For Quick Alerts
ALLOW NOTIFICATIONS  
For Daily Alerts

ಬಾಳೆಕಾಯಿ ಕಾಪು

By Super
|

ಎಲ್ಲಾ ರೆಸಿಪಿಗಳನ್ನು ಹೆಂಗಸರೇ ಮಾಡುತ್ತಾರೆ, ಗಂಡಸರು ಕೂತು ತಿನ್ನುವ ದಂಡಪಿಂಡಗಳು ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ, ಅದನ್ನ ಹಿಂತೆಗೆದುಕೊಳ್ಳಿ. ಈ ರುಚಿಕಟ್ಟಾದ ತಿಂಡಿ ಮಾಡುವುದನ್ನು ನನಗೆ ಕಲಿಸಿಕೊಟ್ಟದ್ದು ನನ್ನ ತಂದೆ!

ಪ್ರಸಾದ ನಾಯಿಕ, ಬೆಂಗಳೂರು

ಈ ತಿಂಡಿಯ ಹೆಸರನ್ನು ನೀವು ಕೇಳಿರಲಿಕ್ಕಿಲ್ಲ, ತಿಂದಿರಲಿಕ್ಕಿಲ್ಲ. ಈ ತಿಂಡಿಯನ್ನು ಮಾಡಲು ನೂರಾಎಂಟು ಪಾತ್ರೆ, ಸೌಟು ಎಂಥದೂ ಬೇಕಾಗಿಲ್ಲ. ಒಂದಿಷ್ಟು ಬಾಳೆಕಾಯಿ, ಉಪ್ಪು, ಕಾರ, ಕಡಲೆ ಹಿಟ್ಟು, ಇಂಗು, ಜೀರಿಗೆ ಜೊತೆಗೆ ಚಪಾತಿ ಮಾಡುವ ತವಾ ಇಷ್ಟಿದ್ದರೆ ಸಾಕು.

ಮಾರ್ಗಶಿರ ಮಾಸ ಪ್ರಾರಂಭವಾಗಿ ಮಾಗಿಯ ಚಳಿ ಮೈಕೊರೆಯುತ್ತಿದ್ದರೆ ನಾಲಿಗೆ ಚುರುಚುರು ಅನ್ನಿಸುವುದಕ್ಕೆ ಪ್ರಾರಂಭಿಸುತ್ತದೆ. ಪ್ರತಿದಿನ ಮನೆಗೆಲಸ ಮಾಡಿ ದುಡಿದು ಹಣ್ಣಾದ ಹೆಂಡತಿ, ತಾಯಿ, ಅಕ್ಕ-ತಂಗಿಯರನ್ನು ಅಡುಗೆಮನೆಯಿಂದ ಒಂದು ಸಾಯಂಕಾಲ ಹೊರಕ್ಕಟ್ಟಿ ಶಭಾಷ್‌ಗಿರಿಪಡೆಯಲು ಗಂಡಸರಿಗೆ ಇದು ಒಳ್ಳೇ ಅವಕಾಶ.

ನೆನಪಿರಲಿ, ಇದಕ್ಕೆ ತಗಲುವ ಸಮಯ ಕೂಡ ಅತಿ ಕಡಿಮೆ. ನಿಮ್ಮ ಹೆಂಡತಿ ಅಡುಗೆಮನೆಯಿಂದ ಹೊರಬಂದು ಮುಖ ತೊಳೆದು, ಕುಂಕುಮ ಇಟ್ಟು, ಹೂಮುಡಿದು ರೆಡಿಯಾಗಿ ಬರುವುದರೊಳಗಾಗಿ ಗರಿಗರಿ, ಬಿಸಿಬಿಸಿಯಾದ ಕಾಪು ರೆಡಿಯಾಗಿರುತ್ತದೆ! ಇನ್ನೊಂದು ಮಾತು ನೆನಪಿರಲಿ, ಇದು ಯಾರು ಬೇಕಾದರೂ ಮಾಡಬಹುದು.

ಬೇಕಾಗುವ ಸಾಮಗ್ರಿಗಳು :

ನಾಲ್ಕು ಬಾಳೆಕಾಯಿ
ಉಪ್ಪು, ಕಾರ, ಇಂಗು, ಕಡಲೆಹಿಟ್ಟು, ಜೀರಿಗೆ - ಎಲ್ಲ ಚಿಟಿಕೆಯಷ್ಟು

ಮಾಡುವ ವಿಧಾನ :

ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು, ಗಾಲಿ ರೂಪದಲ್ಲಿ ಕತ್ತರಿಸಿಕೊಳ್ಳಬೇಕು. ಅವುಗಳ ಮೇಲೆ ಉಪ್ಪು, ಕಾರ, ಕಡಲೆಹಿಟ್ಟು, ಜೀರಿಗೆ ಎಲ್ಲ ಸ್ವಲ್ಪ ಪ್ರಮಾಣದಲ್ಲಿ ಉದುರಿಸಿ ಕಾಯ್ದ ತವಾದ ಮೇಲೆ ಇರಿಸಬೇಕು. ಅವುಗಳ ಮೇಲೆ ದೋಸೆಯ ಮೇಲೆ ಹುಯ್ದಂತೆ ಶೇಂಗಾಎಣ್ಣೆಯನ್ನು ಹಾಕಿ ಚೆನ್ನಾಗಿ ತಾಳಿಸಬೇಕು. ದಟ್ಸಾಲ್‌! ರೆಡಿ. ಇಷ್ಟೇನಾ ಅಂತ ಆಶ್ಚರ್ಯಪಡಬೇಡಿ. ನಮ್ಮಪ್ಪನಾಣೆಗೂ ಇಷ್ಟೇ.

ಮುಂದಿನ ಆದಿತ್ಯವಾರ ಮತ್ತೊಂದು ಹೊಸರುಚಿಯನ್ನು ನೋಡೋಣ, ಅಲ್ಲಿಯವರೆಗೆ ಬಾಳೆಕಾಯಿ ಕಾಪನ್ನು ಮೆಲ್ಲುತಿರೋಣ.

X
Desktop Bottom Promotion