ಪಿಜ್ಜಾ ಬಿಟ್ಟುಬಿಡಿ.. ಕಾರ್ನ್ ಮತ್ತು ಚೀಸ್ ಬಳಸಿ ಮಾಡಿ ಅದ್ಭುತ ರುಚಿಯ ಪರೋಟ! ಮಕ್ಕಳು ಪದೇ ಪದೇ ಕೇಳ್ತಾರೆ

Posted By:

ಪಿಜ್ಜಾ ಮರೆತುಬಿಡಿ.. ಕಾರ್ನ್ ಮತ್ತು ಚೀಸ್ ಬಳಸಿ ಮನೆಯಲ್ಲೇ ಮಾಡಿ ಅದ್ಭುತ ರುಚಿಯ ಪರೋಟ! ಮಕ್ಕಳು ಈ ಪರೋಟ ತಿಂದರೆ ಪದೇ ಪದೇ ಕೇಳ್ತಾರೆ. ಮಾಡುವ ಸುಲಭ ವಿಧಾನ ಇಲ್ಲಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪಿಜ್ಜಾ (Pizza) ಮತ್ತು ಬರ್ಗರ್‌ಗಳು ಅಚ್ಚುಮೆಚ್ಚಿನ ಆಹಾರವಾಗಿವೆ. ಆದರೆ, ಪ್ರತಿದಿನ ಹೊರಗಿನ ಆಹಾರ ಸೇವಿಸುವುದು ಆರೋಗ್ಯಕ್ಕೆ ಹಿತವಲ್ಲ.

ಇಂತಹ ಸಮಯದಲ್ಲಿ ಪಿಜ್ಜಾದಷ್ಟೇ ಸ್ವಾದಿಷ್ಟ ಹಾಗೂ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಆರೋಗ್ಯಕರ ಪರ್ಯಾಯವನ್ನು ಹುಡುಕುತ್ತಿದ್ದರೆ, ಕಾರ್ನ್ ಮತ್ತು ಚೀಸ್ ಪರೋಟವೇ (Corn Cheese Paratha) ನಿಮಗೆ ಸೂಕ್ತ ಆಯ್ಕೆ. ಸಿಹಿಯಾದ ಜೋಳ (Sweet Corn) ಮತ್ತು ಕರಗುವ ಚೀಸ್‌ನ ಈ ವಿಶಿಷ್ಟ ಸಂಯೋಜನೆಯು ಪರೋಟಕ್ಕೆ ಅಸಾಮಾನ್ಯ ರುಚಿಯನ್ನು ನೀಡುತ್ತದೆ. ಇದು ಕೇವಲ ಬೆಳಗಿನ ಉಪಾಹಾರಕ್ಕೆ ಮಾತ್ರವಲ್ಲದೆ, ಮಕ್ಕಳ ಲಂಚ್ ಬಾಕ್ಸ್‌ಗೂ ಅತ್ಯುತ್ತಮವಾದ ಆಯ್ಕೆ. ತಯಾರಿಸಲು ಕೂಡ ಬಹಳ ಸುಲಭ.

ಸಾಮಾನ್ಯವಾಗಿ ಆಲೂ ಪರೋಟ, ಮಶ್ರೂಮ್ ಪರೋಟ ಅಥವಾ ಪನೀರ್ ಪರೋಟ ತಯಾರಿಸುವ ಬದಲು, ಜೋಳ ಮತ್ತು ಚೀಸ್ ಬಳಸುವುದರಿಂದ ಮಕ್ಕಳಿಗೆ ಪಿಜ್ಜಾ ತಿನ್ನುವ ಅನುಭವ ಸಿಗುತ್ತದೆ. ಜೋಳವು ನಾರಿನಂಶ ಸಮೃದ್ಧವಾಗಿದೆ. ಚೀಸ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಒಳಗೊಂಡಿದೆ. ಹೆಚ್ಚು ಸಮಯ ವ್ಯಯಿಸದೆ, ಮನೆಯಲ್ಲಿರುವ ಸಾಮಾನ್ಯ ಸಾಮಗ್ರಿಗಳೊಂದಿಗೆ ಇದನ್ನು ಸಿದ್ಧಪಡಿಸಬಹುದು. ಕಾರ್ನ್ ಮತ್ತು ಚೀಸ್ ಪರೋಟಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ (Corn Cheese Paratha Recipe) ಇಲ್ಲಿದೆ.

ಕಾರ್ನ್ ಮತ್ತು ಚೀಸ್ ಪರೋಟಕ್ಕೆ ಬೇಕಾಗುವ ಸಾಮಗ್ರಿಗಳು

ಹಿಟ್ಟಿಗೆ

• ಗೋಧಿ ಹಿಟ್ಟು
• ಉಪ್ಪು
• ಎಣ್ಣೆ ಅಥವಾ ತುಪ್ಪ
• ನೀರು

ಹೂರಣ (ಸ್ಟಫಿಂಗ್)

• ಸ್ವೀಟ್ ಕಾರ್ನ್ (ಬೇಯಿಸಿದ)
• ಚೀಸ್ (ಮೊಜರೆಲ್ಲಾ ಅಥವಾ ಪ್ರೊಸೆಸ್ಡ್ ಚೀಸ್)
• ಹಸಿ ಮೆಣಸಿನಕಾಯಿ
• ಕೊತ್ತಂಬರಿ ಸೊಪ್ಪು
• ಕೆಂಪು ಮೆಣಸಿನ ಪುಡಿ
• ಧನಿಯಾ ಪುಡಿ
• ಬೆಳ್ಳುಳ್ಳಿ
• ಕಾಳು ಮೆಣಸಿನ ಪುಡಿ
• ಉಪ್ಪು

ಕಾರ್ನ್ ಮತ್ತು ಚೀಸ್ ಪರೋಟ ತಯಾರಿಸುವ ವಿಧಾನ

- ಮೊದಲಿಗೆ, ಗೋಧಿ ಹಿಟ್ಟನ್ನು ಒಂದು ಅಗಲವಾದ ಬಟ್ಟಲಿಗೆ ಹಾಕಿ, ಅದಕ್ಕೆ ಉಪ್ಪು ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

- ನಂತರ, ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟನ್ನು ನಾದಿದ ನಂತರ, ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ, ಬಟ್ಟೆ ಮುಚ್ಚಿ 20 ನಿಮಿಷಗಳ ಕಾಲ ನೆನೆಸಲು ಬಿಡಿ. ಇದರಿಂದ ಪರೋಟ ಮತ್ತಷ್ಟು ಮೆದುವಾಗುತ್ತದೆ.

- ಈಗ ಬೇಯಿಸಿದ ಸ್ವೀಟ್ ಕಾರ್ನ್ ಅನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿ ಅಥವಾ ಮ್ಯಾಶರ್‌ನಿಂದ ಜಜ್ಜಿಕೊಳ್ಳಿ. ಈ ಮಿಶ್ರಣಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಧನಿಯಾ ಪುಡಿ, ಕೆಂಪು ಮತ್ತು ಕಾಳು ಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

- ಕೊನೆಯಲ್ಲಿ ತುರಿದ ಚೀಸ್ ಹಾಕಿ ಚೆನ್ನಾಗಿ ಬೆರೆಸಿ. ಚೀಸ್‌ನಲ್ಲಿ ಉಪ್ಪು ಇರುವುದರಿಂದ, ಉಪ್ಪನ್ನು ಸೇರಿಸುವಾಗ ಜಾಗ್ರತೆಯಿಂದಿರಿ.

- ನಾದಿ ಇಟ್ಟ ಹಿಟ್ಟಿನಿಂದ ಸಣ್ಣದಾದ ಉಂಡೆಗಳನ್ನು ಮಾಡಿ. ಒಂದು ಉಂಡೆಯನ್ನು ತೆಗೆದುಕೊಂಡು ಲಘುವಾಗಿ ಲಟ್ಟಿಸಿ, ಅದರ ಮಧ್ಯದಲ್ಲಿ ಒಂದು ದೊಡ್ಡ ಚಮಚದಷ್ಟು ಚೀಸ್-ಕಾರ್ನ್ ಹೂರಣವನ್ನು ಇಡಿ.

- ನಂತರ ಅದರ ಅಂಚುಗಳನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮುಚ್ಚಿ. ಈಗ, ಒಣ ಹಿಟ್ಟನ್ನು ಬಳಸಿ, ನಿಧಾನವಾಗಿ ಮತ್ತು ಹಗುರವಾದ ಕೈಗಳಿಂದ ಪರೋಟವನ್ನು ಲಟ್ಟಿಸಿ.

- ಈಗ ತವಾವನ್ನು ಬಿಸಿ ಮಾಡಿ, ಲಟ್ಟಿಸಿದ ಪರೋಟವನ್ನು ಅದರ ಮೇಲೆ ಹಾಕಿ. ಎರಡೂ ಬದಿಗಳಲ್ಲಿ ಚಿನ್ನದ ಕಂದು ಬಣ್ಣ ಬರುವವರೆಗೆ ಬೇಯಿಸಿ.

- ನಂತರ, ತುಪ್ಪ ಅಥವಾ ಎಣ್ಣೆಯನ್ನು ಸವರಿ ಮತ್ತಷ್ಟು ಬೇಯಿಸಿ. ಚೀಸ್ ಕರಗಿದಂತೆ ಪರೋಟವು ಉಬ್ಬಲು ಪ್ರಾರಂಭಿಸುತ್ತದೆ. ನೋಡಲು ಆಕರ್ಷಕವಾಗಿ ಕಾಣುತ್ತದೆ.

ಸವಿಯುವ / ಬಡಿಸುವ ವಿಧಾನ

ಬಿಸಿಬಿಸಿಯಾದ ಕಾರ್ನ್ ಚೀಸ್ ಪರೋಟವನ್ನು ಟೊಮೆಟೊ ಕೆಚಪ್ ಅಥವಾ ತಾಜಾ ಮೊಸರಿನೊಂದಿಗೆ ಸವಿದು. ಬಿಸಿ ಇರುವಾಗಲೇ ತಿಂದರೆ ಒಳಗಿರುವ ಚೀಸ್ ಎಳೆ ಎಳೆಯಾಗಿ ಬರುತ್ತದೆ, ಇದು ಮಕ್ಕಳಿಗೆ ಅತ್ಯಂತ ಪ್ರಿಯವಾಗುತ್ತದೆ.

ಒಟ್ಟಿನಲ್ಲಿ, ಆರೋಗ್ಯಕರವಾದ ಗೋಧಿ ಹಿಟ್ಟು ಮತ್ತು ರುಚಿಕರವಾದ ಕಾರ್ನ್-ಚೀಸ್‌ನ ಈ ವಿಶಿಷ್ಟ ಸಂಯೋಜನೆಯು ನಿಮ್ಮ ಸಂಜೆಯ ತಿಂಡಿಗಾಗಲಿ ಅಥವಾ ಬೆಳಗಿನ ಉಪಾಹಾರಕ್ಕಾಗಲಿ ಮತ್ತಷ್ಟು ಸವಿ ನೀಡುತ್ತದೆ. ಇಂದೇ ಇದನ್ನು ನಿಮ್ಮ ಮನೆಯಲ್ಲಿ ಟ್ರೈ ಮಾಡಿ. ನಿಮ್ಮ ಮಕ್ಕಳ ಸಂತೋಷವನ್ನು ಕಣ್ತುಂಬಿಕೊಳ್ಳಿ.

[ of 5 - Users]
Story first published: Wednesday, February 18, 2026, 20:11 [IST]
X
Desktop Bottom Promotion