For Quick Alerts
ALLOW NOTIFICATIONS  
For Daily Alerts

ಗುರುವಿಗಾಗಿ ಬೆರಳನ್ನೇ ಕತ್ತರಿಸಿಕೊಟ್ಟ ಏಕಲವ್ಯ-ಗುರು ದ್ರೋಣಾಚಾರ್ಯ ನಡುವಿನ ಕಹಾನಿ

|

ಕಾಡು ಎಂದ ಮೇಲೆ ಕಾಡು ಪ್ರಾಣಿಗಳ ಸಂಚಲನ ಮತ್ತು ಅವುಗಳದೇ ರಾಜ್ಯಭಾರ. ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಬೇಟೆ ಆಡುವುದು , ಆ ಪ್ರಾಣಿಯನ್ನು ಮತ್ತಾವುದೋ ಪ್ರಾಣಿ ಮೇಲೆರಗಿ ಕೊಂದು ತನ್ನ ಹೊಟ್ಟೆ ತುಂಬಿಸಿಕೊಳ್ಳುವುದು ಇವೆಲ್ಲಾ ಮಾಮೂಲಿನ ದಿನಚರಿ. ಅಲ್ಲಿ "ಹಸಿವು" ಎಂಬ ಪದ ಬಿಟ್ಟರೆ ಕರುಣೆ ಕನಿಕರ ಇವೆಲ್ಲಾ ಪ್ರಾಣಿಗಳ ಮಧ್ಯೆ ಹುಡುಕಿದರೂ ಸಿಗುವುದಿಲ್ಲ. ಹೀಗಿರುವಾಗ ಇಲ್ಲಿ ಒಬ್ಬ ಮಾಮೂಲಿ ನರ ಮಾನವನಿಗೆ ಒಂದು ಪ್ರಾಣಿಯ ಮೇಲೆ ಕರುಣೆ ಉಕ್ಕಿ ಹರಿದು ತನ್ನ ಒಳ್ಳೆಯ ನಿಷ್ಠಾವಂತ ವ್ಯಕ್ತಿತ್ವವನ್ನು ಇಡೀ ಜಗತ್ತಿಗೆ ಸಾರಿದ ಕಥೆಯಿದು. ನಾವಿಲ್ಲಿ ಹೇಳುತ್ತಿರುವ ಆ ನರ ಮಾನವ ಬೇರೆ ಯಾರೂ ಅಲ್ಲ. ಗುರು "ದ್ರೋಣಾಚಾರ್ಯ"ರಿಗೆ ಮೆಚ್ಚಿನ ಶಿಷ್ಯ ಎನಿಸಿದ "ಏಕಲವ್ಯ".

ಏಕಲವ್ಯ ಕಾಡಿನಲ್ಲೇ ಹುಟ್ಟಿ , ಕಾಡಿನಲ್ಲೇ ಬೆಳೆದು ಅಲ್ಲೇ ಬದುಕು ಕಟ್ಟಿಕೊಂಡಿದ್ದ ಒಬ್ಬ ಬಡ ಬೇಟೆಗಾರನ ಮಗ. ಕಾಡಿನ ಜನರಿಗೆ ತಮ್ಮ ಆಹಾರಕ್ಕಾಗಿ ಸೊಪ್ಪು ಸದೆ, ಗೆಡ್ದೆ ಗೆಣಸು ಮತ್ತು ಪ್ರಾಣಿಗಳನ್ನು ಬೇಟೆ ಆಡುವುದೇ ಪ್ರತಿದಿನದ ಕಾಯಕ. ಆದರೆ ಐದು ಬೆರಳು ಒಂದೇ ಸಮನಾಗಿರುವುದಿಲ್ಲ ಎಂಬಂತೆ ಅಂತಹ ಬೇಟೆಗಾರರ ಮಧ್ಯೆ ಸಾಧು ಸ್ವಭಾವದ ಏಕಲವ್ಯ ಎಂಬ ಹುಡುಗ ಅದಾಗಲೇ ಜನ್ಮ ತಾಳಿದ್ದ. ಕಾಡಿನಲ್ಲಿ ವಾಸಿಸುತ್ತಿರುವಾಗ ಪ್ರತಿದಿನ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿ ಬೇಟೆ ಆಡುವುದನ್ನು ನೋಡುತ್ತಲೇ ಇದ್ದ. ದುಷ್ಟ ಪ್ರಾಣಿ ಒಂದು ಸಾಧು ಪ್ರಾಣಿಯನ್ನು ಹಿಂಸಿಸುತ್ತಾ ಕೊಲ್ಲಲು ಮುಂದಾದಾಗ ತನ್ನ ಕೈ ಯಲ್ಲಿ ಏನನ್ನೂ ಮಾಡಲಾಗುತ್ತಿಲ್ಲವಲ್ಲ ಎಂದು ಸದಾ ಅಂದುಕೊಳ್ಳುತ್ತಿದ್ದ. ಹೀಗೆ ಪ್ರತಿದಿನ ಮನಸ್ಸಿನಲ್ಲಿ ವ್ಯಥೆ ಪಟ್ಟುಕೊಂಡೇ ಜೀವನ ದೂಡುತ್ತಿದ್ದ. ಆ ಸಮಯದಲ್ಲಿ ಒಂದು ದಿನ ಒಂದು ಚಿರತೆ ಜಿಂಕೆಯನ್ನು ಅಟ್ಟಾಡಿಸಿ ಬೇಟೆಯಾಡುವುದನ್ನು ನೋಡಿದ. ಚಿರತೆಯ ಕೈಯಲ್ಲಿ ಬಿಡಿಸಿಕೊಳ್ಳಲಾರದೆ ಜಿಂಕೆ ಬಹಳ ಒದ್ದಾಡಿ ರಕ್ತ ಸುರಿಸುತ್ತಾ ತನ್ನ ಕಣ್ಣ ಮುಂದೆಯೇ ಬಹಳ ನೋವು ಸಂಕಟ ಪಟ್ಟು ಪ್ರಾಣ ಬಿಟ್ಟಂತಹ ದೃಶ್ಯ ಏಕಲವ್ಯನ ಮನವನ್ನು ಇನ್ನಿಲ್ಲದಂತೆ ಕಲಕಿತು. ಈ ಸಂಧರ್ಭದಿಂದ ಏಕಲವ್ಯ ತೀರಾ ನೊಂದುಕೊಂಡ. ನಾನು ಕೈಲಾಗದ ಇಂತಹ ಪ್ರಾಣಿಗಳಿಗೆ ಏನಾದರೂ ಸಹಾಯ ಮಾಡಲೇಬೇಕಲ್ಲ ಎಂದುಕೊಳ್ಳುತ್ತಾ ಯೋಚನೆ ಮಾಡುತ್ತಾ ಕುಳಿತುಬಿಟ್ಟ. ಅಷ್ಟು ಹೊತ್ತಿಗಾಗಲೇ ಬೇಟೆಗಾರರು ಪ್ರಾಣಿಗಳನ್ನು ಬೇಟೆ ಆಡಲು ಬಿಲ್ಲು ಬಾಣಗಳನ್ನು ಬಳಸುತ್ತಾರೆ ಎಂಬ ಅರಿವು ಇದ್ದಕ್ಕಿದ್ದಂತೆ ಬಂತು . ಆಗ ಅವನ ಮನಸ್ಸಿನಲ್ಲಿ ಒಂದು ಆಸೆ ಬಲವಾಗಿ ಚಿಗುರೊಡೆಯಿತು. ನಾನೇಕೆ ಬಿಲ್ಲುಗಾರಿಕೆ ವಿದ್ಯೆಯೆನ್ನು ಕಲಿಯಬಾರದು , ಕಲಿತರೆ ಇಂತಹ ನೂರಾರು ಅಸಹಾಯಕ ಪ್ರಾಣಿಗಳಿಗೆ ಸಹಾಯ ಮಾಡಬಹುದಲ್ಲ ಎಂದುಕೊಳ್ಳುತ್ತಾ ಕಲಿಯುವುದಾದರೂ ಎಲ್ಲಿ ಎಂಬ ಚಿಂತೆ ಏಕಲವ್ಯನನ್ನು ಬಲವಾಗಿ ಕಾಡತೊಡಗಿತು. ಅಷ್ಟು ಹೊತ್ತಿಗಾಗಲೇ ಗುರು ದ್ರೋಣಾಚಾರ್ಯರು 'ಬಿಲ್ಲುಗಾರಿಕೆಯ ಪ್ರವೀಣ' ಎಂಬ ಸುದ್ದಿ ಎಲ್ಲಾ ಕಡೆಯೂ ಹಬ್ಬಿ ತುಂಬಾ ಜನಪ್ರಿಯವಾಗಿತ್ತು. ಏಕಲವ್ಯನಿಗೂ ಗುರು ದ್ರೋಣಾಚಾರ್ಯರ ಬಳಿ ತನ್ನ ಆಸೆಯನ್ನು ತೋಡಿಕೊಂಡು ಅವರ ಹತ್ತಿರ ಬಿಲ್ಲುಗಾರಿಕೆಯನ್ನು ಕಲಿತು ಗುರುವಿನ ಮೆಚ್ಚಿನ ಶಿಷ್ಯನಾಗಬೇಕೆಂದು ಪಣ ತೊಟ್ಟ.

ಆದರೆ ಗುರು ದ್ರೋಣಾಚಾರ್ಯರು ಅಷ್ಟು ಪ್ರಸಿದ್ಧಿ ಪಡೆಯಲು ಕಾರಣ ಅವರು ರಾಜ ಮನೆತನದ ಗುರು ಎಂದು. ಅವರು ರಾಜ ಮನೆತನ ಮತ್ತು ಅವರಿಗೆ ಸಂಬಂಧಪಟ್ಟ ಸದಸ್ಯರಿಗೆ ಮಾತ್ರ ಬಿಲ್ಲುಗಾರಿಕೆ ವಿದ್ಯೆಯನ್ನು ಕಲಿಸುತ್ತಿದ್ದರು . ಉದಾಹರಣೆಗೆ ಹೇಳಬೇಕೆಂದರೆ ತನ್ನ ನಂಬಲಸಾಧ್ಯವಾದ ಅಪ್ರತಿಮ ಬಿಲ್ಲುಗಾರಿಕೆಯ ಸಾಮರ್ಥ್ಯದಿಂದಲೇ "ಸರ್ವಶ್ರೇಷ್ಠ ಧನುರ್ಧಾರಿ" ಎಂದು ಬಿರುದಾಂಕಿತನಾದ ಮಧ್ಯಮ ಪಾಂಡವ ಅರ್ಜುನ ಕೂಡ ಇವರ ನೆಚ್ಚಿನ ಶಿಷ್ಯ.

ರಾಜ ಗುರುವಿಗೆ ಸಾಮಾನ್ಯರಿಗೆ ವಿದ್ಯೆ ಹೇಳಿಕೊಡಲು ಆಗಿನ ಕಾನೂನಿನ ಪ್ರಕಾರ ಅವಕಾಶ ಇರಲಿಲ್ಲ.

ಏಕಲವ್ಯ ಒಂದು ದಿನ ಗಟ್ಟಿ ಮನಸ್ಸು ಮಾಡಿ ಗುರು ದ್ರೋಣಾಚಾರ್ಯರನ್ನು ಭೇಟಿ ಮಾಡಿ ತನಗೂ ಈ ಬಿಲ್ಲುಗಾರಿಕೆ ವಿದ್ಯೆಯನ್ನು ಹೇಳಿಕೊಟ್ಟು ತನ್ನನ್ನು ಅವರ ಶಿಷ್ಯನಾಗಿ ಸ್ವೀಕರಿಸಲು ಅಂಗಲಾಚಿದ. ಆದರೆ ರಾಜ ಗುರುಗಳಾದ ದ್ರೋಣಾಚಾರ್ಯರಿಗೆ ಕರ್ತವ್ಯ ಪಾಲನೆ ಮತ್ತು ಕರ್ತವ್ಯ ನಿಷ್ಠೆ ಅಡ್ಡ ಬಂತು. ಏಕೆಂದರೆ ಆಗಿನ ರಾಜಮನೆತನದ ನಿಯಮದ ಪ್ರಕಾರ ಒಮ್ಮೆ ರಾಜ ಗುರುಗಳಾಗಿ ಅರಮನೆಗೆ ಸೇರ್ಪಡೆಗೊಂಡವರು ಕೆಲವು ಸಮರ ಸಂಬಂಧಿತ ವಿದ್ಯೆಗಳನ್ನು ಕೇವಲ ರಾಜನ ಆಸ್ಥಾನದ ಸದಸ್ಯರಿಗೆ ಬಿಟ್ಟು ಬೇರೆ ಯಾವ ಸಾಮಾನ್ಯ ಪ್ರಜೆಗೂ ಸಮರಾಭ್ಯಾಸ ಮಾಡಿಸುವಂತಿರಲಿಲ್ಲ ಮತ್ತು ಯುದ್ಧಕ್ಕೆ ಸಂಬಂಧಪಟ್ಟ ಯಾವುದೇ ಕಲೆಗಳನ್ನು ಇನ್ನೊಬ್ಬರಿಗೆ ಹೇಳಿಕೊಡುವಂತಿರಲಿಲ್ಲ . ಹಾಗೆ ಹೇಳಿ ಕೊಟ್ಟಿದ್ದೇ ಆದರೆ ರಾಜನಿಗೂ ಪ್ರಜೆಗೂ ಯಾವ ವ್ಯತ್ಯಾಸವೇ ಇರುವುದಿಲ್ಲ, ರಾಜನ ಸುರಕ್ಷತೆಗೆ ದಕ್ಕೆ ಬಂದಂತಾಗುತ್ತದೆ ಮತ್ತು ಒಬ್ಬ ಪ್ರಜೆ ರಾಜನಿಗೆ ಸಮಾನವಾಗಿ ಬದುಕಿದಂತಾಗುತ್ತದೆ ಮತ್ತು ರಾಜ ಮನೆತನದ ಸದಸ್ಯರಿಗೆ ಆತನು ಗೌರವ ಕೊಡುವುದಿಲ್ಲ ಎಂಬ ನಂಬಿಕೆ ಇತ್ತು . ಸಂದರ್ಭ ಹೀಗಿರುವಾಗ ಏಕಲವ್ಯ ನೋಡಿದರೆ ಒಬ್ಬ ಸಾಮಾನ್ಯ ಬೇಟೆಗಾರನ ಮಗ ಜೊತೆಗೆ ಬಡತನ ಬೇರೆ. ಗುರು ದ್ರೋಣಾಚಾರ್ಯರು ಏಕಲವ್ಯನನ್ನು ಬಹಳ ಕಠಿಣವಾಗಿಯೇ ತಮ್ಮ ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸಿದರು.

ಏಕಲವ್ಯ ನು ಗುರು ದ್ರೋಣಾಚಾರ್ಯರ ಪ್ರತಿಮೆಯನ್ನು ನಿರ್ಮಿಸಿದನು.

ಏಕಲವ್ಯನ ವಿನಂತಿಯನ್ನು ಗುರು ದ್ರೋಣಾಚಾರ್ಯರು ಸ್ಪಷ್ಟವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಏಕಲವ್ಯನು ಬಹಳ ಬೇಸರಗೊಂಡನು ಮತ್ತು ಅಲ್ಲಿಂದ ತಲೆ ತಗ್ಗಿಸಿ ಹೊರಟುಬಿಟ್ಟನು . ಆದರೂ ದೃತಿಗೆಡದೆ ತನ್ನ ಪೂಜ್ಯ ಗುರುವಿಗಾಗಿ ಮನಸ್ಸಿನಲ್ಲಿಯೇ ದೇವಾಲಯವನ್ನು ನಿರ್ಮಿಸಿದ್ದನು. ಆದರೆ ಮನಸ್ಸಿನಲ್ಲಿದ್ದರೆ ಎದುರುಗಡೆ ಇದ್ದಂತೆ ಆಗುತ್ತದೆಯೇ ? ಆದುದರಿಂದ ಗುರು ದ್ರೋಣಾಚಾರ್ಯ ರನ್ನು ನೋಡಿ ಅವರ ಚಿತ್ರ ಆತನ ಮನಸ್ಸಿನಲ್ಲಿ ಹೇಗೆ ಮೂಡಿತ್ತೋ ಅದೇ ತರಹ ತಾನು ವಾಸವಿದ್ದ ಅರಣ್ಯದಲ್ಲಿ ಅವರದೊಂದು ಕಲ್ಲಿನ ಪ್ರತಿಮೆಯನ್ನು ಮಾಡಲು ಮುಂದಾದನು . ಅಂತೆಯೇ ನಿರ್ಮಿಸಿದನು ಕೂಡ. ಪ್ರತಿದಿನವೂ ಕೂಡ ಆ ಪ್ರತಿಮೆಯೇ ತನ್ನ ಗುರು ದ್ರೋಣಾಚಾರ್ಯರು ಎಂದು ತಿಳಿದು ಅತ್ಯಂತ ವಿನಯ , ಭಕ್ತಿ ಭಾವದಿಂದ ಪೂಜಿಸಿ ನಮಸ್ಕರಿಸಿ ತನ್ನ ಬಿಲ್ಲು ವಿದ್ಯೆಯನ್ನು ಆ ಪ್ರತಿಮೆಯ ಮುಂದೆಯೇ ಕಲಿಯಲು ಪ್ರಾರಂಭ ಮಾಡಿದನು. ಪ್ರತಿದಿನದ ಪರಿಶ್ರಮದ ಅಭ್ಯಾಸ ಬಲದಿಂದ ಏಕಲವ್ಯನು ಬಿಲ್ಲುಗಾರಿಕೆಯನ್ನು ಬಹಳ ಚೆನ್ನಾಗಿಯೇ ಕರಗತ ಮಾಡಿಕೊಂಡನು. ಅದೂ ಬಿಲ್ಲು ವಿದ್ಯೆಯಲ್ಲಿ ಶ್ರೇಷ್ಠನಾದ ಅರ್ಜುನನನ್ನೇ ಮೀರಿಸುವಷ್ಟು.

ಮಧ್ಯಮ ಪಾಂಡವ ಅರ್ಜುನ ಏಕಲವ್ಯನನ್ನು ಸಂಧಿಸಿದ ಆ ಕ್ಷಣ !!!

ಹೀಗೇ ನಡೆಯುತ್ತಿರಬೇಕಾದರೆ ಒಮ್ಮೆ ಅರ್ಜುನನಿಗೆ ತನಗಿಂತ ಅದ್ಭುತ ಬಿಲ್ಲುಗಾರನೊಬ್ಬ ಕಾಡಿನಲ್ಲಿರುವ ವಿಷಯ ಹೇಗೋ ತಿಳಿಯಿತು. ತಕ್ಷಣ ಅರ್ಜುನ ಬಹಳ ಆಶ್ಚರ್ಯದಿಂದ ಮತ್ತು ಕಾತುರದಿಂದ ಆ ಬಿಲ್ಲುಗಾರನನ್ನು ನೋಡಲೇಬೇಕೆಂದು ಮತ್ತು ಆತನ ಬಿಲ್ಲು ವಿದ್ಯೆಯ ಕೌಶಲ್ಯಗಳನ್ನು ತಿಳಿಯಬೇಕೆಂದು ಏಕಲವ್ಯನು ವಾಸವಿದ್ದ ಕಾಡಿನ ಕಡೆಗೆ ಪ್ರಯಾಣ ಬೆಳೆಸಿದನು. ಏಕಲವ್ಯನನ್ನು ಕಂಡು ಆತನ ಬಿಲ್ಲುಗಾರಿಕೆಯ ಕಲೆಯನ್ನು ನೋಡಿದ ಅರ್ಜುನ ನಿಂತಲ್ಲೇ ನಿಶ್ಚಲನಾದ. ಏಕೆಂದರೆ ಏಕಲವ್ಯನ ಕೌಶಲ್ಯವನ್ನು ಬರೀ ಬಾಯಿ ಮಾತಿನಲ್ಲಿ ಕೇಳಿದ್ದ ಅರ್ಜುನನಿಗೆ ಅವನ ಸಾಮರ್ಥ್ಯವನ್ನು ಕಣ್ಣಿನ ಎದುರಿನಲ್ಲಿ ಕಂಡು ಮಾತೇ ಹೊರಡದಾಯಿತು. ಆಗ ಅರ್ಜುನ ಏಕಲವ್ಯನನ್ನು ಯಾರು ನಿನ್ನ ಗುರು ? ಇದನ್ನೆಲ್ಲಾ ಎಲ್ಲಿ ಕಲಿತೆ ? ಎಂದು ಕೇಳಿದನು. ತಕ್ಷಣ ಏಕಲವ್ಯನು ನನಗೆ ಗುರುವಾಗಿರುವವರು ದ್ರೋಣಾಚಾರ್ಯರು ಎಂದು ಹೇಳಿದನು. ಇದರಿಂದ ಕೆಂಡಾಮಂಡಲನಾದ ಅರ್ಜುನನು ಒಂದು ಕ್ಷಣವೂ ಅಲ್ಲಿ ನಿಲ್ಲದೇ ಗುರು ದ್ರೋಣಾಚಾರ್ಯರು ಇದ್ದ ಕಡೆಗೆ ಓಡೋಡಿ ಬಂದನು ಮತ್ತು ಅವರನ್ನು ರಾಜದ್ರೋಹಿ ಎಂಬಂತೆ ಬಹಳ ಕಠೋರವಾಗಿ ಮಾತನಾಡಿದನು. ಒಂದು ಕ್ಷಣ ಅವಾಕ್ಕಾದ ದ್ರೋಣಾಚಾರ್ಯರು ಆಶ್ಚರ್ಯಗೊಂಡು ಏನಿದು ಅರ್ಜುನ ಹೀಗೇ ಹೇಳುತ್ತಿದ್ದಾನೆ ,ಯಾರವನು ? ಇದೆಲ್ಲಾ ಹೇಗೆ ತಾನೇ ಸಾಧ್ಯ ? ಇದನ್ನು ಪತ್ತೆ ಹಚ್ಚಲೇಬೇಕು ಎಂದು ನಿರ್ಧರಿಸಿ ತಾನು ಎಂದೂ ಶಿಷ್ಯನೆಂದು ಒಪ್ಪಿಕೊಳ್ಳದ ಅರಣ್ಯವಾಸಿಯಾದ ಬಡ ಶಿಷ್ಯನ ಕಡೆಗೆ ಧಾವಿಸಿದರು.

ಗುರು ದ್ರೋಣಾಚಾರ್ಯರು ಏಕಲವ್ಯನನ್ನು ದಕ್ಷಿಣೆ ಕೇಳಿದ ಸಂದರ್ಭ .

ಏಕಲವ್ಯನಿದ್ದ ಕಡೆಗೆ ಗುರು ದ್ರೋಣಾಚಾರ್ಯರ ಜೊತೆಗೆ ಅರ್ಜುನನೂ ಬಂದನು . ಆಗ ಏಕಲವ್ಯನು ಇಬ್ಬರನ್ನೂ ಅತಿ ವಿನಮ್ರವಾಗಿ , ಭಯ, ಭಕ್ತಿ , ಪ್ರೀತಿ ಆದರಗಳಿಂದ ಸ್ವಾಗತಿಸಿದನು. ಇಬ್ಬರನ್ನೂ ತಾನು ಅಭ್ಯಾಸ ಮಾಡುತ್ತಿದ್ದ ಸ್ಥಳದ ಕಡೆಗೆ ಕರೆದುಕೊಂಡು ಹೋದನು . ಅಲ್ಲಿನ ಸ್ಥಳವನ್ನು ನೋಡಿದ ಅರ್ಜುನ ಮತ್ತು ದ್ರೋಣಾಚಾರ್ಯ ಇಬ್ಬರೂ ಆಶ್ಚರ್ಯಗೊಂಡರು ಮತ್ತು ಜಗತ್ತಿನಲ್ಲಿ ಕೇವಲ ಒಂದು ಪ್ರತಿಮೆಯನ್ನು ತನ್ನ ಗುರುವೆಂದು ತಿಳಿದು ಅಭ್ಯಾಸ ಮಾಡುವ ಇಂತಹ ಶಿಷ್ಯರೂ ಇರುತ್ತಾರಾ ಎಂದುಕೊಂಡರು. ಆಗಿನ ಕಾಲದಲ್ಲಿ ಶಿಷ್ಯನೆಂದು ಸೇರಿಕೊಂಡು ಅಭ್ಯಾಸ ಪೂರ್ತಿ ಮಾಡಿದ ಮೇಲೆ ಗುರುವಿಗೆಂದು ಗುರು ದಕ್ಷಿಣೆಯಾಗಿ ಏನಾದರೂ ಉಡುಗೊರೆ ಅಥವಾ ಕೈಲಾದಷ್ಟು ಹಣವನ್ನು ಕೊಡಲೇಬೇಕೆಂಬ ಪದ್ಧತಿ ಜಾರಿಯಲ್ಲಿತ್ತು. ಅದನ್ನು ಎಲ್ಲಾ ಶಿಷ್ಯರೂ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಇಲ್ಲಿ ಏಕಲವ್ಯ ಗುರು ದ್ರೋಣಾಚಾರ್ಯರನ್ನು ಗುರುವೆಂದು ಒಪ್ಪಿ ತನ್ನ ಬಿಲ್ಲು ವಿದ್ಯೆಯನ್ನು ಸಫಲನಾಗಿ ಪೂರೈಸಿದ್ದರಿಂದ ಸಹಜವಾಗಿಯೇ ಗುರು ದಕ್ಷಿಣೆ ಕೊಡಬೇಕಾಗಿತ್ತು. ಆದ್ದರಿಂದಲೇ ಗುರು ದ್ರೋಣಾಚಾರ್ಯರೇ ಏಕಲವ್ಯನನ್ನು ತಮಗೆ ದಕ್ಷಿಣೆ ಎಂದು ಆತನ ಬಲಗೈ ಹೆಬ್ಬೆರಳನ್ನು ಕತ್ತರಿಸಿ ಕೊಡಬೇಕೆಂದು ಕೇಳಿದರು.

ಏಕಲವ್ಯನ ತ್ಯಾಗ ಅಜರಾಮರ .

ಏಕಲವ್ಯನಿಗೆ ತನ್ನ ಬಲಗೈ ಹೆಬ್ಬೆರಳಿಲ್ಲದೆ ತಾನು ಬಿಲ್ಲುಗಾರಿಕೆಯನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಚೆನ್ನಾಗಿಯೇ ಅರಿವಿತ್ತು . ಆದರೂ ಒಂದು ಕ್ಷಣವೂ ಹಿಂದೆ ಮುಂದೆ ನೋಡದೆ , ತಾನು ಮನಃಪೂರ್ವಕವಾಗಿ ಒಪ್ಪಿಕೊಂಡ ಗುರು ದ್ರೋಣಾಚಾರ್ಯರು ಕೇಳಿದ ತಕ್ಷಣ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿ ಅವರ ಕಾಲ ಬಳಿಯಲ್ಲಿ ಇಟ್ಟ . ಇದರಿಂದ ಗುರು ಶಿಷ್ಯರ ಶಿಷ್ಯತ್ವ ಭಾಂದವ್ಯಕ್ಕೆ ಒಂದು ಹೊಸ ಆಯಾಮವನ್ನೇ ಕೊಟ್ಟ . ಇಲ್ಲಿ ಗುರು ದ್ರೋಣಾಚಾರ್ಯರು ಮೇಲ್ನೋಟಕ್ಕೆ ಬಹಳ ಕ್ರೂರಿಯಾಗಿ ಕಂಡರೂ ಈ ಸನ್ನಿವೇಶಕ್ಕೆ ಮತ್ತೊಂದು ತಿರುವಿದೆ .

ಶ್ರೀ ಶ್ರೀ ರವಿಶಂಕರ್ ರವರು ಹೇಳುವ ಹಾಗೆ , ಇಲ್ಲಿ ಶಿಷ್ಯ ಏಕಲವ್ಯನ ಪ್ರಾಮಾಣಿಕತೆ ಅತ್ಯಂತ ಶ್ಲಾಘನೀಯ . ಗುರು ದ್ರೋಣಾಚಾರ್ಯರು ರಾಜಾಜ್ಞೆಯನ್ನೂ ಕಾಪಾಡಿದರು ಮತ್ತು ತಮ್ಮ ಪರೋಕ್ಷವಾದ ನಿಲುವಿನಿಂದ ಅವರ ಶಿಷ್ಯನಾದ ಏಕಲವ್ಯನ ಹೆಸರು ಇಡೀ ಜಗತ್ತಿನಲ್ಲಿ ಆ ಸೂರ್ಯ-ಚಂದ್ರರಿರುವವರೆಗೂ ಶಾಶ್ವತವಾಗಿರುವಂತೆ ಮಾಡಿದರು. ಈಗಲೂ ಗುರು ಶಿಷ್ಯರ ಸಂಬಂಧ ಎಂದರೆ ಅದು ದ್ರೋಣಾಚಾರ್ಯ ಏಕಲವ್ಯರ ಸಂಬಂಧವಿದ್ದಂತೆ ಇರಬೇಕು ಎಂದು ಎಲ್ಲರೂ ಮಾತನಾಡುತ್ತಾರೆ . ಇದೇ ಅಲ್ಲವೇ , ಒಬ್ಬ ಶಿಷ್ಯ ತನಗೆ ಪಾಠ ಹೇಳಿಕೊಟ್ಟ ಗುರುವಿಗೆ ಸಲ್ಲಿಸುವ ಅತ್ಯಂತ ಮಹತ್ವಪೂರ್ಣ ಗೌರವ ಎಂದರೆ . ತಮ್ಮ ಕಷ್ಟ ಕಾರ್ಪಣ್ಯ ಏನೇ ಇದ್ದರೂ ಸಹ ಅದನ್ನು ಯಾರ ಬಳಿಯೂ ತೋರಿಸಿಕೊಳ್ಳದೆ ಸದಾ ವಿದ್ಯಾರ್ಥಿಗಳ ಭವಿಷ್ಯವನ್ನು ಸುಂದರವಾಗಿ ರೂಪುಗೊಳಿಸಲು ತಮ್ಮ ಇಡೀ ಜೀವನವನ್ನೇ ಸವೆಸುವ ಎಲ್ಲಾ ಗುರುಗಳಿಗೂ ನಮ್ಮ ಭಕ್ತಿಪೂರ್ವಕ ನಮನಗಳು .

ಓಂ ಶ್ರೀ ಗುರುವೇ ನಮಃ .

English summary

Mytholgical Story: Eklavya And Guru Dronacharya

Eklavya wanted to save the deer which were hunted by leopards in the forest. So he requested Guru Drona to teach him archery. Since it was against the rules for a teacher of the royal princes to teach the commoners, he rejected the request. However, Eklavya considering him Guru from his heart, practised aggressively and perfected himself at the skill.
Story first published: Saturday, June 8, 2019, 14:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X