For Quick Alerts
ALLOW NOTIFICATIONS  
For Daily Alerts

ಕೊಬ್ಬರಿ ಮಿಠಾಯಿ ಅಥವಾ ಕೊಬ್ಬರಿ ವಡೆ

By Staff
|
Coconut Vade
ರೈಲಿನಲ್ಲೋ, ಬಸ್ಸಿನಲ್ಲೋ ಟ್ರಿಪ್ಪಿಗೆ ಹೋಗುವಾಗ, ದೂರದೂರಿನ ಬಂಧುಬಳಗಗಳ ಮನೆಗೆ ಹೋಗುವಾಗ, ಕಾಲೇಜು ಜೀವನದಲ್ಲಿ ಹಾಸ್ಟೆಲ್ಲಿನಲ್ಲಿದ್ದು ಓದಿಕೊಳ್ಳುತ್ತಿದ್ದಾಗ ನಮ್ಮಮ್ಮ ಮಾಡಿ ಕೊಡುತ್ತಿದ್ದ, ಮಾಡಿ ಕಳುಹಿಸುತ್ತಿದ್ದ ಅನುಗಾಲದ ಸಿಹಿ ತಿನಿಸು ನನ್ನ ಫೆಪರಿಟ್ ಕೊಬ್ಬರಿ ಮಿಠಾಯಿ ಅಥವಾ ಕೊಬ್ಬರಿ ವಡೆ. ನಮ್ಮಮ್ಮ ಎಷ್ಟು ಅದ್ಭುತವಾಗಿ ಈ ಸಿಹಿಯನ್ನು ಮಾಡುತ್ತಾರೆಂದರೆ ಇಷ್ಟು ವರ್ಷವಾದನಂತರವೂ ಅದರ ರುಚಿ ಒಂದು ಬಾರಿಯೂ ಕೆಟ್ಟಿಲ್ಲ.

ಇಂಥ ಸವಿರುಚಿಯಾದ ಕೊಬ್ಬರಿ ವಡೆಯನ್ನು ನಮ್ಮಮ್ಮನಿಂದಲೇ ನಾನು ಕಲಿತಿದ್ದು, ಅದೂ ಇತ್ತೀಚೆಗೆ. ಅದನ್ನೀಗ ನಿಮಗೆ ತಿಳಿಸುತ್ತಿದ್ದೇನೆ. ನೀವೆಲ್ಲ ಈ ಸಿಹಿಯನ್ನು ಅನೇಕ ಬಾರಿ ಮಾಡಿರಬಹುದು. ಆದರೂ ಗೊತ್ತಿಲ್ಲದವರ ಅವಗಾಹನೆಗಾಗಿ ಇರಲೆಂದು ಇಲ್ಲಿ ಸರಳ ವಿಧಾನವನ್ನು ತಿಳಿಸುತ್ತಿದ್ದೇನೆ.

* ಗಂಗೋತ್ರಿ, ಮೈಸೂರು

ಬೇಕಾಗುವ ಪದಾರ್ಥಗಳು

ತೆಂಗಿನಕಾಯಿ ತುರಿ 1 ಬಟ್ಟಲು
ಸಕ್ಕರೆ 3/4 ಬಟ್ಟಲು
ಎಲ್ಲಕ್ಕಿ 8 ಪುಡಿ ಮಾಡಿದ್ದು
ತುಪ್ಪ 1 ಚಮಚ -ತಟ್ಟೆಗೆ ಸವರಲು

ಮಾಡುವ ವಿಧಾನ

ಕಾಯಿತುರಿ ಅಳತೆ ಮಾಡಿದ ಬಟ್ಟಲಿನಲ್ಲೇ, ಸಕ್ಕರೆಯನ್ನು ಅಳತೆ ಮಾಡಿಕೊಳ್ಳಿ. ಪ್ರೆಶರ್ ಪಾನ್ ನಲ್ಲಿ ಅಥವಾ ದಪ್ಪತಳದ ಪಾತ್ರೆಗೆ ಕಾಯಿತುರಿ, ಸಕ್ಕರೆ ಮತ್ತು ಏಲಕ್ಕಿ ಪುಡಿ ಎಲ್ಲ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 2 ಗಂಟೆಗಳ ಕಾಲ ಮುಚ್ಚಿಡಿ.

ತಟ್ಟೆಗೆ ತುಪ್ಪ ಸವರಿ ಇಟ್ಟುಕೊಳ್ಳಿ. ಈಗ 2 ಗಂಟೆಗಳಾದ ಬಳಿಕ ಕಾಯಿತುರಿ, ಸಕ್ಕರೆ ಮಿಶ್ರಣವನ್ನು ಒಲೆಯ ಮೇಲಿಟ್ಟು ತಿರುವುತ್ತಿರಿ. ಸಕ್ಕರೆ ಎಲ್ಲ ಕರಗಿ ಚೆನ್ನಾಗಿ ಕಾಯುತ್ತದೆ. ಕೈ ಬಿಡದೆ ತಿರುವುತ್ತಿರುವಾಗ ಅದು ತಳದಿಂದ ಮೇಲೆ ಬಿಡುತ್ತದೆ.ತಳದಿಂದ ಬಿಟ್ಟು ಪೂರ್ತಿ ಉಂಡೆಯಾಗುವುದು. ಈಗ ಅದನ್ನು ತಕ್ಷಣ ತುಪ್ಪ ಸವರಿದ ತಟ್ಟೆಗೆ ಸುರಿದು ಸಮತಟ್ಟಾಗಿ ಹರಡುವುದು. ಮೇಲೆ ಸಮತಟ್ಟಾಗಿ ಬರಲು ಹಾಲಿನಿಂದ ಅದ್ದಿದ ಕೈ ಇಂದ ತಟ್ಟಿ. ತಕ್ಷಣ ಚಾಕುವಿನಿಂದ ನಮಗೆ ಬೇಕಾದ ಆಕಾರಕ್ಕೆ ಕೊಯ್ಯುಕೊಳ್ಳಿ. ಬಿಸಿ ಇರುವಾಗಲೇ ಕೊಯ್ಯಬೇಕು. ಬಾಯಿಗೆ ಹಾಕಿ ಕೊಂಡರೆ ಕರಗುವಂತ ಕೊಬ್ಬರಿ ಮಿಠಾಯಿ ರೆಡಿ.

ಅಕಸ್ಮಾತ್ ತಟ್ಟೆಗೆ ಹಾಕಿದ ತಕ್ಷಣ ಪುಡಿಯಾಯಿತು ಎನಿಸಿದರೆ ಬೇಸರ ಪಡದಿರಿ. ಮತ್ತೆ ಅದ್ದನ್ನು ಮತ್ತೆ ಪ್ಯಾನ್ ಗೆ ಹಾಕಿ. ಅದಕ್ಕೆ 1/4 ಲೋಟ ಹಾಲನ್ನು ಹಾಕಿ ಮತ್ತೆ ಕಾಯಿಸಿ. ತಳ ಬಿಟ್ಟು ಬರುವಾಗ ತಕ್ಷಣ ತಟ್ಟೆಗೆ ಸುರಿದು ಬೇಕಾದ ಆಕಾರಕ್ಕೆ ಕತ್ತರಿಸಿರಿ.

Story first published: Monday, June 22, 2009, 11:43 [IST]
X
Desktop Bottom Promotion