For Quick Alerts
ALLOW NOTIFICATIONS  
For Daily Alerts

ನಾಲಗೆ ಚಪಲ ತಣಿಸುವ ಅವರೆಕಾಳು ದೋಸೆ

By Super
|

ಅವರೆಕಾಳು ಎಂದರೆ ಹೆಚ್ಚಿನವರು ಉಪ್ಪಿಟ್ಟು ಅಥವಾ ಸಾರು ಮಾತ್ರ ಮಾಡಬಹುದು ಎಂದು ತಿಳಿದಿದ್ದಾರೆ. ಆದರೆ ಬಡವರ ಮೆಚ್ಚಿನ ಈ ಅವರೆಕಾಯಿಯಿಂದ ದೋಸೆಯನ್ನೂ ಮಾಡಬಹುದು ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ತಿಂಗಳಾವರೆ ಜಾತಿಗೆ ಸೇರಿದ Hyacinth bean ಎಂಬ ಹೆಸರಿನ ಈ ಪುಟ್ಟ ಅವರೆಕಾಳು ಸಾಮಾನ್ಯವಾಗಿ ಡಿಸೆಂಬರಿ ನಿಂದ ಮಾರ್ಚ್‌ವರೆಗೆ ಭರ್ಜರಿಯಾಗಿ ದೊರಕುತ್ತದೆ. ಸಿಪ್ಪೆ ಸುಲಿದು ಬೀಜ ಹೊರತೆಗೆಯಲು ಕೊಂಚ ಹೊತ್ತು ತಗಲುತ್ತದೆ ಎಂಬ ಒಂದು ಕಾರಣವನ್ನು ಹೊರತುಪಡಿಸಿದರೆ ಇನ್ನೆಲ್ಲಾ ಇದರಲ್ಲಿರುವುದು ಧನಾತ್ಮಕ ಅಂಶಗಳೇ. ಇದರಲ್ಲಿರುವ ಪ್ರೋಟೀನುಗಳ ಭಂಡಾರ ಇದನ್ನೊಂದು ಆರೋಗ್ಯಕರ ಆಹಾರವನ್ನಾಗಿಸಿದೆ.

ಇದರಿಂದ ತಯಾರಿಸಬಹುದಾದ ಅಡುಗೆಗಳ ಪಟ್ಟಿಯೂ ದೊಡ್ಡದಿದೆ. ಅವರೆಕಾಯಿಯ ಅಥವಾ ಅವರೆಕಾಳಿನ ಉಪ್ಪಿಟ್ಟು, ಸಾರು, ಸಾಂಬಾರು, ತಿಳಿಸಾರು ಇತ್ಯಾದಿಗಳು ನೆಚ್ಚಿನ ಖಾದ್ಯಗಳಾಗಿವೆ. ಇಂದು ಇದರಿಂದ ತಯಾರಿಸುವ ದೋಸೆಯ ಬಗ್ಗೆ ತಿಳಿಯೋಣ. ಇದು ಸುಲಭ ಹಾಗೂ ಪುಷ್ಟಿದಾಯಕವಾಗಿದ್ದು ಬೆಳಗ್ಗಿನ ಹೊತ್ತಿನ ಸೇವನೆಯಿಂದ ಇಡಿಯ ದಿನ ಚಟುವಟಿಕೆಯಲ್ಲಿಡಲು ನೆರವಾಗುತ್ತದೆ. ಇದರ ಉತ್ತಮ ಗುಣಗಳೆಂದರೆ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಹಾಗೂ ಜೀರ್ಣಕ್ರಿಯೆಗೆ ಸಹಕರಿಸುವುದು. ಅವರೆಕಾಳಿನ ಭೂಗೋಳ, ಚರಿತ್ರೆ ಮತ್ತು ವರ್ತಮಾನ!

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಹತ್ತು ನಿಮಿಷಗಳು

*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಅವರೆಕಾಯಿ : ಮೂರು ಕಪ್

*ದೋಸೆ ಹಿಟ್ಟು: ಅರ್ಧ ಕೇಜಿ

*ಹಸಿಮೆಣಸು: ನಾಲ್ಕರಿಂದ ಐದು, ಚಿಕ್ಕದಾಗಿ ತುಂಡರಿಸಿದ್ದು

*ಈರುಳ್ಳಿ: ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)

*ತುರಿದ ಕ್ಯಾರೆಟ್ : ಅರ್ಧ ಕಪ್ (ತುರಿದದ್ದು)

*ಕೊತ್ತಂಬರಿ ಸೊಪ್ಪು: ಅರ್ಧ ಕಪ್ (ಚಿಕ್ಕದಾಗಿ ಹೆಚ್ಚಿದ್ದು)

*ಉಪ್ಪು ರುಚಿಗನುಸಾರ

*ಎಣ್ಣೆ: ಕಾವಲಿಗೆ ಹಚ್ಚಲು

ವಿಧಾನ:

1) ಮೊದಲು ಕುಕ್ಕರ್ ನಲ್ಲಿ ಅವರೆಕಾಳು ಹಾಕಿ ಕೊಂಚ ನೀರಿನೊಂದಿಗೆ ನಾಲ್ಕು ಸೀಟಿ ಬರುವವರೆಗೆ ಬೇಯಿಸಿ ಒಲೆ ಆರಿಸಿ ತಣಿಯಲು ಬಿಡಿ.

2) ಇತ್ತ ಒಂದು ದಪ್ಪತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಯಾದ ಬಳಿಕ ಹಸಿಮೆಣಸು, ನೀರುಳ್ಳಿ, ಮತ್ತು ಕ್ಯಾರೆಟ್ ಹಾಕಿ ಎರಡು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬಾಡಿಸಿ.

3) ಉರಿ ಆರಿಸಿದ ಬಳಿಕ ಇದಕ್ಕೆ ದೋಸೆ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ.

4) ಇಷ್ಟು ಹೊತ್ತಿನಲ್ಲಿ ಕುಕ್ಕರ್ ತಣ್ಣಗಾಗಿರುತ್ತದೆ. ಇಲ್ಲದಿದ್ದರೆ ತಣ್ಣೀರಿನ ಕೆಳಗೆ ಸೀಟಿ ಹಿಡಿದು ಮುಚ್ಚಳ ತೆರೆಯಿರಿ. ಅವರೆಕಾಯಿ ಅತಿ ಹೆಚ್ಚು ಬೆಂದಿರಬಾರದು, ಅಂತೆಯೇ ಗಟ್ಟಿಯೂ ಇರಬಾರದು, ಹದವಾಗಿದ್ದರೆ ತಿನ್ನಲು ಚೆನ್ನಾಗಿರುತ್ತದೆ. ಈಗ ಬೆಂದ ಅವರೆಕಾಳುಗಳನ್ನು ದೋಸೆ ಮಿಶ್ರಣಕ್ಕೆ ಸೇರಿಸಿ ಮಿಶ್ರಣ ಮಾಡಿ.

5) ಇನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಕಿ

6) ದೋಸೆ ಕಾವಲಿಯನ್ನು ಬಿಸಿಮಾಡಿ ಕಾವು ಹತ್ತುವವರೆಗೆ ಹಾಗೇ ಬಿಡಿ.

7) ಸಾಮಾನ್ಯ ಉದ್ದಿನ ದೋಸೆಯಂತೆಯೇ ಈ ಹಿಟ್ಟನ್ನೂ ಕಾವಲಿಯ ಮೇಲೆ ಒಂದು ದೊಡ್ಡಚಮಚ ಸುರಿದು ಹರಡಿಸಿ ಮುಚ್ಚಳ ಮುಚ್ಚಿ ಸುಮಾರು ಮೂರರಿಂದ ನಾಲ್ಕು ನಿಮಿಷ ಬೇಯಿಸಿ. ಉರಿ ಮಧ್ಯಮ ಇರಲಿ.

8) ಬಿಸಿಯಾಗಿದ್ದಂತೆಯೇ ಕಾಯಿ ಚಟ್ನಿ ಮತ್ತು ತುಪ್ಪ ಸವರಿ ಅತಿಥಿಗಳಿಗೆ, ಮನೆಯವರಿಗೆ ಬಡಿಸಿ ಮೆಚ್ಚುಗೆ ಪಡೆಯಿರಿ. ಈ ವಿಧಾನ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್‌ ಸ್ಥಳವನ್ನು ಬಳಸಿಕೊಳ್ಳಿ.

English summary

Special Avarekai Dosa Recipe

There are many recipes that can be prepared with beans. However, today we shall teach you one of the most tastiest foods that you can prepare with the Hyacinth bean, also called avarekai in Kannada. Hyacinth bean belongs to the bean family. It is widely available and is quite famous in the Southern parts of the country between the months of December and March.
Story first published: Wednesday, February 3, 2016, 23:30 [IST]
X