For Quick Alerts
ALLOW NOTIFICATIONS  
For Daily Alerts

ಶಿಕ್ಷಕರ ದಿನಾಚರಣೆ 2019 ವಿಶೇಷ: ಒಂದು ಸವಿ ನೆನಪು

By ಪ್ರವೀಣ್
|
Teachers Day Special Story
ತೆಂಗಿನ ಮರಕ್ಕೆ ಸರಸರನೆ ಹತ್ತುತ್ತಿರುವ ಅಪ್ಪನ ನೋಡುತ್ತಿರುವಾಗಲೇ "ರಘುರಾಮ ಮೇಸ್ಟ್ರು ಬಂದ್ರು" ಅನ್ನೋ ಅಮ್ಮನ ಧ್ವನಿ ಕೇಳಿ ಮನೆಯೊಳಗೆ ಓಡಿ ಮೂಲೆಯಲ್ಲಿ ಅವಿತುಕೊಂಡೆ. ಅಪ್ಪ ತಂದು ಕೊಟ್ಟ ಎಳೆನೀರು ಕುಡಿಯುತ್ತ "ಇವನನ್ನು ಶಾಲೆಗೆ ಕರೆದುಕೊಂಡೇ ನಾನು ಹೋಗೋದು" ಅಂತ ಮೇಸ್ಟ್ರು ಹೇಳಿದಾಗ ಗುಡ್ಡಕ್ಕೆ ಹೋಗಿ ನೆಲ್ಲಿಕಾಯಿ ಕೊಯ್ಯೊ ನನ್ನ ಕನಸು ಭಗ್ನವಾಯಿತು.

ವಂದೇ ಮಾತರಂ ಪ್ರಾಥನೆ ಮುಗಿಸಿ ಶಾಲಾ ಕೊಠಡಿಯೊಳಗೆ ಅನಾಸಕ್ತಿಯಿಂದ ನಾನು ಮತ್ತು ಸ್ನೇಹಿತ ಸುನೀಲ ಪ್ರವೇಶಿಸಿದಾಗ ನಮ್ಮಿಬ್ಬರ ಕೈಗೆ ಒಂದೊಂದು ಬಿಂದಿಗೆ ಕೊಟ್ಟು ತೆಂಗಿನ ಮರಕ್ಕೆ ನೀರು ಹಾಕುವ ಕೆಲಸಕ್ಕೆ ಹಚ್ಚಿದಾಗ ನಮ್ಮಿಬ್ಬರಿಗೆ ಜೇನುಂಡೆ ತಿಂದಷ್ಟೇ ಖುಷಿ.

ಹನ್ನೆರಡು ತೆಂಗಿನ ಮರಕ್ಕೆ ನೀರು ಹಾಕಿ, ಶಾಲೆಯ ಬೇಲಿ ಆಚೆಗಿನ ಮನೆಯವರ ನೆಲ್ಲಿ ಕಾಯಿ ಮರಕ್ಕೆ ಹತ್ತಿ ಕಿಸೆತುಂಬಾ ನೆಲ್ಲಿಕಾಯಿ ತುಂಬಿಸಿಕೊಂಡು ಕ್ಲಾಸಿನೊಳಗೆ ಬಂದು ಕುಳಿತೆವು. ಎಲ್ಲಾ ಮಕ್ಕಳು ಶೇಷಮ್ಮ ಟೀಚರಿಗೆ ಕಾಪಿ ಪುಸ್ತಕ ತೋರಿಸುತ್ತಿದ್ದರು.

ನನ್ನ ಹೆಸರು ಕರೆದಾಗ ಬ್ಯಾಗಿನೊಳಗಿನಿಂದ ಎಷ್ಟೇ ಹುಡುಕಿದರೂ ಕಾಪಿ ಪುಸ್ತಕ ಸಿಗಲೇ ಇಲ್ಲ. ಪೆಚ್ಚು ಮೋರೆ ಹಾಕಿಕೊಂಡು ಟೀಚರ್ ಉಗ್ರ ಮುಖ ನೋಡಿದಾಗಲೇ ಅಳು ಬಂತು. ಮೇಜಿನ ಮೇಲಿಟ್ಟ ಒರಟು ಬೆತ್ತವನ್ನೇ ಭಯದಿಂದ ವಾರೆಗಣ್ಣಿನಿಂದ ನೋಡುತ್ತಿದ್ದೆ.

ನನ್ನನ್ನು ಎದುರಿಗೆ ಕರೆದವರೇ ನನ್ನ ಬ್ಯಾಗ್ ತರಿಸಿ ಅದನ್ನು ಮೇಜು ಮೇಲೆ ಸುರಿದರು. ಅದರಲ್ಲಿ ಕಾಗದದ ಉಂಡೆಗಳು, ಬಾಲಮಂಗಳ, ಚಿತ್ರಕಥೆಗಳು, ಮುರಿದ ಸ್ಲೇಟು, ವಿಶಿಲ್ ಎಲ್ಲವೂ ರಾಶಿ ಬಿದ್ದವು. ಇವನ ಬ್ಯಾಗಿನಲ್ಲಿ ಪಾಠ ಪುಸ್ತಕಕ್ಕಿಂತ ಕಸವೇ ಜಾಸ್ತಿ ಅನ್ನುತ ಕೈ ಮುಂದೆ ಚಾಚಲು ಹೇಳಿ ಬೆತ್ತ ಕೈಗೆತ್ತಿಕೊಂಡರು.

ಪೆಟ್ಟು ತಿಂದ ಮೇಲೆ ಸಿಂಬಳ ಸುರಿಸುತ್ತ ಅಳುತ್ತ ಕುಳಿತ ನನ್ನ ಬಳಿ ಬಂದ ಟೀಚರು ಸ್ಲೇಟಿನಲ್ಲಿ ದೊಡ್ಡದಾಗಿ ಅ ಆ ಇ ಈ ಬರೆದು ಬೆನ್ನು ಸವರಿದರು. ನಾನು ಅಳು ನಿಲ್ಲಿಸಿ ಆ ಅಕ್ಷರಗಳನ್ನು ದಪ್ಪ ಮಾಡುತ್ತ ಕುಳಿತೆ.

ಹೀಗೆ ಒಂದನೆ ತರಗತಿಯಲ್ಲಿ ಕಲಿತ ಅ ಆ ಇ ಈಯಿಂದ ಹಿಡಿದು ಬದುಕಿನ ಎಬಿಸಿಡಿ ಕಲಿಯುತ್ತಿರುವ ಇಲ್ಲಿನವರೆಗೆ ನನ್ನ ಜೀವನದಲ್ಲಿ ಹಲವು ಗುರುಗಳು ಬಂದಿದ್ದಾರೆ. ವಿದ್ಯಾ ಬುದ್ದಿ ಕಲಿಸಿದ, ಕಲಿಸುವ ಗುರುಗಳಿಗೆಲ್ಲ ಶಿಕ್ಷಕರ ದಿನದ ಶುಭಾಶಯಗಳು.

English summary

Teachers Day Special Story | ಶಿಕ್ಷಕರ ದಿನಕ್ಕೆ ವಿಶೇಷ ಲೇಖನ

Apart from parents, teachers helps to build our life in a proper way. On the occasion of the teachers day one of our reader shared story about his teacher read on .
X
Desktop Bottom Promotion