For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ ಕ್ಲಾಸ್‌: ಹೀಗಿದ್ದರೆ ಕಲಿಕೆ ಮತ್ತಷ್ಟು ಸರಳವಾಗುವುದು

|

ಶತಶತಮಾನಗಳಿಂದ ಇಂದಿನವರೆಗೂ ಕಂಡುಕೇಳರಿಯದ ಅಚ್ಚರಿ ಮತ್ತು ಆಘಾತಗಳಿಗೆ ಈ ವರ್ಷ, ಅರ್ಥಾತ್ ಇಸವಿ 2020 ಸಾಕ್ಷಿಯಾಯಿತು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆ ಎಲ್ಲ ಅಚ್ಚರಿ, ಆಘಾತಗಳ ಮೂಲ ಕೊರೋನಾ ವೈರಸ್. ಈ ಕೊರೋನಾದಿಂದ ಏನೇನೆಲ್ಲ ಆಗಿಲ್ಲ ಹೇಳಿ ?! ದೇವಸ್ಥಾನ, ಮಠ, ಮಂದಿರಗಳ ಬಾಗಿಲುಗಳು ತಿಂಗಳುಗಟ್ಟಲೇ ಮುಚ್ಚಿಕೊಂಡವು, ಎಷ್ಟೋ ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳು ದಿವಾಳಿಯೆದ್ದು ಹೋದವು.

ಇದುವರೆಗೂ ಬೇಸಿಗೆ ರಜೆ ಅಥವಾ ನವರಾತ್ರಿ ರಜೆಗೆಂದು ಕೆಲವೇ ತಿಂಗಳುಗಳ ಮಟ್ಟಿಗೆ ಮುಚ್ಚಿರುತ್ತಿದ್ದ ಶಾಲಾ ಕಾಲೇಜುಗಳಂತೂ ಈ ವರ್ಷದ ಮಟ್ಟಿಗೆ ಹೆಚ್ಚುಕಡಿಮೆ ವರ್ಷಪೂರ್ತಿ ಬಾಗಿಲು ಮುಚ್ಚಿಕೊಳ್ಳೋ ಹಾಗಾಯಿತು. ಅಷ್ಟು ಮಾತ್ರವೇ ಅಲ್ಲ, ಈ ವರ್ಷದಿಂದಾರಂಭಿಸಿ ಮಕ್ಕಳು ಕಲಿಯೋ ರೀತಿಗೇ ಹೊಸ ಭಾಷ್ಯ ಬರೆದಿಬಿಟ್ಟಿತು ಈ ಕೊರೋನಾ. ಶಾಲೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಲಿಯುತ್ತಿದ್ದ ಮಕ್ಕಳು ಈಗ ಕಂಪ್ಯೂಟರ್, ಲ್ಯಾಪ್ಟಾಪ್, ಅಥವಾ ಮೊಬೈಲ್ ಗಳಂತಹ ಸಾಧನಗಳ ಮೂಲಕ ಕಲಿಕೆಯನ್ನು ಮುಂದುವರೆಸಬೇಕಾದ ಪರಿಸ್ಥಿತಿಗೆ ಮೊರೆಹೋಗಬೇಕಾಗಿದೆ.

ಈ ರೀತಿಯ ಕಲಿಕೆಯ ವಿಧಾನವೇ ವರ್ಚುವಲ್ ಲರ್ನಿಂಗ್. ಈ ಹೊಸ ವಿಧಾನಕ್ಕೆ ಹೊಂದಿಕೊಳ್ಳಲು ಮಕ್ಕಳು ಸಾಕಷ್ಟು ತಿಣುಕಾಗಡಬೇಕಾಗಿದೆ. ಆ ನಿಟ್ಟಿನಲ್ಲಿ ಅವರನ್ನ ಪ್ರೇರೇಪಿಸಲು ಹೆತ್ತವರೂ ಸಾಕಷ್ಟು ಹೆಣಗಾಡಬೇಕಾಗಿದೆ.

ಸವಾಲಿನ ಈ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹೊಸಬಗೆಯ ಈ ಕಲಿಕಾಕ್ರಮಕ್ಕೆ ಪ್ರೇರೇಪಿಸುವುದಕ್ಕಾಗಿ ನೆರವಾಗೋ ರೀತಿಯಲ್ಲಿ ನಾವಿಲ್ಲಿ ನಿಮಗಾಗಿ ಕೆಲವು ಆಯ್ದ ಸಲಹೆಗಳನ್ನ ಪಟ್ಟಿಮಾಡಿದ್ದೇವೆ. ಅವುಗಳನ್ನು ಅನುಸರಿಸಿದ್ದೇ ಆದಲ್ಲಿ, ಕಲಿಕೆಯ ಈ ಹೊಸ ವಿಧಾನ ಫಲಪ್ರದವಾಗಲಿದೆ ಎಂಬ ನಂಬಿಕೆ ನಮ್ಮದು.

 1. ಕಲಿಕಾ ವಾತಾವರಣ

1. ಕಲಿಕಾ ವಾತಾವರಣ

ತರಗತಿಯ ವಾತಾವರಣಕ್ಕೆ ಏನೇನೂ ಕಡಿಮೆ ಇರದ ರೀತಿಯಲ್ಲಿ ಒಂದು ಉತ್ತಮ ಕಲಿಕಾ ಪರಿಸರವನ್ನು ಸೃಷ್ಟಿಸಿರಿ

ಮಗುವಿನ ಕಲಿಕೆಗೆ ಒಂದು ಗೊತ್ತಾದ ಯೋಗ್ಯ ಸ್ಥಳವನ್ನು ನಿಗದಿಪಡಿಸಿರಿ. ಆ ಸ್ಥಳದಲ್ಲಿ ಬಾಹ್ಯಾಕರ್ಷಣೆಗಳು ಇಲ್ಲದಿರಲಿ. ಈ ಕಲಿಕಾಕ್ರಮಕ್ಕೆ ಮಗುವು ಕುಳಿತುಕೊಳ್ಳುವ ಭಂಗಿ ಅನುಕೂಲಕರವಾಗಿರಬೇಕು. ಹಾಗಾಗಿ ವರ್ಚುವಲ್ ತರಗತಿಗೆ ಹಾಜರಾಗುವಾಗ, ಮಗುವಿನ ಬೆನ್ನು ನೇರವಾಗಿರುವಂತೆ, ಮಗುವನ್ನು ಸರಿಯಾದ ಭಂಗಿಯಲ್ಲಿ ಕೂರಿಸುವುದನ್ನು ಸಾಧ್ಯವಾಗಿಸುವಂತಹ ಕುರ್ಚಿಯನ್ನು ಒದಗಿಸಿರಿ. ಕಲಿಕೆಗೆಂದೇ ಮೀಸಲಿರುವ ಉತ್ತಮ ಗುಣಮಟ್ಟದ ಸಾಧನ ಹಾಗೂ ಜೊತೆಗೆ ಉತ್ತಮ ನೆಟ್ವರ್ಕ್ ಸಂಪರ್ಕವು ತಡೆರಹಿತ ಕಲಿಕೆಗೆ ಪೂರಕವಾಗಿರುತ್ತವೆ.

2. ಮಧ್ಯೆ ಮಧ್ಯೆ ಸಣ್ಣಪುಟ್ಟ ವಿರಾಮಗಳನ್ನು ಮಗು ಪಡೆದುಕೊಳ್ಳಲಿ

2. ಮಧ್ಯೆ ಮಧ್ಯೆ ಸಣ್ಣಪುಟ್ಟ ವಿರಾಮಗಳನ್ನು ಮಗು ಪಡೆದುಕೊಳ್ಳಲಿ

ಕಲಿಕೆಯ ಪ್ರಕ್ರಿಯೆಯಲ್ಲಿ ಮಧ್ಯೆ ಮಧ್ಯೆ ಮಗುವಿಗೆ ಸಣ್ಣಪುಟ್ಟ ವಿರಾಮಗಳನ್ನು ಕಲ್ಪಿಸಿಕೊಡುವುದೂ ಬಹಳ ಮುಖ್ಯ. ಅಂತಹ ವಿರಾಮದ ವೇಳೆ ಮಗು ಅಥವಾ ವಿದ್ಯಾರ್ಥಿ ಏನಾದರೊಂದು ದೈಹಿಕ ಚಟುವಟಿಕೆಯನ್ನು ಕೈಗೊಳ್ಳಬಹುದು, ಕುರ್ಚಿಯಿಂದೆದ್ದು ಹತ್ತಾರು ಹೆಜ್ಜೆ ಅಡ್ಡಾಡಬಹುದು, ಹತ್ತಾರು ಬಸ್ಕಿಗಳನ್ನು ತೆಗೆಯಬಹುದು, ಸ್ವಲ್ಪ ನೀರು ಕುಡಿಯಬಹುದು ಇಲ್ಲವೇ ಹಗುರವಾಗಿ ಏನನ್ನಾದರೂ ತಿನ್ನಬಹುದು. ಇಂತಹ ಸಣ್ಣಪುಟ್ಟ ವಿರಾಮಗಳು ಕಲಿಕೆಯ ಒತ್ತಡವನ್ನು ತಗ್ಗಿಸುತ್ತವೆ ಹಾಗೂ ಒಟ್ಟಾರೆ ಕಲಿಕಾಕ್ಷಮತೆಯನ್ನು ಸುಧಾರಿಸುತ್ತವೆ.

3. ದಿನದಾರಂಭಕ್ಕೂ ಮೊದಲು ಆಯಾ ದಿನದ ಕಾರ್ಯಯೋಜನೆಯನ್ನ ಬರೆದಿಡುವುದು

3. ದಿನದಾರಂಭಕ್ಕೂ ಮೊದಲು ಆಯಾ ದಿನದ ಕಾರ್ಯಯೋಜನೆಯನ್ನ ಬರೆದಿಡುವುದು

ಮಗುವನ್ನು ಅಥವಾ ವಿದ್ಯಾರ್ಥಿಯನ್ನು ಹೀಗೆ ಮಾಡಲು ಪ್ರೇರೇಪಿಸುವುದರಿಂದ ಮಗುವಿಗೆ ದಿನವಿಡೀ ವ್ಯವಸ್ಥಿತವಾಗಿ ತನ್ನ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾದಂತಾಗುತ್ತದೆ. ಆಯಾ ದಿನದ ಗುರಿಯನ್ನು ತಲುಪಲೂ ಇದು ಸಹಕಾರಿ. ಈ-ಕಲಿಕಾ ಅವಧಿಯಲ್ಲಿಯೂ ಕೂಡ, ಮಗುವಿಗೆ ಯಾವುದಾದರೊಂದು ವಿಷಯ ಸರಿಯಾಗಿ ಅರ್ಥವಾಗದಿದ್ದಲ್ಲಿ, ರೆಕಾರ್ಡ್ ಮಾಡಲಾದ ವರ್ಚುವಲ್ ತರಗತಿಯ ವಿಡಿಯೋ ಕ್ಲಿಪ್ ಗಳು ಲಭ್ಯವಾಗುವಂತಿರಲೇಬೇಕು. ಆಗ ಮಗು ಅಂತಹ ವಿಡಿಯೋ ಕ್ಲಿಪ್ ಅನ್ನು ಪುನ: ಪುನ: ವೀಕ್ಷಿಸುವುದರ ಮೂಲಕ ತರಗತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು.

ಸಂದೇಹವಿರುವ ವಿಷಯವನ್ನು ಪರಿಹರಿಸಿಕೊಳ್ಳುವ ಮತ್ತೊಂದು ಮಾರ್ಗೋಪಾಯವೇನೆಂದರೆ, ಸಂದೇಹವಿರುವ ಎಲ್ಲ ಪ್ರಶ್ನೆಗಳನ್ನೂ ಬರೆದಿಡುವುದು ಹಾಗೂ ಅವುಗಳನ್ನು ಸಂಬಂಧಿತ ಅಧ್ಯಾಪಕರಿಗೆ ಈ-ಮೇಲ್ ಮಾಡುವುದು. ಇಲೆಕ್ಟ್ರಾನಿಕ್ ಸಾಧನದ ಮೂಲಕ ಪಾಠಪ್ರವಚನವನ್ನು ಆಲಿಸುವಾಗ ಮಗುವು ನೋಟ್ಸ್ ಮಾಡಿಕೊಳ್ಳುವ ಅಭ್ಯಾಸವನ್ನಿರಿಸಿಕೊಂಡಲ್ಲಿ, ಅಂತ್ಯದವರೆಗೂ ಮಗುವಿನ ಗಮನ ತರಗತಿಯತ್ತಲೇ ಕೇಂದ್ರೀಕೃತವಾಗಿರುವ ಸಾಧ್ಯತೆ ಇರುತ್ತದೆ.

4. ನಿರೀಕ್ಷೆಗಳು ಸಕಾರಣಾತ್ಮಕವಾಗಿರಲಿ

4. ನಿರೀಕ್ಷೆಗಳು ಸಕಾರಣಾತ್ಮಕವಾಗಿರಲಿ

ಒಂದು ನಿರ್ಧಿಷ್ಟ ಗುರಿಯತ್ತ ಮಕ್ಕಳು ಪ್ರೇರಿತರಾಗಿ ಅದನ್ನವರು ಸಾಧಿಸುವಂತಾಗಬೇಕಾದರೆ ನಿರೀಕ್ಷೆಗಳು ಸಕಾರಣಾತ್ಮಕವಾಗಿರುವುದು ಮತ್ತು ಸಾಧಿಸಲು ಸಾಧ್ಯವಾಗುವ ರೀತಿಯಲ್ಲಿರುವುದು ಅತೀ ಅವಶ್ಯಕ. ಉದಾಹರಣೆಗೆ, ದೊಡ್ಡ ಮಕ್ಕಳಿಗೆ ಹೋಲಿಸಿದಲ್ಲಿ ಚಿಕ್ಕ ಮಕ್ಕಳಿಗೆ ಈ-ಕಲಿಕಾ ತರಗತಿಯ ಅವಧಿಯು ಚಿಕ್ಕದಾಗಿರುವುದು ಒಳ್ಳೆಯದು. ಏಕೆಂದರೆ, ಚಿಕ್ಕ ಮಕ್ಕಳು ತುಂಬಾ ಹೊತ್ತಿನವರೆಗೆ ಈ-ಕಲಿಕಾ ಪ್ರಕ್ರಿಯೆಯತ್ತ ಗಮನ ಕೇಂದ್ರೀಕರಿಸಲಾರರು.

ನಿಮ್ಮ ಮಗುವಿನ ಕಲಿಕೆಯ ಮಟ್ಟವನ್ನು ಬೇರೆ ಮಕ್ಕಳ ಕಲಿಕೆಯ ಮಟ್ಟಗಳೊಂದಿಗೆ ಹೋಲಿಸುವುದು ಸರ್ವಥಾ ಕೂಡದು. ಏಕೆಂದರೆ, ಬೇರೆ ಬೇರೆ ಮಕ್ಕಳ ಕಲಿಕಾ ಸಾಮರ್ಥ್ಯ ಬೇರೆ ಬೇರೆ ಸ್ವರೂಪದ್ದಾಗಿರುತ್ತದೆ.

5. ಈ-ಕಲಿಕಾ ತರಗತಿಗಳು ಸಂವಹನಶೀಲವಾಗಿರಲಿ

5. ಈ-ಕಲಿಕಾ ತರಗತಿಗಳು ಸಂವಹನಶೀಲವಾಗಿರಲಿ

ಈ-ಕಲಿಕಾ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳ ಗುಂಪು ಚಿಕ್ಕದಾಗಿರಲಿ. ಹೀಗಾದಾಗ ಪ್ರತಿಯೊಬ್ಬರನ್ನೂ ಕಲಿಕಾ ವಿಡಿಯೋ ದಲ್ಲಿ ಒಳಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಸರಳ ಆಯ್ಕೆಗಳ ಮೂಲಕ ಮಕ್ಕಳು ಉತ್ತರಿಸುವುದಕ್ಕೆ ಸಾಧ್ಯವಾಗುವಂತಿರಬೇಕು. ತರಗತಿಯು ಸಂವಹನಶೀಲವಾದಾಗ (ಮಕ್ಕಳು ಮತ್ತು ಅಧ್ಯಾಪಕರೊಡನೆ) ಮಕ್ಕಳು ದೀರ್ಘಕಾಲದವರೆಗೆ ತರಗತಿಯತ್ತ ಗಮನ ಕೇಂದ್ರೀಕರಿಸಬಲ್ಲರು.

ಪ್ರಸ್ತುತ ವರ್ಷವಂತೂ ನಮ್ಮನ್ನು ಹಲಬಗೆಯ ಸವಾಲುಗಳು, ತುಮುಲಗಳು, ಹಾಗೂ ಒತ್ತಡಗಳಿಗೆ ತಳ್ಳಿಬಿಟ್ಟಿದೆ. ದೀರ್ಘಕಾಲದವರೆಗೆ ಅದುಮಿಟ್ಟುಕೊಂಡಿರುವ ಹತಾಶೆ, ಮಾನಸಿಕ ತುಮುಲಗಳು ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳನ್ನು ಏರುಪೇರಾಗಿಸಬಲ್ಲವು.

ಸಕಾರಾತ್ಮಕ ಅಂಶಗಳತ್ತ ನಮ್ಮ ಗಮನವನ್ನು ಕೇಂದ್ರೀಕರಿಸುವಂತಾಗುವತ್ತ ವಿವಿಧ ಕಾರ್ಯತಂತ್ರಗಳನ್ನು ನಾವು ಅಳವಡಿಸಿಕೊಂಡಲ್ಲಿ ಅದು ನಮ್ಮ ಒತ್ತಡವನ್ನು ಕಡಿಮೆಮಾಡಿ ಉತ್ಪಾದಕತೆಯನ್ನು ಹೆಚ್ಚಿಸೀತು. ಮಕ್ಕಳಂತೂ ಈ ವಿನೂತನ ಕಲಿಕಾ ಕ್ರಮಕ್ಕೆ ಒಗ್ಗಿಕೊಳ್ಳುವುದಕ್ಕಾಗಿ ತಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡುತ್ತಿದ್ದಾರೆ. ಅವರ ಈ ಎಲ್ಲ ಪುರೋಗಾಮೀ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಲ್ಲುವುದು ಹೆತ್ತವರಾದ ನಮ್ಮೆಲ್ಲರ ಪಾಲಿನ ಆದ್ಯ ಕರ್ತವ್ಯವೇ ಸರಿ.

English summary

How To Help Your Kids Focus On E learning

Here is tips to help your kids to focus on e learning, read on,
X