For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಮಲಬದ್ಧತೆ ಸಮಸ್ಯೆಯೇ? ನೀವು ಏನು ಮಾಡಬೇಕು, ಏನು ಮಾಡಬಾರದು ನೋಡೋಣ

|

ಮಕ್ಕಳನ್ನ ಬೆಳೆಸೋ ರೀತಿಯಂತೂ ಈಗ ಮೊದಲಿನ ಹಾಗಲ್ಲ. ಮಗುವೆಂದರೆ "ಪುಟ್ಟ ಶಿಶುವಿನ ರೂಪದಲ್ಲಿರೋ ವಯಸ್ಕ ವ್ಯಕ್ತಿ" ಅನ್ನೋ ರೀತಿಯಲ್ಲಿ ಈಗಿನ ಮಕ್ಕಳನ್ನ ಬೆಳೆಸಲಾಗತ್ತೆ. ಉದಾಹರಣೆಗೆ ಮಕ್ಕಳಿಗೆ ಸೈಕಲ್ ತರಬೇತಿ ಕೊಡೋ ರೀತೀನೇ ನೋಡಿ... ಪುಟ್ಟ ಮಕ್ಕಳಿಗೆ ಆರಂಭದಲ್ಲಿ ಎರಡೂ ಬದಿಗಳಲ್ಲೂ ಚಿಕ್ಕ ಚಕ್ರಗಳಿರೋ (ಸಮತೋಲನಕ್ಕಾಗಿ) ರೀತಿಯ ಪುಟ್ಟ ಸೈಕಲ್ ಗಳನ್ನ ಕೊಡಿಸಲಾಗುತ್ತೆ. ನಂತರ ಕ್ರಮೇಣ ಅವರ ವಯಸ್ಸಿಗೆ ತಕ್ಕಂತೆ ಅವರಿಗೆ ಕೊಡಿಸೋ ಸೈಕಲ್ ನ ಗಾತ್ರದಲ್ಲೂ, ವಿನ್ಯಾಸದಲ್ಲೂ ಬದಲಾವಣೆಯಾಗುತ್ತಾ ಹೋಗುತ್ತೆ. ಒಟ್ನಲ್ಲಿ, ಮಕ್ಕಳ ಆಯಾ ವಯೋಮಾನಕ್ಕೆ ತಕ್ಕ ಹಾಗೆ ಅವರ ಜೀವನಪಾಠಗಳನ್ನೂ ಕ್ರಮೇಣವಾಗಿ ಸಂಕೀರ್ಣಗೊಳಿಸಲಾಗತ್ತೆ. ಇದು ಎಲ್ಲೀವರೆಗೆ ಅಂತಂದ್ರೆ ಮಕ್ಕಳಿಗೆ ನೀಡೋವಂತಹ ಶೌಚಾಲಯ ತರಬೇತಿನೂ ಇದಕ್ಕೆ ಹೊರತಾಗಿಲ್ಲ!!

ಪುಟ್ಟಮಕ್ಕಳು ಮಲಮೂತ್ರ ವಿಸರ್ಜನೆಗೆ ದೊಡ್ಡವರು ಬಳಸೋವಂತಹ ಕಮೋಡ್ ಅನ್ನ ಬಳಸೋದಕ್ಕೆ ಆಗೋಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಚಿಕ್ಕಮಕ್ಕಳ ಪಾಲಿಗೆ ಎತ್ತರವೇ ಆಗಿರೋವಂತಹ ಕಮೋಡ್ ನ ಮೇಲೆ ಹತ್ತಿ ಕೂರೋಕೂ ಅವರಿಗೆ ಆಗಲ್ಲ. ಹಾಗೊಂದು ವೇಳೆ ಹತ್ತಿ ಕೂತ್ರೂನೂ ಜಾರಿಬಿದ್ದು ಏನಾದರೊಂದು ಅನಾಹುತ ಮಾಡ್ಕೊಳ್ಳೋ ಸಾಧ್ಯತೇನೇ ಜಾಸ್ತಿ. ಅದಕ್ಕಂತಾನೇ ಮಕ್ಳಿಗೆ ಕಮೋಡ್ ಥರಾನೇ ಇರೋವಂತಹಾ "ಪಾಟ್ಟಿ" ಅನ್ನೋ ಸಾಧನವನ್ನ ಬಳಸುತ್ತಾರೆ. ಇದನ್ನ "ಮಕ್ಕಳ ಮಲಮೂತ್ರ ವಿಸರ್ಜನಾ ಕಮೋಡ್" ಅಂತಾನೇ ಹೇಳ್ಬೋದು.

ಚಿಕ್ಕಮಕ್ಕಳು ಪಾಟ್ಟಿಯಲ್ಲಿ ಮೂತ್ರವಿಸರ್ಜನೆಯನ್ನೇನೂ ಖುಶಿಖುಶಿಯಾಗಿಯೇ ಮಾಡಿ ಮುಗಿಸ್ತಾರೆ. ಆದರೆ ಮಲವಿಸರ್ಜನೆಯ ವಿಚಾರ ಬಂದಾಗಲೇ ಕಿರಿಕಿರಿ ಶುರುವಿಟ್ಟುಕೊಳ್ಳೋದು. ಕೆಲವು ಮಕ್ಕಳಿಗಂತೂ ಪಾಟ್ಟಿಯಲ್ಲಿ ಮಲವಿಸರ್ಜನೆ ಮಾಡೋದಂದ್ರೆ ಆಗೋದೇ ಇಲ್ಲ. ಅವರಿಗೆ ಅದೆಷ್ಟು ಕಿರಿಕಿರಿ ಅಂದ್ರೆ ಮಲವನ್ನ ಹಾಗೇ ಕಟ್ಟಿಕೊಂಡು ಬಿಡ್ತಾರೆ. ಮಕ್ಕಳು ಇದೇ ಅಭ್ಯಾಸಾನಾ ಮುಂದುವರೆಸಿದ್ರೆ ಅದು ಅವರಲ್ಲಿ ಕ್ರಮೇಣವಾಗಿ ತೀವ್ರಸ್ವರೂಪದ ಮಲಬದ್ಧತೆಗೆ ದಾರಿ ಮಾಡಿಕೊಡುತ್ತೆ.

ಮಲಬದ್ಧತೆಯ ಕಾರಣದಿಂದಾಗಿ ಮಕ್ಕಳ ಮಲ ಬಿರುಸಾಗತೊಡಗುತ್ತೆ. ಇದನ್ನ ಮಕ್ಕಳು ಕಷ್ಟಪಟ್ಟು ಹೊರಹಾಕುವ ಪ್ರಯತ್ನದಲ್ಲಿ ಅವರ ಗುದದ್ವಾರದಲ್ಲಿ ಹೆಮೊರಾಯ್ಡ್ ಗಳು ಅಥವಾ ಸಣ್ಣ ಸಣ್ಣ ಬಿರುಕುಗಳಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮಗುವು ಮಲವಿಸರ್ಜನೆಗೆ ಮುಂದಾದಾಗ ಉಂಟಾಗುವ ಯಮಯಾತನೆಗೆ ಹೆದರಿ ಮಗು ಮಲವಿಸರ್ಜನೆ ಮಾಡಲೇ ಭಯಬೀಳತೊಡಗುತ್ತೆ. ಇದರಿಂದಾಗಿ ಮಲವಿಸರ್ಜನೆಯ ಪ್ರಕ್ರಿಯೆ ಇನ್ನಷ್ಟು ಜಟಿಲವಾಗತ್ತೆ.

ನಿಮ್ ಮನೇದೂ ಇದೇ ಕಥೇನಾ ?! ಅಯ್ಯೋ! ನಾವು ಹೀಗೆಲ್ಲ ಹೇಳಿದೆವು ಅಂತಾ ನೀವೇನೂ ತುಂಬಾ ಗಾಬರಿಯಾಗೋದು ಬೇಡ. "ಕಷ್ಟ ಆಗತ್ತೆ" ಅನ್ನೋ ಒಂದೇ ಒಂದು ಕಾರಣಕ್ಕೋಸ್ಕರ ಮಕ್ಕಳು ಮಲವಿಸರ್ಜನೆ ಮಾಡದೇ ಇರೋವಂತಹ ಪ್ರಕರಣಗಳು ತುಂಬಾ ಕಮ್ಮೀನೇ. ಇದುವರೆಗೂ ಆ ಮಕ್ಕಳು ಮನೆತುಂಬಾ ಓಡಾಡಿಕೊಂಡು ಡಯಾಪರ್ ನಲ್ಲೇ ಮಲವಿಸರ್ಜನೆ ಮಾಡ್ತಾ ಇದ್ದಿದ್ರಿಂದ, ಈಗ ಆ ಪಾಟ್ಟಿಯಲ್ಲಿ ಮಲವಿಸರ್ಜನೆ ಮಾಡೋದೂಂದ್ರೆ ಅವರಿಗೆ ಇರುಸುಮುರುಸಾಗುತ್ತೆ ಅಷ್ಟೇ ಅಥವಾ ಈಗ ಅವ್ರು ಸ್ವಲ್ಪ ದೊಡ್ಡವರಾಗಿರೋದ್ರಿಂದ, ಮೊದಲಿನ ಹಾಗೆ ಡಯಾಪರ್ ಇಲ್ಲದೇ ಮಲವಿಸರ್ಜನೆ ಮಾಡೋದೂ ಅವರಿಗೆ ಕಿರಿಕಿರಿ ಆಗ್ತಿರ್ಬೋದು. ಕಾರಣ ಅದೇನೇ ಇರಲೀ, ಈ ವಿಚಾರದಲ್ಲಿ ನೀವು ಏನನ್ನ ಮಾಡ್ಬೇಕು ಏನನ್ನ ಮಾಡ್ಬಾರ್ದೂ ಅನ್ನೋದರ ಬಗ್ಗೆ ನಾವಿಲ್ಲಿ ತಿಳಿಸಿದ್ದೀವಿ. ಇದನ್ನ ನೀವು ಅಳವಡಿಸಿಕೊಂಡ್ರೆ ಈ ಸಮಸ್ಯೆಯಿಂದ ನೀವು ಪಾರಾಗ್ಬೋದು ನೋಡಿ....

ಮೊದಲು ನೀವು ಏನು ಮಾಡ್ಬೇಕು ಅನ್ನೋದರ ಬಗ್ಗೆ ಗಮನ ಹರಿಸೋಣ:

ಮೊದಲು ನೀವು ಏನು ಮಾಡ್ಬೇಕು ಅನ್ನೋದರ ಬಗ್ಗೆ ಗಮನ ಹರಿಸೋಣ:

ದ್ರವ ಪದಾರ್ಥಗಳನ್ನ ಧಾರಾಳವಾಗಿ ಕುಡಿಯುವಂತೆ ನಿಮ್ಮ ಮಗುವನ್ನ ಉತ್ತೇಜಿಸಿ. ನೀರು ಅಥವಾ ನೀರಿನ ಜೊತೆ ಹಣ್ಣಿನ ಜ್ಯೂಸನ್ನ ಮಗು ಕುಡೀಲಿ. ಕೆಲ ಮಕ್ಕಳ ವಿಷಯದಲ್ಲಿ ಹಾಲು ಮಲಬದ್ಧತೆಗೆ ಕಾರಣವಾಗೋದು ಇದೆ.

ನಿಮ್ಮ ಮಗು ಅತ್ತಿಂದಿತ್ತ ಓಡಾಡಿಕೊಂಡಿರಲಿ. ವ್ಯಾಯಾಮ ಜೀರ್ಣಕ್ರಿಯೇನಾ ಉತ್ತೇಜಿಸುತ್ತೆ ಮತ್ತೆ ಹಾಗೇನೇ ಮಲಬದ್ಧತೇನಾ ತಡೆಗಟ್ಟೋಕೂ ನೆರವಾಗುತ್ತೆ.

ಮಕ್ಕಳಿಗೆ ನಾರಿನಂಶ ಸಮೃದ್ಧವಾಗಿರೋ ಆಹಾರಪದಾರ್ಥಗಳನ್ನ ತಿನ್ನಿಸಿ. ನಾರಿನಂಶ ಭರಪೂರವಾಗಿರೋವಂತಹ ಮತ್ತು ಬಹುಧಾನ್ಯಗಳಂತಹ ಆಹಾರಪದಾರ್ಥಗಳನ್ನ ಮಕ್ಳು ಸೇವಿಸಿದ್ರೆ ಜೀರ್ಣಕ್ರಿಯೆ ಚೆನ್ನಾಗಿ ನಡೆದು ಮಲವಿಸರ್ಜನೆ ಅವರಿಗೆ ಕಷ್ಟ ಅಂತ ಅನಿಸೋದೇ ಇಲ್ಲ. ಆದ ಕಾರಣ, ನಿಮ್ಮ ಮಕ್ಕಳು ನಾರಿನಂಶ ಹೇರಳವಾಗಿರೋ ಹಣ್ಣುಗಳನ್ನ (ಸೇಬುಹಣ್ಣು ಮತ್ತು ಪಿಯರ್ ಹಣ್ಣುಗಳು ಭಾಳಾ ಒಳ್ಳೆಯವು), ತರಕಾರಿಗಳನ್ನ (ವಿಶೇಷವಾಗಿ ಹಸಿತರಕಾರಿಗಳನ್ನ) ಮತ್ತು ಬಹುಧಾನ್ಯ ಪದಾರ್ಥಗಳನ್ನ (ಓಟ್ಸ್, ಸಿರಿಧಾನ್ಯ, ಹಾಗೂ ಬಾರ್ಲಿ) ಇಷ್ಟಪಟ್ಟು ತಿನ್ನೋ ಹಾಗೆ ನೋಡ್ಕೊಳ್ಳಿ.

ಸಣ್ಣಪುಟ್ಟ ಆಸೆ, ಆಮಿಷ ತೋರಿಸ್ಲೇ ಬೇಕಾಗತ್ತೆ ಕಣ್ರೀ...

ಸಣ್ಣಪುಟ್ಟ ಆಸೆ, ಆಮಿಷ ತೋರಿಸ್ಲೇ ಬೇಕಾಗತ್ತೆ ಕಣ್ರೀ...

ಮಕ್ಳ ವಿಚಾರದಲ್ಲಿ ನಿಮ್ಮ ಕೆಲ್ಸ ಸಲೀಸಾಗಿ ಆಗ್ಬೇಕೂಂದ್ರೆ ಅವರಿಗೇನಾದ್ರೂ ಸಣ್ಣಪುಟ್ಟ ಆಸೆ, ಆಮಿಷ ತೋರಿಸ್ಲೇ ಬೇಕಾಗತ್ತೆ ಕಣ್ರೀ...

"ಪಾಟ್ಟಿಯಲ್ಲೇ ನೀನು ಕಕ್ಕ ಮಾಡೋದೇ ಆದ್ರೆ ನಾನು ನಿನ್ನುನ್ನ ಹೊರ್ಗಡೆ ಸುತ್ತಾಡೋಕೆ ಕರ್ಕೊಂಡು ಹೋಗ್ತೀನೀ" ಅಂತಾನೋ ಇಲ್ಲ "ನಿನಗೆ ಇಷ್ಟವಾದ ಚಾಕಲೇಟ್ ಕೊಡಿಸ್ತೀನಿ" ಅಂತಾನೋ ಇಲ್ಲ "ಬಣ್ಣಬಣ್ಣದ ಸ್ಟಿಕ್ಕರ್ ಗಳನ್ನ ಕೊಡಿಸ್ತೀನಿ" ಅಂತಾನೋ ನಿಮ್ಮ ಮಗುವಿಗೆ ಸ್ವಲ್ಪ ಮಸ್ಕಾ ಹೊಡೀರಿ! ಮಕ್ಕಳಿಗೆ ಇಂಥಾ ಸಣ್ಣಪುಟ್ಟ ಆಸೆಗಳನ್ನ ತೋರಿಸಿ ಅವುಗಳನ್ನ ನೆರವೇರಿಸಿದ್ರೆ ನೀವು ಹೇಳಿದ ಮಾತನ್ನ ಅವ್ರು ಕೇಳೇ ಕೇಳ್ತಾರೆ ನೋಡಿ.... ನೀವು ಕೊಡಬೇಕೂಂತಾ ಮುಂದಾಗೋ ಬಳುವಳಿ ಅದ್ಯಾವುದೇ ಆಗಿರ್ಲೀ, ನಿಮ್ಮ ಮಗು ನೀವು ಬಯಸಿದ "ಆ" ಕೆಲಸವನ್ನ ಪೂರೈಸಿದ ಕೂಡಲೇ ಸಿಕ್ಕಾಪಟ್ಟೆ ಅವನನ್ನ/ಅವಳನ್ನ ಹೊಗಳೋದನ್ನ ಮಾತ್ರ ಮರೀಬೇಡಿ!! ಮಗುವಿನ ಅಜ್ಜ, ಅಜ್ಜೀನೂ ಕರೀರಿ, ಅಮ್ಮ ಅಪ್ಪನನ್ನೂ ಕರೆಯಿರಿ. ಅವನು/ಅವಳು ಮಾಡ್ತಾ ಇರೋ ಘನಕಾರ್ಯಾನಾ ಅವರೆಲ್ಲ ನೋಡಿ ಭೇಷ್, ಭೇಷ್ ಅನ್ನಬೇಕು, ಆವಾಗ್ಲೇ ಮಗೂಗೆ ಎಲ್ಲಿಲ್ಲದ ಆನಂದ!!! ನಾವು ಹಾಗೆ ಮಾಡಿದಾಗ ಬಹಳ ಉತ್ಸಾಹದಿಂದ ನಿಮ್ಮ ಮಗು ಆ ಕೆಲಸಾನಾ ಪುನ: ಪುನ: ಮಾಡೋಕೆ ಹಿಂಜರಿಯೋಲ್ಲ!!!!

ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಿರಿ

ನಿಮ್ಮ ಮಗುವಿಗೆ ಮಲಬದ್ಧತೆ ಉಂಟಾಗಿದ್ದರೆ, ಮಗುವಿನ ಗುದದ್ವಾರದ ಸುತ್ತಲೂ ವ್ಯಾಸಲೀನ್ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿರಿ. ಹೀಗೆ ಮಾಡಿದಾಗ ಗುದದ್ವಾರದ ಸುತ್ತಲಿನ ಭಾಗ ಮಲವು ಸುಲಭವಾಗಿ ಜಾರುವುದಕ್ಕೆ ಅನುವು ಮಾಡುತ್ತದೆ. ಜೊತೆಗೆ ಅದನ್ನ ಲೇಪಿಸುವಾಗ ಗುದದ್ವಾರದ ಸುತ್ತ ನವೆಯಾದಂತಾಗಿ ಮಲವಿಸರ್ಜನೆಗೆ ಪ್ರಚೋದಿಸಿದಂತೆಯೂ ಆಗುತ್ತದೆ. ಮಲಬದ್ಧತೆಯ ಕಾರಣದಿಂದ ಗುದದ್ವಾರದ ಸುತ್ತಲೂ ಬಿರುಕುಗಳೇನಾದರೂ ಆಗಿದ್ದರೆ, ಅದರ ಮೇಲೆ ಡಯಾಪರ್ ಕ್ರೀಮ್ ಅನ್ನು ಲೇಪಿಸಿರಿ. ಹಾಗೆ ಮಾಡಿದಾಗ ಬಿರುಕುಗಳು ಬೇಗನೇ ಗುಣವಾಗುತ್ತವೆ.

ಇನ್ನು ನೀವು ಏನನ್ನು ಮಾಡಕೂಡದು ಅನ್ನೋದರ ಬಗ್ಗೆ ಗಮನಹರಿಸೋಣ:

ಇನ್ನು ನೀವು ಏನನ್ನು ಮಾಡಕೂಡದು ಅನ್ನೋದರ ಬಗ್ಗೆ ಗಮನಹರಿಸೋಣ:

ಸಿಟ್ಟಾಗಬೇಡಿ. ಮಗುವನ್ನ ಗದರಿಸುವುದು ಅಥವಾ ಮಗುವಿಗೆ ನಾಚಿಕೆಯಾಗುವಂತೆ ಮಾಡೋದರಿಂದ ಪ್ರಯೋಜನವಾಗೋಲ್ಲ. ಅವನು/ಅವಳು ಪಾಟ್ಟಿಯಲ್ಲಿ ಮಲವಿಸರ್ಜನೆಯನ್ನ ಮಾಡದಿರೋದು ನಿಮಗೆ ಕೋಪವನ್ನುಂಟು ಮಾಡಬೇಕೆಂದಲ್ಲ. ಮುಜುಗುರವನ್ನುಂಟು ಮಾಡೋ ಸನ್ನಿವೇಶದಿಂದ ಪಲಾಯನವಾಗೋಕೆ ಪ್ರಯತ್ನ ಅವರದು ಅಷ್ಟೇ. ಒಂದೊಮ್ಮೆ ನಿಮ್ಮ ಮಗುವೇನಾದರೂ ತನ್ನ ಚಡ್ಡಿಯೊಳಗೇ ಮಲವಿಸರ್ಜನೆ ಮಾಡಿಕೊಂಡಲ್ಲಿ ಶಾಂತವಾಗಿ ಅವನನ್ನು/ಅವಳನ್ನು ಶೌಚಾಲಯಕ್ಕೆ ಕರೆದೊಯ್ಯಿರಿ, ಚಡ್ಡಿಯನ್ನು ಕಳಚಿ ನೀರಿನಿಂದ ಅದನ್ನ ಚೆನ್ನಾಗಿ ತೊಳೆಯಿರಿ ಹಾಗೂ ಪಾಟ್ಟಿಯಲ್ಲಿ ಮಲವಿಸರ್ಜನೆ ಮಾಡಿದರೆ ಈ ಎಲ್ಲ ಕಿರಿಕಿರಿ ಇರೋಲ್ಲ ಅಂತಾ ಮಗುವಿಗೆ ತಿಳಿಹೇಳಿ.

ಮಗುವು ಮಲವಿಸರ್ಜನೆ ಮಾಡೋವರೆಗೂ ಮಗುವು ಪಾಟ್ಟಿಯ ಮೇಲೆ ಕೂತುಕೊಳ್ಳೋದನ್ನ ಖಾತ್ರಿ ಮಾಡ್ಕೊಳ್ಳಿ. ಶರೀರವು ಸಿದ್ಧಗೊಂಡಾಗಲಷ್ಟೇ ಮಲವಿಸರ್ಜನೆ ಮಾಡಬೇಕೂಂತ ಅನ್ನಿಸುತ್ತೆ. ಹಾಗಾಗಿ, ನಿಮಗನಿಸಿದಾಗ ಮಗುವನ್ನ ಪಾಟ್ಟಿಯ ಮೇಲೆ ಕುಳ್ಳಿರಿಸಿ, "ಪ್ರಯತ್ನಮಾಡು" ಅಂತಾ ಬಲವಂತ ಮಾಡೋದು ತಪ್ಪು. ಅದರ ಬದಲು, ಮಲವಿಸರ್ಜನೆ ಮಾಡಬೇಕೆನಿಸಿದಾಗ ಮಗುವಿನ ಚರ್ಯೆಗಳಲ್ಲಾಗೋ ಬದಲಾವಣೆಗಳನ್ನ ಗಮನಿಸಿ: ಚಟುವಟಿಕೆಯಲ್ಲಿದ್ದ ಮಗು ಒಮ್ಮಿಂದೊಮ್ಮೆಲೇ ಅದನ್ನ ನಿಲ್ಲಿಸಿಬಿಡೋದು, ಬೆಪ್ಪಾದ ಮುಖಲಕ್ಷಣ, ಕೊಠಡಿಯ ಯಾವುದೋ ಬೇರೊಂದು ಮೂಲೆಯತ್ತ ಓಡೋದು, ಇವೆಲ್ಲವೂ ಮಲವಿಸರ್ಜನೆಗೆ ದೇಹ ಸಜ್ಜಾಗಿರುವುದರ ಸೂಚನೆಗಳು. ಇವುಗಳನ್ನ ಗಮನಿಸಿದ ಕೂಡಲೇ, ಮಲವಿಸರ್ಜನೆ ಆಗೋಕಿಂತಾ ಮುಂಚೆನೇ ನಿಮ್ಮ ಮಗೂನಾ ಶೌಚಾಲಯದತ್ತ ಕರೆದುಕೊಂಡು ಧಾವಿಸಿ.

ಮಲವಿಸರ್ಜನೆಗೆಂದು ಕಸರತ್ತು ಮಾಡುತ್ತಾ ನಿಮ್ಮ ಮಗು ಬಳಲಿ ಬೆಂಡಾಗದಂತೆ ನೋಡಿಕೊಳ್ಳಿ

ಮಲವಿಸರ್ಜನೆಗೆಂದು ಕಸರತ್ತು ಮಾಡುತ್ತಾ ನಿಮ್ಮ ಮಗು ಬಳಲಿ ಬೆಂಡಾಗದಂತೆ ನೋಡಿಕೊಳ್ಳಿ

ಮಲವು ಸರಾಗವಾಗಿ ಹೋಗೋಕೇಂತಾ ಸ್ವಲ್ಪ ಶ್ರಮ ಪಡೋದೇನೋ ಸರಿ, ಆದರೆ ಅದಕ್ಕಂತಾನೇ ಸಿಕ್ಕಾಪಟ್ಟೆ ಕಸರತ್ತು ಮಾಡೋದು ತೊಂದರೆಗೆ ಕಾರಣವಾಗಬಹುದು (ಮಲಬದ್ಧತೆ ಹಾಗೂ ಹೆಮಾರಾಯ್ಡ್ ಮತ್ತು ಗುದದ್ವಾರದ ಬಿರುಕುಗಳ ದೃಷ್ಟಿಯಿಂದ). ಮಲವಿಸರ್ಜನೆಗೇಂತಾ ಮಗೂನಾ ಬಲವಂತ ಮಾಡೋದರ ಬದಲು, ನಿಮ್ಮ ಮಗುವಿಗೆ ಕುಡಿಯೋದಕ್ಕೆ ಒಂದು ದೊಡ್ಡ ಲೋಟದಷ್ಟು ನೀರನ್ನ ಕೊಡಿ ಹಾಗೂ ಜೊತೆಗೆ ಕರುಳನ್ನ ಶುದ್ಧಿಮಾಡೋವಂತಾ ಹಣ್ಣೊಂದನ್ನ ತಿನ್ನಲು ಕೊಡಿ (ಪೀಚ್ ಹಣ್ಣು, ಪಿಯರ್ ಹಣ್ಣು, ಒಣದ್ರಾಕ್ಷಿಯಂತಹ ಹಣ್ಣುಗಳು). ಇದಾಗಿ ಒಂದರ್ಧ ಘಂಟೆ ಬಿಟ್ಟು ಮತ್ತೆ ನಿಮ್ಮ ಮಗುವಿಗೆ ಪ್ರಯತ್ನಿಸಲು ಹೇಳಿ. ಮಲವಿಸರ್ಜನೆಗೆ ಪೂರಕವಾಗಿ ಆಹಾರವಸ್ತುಗಳನ್ನ ಧಾರಾಳವಾಗಿ ತಿನ್ನೋದಕ್ಕೆ ಮಗೂನಾ ಪ್ರೋತ್ಸಾಹಿಸಿ. ಸಕ್ಕರೆ ಮತ್ತು ಸಂಸ್ಕರಿತ ಕಾರ್ಬೋಹೈಡ್ರೇಟ್ ಗಳು (ಬಿಳಿಬಣ್ಣದ ಬ್ರೆಡ್, ಪಾಸ್ತಾ, ಮತ್ತು ಅಕ್ಕಿ) ಮಕ್ಕಳ ಮಲಬದ್ಧತೆ ಸಮಸ್ಯೇನಾ ಇನ್ನಷ್ಟು ಹದಗೆಡಿಸಿಬಿಡುತ್ವೆ. ಬಾಳೆಹಣ್ಣುಗಳು ಮತ್ತು ಹೈನ ಪದಾರ್ಥಗಳೂ ಮಲಬದ್ಧತೆಗೆ ಕಾರಣವಾದಾವು.

ಖಿನ್ನರಾಗಬೇಡಿ

ಖಿನ್ನರಾಗಬೇಡಿ

ಹೆಚ್ಚುಕಡಿಮೆ ಪ್ರತಿಯೊಂದು ಮಗುವೂ ಪಾಟ್ಟಿಯಲ್ಲಿ ಮಲವಿಸರ್ಜನೆ ಮಾಡೋ ಕಲೇನಾ ರೂಢಿಸಿಕೊಳ್ಳುತ್ತೆ. ಇದಕ್ಕೆ ನಿಮ್ಮ ಮಗು ಸ್ವಲ್ಪ ಜಾಸ್ತೀನೇ ಸಮಯ ತಗೋತಾ ಇದ್ರೆ, ಅವನಿಗೆ/ಅವಳಿಗೆ ಹಂತಹಂತವಾಗಿ ಅಭ್ಯಾಸ ಮಾಡ್ಕೊಳ್ಳೋಕೆ ಪ್ರೋತ್ಸಾಹಿಸಿ. ಮಗು ಡಯಾಪರ್ ನಲ್ಲೇ ಮಲವಿಸರ್ಜನೆ ಮಾಡಿಕೊಳ್ಳಲಿ, ಆದರೆ ಮಗುವಿನಲ್ಲಿ ಮಲವಿಸರ್ಜನೆಯ ಸೂಚನೆ ಕಂಡುಬಂದಾಗ ಅವನನ್ನು/ಅವಳನ್ನು ಶೌಚಾಲಯಕ್ಕೆ ಕರೆದೊಯ್ಯಿರಿ, ಸಡಿಲವಾಗಿ ತೊಡಿಸಲಾದ ಡಯಾಪರ್ ನೊಂದಿಗೆ ಅವನನ್ನ/ಅವಳನ್ನ ಪಾಟ್ಟಿಯ ಮೇಲೆ ಕುಳ್ಳಿರಿಸಿ. ಅಂತಿಮವಾಗಿ ಡಯಾಪರ್ ಸಮೇತ ಹೊಲಸನ್ನ ನಿಮ್ಮ ಮಗುವಿನ ಎದುರೇ ಪಾಟ್ಟಿಯಲ್ಲಿ ಹೋಗಲಾಡಿಸಿಬಿಡಿ. ಹಾಗೆ ಹೋಗಲಾಡಿಸಲು ಮಗುವು ಅನುವು ಮಾಡಿಕೊಟ್ಟಾಗ ಮಗುವಿನ ಮುಂದೆ ನಿಮ್ಮ ಆನಂದವನ್ನ ಕೇಕೆ ಹಾಕುವ ಮೂಲಕ ಪ್ರದರ್ಶಿಸಿರಿ.

ಇಷ್ಟೆಲ್ಲ ಮಾಡಿದರೂ ನೀವು ಈ ವಿಷಯದಲ್ಲಿ ಯಶಸ್ವಿಯಾಗಲಿಲ್ಲವೇ ? ಹಾಗಿದ್ದಲ್ಲಿ, ನಿಮ್ಮ ಮಗುವನ್ನ ಶಿಶುತಜ್ಞರಲ್ಲಿಗೆ ಒಯ್ಯಲು ಬಹುಶ: ಇದೇ ಸುಸಮಯ ಅಂತಾ ಅನಿಸುತ್ತೆ. ಅಂಬೆಗಾಲಿಡೋ ಮಗುವಿನ ವಿಷಯದಲ್ಲಿ ಮಲಬದ್ಧತೆಗೆ ಮಲವಿರೇಚಕ (ಲ್ಯಾಗ್ಸಟೀವ್ ಅಥವಾ ಸ್ಟೂಲ್ ಸಾಫ಼್ನರ್) ಉತ್ತರವಾಗಬಲ್ಲದು. ಆದರೆ, ವೈದ್ಯರ ಸಲಹೆಯನ್ನ ಪಡೆದುಕೊಳ್ಳದೇ ಖುದ್ದು ನೀವೇ ಮಗುವಿಗೆ ಕೊಡಲು ಮುಂದಾಗೋದು ಬೇಡ. ಒಮ್ಮೆ ನಿಮ್ಮ ಮಗು ನಿಯಮಿತವಾಗಿ ಸರಾಗವಾದ ಮಲವಿಸರ್ಜನೆಯಲ್ಲಿ ತೊಡಗಿತೆಂದರೆ, "ತಾನು ನೋವಿಲ್ಲದೇ ಮಲವಿಸರ್ಜನೆ ಮಾಡಬಲ್ಲೆ" ಅನ್ನೋ ಆತ್ಮವಿಶ್ವಾಸ ನಿಮ್ಮ ಮಗುವಿನಲ್ಲಿ ತನ್ನಿಂತಾನೇ ಮೂಡಿಬರುತ್ತೆ.

English summary

Resolving Toddler Constipation: Do’s and Don’ts in Kannada

Resolving Toddler Constipation: Do’s and Don’ts ypu must know read on.
X