For Quick Alerts
ALLOW NOTIFICATIONS  
For Daily Alerts

ಮಗುವಿಗೆ ದಿನದಲ್ಲಿ ಎಷ್ಟು ಬಾರಿ ಹಾಲುಣಿಸಬೇಕು? ಇಲ್ಲಿದೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ

|

ಆಗಸ್ಟ್‌ 1- ಆಗಸ್ಟ್‌ 7ನ್ನು ವಿಶ್ವ ಎದೆ ಹಾಲುಣಿಸುವ ವಾರವಾಗಿ ಆಚರಿಸಲಾಗುವುದು. ನವಜಾತ ಶಿಶುವಿನ ಮೊದಲ ಆಹಾರವೇ ತಾಯಿಯ ಎದೆಹಾಲು, ಆರು ತಿಂಗಳವರೆಗೂ ತಾಯಿಯ ಎದೆಹಾಲು ಬಿಟ್ಟು ಬೇರೇನೂ ನೀಡಬಾರದು. ಮೊದಲ ಬಾಯಿ ತಾಯಿಯಾದವರಿಗೆ ಸ್ತನ್ಯಪಾನ ಮೊದಲ ಅನುಭವ. ಸಾಮಾನ್ಯವಾಗಿ ಹೆರಿಗೆಯಾದ ಮೇಲೆ ಮಕ್ಕಳ ತಜ್ಞರು ಅಥವಾ ಪ್ರಸೂತಿ ತಜ್ಞರು ಹೇಗೆ ಹಾಲುಡಿಸಬೇಕು ಎನ್ನುವುದರ ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ ಸ್ತನ್ಯಪಾನದ ಬಗ್ಗೆ ಸಲಹೆಯನ್ನು ನೀಡದೇಯೂ ಇರಬಹುದು. ತಾಯಿಯಾದ ಮೇಲೆ ಎಲ್ಲರೂ ಒಂದೊಂದು ರೀತಿ ಹೇಳಿಯೇ ಹೇಳುತ್ತಾರೆ, ಯಾವುದು ಕೇಳಬೇಕು, ಯಾವುದು ಬಿಡಬೇಕು ಎನ್ನುವ ಗೊಂದಲ ನಿಮ್ಮನ್ನು ಕಾಡಬಹುದು ಸ್ತನ್ಯಪಾನದ ಬಗ್ಗೆ ನಿಮಗಿರುವ ಎಲ್ಲಾ ಸಂಶಯಗಳಿಗೆ ಉತ್ತರ ಇಲ್ಲಿದೆ ನೋಡಿ.

ಮಗುವಿಗೆ ದಿನಕ್ಕೆಷ್ಟು ಬಾರಿ ಎದೆಹಾಲುಣಿಸಬೇಕು..?

ಮಗುವಿಗೆ ದಿನಕ್ಕೆಷ್ಟು ಬಾರಿ ಎದೆಹಾಲುಣಿಸಬೇಕು..?

ನವಜಾತ ಶಿಶುವಿಗೆ ಕೆಲವೊಂದು ವೈದ್ಯರು ಎರಡು ಗಂಟೆಗಳಿಗೊಮ್ಮೆ ಹಾಲು ನೀಡಬೇಕು ಎಂದು ಹೇಳುತ್ತಾರೆ. ನವಜಾತ ಶಿಶುಗಳಿಗೆ ಮೊದಲ ತಿಂಗಳು ತುಂಬುವವರೆಗೆ ದಿನಕ್ಕೆ 8-12 ಬಾರಿ ಹಾಲುಣಿಸಬೇಕು. ನವಜಾತ ಶಿಶುಗಳಿಗೆ ಎದೆಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ ನವಜಾತ ಶಿಶುಗಳಲ್ಲಿ ಹಸಿವೆ ಬೇಗ ಆಗುತ್ತೆ. ಆಗಾಗ್ಗೆ ಹಾಲು ನೀಡುವುದರಿಂದ ಮೊದಲ ಕೆಲವು ವಾರಗಳಲ್ಲಿ ನಿಮ್ಮ ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸಲೂ ಸಹಾಯ ಮಾಡುತ್ತೆ.

ಮಗುವಿಗೆ ಒಂದರಿಂದ ಎರಡು ತಿಂಗಳು ತುಂಬುವ ಹೊತ್ತಿಗೆ ದಿನಕ್ಕೆ 7ರಿಂದ 9 ಬಾರಿ ಹಾಲುಣಿಸಬೇಕಾಗುತ್ತದೆ.

ಮಗು ಜನಿಸಿದ ಮೇಲೆ ಮೊದಲ ಕೆಲವು ವಾರಗಳಲ್ಲಿ ನಿಮ್ಮ ಮಗು ಹಸಿದಿರುವಾಗ ಹಾಲು ನೀಡಬೇಕು. ಅಂದರೆ ಪ್ರತಿ ಒಂದೂವರೆ ಗಂಟೆಯಿಂದ ಮೂರು ಗಂಟೆಗಳಿಗೊಮ್ಮೆ ಹಾಲು ನೀಡಬೇಕು. ತಿಂಗಳು ತಿಂಗಳು ಮಗು ಬೆಳವಣಿಗೆ ಹೊಂದುತ್ತಿದ್ದಂತೆ ಹಾಲು ಕುಡಿಯುವ ಸಮಯ ಬದಲಾಗುತ್ತಾ ಹೋಗುತ್ತದೆ. ನವಜಾತ ಶಿಶು ದೀರ್ಘನಿದ್ದೆ ಮಾಡಿದರೆ ಎಬ್ಬಿಸಿಯಾದರೂ ಹಾಲು ನೀಡಬೇಕೆಂದು ವೈದ್ಯರು ಹೇಳಿರುವುದನ್ನು ನೀವು ಕೇಳಿರಬಹುದು.ನವಜಾತ ಶಿಶುಗಳಿಗೆ ರಾತ್ರಿಯೂ ನಾಲ್ಕು ಗಂಟೆಗಳಿಗಿಂತಹ ಹೆಚ್ಚು ಸಮಯ ಎದೆಹಾಲು ನೀಡದೇ ಇರಲೇಬಾರದು.

ಹಾಲುಣಿಸುವ ನಡುವಿನ ಸಮಯವನ್ನು ಹೇಗೆ ಎಣಿಸಬೇಕು..?

ಹಾಲುಣಿಸುವ ನಡುವಿನ ಸಮಯವನ್ನು ಹೇಗೆ ಎಣಿಸಬೇಕು..?

ಕೆಲವರು ಮಗುವಿಗೆ ಎದೆಹಾಲುಣಿಸುವ ಸಮಯವನ್ನು ನೋಡುತ್ತಾರೆ. ನಂತರದ ಎದೆಹಾಲುಣಿಸುವ ಅವಧಿಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅರೇ ಹೀಗೆಲ್ಲಾ ಮಾಡಬೇಕಾ.. ಎನ್ನುವುದಾದರೆ ಹೌದು.. ಮೊದಲೇ ಹೇಳಿದಂತೆ ಮಗುವಿಗೆ ಎರಡು ಗಂಟೆಗಳಿಗೊಮ್ಮೆ ಎದೆಹಾಲು ನೀಡಬೇಕು.ಅದನ್ನು ಹೇಗೆ ಲೆಕ್ಕಹಾಕುವುದೆಂದರೆ. ಬೆಳಗ್ಗೆ ನೀವು ಆರು ಗಂಟೆಗೆ ಎದೆಹಾಲು ನೀಡಿದರೆ ನಂತರದ ಫೀಡಿಂಗ್‌ ಎಂಟು ಗಂಟೆಗೆ ಆಗಿರಬೇಕು ಇದಾದ ನಂತರ ಹತ್ತು ಗಂಟೆಗೆ ಹೀಗೆ ಎರಡು ಗಂಟೆಗಳ ಅವಧಿಗೊಮ್ಮೆ ಹಾಲು ನೀಡಬೇಕು.ಹೆರಿಗೆಯಾದ ನಂತರ ವೈದ್ಯರ ಮೊದಲ ಭೇಟಿ ಇದ್ದಾಗ ವೈದ್ಯರು ದಿನಕ್ಕೆ ಎಷ್ಟು ಬಾರಿ ಹಾಲು ಎಂದು ಕೇಳುತ್ತಾರೆ.

ಎಷ್ಟು ಅವಧಿಯವರೆಗೆ ಹಾಲುಡಿಸಬೇಕು..?

ಎಷ್ಟು ಅವಧಿಯವರೆಗೆ ಹಾಲುಡಿಸಬೇಕು..?

ನವಜಾತ ಶಿಶುವಿಗೆ ಎಷ್ಟು ಹೊತ್ತು ಹಾಲುಡಿಸಬೇಕು ಎನ್ನುವುದು ತಿಳಿದಿರುವುದಿಲ್ಲ. ಕೆಲವರು ಅರ್ಧ ಗಂಟೆಯವರೆಗೂ ಹಾಲುಡಿಸುತ್ತಾರೆ. ಕೆಲವರೂ ಇನ್ನೂ ದೀರ್ಘ ಸಮಯ ತೆಗೆದುಕೊಳ್ಳಬಹುದು.ಆದರೆ ನವಜಾತ ಶಿಶುವಿಗೆ ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಹಾಲುಡಿಸಬೇಕು. ಒಂದೇ ಸ್ತನ ಅಥವಾ ಎರಡೂ ಸ್ತನಗಳನ್ನು ಬದಲಾಯಿಸಿಯೂ ಹಾಲು ನೀಡಬಹುದು. ಮಗು ಬೆಳವಣಿಗೆ ಹೊಂದುತ್ತಿದ್ದಂತೆ ಸ್ತನ್ಯಪಾನದ ರುಟೀನ್‌ಗೆ ಹೊಂದಿಕೊಳ್ಳುತ್ತವೆ. ಪ್ರತಿ ಸ್ತನದಲ್ಲಿ ಐದರಿಂದ ಹತ್ತು ನಿಮಿಷಗಳವರೆಗೆ ಹಾಲು ಕುಡಿಯಬಹುದು.

ಇನ್ನೊಂದು ವಿಚಾರವೆಂದರೆ ನೀವು ಸ್ತನ್ಯಪಾನ ಮಾಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಎನ್ನುವುದು ನಿಮ್ಮ ಹಾಗೂ ಮಗುವಿನ ಮತ್ತು ಇತರ ವಿಷಯಗಳನ್ನು ಅವಲಂಬಿಸಿರುತ್ತೆ. ಕೆಲವೊಮ್ಮೆ ಹೆರಿಗೆಯಾದ ಎರಡರಿಂದ ಐದು ದಿನಗಳ ನಂತರ ಕೆಲವರಿಗೆ ಎದೆಹಾಲು ಉತ್ಪತ್ತಿ ಆಗುತ್ತೆ. ಹಾಗಾಗಿ ಎದೆಹಾಲುಣಿಸುವ ಸಮಯ ಬದಲಾಗಬಹುದು. ಕೆಲವರಿಗೆ ಎದೆಹಾಲು ನೀಡಿದ ತಕ್ಷಣ ಅಥವಾ ನಿಮಿಷಗಳ ನಂತರ ಮೊಲೆತೊಟ್ಟಿನಿಂದ ಹಾಲು ಹರಿಯಲು ಆರಂಭವಾಗುತ್ತದೆ.

ಕೆಲವೊಮ್ಮೆ ಒಂದು ಮೊಲೆಯಲ್ಲಿ ಹಾಲುಣಿಸುವಾಗ ಇನ್ನೊಂದು ಬದಿಯ ಮೊಲೆಯಿಂದ ಹಾಲು ಹರಿಯಬಹುದು. ಕೆಲವೊಮ್ಮೆ ಎದೆಹಾಲಿನ ಹರಿವು ವೇಗ ಅಥವಾ ನಿಧಾನವಾಗಿಯೂ ಇರಬಹುದು. ಇದರಿಂದಾಗಿಯೂ ಮಗುವಿಗೆ ಹಾಲುಣಿಸುವ ಸಮಯ ಬದಲಾಗಬಹುದು.ಎದೆಹಾಲುಣಿಸುವಾಗ ಮೊಲೆತೊಟ್ಟಿನ ಸುತ್ತಲಿನ ಕಪ್ಪು ವೃತ್ತಕಾರದ ಮಗುವಿನ ಬಾಯಿಯೊಳಗೆ ಇರಬೇಕು. ಕೆಲವೊಮ್ಮೆ ಮಗು ಹಾಲು ಕುಡಿಯುವುದು ನಿಧಾನವಾಗಿರಬಹುದು. ಅಥವಾ ಹಾಲು ಕುಡಿಯುತ್ತಾ ಮಲಗಬಹುದು. ಮಗು ಮೇಲೆ ತಿಳಿಸಿದ ಅವಧಿಗಿಂತ ಕಡಿಮೆ ಹಾಲು ಕುಡಿಯುತ್ತಿದ್ದಲ್ಲಿ ಅಥವಾ ದೀರ್ಘಾವಧಿಯವರೆಗೂ ಹಾಲು ಚೀಪುತ್ತಲೇ ಇದ್ದಲ್ಲಿ ವೈದ್ಯರ ಸಲಹೆ ಅಗತ್ಯವಾಗಿ ತೆಗೆದುಕೊಳ್ಳಿ.

ಯಾವ ಸಮಯದಲ್ಲಿ ಸ್ತನಗಳನ್ನು ಬದಲಿಸಬೇಕು

ಯಾವ ಸಮಯದಲ್ಲಿ ಸ್ತನಗಳನ್ನು ಬದಲಿಸಬೇಕು

ಕೆಲವರು ಒಂದೇ ಬದಿಯ ಸ್ತನದಲ್ಲಿ ಹೆಚ್ಚು ಹಾಲು ನೀಡುತ್ತಾರೆ. ಆದರೆ ಹಾಗೆ ಮಾಡಬೇಡಿ. ಎರಡೂ ಸ್ತನಗಳಿಂದಲೂ ಹಾಲುಡಿಸಿ. ಎರಡು ಸ್ತನದಲ್ಲೂ ಒಂದೇ ಪ್ರಮಾಣದಲ್ಲಿ ಹಾಲುಡಿಸಲು ಪ್ರಯತ್ನಿಸಿ. ಇದು ಎರಡೂ ಸ್ತನದಲ್ಲೂ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದೇ ಸ್ತನದಿಂದ ಹಾಲುಡಿಸುವುದರಿಂದ ಇನ್ನೊಂದು ಸ್ತನದಲ್ಲಿ ಹಾಲು ತುಂಬಿ ನೋವು ಪ್ರಾರಂಭವಾಗಬಹುದು. ಹಾಗಾಗಿ ಎರಡೂ ಸ್ತನಗಳಿಂದ ಹಾಲುಡಿಸುವ ಅಭ್ಯಾಸ ಒಳ್ಳೆಯದು.

ಪ್ರತಿಬಾರಿ ಹಾಲುಡಿಸುವಾಗಲೂ ಎರಡೂ ಸ್ತನಗಳನ್ನು ಬದಲಾಯಿಸಬಹುದು. ಇಲ್ಲವಾದರೆ ಒಂದು ಅವಧಿಯಲ್ಲಿ ಎಡಭಾಗದ ಸ್ತನದಿಂದ ಹಾಲುಡಿಸಿದರೆ ನಂತರದ ಹಾಲುಡಿಸುವ ಅವಧಿಯಲ್ಲಿ ಬಲಭಾಗದ ಸ್ತನದಿಂದ ಹಾಲುಡಿಸಬಹುದು. ಕೆಲವೊಮ್ಮೆ ಮಕ್ಕಳು ಕಂಫರ್ಟ್‌ ಬಯಸುತ್ತಾರೆ. ಯಾವುದಾದರೂ ಒಂದೇ ಬದಿಯಲ್ಲಿ ಹಾಲುಕುಡಿಯಲು ಬಯಸಬಹುದು. ಹೀಗಾಗಿ ಎರಡೂ ಬದಿಯಲ್ಲಿ ಹಾಲುಡಿಸುವುದನ್ನು ಅಭ್ಯಾಸ ಮಾಡಿಸಿ.

ಹಾಲು ಕುಡಿಸಿದ ನಂತರ ತೇಗು ತೆಗಿಯಲೇಬೇಕೆ..?

ಹಾಲು ಕುಡಿಸಿದ ನಂತರ ತೇಗು ತೆಗಿಯಲೇಬೇಕೆ..?

ಕೆಲವು ವೈದ್ಯರು ಬರ್ಪ್‌ ಅಂದರೆ ತೇಗು ಬರಿಸಲೇಬೇಕು ಎನ್ನುತ್ತಾರೆ ಕೆಲವರು ಭುಜದಲ್ಲಿ ಹಾಕಿಕೊಂಡು ಸ್ವಲ್ಪ ಓಡಾಡಿದರೆ ಸಾಕು ಎನ್ನುತ್ತಾರೆ. ಯಾಕೆಂದರೆ ಕೆಲವೊಮ್ಮೆ ಮಗುವಿಗೆ ಹಾಲು ಕುಡಿಸಿ ಹಾಗೆಯೇ ಮಲಗಿಸಿದರೆ ಕುಡಿದ ಹಾಲು ಬಾಯಿ ಮೂಗಿನಲ್ಲಿ ಬದುವ ಸಾಧ್ಯೆ ಹೆಚ್ಚಿರುತ್ತದೆ. ಹಾಗಾಗಿ ಹಾಲುಡಿಸುವಾಗ ಸ್ತನಗಳನ್ನು ಬದಲಾಯಿಸುವ ಮಧ್ಯದಲ್ಲಿ ತೇಗು ಬರುವಂತೆ ಮಾಡಿ. ಇಲ್ಲವಾದರೆ ನಿಮ್ಮ ಭುಜದ ಮೇಲೆ ಮಗುವನ್ನು ಮಲಗಿಸಿ ಆಚೀಚೆ ಓಡಾಡಿ. ಕೆಲವು ಮಕ್ಕಳಿಗೆ ಅಂದರೆ ಮುಖ್ಯವಾಗಿ ಹೆಚ್ಚು ಹಾಲು ಕುಡಿಯುವ ಮಕ್ಕಳಿಗೆ ತೇಗು ತೆಗೆಯುವುದು ಅಗತ್ಯವಿರುತ್ತದೆ. ಕೆಲವೊಮ್ಮೆ ಇದು ಕುಡಿಯುವ ಪ್ರಮಾಣಕ್ಕೆ ಬದಲಾಗಬಹುದು.

ಕೆಲವೊಮ್ಮೆ ಮಗು ತೇಗುವಾಗ ಮಿಕ್ಕಿದ ಹಾಲು ಉಗುಳಬಹುದು. ಗಾಬರಿಯಾಗಬೇಡಿ ಇದು ಸಾಮಾನ್ಯ. ಸ್ವಲ್ಪ ಪ್ರಮಾಣದಲ್ಲಿ ವಾಂತಿಯಾದರೆ ಹೆದರಬೇಕಾದ ಅವಶ್ಯಕತೆ ಇಲ್ಲ. ಆದರೆ ಕುಡಿದ ಎಲ್ಲಾ ಹಾಲನ್ನು ಅಥವಾ ಹೆಚ್ಚು ಹಾಲು ವಾಂತಿ ಮಾಡಿದರೆ ವೈದ್ಯರನ್ನು ಕಾಣುವುದು ಅವಶ್ಯ.

ಮಗುವಿಗೆ ಸಾಮಾನ್ಯಕ್ಕಿಂತ ಹೆಚ್ಚು ಹಸಿವಾಗುತ್ತಿದ್ದರೆ..?

ಮಗುವಿಗೆ ಸಾಮಾನ್ಯಕ್ಕಿಂತ ಹೆಚ್ಚು ಹಸಿವಾಗುತ್ತಿದ್ದರೆ..?

ಶಿಶುಗಳು ವೇಗವಾದ ಬೆಳವಣಿಗೆಯ ಹಂತವನ್ನು ಹಾದುಹೋಗುವಾಗ ಹೆಚ್ಚು ಹಸಿವು ಅನುಭವಿಸುತ್ತಾರೆ. ಈ ಸಮಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಹಾಲು ಕುಡಿಯಲು ಬಯಸುತ್ತಾರೆ. ಇದು ಯಾವ ತಿಂಗಳಲ್ಲಾದರೂ ಸಂಭವಿಸಬಹುದು. ಆದರೆ ಆರಂಭಿಕ ತಿಂಗಳಲ್ಲಿ ಅಂದರೆ 7-14 ದಿನಗಳಲ್ಲಿ, ಎರಡು, ನಾಲ್ಕು ಮತ್ತು ಆರನೇ ತಿಂಗಳಲ್ಲಿ ಹೆಚ್ಚು ಹಸಿವಾಗಬಹುದು

ಈ ಸಮಯದಲ್ಲಿ ಮಕ್ಕಳು ಹೆಚ್ಚು ಹಸಿವಾದಾಗ ಸೂಚನೆಯನ್ನು ನೀಡುತ್ತವೆ. ಅದು ಅಳುವುದಾಗಿರಬಹುದು ಅಥವಾ ಕೈಗಳನ್ನು ಬಾಯಿಗೆ ಹಾಕಿಕೊಳ್ಳುವುದಾಗಿರಬಹುದು. ಇದನ್ನು ಗಮನಿಸಿ. ಹೀಗಾದಾಗ ಸ್ತನ್ಯಪಾನ ಮಾಡಿಸಿ.

ಮಗುವಿಗೆ ಎಷ್ಟು ಕಾಲ ಸ್ತನ್ಯಪಾನ ಮಾಡಿಸಬೇಕು..?

ಮಗುವಿಗೆ ಎಷ್ಟು ಕಾಲ ಸ್ತನ್ಯಪಾನ ಮಾಡಿಸಬೇಕು..?

ಇದು ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ. ಕೆಲವರು ಹೆಣ್ಣುಮಗುವಿಗೆ ಕಡ್ಡಾಯವಾಗಿ ಒಂದೂವರೆ ವರ್ಷದವರೆಗೂ ಹಾಲುಡಿಸಬೇಕು ಎನ್ನುತ್ತಾರೆ. ಗಂಡುಮಕ್ಕಳಿಗೆ ಒಂದು ವರ್ಷ ತುಂಬುವಾಗ ಹಾಲು ಬಿಡಿಸಿದರೆ ಒಳ್ಳೆಯದು ಎನ್ನುತ್ತಾರೆ. ಆದರೆ ಆರು ತಿಂಗಳವರೆಗೆ ಮಗುವಿಗೆ ಕಡ್ಡಾಯವಾಗಿ ಎದೆಹಾಲು ನೀಡಲೇಬೇಕು. ಅದು ಮಗುವಿನ ಆಹಾರದ ಹಕ್ಕೂ ಆಗಿದೆ. ಅಲ್ಲಿಯವರೆಗೂ ಮಗುವಿಗೆ ಹಣ್ಣಿನ ರಸ, ನೀರೂ ಕೊಡಬಾರದು ಎಂದು ಕೆಲವು ವೈದ್ಯರು ಹೇಳುತ್ತಾರೆ. ಆರು ತಿಂಗಳ ನಂತರ ಸಾಮಾನ್ಯವಾಗಿ ಎಲ್ಲರೂ ಎದೆಹಾಲಿನ ಜೊತೆಗೆ ಇತರ ಶಿಶುವಿನ ಆಹಾರವನ್ನು ನೀಡಲಾರಂಭಿಸುತ್ತಾರೆ. ಆದರೂ ಒಂದು ವರ್ಷದವರೆಗೂ ಮಗು ಎದೆಹಾಲು ಕುಡಿಯುತ್ತಿದ್ದರೆ ನೀವೂ ಮುಂದುವರಿಸಬಹುದು. ಮಗುವಿಗೆ ಎರಡು ವರ್ಷದವರೆಗೂ ಹಾಲುಡಿಸಬಹುದು ತಪ್ಪೇನಿಲ್ಲ.

ಸ್ತನ್ಯಪಾನದಿಂದ ಸಮಸ್ಯೆ ಏನಿಲ್ಲ. ಇದರಿಂದ ಪ್ರಯೋಜನಗಳೇ ಹೆಚ್ಚು. ಇತ್ತೀಚಿನ ಯುವತಿಯರು ಸ್ತನ ಜೋತು ಬೀಳುತ್ತದೆ ಎನ್ನುವ ಕಾರಣಕ್ಕೆ ವರ್ಷ ತುಂಬುವ ಮೊದಲೇ ಮಗುವಿಗೆ ಎದೆಹಾಲುಡಿಸುವುದು ನಿಲ್ಲಿಸಿ ಬಿಡುವುದಿದೆ. ಹಾಗೆ ಮಾಡಬೇಡಿ. ಸ್ತನಪಾನವು ಮಗುವನ್ನು ಅತಿಸಾರ, ಕಿವಿಯ ಸೋಂಕು ಮತ್ತು ಮೆನಿಂಜೈಟಿಸ್‌ನಂತಹ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಅಥವಾ ರೋಗಲಕ್ಷಣಗಳನ್ನೂ ಕಡಿಮೆ ಮಾಡಬಹುದು. ಸ್ತನ್ಯಪಾನವು ಹಠಾತ್‌ ಶಿಶು ಮರಣ, ಮಧುಮೇಹ, ಸ್ಥೂಲಕಾಯ ಮತ್ತು ಅಸ್ತಮಾದಿಂದಲೂ ಮಕ್ಕಳನ್ನು ರಕ್ಷಿಸುತ್ತದೆ.

ಎದೆಹಾಲುಣಿಸುವುದು ಮಗುವಿಗೆ ಮಾತ್ರವಲ್ಲ ಅಮ್ಮಂದಿರಿಗೂ ಪ್ರಯೋಜನಕಾರಿ. ಇದು ಕ್ಯಾಲೋರಿ ಕರಗಿಸಲು ಸಹಕಾರಿ ಮತ್ತು ಗರ್ಭಾಶಯವನ್ನು ಕುಗ್ಗಿಸಲೂ ಸಹಾಯ ಮಾಡುತ್ತದೆ. ಎದೆಹಾಲುಣಿಸುವ ಮೂಲಕ ಪೋಸ್ಟ್‌ ಪ್ರೆಗ್ನೆನ್ಸಿಯಲ್ಲಿದ್ದ ದೇಹ ತೂಕ ಮತ್ತು ಆಕಾರವನ್ನು ಮರಳಿ ಪಡೆಯಬಹುದು. ಅಲ್ಲದೇ ಎದೆಹಾಲುಣಿಸುವಿಕೆ ಸ್ತನಕ್ಯಾನ್ಸರ್‌. ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯದ ಖಾಯಿಲೆ, ಗರ್ಭಕೋಶ ಮತ್ತು ಅಂಡಾಶಯದ ಕ್ಯಾನ್ಸರ್‌ನ ಅಪಾಯವನ್ನೂ ಕಡಿಮೆಗೊಳಿಸುತ್ತದೆ.ಇಷ್ಟು ಮಾತ್ರವಲ್ಲ ಎದೆಹಾಲುಣಿಸುವ ಪ್ರಕ್ರಿಯೆಯು ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ.

English summary

breast feeding frequency How Much and How Often in kannada

world breastfeeding week: How much and how often breast feeding frequency good for baby,read on
X
Desktop Bottom Promotion