For Quick Alerts
ALLOW NOTIFICATIONS  
For Daily Alerts

ಹುಳಿಹುಳಿ ಮಾವಿನಕಾಯಿ ಚಿತ್ರಾನ್ನ ರೆಸಿಪಿ

By Prasad
|
Tender mango for chitranna
ಬೇಸಿಗೆ ಕಾಲಿಡುತ್ತಿದ್ದಂತೆ ಹೊಂಗೆಮೆರ,ಮಾವಿನಮರದ ಹಸುರೆಲೆ ನಡುವೆ ಕಮೋಫ್ಲೇಜ್ ಆಗಿರುವ ಕೋಗಿಲೆ ಗಾನ ಕೇಳುವುದು ಅಪರಿಮಿತ ಆನಂದ. ಆದರೆ ಕೆಟ್ಟಕಟ್ಟಡ ಸಂಸ್ಕೃತಿಯ ದಟ್ಟ ಕಾಡುಗಳಲ್ಲಿ ಇದು ದುರ್ಲಭ. ಮಲೆನಾಡು, ಕಾಡು ಮೇಡುಗಳಲ್ಲಿ ಕುಳಿತು ನೀವು ಇಂಟರ್ನೆಟ್ಟಿಗೆ ಒರಗಿದ್ದರೆ ಕೋಗಿಲೆ ಅಪರಿಚಿತವಲ್ಲ. ನಗರ ಪ್ರದೇಶಗಳಲ್ಲಿ ವಾಸಿಸುವ ಕೆಲವು ಅದೃಷ್ಟವಂತರ ಮನೆಯ ಕಾಂಪೊಂಡುಗಳಲ್ಲಿ ಈಗೂ ಕೂಡ ಕೋಗಿಲೆಯ ಆಸ್ಥಾನ ಗಾಯನ ಲಭ್ಯ. ಇವೆಲ್ಲವೂ ಹಸುರು, ಕೋಗಿಲೆ, ನೆರಳು ಮತ್ತು ನಿಶ್ಯಬ್ದ ಹಾಗೂ ನೀವು ನಿಂತ ನೆಲದ ಪರಿಸರದ ಮೇಲೆ ಅವಲಂಬಿತ.

ಕೋಗಿಲೆ ಚೈತ್ರಮಾಸದ ರಾಯಭಾರಿಯಾದರೆ ಮಾವಿನಮರ ಎಂಬೆಸಿ ಆಫೀಸು. ಗೊಂಚಲು ಗೊಂಚಲಾಗಿ ತೂಗುಬಿದ್ದಿರುವ ಎಳೆ ಮಾವಿನಕಾಯಿ ನೋಡಿದರೆ ನಾಲಗೆಯಲ್ಲಿ ಚೊಳ್ಳಂತ ನೀರು. ಮರಕ್ಕೆ ಕಲ್ಲು ಹೊಡೆದು (ಅವಕಾಶವಿದ್ದರೆ) ಕಲ್ಲಿನಿಂದಲೇ ಕುಟ್ಟಿ ಮನೆಯಿಂದ ಕಾಗದದಲ್ಲಿ ಕಟ್ಟಿಕೊಂಡು ತಂದ ಉಪ್ಪು, ಮೆಣಸಿನಪುಡಿ ಹಾಕಿ ಮಾವಿನಕಾಯಿ ಮೆಲ್ಲುವುದು ಯಾರಿಗೆ ಇಷ್ಟವಿಲ್ಲ. ಜಿಹ್ವಾಚಾಪಲ್ಯಕ್ಕೆ ಶರಣು.

ಭಾರತದ ಮಾರುಕಟ್ಟೆಗಳಲ್ಲಿ ಈಗ ಮಾವಿನಕಾಯಿ ಪ್ರವೇಶ ಆಗಿದೆ. ಲೊಟ್ಟೆ ಹುಳಿ ಕಾಯಿಗಳನ್ನು ಮನೆಗೆ ತಂದು ಚಟ್ನಿ ಅಥವಾ ಚಿತ್ರಾನ್ನ ಮಾಡುವವರಿಗೆ ಇದು ರಮ್ಯಚೈತ್ರಕಾಲ. ಮಾರ್ಚ್ 16 ಮಂಗಳವಾರ ಚಾಂದ್ರಮಾನ ಯುಗಾದಿ. ಹಬ್ಬದ ಅಡುಗೆಗಳ ಪಟ್ಟಿಯಲ್ಲಿ ಮಾವಿನಕಾಯಿ ಚಿತ್ರಾನ್ನಕ್ಕೆ ಶಾಶ್ವತ ಸ್ಥಾನ. ಬನ್ನಿ, ಮಾವಿನ ಚಿತ್ರಾನ್ನ ರೆಸಿಪಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಬೇಕಾಗುವ ಸಾಮಗ್ರಿ :

1/2 ಕೆಜಿ ಅಕ್ಕಿ
4 ಮಾವಿನಕಾಯಿ
ಕಡಲೆಕಾಯಿ ಬೀಜ 25 ಗ್ರಾಂ
7-8 ಗೋಡಂಬಿ
2-3 ಟೀ ಚಮಚ ಕಡಲೆಬೆಳೆ
7-8 ಒಣ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
8-10 ಕರಿಬೇವು ಎಲೆ
ಒಂದು ಚಿಟುಕಿಯಷ್ಟು ಅರಿಶಿಣ ಪುಡಿ
ಟೀ ಚಮಚದಷ್ಟು ಸಾಸಿವೆ
ತುರಿದ ಹಸಿ ಕೊಬ್ಬರಿ
ಎಳ್ಳಣ್ಣೆ ಅಥವಾ ಕಡಲೆಕಾಯಿ ಎಣ್ಣೆ ಆರು ಚಮಚ

ಮಾಡುವ ವಿಧಾನ :

ಒಂದು ಪಾತ್ರೆಯಲ್ಲಿ ಉದುರು ಉದುರಾದ ಅನ್ನ ಮಾಡಿಟ್ಟುಕೊಂಡಿರಿ. ಅನ್ನ ಸ್ವಲ್ಪ ಉದುರಾಗಿದ್ದರೆ ಚಿತ್ರಾನ್ನ ಕಲಿಸಲು ಸುಲಭ. ಅನಂತರ ಮಾವಿನಕಾಯಿಗಳ ಸಿಪ್ಪೆಯನ್ನು ಪೀಲ್ ಮಾಡಿ ತೆಗೆದು ಸಣ್ಣಗೆ ತುರಿದುಕೊಳ್ಳಿ. ತುರಿದುಕೊಂಡ ಮಾವಿನಕಾಯಿಯ ಜತೆ ಒಣಮೆಣಸಿನಕಾಯಿ ಹಾಕಿ ನೀರನ್ನು ಬಳಸದೆ ರುಬ್ಬಿಡಿ. ರುಬ್ಬಿದ ಪದಾರ್ಥ ಸ್ವಲ್ಪ ತರಿತರಿಯಾಗಿರಲಿ. ಚೂರು ಬೆಲ್ಲ ಹಾಕಿ ರುಬ್ಬಿದರೆ ಒಳ್ಳೆ ಟೇಸ್ಟ್ ಬರತ್ತೆ.

ಎಣ್ಣೆಯನ್ನು ಬಾಣಲೆಗೆ ಹಾಕಿಕೊಂಡು ತುಸು ಬಿಸಿಯಾಗುತ್ತಿದ್ದಂತೆ ಸಾಸಿವೆ ಉದುರಿಸಿ. ಚಟಪಟ ಅನ್ನುತ್ತಿದ್ದಂತೆ ಅರಿಶಿಣ ಪುಡಿ ಹಾಕಿ ನಂತರ ಕರಿಬೇವು ಸೊಪ್ಪನ್ನು ಹಾಕಿರಿ. ಸ್ಟೌ ಉರಿ ಸಣ್ಣದಾಗಿರಲಿ. ಅದಕ್ಕೆ ಕಡಲೆಬೇಳೆ, ಶೇಂಗಾ, ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ತಾಳಿಸಿರಿ ಅಥವಾ ಬಾಡಿಸಿರಿ ಅಥವಾ ಹುರಿಯಿರಿ. ಇದಕ್ಕೆ ಹಸಿ ಕೊಬ್ಬರಿಯನ್ನೂ ಹಾಕಿ ಸಂಭಾಳಿಸಿದರೆ ಮಾವಿನಕಾಯಿ ಚಿತ್ರಾನ್ನ ಬೇಗ ಹಳಸುವುದಿಲ್ಲ.

ಈ ಒಗ್ಗರಣೆಗೆ ಮೊದಲೇ ರುಬ್ಬಿಕೊಂಡ ಮಾವಿನಕಾಯಿ, ಒಣಮೆಣಸಿನಕಾಯಿ ಮಿಶ್ರಣವನ್ನು ಸೇರಿಸಿ ಮತ್ತೆ ಸ್ವಲ್ಪ ತಾಳಿಸಿರಿ. ಬಾಣಲೆಯನ್ನು ಕೆಳಗಿಳಿಸಿ ಉದುರುದುರಾದ ಅನ್ನದೊಡನೆ ಉಪ್ಪು ಹಾಕಿ ಕಲಿಸಿರಿ. ಅದಕ್ಕೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮಾವಿನಕಾಯಿ ಚಿತ್ರಾನ್ನ ತಯಾರ್.

ಅರಿಕೆ : ಮಾವಿನಕಾಯಿ ಬಳಸಿ ಮಾಡುವ ಬಗೆಬಗೆಯ ಅಡುಗೆಗಳನ್ನು ದಟ್ಸ್ ಕನ್ನಡ ಓದುಗರೊಂದಿಗೆ ಹಂಚಿಕೊಳ್ಳಲು ನಿಮಗೆ ಆಹ್ವಾನ. ಬರೆಯಿರಿ.

Story first published: Monday, March 15, 2010, 14:06 [IST]
X
Desktop Bottom Promotion