಾಸ್ ಅನ್ನುವುದು ಹೃದಯಾಕಾರದ ಎಲೆಗಳನ್ನು ಹೊಂದಿರುವ ಒಂದು ಬಗೆಯ ಗಿಡ. ಈ ಗಿಡದ ಹಿಂದೆ 6 ಸಾವಿರ ವರ್ಷಗಳಷ್ಟು ಇತಿಹಾಸವೇ ಇದೆ. ಅದೆಲ್ಲಾ ಕತೆ ಯಾಕೆ ಸುಮ್ಮನೆ ಇದರ ಹಲ್ವಾ ಮಾಡಿ ತಿನ್ನಿ. ಸ್ವಾದಿಷ್ಟವಾಗಿರುತ್ತದೆ. ನಾರು ಬೇರು ಸಮೃದ್ಧವಾಗಿರುವುದರಿಂದ ಹೊಟ್ಟೆಯನ್ನು ಶುಚಿಯಾಗಿಡುತ್ತದೆ. ಆಂ ಮರೆತೆ, ತಿಂದ ನಂತರ ಹೇಗಿತ್ತು ಅಂತ ನಮಗೂ ತಿಳಿಸಿ.

ಬೇಕಾಗುವ ಪದಾರ್ಥಗಳು :

ಚೈನಾಗ್ರಾಸ್ : 1 ಕಪ್
ಸಕ್ಕರೆ : ಒಂದೂವರೆ ಕಪ್
ವೆನಿಲಾ ಎಸೆನ್ಸ್ : ನಾಲ್ಕೈದು ಹನಿ
ನೀರು : 3 ಕಪ್

ಮಾಡುವ ವಿಧಾನ :

ಮೊದಲು ಚೈನಾಗ್ರಾಸನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಕಪ್‌ ಅಳತೆ ಚೈನಾಗ್ರಾಸನ್ನು ಅರ್ಧ ಕಪ್ ಬಿಸಿ ನೀರಿನಲ್ಲಿ ಅರ್ಧ ಗಂಟೆ ಕಾಲ ನೆನೆಸಿಡಬೇಕು. ಈಗ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ದಪ್ಪತಳದ ಬಾಣಲೆಯಲ್ಲಿ ಎರಡುವರೆ ಕಪ್ ನೀರನ್ನು ಬಿಸಿಮಾಡಿಕೊಳ್ಳಿ.

ನೀರು ಕುದಿಯುತ್ತಿದ್ದಂತೆ ರುಬ್ಬಿದ ಚೈನಾಗ್ರಾಸ್‌ನ್ನು ಸೇರಿಸಿ ಸಂಪೂರ್ಣ ಕರಗುವವರೆಗೆ ಕುದಿಸಬೇಕು. ಈಗ ಸಕ್ಕರೆ ಸೇರಿಸಿ ಮಿಶ್ರಣವು ಗಟ್ಟಿಯಾದ ಮೇಲೆ ಒಲೆಯಿಂದ ಬಾಣಲೆಯನ್ನು ಕೆಳಗಿಳಿಸಿ. ವೆನಿಲಾ ಎಸೆನ್ಸ್ ಹನಿಗಳನ್ನು ಸೇರಿಸಿ. ಬಣ್ಣಕ್ಕಾಗಿ ಕೇಸರಿ ಅಥವಾ ಹಳದಿಯನ್ನು ಬೆರೆಸಬಹುದು. ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಬಗ್ಗಿಸಿ ತಣ್ಣಗಾದ ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಜಿಹ್ವ ಚಾಪಲ್ಯ ತಣಿಸುವ ಜತೆಗೆ ಆರೋಗ್ಯಕರವಾದ ಚೈನಾಗ್ರಾಸ್ ಹಲ್ವಾ ಸಿದ್ಧವಾದಂತೆ...!

(ದಟ್ಸ್‌ಕನ್ನಡ ಪಾಕಶಾಲೆ)

X
Desktop Bottom Promotion