For Quick Alerts
ALLOW NOTIFICATIONS  
For Daily Alerts

ಸಂಜೆಯ ಸ್ನ್ಯಾಕ್ಸ್‌ಗೆ ಗರಿಗರಿ ವೀಳ್ಯದೆಲೆ ಬಜ್ಜಿ ರೆಸಿಪಿ

Posted By:
|

ವೀಳ್ಯದೆಲೆ ಅಂದರೆ ಪೂಜೆಗೆ ಅಥವಾ ಊಟದ ನಂತರ ಎಲೆ-ಅಡಿಕೆ ಹಾಕೋಕೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ. ಎಲ್ಲರಿಗೂ ತಿಳಿದಿರುವ ಹಾಗೆ ಇದೊಂದು ಔಷಧೀಯ ಗುಣವಿರುವ ಎಲೆ. ತಾಂಬೂಲ ಅಂದರೆ ವೀಳ್ಯದೆಲೆ ಇರಲೇಬೇಕು ಅಲ್ಲವೇ. ಆಗಾಗ ವೀಳ್ಯದೆಲೆ ಸೇವಿಸಿದರೆ ಜೀರ್ಣಕ್ರಿಯೆ ವೃದ್ಧಿಸುತ್ತದೆ.

ಇನ್ನೇನು ಮಳೆಗಾಲ ಪ್ರಾರಂಭವಾಗುತ್ತಿದೆ. ಜಿಟಿಜಿಟಿ ಮಳೆ ಸುರಿಯುವಾಗ ಬಾಯಿಯೂ ಕೂಡ ಬಿಸಿಬಿಸಿ ಬಜ್ಜಿ ಬೋಂಡಾವನ್ನು ಬೇಡುತ್ತದೆ. ಆದರೆ ಮಕ್ಕಳಿಗೆ ಖಾರದ ಮೆಣಸಿನಕಾಯಿ ಬೋಂಡ ಇಷ್ಟವಾಗುವುದಿಲ್ಲ. ಮಾಮೂಲಿ ಕೆಲವು ಬೋಂಡಾಗಳು ಆರೋಗ್ಯಕ್ಕೆ ಹಿತವಲ್ಲವಲ್ಲ ಎಂದೆನಿಸುತ್ತದೆ. ಆದರೆ ನಾವಿವತ್ತು ನಿಮ್ಮ ಆರೋಗ್ಯಕ್ಕೂ ಯಾವುದೇ ಹಾನಿ ಮಾಡದ ವಿಶೇಷವಾದ ಬೋಂಡಾ ರೆಸಿಪಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ.

Batel Leaf Bajji Recipe

ಹೌದು ಪೂಜೆಗೆ ಮಾತ್ರ ವೀಳ್ಯದೆಲೆ ಸೀಮಿತವಲ್ಲ. ವೀಳ್ಯದೆಲೆಯಿಂದ ಗರಿಗರಿಯಾದ ಬೋಂಡಾ ತಯಾರಿಸಬಹುದು. ಈ ವೀಳ್ಯದೆಲೆಯ ಬೋಂಡಾ ಬಜ್ಜಿ ರೆಸಿಪಿ ಆರೋಗ್ಯಕ್ಕೂ ಹಿತವಾಗಿರುತ್ತದೆ ಮತ್ತು ಬಾಯಿಯೂ ರುಚಿ ಅನ್ನಿಸುತ್ತದೆ. ದಿಢೀರ್ ಎಂದು ತಯಾರಿಸಬಹುದಾದ ಕಡಿಮೆ ವೆಚ್ಚದ ರೆಸಿಪಿ ಇದು.

ಅದರಲ್ಲೂ ಹಳ್ಳಿಗಳಲ್ಲಿ ದಿಢೀರ್ ನೆಂಟರು ಬಂದರೆ ಬೋಂಡಾಬಜ್ಜಿ ಕರಿಯುವುದಕ್ಕೆ ತರಕಾರಿ ಇಲ್ಲದೇ ಇರಬಹುದು. ಆದರೆ ಸಾಮಾನ್ಯವಾಗಿ ಹಳ್ಳಿಗರು ಅದರಲ್ಲೂ ಮಲೆನಾಡು ಮತ್ತು ಕರಾವಳಿ ಪ್ರದೇಶದ ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ವೀಳ್ಯದೆಲೆ ಬಳ್ಳಿ ಇದ್ದೇ ಇರುತ್ತದೆ. ಹಾಗಾಗಿ ನೆಂಟರು ಬಂದಾಗ ದಿಢೀರ್ ಅಂತ ಎಣ್ಣೆಬಾಣಲಿ ಇಟ್ಟು ಬೋಂಡಾ ಮಾಡಿ ಬಡಿಸುವುದಕ್ಕೆ ಇದು ಹೇಳಿ ಮಾಡಿಸಿದ ರೆಸಿಪಿ.

ಹಾಗಾದ್ರೆ ವೀಳ್ಯದೆಲೆ ಬೋಂಡಾ ತಯಾರಿಸುವುದು ಹೇಗೆ ತಿಳಿಯೋಣ ಬನ್ನಿ.

Batel Leaf Bajji Recipe/ ವೀಳ್ಯದೆಲೆ ಬಜ್ಜಿ ರೆಸಿಪಿ
Batel Leaf Bajji Recipe/ ವೀಳ್ಯದೆಲೆ ಬಜ್ಜಿ ರೆಸಿಪಿ
Prep Time
5 Mins
Cook Time
5M
Total Time
10 Mins

Recipe By: Sushma

Recipe Type: Veg

Serves: 4

Ingredients
  • ಬೇಕಾಗುವ ಸಾಮಗ್ರಿಗಳು-

    . ಕಡಲೆ ಹಿಟ್ಟು - ಒಂದು ಬೌಲ್

    . ಅಕ್ಕಿಹಿಟ್ಟು - ಕಾಲು ಬೌಲ್

    . ಅಚ್ಚ ಖಾರದ ಪುಡಿ - ಒಂದು ಸ್ಪೂನ್

    . ವೀಳ್ಯದೆಲೆ - 10 ರಿಂದ 12

    . ಅರಿಶಿನಪುಡಿ - ಚಿಟಿಕೆ

    . ಉಪ್ಪು - ರುಚಿಗೆ ತಕ್ಕಷ್ಟು

    . ಸೋಡಾ - ಚಿಟಿಕೆ

    . ಜೀರಿಗೆ ಅಥವಾ ಓಂಕಾಳು- ಒಂದು ಸ್ಪೂನ್

    . ಅಡುಗೆ ಎಣ್ಣೆ

Red Rice Kanda Poha
How to Prepare
  • ಕಡಲೆಹಿಟ್ಟು, ಅಕ್ಕಿಹಿಟ್ಟು, ಅರಿಶಿನಪುಡಿ, ಜೀರಿಗೆ ಅಥವಾ ಓಂಕಾಳು, ಸೋಡಾ, ಉಪ್ಪು, ಅಚ್ಚಖಾರದ ಪುಡಿಯನ್ನು ಒಂದು ಬೌಲ್ ನಲ್ಲಿ ಹಾಕಿ ನೀರು ಸೇರಿಸಿ ಬೋಂಡಾ ಹಿಟ್ಟು ತಯಾರಿಸಿಕೊಳ್ಳಿ.

    ಬೇಕಿದ್ದರೆ ಬೋಂಡಾ ಇನ್ನಷ್ಟು ಗರಿಗರಿಯಾಗಲು ಒಂದು ಸ್ಪೂನ್ ಕಾರ್ನ್ ಫ್ಲೋರ್ ನ್ನು ಬಳಸಬಹುದು.

    ವೀಳ್ಯದೆಲೆಗೆ ಈ ಹಿಟ್ಟನ್ನು ಕೊಂಚ ಸವರಿಕೊಂಡು ರೋಲ್ ಮಾಡಿಕೊಳ್ಳಿ.

    ವೀಳ್ಯದೆಲೆ ಹಿಟ್ಟಿನಿಂದ ಅಂಟಿಕೊಳ್ಳಬೇಕು ಮತ್ತು ರೋಲ್ ಬಿಡಿಸದಂತೆ ನೋಡಿಕೊಳ್ಳಿ.

    ನಂತರ ರೋಲ್ ಮಾಡಿದ ಈ ವೀಳ್ಯದೆಲೆಗಳನ್ನು ಇನ್ನೊಮ್ಮೆ ಹಿಟ್ಟಿನಲ್ಲಿ ಅದ್ದಿ.

    ಎಣ್ಣೆ ಬಿಸಿಯಾದ ಕೂಡಲೇ ರೋಲ್ ನ್ನು ಎಣ್ಣೆಗೆ ಬಿಟ್ಟು ಗರಿಗರಿಯಾಗಿ ಕರಿಯಿರಿ.

    ಕೆಲವೇ ಸೆಕೆಂಡ್ ನಲ್ಲಿ ಬೋಂಡಾ ಕೆಂಬಣ್ಣಕ್ಕೆ ತಿರುಗುತ್ತದೆ. ಹೆಚ್ಚು ಸಮಯ ಬೇಯಿಸುವ ಅಗತ್ಯವಿಲ್ಲ.

    ಸೂಚನೆ- ರೋಲ್ ಮಾಡಲು ನಿಮಗೆ ಸಾಧ್ಯವಾಗದೇ ಇದ್ದರೆ ಎಲೆಯನ್ನು ಹಾಗೆಯೇ ಎಲೆಯ ಶೇಪ್ ನಲ್ಲಿಯೇ ಹಿಟ್ಟಿನಲ್ಲಿ ಅದ್ದಿಕೊಂಡು ಕರಿಯಬಹುದು.

    ರೋಲ್ ಮಾಡಿ ಕರಿದರೆ ಮೆಣಸಿನಕಾಯಿ ಬೋಂಡದಂತೆಯೇ ಕಾಣುತ್ತದೆ.

Instructions
  • ಪ್ರಯೋಜನಗಳು ಖಾರದ ಬೋಂಡಾ ಇಷ್ಟ ಪಡದ ಮಕ್ಕಳಿಗೆ ಈ ಬೋಂಡಾ ಬಹಳ ಖುಷಿಯಾಗುತ್ತದೆ . ವೀಳ್ಯದೆಲೆ ಜೀರ್ಣಕ್ರಿಯೆಗೆ ಸಹಕಾರಿ . ಔಷಧೀಯ ಗುಣವಿರುವ ಎಲೆಯಾಗಿರುವುದರಿಂದಾಗಿ ಯಾವುದೇ ಅಡ್ಡಪರಿಣಾಮವಾಗುವುದಿಲ್ಲ. . ಈ ಬೋಂಡಾ ಬೊಜ್ಜು ತರಿಸುವುದಿಲ್ಲ.
Nutritional Information
[ 3.5 of 5 - 49 Users]
X
Desktop Bottom Promotion