For Quick Alerts
ALLOW NOTIFICATIONS  
For Daily Alerts

ಮಗುವಿಗೆ ಹಾಲೂಡಿಸುತ್ತಿರುವ ಬಾಣಂತಿಯರಿಗೆ ಸಲ್ಲದ 10 ಆಹಾರಗಳು

|

ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸೇವಿಸಬೇಕಾದ ಅಹಾರಗಳು ಹೆರಿಗೆಯ ಬಳಿಕ ಬದಲಾಗುತ್ತದೆ. ಹೆರಿಗೆಯ ವರೆಗೂ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಆಹಾರದ ಮೂಲಕ ಹೆಚ್ಚಾಗಿ ಪಡೆಯಬೇಕಾದುದರಿಂದ ಈ ಅಗತ್ಯತೆ ಪೂರೈಸುವ ಆಹಾರಗಳು ಬೇರೆಯೇ ಇರುತ್ತವೆ.

ಆದರೆ ಹೆರಿಗೆಯ ಬಳಿಕ ಬಾಣಂತಿಯ ದೇಹ ಹಿಂದಿನ ಆರೋಗ್ಯ ಸ್ಥಿತಿಯನ್ನು ಪಡೆಯುವತ್ತ ಬದಲಾಗುತ್ತಿರುವಂತೆಯೇ ಮಗುವಿನ ಮುಖ್ಯ ಆಹಾರವಾಗಿರುವ ಎದೆಹಾಲಿನ ಉತ್ಪಾದನೆಗೂ ಹೆಚ್ಚಿನ ಮಹತ್ವ ಬರುತ್ತದೆ. ಹಾಗಾಗಿ, ಈ ಸಮಯದಲ್ಲಿ ಎದೆಹಾಲನ್ನು ಹೆಚ್ಚಿಸುವ ಮತ್ತು ಗರ್ಭಾವಸ್ಥೆಯಲ್ಲಿ ಬದಲಾವಣೆ ಪಡೆದಿದ್ದ ದೇಹವನ್ನು ಮೊದಲಿನ ಸ್ಥಿತಿಗೆ ತರುವಲ್ಲಿ ನೆರವಾಗುವ ಆಹಾರಗಳು ಅಗತ್ಯವಾಗಿರುತ್ತದೆ. ಒಂದು ವೇಳೆ ಅರಿವಿಲ್ಲದೇ ಈ ಗುಣಗಳಿಗೆ ವ್ಯತಿರಿಕ್ತವಾದ ಗುಣಗಳಿರುವ ಆಹಾರ ಸೇವಿಸಿದರೆ?

ಹೆರಿಗೆಯವರೆಗೂ ಹಣ್ಣುಗಳು, ಹೆಚ್ಚಿನ ಕಾರ್ಬೋಹೈಡ್ರೇಟುಗಳಿರುವ ಅಹಾರ, ಹಸಿ ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಹೆರಿಗೆಯ ಬಳಿಕ ಈ ಆಹಾರಗಳಲ್ಲಿ ಕೆಲವನ್ನು ತ್ಯಜಿಸುವುದು ಒಳ್ಳೆಯದು ಎಂದು ದಾದಿಯರು ಅನುಭವದಿಂದ ಹೇಳುತ್ತಾರೆ. ಆದರೆ, ತಜ್ಞರ ಪ್ರಕಾರ, ಎಲ್ಲಿಯವರೆಗೆ ಯಾವೊಂದು ಆಹಾರ ಬಾಣಂತಿಯ ಆರೋಗ್ಯದ ಮೇಲೆ ನೇರವಾದ ಪ್ರಭಾವ ಬೀರುವುದಿಲ್ಲವೂ ಅಲ್ಲಿಯವರೆಗೂ ಆಕೆ ಅದನ್ನು ಸೇವಿಸಬಹುದು.

ಬಾಣಂತಿಯ ಆಹಾರ ಎದೆಹಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿದ್ದಷ್ಟೂ ಉತ್ತಮ. ಹಾಗಾಗಿ ಈ ಅಂಶವನ್ನು ಪರಿಗಣಿಸಿ ಎದೆಹಾಲಿನ ಉತ್ಪಾದನೆ ಹೆಚ್ಚಿಸುವ ಆಹಾರಗಳನ್ನು ಹೆಚ್ಚಾಗಿ ಮತ್ತು ಎದೆಹಾಲಿನ ಉತ್ಪಾದನೆಗೆ ನೆರವಾಗದ ಆಹಾರಗಳನ್ನು ಹಾಲೂಡಿಸುವಿಕೆಯ ಸಮಯ ಕಳೆಯುವವರೆಗೂ ಮುಂದೂಡುವುದೇ ಜಾಣತನದ ಕ್ರಮವಾಗಿದೆ.

ಈ ನಿಟ್ಟಿನಲ್ಲಿ ತಜ್ಞರು ಬಾಣಂತಿಯರಿಗೆ ಸೂಕ್ತವಲ್ಲ ಎಂದು ಸಲಹೆ ಮಾಡುವ ಹತ್ತು ಪ್ರಮುಖ ಆಹಾರಗಳನ್ನುಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಈ ಅಹಾರಗಳನ್ನು ಬಾಣಂತನ ಮುಗಿಯವವರೆಗೂ ಆಕೆ ಸೇವಿಸದೇ ಕೇವಲ ಪೌಷ್ಟಿಕ ಮತ್ತು ಎದೆಹಾಲಿನ ಉತ್ಪಾದನೆಗೆ ನೆರವಾಗುವ ಆಹಾರಗಳನ್ನೇ ಹೆಚ್ಚು ಹೆಚ್ಚಾಗಿ ಸೇವಿಸಬೇಕು.

1. ಕಾಫಿ

1. ಕಾಫಿ

ಒಂದು ವೇಳೆ ಬಾಣಂತಿ ಹೆರಿಗೆಯವರೆಗೂ ಕಾಫಿ ಕುಡಿಯುವುದನ್ನು ಅತಿ ಕಡಿಮೆ ಮಾಡಿದ್ದರೆ ಅಥವಾ ನಿಲ್ಲಿಸಿಯೇ ಬಿಟ್ಟಿದ್ದರೆ ಬಾಣಂತನದ ಅವಧಿಯಲ್ಲಿಯೂ ಕಾಫಿಯಿಂದ ಆದಷ್ಟೂ ದೂರವಿರುವುದು ಕಷ್ಟವಾಗುವುದಿಲ್ಲ. ಒಂದು ವೇಳೆ ಕಾಫಿ ಕುಡಿಯದೇ ಆಗುವುದೇ ಇಲ್ಲ ಎನ್ನುವಷ್ಟು ವ್ಯಸನ ಇದ್ದರೆ ದಿನಕ್ಕೆ ಒಂದು ಅಥವಾ ಎರಡು ಚಿಕ್ಕ ಕಪ್ ಗಿಂತ ಈ ಪ್ರಮಾಣ ಹೆಚ್ಚಬಾರದು.

ಇದಕ್ಕೂ ಹೆಚ್ಚಿನ ಪ್ರಮಾಣದ ಕಾಫಿ ಆಕೆಯ ಆರೋಗ್ಯಕ್ಕೆ ಮಾರಕವಾಗಬಲ್ಲುದು. ಏಕೆಂದರೆ ಕಾಫಿಯಲ್ಲಿರುವ ಕೆಫೀನ್ ನೇರವಾಗಿ ರಕ್ತಕ್ಕೆ ಸೇರುತ್ತದೆ ಮತ್ತು ರಕ್ತದಿಂದ ಎದೆಹಾಲಿಗೆ! ಈ ಪ್ರಮಾಣ ಅತ್ಯಲ್ಪವಾಗಿದ್ದರೂ ಸರಿ, ಮಗುವಿನ ಆರೋಗ್ಯಕ್ಕೆ ಬಾಧೆ ಉಂಟು ಮಾಡಬಹುದು. ಏಕೆಂದರೆ ಕೆಫೇನ್ ನಿದ್ದೆಯನ್ನು ಓಡಿಸುವ ಗುಣ ಹೊಂದಿರುವ ರಾಸಾಯನಿಕ. ಈಗ ತಾನೇ ಹುಟ್ಟಿದ ಮಗು ದಿನದಲ್ಲಿ ಹೆಚ್ಚು ಹೊತ್ತು ಮಲಗಿಯೇ ಇರಬೇಕಾಗುತ್ತದೆ. ಹಾಗಾಗಿ ಎದೆಹಾಲಿನಲ್ಲಿರುವ ಕೆಫೀನ್ ಮಗುವಿನ ನಿದ್ದೆಗೆ ಭಂಗ ಉಂಟು ಮಾಡಬಹುದು.

2. ಟೀ

2. ಟೀ

ಕಾಫಿಯಲ್ಲಿ ಕೆಫೀನ್ ಇದ್ದರೆ ಟೀಯಲ್ಲಿ ಏನಿದೆ? ಟಿಫೀನ್! ಇದೊಂದು ಹಾಸ್ಯಚಟಾಕಿ ಮಾತ್ರ. ವಾಸ್ತವದಲ್ಲಿ, ಟೀಯಲ್ಲಿಯೂ ಕೆಫೀನ್ ಇದೆ. ಆದರೆ ಕಾಫಿಯಷ್ಟು ಹೆಚ್ಚಿಲ್ಲ. ಹಾಗೆಂದು ಹೆಚ್ಚಿನ ಪ್ರಮಾಣದ ಟೀ ಕುಡಿದರೆ ದೇಹ ಸೇರುವ ಕೆಫೀನ್ ಸಹಾ ಕಾಫಿಯ ಕೆಫೀನ್ ನಷ್ಟೇ ಮಗುವಿನ ಆರೋಗ್ಯಕ್ಕೆ ಮತ್ತು ನಿದ್ದೆಗೆ ಭಂಗ ಉಂಟು ಮಾಡಬಹುದು. ಅಷ್ಟೇ ಅಲ್ಲ, ಬಾಣಂತನದ ಅವಧಿಯಲ್ಲಿ ದೇಹಕ್ಕೆ ಹೆಚ್ಚಿನ ಕಬ್ಬಿಣದ ಅಂಶ ಬೇಕು. ಹೆರಿಗೆಯ ಸಮಯದಲ್ಲಿ ನಷ್ಟವಾಗಿರುವ ರಕ್ತವನ್ನು ತುಂಬಿಕೊಳ್ಳಲು ಈ ಕಬ್ಬಿಣದ ಅಂಶ ಬೇಕೇ ಬೇಕು.

ಈಗ ಹೆಚ್ಚಿನ ಪ್ರಮಾಣದ ಟೀ ಕುಡಿದರೆ ದೇಹ ಅಗತ್ಯ ಪ್ರಮಾಣದ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಟೀ ಸೇವನೆಯನ್ನು ಆದಷ್ಟೂ ಮಿತಿಗೊಳಿಸಬೇಕು. ಅಂತೆಯೇ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಬಸಲೆ ಸೊಪ್ಪು, ಪಾಲಕ್, ಕೆಂಪು ಮಾಂಸ ಮೊದಲಾದವು ಉತ್ತಮ ಪ್ರಮಾಣದ ಕಬ್ಬಿಣ ಹೊಂದಿವೆ. ಅಗತ್ಯ ಎನಿಸಿದರೆ ವೈದ್ಯರು ಕಬ್ಬಿಣದ ಅಂಶ ಇರುವ ಹೆಚ್ಚುವರಿ ಔಷಧಿಗಳನ್ನೂ ಸೇವಿಸಲು ಸಲಹೆ ಮಾಡಬಹುದು.

3. ಕೆಲವು ಮೂಲಿಕೆಗಳು:

3. ಕೆಲವು ಮೂಲಿಕೆಗಳು:

ಸಾಮಾನ್ಯವಾಗಿ 'ನೈಸರ್ಗಿಕ', 'ಮೂಲಿಕೆಗಳನ್ನು ಆಧರಿಸಿದ', 'ಹರ್ಬಲ್' ಮೊದಲಾದ ಹೆಸರುಗಳಿರುವ ಉತ್ಪನ್ನಗಳನ್ನು ನಾವು ಸುರಕ್ಶಿತ ಎಂದೇ ಪರಿಗಣಿಸಿಬಿಡುತ್ತೇವೆ. ವಾಸ್ತವದಲ್ಲಿ ಹೆಚ್ಚಿನ ಉತ್ಪನ್ನಗಳ ಮೇಲೆ ಈ ನೈಸರ್ಗಿಕ ಸಾಮಾಗ್ರಿಗಳ ದೊಡ್ಡ ಚಿತ್ರವಿದ್ದರೂ ನಿಜವಾಗಿ ಈ ಸಾಮಾಗ್ರಿಯ ಅಂಶ ಇರುವುದು ಶೇಖಡಾವಾರು ಒಂದೋ ಎರಡೋ ಅಷ್ಟೇ! ಹಾಗಾಗಿ, ಯಾವುದೇ ಉತ್ಪನ್ನಗಳನ್ನು ನೈಸರ್ಗಿಕ ಎಂದಾಕ್ಷಣ ಸಂಪೂರ್ಣ ಸುರಕ್ಷಿತ ಎಂದು ಪರಿಗಣಿಸಬಾರದು. ಅಲ್ಲದೇ ನಿಸರ್ಗದ ಎಲ್ಲಾ ಸಾಮಾಗ್ರಿಗಳಿಗೂ ತನ್ನದೇ ಆದ ಗುಣವಿದ್ದು ಒಂದಕ್ಕಿಂತ ಇನ್ನೊಂದರ ಗುಣ ಭಿನ್ನವೇ ಆಗಿರುತ್ತದೆ. ಹೀಗಿರುವಾಗ ಎಲ್ಲಾ ಮೂಲಿಕೆಗಳ ಗುಣ ಒಂದೇ ಎಂದು ಹೇಗೆ ಪರಿಗಣಿಸಬಹುದು? ಕೆಲವು ಮೂಲಿಕೆಗಳಿಗೆ ಎದೆಹಾಲನ್ನು ತಗ್ಗಿಸುವ ಗುಣವಿದೆ! (anti-galactogogues).

ಇದಕ್ಕೆ ಉದಾಹರಣೆ ಎಂದರೆ ಪಾರ್ಸ್ಲೆ, ಸೇಜ್ ಮತ್ತು ಪುದಿನಾ. ಇವುಗಳ ಸೇವನೆಯಿಂದ ಬಾಣಂತಿಯ ದೇಹದಲ್ಲಿ ಅಗತ್ಯ ಪ್ರಮಾಣದ ಹಾಲು ಉತ್ಪಾದನೆಯಾಗುವುದಿಲ್ಲ. ಆದರೆ ಅಲ್ಪ ಪ್ರಮಾಣದ ಸೇವನೆಯಿಂದ ಅಷ್ಟೊಂದು ಪ್ರಭಾವ ಬೀರದ ಕಾರಣ ಕೇವಲ ರುಚಿಗಾಗಿ ಕೆಲವು ಎಲೆಗಳನ್ನು ಸೇವಿಸಬಹುದೇ ಹೊರತು ಇವನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಆದರೆ ಕೆಲವು ತಾಯಂದಿರಿಗೆ ಈ ಅಲ್ಪ ಪ್ರಮಾಣವೂ ಭಾರಿಯಾಗಿ ಪರಿಣಮಿಸಬಹುದು. ಒಂದು ವೇಳೆ ಹೀಗಾದರೆ, ಬಾಣಂತನದ ಅವಧಿ ಮುಗಿಯುವವರೆಗೂ ಇವನ್ನು ಸೇವಿಸಲೇಬಾರದು.

4. ಬೆಳ್ಳುಳ್ಳಿ

4. ಬೆಳ್ಳುಳ್ಳಿ

ಬೆಳ್ಳುಳ್ಳಿ ಉತ್ತಮ ಆಹಾರವೂ ಹೌದು, ಔಷಧಿಯೂ ಹೌದು ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ, ಬೆಳ್ಳುಳ್ಳಿ ತಾಯಿಹಾಲಿನ ಉತ್ಪಾದನೆಗೆ ಯಾವುದೇ ಅಡ್ಡಿಮಾಡುವುದಿಲ್ಲ, ಬದಲಿಗೆ ಪ್ರಮಾಣವನ್ನು ಹೆಚ್ಚಿಸಲು ನೆರವು ನೀಡುತ್ತದೆ. ಆದರೆ ಬೆಳ್ಳುಳ್ಳಿಯ ವಾಸನೆ ಹೆಚ್ಚಿನವರಿಗೆ ಹಿಡಿಸುವುದಿಲ್ಲ. ಬೆಳ್ಳುಳ್ಳಿಯ ಸೇವನೆಯಿಂದ ಬಾಣಂತಿಯ ಎದೆಹಾಲಿನ ವಾಸನೆಯಲ್ಲಿಯೂ ಕೊಂಚ ಬೆಳ್ಳುಳ್ಳಿಯ ವಾಸನೆ ಇರಬಹುದು. ಈ ವಾಸನೆ ಹಾಲು ಕುಡಿಯುವ ಮಗುವಿಗೆ ಇಷ್ಟವಾಗದೇ ಹೋಗಬಹುದು.

ತನಗಿಷ್ಟವಾಗದ ರುಚಿ ಇರುವ ಹಾಲನ್ನು ಕುಡಿಯಲು ಮಗು ಇಷ್ಟಪಡದೇ ರಚ್ಚೆ ಹಿಡಿಯಬಹುದು. ಎಷ್ಟೋ ಬಾರಿ ಹಾಲಿನ ಪ್ರಮಾಣ ಉತ್ತಮವಾಗಿದ್ದರೂ ಮಗು ಕುಡಿಯದೇ ಇರಲು ಬಾಣಂತಿ ಹೆಚ್ಚಿನ ಬೆಳ್ಳುಳ್ಳಿ ಇದ್ದ ಅಹಾರ ಸೇವಿಸಿದ್ದುದು ಕಾರಣವಿರಬಹುದು. ಒಂದು ವೇಳೆ ಗರ್ಭಾವಸ್ಥೆಯಲ್ಲಿದ್ದಾಗಲೇ ಆಕೆ ನಿತ್ಯವೂ ಬೆಳ್ಳುಳ್ಳಿ ಇರುವ ಆಹಾರವನ್ನೇ ಸೇವಿಸಿದ್ದರೆ ಮಗುವಿಗೂ ಈ ಆಹಾರ ಅಭ್ಯಾಸವಾಗಿದ್ದು ಬಾಣಂತನದ ಬಳಿಕ ಎದೆಹಾಲು ಕುಡಿಯಲು ಹೆಚ್ಚು ತಕರಾರು ತೆಗೆಯದೇ ಇರಬಹುದು. ಆದರೂ, ಬೆಳ್ಳುಳ್ಳಿಯನ್ನು ಆದಷ್ಟೂ ಮಿತಿಯಲ್ಲಿಯೇ ತಿಂದರೆ ಒಳ್ಳೆಯದು.

5. ಆಮ್ಲೀಯ ಆಹಾರಗಳು.

5. ಆಮ್ಲೀಯ ಆಹಾರಗಳು.

ಈ ಮಾಹಿತಿಯನ್ನು ಖಚಿತಪಡಿಸಲು ದೃಢ ಆಧಾರವಿನ್ನೂ ಬರಬೇಕಾಗಿದ್ದರೂ ದಾದಿಯರು ತಮ್ಮ ಅನುಭವದ ಮೂಲಕ ಆಮ್ಲೀಯ ಆಹಾರಗಳು ಬಾಣಂತಿಗೆ ತಕ್ಕುದಲ್ಲ ಎಂದು ಹೇಳುತ್ತಾರೆ. ಆಮ್ಲೀಯ ಪ್ರಮಾಣ ಇರುವ ಟೊಮಾಟೋ, ಕಿತ್ತಳೆ, ಲಿಂಬೆ ಮೊದಲಾದವುಗಳನ್ನು ಬಾಣಂತಿ ಸೇವಿಸಿದಾಗ ಮಗುವಿನ ವರ್ತನೆ ಬದಲಾಗಬಹುದು. ಒಂದು ವೇಳೆ ಬಾಣಂತಿ ಮಗು ಹಾಲು ಕುಡಿಯದೇ ರಚ್ಚೆ ಹಿಡಿಯುತ್ತಿರುವ ಕಾರಣವನ್ನು ಹುಡುಕುವುದಾದರೆ ತನ್ನ ಆಹಾರದಲ್ಲಿ ಈ ಆಮ್ಲೀಯ ಪದಾರ್ಥಗಳು ಹೆಚ್ಚಿನ ಮಟ್ಟದಲ್ಲಿವೆಯೇ ಎಂದು ಪರೀಕ್ಷಿಸಿ, ಇದ್ದರೆ ಆದಷ್ಟೂ ಇವುಗಳ ಪ್ರಮಾಣವನ್ನು ತಗ್ಗಿಸಬೇಕು.

6. ವಿರೇಚಕ ಗುಣ ಇರುವ ಅಹಾರಗಳು / ವಿರೇಚಕಗಳು

6. ವಿರೇಚಕ ಗುಣ ಇರುವ ಅಹಾರಗಳು / ವಿರೇಚಕಗಳು

ವಿರೇಚಕ ಗುಣ ಆಹಾರದಿಂದ ಕೇವಲ ಬಾಣಂತಿಗೆ ಮಾತ್ರವಲ್ಲ, ಆಕೆಯ ಎದೆಹಾಲನ್ನು ಕುಡಿದ ಮಗುವಿಗೂ ಕಾಣಬರಬಹುದು. ಒಂದು ವೇಳೆ ಮಗು ಅತಿ ಹೆಚ್ಚೇ ಎನಿಸುವಷ್ಟು ಬೇಧಿ ಮಾಡಿಕೊಳ್ಳುತ್ತಿದ್ದರೆ ಇದು ಕುಡಿಯುವ ತಾಯಿಯ ಹಾಲಿನಲ್ಲಿಯೂ ವಿರೇಚಕ ಗುಣ ಇರಬಹುದು. ಹೀಗಿದ್ದಾಗ ಬಾಣಂತಿ ತಾನು ತಿನ್ನುವ ಆಹಾರದಲ್ಲಿ ವಿರೇಚಕ ಗುಣ ಇದೆಯೇ ಅಥವಾ ವಿರೇಚಕ ಔಷಧಿಯನ್ನು ಸೇವಿಸುತ್ತಿದ್ದೇನೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಪ್ರೂನ್ಸ್ ಹಣ್ಣು, ಅಂಜೂರ, ಚೆರ್‍ರಿ ಹಣ್ಣುಗಳು, ಅತಿ ಹೆಚ್ಚಿನ ನಾರಿನಂಶ ಇರುವ ಆಹಾರಗಳು ಮೊದಲಾದವು ಮಲಬದ್ದತೆಯನ್ನು ಕಡಿಮೆ ಮಾಡುವ ಜೊತೆಗೇ ಮಲವನ್ನು ಅತಿ ನೀರಾಗಿಸಿ ದಿನದಲ್ಲಿ ಹಲವಾರು ಬಾರಿ ವಿಸರ್ಜನೆಯಾಗುವಂತೆ ಮಾಡುತ್ತವೆ. ಮಗುವಿಗೂ ಈ ತೊಂದರೆ ಕಾಣಿಸಿಕೊಂಡರೆ ಬಾಣಂತಿ ತಕ್ಷಣವೇ ಈ ಅಹಾರಗಳ ಸೇವನೆಯನ್ನು ನಿಲ್ಲಿಸಬೇಕು.

7. ಪಾದರಸದ ಅಂಶ ಇರುವ ಮೀನು

7. ಪಾದರಸದ ಅಂಶ ಇರುವ ಮೀನು

ಗರ್ಭಿಣಿಯರು ಮಾಂಸಾಹಾರ ಸೇವಿಸಬಹುದೇ ಎಂಬ ಪ್ರಶ್ನೆ ಎದುರಾದಾಗ ವೈದ್ಯರು ಇದಕ್ಕೆ ಹಲವಾರು ಕಟ್ಟುಪಾಡುಗಳನ್ನು ವಿಧಿಸುತ್ತಾರೆ. ವಿಶೇಷವಾಗಿ ಮೀನು ಮತ್ತು ಸಾಗರ ಉತ್ಪನ್ನಗಳನ್ನು ಸೇವಿಸದಂತೆ ವೈದ್ಯರು ಸಲಹೆ ಮಾಡುತ್ತಾರೆ. ಗರ್ಭಾವಸ್ಥೆಯಲ್ಲಿ ತಡೆಹಿಡಿದಿದ್ದ ಜಿಹ್ವಾ ಚಾಪಲ್ಯವನ್ನು ಹೆರಿಗೆಯ ಬಳಿಕ ಬಾಣಂತನದಲ್ಲಿ ಆಕೆ ತೀರಿಸಿಕೊಳ್ಳಲು ಮೀನಿನ ಪದಾರ್ಥವನ್ನು ಆಕೆ ಸೇವಿಸಿದರೆ ಆಕೆಯ ತಾಯಿಹಾಲಿನಲ್ಲಿ ಪಾದರಸದ ಅಂಶ ಕಂಡುಬರಬಹುದು. ವಿಶೇಷವಾಗಿ ಸಾಗರದ ಉತ್ಪನ್ನಗಳಾದ ಕತ್ತಿ ಮೀನು (swordfish), ಶಾರ್ಕ್, ಬಂಗಡೆ, ಕಡಲ ಬ್ಯಾಸ್ ಮೀನು (sea bass) ಮತ್ತು ದೊಡ್ಡ ಸಾಗರ ಮೀನುಗಳಾದ tile fish ಮೊದಲಾದವುಗಳಲ್ಲಿ ಪಾದರಸದ ಅಂಶ ಹೆಚ್ಚು ಇರುತ್ತದೆ. ಪಾದರಸ ನೇರವಾಗಿ ಬಾಣಂತಿಯ ರಕ್ತದಿಂದ ತಾಯಿಹಾಲಿಗೆ ಮಿಶ್ರಣಗೊಂಡು ಇದನ್ನು ಕುಡಿಯುವ ಮಗುವಿನ ನರವ್ಯವಸ್ಥೆಯನ್ನು ಬಾಧಿಸಬಹುದು.

8. ಕೃತಕ ಸಿಹಿಕಾರಕಗಳು

8. ಕೃತಕ ಸಿಹಿಕಾರಕಗಳು

ಸಕ್ಕರೆ ಬಿಳಿವಿಷ ಎಂದು ಈಗಾಗಲೇ ಘೋಷಿಸಿಯಾಗಿದೆ. ಈ ಮೂಲಕ ಬಿಳಿ ಸಕ್ಕರೆ ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ ತಕ್ಕುದಲ್ಲ. ಹಾಗಾಗಿ ಸಕ್ಕರೆಯ ಪ್ರಮಾಣವನ್ನು ಆದಷ್ಟೂ ತಗ್ಗಿಸುವುದೇ ಜಾಣತನ. ಅದರಲ್ಲೂ ಬಾಣಂತಿಯರು ಸಕ್ಕರೆಯನ್ನು ಆದಷ್ಟೂ ಮಿತಗೊಳಿಸಬೇಕು. ಸಕ್ಕರೆ ಬೇಡ ಎಂದಾಕ್ಷಣ ಇದರ ಬದಲಿಗೆ ಬೇರೆ ಏನನ್ನು ಬಳಸುವುದು ಎಂಬ ಪ್ರಶ್ನೆಗೆ ಸಿಗುವ ಸುಲಭ ಉತ್ತರ ಕೃತಕ ಸಿಹಿಕಾರಕಗಳು (artificial sweetener).

ಸುಂದರ ಪೊಟ್ಟಣಗಳಲ್ಲಿ ಸಿಗುವ ಸ್ಲೆಂಡಾ ಅಥವಾ ಸ್ಟೇವಿಯಾ ಮೊದಲಾದವು ಸಕ್ಕರೆಗೆ ಸುರಕ್ಷಿತ ಪರ್ಯಾಯ ಎಂದು ದೊಡ್ಡದಾಗಿ ಜಾಹೀರಾತಿನ ಮೂಲಕ ಘೋಷಿಸಿದರೂ, ಈ ಸಕ್ಕರೆಗಳೂ ಅಪಾಯದಿಂದ ಹೊರತಲ್ಲ. ಬದಲಿಗೆ ನೈಸರ್ಗಿಕ ಸಕ್ಕರೆಗಳೇ ಎಲ್ಲರಿಗೂ ಸುರಕ್ಷಿತ. ಉದಾಹರಣೆಗೆ ಕಪ್ಪು ಬೆಲ್ಲ (ಕೆಂಪು ಕಬ್ಬಿನಿಂದ ತಯಾರಿಸಿದ ಸಾವಯವ ಬೆಲ್ಲ) ಅಥವಾ ಕೊಬ್ಬರಿಯಿಂದ ತಯಾರಿಸಿದ ಸಕ್ಕರೆ ಬಾಣಂತಿಯರಿಗೆ ಸೂಕ್ತವಾಗಿವೆ. ಇದೇ ಪ್ರಕಾರ ಸುಗರ್ ಫ್ರೀ ಅಥವಾ ಡಯಟ್ ಎಂಬ ಚೆಂದದ ಹೆಸರಿರುವ ಉತ್ಪನ್ನಗಳೂ ಬೇಡ. ಏಕೆಂದರೆ ಇದರಲ್ಲಿ ಸಕ್ಕರೆಯ ಬದಲಿಗೆ ಇದಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಿರುತ್ತಾರೆ. aspertame ಎಂಬ ರಾಸಾಯನಿಕ ಇದಕ್ಕೊಂದು ಅಪ್ಪಟ ಉದಾಹರಣೆ.

9. ಸಂಸ್ಕರಿಸಿದ ಆಹಾರಗಳು

9. ಸಂಸ್ಕರಿಸಿದ ಆಹಾರಗಳು

ಇಂದು ಸಿದ್ಧ ರೂಪದಲ್ಲಿ ಸಿಗುವ ಯಾವುದೇ ಆಹಾರ ಸಂಸ್ಕರಿಸದೇ ಸಿಗಲು ಸಾಧ್ಯವೇ ಇಲ್ಲ. ಏಕೆಂದರೆ ಮೊದಲಾಗಿ ತಾಜಾ ಆಹಾರವನ್ನು ಹೆಚ್ಚು ಕಾಲ ಸಂಗ್ರಹಿಸಿಡಲು ಸಾಧ್ಯವಿಲ್ಲ. ಸಂಸ್ಕರಿಸಬೇಕಾದರೆ ಇದಕ್ಕೆ ಸಂರಕ್ಷಕಗಳನ್ನು ಹಾಕುವುದು ಅನಿವಾರ್ಯ. ಸಂರಕ್ಷಕಗಳು ಸಹಾ ರಾಸಾಯನಿಕಗಳೇ ಹೌದು. ಇವು ಆಹಾರವನ್ನು ಹಾಳಾಗದಂತೆ ಕಾಪಾಡುವುದು ನಿಜವಾದರೂ ಇವುಗಳ ಸೇವನೆ ಆರೋಗ್ಯಕರವಂತೂ ಅಲ್ಲ! ವಿಶೇಷವಾಗಿ ಬಾಣಂತಿಯ ಮತ್ತು ಮಗುವಿನ ಆರೋಗ್ಯವನ್ನು ಪರಿಗಣಿಸಿದಾಗ ಈ ಸಂರಕ್ಷಕಗಳು, ಕೃತಕ ರುಚಿಕಾರಕಗಳು ಹಾಗೂ ಕೃತಕ ಬಣ್ಣಗಳು ಸರ್ವಥಾ ಸುರಕ್ಷಿತವಲ್ಲ! ಇವರಿಗೆ ಮಾತ್ರವಲ್ಲ, ಉಳಿದವರೂ ಇವುಗಳನ್ನು ವರ್ಜಿಸಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು.

10. ಮದ್ಯ

10. ಮದ್ಯ

ಮೊತ್ತ ಮೊದಲಾಗಿ ಮದ್ಯವನ್ನು ಔಷಧಿ ಎಂದೇ ಪರಿಗಣಿಸಲಾಗುತ್ತಿತ್ತು. ಒಂದು ಮಿತಿಯಲ್ಲಿ ಸೇವಿಸುವ ಮದ್ಯ ವಯಸ್ಕರಿಗೆ ಹಾನಿಕರವಲ್ಲ ಎಂದು ವೈದ್ಯವಿಜ್ಞಾನವೂ ಹೇಳುತ್ತದೆ. ಈ ವಾಕ್ಯವನ್ನು ಕೊಂಚ ಮುಂದುವರೆಸಿ ಬಾಣಂತಿಯರಿಗೂ ಸೂಕ್ತ ಎಂದು ಹೇಳಬಹುದೇ? ಈ ಬಗ್ಗೆ ನಡೆಸಿದ ಸಂಶೋಧನೆಗಳ ಪ್ರಕಾರ, ಮದ್ಯ ಬಾಣಂತಿಯರಿಗೆ ತಕ್ಕುದಲ್ಲ. ಆದರೆ ಮದ್ಯವ್ಯಸನಿಗಳಾಗಿದ್ದು ಮದ್ಯವಿಲ್ಲದೇ ಆಗುವುದೇ ಎಲ್ಲ ಎಂಬ ಸ್ಥಿತಿ ಇರುವ ಮಹಿಳೆಯರು ಹಾಲೂಡಿಸುವುದಕ್ಕೂ ಕನಿಷ್ಟ ಎರಡು ಘಂಟೆಯ ಹಿಂದಿನವರೆಗೂ ಒಂದು ಪ್ರಮಾಣದ ಮದ್ಯವನ್ನು ಸೇವಿಸಬಹುದು. ಅಂದರೆ ಮದ್ಯ ಸೇವಿಸಿದ ಎರಡು ಘಂಟೆಗಳವರೆಗೂ ಮಗುವಿಗೆ ಹಾಲೂಡಿಸಬಾರದು. ಒಂದು ಪ್ರಮಾಣ ಎಂದರೆ ಎಷ್ಟು?

ಐದು ಶೇಖಡಾ ಮದ್ಯ ಇರುವ ಬಿಯರ್ - 0.35 ಲೀಟರ್

ಏಳು ಶೇಖಡಾ ಮದ್ಯ ಇರುವ ಮಾಲ್ಟ್ ಮದ್ಯ -0.23 ಲೀಟರ್

ಹನ್ನೆರಡು ಶೇಖಡಾ ಮದ್ಯ ಇರುವ ವೈನ್ -0.14 ಲೀಟರ್

ನಲವತ್ತು ಶೇಖಡಾ ಇರುವ ಪ್ರಬಲ ಮದ್ಯ - 0.044 ಲೀಟರ್

ಇವು ಹಲವಾರು ಸಂಶೋಧನೆಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಓರ್ವ ಬಾಣಂತಿ ಸೇವಿಸಬಹುದಾದ ದಿನದ ಗರಿಷ್ಟ ಮದ್ಯದ ಪ್ರಮಾಣ.

ಇವೆಲ್ಲಾ ಕಟ್ಟುಪಾಡುಗಳನ್ನು ಅನುಸರಿಸಿದ ಬಳಿಕ ಬಾಣಂತಿ ಸೇವಿಸಬೇಕಾದುದೇನು? ಈ ಪ್ರಶ್ನೆಗೆ ಆಕೆಯ ಆರೋಗ್ಯವನ್ನು ಪರಿಗಣಿಸಿ ಪ್ರತಿ ಬಾಣಂತಿಗೂ ಪ್ರತ್ಯೇಕವಾಗಿಯೇ ವೈದ್ಯರು ಆಹಾರವನ್ನು ಸೂಚಿಸಬೇಕಾಗುತ್ತದೆ. ಯಾವುದೇ ಆಹಾರವನ್ನೇ ಅತಿಯಾಗಿ ಸೇವಿಸುವುದೂ ಕಷ್ಟ, ಯಾವುದನ್ನು ಪೂರ್ಣವಾಗಿ ಬಿಡುವುದೂ ಕಷ್ಟ. ಹಾಗಾಗಿ, ಬಾಣಂತಿಯರಿಗೆ ಯಾವ ಆಹಾರಗಳು ಮಾತ್ರವೇ ಸೂಕ್ತ ಎಂಬುದನ್ನು ಆಕೆಯ ಆರೋಗ್ಯದ ಮಾಹಿತಿಯನ್ನು ಹೊಂದಿರುವ ವೈದ್ಯರು, ದಾದಿಯರು ಮತ್ತು ತಾಯಂದಿರು ಮಾತ್ರವೇ ಖಚಿತವಾಗಿ ತಿಳಿಸಬಲ್ಲರು. ಹಾಲೂಡಿಸುವ ಬಾಣಂತಿಯರಿಗೆ ಉಳಿದವರಿಗಿಂತಲೂ ನಿತ್ಯವೂ ನಾನೂರೈವತ್ತರಿಂದ ಐನೂರರಷ್ಟು ಹೆಚ್ಚುವರಿ ಕ್ಯಾಲೋರಿಗಳ ಅಗತ್ಯವಿರುತ್ತದೆ. ಹಾಗಾಗಿ ಈ ಅವಶ್ಯಕತೆಯನ್ನು ಪೂರೈಸುವಷ್ಟು ಪ್ರಮಾಣದ ಪೌಷ್ಟಿಕ ಆಹಾರವನ್ನು ಆಕೆ ಸೇವಿಸಲೇಬೇಕು. ಇದಕ್ಕೂ ಕಡಿಮೆಯಾದರೆ ಹಾಲಿನ ಪ್ರಮಾಣದಲ್ಲಿಯೂ ಕುಸಿತ ಕಂಡುಬರುತ್ತದೆ ಹಾಗೂ ಬಳಲಿಕೆಯೂ ಎದುರಾಗುತ್ತದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Foods To Avoid While Breastfeeding

Here are information about what food breastfeeding mother must avoid avoid, Read on
Story first published: Saturday, March 7, 2020, 16:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X