For Quick Alerts
ALLOW NOTIFICATIONS  
For Daily Alerts

ಈ ದೇಶಗಳಲ್ಲಿ ಹೊಸ ವರ್ಷಾಚರಣೆ ಎಷ್ಟೊಂದು ಭಿನ್ನವಾಗಿರುತ್ತೆ ಗೊತ್ತಾ?

|

ಪ್ರತಿಬಾರಿಯೂ, ಜಗತ್ತು ಹೊಸವರ್ಷವೊಂದನ್ನ ಬರಮಾಡಿಕೊಳ್ಳುವ ಹೊಸ್ತಿಲಲ್ಲಿರುವಾಗ, ಜಗತ್ತಿನ ಬೇರೆ ಬೇರೆ ದೇಶಗಳು ಹೊಸವರ್ಷವನ್ನ ಸ್ವಾಗತಿಸುವ ಪರಿ ಬೇರೆ ಬೇರೆಯದ್ದಾಗಿರುತ್ತದೆ. ಅದು ಆಯಾ ದೇಶದ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಸಾಂಸ್ಕೃತಿಕ ಹಿನ್ನೆಲೆಗಳನ್ನ ಅವಲಂಬಿಸಿಕೊಂಡಿರುತ್ತದೆ. ಸಂಭ್ರಮಾಚರಣೆಗಳ ಸ್ವರೂಪಗಳು ವಿಭಿನ್ನವಾಗಿದ್ದರೂ, ಅವೆಲ್ಲದರ ಆಶಯ ಹಾಗೂ ನಂಬಿಕೆ ಒಂದೇ: ಮುಂಬರುವ ಹೊಸ ವರ್ಷ ಸಮಸ್ತ ಜಗತ್ತಿಗೆ ಶಾಂತಿ, ನೆಮ್ಮದಿ, ಆರೋಗ್ಯ, ಸೌಭಾಗ್ಯಗಳನ್ನ ಹೊತ್ತು ತರಲಿ ಎಂದೇ.

ಜಗತ್ತಿನ ಆಯ್ದ ಕೆಲ ವಿಭಿನ್ನ ರಾಷ್ಟ್ರಗಳು ಯಾವೆಲ್ಲ ರೀತಿಯಲ್ಲಿ ತಮ್ಮದೇ ಆದ ವೈಶಿಷ್ಟ್ಯಗಳೊಂದಿಗೆ ಹೊಸ ವರ್ಷವನ್ನ ಎದುರುಗೊಳ್ಳುತ್ತವೆ ಅನ್ನೋದರ ಕುರಿತ ಕುತೂಹಲಭರಿತ ಬರಹವೊಂದನ್ನ ನಾವಿಲ್ಲಿ ತಮಗಾಗಿ ಸಾದರಪಡಿಸುತ್ತಿದ್ದೇವೆ. ಬರಹ ಮಾಹಿತಿಪೂರ್ಣವೂ ಆಗಿದೆ, ಕೌತುಕಭರಿತವೂ ಆಗಿದೆ, ಹಾಗೇನೇ ಜಾಗತಿಕ ವೈವಿಧ್ಯತೆಯ ಒಂದು ಇಣುಕುನೋಟವೂ ಆಗಿದೆ. ಸರಿ ಹಾಗಾದರೆ! ಇನ್ನು ತಡ ಏಕೆ ?! 2020 ಕಳೆದು 2021 ರ ಆಗಮನಕ್ಕೆ ಬೆರಳೆಣಿಕೆಯಷ್ಟೇ ಸಮಯ ಇರೋವಾಗ, 2020 ರ ದುಃಸ್ವಪ್ನ ಕಳೆದು, 2021, ಮನುಕುಲಕ್ಕೆ ಹೊಸಬೆಳಕನ್ನ ಮೂಡಿಸಲೆಂಬ ಆಶಯದೊಂದಿಗೆ ಈ ಬರಹವನ್ನ ಓದಿ ಆನಂದಿಸಿ.....

ಸ್ಪೇನ್: ಅದೃಷ್ಟಕ್ಕಾಗಿ ದ್ರಾಕ್ಷಿಗಳ ಸೇವನೆ

ಸ್ಪೇನ್: ಅದೃಷ್ಟಕ್ಕಾಗಿ ದ್ರಾಕ್ಷಿಗಳ ಸೇವನೆ

ಮಧ್ಯರಾತ್ರಿ ಘಂಟೆ ಬಾರಿಸುತ್ತಲೇ ಸ್ಪೇನ್ ನ ಸ್ಥಳೀಯರು ಲೆಕ್ಕಮಾಡಿ ಕರಾರುವಕ್ಕಾಗಿ 12 ದ್ರಾಕ್ಷಿಗಳನ್ನ ಸೇವಿಸುತ್ತಾರೆ. ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಆರಂಭಗೊಂಡ ಸಂಪ್ರದಾಯವೊಂದರ ಗೌರವಾರ್ಥವಾಗಿ ಸ್ಪೇನ್ ನ ಸ್ಥಳೀಯರು ದ್ರಾಕ್ಷಿಗಳನ್ನ ತಿನ್ನುತ್ತಾರೆ. ಮಧ್ಯರಾತ್ರಿಯಾದ ಕೂಡಲೇ 12 ಬಾರಿ ಹೊಡೆದುಕೊಳ್ಳುವ ಪ್ರತೀ ಘಂಟೆಯ ಶಬ್ದಕ್ಕೂ ಪ್ರತೀಕವಾಗಿ ಒಂದೊಂದು ದ್ರಾಕ್ಷಿಯ ಹಣ್ಣನ್ನ ತಿನ್ನೋದರಿಂದ ಹೊಸವರ್ಷವಡೀ ಅದೃಷ್ಟ ಹಾಗೂ ಅಭ್ಯುದಯವು ಇರುತ್ತದೆ ಅನ್ನೋದು ಅಲ್ಲಿನ ಸ್ಥಳೀಯರ ನಂಬಿಕೆ.

ಸ್ಕಾಟ್ಲೆಂಡ್: ಮೊದಲ ಅಡಿ ಇಡುವುದು

ಸ್ಕಾಟ್ಲೆಂಡ್: ಮೊದಲ ಅಡಿ ಇಡುವುದು

ಸ್ಕಾಟ್ಲೆಂಡ್ ನಲ್ಲಿ ಜನವರಿ 1 ರ ಹಿಂದಿನ ದಿನ ಅದೆಷ್ಟು ಮಹತ್ತರವಾದದ್ದೆಂದರೆ, ಆ ದಿನಕ್ಕೆ "ಹಾಗ್ಮನೇ" (Hogmanay) ಅನ್ನೋ ಅಧಿಕೃತ ಹೆಸರೇ ಇದೆ!! ಈ ದಿನದಂದು ಸ್ಕಾಟ್ಲೆಂಡ್ ನ ಜನರು ಬಹಳಷ್ಟು ಆಚರಣೆಗಳನ್ನ ಹಮ್ಮಿಕೊಳ್ತಾರೆ. ಇವುಗಳಲ್ಲಿ ಸುಲಭವಾದ ಹಾಗೂ ಅತ್ಯಂತ ಪ್ರಸಿದ್ಧವಾದ ಆಚರಣೆಯೆಂದರೆ ಅದು "ಮೊದಲ ಬಾರಿಗೆ ಕಾಲೂರುವ ಅಥವಾ ಹೆಜ್ಜೆಯಿರಿಸುವ" ಆಚರಣೆಯಾಗಿದೆ. ಸ್ಕಾಟ್ಲೆಂಡ್ ಜನರ ನಂಬಿಕೆಯ ಪ್ರಕಾರ, ಮಧ್ಯರಾತ್ರಿಯ ಬಳಿಕ, ಹೊಸ ವರ್ಷದ ಪ್ರಥಮ ದಿನದಂದು ನಿಮ್ಮ ಮನೆಯ ಹೊಸ್ತಿಲನ್ನ ಯಾವ ವ್ಯಕ್ತಿಯು ದಾಟುತ್ತಾರೋ ಅವರು ಕಡುಗಪ್ಪು ಕೇಶರಾಶಿಯುಳ್ಳ ಪುರುಷನಾಗಿರಬೇಕು. ಹಾಗಾದಾಗ ಹೊಸವರ್ಷವಿಡೀ ಅದೃಷ್ಟದಾಟವಿರುತ್ತದೆ ಅನ್ನೋದು ಅವರ ನಂಬಿಕೆ. ಅಲ್ಲಿನ ಸಂಪ್ರದಾಯದ ಪ್ರಕಾರ, ಇಂತಹ ಪುರುಷರು ಕಲ್ಲಿದ್ದಲು, ಉಪ್ಪು, ಶಾರ್ಟ್ ಬ್ರೆಡ್, ಮತ್ತು ವಿಸ್ಕಿಯ ಉಡುಗೊರೆಗಳನ್ನ ಹೊತ್ತು ತರುತ್ತಾರೆ. ಈ ಎಲ್ಲ ವಸ್ತುಗಳು ಅದೃಷ್ಟವನ್ನ ಬರಮಾಡಿಕೊಳ್ಳುವ ಅವರ ನಂಬಿಕೆಗೆ ಇನ್ನಷ್ಟು ಬಲ ನೀಡುತ್ತವೆ.

ನೆದರ್ಲೆಂಡ್ಸ್: ಒಲೇಬೊಲೆನ್ ಗಳನ್ನ ತಿನ್ನೋದು

ನೆದರ್ಲೆಂಡ್ಸ್: ಒಲೇಬೊಲೆನ್ ಗಳನ್ನ ತಿನ್ನೋದು

ಡಚ್ಚರ ಈ ಹೊಸವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ತುಸು ವಿಚಿತ್ರವಾಗಿ ಕಂಡೀತು. ಪ್ರಾಚೀನ ಜರ್ಮನ್ ಬುಡಕಟ್ಟು ವರ್ಗದವರು ಯೂಲ್ ಹಬ್ಬದಂದು ಆಳವಾಗಿ ಫ್ರೈ ಮಾಡಲ್ಪಟ್ಟಿರುವ ಈ ಡಫ಼್ (ನಾದಿದ ಹಿಟ್ಟು) ಗಳ ತುಣುಕುಗಳನ್ನ ತಿನ್ನುತ್ತಾರೆ. ಅದರ ಹಿನ್ನೆಲೆ ಹೀಗಿದೆ: ಹೊಟ್ಟೆಯನ್ನು ಸೀಳುವ ಜರ್ಮನ್ ದೇವತೆ ಪೆರ್ಛ್ಟಾಳು ಅವರ ಹೊಟ್ಟೆಗಳನ್ನು ಬಗೆದು, ಅದರೊಳಗೆ ಕಸವನ್ನ ತುಂಬಲು ಯತ್ನಿಸಿದಾಗ (ಯೂಲೆಟೈಡ್ ಹಬ್ಬದ ಸಂಭ್ರಮಾಚರಣೆಯಲ್ಲಿ ಸಾಕಷ್ಟು ಭಾಗವಹಿಸದೇ ಇದ್ದವರಿಗಾಗಿ ದೇವತೆಯು ಕೊಡುವ ಶಿಕ್ಷೆ), ಡಫ಼್ ನಲ್ಲಿರುವ ಕೊಬ್ಬು ಹೊರಬಂದು, ಆ ದೇವತೆಯ ಖಡ್ಗವು ಹೊಟ್ಟೆಯಿಂದ ಜಾರಿಹೋಗುವಂತೆ ಮಾಡುತ್ತದೆ ಎಂಬುದು ಅವರ ನಂಬಿಕೆ! ಇಂದಿನ ದಿನಗಳಲ್ಲಿ, ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೆದರ್ಲೆಂಡ್ಸ್ ನಲ್ಲಿ ಒಲೇಬೊಲೆನ್ ಗಳನ್ನ ಆಸ್ವಾದಿಸಲಾಗುತ್ತದೆ. ಚಳಿಗಾಲದಲ್ಲಂತೂ, ಡಫ಼್ನಟ್ ನಂತೆ ಕಾಣುವ ಈ ಉಂಡೆಗಳನ್ನು ಮಾರದೇ ಇರುವ ಆಹಾರವಸ್ತುಗಳ ಯಾವ ಡಚ್ ವ್ಯಾಪಾರಿಯೂ ನಿಮಗೆ ಕಾಣಸಿಗಲು ಸಾಧ್ಯವೇ ಇಲ್ಲ!!

ರಷ್ಯಾ: ನೀರಿನಡಿಯಲ್ಲಿ ವೃಕ್ಷಗಳನ್ನ ನೆಡುವುದು

ರಷ್ಯಾ: ನೀರಿನಡಿಯಲ್ಲಿ ವೃಕ್ಷಗಳನ್ನ ನೆಡುವುದು

ಕಳೆದ ಸುಮಾರು 25 ವರ್ಷಗಳಿಂದ ರಜಾ ಅವಧಿಯಲ್ಲಿನ ಒಂದು ರಷ್ಯನ್ ಆಚರಣೆಯಾಗಿ ಈ ಪದ್ಧತಿ ಬೆಳೆದು ಬಂದಿದೆ. ಈ ಆಚರಣೆಯ ಕಿರು ವಿವರಣೆ ಹೀಗಿದೆ: ಫ಼ಾದರ್ ಫ಼್ರಾಸ್ಟ್ ಹಾಗೂ ಐಸ್ ಮೈಡನ್ ಎಂದು ಅನ್ವರ್ಥಕವಾಗಿಯೇ ಕರೆಯಲ್ಪಡುವ ಇಬ್ಬರು ಡೈವರ್ ಗಳು (ಧುಮುಕುವವರು), ಜಗತ್ತಿನ ಅತೀ ವಿಶಾಲವಾದ ತಾಜಾ ನೀರಿನ ಕೆರೆ ಎಂದು ಕರೆಯಲ್ಪಡುವ ಲೇಕ್ ಬೈಕಲ್ ನ ಹೆಪ್ಪುಗಟ್ಟಿದ ನೀರಿನೊಳಗೆ ಧುಮುಕುವ ಸಾಹಸಕ್ಕೆ ಮುಂದಾಗುತ್ತಾರೆ. ಹಾಗೆ ಧುಮುಕುವಾಗ ತಮ್ಮ ಜೊತೆಗೆ ಹೊಸವರ್ಷದ ವೃಕ್ಷವನ್ನೂ (ಸಾಮಾನ್ಯವಾಗಿ ಅಲಂಕೃತವಾದ ಸ್ಪ್ರೂಸ್ ವೃಕ್ಷ) ಒಯ್ಯುತ್ತಾರೆ! ಕೆರೆಯ ಮೇಲ್ಮೈಯಿಂದ 100 ಅಡಿಗಳಿಗಿಂತಲೂ ಹೆಚ್ಚು ಆಳದವರೆಗೆ ಆ ವೃಕ್ಷವನ್ನ ಒಯ್ಯುತ್ತಾರೆ!! ಸಾಮಾನ್ಯವಾಗಿ ಹೊಸವರ್ಷದ ಸಂದರ್ಭದಲ್ಲಿ ರಷ್ಯಾ ದೇಶದಲ್ಲಿ ಉಷ್ಣಾಂಶವು ಘನೀಭವಿಸುವ ಬಿಂದುವಿಗಿಂತಲೂ ಸಾಕಷ್ಟು ಕಡಿಮೆ ಇರುತ್ತದೆ. ಈ ಆಚರಣೆಯಲ್ಲಿ ಪಾಲ್ಗೊಳ್ಳೋದಕ್ಕೇಂತಾ ಜಗತ್ತಿನ ಮೂಲೆಮೂಲೆಗಳಿಂದ ಜನ ಇಲ್ಲಿಗೆ ಬಂದು ಸೇರ್ತಾರೆ.

ಬ್ರೆಜಿಲ್: ಸಮುದ್ರಕ್ಕೆ ಬಿಳಿ ಹೂವುಗಳನ್ನ ಎಸೆಯುವುದು

ಬ್ರೆಜಿಲ್: ಸಮುದ್ರಕ್ಕೆ ಬಿಳಿ ಹೂವುಗಳನ್ನ ಎಸೆಯುವುದು

ಹೊಸ ವರ್ಷದ ಆರಂಭದ ಹೊತ್ತಲ್ಲಿ, ನೀವೇನಾದರೂ ಬ್ರೆಜಿಲ್ ನಲ್ಲಿ ಇದ್ದೀರೆಂದಾದರೆ, ಅಲ್ಲಿನ ಸಮುದ್ರಗಳೆಲ್ಲ ಬಿಳಿ ಹೂವುಗಳು ಮತ್ತು ಕ್ಯಾಂಡಲ್ ಗಳಿಂದ ತುಂಬಿಕೊಂಡಿದ್ದರೆ ನೀವು ಆಶ್ಚರ್ಯಪಡಬೇಕಾದ ಅಗತ್ಯವಿಲ್ಲ! ಏಕೆಂದರೆ ದಕ್ಷಿಣ ಅಮೇರಿಕಾದ ಈ ದೇಶದಲ್ಲಿ ಹೊಸವರ್ಷದ ಅವಧಿಯಲ್ಲಿ ಇದು ಸರ್ವೇಸಾಮಾನ್ಯ. ಸಮುದ್ರಗಳನ್ನೆಲ್ಲ ನಿಯಂತ್ರಿಸುವ ಪ್ರಧಾನ ಸಾಗರದೇವತೆ ಯೆಮೋಜಾಗೆ ಕಾಣಿಕೆಯನ್ನು ನೀಡಲು ಹಾಗೂ ಬರುವ ಹೊಸವರ್ಷದಾದ್ಯಂತ ಆ ದೇವತೆಯ ಆಶೀರ್ವಾದಗಳನ್ನು ಪಡೆದುಕೊಳ್ಳುವುದಕ್ಕಾಗಿ ನೂತನ ವರ್ಷದ ಆರಂಭದ ಅವಧಿಯಲ್ಲಿ ಬ್ರೆಜಿಲ್ ದೇಶದ ನಾಗರಿಕರೆಲ್ಲರೂ ಸಮುದ್ರ ತೀರಗಳಲ್ಲಿ ಸೇರಿ ಕಡಲಿಗೆ ಶ್ವೇತ ಪುಷ್ಪಗಳನ್ನ ಸಮರ್ಪಿಸುತ್ತಾರೆ.

ಇಟಲಿ: ಕೆಂಪು ಬಣ್ಣದ ಒಳ ಉಡುಪನ್ನು ಧರಿಸುವುದು

ಇಟಲಿ: ಕೆಂಪು ಬಣ್ಣದ ಒಳ ಉಡುಪನ್ನು ಧರಿಸುವುದು

ಹೊಸವರ್ಷಾಗಮನದ ದ್ಯೋತಕವಾಗಿ ಇಟಲಿಯನ್ನರು ಕೆಂಪು ಬಣ್ಣದ ಒಳ ಉಡುಪನ್ನು ಧರಿಸಿಕೊಳ್ಳುವ ಸಂಪ್ರದಾಯವನ್ನು ಆಚರಿಸುತ್ತಾರೆ. ಇಟಲಿಯನ್ ಸಂಸ್ಕೃತಿಯ ಪ್ರಕಾರ, ಕೆಂಪು ಬಣ್ಣವು ಫಲವತ್ತತೆಯೊಂದಿಗೆ ನಂಟು ಹೊಂದಿದೆ. ಹಾಗಾಗಿ ಮುಂಬರುವ ನೂತನ ವರ್ಷದಲ್ಲಿ ತಾವು ಸಂತಾನವನ್ನು ಪಡೆದುಕೊಳ್ಳುವಂತಾಗಲೆಂಬ ಆಶಯದೊಂದಿಗೆ ಇಟಲಿಯನ್ನರು ಕೆಂಪು ಬಣ್ಣದ ಒಳ ಉಡುಪನ್ನು ಹೊಸ ವರ್ಷದ ಸಂದರ್ಭದಲ್ಲಿ ಧರಿಸಿಕೊಳ್ಳುತ್ತಾರೆ.

ಗ್ರೀಸ್: ನೀರುಳ್ಳಿಗಳನ್ನ ನೇತು ಹಾಕುವುದು

ಗ್ರೀಸ್: ನೀರುಳ್ಳಿಗಳನ್ನ ನೇತು ಹಾಕುವುದು

ನೀರುಳ್ಳಿಗಳನ್ನ ನೇತು ಹಾಕೋದಾ ? "ಹೊಸ ವರ್ಷದಾರಂಭದಲ್ಲಿ ರಕ್ತ ಪಿಶಾಚಿಗಳನ್ನ ಆರಾಧಿಸೋ ಯೋಚ್ನೇ ಏನಾದ್ರೂ ಇದ್ಯಾ ?" ಅಂತಾ ಕೇಳ್ಬೇಡಿ. ಗ್ರೀಸ್ ದೇಶಗಳಲ್ಲಿ ಈ ರೀತಿ ನೀರುಳ್ಳಿಗಳನ್ನ ನೇತು ಹಾಕೋದಕ್ಕೆ ಕಾರಣ ಏನಂದ್ರೆ ನೀರುಳ್ಳಿಗಳು ಪುನರ್ಜನ್ಮದ ಸಂಕೇತ ಅಂತಾ ನಂಬ್ತಾರೆ ಗ್ರೀಕರು. ಹಾಗಾಗಿಯೇ ವರ್ಷಪೂರ್ತಿ ಅಭ್ಯುದಯವನ್ನೇ ಕಾಣೋ ಹಾಗಾಗಲಿ ಅನ್ನೋ ಕಾರಣಕ್ಕಾಗಿ ಗ್ರೀಕರು ಈ ಕಟುವಾಸನೆಯ ನೀರುಳ್ಳಿಗಳನ್ನ ಹೊಸ ವರ್ಷದಾರಂಭದಂದು ತಮ್ಮ ಬಾಗಿಲುಗಳಿಗೆ ನೇತು ಹಾಕುತ್ತಾರೆ. ಗ್ರೀಕ್ ಸಂಸ್ಕೃತಿಯು ಅನಾದಿ ಕಾಲದಿಂದಲೂ ಈ ತರಕಾರಿಯನ್ನ "ಅಭ್ಯುದಯ" ಎಂಬ ನಂಬಿಕೆಯೊಂದಿಗೆ ನಂಟು ಹಾಕಿಕೊಂಡಿದೆ. ಇದಕ್ಕೆ ಕಾರಣ ನೀರುಳ್ಳಿ ಬೆಳೆಯುವ ರೀತಿ. ನೀರುಳ್ಳಿಯ ಬೇರುಗಳನ್ನ ಭೂಮಿಯಲ್ಲಿ ನೆಟ್ಟ ಬಳಿಕ ನೀರುಳ್ಳಿ ನಿರಂತರವಾಗಿ ಬೆಳೆಯುತ್ತದೆ.

ಚಿಲಿ: ಹೊಸವರ್ಷದ ಸಂಭ್ರಮಾಚರಣೆ ನಡೆಯೋದು ಸ್ಮಶಾನದಲ್ಲಿ!!

ಚಿಲಿ: ಹೊಸವರ್ಷದ ಸಂಭ್ರಮಾಚರಣೆ ನಡೆಯೋದು ಸ್ಮಶಾನದಲ್ಲಿ!!

ಚಿಲಿ ದೇಶದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಳು ನಡೆಯೋದು ಚರ್ಚುಗಳಲ್ಲ, ಬದಲಿಗೆ ಸ್ಮಶಾನಗಳಲ್ಲಿ!! ಚಿಲಿ ದೇಶದಲ್ಲಿ ಹೊಸ ವರ್ಷಾಚರಣೆಯ ಸನ್ನಿವೇಶ ಹೀಗೆ ಬದಲಾಗುವುದಕ್ಕೆ ಕಾರಣವೇನಿರಬಹುದೆಂದು ಯೋಚಿಸುತ್ತಿರುವಿರಾ ?!! ಅದಕ್ಕೆ ಕಾರಣವೇನೆಂದರೆ, ತೀರಿಕೊಂಡ ತಮ್ಮ ಕುಟುಂಬದ ಸದಸ್ಯರ ಜೊತೆಗೂಡಿ, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಅವರನ್ನೂ ತಮ್ಮೊಡನೆ ಪಾಲ್ಗೊಳ್ಳುವಂತೆ ಮಾಡುವುದಕ್ಕೆ ಸ್ಮಶಾನ ವಾಸವು ಚಿಲಿಯನ್ನರಿಗೆ ಅನುವು ಮಾಡಿಕೊಡುತ್ತದೆ.

ಜಪಾನ್: ಸೋಬಾ ನೂಡಲ್ಸ್ ಅನ್ನು ಮೆಲ್ಲುವುದು

ಜಪಾನ್: ಸೋಬಾ ನೂಡಲ್ಸ್ ಅನ್ನು ಮೆಲ್ಲುವುದು

ಜಪಾನೀ ಸಂಸ್ಕೃತಿಯಲ್ಲಿ, ತೊಷಿಕೊಷಿ ಸೋಬಾ, ಅಥವಾ "ಸಂವತ್ಸರ ಸಂಕ್ರಮಣ ನೂಡಲ್ಸ್" ಎಂದು ಕರೆಯಲ್ಪಡುವ ಆಚರಣೆಯ ಮೂಲಕ, ಒಂದು ಬಟ್ಟಲಿನಷ್ಟು ಸೋಬಾ ನೂಡಲ್ಸ್ ಅನ್ನು ಮೆಲ್ಲುವುದರ ಮೂಲಕ ಹೊಸ ವರ್ಷವನ್ನ ಸ್ವಾಗತಿಸುವುದು ಸಂಪ್ರದಾಯ. ಈ ತೊಷಿಕೊಷಿ ಸೊಬಾ ಅನ್ನೋ ಆಚರಣೆ ಎಲ್ಲಿಂದ ಮೊದಲ್ಗೊಂಡಿತು ಅನ್ನೋದರ ಬಗ್ಗೆ ಯಾರಿಗೂ ಖಚಿತ ಮಾಹಿತಿ ಇಲ್ಲವಾದರೂ ಕೂಡ, ಸೋಬಾ ನೂಡಲ್ಸ್ ನ ತೆಳುವಾದ ಹಾಗೂ ಉದ್ದನೆಯ ಆಕಾರವು ಸುದೀರ್ಘವಾದ ಹಾಗೂ ಆರೋಗ್ಯದಾಯಕವಾದ ಜೀವನವನ್ನ ಸೂಚಿಸುತ್ತದೆ ಅನ್ನೋ ನಂಬಿಕೆ ಇದೆ. ಸೋಬಾ ನೂಡಲ್ಸ್ ಅನ್ನು ತಯಾರಿಸಲು ಬಳಸಲಾಗುವ ಬಕ್ವ್ಹೀಟ್ ಸಸ್ಯವು ಅದೆಷ್ಟು ಸ್ಥಿತಿಸ್ಥಾಪಕ ಗುಣವುಳ್ಳದ್ದೆಂದರೆ, ತಮ್ಮ ಶಕ್ತಿಸಾಮರ್ಥ್ಯಗಳ ಪ್ರದರ್ಶನಕ್ಕಾಗಿ ಜನರು ಈ ಪಾಸ್ತಾವನ್ನ ತಿನ್ನುತ್ತಾರೆ ಅಂತಾ ಬಹುತೇಕ ಜಪಾನೀ ಜನಪದರು ನಂಬುತ್ತಾರೆ. ಹೊಸ ವರ್ಷವು ಸಮೀಪಿಸುತ್ತಿರುವ ಈ ಅವಧಿಯಲ್ಲಿ, ಡಿಸೆಂಬರ್ 31 ರಂದು ಒಂದು ಬಟ್ಟಲಿನಷ್ಟು ಹೊಸ ವರ್ಷದ ನೂಡಲ್ಸ್ ಅನ್ನು ನೀವು ತಯಾರಿಸಲು ಬಯಸಿದಲ್ಲಿ, ಅದರ ರೆಸಿಪಿಗಾಗಿ, ನಮಿಕೋ ಚೆನ್ ಅವರ ಬ್ಲಾಗ್ ಗೆ ಭೇಟಿ ಕೊಡಿ...

ಡೆನ್ಮಾರ್ಕ್: ತಟ್ಟೆಗಳನ್ನು ಒಡೆದು ಹಾಕುವುದು

ಡೆನ್ಮಾರ್ಕ್: ತಟ್ಟೆಗಳನ್ನು ಒಡೆದು ಹಾಕುವುದು

ಹೊಸ ವರ್ಷದಾರಂಭದ ಹೊತ್ತಿಗೆ ಅಥವಾ ಸರಿದು ಹೋಗುತ್ತಿರುವ ವರ್ಷದ ಅಂತಿಮ ಗಳಿಗೆಯಲ್ಲಿ ತಮ್ಮ ಮನೆಗಳ ಹೊರಗೆ ಅದೆಷ್ಟು ಸಂಖ್ಯೆಯಲ್ಲಿ ತಟ್ಟೆಗಳನ್ನು, ಪಾತ್ರೆಪಗಡಗಳನ್ನ ಒಡೆದು ಬಿಸಾಕಿದ್ದೇವೆ ಅನ್ನೋದನ್ನ ತೋರಿಸೋದ್ರಲ್ಲೇ ಡೆನ್ಮಾರ್ಕ್ ಜನರಿಗೆ ಒಂದು ಬಗೆಯ ಪ್ರತಿಷ್ಟೆ! ಹೊಸ ವರ್ಷವನ್ನ ಬರಮಾಡಿಕೊಳ್ಳುವ ಅವರ ರೀತಿ ಇದು. ತಮ್ಮ ಸ್ನೇಹಿತರ ಅಥವಾ ತಮ್ಮ ನೆರೆಮನೆಯವರ ಮುಖ್ಯದ್ವಾರದೆದುರು ತಮ್ಮ ಚೀನೀ ತಟ್ಟೆ, ಲೋಟಾದಿಗಳನ್ನೆಸೆದು ಒಡೆದು ಹಾಕುವುದು ಡೆನ್ಮಾರ್ಕ್ ಜನರ ಸಂಪ್ರದಾಯ!! ವಿನೂತನ ವರ್ಷವು ಆರಂಭಗೊಳ್ಳುವುದಕ್ಕೂ ಮೊದಲು ಪರಸ್ಪರರ ನಡುವಿನ ಅಹಮಿಕೆ, ದ್ವೇಷಭಾವನೆಯನ್ನ ಆ ಮೂಲಕ ನಾಶಪಡಿಸುವುದರ ದ್ಯೋತಕ ಅದು ಅನ್ನೋದು ಕೆಲವರ ಅನಿಸಿಕೆ. ಇನ್ನೂ ಒಂದು ನಂಬಿಕೆ ಏನೆಂದರೆ, ನೀವು ಒಡೆಯುವುದಕ್ಕೆಂದು ಬಿಸಾಕುವ ಚೀನೀ ಪಾತ್ರೆಯು ಅದೆಷ್ಟು ದೊಡ್ಡದಾಗಿರುತ್ತದೆಯೋ, ಅಷ್ಟರಮಟ್ಟಿಗಿನ ಅದೃಷ್ಟವು ಮುಂಬರುವ ನೂತನ ವರ್ಷದಲ್ಲಿ ನಿಮ್ಮ ಪಾಲಿಗೆ ಒಲಿಯುತ್ತದೆ ಎಂದು.

ಈಕ್ವೆಡಾರ್: ಪ್ರತಿಕೃತಿಗಳ (ಬೆದರುಗೊಂಬೆಗಳ) ದಹನ

ಈಕ್ವೆಡಾರ್: ಪ್ರತಿಕೃತಿಗಳ (ಬೆದರುಗೊಂಬೆಗಳ) ದಹನ

ಈಕ್ವೆಡಾರ್ ನಲ್ಲಿ ಹೊಸ ವರ್ಷದಾರಂಭವನ್ನ ಅಗ್ಗಿಷ್ಟಿಕೆ (ಬೆಂಕಿ) ಯ ಸುತ್ತಲೂ ಆಚರಿಸಲಾಗುತ್ತದೆ. ಹೆಚ್ಚಾಗಿ ಗತವರ್ಷದ ರಾಜಕಾರಣಿಗಳು, ಪಾಪ್ ಸಂಸ್ಕೃತಿಯ ಖ್ಯಾತನಾಮರು, ಹಾಗೂ ಇತರ ಗಣ್ಯವ್ಯಕ್ತಿಗಳ ಪ್ರತಿಕೃತಿಗಳೇ ಈ ಅಗ್ಗಿಷ್ಟಿಕೆಗಳ ಉರುವಲುಗಳಾಗಿರುತ್ತವೆ!! ಈ ಪ್ರತಿಕೃತಿಗಳ ದಹನವನ್ನ "ಕಳೆದುಹೋಗುತ್ತಿರುವ ಸಂವತ್ಸರದ ದಹನ" ಎಂದೇ ಈಕ್ವೆಡಾರ್ ನ ಜನರು ತಿಳಿಯುತ್ತಾರೆ. ಗತವರ್ಷದ 12 ತಿಂಗಳುಗಳ ಎಲ್ಲ ಅನಿಷ್ಟಗಳನ್ನೂ ವರ್ಷಾಂತ್ಯದ ವೇಳೆಯಲ್ಲಿ ದಹಿಸುವುದರ ಮೂಲಕ ಜಗತ್ತನ್ನ ಸ್ವಚ್ಛಗೊಳಿಸಿ, ಮುಂಬರುವ ನೂತನ ವರ್ಷದಲ್ಲಿ ಒಳ್ಳೆಯದ್ದರ ಅಥವಾ ಶುಭಕಾರಕದ ಆಗಮನಕ್ಕೆ ಅವಕಾಶವನ್ನ ಕಲ್ಪಿಸಿಕೊಡುವುದರ ಸಂಕೇತವಾಗಿ ಹೀಗೆ ಅಗ್ಗಿಷ್ಟಿಕೆಯ ಸುತ್ತಲೂ ಸಂಭ್ರಮಾಚರಿಸುತ್ತಾ ಅಲ್ಲಿನ ಜನರು ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತಾರೆ.

ಗ್ರೀಸ್: ದಾಳಿಂಬೆ ಹಣ್ಣುಗಳನ್ನ ನುಚ್ಚುನೂರಾಗಿಸುವುದು

ಗ್ರೀಸ್: ದಾಳಿಂಬೆ ಹಣ್ಣುಗಳನ್ನ ನುಚ್ಚುನೂರಾಗಿಸುವುದು

ಪ್ರಾಚೀನ ಗ್ರೀಕ್ ಪುರಾಣದ ಪ್ರಕಾರ, ದಾಳಿಂಬೆಯು ಫಲವವಂತಿಕೆ, ಜೀವನ, ಹಾಗೂ ಸಮೃದ್ಧಿಗಳ ಪ್ರತೀಕ. ಹಾಗಾಗಿಯೇ, ಆಧುನಿಕ ಗ್ರೀಕರ ದೃಷ್ಟಿಯಲ್ಲೂ ದಾಳಿಂಬೆಯು ಶುಭ ಸಂಕೇತದೊಂದಿಗೆ ನಂಟನ್ನ ಹೊಂದಿದೆ. ಹಳೆವರ್ಷದ ಅವಧಿ ಮುಗಿದು, ನೂತನ ವರ್ಷಾಗಮನದ ಮಧ್ಯರಾತ್ರಿ ಆರಂಭವಾಗುತ್ತಿದ್ದಂತೆಯೇ, ತಮ್ಮ ತಮ್ಮ ಮನೆಯ ಬಾಗಿಲುಗಳಿಗೆ ದಾಳಿಂಬೆ ಹಣ್ಣುಗಳನ್ನ ಅಪ್ಪಳಿಸುವಂತೆ ಎಸೆಯೋದು ಗ್ರೀಕರ ಸಂಪ್ರದಾಯ! ಹಾಗೆ ಅಪ್ಪಳಿಸುವಂತೆ ದಾಳಿಂಬೆ ಹಣ್ಣುಗಳನ್ನ ಜೋರಾಗಿ ಬಾಗಿಲುಗಳಿಗೆ ಎಸೆದಾಗ ಅವು ಒಡೆದು ನುಚ್ಚುನೂರಾಗುತ್ತವೆ. ಹಾಗೆ ನುಚ್ಚುನೂರಾದ ದಾಳಿಂಬೆ ಹಣ್ಣುಗಳಿಂದ ಎಷ್ಟು ಸಂಖ್ಯೆಯ ದಾಳಿಂಬೆ ಬೀಜಗಳು ಹೊರಚಿಮ್ಮುವವೋ ಅಷ್ಟೇ ಸಂಖ್ಯೆಯಲ್ಲಿ ಹೊಸ ವರ್ಷವು ಅದೃಷ್ಟವನ್ನ ಹೊತ್ತು ತರುತ್ತದೆ ಅನ್ನೋದು ಗ್ರೀಕರ ನಂಬಿಕೆಯಾಗಿದೆ.

ಜರ್ಮನಿ: ಸೀಸವನ್ನ ಸುರಿಯುವುದು

ಜರ್ಮನಿ: ಸೀಸವನ್ನ ಸುರಿಯುವುದು

ಜರ್ಮನ್ನರು ನೂತನ ವರ್ಷಾಗಮನದ ಸಂದರ್ಭದಲ್ಲಿ "ಬ್ಲೇಯ್ಜಿಬೆನ್" ಅಥವಾ "ಸೀಸವನ್ನ ಸುರಿಯುವುದು" ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಆಚರಣೆಯನ್ನ ಕೈಗೊಳ್ಳುತ್ತಾರೆ. ಮೇಣದ ಬತ್ತಿಯ ಜ್ವಾಲೆಯಿಂದ, ಪ್ರತಿಯೊಬ್ಬ ವ್ಯಕ್ತಿಯೂ ಸೀಸದ ಅಥವಾ ತವರದ ಚಿಕ್ಕ ಚೂರೊಂದನ್ನು ಕರಗಿಸುತ್ತಾರೆ ಹಾಗೂ ಹಾಗೆ ಕರಗಿದ್ದನ್ನು, ತಣ್ಣೀರು ತುಂಬಿರುವ ಪಾತ್ರೆಯೊಂದಕ್ಕೆ ಸುರಿಯುತ್ತಾರೆ. ಹಾಗೆ ಸುರಿದ ಸೀಸ ಅಥವಾ ತವರವು ಯಾವ ಆಕೃತಿಯನ್ನು ತಳೆಯುತ್ತದೆ ಅನ್ನೋದರ ಆಧಾರದ ಮೇಲೆ ವ್ಯಕ್ತಿಯ ಹೊಸವರ್ಷದ ಭವಿಷ್ಯವು ನಿರ್ಧರಿತವಾಗುತ್ತದೆ ಎಂದು ಜರ್ಮನ್ನರು ನಂಬುತ್ತಾರೆ. ಆದರೆ, ಇದು ಟಸ್ಸೆಯೋಗ್ರಫಿಗಿಂತ ವಿಭಿನ್ನವಾದದ್ದು.

ಜಪಾನ್: ಘಂಟೆಗಳನ್ನ ಮೊಳಗಿಸುವುದು

ಜಪಾನ್: ಘಂಟೆಗಳನ್ನ ಮೊಳಗಿಸುವುದು

ಒಂದು-ನೂರು-ಮತ್ತು-ಎಂಟು! ಹೊಸ ವರ್ಷದ ಆರಂಭದ ವೇಳೆ ಜಪಾನ್ ದೇಶದ ಬೌದ್ಧ ದೇವಾಲಯಗಳ ಘಂಟೆಗಳು ಇಷ್ಟು ಬಾರಿ (108) ಹೊಡೆದುಕೊಳ್ಳುತ್ತವೆ!! ನೂತನ ವರ್ಷಾಗಮನದ ಸಮಯ ಸನ್ನಿಹಿತವಾಗುವವರೆಗೆ 107 ಬಾರಿ ಹಾಗೂ ಮಧ್ಯರಾತ್ರಿ ಗಡಿಯಾರವು ಹೊಡೆದುಕೊಳ್ಳತೊಡಗಿದಾಗ ಒಂದು ಬಾರಿ; ಅರ್ಥಾತ್ ಒಟ್ಟು 108 ಬಾರಿ. ಜಾಯಾನೊಕನೆ ಎಂದು ಕರೆಯಲ್ಪಡುವ ಈ ಆಚರಣೆಯ ಅರ್ಥವೇನೆಂದರೆ, ಪ್ರತಿಯೋರ್ವ ವ್ಯಕ್ತಿಯಲ್ಲಿರುವ 108 ತುಚ್ಛ ಕಾಮನೆಗಳನ್ನ ಒದ್ದೋಡಿಸುವುದು ಹಾಗೂ ಗತವರ್ಷದಲ್ಲಿ ಮಾಡಿದ ಹಿಂದಿನ ಪಾಪಕರ್ಮಗಳನ್ನ ತೊಳೆದು ನಿವಾರಿಸುವುದು.

ರಷ್ಯಾ: ಬೂದಿಯನ್ನು ಕುಡಿಯುವುದು

ರಷ್ಯಾ: ಬೂದಿಯನ್ನು ಕುಡಿಯುವುದು

"ಇದೇನಿದು ಅನಿಷ್ಟ!! ಹೊಸ ವರ್ಷವನ್ನ ಬರಮಾಡಿಕೊಳ್ಳೋ ರೀತೀನಾ ಇದು ?! ಹೊಸ ವರ್ಷ ಬರೋವಾಗ ಹೆಣಗಳ ಬೂದೀನಾ ರಷ್ಯನ್ನರು ಕುಡೀತಾರಾ ?!!" ಅಂತೆಲ್ಲ ನಿಮಗೇ ನೀವೇ ಕಲ್ಪಿಸಿಕೊಳ್ಳೋದಕ್ಕೆ ಹೋಗ್ಬೇಡಿ!! ಅವರು ಕುಡಿಯೋದು ಮನುಷ್ಯರದ್ದೋ ಅಥವಾ ಅದೇ ಥರದ ಬೇರಿನ್ಯಾವುದರದ್ದೋ ಅಲ್ಲ, ಬದಲಿಗೆ ಅವರು ಚೀಟಿಯೊಂದರಲ್ಲಿ ತಮ್ಮ ಮನಸ್ಸಿನ ಕೋರಿಕೆಗಳನ್ನೆಲ್ಲ ಬರೆದು, ಅದನ್ನ ಮೇಣದ ಬತ್ತಿಯ ದೀಪದಿಂದ ದಹಿಸಿ, ಬೂದಿಯನ್ನ ಷಾಂಪೇನ್ ನಲ್ಲಿ ಕರಗಿಸಿ, ಬಳಿಕ ಒಂದು ಗ್ಲಾಸ್ ನಷ್ಟು ಆ ಬೂದಿಬೆರೆತ ಶಾಂಪೇನನ್ನ ಕುಡಿಯುತ್ತಾರೆ. ಇದು ರಷ್ಯನ್ನರ ಸಂಸ್ಕೃತಿ.

ಸ್ಕೆಕ್ ರಿಪಬ್ಲಿಕ್: ಸೇಬುಗಳನ್ನ ಕತ್ತರಿಸುವುದು

ಸ್ಕೆಕ್ ರಿಪಬ್ಲಿಕ್: ಸೇಬುಗಳನ್ನ ಕತ್ತರಿಸುವುದು

ಸ್ಕೆಕ್ ರಿಪಬ್ಲಿಕ್ ನ ಜನರು ನೂತನ ವರ್ಷಾರಂಭದ ಸಂದರ್ಭದಲ್ಲಿ, ಭಾವೀ ವರ್ಷವು ತಮ್ಮ ಪಾಲಿಗೆ ಏನನ್ನು ತರಲಿದೆ ಅನ್ನೋದನ್ನ ಕಂಡುಕೊಳ್ಳೋಕೆ ಬಳಸೋದು ಸೇಬುಗಳನ್ನ. ಹೊಸವರ್ಷವು ಆರಂಭಗೊಳ್ಳುವ ಹಿಂದಿನ ರಾತ್ರಿ, ಅಲ್ಲಿನವರು ಸೇಬನ್ನು ಅರ್ಧ ಕತ್ತರಿಸುತ್ತಾರೆ. ಹಾಗೆ ಕತ್ತರಿಸಿದ ಸೇಬಿನ ತಿರುಳಿನ ಆಕಾರವು, ಆ ಸೇಬಿನ ಸುತ್ತಲೂ ನೆರೆದಿದ್ದವರ ಹಣೆಬರಹವನ್ನ ನಿರ್ಧರಿಸುತ್ತದೆ ಅನ್ನೋದು ಅಲ್ಲಿನವರ ನಂಬಿಕೆ. ಸೇಬಿನ ತಿರುಳಿನ ಆಕಾರವು ನಕ್ಷತ್ರವನ್ನು ಹೋಲುತ್ತಿದ್ದರೆ, ಅಲ್ಲಿ ನೆರೆದಿದ್ದ ಅಷ್ಟೂ ಜನ ಸಂತಸ ಹಾಗೂ ಆರೋಗ್ಯದೊಂದಿಗೆ ಬಹಳ ಬೇಗನೇ ಮತ್ತೊಮ್ಮೆ ಭೇಟಿಯಾಗುತ್ತಾರೆ ಎಂದರ್ಥ. ಆದರೆ ಒಂದು ವೇಳೆ ತಿರುಳಿನ ಆಕಾರವು ಕ್ರಾಸ್ (ಶಿಲುಬೆ) ಅನ್ನು ಹೋಲುವಂತಿದ್ದರೆ, ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಅಲ್ಲಿ ನೆರೆದಿದ್ದವರಲ್ಲಿ ಒಬ್ಬರಲ್ಲ ಒಬ್ಬರು ಅಸ್ವಸ್ಥರಾಗಲಿದ್ದಾರೆ ಎಂದು ಅಲ್ಲಿನ ಜನರು ನಂಬುತ್ತಾರೆ.

ಇಸ್ಟೋನಿಯಾ: ಅನೇಕ ಊಟಗಳ ಸೇವನೆ

ಇಸ್ಟೋನಿಯಾ: ಅನೇಕ ಊಟಗಳ ಸೇವನೆ

"ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಹಾಗೂ ರಾತ್ರಿಯೂಟ - ಇವಿಷ್ಟೇ ನನಗೆ ಯಾವ ಮೂಲೆಗೂ ಸಾಲುವುದಿಲ್ಲ" ಅಂತಾ ಅನ್ನೋರು ನೀವಾಗಿದ್ದರೆ, ಬಹುಶ: ಹೊಸ ವರ್ಷದ ಸಂಭ್ರಮಾಚರಣೆಯನ್ನ ನೀವು ಇಸ್ಟೋನಿಯಾ ದೇಶದಲ್ಲಿ ಕೈಗೊಳ್ಳೋದು ಒಳ್ಳೇದು. ಯಾಕಂದ್ರೇ ಅಲ್ಲಿನ ಜನರ ನಂಬಿಕೆಯ ಪ್ರಕಾರ ಏಳು, ಒಂಭತ್ತು, ಅಥವಾ ಹನ್ನೆರಡು ಊಟಗಳನ್ನ ಸೇವಿಸೋದು ಹೊಸ ವರ್ಷದಲ್ಲಿ ಒಳ್ಳೇದನ್ನೇ ಉಂಟುಮಾಡುತ್ತದೆ! ಏಳು, ಒಂಭತ್ತು, ಹಾಗೂ ಹನ್ನೆರಡು ಅನ್ನೋ ಈ ಸಂಖ್ಯೆಗಳು ದೇಶದಾದ್ಯಂತ ಅದೃಷ್ಟವನ್ನೇ ಹೊತ್ತುತರುತ್ತವೆ ಅನ್ನೋದು ಅಲ್ಲಿಯವರ ನಂಬಿಕೆ!! ಒಂದೊಮ್ಮೆ ಅಷ್ಟೂ ಊಟವನ್ನ ನಿಮಗೆ ಮುಗೀಸೋದಕ್ಕೆ ಆಗದೇ ಹೋದ್ರೆ ಚಿಂತೆ ಬೇಡ!! ಸಾಮಾನ್ಯವಾಗಿ ಅಲ್ಲಿನ ಜನ ಉದ್ದೇಶಪೂರ್ವಕವಾಗಿ ತಮ್ಮ ತಟ್ಟೆಗಳಲ್ಲಿ ಆಹಾರವನ್ನ ಹಾಗೇ ಬಿಡುತ್ತಾರೆ ಹಾಗೂ ಹಾಗೆ ಬಿಡೋದಕ್ಕೆ ಕಾರಣ ಆತ್ಮದ ರೂಪದಲ್ಲಿರುವ ತಮ್ಮ ಕುಟುಂಬದ ಸದಸ್ಯರಿಗೆ ಸಲ್ಲಿಸುವುದಕ್ಕಾಗಿ...

ಅರ್ಮೇನಿಯಾ:

ಅರ್ಮೇನಿಯಾ: "ಗುಡ್ ಲಕ್" ಬ್ರೆಡ್ ಅನ್ನು ಬೇಯಿಸುವುದು

ಹೊಸ ವರ್ಷದ ಸಂಭ್ರಮಾಚರಣೆಗೇಂತಾ ಅರ್ಮೇನಿಯಾ ದೇಶದ ತಾಯಂದಿರು ಬ್ರೆಡ್ ಅನ್ನು ತಯಾರಿಸುವಾಗ, ಬ್ರೆಡ್ ನ ಹಿಟ್ಟಿಗೆ ಒಂದು ವಿಶೇಷವಾದ ಘಟಕವನ್ನ ಸೇರಿಸುತ್ತಾರೆ. ಅದೇನಂತಾ ಗೊತ್ತಾ ? ಅದು "ಅದೃಷ್ಟ" ಅಥವಾ "ಲಕ್" ಅನ್ನೋ ಘಟಕ. ಅಂದ ಹಾಗೆ ಅವರೇನೂ ಹಿಟ್ಟಿಗೆ ಅಕ್ಷರಶ: "ಅದೃಷ್ಟ" ಅಥವಾ "ಲಕ್" ಅನ್ನೋವಂತಹ ಘಟಕವನ್ನೇನೂ ಹಾಕಲ್ಲ ಬಿಡಿ. ಆದರೆ, ಕಣ್ಮರೆಯಾಗ್ತಿರೋ ವರ್ಷದ ಕೊನೆಯ ದಿವಸ, ಶುಭ ಆಶಯಗಳನ್ನ ಮನಸ್ಸಿನಲ್ಲಿ ಸ್ಮರಿಸಿಕೊಂಡು, ಅವುಗಳನ್ನೇ ರೂಪಕವಾಗಿ (ರೂಪಕ ಅಲಂಕಾರದ ರೀತಿಯಲ್ಲಿ) ಬ್ರೆಡ್ ನ ಹಿಟ್ಟಿನಲ್ಲಿ ಬೆರೆಸೋದು ಅರ್ಮೇನಿಯನ್ನರ ಸಂಪ್ರದಾಯ.

ಟರ್ಕಿ: ಉಪ್ಪನ್ನ ಸಿಂಪಡಿಸೋದು

ಟರ್ಕಿ: ಉಪ್ಪನ್ನ ಸಿಂಪಡಿಸೋದು

ನೂತನ ವರ್ಷಾರಂಭದ ಮಧ್ಯರಾತ್ರಿಯ ವೇಳೆ ಘಂಟೆ ಹನ್ನೆರಡು ಹೊಡೆದುಕೊಳ್ಳಲು ಶುರುವಿಟ್ಟಂತೆಯೇ, ಹೊಸ್ತಿಲಿಗೆ ಉಪ್ಪನ್ನ ಸಿಂಪಡಿಸೋದು ಶುಭ ಸಂಕೇತ ಅನ್ನೋದು ಟರ್ಕಿಯ ಜನರ ನಂಬಿಕೆ. ಏನಾದರೊಂದು ಒಳ್ಳೆಯದಾಗುತ್ತದೆ ಅನ್ನೋ ಆಶಾಭಾವನೆಯೇ ಎಲ್ಲ ದೇಶಗಳ ಹೊಸ ವರ್ಷದ ಸಂಭ್ರಮಾಚರಣೆಯ ಹಿಂದಿನ ನಂಬಿಕೆ, ಉದ್ದೇಶ ಅನ್ನೋದನ್ನ ನಾವೀಗಾಗಲೇ ನೋಡಿದ್ದೇವೆ. ಅದೇ ರೀತಿ, ಈ ಟರ್ಕಿಯ ಜನರೂ ಕೂಡ ನೂತನ ವರ್ಷವು ಕಾಲಿಡುವ ಘಳಿಗೆಯಲ್ಲಿ ಉಪ್ಪನ್ನ ಹೊಸ್ತಿಲಿಗೆ ಎರಚಿದರೆ ಹೊಸವರ್ಷವಿಡೀ ಶಾಂತಿ, ನೆಮ್ಮದಿಯಿಂದ ಕೂಡಿರುತ್ತದೆ ಅನ್ನೋ ನಂಬಿಕೆಯನ್ನ ಇರಿಸಿಕೊಂಡಿದ್ದಾರೆ.

ಐರ್ಲೆಂಡ್: ಮಿಸ್ಲ್ಟೋ (ಒಂದು ಬಗೆಯ ಸಸ್ಯ) ವನ್ನು

ಐರ್ಲೆಂಡ್: ಮಿಸ್ಲ್ಟೋ (ಒಂದು ಬಗೆಯ ಸಸ್ಯ) ವನ್ನು

ತಲೆದಿಂಬಿನಡಿಯಲ್ಲಿರಿಸಿಕೊಂಡು ಮಲಗುವುದು

ಐರ್ಲೆಂಡ್ ನ ಬ್ರಹ್ಮಚಾರಿಣಿಯರು ಪಾಲಿಸುವ ಒಂದು ಸಂಪ್ರದಾಯ ಏನೆಂದರೆ, ನೂತನ ವರ್ಷಾರಂಭದ ಅವಧಿಯಲ್ಲಿ, ಮಿಸ್ಲ್ಟೋ ಸಸ್ಯವೊಂದನ್ನು ತಲೆದಿಂಬಿನಡಿಯಲ್ಲಿಟ್ಟುಕೊಂಡು ಮಲಗುವುದು. ಹಾಗೆ ಮಲಗುವುದರಿಂದ ತಮ್ಮ ಭಾವೀ ಪತಿಯಂದಿರನ್ನ ಕಂಡುಕೊಳ್ಳೋದಕ್ಕೆ ಸಾಧ್ಯವಾಗುತ್ತದೆ ಅನ್ನೋದು ಅಲ್ಲಿನ ಕುಮಾರಿಯರ ನಂಬಿಕೆ - ವಾಸ್ತವದಲ್ಲಿ ಇದು ಎಷ್ಟರಮಟ್ಟಿಗೆ ನಿಜವಾಗುತ್ತದೋ ಗೊತ್ತಿಲ್ಲ, ಆದರೆ ಕನಿಷ್ಟಪಕ್ಷ ಕನಸಿನಲ್ಲಾದರೂ ಹಾಗಾಗಲೆಂದು ಅವರ ಹಾರೈಕೆ ಇರಬಹುದೇನೋ!!

English summary

New Year's Eve Traditions From Around The World In Kannada

New year eve traditions from around the world, read on.
Story first published: Wednesday, December 30, 2020, 16:46 [IST]
X
Desktop Bottom Promotion