For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಫಲವತ್ತತೆ ಕ್ಷೀಣಿಸಲು ಇರುವ ಕೆಲವು ಕಾರಣಗಳು

|

ಸಂತಾನ ಎನ್ನುವುದು ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ, ವಂಶವನ್ನು ವೃದ್ಧಿಸುವ ಒಂದು ಬಗೆ. ಪ್ರತಿ ದಂಪತಿಗಳಿಗೂ ತಮ್ಮ ಸಂತಾನದಿಂದ ವಂಶ ವೃದ್ಧಿಯಾಗಬೇಕು, ನಮ್ಮ ಆಸರೆಗಾಗಿ ಮಕ್ಕಳನ್ನು ಪಡೆಯಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ತಮ್ಮ ಪ್ರೀತಿಯ ಪ್ರತೀಕವಾಗಿ ರಕ್ತವನ್ನು ಹಂಚಿಕೊಂಡು ಹುಟ್ಟುವ ಮಗುವಿನ ಏಳೀಗೆ ಹಾಗೂ ಬೆಳವಣಿಗೆಗಾಗಿ ಪ್ರತಿಯೊಂದು ದಂಪತಿಗಳು ಶ್ರಮಿಸುತ್ತಾರೆ. ತಮ್ಮ ವಂಶ ನಮ್ಮ ರಕ್ತದಲ್ಲಿಯೇ ಹುಟ್ಟಬೇಕು ಎನ್ನುವ ಆಸೆ ಹಾಗೂ ಬಯಕೆಗಳು ಇರುತ್ತವೆ. ಆದರೆ ಕೆಲವರಿಗೆ ಈ ಭಾಗ್ಯ ದೊರೆಯುವುದು ಕಷ್ಟವಾಗುವುದು.

ಕೆಲವು ದಂಪತಿಗಳಲ್ಲಿ ಮಗುವನ್ನು ಪಡೆಯಲು ಸಮಸ್ಯೆಗಳು ಇರುತ್ತವೆ. ಸಾಮಾನ್ಯವಾಗಿ ಸಂತಾನ ಹೀನತೆ ಅಥವಾ ಸಮಸ್ಯೆ ಇದೆ ಎಂದಾದರೆ ಮೊದಲು ಪತ್ನಿಯಲ್ಲಿ ಯಾವ ಸಮಸ್ಯೆ ಇದೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಅವರಲ್ಲಿ ಇರುವ ಸಮಸ್ಯೆ ಪರಿಹಾರವನ್ನು ಕಂಡುಕೊಳ್ಳುವುದರ ಮೂಲಕ ಸಮಸ್ಯೆಗಳ ನಿವಾರಣೆಗೆ ಮುಂದಾಗುವರು. ಅದೇ ಪುರುಷನಲ್ಲಿಯೇ ಸಮಸ್ಯೆ ಇದೆ ಎಂದಾಗ ಬಹುತೇಕ ಮಂದಿ ವೈದ್ಯರಲ್ಲಿ ತಪಾಸಣೆ ಅಥವಾ ಚಿಕಿತ್ಸೆ ಪಡೆಯಲು ಹಿಂದಾಗುತ್ತಾರೆ. ಪುರುಷರಲ್ಲಿ ಫಲವತ್ತತೆಯ ಹೀನತೆ ಇದೆ ಎಂದಾಗ ಅದನ್ನು ಮರೆಮಾಚಲು ಹೆಚ್ಚಿನ ಪ್ರಯತ್ನ ಮಾಡುವರು.

ಆಧುನಿಕತೆ ಹಾಗೂ ಶಿಕ್ಷಣದ ಕಾರಣಗಳಿಂದ ಇತ್ತೀಚೆಗೆ ಪುರುಷರು ತಮ್ಮ ಸಮಸ್ಯೆಗಳು ಏನು? ಅದಕ್ಕೆ ಕಾರಣಗಳು ಹಾಗೂ ಚಿಕಿತ್ಸೆಯ ಬಗ್ಗೆ ಒಲವನ್ನು ತೋರುತ್ತಾರೆ. ಜೀವನ ಶೈಲಿ, ಆಹಾರ ಕ್ರಮ, ಅನುಚಿತವಾದ ಹವ್ಯಾಸಗಳು, ಔಷಧಗಳ ಅಡ್ಡ ಪರಿಣಾಮ ಹೀಗೆ ವಿವಿಧ ಕಾರಣಗಳಿಂದಾಗಿ ಪುರುಷರಲ್ಲಿ ಫಲವತ್ತತೆಯ ಹೀನತೆ ಉಂಟಾಗುತ್ತಿದೆ. ಪುರುಷರಲ್ಲಿ ಕಾಣುವ ಬಂಜೆ ತನ ಎಂದರೆ ಅಸಹಜವಾದ ವೀರ್ಯ ಕ್ರಿಯೆ, ವೀರ್ಯದ ವಿತರಣೆಯಲ್ಲಿ ತಡೆ ಉಂಟಾಗುವುದು ಹಾಗೂ ಕಡಿಮೆ ಪ್ರಮಾಣದಲ್ಲಿ ವೀರ್ಯ ಉತ್ಪಾದನೆ ಆಗುವುದು ಪ್ರಮುಖ ಕಾರಣವಾಗಿರುತ್ತದೆ. ಇತ್ತೀಚೆಗೆ ನಡೆಸಿದ ಕೆಲವು ಅಧ್ಯಯನಗಳ ಪ್ರಕಾರ ಪುರುಷರು ಹೊಂದಿರುವ ಕೆಲಸ ಹಾಗೂ ದಿನಚರಿಯ ಆಧಾರದ ಮೇಲೆ ಸಂಗಾತಿಯ ಗರ್ಭಧಾರಣೆ ನಿರ್ಧರಿತವಾಗುತ್ತದೆ ಎಂದು ಹೇಳಲಾಗುವುದು.

ಅಧ್ಯಯನ ತಿಳಿಸಿರುವ ಮಾಹಿತಿ

ಇತ್ತೀಚೆಗೆ ಪರುಷರ ಫಲವತ್ತತೆಗೆ ಸಂಬಂಧಿಸಿದ ಒಂದು ಅಧ್ಯಯನವನ್ನು ನಡೆಸಲಾಯಿತು. ಈ ಅಧ್ಯಯನದಲ್ಲಿ 32 ವರ್ಷ ವಯಸ್ಸಿನ 456 ಪುರುಷರನ್ನು ಒಳಪಡಿಸಲಾಗಿತ್ತು. ಇವರಿಗೆ ಯಾವುದೇ ಗರ್ಭ ನಿರೋಧಕವನ್ನು ಬಳಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರ್ದೇಶನ ನೀಡಲಾಗಿತ್ತು. ಅದರಲ್ಲಿ ಪ್ರತಿಶತ 13ರಷ್ಟು ಪುರುಷರು ತಮ್ಮ ಉದ್ಯೋಗಗಳಿಗೆ ಸಂಬಂಧಿಸಿದಂತೆ ಕಡಿಮೆ ಪ್ರಮಾಣದ ವೀರ್ಯಾಣುಗಳನ್ನು ಹೊಂದಿದ್ದರು. ಅವರ ಉದ್ಯೋಗವು ಫಲವತ್ತತೆ ಹೀನಗೊಳಿಸುವಲ್ಲಿ ಮಹತ್ತರವಾದ ಕಾರಣವಾಗಿತ್ತು ಎನ್ನುವುದನ್ನು ಕಂಡುಕೊಂಡರು. ಅಂತಹ ಉದ್ಯೋಗದಲ್ಲಿ ಇರದ ಪುರುಷರ ಪೈಕಿ ಕೇವಲ 6 ಪ್ರತಿಶತದಷ್ಟು ಪುರುಷರಲ್ಲಿ ಕಡಿಮೆ ಪ್ರಮಾಣದ ವೀರ್ಯವನ್ನು ಹೊಂದಿದ್ದರು ಎನ್ನುವುದು ತಿಳಿದುಬಂದಿತು. ಈ ಹಿನ್ನೆಲೆಯಲ್ಲಿಯೇ ಕೆಲಸದ ಪ್ರಯುಕ್ತ ದೈಹಿಕವಾಗಿ ಕೈಗೊಳ್ಳುವ ಕೆಲಸ ಕಾರ್ಯಗಳು ಸಹ ಪುರುಷರ ಫಲವತ್ತತೆಯ ಮೇಲೆ ಪ್ರಭಾವ ಬೀರುವುದು ಎನ್ನುವುದು ತಿಳಿದು ಬಂದಿತು. ತಡರಾತ್ರಿ ಪಾಳಿಯ ಉದ್ಯೋಗಗಳು, ಶಾಖ, ಶಬ್ದ, ದೀರ್ಘಕಾಲ ಕುಳಿತುಕೊಳ್ಳುವಂತಹ ಕೆಲಸದ ಕಾರಣಗಳಿಂದಾಗಿ ವೀರ್ಯದ ಗುಣ ಮಟ್ಟ ಹಾಗೂ ಸಾಂದ್ರತೆ ಕಡಿಮೆಯಾಗುತ್ತದೆ ಎಂದು ತಿಳಿದು ಬಂದಿದೆ.

ಸಂಶೋಧಕರು ಹಾಗೂ ತಜ್ಞರು ಅಭಿಪ್ರಾಯಿಸುವ ಏಕೈಕ ಅಂಶ ಎಂದರೆ ದೈಹಿಕ ಕೆಲಸಗಳು. ಯಾವ ರೀತಿಯ ಉದ್ಯೋಗ ಮಾಡುತ್ತಾರೆ ಎನ್ನುವುದರ ಆಧಾರದ ಮೇಲೆ ಪುರುಷರ ಫಲವತ್ತತೆ ನಿರ್ಧಾರವಾಗುವುದು. ಹಾಗೆಯೇ ಅಧಿಕ ರಕ್ತದೊತ್ತಡ ಇರುವ ಹಾಗೂ ರಕ್ತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಹೊಂದಿರುವವರಲ್ಲೂ ಫಲವತ್ತತೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಎಂದು ಹೇಳಲಾಗುವುದು. ಪುರುಷರು ವಿವಿಧ ಸಮಸ್ಯೆಗಳಿಗಾಗಿ ಬಗೆಬಗೆಯ ಔಷಧ ಹಾಗೂ ಚಿಕಿತ್ಸೆಗೆ ಒಳಗಾಗುವುದರ ಪರಿಣಾಮದಿಂದಲೂ ಫಲವತ್ತತೆಯ ಮೇಲೆ ಅಡ್ಡ ಪರಿಣಾಮ ಬೀರುವುದು ಎನ್ನಲಾಗುವುದು. ಸಾಮಾನ್ಯವಾಗಿ ಫಲವತ್ತೆಯನ್ನು ಹೊಂದಿರುವ ಪುರುಷರಲ್ಲಿ ವೀರ್ಯದ ಸಂಖ್ಯೆಯು 40 ದಶಲಕ್ಷದಿಂದ 300 ದಶಲಕ್ಷದಷ್ಟಿರುತ್ತದೆ. ವಿವಿಧ ಔಷಧಗಳನ್ನು ತೆಗೆದುಕೊಳ್ಳುವ ಪುರುಷರಲ್ಲಿ ಪ್ರತಿಶತ 15ರಷ್ಟು ಪುರುಷರಲ್ಲಿ 39 ದಶಲಕ್ಷಕ್ಕಿಂತ ಕಡಿಮೆ ವೀರ್ಯಗಳಿರುವುದು ತಿಳಿದು ಬಂದಿದೆ.

ಈ ಅಧ್ಯಯನದ ಅಂಶಗಳು ವೀರ್ಯದ ಗುಣಮಟ್ಟ ಹಾಗೂ ಫಲವತ್ತತೆಯ ನಡುವೆ ಇರುವ ಸಂಬಂಧವನ್ನು ಪ್ರದರ್ಶಿಸುತ್ತವೆ ಆದರೂ ಇದಕ್ಕೆ ಸ್ಪಷ್ಟ ಕಾರಣ ಹಾಗೂ ಪರಿಣಾಮವನ್ನು ಸೂಚಿಸಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆದರೆ ಫಲಿತಾಂಶದ ದತ್ತಾಂಶಗಳನ್ನು ಪರಿಶೀಲಿಸಿದಾಗ ಪುರುಷರ ಫಲವತ್ತತೆ ಕುಂದಲು ಅವರ ವಿವಿಧ ಜೀವನ ಶೈಲಿಯು ಕಾರಣ ಎಂದು ಹೇಳಲಾಗುವುದು. ಅಲ್ಲದೆ ಫಲವತ್ತತೆಯ ಸಮಸ್ಯೆಗಳಿಗೆ ವಿವಿಧ ಜೀವನ ಶೈಲಿಯ ಅಂಶಗಳನ್ನು ಹೇಗೆ ಜೋಡಿಸಬಹುದು ಎನ್ನುವುದನ್ನು ಸೂಚಿಸುತ್ತದೆ.

ಪುರುಷ ಫಲವತ್ತತೆಗೆ ಬೇರೆ ಏನು ಪರಿಣಾಮ ಬೀರಬಹುದು?

ಪುರುಷರಲ್ಲಿ ಬಂಜೆತನಕ್ಕೆ ಸಂಬಂಧಿಸಿರುವ ಇತರ ಅಪಾಯಕಾರಿ ಅಂಶಗಳು:
* ಧೂಮಪಾನ ಮತ್ತು ತಂಬಾಕು ಸೇವನೆ.
* ಆಲ್ಕೋಹಾಲ್/ ಮದ್ಯಪಾನ ಮತ್ತು ಗಾಂಜಾವನ್ನು ಅತಿಯಾಗಿ ಬಳಸುವುದು.
*ಅನಾಬೊಲಿಕ್ ಸ್ಟೀರಾಯ್ಡ್ಗಳು ಮತ್ತು ಕೊಕೇನ್ ಸೇರಿದಂತೆ ಕೆಲವು ಅಕ್ರಮ ಔಷಧಿಗಳನ್ನು ತೆಗೆದುಕೊಳ್ಳುವುದು.
*ಅಧಿಕ ತೂಕ ಹಾಗೂ ಅನಾರೋಗ್ಯಕರ ಬೊಜ್ಜು.
* ಭಾವನಾತ್ಮಕ ಒತ್ತಡದಿಂದ ಬಳಲುತ್ತಿದ್ದರೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ.
*ವೃಷಣಗಳನ್ನು ಅತಿಯಾಗಿ ಬಿಸಿಯಾಗಿಸುವುದು-ಆಗಾಗ್ಗೆ ಸೌನಾಗಳು ಅಥವಾ ಹಾಟ್ ಟಬ್ಗಳನ್ನು ಬಳಸುವುದರಿಂದ ವೀರ್ಯಾಣುಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬಹುದು.
*ಕುಳಿತುಕೊಳ್ಳುವುದು, ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಅಥವಾ ವಿಸ್ತೃತ ಅವಧಿಗೆ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುವುದು.
* ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬೆಂಜೀನ್ಗಳು, ಕೀಟನಾಶಕಗಳು, ಸಸ್ಯನಾಶಕಗಳು ಮುಂತಾದ ವಿಷಗಳಿಗೆ ಒಡ್ಡಿಕೊಳ್ಳುವುದು.
* ಕ್ಲಮೈಡಿಯ ಮತ್ತು ಗೊನೊರಿಯಾ ಸೇರಿದಂತೆ ಕೆಲವು ಪ್ರಸ್ತುತ ಅಥವಾ ಹಿಂದಿನ ಎಸ್ಟಿಐಗಳನ್ನು ಹೊಂದಿರುವುದು.
* ವೃಷಣಗಳನ್ನು ಹರಿಸುವುದು ಮತ್ತು ಸಾಮಾನ್ಯ ತಂಪಾಗಿಸುವಿಕೆಯನ್ನು ತಡೆಯುವುದು ಹಾಗೂ ವೆರಿಕೊಲೆಸ್ ರಕ್ತನಾಳಗಳ ಕಾರಣದಿಂದಲೂ ಪುರುಷ ಬಂಜೆತನಕ್ಕೆ ಕಾರಣವಾಗುವುದು.
* ಬೈಕಿಂಗ್ ಅಥವಾ ಕುದುರೆ ಸವಾರಿಯಂತಹ ಕೆಲವು ದೀರ್ಘಕಾಲದ ಚಟುವಟಿಕೆಗಳನ್ನು ನಿರ್ವಹಿಸುವುದು, ವಿಶೇಷವಾಗಿ ಕಠಿಣ ಆಸನ ಅಥವಾ ಸರಿಯಾಗಿ ಹೊಂದಿಸದ ಬೈಸಿಕಲ್ ಓಡಿಸುವುದರಿಂದ ಸಮಸ್ಯೆ ಉಂಟಾಗುವುದು.
* ಇತರ ವೈದ್ಯಕೀಯ ಕಾರಣಗಳು ಸಮಸ್ಯೆ ಉದ್ಭವಿಸುವಂತೆ ಮಾಡುತ್ತವೆ.

ಒಂದು ವೇಳೆ ಪುರುಷನ ವೀರ್ಯಾಣು ಅಂಡಾಣುವನ್ನು ಕೂಡಲು ವಿಫಲಗೊಂಡರೆ ಇದು ಪುರುಷರ ಬಂಜೆತನಕ್ಕೆ ಕಾರಣವಾಗುತ್ತದೆ. ಇದಕ್ಕೆ ಸ್ಖಲನದ ಬಳಿಕ ಸಂಗ್ರಹಗೊಂಡ ವೀರ್ಯಾಣುಗಳ ಗುಣಮಟ್ಟ ಹಾಗೂ ಒಟ್ಟಾರೆ ಸಾಂದ್ರತೆ ಎರಡೂ ಮುಖ್ಯವಾಗಿರುತ್ತದೆ. ಪ್ರಮುಖವಾಗಿ ಎರಡು ಅಂಶಗಳು ಬಂಜೆತನಕ್ಕೆ ಕಾರಣವಾಗಿವೆ. ಮೊದಲನೆಯದಾಗಿ ವೀರ್ಯಾಣುಗಳ ಸಂಖ್ಯೆ ಪ್ರತಿ ಮಿಲೀ ನಲ್ಲಿ ಕನಿಷ್ಟ ಇರಬೇಕಾದುದಷ್ಟು ಇರದೇ ಇರುವುದು ಹಾಗೂ ಎರಡನೆಯದಾಗಿ ಈ ಸಂಖ್ಯೆಯಲ್ಲಿ ವೀರ್ಯಾಣುಗಳಿದ್ದರೂ ಅಂಡಾಣುವಿನೊಡನೆ ಕೂಡುವಷ್ಟು ದೂರ ಸಾಗಿ ಗುರಿ ತಲುಪಬಲ್ಲ ಶಕ್ತಿ ಹೊಂದಿರದೇ ಇರುವುದು. ಇವರಡರಲ್ಲಿ ಒಂದೂ ಇಲ್ಲದಿದ್ದರೂ ಫಲವಂತಿಕೆ ಸಾಧ್ಯವಿಲ್ಲ.

ಸಾಮಾನ್ಯವಾಗಿ ದಂಪತಿಗಳ ನಡುವಣ ಸಮಾಗಮ ಸುಗಮವಾಗಿದ್ದರೇ ಫಲವಂತಿಕೆ ಸಾಧ್ಯ ಎಂಬ ನಂಬಿಕೆ ಇದೆ. ಆದರೆ ಈ ಸ್ಥಿತಿ ಹೊಂದಿರುವ ಪುರುಷರಿಂದ ಸಮಾಗಮ ಸುಗಮವಾಗಿದ್ದರೂ ಬಂಜೆತನ ಕಂಡುಬರುತ್ತದೆ. ಆದರೆ ಪುರುಷರ ಈ ಬಂಜೆತನವನ್ನು ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವೇ ಇಲ್ಲ. ಈ ಕೊರತೆ ಇದ್ದ ಪುರುಷರು ಇತರ ಪುರುಷರಷ್ಟೇ ಆರೋಗ್ಯವಂತರಾಗಿದ್ದು ಉತ್ತಮ ಲೈಂಗಿಕ ಜೀವನವನ್ನೂ ನಡೆಸಿಕೊಂಡು ಹೋಗುತ್ತಿರುತ್ತಾರೆ. ಇವರಲ್ಲಿ ನಿಮಿರು ದೌರ್ಬಲ್ಯವಾಗಲೀ ಸ್ಖಲನದ ತೊಂದರೆಯಾಗಲೀ ಇರುವುದಿಲ್ಲ. ಇವರ ವೀರ್ಯಾಣುಗಳನ್ನು ಪ್ರಯೋಗಾಲಯದಲ್ಲಿ ಸೂಕ್ತ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕವಷ್ಟೇ ಈ ವೀರ್ಯಾಣುಗಳು ಅಂಡಾಣುವಿನೊಡನೆ ಕೂಡುವ ಸಾಮರ್ಥ್ಯ ಹಾಗೂ ಅಗತ್ಯ ಸಾಂದ್ರತೆ ಹೊಂದಿವೆಯೇ ಎಂದು ತೀರ್ಮಾನಿಸಬಹುದು.

ಪುರುಷ ಬಂಜೆತನಕ್ಕೆ ಕಾರಣಗಳು

* ಪುರುಷರ ದೇಹದಲ್ಲಿ ಸ್ರವಿಸುವ ಟೆಸ್ಟಾಸ್ಟೆರಾನ್ ಎಂಬ ರಸದೂತದ ಕೊರತೆಯಿಂದ ಸಾಕಷ್ಟು ಪ್ರಮಾಣದಲ್ಲಿ ವೀರ್ಯಾಣುಗಳು ಉತ್ಪತ್ತಿಯಾಗದೇ ಇರಬಹುದು.
* ಕೆಲವು ಶಸ್ತ್ರಚಿಕಿತ್ಸೆ, ಔಷಧದ ಅಡ್ಡ ಪರಿಣಾಮ ಅಥವಾ ಕ್ಯಾನ್ಸರ್, ವೃಷಣದ ಕ್ಯಾನ್ಸರ್ ಮೊದಲಾದ ಸ್ಥಿತಿಗಳೂ ಕಡಿಮೆ ವೀರ್ಯಾಣುಗಳ ಉತ್ಪನ್ನಕ್ಕೆ ಕಾರಣವಾಗಬಹುದು.
* ಕೆಲವೊಮ್ಮೆ, ವೃಷಣಗಳ ಮೇಲ್ಭಾಗದಲ್ಲಿ ಅನಗತ್ಯವಾದ ಬೆಳವಣಿಗೆ ಕಂಡುಬರಬಹುದು. ಅತಿ ಬಿಸಿ ಇರುವ ವಾತಾವರಣದಲ್ಲಿ ವ್ಯಾಯಾಮ ಮಾಡುವುದು, ಬಿಗಿಯಾದ ಒಳ ಉಡುಪು ಧರಿಸಿರುವುದು, ಸೌನಾ ಸ್ನಾನಗೃಹದ ಅತಿಯಾದ ಬಳಕೆ, ಬಿಸಿ ಹಬೆಯ ಸ್ನಾನದ ಅತಿಯಾದ ಬಳಿಕೆ, ತೊಡೆಸಂಧಿಯಲ್ಲಿ ನರಗಳು ತಿರುಚಿಕೊಂಡು ನೇರಳೆ ಬಣ್ಣ ಪಡೆಯುವ ವೆರಿಕೋಸ್ ನರಗಳು ಮೊದಲಾದವು ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಬಹುದು.
* ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಸ್ಥಿತಿ ಅನುವಂಶಿಕವಾಗಿ ಬಂದಿರಬಹುದು
* ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯೂ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು
* ಇತ್ತೀಚಿಗೆ ಕಂಡುಬಂದಿರುವ ಕೆಲವು ಪ್ರಕರಣಗಳಲ್ಲಿ 'atypical centriole'ಎಂಬ ಭಾಗದ ತೊಂದರೆಯನ್ನೂ ಕಂಡುಕೊಳ್ಳಲಾಗಿದೆ. ಈ ಸ್ಥಿತಿಯಿಂದ ಫಲವಂತಿಕೆ ಸಾಧ್ಯವಾದರೂ, ಸಾಮಾನ್ಯವಾಗಿ ಈ ಅಂಡಾಣು ಪರಿಪೂರ್ಣವಾಗಿರುವುದಿಲ್ಲ ಹಾಗೂ ಗರ್ಭಾಪಾತದಲ್ಲಿ ಪರ್ಯವಸಾನಗೊಳ್ಳುತ್ತದೆ.

English summary

Things That Can Harm a Man's Fertility

While the journey to pregnancy can be straightforward for some, others face roadblocks along the way. For the nearly 15 percent of American couples who do not conceive within the first year of trying (i.e., unprotected sex about two to three times a week), their journey has an official label: Infertility. Many factors can contribute to fertility troubles, and the health of both partners plays an important role. In fact, male infertility accounts for about half of the couples who are unable to conceive.
Story first published: Saturday, July 27, 2019, 17:00 [IST]
X