For Quick Alerts
ALLOW NOTIFICATIONS  
For Daily Alerts

ಕೊಡಗಿನಲ್ಲಿಂದು ಹುತ್ತರಿ ಹಬ್ಬದ ಸಡಗರ

|

ಇಂದು ಕೊಡಗಿನಲ್ಲಿ ಹುತ್ತರಿ/ಪುತ್ತರಿ ಹಬ್ಬ. ಕೊಡವ ಭಾಷೆಯಲ್ಲಿ ‘ಪುದಿಯ ಅರಿ' ಎಂದರೆ ಹೊಸ ಅಕ್ಕಿ ಎಂದರ್ಥ. ಈ ದಿನ ರಾತ್ರಿ ಗದ್ದೆಯಿಂದ ಕದಿರು ತಂದು ಆ ಹೊಸ ಅಕ್ಕಿಯಿಂದ ತಂಬಿಟ್ಟು, ಪಾಯಸವನ್ನು ತಯಾರಿಸಲಾಗುವುದು. ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿಯೆಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ಸಮಯ ಕದಿರು ತರಲು ಸೂಕ್ತ ಕಾಲವೆಂದು ಭಾವಿಸಲಾಗಿದೆ. ಹುಣ್ಣಿಮೆಯಂದು ರೋಹಿಣಿ ನಕ್ಷತ್ರ ಬಾರದಿದ್ದರೆ ಕೃತಿಕೆಯೆಂದು ಈ ಹಬ್ಬವನ್ನು ಆಚರಿಸುತ್ತಾರೆ.

ಕದಿರು ತೆಗೆಯಲು ತೀರ್ಮಾನಿಸಿದ ದಿನ ಮನೆಮಂದಿಯೆಲ್ಲಾ ಗದ್ದೆಗೆ ಬರುತ್ತಾರೆ. ಕೊಡವರಲ್ಲಿ ಐನ್ ಮನೆ ಅಂತ ಇರುತ್ತದೆ. ಕುಟುಂಬದ ಪ್ರತಿ ಸದಸ್ಯನೂ ಈ ಹಬ್ಬದಂದು ಐನ್ ಮನೆಗೆ ಬರಲೇಬೇಕು. ದೂರ ಮೇಯಲು ಬಿಟ್ಟ ದನ-ಕರುಗಳು ಕೂಡ ಮನೆಯಲ್ಲಿರಬೇಕೆಂಬ ಕಟ್ಟಳೆ ಇದೆ.

Huttari Festival In Kodagu

ಈ ಹಬ್ಬದಲ್ಲಿ ಮೊದಲು ಇಗ್ಗುತ್ತತ್ತಪ್ಪ ದೇವಾಸ್ಥಾನದ ಗದ್ದೆಯಲ್ಲಿ 7.45ಕ್ಕೆ ಪೂಜೆಯನ್ನು ಪ್ರಾರಂಭಿಸುತ್ತಾರೆ. ಈ ಸಮಯಕ್ಕೆ ಮನೆಮಂದಿಯೆಲ್ಲಾ ಸೇರಿಕೊಂಡು ತಮ್ಮ ಗದ್ದೆಗೆ ಬರುತ್ತಾರೆ. ಮನೆಯವರಲ್ಲಿ ಒಬ್ಬ ಒಬ್ಬ ಕುತ್ತಿ ಮತ್ತೊಬ್ಬ ಕೋವಿ ಹಿಡಿದಿರುತ್ತಾನೆ. ಅವರಲ್ಲಿ ಕುತ್ತಿ ತೆಗೆದವನು ಬೆಳೆಯನ್ನು ಪೂಜಿಸಿ "ಪೊಲಿ ಪೊಲಿ ದೇವಾ!" ಎಂದು ಗಟ್ಟಿಯಾಗಿ ಪ್ರಾರ್ಥಿಸುತ್ತಾನೆ. ಆಗ ಕೋವಿಯನ್ನೆತ್ತಿಕೊಂಡವನು ಅದನ್ನು ಆಕಾಶಕ್ಕೆ ಹಿಡಿದು ಗುಂಡು ಹಾರಿಸುವನು. ಆಗ ಗದ್ದೆಯಲ್ಲಿ ನೆರೆದವರೆಲ್ಲರೂ "ಪೊಲಿ ಪೊಲಿ ದೇವಾ!" ಎಂದು ಉಚ್ಚ ಕಂಠದಲ್ಲಿ ಹೇಳುತ್ತಾರೆ.

ಕುತ್ತಿಯವನು ಮೊದಲು ಪೈರನ್ನು ಕತ್ತರಿಸಿ ಪಕ್ಕದಲ್ಲಿರುವವನಿಗೆ ಕೊಡುತ್ತಾನೆ, ನಂತರ ಅಲ್ಲಿ ನೆರೆವರಿಗೆಲ್ಲಾ ಕೊಡುತ್ತಾರೆ. ಈ ಸಮಯದಲ್ಲಿ ಗುಂಡಿನ ಶಬ್ದ, ಪಟಾಕಿ ಶಬ್ದ, ಜನರು 'ಪೊಲಿ ಪೊಲಿ ದೇವಾ' ಎಂದು ಹೇಳುವುದು ಇವುಗಳಿಂದ ಹಬ್ಬದ ಸಡಗರ ಮತ್ತಷ್ಟು ಹೆಚ್ಚಾಗುತ್ತದೆ.

ನಂತರ ಹೊಸ ಅಕ್ಕಿಯ ಕಾಳುಗಳನ್ನು ಬಿಡಿಸಿ ಅದನ್ನು ಅಕ್ಕಿ ಪಾಯಸ ಮಾಡುವಾಗ ಹಾಕಿ ತಯಾರಿಸಲಾಗುವುದ. ಈ ಹಬ್ಬಕ್ಕೆ ಅಕ್ಕಿ ಪಾಯಸ, ತಂಬಿಟ್ಟು ಪ್ರಮುಖವಾದ ಅಡುಗೆಯಾಗಿದೆ. ಈ ಹಬ್ಬದಲ್ಲಿ ಕೆಲವರು ತಂಬಿಟ್ಟನ್ನು ಮನೆಯಿಂದ ಮಾಡಿ ತಂದು ಪಾಯಸವನ್ನು ಗದ್ದೆ ಬದಿಯಲ್ಲಿ ಬೆಂಕಿ ಹಾಕಿ ಪಾಯಸ ಮಾಡಿ ಅಲ್ಲಿದ್ದವರಿಗೆಲ್ಲಾ ಹಂಚುತ್ತಾರೆ.

ನಂತರ ಕಿತ್ತ ಪೈರನ್ನು ತಂದು ಪ್ರತಿಯೊಂದು ಮನೆಯ ಮುಂದೆ ಕಟ್ಟುತ್ತಾರೆ. ಈ ರೀತಿ ಕಟ್ಟಿದರೆ ಮನೆಯ ಐಶ್ವರ್ಯ ಹೆಚ್ಚಾಗುವುದು ಎಂಬ ನಂಬಿಕೆಯಿಂದ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಯನ್ನು ಪ್ರಾರ್ಥಿಸುತ್ತಾ ಇದನ್ನು ಕಟ್ಟುತ್ತಾರೆ.

ಈ ಹಬ್ಬದಲ್ಲಿ ಪಾಯಸ, ತಂಬಿಟ್ಟು, ಕಜ್ಜಾಯ ಈ ರೀತಿಯ ಅಡುಗೆಯ ಜೊತೆಗೆ ಹುತ್ತರಿ ಗೆಣಸು ಕೂಡ ಇರುತ್ತದೆ. ಈ ಹಬ್ಬದ ನಂತರವೇ ಬೇಳೆ ಕುಯ್ಯುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕುಯ್ದು ಮನೆಗೆ ತರುವ ಸಮಯವಾಯಿತು ಅನ್ನುವ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುವುದು.

English summary

Huttari Festival In Kodagu | Festival And Lifesttyle | ಕೊಡಗಿನಲ್ಲಿಂದು ಹುತ್ತರಿ ಹಬ್ಬ | ಹಬ್ಬ ಮತ್ತು ಜೀವನ ಶೈಲಿ

Huttari is festival of harvest and getting the harvested paddy home. Kodavas in the district visited paddy fields in a procession in their traditional attire and harvested the crop after offering prayer. The festival is observed either in the month of November or December on full moon day of Rohini nakshatra.
X
Desktop Bottom Promotion