For Quick Alerts
ALLOW NOTIFICATIONS  
For Daily Alerts

ಮಂಡಕ್ಕಿ, ಚುರುಮುರಿ, ಕುರ್ಲರಿ... ಬಾಯಲ್ಲಿ ನೀರೂರಿ!

By Super
|

ಕುಚೇಲನ ಅವಲಕ್ಕಿ ಗೊತ್ತಲ್ಲ ; ಈ ಅವಲಕ್ಕಿ ರಕ್ತಸಂಬಂಧಿಯೇ ಆದ 'ಮಂಡಕ್ಕಿ"ಗೆ ಕನ್ನಡ ಪಾಕ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ. ಕನ್ನಡನುಡಿಗೆ ನಾಡಿನೊಳಗೇ ಪ್ರದೇಶಭೇದ ಇದೆಯಾದರೂ, ಮಂಡಕ್ಕಿ ಎಲ್ಲೆಡೆಯೂ ಸ(ಮೆ)ಲ್ಲುವಂಥ ತಿನಿಸು. ಶಾಲೆ-ಕಾಲೇಜು-ಬಾಲ್ಯದ ದಿನಗಳ ನೆನಪುಗಳಿಗೆ ಕಚಗುಳಿಯಿಡುವ ಮಂಡಕ್ಕಿಯ ಇತಿ ವೃತ್ತಾಂತ.

  • ಶ್ರೀವತ್ಸ ಜೋಶಿ

ನಿಮ್ಮ ಮಿತ್ರರ ಪೈಕಿ ಧಾರವಾಡದವರಾರಾದರೂ ಇದ್ದಾರೆಯೇ? ಅವರನ್ನೊಮ್ಮೆ 'ಗಿರ್ಮಿಟ್‌" ಅಂದರೆ ಏನೆಂದು ಗೊತ್ತೇ ಅಂತ ಕೇಳಿ, ಆ ಪದದ ಉಲ್ಲೇಖವೇ ಅವರನ್ನು ನೋಸ್ಟಾಲ್ಜಿಕ್‌ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅದರಲ್ಲೂ ಕೆ.ಸಿ.ಡಿ ಕ್ಯಾಂಪಸ್‌ ಎದುರಿನ ಅಂಗಡಿಗಳಲ್ಲಿ ವಿದ್ಯಾರ್ಥಿಜೀವನದ ದಿನಗಳಲ್ಲಿ ಸವಿದ 'ಗಿರ್ಮಿಟ್‌" ನೆನಪಿಸಿಕೊಂಡರೆ ಅವರೆಲ್ಲ ಇದ್ದಕ್ಕಿಂದತೆಯೇ ಧಾರವಾಡದ ಮಧುರಸ್ಮೃತಿಯಾಳಕ್ಕಿಳಿಯುತ್ತಾರೆ. ಇಷ್ಟಕ್ಕೂ ಏನದು ಗಿರ್ಮಿಟ್‌? ಮತ್ತೇನಿಲ್ಲ , ಪಕ್ಕಾ ಧಾರ್ವಾಡ್‌ ಸ್ಟೈಲಿನ ಭೇಲ್‌ಪುರಿ! ಮಂಡಕ್ಕಿ, ಹುಣಿಸೆ ರಸ, ಟೊಮೆಟೊ-ಈರುಳ್ಳಿ, ಮೆಣಸಿನಪುಡಿ ಮತ್ತು ಉಪ್ಪು - ಇಷ್ಟೇ ಅದರ ಇನ್‌ಗ್ರೇಡಿಯೆಂಟ್ಸು ! ಆದರೆ ಧಾರವಾಡಿಗರನ್ನು ಕೇಳಿದರೆ ಗೊತ್ತಾಗುತ್ತೆ ಗಿರ್ಮಿಟ್‌ ಬಗ್ಗೆ ಅವರ ಸೆಂಟಿಮೆಂಟ್ಸು! ಹೊರಜಗತ್ತಿಗೆ ಧಾರವಾಡದ ಐಡೆಂಟಿಟಿ-ಸ್ಪೆಷಾಲಿಟಿ 'ಪೇಢೇ" ಆದರೂ, ಮಂಡಕ್ಕಿಯ ಗಿರ್ಮಿಟ್‌ ಕೂಡ ಧಾರವಾಡಿಗರಿಗೆ ಪೇಢೆಯಷ್ಟೇ ಆತ್ಮೀಯವಾದುದು. ಇದು ನನ್ನ ಧಾರವಾಡ ಮಿತ್ರನೋರ್ವನ ಅಂಬೋಣ. ಮಂಡಕ್ಕಿಯ ಪವರ್‌ ಅಂಥದು! ಕರ್ನಾಟಕದ ಯಾವುದೇ ಪ್ರದೇಶದವರಿಗೂ ಮಂಡಕ್ಕಿಯಾಂದಿಗಿರುವ ಅವಿನಾಭಾವ ನಂಟನ್ನು ನೋಡಿದರೆ, 'ಇವತ್ತಿನ ವಿಷಯವನ್ನು ಓದುತ್ತಲೇ ನನ್ನ ಬಾಲ್ಯದ ದಿನಗಳು ನೆನಪಾದುವು..." ಎಂದು ಸಮ್ಮೋಹನ ಶಕ್ತಿಗೊಳಗಾಗುವ ವಿಚಿತ್ರಾನ್ನ ಓದುಗರಿಗೆ "ಮಂಡಕ್ಕಿ ಪುರಾಣ" ಪ್ರವಚಿಸದರೆ ಇಷ್ಟವಾಗಬಹುದು ಎಂದುಕೊಂಡಿದ್ದೇನೆ. ಧಾರವಾಡದವರಂತೆಯೇ ದಾವಣಗೆರೆಯವರ ಹತ್ತಿರ 'ಖಾರಾ ಮಂಡಕ್ಕಿ" ಅಥವಾ 'ಮಂಡಕ್ಕಿ ಮಿರ್ಚಿಬಜಿ" ಬಗ್ಗೆ ಪ್ರಸ್ತಾಪಿಸಿ ನೋಡಿ. ಡೈರೆಕ್ಟಾಗಿ ಅಲ್ಲಿಯ ರಾಮ್‌ ಏಂಡ್‌ ಕೋ ವೃತ್ತದ ಆಸುಪಾಸಿನ, ಎಂ.ಸಿ.ಕಾಲೋನಿಯ ರಸ್ತೆಗಳ ಪಕ್ಕದ ಸಂಜೆ/ರಾತ್ರಿಯ ಹೊತ್ತುಗಳ ನೆನಪಿನ ದೋಣಿಯಲ್ಲಿ ಅವರ ವಿಹಾರ ಆರಂಭವಾಗುತ್ತದೆ. ಮಂಡಕ್ಕಿ-ಮೆಣಸಿನಕಾಯಿಬಜಿ ಅಂಗಡಿಯನ್ನು ನಡೆಸಿಯೇ ಸಂಸಾರ ರಥ ಸಾಗಿಸುವವರು ದಾವಣಗೆರೆಯಲ್ಲಿದ್ದಾರೆ. ದಾವಣಗೆರೆಯ ಶಿಕ್ಷಣಸಂಸ್ಥೆಗಳ ಹಾಸ್ಟೆಲ್‌ ವಿದ್ಯಾರ್ಥಿಗಳೆಲ್ಲ ಮಂಡಕ್ಕಿಗಿರಾಕಿಗಳಾಗಿ ಈ ಅಂಗಡಿಕಾರರ ಉದರಂಭರಣಕ್ಕೆ ನೆರವಾಗುತ್ತಾರೆ. ಇಂಜನಿಯರಿಂಗ್‌ ಓದಿನ ದಿನಗಳಲ್ಲಿ ನಾವೂ ಎಷ್ಟೋ ಸಲ 'ಮಂಡಕ್ಕಿ ಟ್ರೀಟ್‌"ಗಳನ್ನು ಕೊಟ್ಟು-ತೆಗೆದುಕೊಂಡಿದ್ದೇವೆ!ಮಲೆನಾಡಿನಲ್ಲಿ ಶೃಂಗೇರಿಯವರಿಗೆ ಮಂಡಕ್ಕಿ ವಿಶೇಷವೇನೆಂದು ಕೇಳಿ. ಶಾರದಾಂಬೆಯ ದರ್ಶನಕ್ಕೆ ಬರುವ ಪ್ರವಾಸಿಗರು ಅಲ್ಲಿ ತುಂಗಾನದಿಯಲ್ಲಿ ಸ್ವಚ್ಛಂದವಾಗಿ ವಿಹರಿಸುವ ಮೀನುಗಳಿಗೆ ಹಾಕಲೆಂದೇ ಮಂಡಕ್ಕಿ ಪ್ಯಾಕೆಟ್‌ಗಳನ್ನು ಕೊಳ್ಳುತ್ತಾರೆ. ಬೆಳ್ಳಿಯುಂಗುರವಿರುವ ಮೀನನ್ನು ಗುರುತಿಸಿ ಅದಕ್ಕೆ ಮಂಡಕ್ಕಿ ಹಾಕುವುದೇ ಒಂದು ಮೋಜು ಶೃಂಗೇರಿಗೆ ಬರುವ ಯಾತ್ರಿಕರಿಗೆ.ಬಯಲುಸೀಮೆ, ಮಲೆನಾಡುಗಳನ್ನು ದಾಟಿ ಕರಾವಾಳಿಯ ತುಳುನಾಡಿಗೆ ಬನ್ನಿ. ಅಲ್ಲಿ ಮಂಡಕ್ಕಿ-ಚುರುಮುರಿ ಎಂದರೆ ಎಲ್ಲರಿಗೂ ಅರ್ಥವಾಗುತ್ತದೆಯೆಂದು ಹೇಳಲಾಗದೇನೊ. ಆದರೆ ಕುರ್ಲು ಅಥವಾ ಕುರ್ಲರಿ ಎಂದು ಹೇಳಿನೋಡಿ. ಮತ್ತೂ ಬೇಕಿದ್ದರೆ ಕುರ್ಲುಪಚ್ಚಡಿ ಎಂದು ಹೇಳಿ. ಅವರ ನೆನಪುಗಳು ಸೀದಾ ಡಿಸೆಂಬರ್‌-ಜನವರಿಯ ಚಳಿಗಾಲದ ರಾತ್ರಿಗಳ ಯಕ್ಷಗಾನ ಬಯಲಾಟಗಳ ಟೆಂಟ್‌ ಸುತ್ತಮುತ್ತ ಅಥವಾ ಊರ ಜಾತ್ರೆಯಾಗಲೀ ಸ್ಕೂಲ್‌ಡೇಯ ಕಾರ್ಯಕ್ರಮಗಳಾಗಲೀ ಗ್ಯಾಸ್‌ಲೈಟ್‌ (ಪೆಟ್ರೊಮ್ಯಾಕ್ಸ್‌) ಬೆಳಕಲ್ಲಿ ಟೆಂಪರರಿ ಸ್ಟಾಲ್‌ ಇಟ್ಟುಕೊಂಡ ಕುರ್ಲುಪಚ್ಚಡಿ ಅಂಗಡಿಗಳ ಮುಂಭಾಗಕ್ಕೆ ಗಿರಾಕಿಗಳಾಗಿ ನಿಂತಲ್ಲಿಗೆ ಹೋಗುತ್ತವೆ. ಕುರ್ಲುಪಚ್ಚಡಿ ಮಾರುವವನ ಸ್ಟಾಲ್‌; ಅದೇ ಹಳೇ ಅಲ್ಯೂಮಿನಿಯಂ ಪಾತ್ರೆ (ಮಿಕ್ಸಿಂಗ್‌ ಬೌಲ್‌), ಕಚಕಚಕಚ ಸದ್ದಿನೊಂದಿಗೆ ಈರುಳ್ಳಿ, ಹಸಿಮೆಣಸು, ಕೊತ್ತಂಬ್ರಿಸೊಪ್ಪು ಕಡಿಯುವ ಕಾರ್ಯವೈಖರಿ (ನಾವು-ನೀವು ಅಡುಗೆಮನೆಯಲ್ಲಿ ಬೇಕೊ ಬೇಡವೊ ಎಂದು ನಿಧಾನವಾಗಿ ಹಸಿಮೆಣಸು, ಈರುಳ್ಳಿ ಕತ್ತರಿಸುವುದಕ್ಕೂ, ಕುರ್ಲುಪಚ್ಚಡಿಯವನು ಹೈಸ್ಪೀಡಿನಲ್ಲಿ ಕಮರ್ಷಿಯಲಾಗಿ ಕೊಚ್ಚುವುದಕ್ಕೂ ಅಜಗಜಾಂತರವಿರುತ್ತದೆ!), ಕುರ್ಲು ಮತ್ತು ಈ ಮಿಕ್ಸ್ಚರನ್ನೆಲ್ಲ ಕಟಕಟ ಸದ್ದಿನೊಂದಿಗೆ ಮಿಕ್ಸಿಸಿ, ಉಪ್ಪು ಮತ್ತು 'ಕೊಳಂಬೊ" ಪುಡಿ ಸೇರಿಸಿ ಮೇಲೆ ಒಂದು ಚಮಚ ಎಣ್ಣೆ ಸುರಿದು (ಮಂಗಳೂರಾದ್ದರಿಂದ ತೆಂಗಿನೆಣ್ಣೆ ಎಂಬುದು ಬೇರೆ ಹೇಳಬೇಕಿಲ್ಲ), ಶಂಕುವಿನಾಕೃತಿಯ ಪೇಪರ್‌ಪ್ಯಾಕಲ್ಲಿ ಹಾಕಿಕೊಟ್ಟನೆಂದರೆ...! ವ್ಹಾ , ಬಾಯಲ್ಲಿಟ್ಟ ಕೂಡಲೆ ಅದೇನು ಸಂತೃಪ್ತಿ ! ಕುರ್ಲುಪಚ್ಚಡಿಯ ಖಾರ ನಾಲಿಗೆಯ ಮೇಲೆ ನರ್ತಿಸುತ್ತಿದ್ದಂತೆಯೇ ಅತ್ತ ರಂಗಸ್ಥಳದಲ್ಲಿ ಚೆಂಡೆ ಬಡಿತಕ್ಕೆ ರಕ್ಕಸ ವೇಷದ ಅಬ್ಬರದ ಕುಣಿತ ಅನುರಣಿಸುತ್ತದೆ. ಎಂಥ ಕೊರೆಯುವ ಚಳಿಯೂ ದೂರ ಹೋಗುತ್ತದೆ. ಮಧ್ಯರಾತ್ರಿ ಕಳೆದು ಎರಡು ಗಂಟೆಯಾಗುವಾಗಿನ ನಿದ್ದೆಯ ಮಂಪರು ಹೇಳಹೆಸರಿಲ್ಲದೆ ಮಾಯವಾಗುತ್ತದೆ!ಮಂಗಳೂರು ಆಕಾಶವಾಣಿಯ ಖಾಯಂ ಶ್ರೋತೃಗಳಿಗೆ 'ಕುರ್ಲರಿ" ಇನ್ನೊಂದು ನಮೂನೆಯ ನೆನಪನ್ನು ತರುತ್ತದೆ.

ಆಕಾಶವಾಣಿ ನಿಲಯದ ತುಳು ಉದ್ಘೋಷಕ ಕೆ.ಆರ್‌.ರೈ ಅವರು ನಡೆಸಿಕೊಡುತ್ತಿದ್ದ 'ಕೆಂಚನ ಕುರ್ಲರಿ" (ತಿಂಗಳಿಗೊಮ್ಮೆ ಪ್ರಸಾರವಾಗುವ ಹರಟೆ ಕಾರ್ಯಕ್ರಮ) ತುಳು ಕಾರ್ಯಕ್ರಮವನ್ನು ನಾವೆಲ್ಲ ಆನಂದಿಸುತ್ತಿದ್ದ ದಿನಗಳು ನನಗೀಗಲೂ ನೆನಪಿವೆ. ಕುರ್ಲುಪಚ್ಚಡಿ ಅಂಗಡಿಯ ಕೆಂಚಣ್ಣ ತನ್ನ ಗಿರಾಕಿಗಳೊಂದಿಗೆ ಮಾತಾಡುವ ಲೋಕಾಭಿರಾಮ ಹರಟೆ ಕುರ್ಲುಪಚ್ಚಡಿಯಷ್ಟೇ ರುಚಿಕರವಾಗಿರುತ್ತದೆ.ಅಮೆರಿಕದಲ್ಲಿ ಮಂಡಕ್ಕಿ ಮೆರೆದ ಪರಿಯನ್ನೂ ಇಲ್ಲಿ ನಮೂದಿಸಬೇಕು. ಕಳೆದ ವರ್ಷ ನಾವೆಲ್ಲ ಕಾವೇರಿ (ಕನ್ನಡಸಂಘ) ಸಮಿತಿಯ ಗೆಳೆಯರ ಬಳಗ ಸೇರಿ ಇಲ್ಲೇ ವಾಷಿಂಗ್‌ಟನ್‌ಗೆ ಹತ್ತಿರದ 'ಶೆನಾಂಡೋ ವ್ಯಾಲಿ"ಯಲ್ಲಿ ಮೂರು ದಿನಗಳ ಕ್ಯಾಂಪಿಂಗ್‌ಗೆ ಹೋಗಿದ್ದೆವು. ಒಂದುದಿನ ಸಂಜೆ ಹೊತ್ತು ತಿಂಡಿಗೆ ಚುರುಮುರಿ. ಮೈಸೂರು ಮೂಲದ ಸಂಜಯರಾವ್‌-ಮೀನಾರಾವ್‌ ದಂಪತಿಯ ಎಕ್ಸ್‌ಪರ್ಟೈಸಿನ ಮಹಾಮಿಶ್ರಣ. ಮಸಾಲೆಯಲ್ಲಿ ಸಾಕಷ್ಟು ಪುದಿನಾಸೊಪ್ಪು ಕೂಡ ಅರೆದುಹಾಕಿದ್ದ ಆ ಚುರುಮುರಿ ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಅಷ್ಟು ದೊಡ್ಡ ಪಾತ್ರೆಯಲ್ಲಿ ಮಿಕ್ಸ್‌ ಮಾಡಿದ್ದನ್ನು ಐದೇಐದು ನಿಮಿಷಗಳಲ್ಲಿ ನಮ್ಮ ಗುಂಪಿನ ಕ್ಯಾಂಪಿಗರೆಲ್ಲ ಮುಕ್ಕಿದ್ದನ್ನು ನೆನಪಿಸಿದಾಗ ಈ ಸಲದ ಸಮ್ಮರ್‌ನಲ್ಲಿ ಯಾವಾಗ ಕ್ಯಾಂಪಿಂಗ್‌ ಎಂದು ಎದುರುನೋಡುವಂತಾಗುತ್ತಿದೆ :-) ಕ್ಯಾಂಪಿಂಗ್‌ನಲ್ಲಿ ಭಲೇ ಯಶಸ್ವಿಯಾದ ಚುರುಮುರಿ ಆಮೇಲೆ ಕಾವೇರಿ ಸಂಘದ ಪಿಕ್‌ನಿಕ್‌ನಲ್ಲೂ ಮರುಕಳಿಸಿ ಇನ್ನೂ ಹೆಚ್ಚುಮಂದಿಗೆ ರುಚಿ ಹತ್ತಿಸಿತ್ತು.

ಕನ್ನಡ ಚಲನಚಿತ್ರಗೀತೆಗಳಲ್ಲಿ ಮಂಡಕ್ಕಿಯ ಉಲ್ಲೇಖವೇ ಇಲ್ಲವೇನೊ ಎಂದುಕೊಳ್ಳುತ್ತಿರುವಾಗಲೇ ನನಗೆ ನೆನಪಾದದ್ದು 'ರಾಜಾ ನರಸಿಂಹ" ಹೆಸರಿನ ಕನ್ನಡ ಸಿನೆಮಾದಲ್ಲಿನ (2003ರಲ್ಲಿ ಬಿಡುಗಡೆಯಾದದ್ದಿರಬಹುದು) ಒಂದು ಹಾಡು - 'ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೆ... ಮುತ್ತಿಕ್ಕುವಾಗ ಬೇಡ ರಾಂಗೂ ರಗಳೆ..." ನೀವು ಕೇಳಿದ್ದೀರಾ ಆ ಹಾಡನ್ನು ? ಮ್ಯೂಸಿಕ್‌ಇಂಡಿಯಾಆನ್‌ಲೈನ್‌ನಲ್ಲಿ ಹುಡುಕಿದರೆ ಸಿಗುತ್ತದೆ.ಅಕ್ಕಿ-ಅರಳು-ಅವಲಕ್ಕಿ-ಮಂಡಕ್ಕಿ ಕುಟುಂಬದಲ್ಲಿ ನೋಡಿ. ಅಕ್ಕಿ ಮತ್ತು ಅರಳುಗಳಿಗೆ ಸಂದಿರುವ ರಾಜಮರ್ಯಾದೆ ಅಥವಾ ದೇವಮರ್ಯಾದೆ ಉಳಿದೆರಡು ಸೋದರರಾದ ಅವಲಕ್ಕಿ-ಮಂಡಕ್ಕಿಗಳಿಗಿಲ್ಲ ಎಂದು ನನಗನ್ನಿಸುವುದುಂಟು. ಅಕ್ಕಿಯಲ್ಲಿ ಬಾಸ್‌ಮತಿ, ಗಂಧಸಾಳಿ, ಜೀರ್‌ಸಾಳಿ ಇತ್ಯಾದಿ ಶ್ರೀಮಂತ ಪ್ರಭೇದಗಳು, ಅವುಗಳ ಪೇಟೆಂಟಾಯಣಗಳ ದೌಲತ್ತು, ವಿಶ್ವದ ಜನಸಾಂದ್ರತೆಯ ಎರಡೂ ದೇಶಗಳ 'ಸ್ಟೇಪಲ್‌ ಫುಡ್‌" ಆಗಿ ಅಕ್ಕಿ ಪಡೆದಿರುವ ವಾಣಿಜ್ಯ ಪ್ರಾಧಾನ್ಯ - ಇವನ್ನೇ ನಾನು ಅಕ್ಕಿಗೆ ಸಂದಿರುವ ರಾಜಮರ್ಯಾದೆ ಎಂದದ್ದು. ಇನ್ನು ಅರಳು ಕೂಡ ನಾಗಪಂಚಮಿಯಂದು ನಾಗಪ್ಪನಿಗೆ ಅರ್ಪಣೆಯಾಗಬೇಕು. ವಿವಾಹವಿಧಿಗಳಲ್ಲಿ 'ಲಾಜಾಹೋಮ"ದಲ್ಲಿ ಅಣ್ಣನ ಬೊಗಸೆಯಿಂದ ಮದುಮಗಳು ತಂಗಿಯ ಬೊಗಸೆಗೆ ವರ್ಗಾವಣೆಯಾಗಿ ಅಗ್ನಿಗೆ ಅರ್ಪಣೆಯಾಗಬೇಕು. ಅಕ್ಕಿತುಂಬಿಸಿದ ಪಾತ್ರೆಯನ್ನು ಕಾಲಿಂದ ದೂಡಿ ಧಾನ್ಯಲಕ್ಷ್ಮಿಯಾಗಿ ನವವಧು ಮನೆತುಂಬಬೇಕು.ಆದರೆ ಅವಲಕ್ಕಿ, ಮಂಡಕ್ಕಿಗಳು ಯಾವತ್ತಿಗೂ ಹೈ-ಫೈ ಅಲ್ಲ ; ಗ್ರೌಂಡ್‌ ಲೆವೆಲ್‌ನಲ್ಲಿ ಶ್ರೀಸಾಮಾನ್ಯನ ಒಡನಾಡಿಗಳು. ಮಂಡಕ್ಕಿ ಒಗ್ಗರಣೆ ಹಾಗೂ ಮೆಣಸಿನಕಾಯಿ ಬಜ್ಜಿ...

English summary

Mouth-watering Mandakki

Karnataka Recipe : Srivathsa Joshi writes on mouthwatering Mandakki (Churumuri)
X
Desktop Bottom Promotion