For Quick Alerts
ALLOW NOTIFICATIONS  
For Daily Alerts

ಗಸಗಸೆ ಹಾಲು, ಮಾವಿನಕಾಯಿ ಶರಬತ್ತು, ಪಪ್ಪಾಯಿ ಜ್ಯೂಸ್‌

By Staff
|
Papaya Juice
ಅಯ್ಯಪ್ಪ ಏನು ಬಿಸಿಲು, ಅಸಾಧ್ಯ ಸೆಕೆ... ಉಸ್ಸಪ್ಪ ಸಾಕಾಗಿ ಹೋಯಿತು ಅಂತ ಬರುವ ಮನೆಮಂದಿಗೆ, ಅತಿಥಿ ಅಭ್ಯಾಗತರಿಗೆ ಐಸು ಸೇರಿಸಿದ ಮಾವಿನಕಾಯಿ ಶರಬತ್ತನ್ನೋ ಪಪ್ಪಾಯಿ ಜ್ಯೂಸನ್ನೋ ನೀಡಿದರೆ ಹತ್ತು ನಿಮಿಷದಲ್ಲಿ ಸುಸ್ತು ಮಾಯವಾಗಿರುತ್ತದೆ. ನಾಲಿಗೆಗೆ ರುಚಿ, ಹೊಟ್ಟೆಗೆ ತಂಪು ಮತ್ತು ಕಣ್ಣಿಗೆ ಭರ್ಜರಿ ನಿದ್ದೆ ಗ್ಯಾರಂಟಿ.

* ಶಾಂತಾ ಬಟವಿ, ಹಾವೇರಿ

ಗಸಗಸೆ ಹಾಲು

ಬೇಕಾಗುವ ಪದಾರ್ಥಗಳು :

ಗಸಗಸೆ- 50 ಗ್ರಾಂ
ಸಕ್ಕರೆ- 100 ಗ್ರಾಂ
ಏಲಕ್ಕಿ- 7
ಶುಂಠಿ- ಒಂಚೂರು

ಮಾಡುವ ವಿಧಾನ : ರಾತ್ರಿ ಮಲಗುವ ಮುನ್ನ ಗಸಗಸೆಯನ್ನು ನೆನೆಹಾಕಿರಿ. ಮರುದಿನ ನೀರೆಲ್ಲ ಬಸಿದು ಮಿಕ್ಸಿಯಲ್ಲಿ ಶುಂಠಿ, ಗಸಗಸೆ, ಏಲಕ್ಕಿ ಮೂರನ್ನೂ ಸೇರಿಸಿ ಗ್ರೈಂಡ್‌ ಮಾಡಿ, ಸೋಸಿಕೊಳ್ಳಿ. ಹೀಗೆ 2-3 ಬಾರಿ ಮಾಡಿ ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ಐಸ್‌ ತುಂಡುಗಳನ್ನು ಹಾಕಿ ಕೊಡುವುದರಿಂದ ಬಿಸಿಲಿನಲ್ಲಿ ದಣಿದವರಿಗೆ ಆಯಾಸವನ್ನೂ, ದಣಿವನ್ನು ನೀಗಿಸಿ ದೇಹಕ್ಕೆ ತಂಪೆರೆಯುತ್ತದೆ. ಚೆನ್ನಾದ ನಿದ್ದೆಯೂ ಬರುತ್ತದೆ.

ಮಾವಿನಕಾಯಿ ಶರಬತ್ತು

ಬೇಕಾಗುವ ಸಾಮಾನುಗಳು :

ಮಾವಿನಕಾಯಿ, ಸಕ್ಕರೆ, ಏಲಕ್ಕಿ-8

ಮಾಡುವ ವಿಧಾನ :
ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ಬೇಯಿಸಬೇಕು. ನಂತರ ಸಿಪ್ಪೆ , ವಾಟೆ ತೆಗೆದು ರಸವನ್ನೆಲ್ಲ ಒಂದು ಪಾತ್ರೆಯಲ್ಲಿ ಹಾಕಿ ಸೋಸಿಕೊಳ್ಳಬೇಕು. ನಂತರ ಸಕ್ಕರೆ ಹಾಕಿ ಕರಗಿಸಬೇಕು. ಇದಕ್ಕೆ ಏಲಕ್ಕಿ ಕುಟ್ಟಿ ಪುಡಿ ಮಾಡಿ ಸೇರಿಸಬೇಕು. ಮಾವಿನಕಾಯಿ ಹುಳಿ ಇದ್ದರೆ ಇನ್ನೂ ಸ್ವಲ್ಪ ಸಕ್ಕರೆಯನ್ನು ಸೇರಿಸಬಹುದು. ಐಸ್‌ ತುಂಡು ಸೇರಿಸಿ ಸೇವಿಸಿದರೆ ತುಂಬಾ ಹಿತವೆನಿಸುತ್ತದೆ. ಬೇಕಾದಲ್ಲಿ ಬಣ್ಣ ಸೇರಿಸಬಹುದು.

ಪಪ್ಪಾಯಿ ಜ್ಯೂಸ್‌

ಬೇಕಾಗುವ ಪದಾರ್ಥಗಳು :

ಪರಂಗಿ ಅಥವಾ ಪಪ್ಪಾಯಿ- 1 ಹಣ್ಣು
ಹಾಲು- 1 ಲೋಟ
ಸಕ್ಕರೆ, ಏಲಕ್ಕಿ ಹಾಗೂ ಗೋಡಂಬಿ ಚೂರುಗಳು.

ಮಾಡುವ ವಿಧಾನ : ಚೆನ್ನಾಗಿ ಹಣ್ಣಾದ ಒಂದು ಹಣ್ಣನ್ನು ತೊಳೆದು, ಸಿಪ್ಪೆ ಮತ್ತು ಬೀಜ ತೆಗೆದು, ಕತ್ತರಿಸಿ. ತುಂಡು ಮಾಡಿದ ಹಣ್ಣಿನ ಹೋಳುಗಳನ್ನು ಮಿಕ್ಸಿ ಯಲ್ಲಿ ರುಬ್ಬಿ , ಪಾತ್ರೆಗೆ ಸುರಿಯಿರಿ. ಸಕ್ಕರೆ, ಹಾಲು ಹಾಕಿ ಮಿಶ್ರಣ ಮಾಡಿ. ಸಕ್ಕರೆ ಕರಗಿದ ನಂತರ ಏಲಕ್ಕಿ ಪುಡಿ ಸೇರಿಸಿ, ಐಸ್‌ ತುಂಡುಗಳನ್ನು ಹಾಕಿ. ಗೋಡಂಬಿಯನ್ನು ಚೂರು ಚೂರು ಮಾಡಿ ಅಲಂಕರಿಸಿ. ಅತಿಥಿ ಅಭ್ಯಾಗತರಿಗೂ, ಬಿಸಿಲಲ್ಲಿ ದಣಿದವರಿಗೆ ಇದು ಉತ್ತಮ ಪಾನೀಯವಾಗಬಲ್ಲದು. ಇದರಲ್ಲಿ ಎ ಮತ್ತು ಸಿ ಜೀವಸತ್ವ ಹೆಚ್ಚಾಗಿ ಇರುವುದರಿಂದ ಕಣ್ಣುಗಳಿಗೆ ಒಳ್ಳೆಯದು.

Story first published: Tuesday, April 28, 2009, 16:52 [IST]
X
Desktop Bottom Promotion