For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ...... ಈ ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ಅರಿವಿರಲಿ

|

ನಮ್ಮ ಭಾರತದಲ್ಲಿ ಇಂದಿಗೂ ಕೂಡ ಮಹಿಳೆಯರಿಗೆ ಸಿಗಬೇಕಾದಂತಹ ಹಕ್ಕುಗಳು ಸರಿಯಾಗಿ ಸಿಕ್ಕಿಲ್ಲ. ಮಹಿಳೆ ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರದಲ್ಲೂ ತನ್ನ ಸಾಧನೆ ತೋರಿದ್ದಾಳೆ ಎಂದು ಹೇಳುವ ಮಾತು ಕೆಲವೊಂದು ಕಡೆ ಈಗಲೂ ಸುಳ್ಳು ಎನಿಸುತ್ತದೆ. ಏಕೆಂದರೆ ಮನೆ ಮತ್ತು ಕಚೇರಿ ಕೆಲಸಗಳನ್ನು ತುಂಬಾ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸುವ ಹೆಣ್ಣುಮಕ್ಕಳಿಗೆ ಒಂದಿಲ್ಲೊಂದು ಕಾರಣದಿಂದ ಶೋಷಣೆ ನಡೆಯುತ್ತಲೇ ಬಂದಿದೆ.

Laws Every Indian Woman Should Know | Boldsky Kannada
Every Woman Must Know These Laws Related To Her Life

ಇದನ್ನು ಕೆಲವರು ಮಹಿಳೆಯರ ದೌರ್ಬಲ್ಯ ಎಂದರೆ, ಇನ್ನೂ ಕೆಲವರು ಮಹಿಳೆಯರಿಗೆ ಇರುವ ಅಪಾರವಾದ ತಾಳ್ಮೆ ಕೆಲವೊಮ್ಮೆ ಇಂತಹ ಅಹಿತಕರ ಸಂದರ್ಭಗಳನ್ನು ಎದುರಿಸುವಂತೆ ಮಾಡುತ್ತದೆ ಎಂದು ಹೇಳುತ್ತಾರೆ. ಅದೇನೇ ಇರಲಿ, ನಮ್ಮ ಭಾರತ ದೇಶದಲ್ಲಿ ಕಾನೂನು ಪ್ರತಿಯೊಬ್ಬರಿಗೂ ಒಂದೇ. ಹಲವರಿಗೆ ತಮ್ಮ ಹಕ್ಕುಗಳ ಬಗ್ಗೆ ಇಂದಿಗೂ ಅರಿವಿಲ್ಲ. ಕೆಲವು ಕ್ಲಿಷ್ಟ ಸಂದರ್ಭಗಳಲ್ಲಿ ತಮ್ಮ ಪರವಾಗಿ ಯಾರೂ ನಿಲ್ಲದಿದ್ದರೂ ಕಡೇಪಕ್ಷ ಕಾನೂನು ನಿಲ್ಲುತ್ತದೆ ಎಂಬುದನ್ನು ಮರೆತೇಬಿಟ್ಟಿರುತ್ತಾರೆ. ಹಾಗಾಗಿ ಮನೆ, ಕಚೇರಿ, ಮಾರುಕಟ್ಟೆ ಅಷ್ಟೇ ಏಕೆ ಆರಕ್ಷಕ ಠಾಣೆಗಳಲ್ಲೂ ಕೂಡ ಕೆಲವೊಮ್ಮೆ ಮಹಿಳೆಯರ ವಿರುದ್ಧ ಅನೇಕ ಬಗೆಯ ಶೋಷಣೆಗಳು ಬಹಳ ಹಿಂದಿನಿಂದಲೂ ನಡೆಯುತ್ತಲೇ ಬಂದಿವೆ, ಈಗಲೂ ನಡೆಯುತ್ತಲೇ ಇವೆ.

ನಮ್ಮ ಭಾರತ ಸಂಪ್ರದಾಯಬದ್ಧವಾದ ದೇಶ. ಹಿಂದಿನ ಕಾಲದಲ್ಲಿ ವಿದ್ಯೆ ಕೇವಲ ಪುರುಷರಿಗೆ ಮಾತ್ರ ಸೀಮಿತ. ಮಹಿಳೆಯರಿಗೆ ಅಲ್ಲ ಎನ್ನುವ ಮನೋಭಾವದಲ್ಲಿದ್ದ ದೇಶ. ಕೆಲವೊಂದು ಕೆಳವರ್ಗದ ಮತ್ತು ಬುಡಕಟ್ಟು ಜನಾಂಗದ ಮಧ್ಯೆ ಈ ಪದ್ಧತಿ ಈಗಲೂ ಜಾರಿಯಲ್ಲಿದೆ. ಆದರೆ ಈ ಎಲ್ಲಾ ಅಡೆತಡೆಗಳನ್ನು ದಾಟಿ ಸಂವಿಧಾನದಲ್ಲಿ ತನಗಾಗಿ ರೂಪುಗೊಂಡ ತನ್ನ ಹಕ್ಕುಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ ಖಂಡಿತ ತನ್ನನ್ನು ತಾನು ಎಂತಹ ಸಂದರ್ಭಗಳಲ್ಲಿಯೂ ಸಹ ಏಕಾಂಗಿಯಾಗಿ ರಕ್ಷಿಸಿಕೊಳ್ಳುವಂತಹ ಒಂದು ಶಕ್ತಿ ಮಹಿಳೆಯರಿಗೆ ಸಿಗುತ್ತದೆ.

ಈ ಲೇಖನದಲ್ಲಿ ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗೆ ಯಾವೆಲ್ಲಾ ಹಕ್ಕುಗಳನ್ನು ಪ್ರತಿಪಾದಿಸಲಾಗಿದೆ ಎಂದು ತಿಳಿಸುವ ಮತ್ತು ಮಹಿಳೆಯರಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸುವ ಒಂದು ಸಣ್ಣ ಪ್ರಯತ್ನ ಮಾಡಲಾಗಿದೆ.

ಕಾನೂನಿನ ಸಹಾಯಕ್ಕೆ ಉಚಿತ ವಕೀಲರು

ಕಾನೂನಿನ ಸಹಾಯಕ್ಕೆ ಉಚಿತ ವಕೀಲರು

ಮಹಿಳೆಯರ ವಿರುದ್ಧ ಯಾವುದಾದರೂ ಕ್ರಿಮಿನಲ್ ಅಪಘಾತ ಸಂಭವಿಸಿದ ಕ್ಷಣದಲ್ಲಿ ಆ ನಿರ್ದಿಷ್ಟ ಮಹಿಳೆ ಆರಕ್ಷಕ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಮುಂದಾದಂತಹ ಸಂದರ್ಭದಲ್ಲಿ ಆ ಸ್ಥಳದ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಇನ್ಸ್ಪೆಕ್ಟರ್ ಯಾವುದೇ ನಿರ್ಲಕ್ಷ್ಯ ತೋರದೆ ಎಫ್ಐಆರ್ ದಾಖಲಿಸಿಕೊಂಡು ಆ ಮಾಹಿತಿಯನ್ನು ಆದಷ್ಟು ಬೇಗ ಕಾನೂನು ಸೇವಾ ಅಧಿಕಾರಕ್ಕೆ ನೀಡಲೇಬೇಕು. ಮಾಹಿತಿ ಬಂದ ತಕ್ಷಣ ಕಾನೂನು ಸಂಸ್ಥೆ ನೊಂದ ಮಹಿಳೆಗೆ ಉಚಿತವಾಗಿ ಮತ್ತು ರಕ್ಷಣಾತ್ಮಕವಾಗಿ ಕಾನೂನಿನ ಸಹಾಯ ಒದಗಿಸಲು ಮುಂದಾಗಬೇಕು. ಇದು ದೆಹಲಿ ಹೈಕೋರ್ಟ್ ನೀಡಿದ ಆದೇಶ ಕೂಡ. ಆದರೆ ಈ ವಿಷಯದಲ್ಲಿ ಹಲವಾರು ಕಡೆ ತಾತ್ಸಾರ ತೋರಿ ಕಾನೂನಿನ ಪರ ನಿಂತ ಸಿಬ್ಬಂದಿ ಹಣ ವಸೂಲಿಗೆ ಮುಂದಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಹಿಳೆಯರಿಗೆ ಎಚ್ಚರ ಇರಬೇಕು.

ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು

ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು

ಭಾರತೀಯ ಕಾನೂನು ಹೇಳುವ ಪ್ರಕಾರ ಯಾವುದೇ ಮಹಿಳೆ ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಮತ್ತು ಸಂಪೂರ್ಣವಾದ ಹಕ್ಕನ್ನು ಪಡೆದಿರುತ್ತಾಳೆ. ಇಲ್ಲಿ ಅಣ್ಣತಮ್ಮಂದಿರು ಮತ್ತು ತಾಯಿ ಯಾವುದೇ ತಕರಾರು ಮಾಡುವಂತಿಲ್ಲ. ಹಣಕಾಸಿನ ವಿಷಯದಲ್ಲಿ ಕೂಡ ಅಷ್ಟೇ. ಕುಟುಂಬದ ಮುಖ್ಯಸ್ಥ ಅಂದರೆ ತಂದೆ ತನ್ನ ಸಂಪಾದನೆಯನ್ನು ಯಾರಿಗೆ ಸಲ್ಲಬೇಕು ಎಂಬ ಆಶಯ ವ್ಯಕ್ತಪಡಿಸದೆ ಇದ್ದಲ್ಲಿ, ಆತನ ಮರಣದ ನಂತರ ಮಹಿಳೆಯ ಅಣ್ಣತಮ್ಮಂದಿರು ಮತ್ತು ತಾಯಿಯ ಪಾಲಿನಲ್ಲಿ ಸಮಾನವಾಗಿ ಹಕ್ಕು ಪಡೆದಿರುತ್ತಾಳೆ. ಮದುವೆಯಾದ ನಂತರವೂ ಕೂಡ ಆ ಮಹಿಳೆಗೆ ಈ ಹಕ್ಕು ಮುಂದುವರೆಯುತ್ತದೆ.

ಪುರುಷರಿಗೆ ಸಮನಾದ ವೇತನ

ಪುರುಷರಿಗೆ ಸಮನಾದ ವೇತನ

ಮಹಿಳೆಯರು ಪುರುಷರಿಗೆ ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ. ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲಿಯೂ ದುಡಿಯುತ್ತಾಳೆ ಎನ್ನುವ ಮಾತು ಕೇವಲ ಮಾತಿನಲ್ಲಿ ಇರಬಾರದು. ಒಂದು ಕಾರ್ಖಾನೆಯಲ್ಲಿ ಅಥವಾ ಸಂಸ್ಥೆಯಲ್ಲಿ ಪುರುಷರಿಗೆ ಸಮಾನವಾದ ಒಂದೇ ಉದ್ಯೋಗದಲ್ಲಿ ಆ ಮಹಿಳೆ ಇದ್ದರೆ, ಸಮಾನವಾದ ವೇತನ ನೀಡುವುದು ಆ ಸಂಸ್ಥೆಯ ನಿರ್ದಿಷ್ಟ ಹೊಣೆಗಾರಿಕೆ. ಇದು 1976 ರ ವೇತನ ಕಾಯ್ದೆಯಲ್ಲಿ ಜಾರಿಗೊಂಡಿದೆ. ಪುರುಷರು ಮಾಡುವ ಕೆಲಸದಂತೆ ಮಹಿಳೆ ಕೂಡ ಅದೇ ಕೆಲಸ ಮಾಡಿದರೆ ಯಾವುದೇ ಕಾರಣಕ್ಕೂ ವೇತನದಲ್ಲಿ ತಾರತಮ್ಯ ಮಾಡುವಂತಿಲ್ಲ. ಒಂದು ವೇಳೆ ತನಗೆ ಅದೇ ಕೆಲಸಕ್ಕೆ ಕಡಿಮೆ ವೇತನ ಸಿಗುತ್ತಿದೆ ಎಂದು ಅನಿಸಿದರೆ ಆ ಮಹಿಳೆ ಬರವಣಿಗೆಯ ರೂಪದಲ್ಲಿ ತನ್ನ ಹಕ್ಕಿಗಾಗಿ ದೂರು ದಾಖಲಿಸಬಹುದು.

ಲಿವ್-ಇನ್ ರಿಲೇಶನ್ ನಲ್ಲಿ ಮಹಿಳೆಯ ಹಕ್ಕುಗಳು

ಲಿವ್-ಇನ್ ರಿಲೇಶನ್ ನಲ್ಲಿ ಮಹಿಳೆಯ ಹಕ್ಕುಗಳು

ಮದುವೆಯ ಹೊರತು ಕೆಲವರು ಮದುವೆಯಾಗದೆ ಕೇವಲ ಲಿವ್-ಇನ್ ರಿಲೇಷನ್ಶಿಪ್ ನಲ್ಲಿ ಇರಲು ಇಚ್ಛೆ ಪಡುತ್ತಾರೆ. ಅಂತಹ ಮಹಿಳೆಯರಿಗೆ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ರಕ್ಷಣೆ ಸಿಗುತ್ತದೆ. ತನ್ನ ಜೊತೆ ಲಿವ್-ಇನ್ ರೆಲೇಶನ್ಶಿಪ್ ನಲ್ಲಿರುವ ಪುರುಷ ತನ್ನ ಅನುಮತಿ ಇಲ್ಲದೆ ಯಾವುದೇ ವಿಷಯದಲ್ಲಿ ಕಿರುಕುಳ ಅಥವಾ ಶೋಷಣೆ ನಡೆಸಿದರೆ ಅಂತಹ ವ್ಯಕ್ತಿಯ ವಿರುದ್ಧ ದೂರು ದಾಖಲಿಸುವ ಎಲ್ಲಾ ಹಕ್ಕುಗಳು ಆ ಮಹಿಳೆಗೆ ಇರುತ್ತದೆ. ಲಿವ್-ಇನ್ ರೆಲೇಶನ್ಶಿಪ್ ನಲ್ಲಿ ಮಹಿಳೆಗೆ ವಸತಿಯ ಹಕ್ಕು ಕೂಡ ಇರುತ್ತದೆ. ಎಲ್ಲಿಯವರೆಗೆ ಆಕೆ ಲಿವ್-ಇನ್ ರಿಲೇಶನ್ಶಿಪ್ ನಲ್ಲಿ ಮುಂದುವರೆಯಲು ಬಯಸುತ್ತಾಳೋ ಅಲ್ಲಿಯವರೆಗೆ ಆಕೆಯನ್ನು ಮನೆಯಿಂದ ಹೊರ ಹಾಕುವಂತಿಲ್ಲ. ಈ ಸಂಬಂಧ ಕೊನೆಯಾದ ತಕ್ಷಣ ಈ ಹಕ್ಕು ಕೂಡ ಕೊನೆಯಾಗುತ್ತದೆ.

ಮಾತೃತ್ವ ಪ್ರಯೋಜನಗಳ ಹಕ್ಕುಗಳು

ಮಾತೃತ್ವ ಪ್ರಯೋಜನಗಳ ಹಕ್ಕುಗಳು

ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆ ಗರ್ಭಾವಸ್ಥೆಗೆ ಬಂದ ನಂತರ ಆಕೆಗೆ ಸಂಸ್ಥೆಯಿಂದ ಸಿಗಬೇಕಾದ ಸೌಲಭ್ಯಗಳು ಸಿಗಲೇಬೇಕು. ಅವುಗಳು ಆಕೆಯ ಹಕ್ಕು. ಅಂದರೆ ಮೆಟರ್ನಿಟಿ ಬೆನಿಫಿಟ್ ಆಕ್ಟ್ ಅಡಿಯಲ್ಲಿ ಹೆರಿಗೆಯಾದ 12 ವಾರಗಳ ( ಮೂರು ತಿಂಗಳು ) ನಂತರ ಆಕೆ ಮತ್ತೆ ತನ್ನ ಸಂಸ್ಥೆಯ ಕೆಲಸಕ್ಕೆ ಹಾಜರಾಗಬಹುದು ಮತ್ತು ಅಲ್ಲಿಯವರೆಗೆ ಆಕೆಯ ವೇತನದಲ್ಲಿ ಯಾವುದೇ ಕಡಿತ ಮಾಡುವಂತಿಲ್ಲ. ಇದು ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಮಹಿಳೆಯರಿಗೆ ಈ ಬಗ್ಗೆ ಜಾಗೃತಿ ಮೂಡಬೇಕಾದ ಅವಶ್ಯಕತೆ ಇದೆ.

ಆರಕ್ಷಕರಿಗೆ ಸಂಬಂಧಿಸಿದಂತಹ ಹಕ್ಕುಗಳು

ಆರಕ್ಷಕರಿಗೆ ಸಂಬಂಧಿಸಿದಂತಹ ಹಕ್ಕುಗಳು

ಯಾವುದೇ ಒಬ್ಬ ಮಹಿಳೆಯ ವಿರುದ್ಧ ದೂರು ದಾಖಲಾದರೆ ಆ ಮಹಿಳೆಯನ್ನು ಕೇವಲ ಮಹಿಳಾ ಪೊಲೀಸ್ ಅಧಿಕಾರಿ ಮಾತ್ರ ಹುಡುಕಬೇಕು. ಸೂರ್ಯಾಸ್ತವಾದ ಬಳಿಕ ಮತ್ತು ಸೂರ್ಯೋದಯದ ಮುಂಚೆ ಆ ಮಹಿಳೆಯನ್ನು ಪೊಲೀಸರು ಬಂಧಿಸುವಂತಿಲ್ಲ. ವಾರಂಟ್ ರಹಿತವಾಗಿ ಕೂಡ ಬಂಧನ ನಡೆಸುವಂತಿಲ್ಲ. ಜೊತೆಗೆ ತಕ್ಷಣವೇ ಬಂಧಿಸಿದ ಕಾರಣವನ್ನು ಬಹಿರಂಗಪಡಿಸಬೇಕು ಹಾಗೂ ಜಾಮೀನಿಗೆ ಸಂಬಂಧಪಟ್ಟ ಮಾಹಿತಿಯನ್ನು ಕೂಡಲೇ ಆಕೆಗೆ ಒದಗಿಸಬೇಕು. ಬಂಧಿಸಿದ ಮಹಿಳೆಯ ವಿಚಾರವನ್ನು ತಕ್ಷಣವೇ ಆಕೆಯ ಹತ್ತಿರದ ಇನ್ನೊಬ್ಬ ಮಹಿಳೆಗೆ ತಿಳಿಸಬೇಕಾದುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯ. ಈ ವಿಷಯದಲ್ಲಿ ಎಲ್ಲಿಯಾದರೂ ನಿರ್ಲಕ್ಷ ಕಂಡುಬಂದರೆ ಮಹಿಳೆಯರು ಕಾನೂನು ಸಮರ ನಡೆಸಬಹುದು.

ಕೌಟುಂಬಿಕ ಹಿಂಸೆಯ ವಿರುದ್ಧದ ಹಕ್ಕುಗಳು

ಕೌಟುಂಬಿಕ ಹಿಂಸೆಯ ವಿರುದ್ಧದ ಹಕ್ಕುಗಳು

ಕುಟುಂಬದ ಅಡಿಯಲ್ಲಿ ಗಂಡ, ಹೆಂಡತಿ, ಸಂಬಂಧಿಕರು, ಅತ್ತೆ, ಮಾವ ಎಲ್ಲರೂ ಬರುತ್ತಾರೆ. ಒಂದು ಮನೆಯಲ್ಲಿ ಒಬ್ಬ ಮಹಿಳೆಗೆ ಆ ಮನೆಯ ಯಾವುದೇ ಪುರುಷ ಸಂಬಂಧಿಗಳಿಂದ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆಯ ವಾತಾವರಣ ನಿರ್ಮಾಣವಾದರೆ ತಕ್ಷಣವೇ ಅದರ ವಿರುದ್ಧ ದೂರು ದಾಖಲಿಸಬಹುದು. ಎಷ್ಟೋ ಮಹಿಳೆಯರು ತಮ್ಮ ಸಂಸಾರದ ಭವಿಷ್ಯದ ಬಗ್ಗೆ ಯೋಚಿಸಿ ಅಥವಾ ಕುಟುಂಬದ ಮರ್ಯಾದೆಗೆ ಅಂಜಿ ಕೇವಲ ತಮ್ಮನ್ನು ತಾವು ಬಲಿಪಶು ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಮನಸ್ಥಿತಿ ಸ್ವಲ್ಪ ಬದಲಾಗಬೇಕು. ಎಲ್ಲರಂತೆ ನಿಮಗೂ ಕೂಡ ಯಾವುದೇ ತೊಂದರೆಯಾಗದಂತೆ ಜೀವನ ನಡೆಸಲು ಹಕ್ಕಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

English summary

Every Woman Must Know These Laws Related To Her Life

Here we are discussing about Every Woman Must Know These Laws Related To Her life. Today we will tell you about the Rights every Indian Woman must be aware of. Read more.
Story first published: Monday, April 6, 2020, 15:37 [IST]
X
Desktop Bottom Promotion