For Quick Alerts
ALLOW NOTIFICATIONS  
For Daily Alerts

ಬಿಸಿ ಬಿಸಿ ಮಸಾಲೆ ದೋಸೆ

By Staff
|

ಬೇಕಾಗುವ ಪದಾರ್ಥ : 4 ಲೋಟದಷ್ಟು ಸಾಧಾರಣ ಅಕ್ಕಿ, ಅರ್ಧ ಲೋಟದಷ್ಟು ತೊಗರಿಬೇಳೆ, ಒಂದೂವರೆ ಲೋಟ ಉದ್ದಿನ ಬೇಳೆ, 2 ಚಮಚ ಮೆಂತ್ಯ, ಒಂದು ಹಿಡಿ ಅವಲಕ್ಕಿ (ಅವಲಕ್ಕಿ ಹಾಕಿದರೆ, ದೋಸೆ ಗರಿಗರಿಯಾಗಿ ಬರುತ್ತದೆ) ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಸಕ್ಕರೆ.

ಮಾಡುವ ವಿಧಾನ : ಉಪ್ಪು, ಸಕ್ಕರೆ ಹೊರತುಪಡಿಸಿ ಮಿಕ್ಕೆಲ್ಲ ಪದಾರ್ಥಗಳನ್ನೂ 6ರಿಂದ 8 ಗಂಟೆಗಳ ಕಾಲ ನೆನೆಸಿಡಬೇಕು. ಆನಂತರ ಮಿಕ್ಸರ್‌, ಗ್ರೆೃಂಡರ್‌ ಅಥವಾ ಒರಳಿನಲ್ಲಿ ನುಣ್ಣಗೆ ರುಬ್ಬಬೇಕು. ಅದಕ್ಕೆ ಉಪ್ಪು ಹಾಗೂ ಸಕ್ಕರೆ ಹಾಕಿ ಕಲೆಸಿಡಬೇಕು.

ಮಸಾಲೆ ದೋಸೆ ಮಾಡಲು ಈರುಳ್ಳಿ ಆಲೂಗಡ್ಡೆ ಪಲ್ಯ ಹಾಗೂ ಒಣಮೆಣಸಿನ ಕಾಯಿ ಚಟ್ನಿ ಮಾಡಿಟ್ಟುಕೊಳ್ಳಬೇಕು. ಪಲ್ಯಕ್ಕಾಗಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಹದವಾಗಿ ಬೇಯಿಸಿ ಚೂರು ಉಪ್ಪಹಾಕಿ ಎರಡನ್ನೂ ಚೆನ್ನಾಗಿ ಕಲಸಿಟ್ಟುಕೊಳ್ಳಬೇಕು. ಮಸಾಲೆ ಚಟ್ನಿಗೆ ಒಣಮೆಣಸಿನಕಾಯಿ, ಕಡಲೆಬೇಳೆ, ಹುಣಸೆಹಣ್ಣು, ಈರುಳ್ಳಿ, 1 ಪುಟ್ಟ ಬೆಳ್ಳುಳ್ಳಿ, ಕಾಯಿತುರಿ, ಒಂದೆರಡು ಹರಳು ಉಪ್ಪು ಹಾಕಿ ರುಬ್ಬಿಟ್ಟುಕೊಳ್ಳಬೇಕು.

ಹದವಾಗಿ ಕಾದ ಹೆಂಚಿನ ಮೇಲೆ ಒಂದು ಚಮಚದಷ್ಟು ತುಪ್ಪ ಸವರಬೇಕು. ದೋಸೆ ಬಿಟ್ಟನಂತರ, ಸುತ್ತಲೂ ಮತ್ತೆರಡು ಚಮಚ ತುಪ್ಪ ಹಾಕಬೇಕು. ದೋಸೆ ಸ್ವಲ್ಪ ಬೆಂದ ಮೇಲೆ, ಅದಕ್ಕೆ ಒಣಮೆಣಸಿನ ಕಾಯಿ ಚಟ್ನಿ ಸವರಬೇಕು. ದೋಸೆ ಹದವಾಗಿ ಬೆಂದ ಬಳಿಕ ಸ್ವಲ್ಪ ಈರುಳ್ಳಿ-ಆಲೂಗಡ್ಡೆ ಪಲ್ಯವನ್ನು ಮಧ್ಯದಲ್ಲಿಟ್ಟು ಸುರುಳಿಯಂತೆ ಸುತ್ತಿ ತೆಗೆದರೆ ಮಸಾಲೆ ದೋಸೆ ರೆಡಿ.
ಮಸಾಲೆ ದೋಸೆ ಜತೆ ಪುದೀನ ಅಥವಾ ಕಾಯಿಚಟ್ನಿ ತುಂಬಾ ಸೊಗಸಾಗಿರುತ್ತದೆ.

English summary

Ever adorable Masala Dosa | ಮಸಾಲೆ ದೋಸೆ

Karnataka Recipe : Ever adorable Masala Dosa
X
Desktop Bottom Promotion