For Quick Alerts
ALLOW NOTIFICATIONS  
For Daily Alerts

ಒನಕೆ ಓಬವ್ವ ಜಯಂತಿ 2021: ಏಕಾಂಗಿಯಾಗಿ ನೂರಾರು ಸೈನಿಕರನ್ನು ಹೊಡೆದುರುಳಿಸಿದ ಓಬವ್ವನ ಕಥೆ ಗೊತ್ತಾ?

|

ನಾಡಿನ ವೀರ ವನಿತೆಯರ ಸಾಲಿಗೆ ಸೇರುವ ಚಿತ್ರದುರ್ಗದ ಒನಕೆ ಓಬವ್ವ 18ನೆಯ ಶತಮಾನದಲ್ಲೇ ಸಾಹಸಿ, ದಿಟ್ಟ, ವಿರೋಧಿಗಳ ವಿರುದ್ಧ ಹೋರಾಡಿದ ಮಹಿಳೆ. ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರ ಮಹಿಳೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

ನವೆಂಬರ್‌ 11ರಂದು ಓಬವ್ವರ ಜನ್ಮದಿನದ ಗೌರವಾರ್ಥ ರಾಜ್ಯದಾದ್ಯಂತ ಒನಕೆ ಓಬವ್ವ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ನಾವಿಂದು ನಿಮಗೆ ಅಂದಿನ ಕಾಲದಲ್ಲೇ ತನ್ನ ದಿಟ್ಟತನ, ಸಾಹಸಿ ಪ್ರವೃತ್ತಿ ತೋರಿದ್ದ, ನೂರಾರು ಸೈನಿಕರನ್ನು ಹೊಡೆದುರುಳಿಸಿದ ಓಬವ್ವ ಹೇಗೆ ವೀರ ವನಿತೆಯಾದಳು ಎಂಬುದರ ಬಗ್ಗೆ ಸವಿವರ ಮಾಹಿತಿ ನೀಡಲಿದ್ದೇವೆ:

1. ಓಬವ್ವರ ಹಿನ್ನೆಲೆ

1. ಓಬವ್ವರ ಹಿನ್ನೆಲೆ

ಒನಕೆ ಓಬವ್ವ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯ ಛಲವಾದಿ ಕಹಳೆ ಚಿನ್ನಪ್ಪನ ಮಗಳು. ಚಿತ್ರದುರ್ಗದಲ್ಲಿ ಪಾಳೆಗಾರರು ಆಡಳಿತ ನಡೆಸುವ ಸಮಯದಲ್ಲಿ ಗುಡೇಕೋಟೆ ಸಂಸ್ಥಾನವು ಒಂದು ಸಾಮಂತ ರಾಜ್ಯವಾಗಿತ್ತು. ಈ ಸಂಸ್ಥಾನದಲ್ಲಿ ಛಲವಾದಿ ವಂಶಸ್ಥನಾದ ಚಿನ್ನಪ್ಪ ಅಂದರೆ ಓಬವ್ವರ ತಂದೆ ಆಗಿನ ದೊರೆಗಳಿಗೆ ಅಚ್ಚುಮೆಚ್ಚಿನ ಆಪ್ತರೂ ಹಾಗೂ ಕಹಳೆಯವನೂ ಆಗಿದ್ದ. ಈತನಿಗೆ ಕದುರಪ್ಪ, ತಿಮ್ಮಣ್ಣ ಮತ್ತು ಓಬವ್ವ ಎಂಬ ಮೂವರು ಮಕ್ಕಳಿದ್ದರು. 1761ರಲ್ಲಿ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಚಲವಾದಿ ಸಮುದಾಯದ ಕಹಳೆ ಮದ್ದಹನುಮಪ್ಪನವರ ಜೊತೆ ಓಬವ್ವರ ವಿವಾಹ ನಡೆಯುತ್ತದೆ.

2. ಹೈದರಾಲಿ ಸೈನಿಕರನ್ನು ಹೊಡೆದುರುಳಿಸಿದ ಓಬವ್ವ

2. ಹೈದರಾಲಿ ಸೈನಿಕರನ್ನು ಹೊಡೆದುರುಳಿಸಿದ ಓಬವ್ವ

ಹೈದರಾಲಿಯು ಚಿತ್ರದುರ್ಗದ ಮೇಲೆ 1766ರಲ್ಲಿ ಹಠಾತ್ತಾಗಿ ಆಕ್ರಮಣ ಮಾಡುತ್ತದೆ. ಸಾಮಾನ್ಯ ರಾಜ,ರಾಣಿ, ಸೈನಿಕರು ಯುದ್ಧ ಕೌಶಲ್ಯವನ್ನು ಕಲಿತು ಕರಗತ ಮಾಡಿಕೊಂಡು ಶತ್ರುಗಳ ವಿರುದ್ಧ ಹೋರಾಡುತ್ತಾರೆ. ಆದರೆ ಏನೂ ತಿಳಿಯದ ಸಾಮಾನ್ಯ ಸದ್ಗೃಣಿಯಾಗಿದ್ದ, ಕಾವುಲುಗಾರನ ಹೆಂಡತಿ ಯಾವುದೆ ಯುದ್ದ ಕೌಶಲ್ಯ ತಿಳಿಯದ, ಸಾಮಾನ್ಯ ಮಹಿಳೆ ವೈರಿಗಳಿಂದ ತನ್ನ ಕೋಟೆಯನ್ನು ರಕ್ಷಣೆ ಮಾಡಿದ ಆ ದಿಟ್ಟತನ ಎಲ್ಲರು ಮೆಚ್ಚೆಲೆ ಬೇಕು.

3. ಓನಕೆಯೇ ಅಸ್ತ್ರ

3. ಓನಕೆಯೇ ಅಸ್ತ್ರ

ಓಬವ್ವ ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿ ಎದುರಾಳಿಯ ಕತ್ತಿಗೆ ಬಲಿಯಾದಳು. ಒನಕೆ ಓಬವ್ವಳ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಆಕೆಯನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬಳೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಆಕೆಯ ಹೆಸರನ್ನಿಟ್ಟು ಆಕೆಗೆ ಗೌರವಿಸಲಾಗಿದೆ.

4. ಏಕಾಂಗಿಯಾಗಿ ಹೋರಾಡಿದ ಓಬವ್ವ

4. ಏಕಾಂಗಿಯಾಗಿ ಹೋರಾಡಿದ ಓಬವ್ವ

ಹೈದರ್ ಈ ಅಭೇದ್ಯ ದುರ್ಗವನ್ನು ತಿಂಗಳುಗಟ್ಟಲೆ ಮುತ್ತಿಗೆ ಹಾಕಿ ಸ್ವಾಧೀನಪಡಿಸಿಕೊಳ್ಳಲಾರದೆ ಹೋದ. ಕಡೆಗೆ ತನ್ನ ಶತ್ರುವನ್ನು ಭೇದೋಪಾಯದಿಂದಲೇ ಗೆಲ್ಲಬೇಕೆಂದು ಬಯಸಿ, ತನ್ನ ಬೇಹುಗಾರರನ್ನು ಕರೆದು ಕೋಟೆಯ ಕಳ್ಳದಾರಿಗಳನ್ನು ಪತ್ತೆಮಾಡಿ ತಿಳಿಸಬೇಕೆಂದು ಆಜ್ಞೆಮಾಡಿದ. ವೇಷಧಾರಿಗಳಾದ ಆ ಬೇಹುಗಾರರನ್ನು ಕೋಟೆಯ ಸುತ್ತಲೂ ಸುಳಿದಾಡುತ್ತಿರುವಾಗ, ಒಂದು ಪಾರ್ಶ್ವದಲ್ಲಿ ಒಬ್ಬ ಹೆಂಗಸು ಮೊಸರಿನ ಮಡಕೆಯನ್ನು ತಲೆಯ ಮೇಲೆ ಹೊತ್ತುಕೊಂಡು ಆ ಕೋಟೆಯ ಕಡೆ ನಡೆದು ಅದೃಶ್ಯಳಾದದ್ದು ಗಮನಕ್ಕೆ ಬಂತು. ಶತ್ರುಗಳು ಆ ದಿಕ್ಕಿನಲ್ಲಿ ಎಲ್ಲಿಯೋ ಕಳ್ಳಗಿಂಡಿಯಿರಬೇಕೆಂದು ತರ್ಕಿಸಿ ಹುಡುಕತೊಡಗಿದಾಗ, ಬಂಡೆಗಳ ಮಧ್ಯೆ ನುಸುಳಿಕೊಂಡು ಹೋಗುವಂತೆ ಒಂದು ಇಕ್ಕಟ್ಟಾದ ಮಾರ್ಗವಿರುವುದು ಸ್ಪಷ್ಟವಾಯಿತು. ಈ ಸುದ್ದಿಯನ್ನು ಕೇಳಿದ ನವಾಬನಿಗೆ ತುಂಬ ಸಂತೋಷವಾಯಿತು. ಶತ್ರುಸೈನಿಕರು ಒಬ್ಬೊಬ್ಬರಾಗಿ ಆ ದಾರಿಯ ಮೂಲಕ ಒಳಕ್ಕೆ ಹೋಗಲು ನಿಶ್ಚಯಿಸಿಕೊಂಡರು.

ಆ ಕಳ್ಳದಾರಿಯ ಒಳಭಾಗಕ್ಕೆ ಸ್ವಲ್ಪ ದೂರದಲ್ಲಿಯೇ ಒಂದು ಕೊಳ ಹಾಗೂ ಒಂದು ಕಲ್ಲಿನ ಅಡಿ ಇದ್ದ ಕಾವಲುಗಾರನ ಮನೆಯೂ ಇತ್ತು. ಸರ್ಪಗಾವಲು ಕಾಯುತ್ತಿದ್ದ ಕಾವಲುಗಾರ ಸ್ವಲ್ಪ ಬಿಡುವು ಮಾಡಿಕೊಂಡು ತನ್ನ ಗುಡಿಸಿಲಿನಲ್ಲಿ ಊಟಮಾಡುತ್ತಿರುವಾಗ್ಗೆ ಅವನ ಹೆಂಡತಿ ಓಬವ್ವ ನೀರು ತರಲೆಂದು ಕೊಳದ ಬಳಿಗೆ ಬಂದಳು. ಆ ವೇಳೆಗೆ ಕಳ್ಳಗಿಂಡಿಯ ಸಮೀಪದಲ್ಲಿ ಶತ್ರುಸೈನಿಕರು ಹೊಂಚುಹಾಕಿ, ಪಿಸಿಪಿಸಿ ಮಾತುಗಳನ್ನಾಡುತ್ತಿದ್ದುದು ಅವಳಿಗೆ ಕೇಳಿಸಿತು. ಆಕೆಗೆ ಆ ಸೂಕ್ಷ್ಮದ ಅರಿವಾಗಿ, ಕೂಡಲೆ ಗುಡಿಸಲಿಗೆ ಬಂದು ಕೈಗೆ ಸಿಕ್ಕ ತೆಗೆದುಕೊಂಡು ಬಂದು ಆ ಕಳ್ಳಗಿಂಡಿಯ ಬಳಿ ನಿಂತಳು.

ಹೈದರಲಿಯ ಪರ ಸೈನಿಕರು ಒಬ್ಬೊಬ್ಬರಾಗಿ ನುಸುಳಿ ಬರುವುದೇ ತಡ, ಓಬವ್ವ ಅವರ ತಲೆಯನ್ನು ಒನಕೆಯಿಂದ ಹೊಡೆದು ಕೆಡವುತ್ತಿದ್ದಳು. ಈ ಹತ್ಯೆ ಕೆಲಕಾಲ ಹೀಗೆಯೇ ಸಾಗಿತು. ಓಬವ್ವನ ಗಂಡ ಮನೆಯಲ್ಲಿ ತನ್ನ ಹೆಂಡತಿಯನ್ನು ಕಾಣದೆ ಹುಡುಕಿಕೊಂಡು ಕಳ್ಳಕಂಡಿಯ ಹತ್ತಿರಕ್ಕೆ ಬಂದಾಗ ಆಕೆಯ ಮುಂದೆ ಬಿದ್ದಿದ್ದ ಹೆಣದ ರಾಶಿಯನ್ನೂ ಹರಿಯುತ್ತಿದ್ದ ರಕ್ತದ ಕಾಲುವೆಯನ್ನೂ ಕಂಡು ಕಂಗೆಟ್ಟ, ಆಕೆಯ ಹೆಸರು ಹಿಡಿದು ಕೂಗುತ್ತ ಮುಂದುವರಿಯಲು ವೀರಾವೇಶದಲ್ಲಿ ಮೈಮರೆತ್ತಿದ್ದ ಓಬವ್ವ ತನ್ನ ಗಂಡನನ್ನೂ ಹೊಡೆಯುವುದರಲ್ಲಿದ್ದಳು. ಗಂಡ ದೂರ ಸರಿದು, ಕೆಲಸ ಕೆಟ್ಟಿತೆಂದು ಎಣಿಸಿ ಕೂಡಲೆ ಕಹಳೆಯನ್ನು ಊದಿದ.

ಆ ಎಚ್ಚರಿಕೆಯ ದನಿಯನ್ನು ಕೇಳಿದ ಒಡನೆಯೇ ಮದಕರಿನಾಯಕನ ಸೈನಿಕರು ಅತ್ತ ಧಾವಿಸಿಬಂದರು. ಶತ್ರುಸೈನಿಕರೊಂದಿಗೆ ಯುದ್ಧ ಮೊದಲಾಯಿತು. ಆ ಗೊಂದಲದಲ್ಲಿಯೇ ಕಳ್ಳಕಿಂಡಿಯಿಂದ ಬಂದಿದ್ದ ಶತ್ರುಸೈನಿಕನೊಬ್ಬ ಓಬವ್ವನ ಬೆನ್ನಿಗೆ ಚೂರಿ ಹಾಕಿದ ಮತ್ತೆ ಆ ಶತ್ರು ಸೈನಿಕನನ್ನು ಕೊಂದ ಓಬವ್ವ ಹೆಮ್ಮೆಯಿಂದ ಸಾರ್ಥಕತೆಯ ಪ್ರಾಣ ಬಿಟ್ಟಳು.

ಕಾವಲುಗಾರನ ಹೆಂಡತಿಯಾದ ಓಬವ್ವನ ಆ ಪರಾಕ್ರಮದ ಕುರುಹಾಗಿ ಆ ಕಳ್ಳಗಿಂಡಿಗೆ ಒನಕೆಯ ಓಬವ್ವನ ಕಿಂಡಿ ಎಂಬ ಹೆಸರು ಬಂತು, ಇಂದಿಗೂ ಚಿತ್ರದುರ್ಗದ ಕೋಟೆ ಹಾಗೂ ಓಬವ್ವನ ಕಿಂಡಿ ಪ್ರಚಲಿತವಾಗಿದೆ.

English summary

Onake Obavva Jayanti; Story of Woman Who Single-handedly Fought Hyder Ali’s Soldiers

Here we are discussing about Onake Obavva Jayanti; Story of Woman Who Single-handedly Fought Hyder Ali’s Soldiers . Read more.
X
Desktop Bottom Promotion