For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯಬಾರದು, ಏಕೆ?

|

ಬೇಸಿಗೆಯಲ್ಲಿ ಮನೆಯೊಳಕ್ಕೆ ಬಂದಾಗ ನೀವು ಮಾಡುವ ಮೊದಲ ಕೆಲಸವೆಂದರೆ ಫ್ರಿಜ್ಜಿನಲ್ಲಿಟ್ಟ ಶೀತಲ ನೀರನ್ನು ಗಟಗಟ ಕುಡಿಯುವುದೇ? ಇದರಿಂದ ಬೇಸಿಗೆಯ ಬೇಗೆಯಲ್ಲಿ ಬೆಂದಿದ್ದ ನಿಮ್ಮ ದೇಹ ತಕ್ಷಣವೇ ತಣಿದು ನಿಮಗೆ ಆರಾಮವೆನಿಸುತ್ತದೆಯೇ? ಅದರಲ್ಲೂ ಅತಿ ಬಿಸಿ ಇರುವ ದೆಹಲಿ ಮೊದಲಾದ ನಗರಗಳಲ್ಲಿ, ನಮ್ಮ ಕರ್ನಾಟಕದ ಬಳ್ಳಾರಿಯಲ್ಲಿ, ಹೈದ್ರಾಬಾದಿನ ಬಂಡೆಗಳ ನಡುವಣ ಪ್ರದೇಶದಲ್ಲಿ ಎದುರಾಗುವ ಸೆಖೆಗೆ ಶೀತಲ ನೀರು ಸಹಾ ಸಾಕಾಗುವುದಿಲ್ಲ ಎನಿಸುತ್ತದೆ.

ಉತ್ತರ ಭಾರತದಲ್ಲಿ ನಲವತ್ತು ಡಿಗ್ರಿ ಮೀರಿದರೆ ಇದು ಬಿಸಿ ಹವೆಯ ಎಚ್ಚರಿಕೆಯ ಮುನ್ಸೂಚನೆಗೂ ಕಾರಣವಾಗಬಹುದು. ಬಿಸಿ ಹೆಚ್ಚುತ್ತಿದ್ದಷ್ಟೂ ಫ್ರಿಜ್ಜಿನ ನೀರಿಗೆ ಹೆಚ್ಚು ಹೆಚ್ಚು ಬೇಡಿಕೆ ಕುದುರುತ್ತದೆ ಹಾಗೂ ಕುಡಿಯುವ ಇತರ ಪೇಯಗಳಲ್ಲಿಯೂ ಮಂಜುಗಡ್ಡೆಯ ತುಂಡುಗಳನ್ನು ಹಾಕಿಯೇ ಕುಡಿಯುವುದು ಅವ್ಯಾಹತವಾಗುತ್ತದೆ.

Chilled Water In Summer

ಶೀತಲ ನೀರು ಬಿಸಿಲ ಬೇಗೆಯನ್ನು ತಣಿಸುವುದೇನೋ ಸರಿ, ಆದರೆ ಇದು ನಿಮ್ಮ ಜೀರ್‍ಣಾಂಗಗಳಿಗೆ ಆರೋಗ್ಯಕರವೇ? ವಾಸ್ತವದಲ್ಲಿ, ಬಿಸಿಲ ಬೇಗೆಯಿಂದ ನಮ್ಮ ತ್ವಚೆಗೇ ಹೆಚ್ಚು ತೊಂದರೆಯೇ ಹೊರತು ನಮ್ಮ ಜೀರ್‍ಣಾಂಗಗಳಿಗೆ ಅಲ್ಲ. ಹಾಗಾಗಿ ಸೆಖೆಯನ್ನು ತಣಿಸಲು ಶೀತಲ ನೀರನ್ನು ಕುಡಿಯುವುದರಿಂದ ಜೀರ್ಣಾಂಗಗಳಿಗೆ ನಾವು ತೊಂದರೆಯನ್ನು ಮಾಡುತ್ತಿದ್ದೇವೆ ಎಂದು ನಿಮಗೆ ಗೊತ್ತೇ? ಅಲ್ಲದೇ ನಾವು ಸೇವಿಸುವ ಆಹಾರ ತಣ್ಣಗಿದ್ದಷ್ಟೂ ಇದರ ದುಷ್ಪರಿಣಾಮಗಳು ಜೀರ್‍ಣಾಂಗಗಳ ಮೇಲೆ ಆಗುವ ಸಾಧ್ಯತೆ ಹೆಚ್ಚು.

ಸೆಖೆ ಭಾರತಕ್ಕೆ ಇಂದು ನಿನ್ನೆ ಬಂದಿದ್ದೇನೂ ಅಲ್ಲ, ಸಾವಿರಾರು ವರ್ಷಗಳಿಂದಲೂ ಇದೆ. ಆದರೆ ಆಯುರ್ವೇದ ಈ ತೊಂದರೆಯಿಂದ ಪರಿಹಾರ ಪಡೆಯಲು ಎಂದಿಗೂ ತಣ್ಣನೆಯ ನೀರನ್ನು ಕುಡಿಯುವಂತೆ ಹೇಳಿಲ್ಲ. The Complete Book Of Ayurvedic Home Remedies ಎಂಬ ಪುಸ್ತಕದಲ್ಲಿ ಈ ಬಗ್ಗೆ ಹಲವಾರು ಮಾಹಿತಿಗಳನ್ನು ಒದಗಿಸಲಾಗಿದೆ.

ಇದರಲ್ಲಿ ಅನಾರೋಗ್ಯಕರ ಆಹಾರಕ್ರಮದ ಪಾಠದಲ್ಲಿ ಹೀಗೆ ಹೇಳಲಾಗಿದೆ "ಅತಿ ಶೀತಲ ನೀರನ್ನು ಊಟದ ಸಮಯದಲ್ಲಿಯೇ ಆಗಲಿ ಇತರ ಸಮಯದಲ್ಲಿಯೇ ಆಗಲಿ ಕುಡಿಯುವ ಮೂಲಕ ನೈಸರ್ಗಿಕ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಜೀರ್ಣರಸಗಳ ಪ್ರಭಾವವನ್ನು ಕುಂದಿಸುತ್ತದೆ ಮತ್ತು ಈ ಮೂಲಕ ದೋಶಗಳ ಸಮತೋಲನವನ್ನು ಏರುಪೇರುಗೊಳಿಸುತ್ತದೆ".

ಹಾಗಾಗಿ ಊಟದ ಸಮಯದಲ್ಲಿ ಶೀತಲ ನೀರು ಅಥವ ಇತರ ರಸಗಳನ್ನು ಸೇವಿಸಬಾರದು. ಇದರ ಬದಲಿಗೆ ಆಹಾರ ಬಾಯಿಯಲ್ಲಿದ್ದಾಗಲೇ ಉಗುರುಬೆಚ್ಚನೆಯ ನೀರನ್ನು ಕುಡಿಯಬೇಕು ಎಂದು ಆಯುರ್ವೇದ ಸೂಚಿಸುತ್ತದೆ.

ನಿಮ್ಮ ಶೀತಲ ನೀರು ಕುಡಿಯುವ ಅಭ್ಯಾಸವನ್ನು ತ್ಯಜಿಸಿ ಉಗುರುಬೆಚ್ಚನೆಯ ನೀರನ್ನು ಏಕಾಗಿ ಕುಡಿಯಬೇಕು ಎಂದು ಆಯುರ್ವೇದ ಹೇಳುತ್ತಿದೆ ಎಂಬುದನ್ನು ನಿರೂಪಿಸುವ ಕಾರಣಗಳು ಇಲ್ಲಿವೆ.

1. ಜೀರ್ಣಕ್ರಿಯೆಗಳನ್ನು ನಿಯಂತ್ರಿಸುತ್ತದೆ

1. ಜೀರ್ಣಕ್ರಿಯೆಗಳನ್ನು ನಿಯಂತ್ರಿಸುತ್ತದೆ

ಅತಿ ಶೀತಲ ನೀರು ಮತ್ತು ತಣ್ಣನೆಯ ಪಾನೀಯಗಳನ್ನು ಕುಡಿಯುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಇದರಿಂದ ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಅಲ್ಲದೇ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ನೈಸರ್ಗಿಕ ಪ್ರತಿಕ್ರಿಯೆಗೂ ಪ್ರತಿರೋಧ ಒಡ್ಡುತ್ತದೆ.

ಆಹಾರ ಸೇವನೆಯ ಸಮಯದಲ್ಲಿ ಮೆದುಳು ಹೆಚ್ಚಿನ ಪ್ರಾಧಾನ್ಯತೆಯನ್ನು ಜೀರ್ಣಕ್ರಿಯೆಗೆ ನೀಡಬೇಕಾಗಿದ್ದು ಈಗ ಅನಿವಾರ್ಯವಾಗಿ ದೇಹವನ್ನು ತಂಪುಗೊಳಿಸುವ ವ್ಯವಸ್ಥೆಯತ್ತ ಹರಿಸಬೇಕಾಗುತ್ತದೆ.

ಈ ಪ್ರಕ್ರಿಯೆಯಿಂದಾಗಿ ನೀವು ನೀರು ಕುಡಿದಿದ್ದರೂ ಇದನ್ನು ಸೂಕ್ತವಾಗಿ ಬಳಸಿಕೊಳ್ಳದೇ ಹೋಗುವ ಮೂಲಕ ದೇಹ ನೀರಿನ ನಷ್ಟಕ್ಕೆ ಒಳಗಾಗುತ್ತದೆ ಹಾಗೂ ನಿರ್ಜಲೀಕರಣ ಎದುರಾಗುತ್ತದೆ. ನಮ್ಮ ದೇಹ ಸಾಮಾನ್ಯ ಸ್ಥಿತಿಯಲ್ಲಿ 37 ಡಿಗ್ರಿ C ಇರುತ್ತದೆ. ಶೀತಲ ನೀರನ್ನು ಕುಡಿದಾಗ ಅಥವಾ ಶೀತಲ ಆಹಾರ ಸೇವಿಸಿದಾಗ ಈ ತಂಪುತನ ದೇಹದ ತಾಪಮಾನವನ್ನು ಕಸಿದುಕೊಳ್ಳುತ್ತದೆ ಹಾಗೂ ಇದನ್ನು ಸರಿಪಡಿಸಲು ದೇಹಕ್ಕೆ ಹೆಚ್ಚಿನ ಉಷ್ಣತೆಯನ್ನು ಉತ್ಪಾದಿಸಬೇಕಾಗಿ ಬರುತ್ತದೆ.

ಅಂದರೆ ನಿಜವಾಗಿ ಜೀರ್ಣಕ್ರಿಯೆಗೆ ಬಳಕೆಯಾಗಬೇಕಾಗಿದ್ದ ಶಕ್ತಿ ಹೀಗೆ ಪೋಲಾಗಿ ಹೋಗುತ್ತದೆ. ಹಾಗಾಗಿ ಜೀರ್ಣಕ್ರಿಯೆಯ ಮೂಲಕ ಪಡೆಯಬೇಕಾಗಿದ್ದ ಪೋಷಕಾಂಶಗಳು ದೇಹಕ್ಕೆ ಪೂರ್ಣಪ್ರಮಾಣದಲ್ಲಿ ದೊರಕದೇ ಹೋಗುತ್ತವೆ. ಇದೇ ಕಾರಣಕ್ಕೆ ಆಹಾರ ಸೇವನೆಯ ಸಮಯದಲ್ಲಿ ಸಾದಾ ನೀರನ್ನು ಕುಡಿಯುವುದೇ ಉತ್ತಮ.

2. ಗಂಟಲ ಬೇನೆ

2. ಗಂಟಲ ಬೇನೆ

ನಿಮ್ಮ ಹಿರಿಯರು ನಿಮಗೆ ತಣ್ಣನೆಯ ನೀರನ್ನು ಕುಡಿಯದಿರುವಂತೆ ತಡೆಯುತ್ತಿದ್ದುದು ಎಂದರೆ ತಕ್ಷಣವೇ ಎದುರಾಗುವ ಗಂಟಲ ಬೇನೆ ಮತ್ತು ಇತರ ತೊಂದರೆಗಳಾಗಿವೆ. ಕಟ್ಟುವ ಮೂಗು, ಗಂಟಲ ಕೆರೆತ, ಕಫ, ಸೀನುವಿಕೆ, ಸೋರುವ ಮೂಗು, ಕಟ್ಟಿಕೊಳ್ಳುವ ಮೂಗು ಮೊದಲಾದ ಎಲ್ಲಾ ತೊಂದರೆಗಳು ಎದುರಾಗಬಹುದು.

ಅದರಲ್ಲೂ ಊಟದ ಬಳಿಕ ಸೇವಿಸುವ ತಣ್ಣನೆಯ ನೀರು ಗಂಟಲ ಭಾಗದಲ್ಲಿ ಕಫ ಉಂಟಾಗುವಂತೆ ಮಾಡುತ್ತದೆ (respiratory mucosa), ಈ ಪದರ ತೆಳುವಾಗಿರಬೇಕು. ಶೀತಲ ನೀರು ಇದನ್ನು ದಪ್ಪನಾಗಿಸಿ ಉಸಿರಾಟಕ್ಕೇ ತೊಂದರೆಯುಂಟು ಮಾಡುತ್ತದೆ. ಅಲ್ಲದೇ ಹಲವಾರು ಸೋಂಕುಕಾರಕ ರೋಗಗಳಿಗೂ ಮುಕ್ತ ಆಹ್ವಾನ ನೀಡುತ್ತದೆ.

3. ಕೊಬ್ಬಿನ ಕಣಗಳನ್ನು ಒಡೆಯುವುದನ್ನು ತಡೆಯುತ್ತದೆ.

3. ಕೊಬ್ಬಿನ ಕಣಗಳನ್ನು ಒಡೆಯುವುದನ್ನು ತಡೆಯುತ್ತದೆ.

ತಜ್ಞರ ಪ್ರಕರ, ಊಟದ ಬಳಿಕ ತಣ್ಣನೆಯ ನೀರನ್ನು ಕುಡಿಯುವುದರಿಂದ ಇದರ ತಂಪುತನ ಆಹಾರದಲ್ಲಿರುವ ಕೊಬ್ಬುಗಳನ್ನು ಘನೀಕರಿಸುತ್ತದೆ ಹಾಗೂ ಇದನ್ನು ಒಡೆಯುವುದನ್ನು ತುಂಬ ಕಷ್ಟಕರವಾಗಿಸುತ್ತದೆ. ಆಯುರ್ವೇದ ಊಟದ ತಕ್ಷಣವೇ ನೀರು ಕುಡಿಯಬಾರದು ಎಂದು ತಿಳಿಸುತ್ತದೆ. ಊಟದ ಅರ್ಧ ಘಂಟೆಯ ಬಳಿಕವೇ ನೀರು ಕುಡಿಯಿರಿ ಎಂದು ಬೆಂಗಳೂರು ಮೂಲದ ಆಹಾರತಜ್ಞೆ ಡಾ. ಅಂಜು ಸೂದ್ ತಿಳಿಸುತ್ತಾರೆ.

4. ಹೃದಯದ ಬಡಿತದ ಗತಿಯನ್ನು ತಗ್ಗಿಸಬಹುದು

4. ಹೃದಯದ ಬಡಿತದ ಗತಿಯನ್ನು ತಗ್ಗಿಸಬಹುದು

ಕೆಲವು ಅಧ್ಯಯನಗಳ ಪ್ರಕಾರ, ತಣ್ಣೀರು ಸೇವನೆಯಿಂದ ಹೃದಯದ ಬಡಿತದ ಗತಿ ತಗ್ಗಬಹುದು. ಅದರಲ್ಲೂ ಅತಿ ಶೀತಲ ಮತ್ತು ಮಂಜುಗಡ್ಡೆ ಬೆರೆಸಿದ ನೀರನ್ನು ಕುಡಿಯುವುದರಿಂಡ ನಮ್ಮ ದೇಹದ ಹತ್ತನೆಯ ನರವೆಂದು ಪರಿಗಣಿಸಲಾಗುವ ವೇಗಸ್ ನರಕ್ಕೆ ಪ್ರಚೋದನೆ ದೊರಕುತ್ತದೆ.

ಇದು ನಮ್ಮ ನರವ್ಯವಸ್ಥೆಯ ಅತಿ ಮುಖ್ಯ ನರವಾಗಿದ್ದು ತಕ್ಷಣವೇ ಹೃದಯದ ಬಡಿತದ ಗತಿಯನ್ನು ಇಳಿಸುತ್ತದೆ. ಇದೇ ಕಾರಣಕ್ಕೆ ಅತಿ ಶೀತಲ ನೀರು ಮತ್ತು ಆಹಾರವನ್ನು ಸೇವಿಸಿದ ತಕ್ಷಣ ಹೃದಯದ ಬಡಿತದ ಗತಿ ಇಳಿಮುಖವಾಗುತ್ತದೆ. ಇದು ಆರೋಗ್ಯದ ಮೇಲೆ ಹಲವು ರೀತಿಯಿಂದ ಪ್ರಭಾವ ಬೀರಬಹುದು.

5. ಆಘಾತದ ಸಾಧ್ಯಾತೆ

5. ಆಘಾತದ ಸಾಧ್ಯಾತೆ

ವ್ಯಾಯಾಮದ ಬಳಿಕವೂ ತಣ್ಣಗಿನ ನೀರನ್ನು ಕುಡಿಯಬಾರದು ಎಂದು ದೇಹದಾರ್ಢ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ. ಇವರ ಪ್ರಕಾರ ಒಂದು ಲೋಟ ಉಗುರುಬೆಚ್ಚನೆಯ ನೀರು ಕುಡಿಯಲು ಸೂಕ್ತವಾಗಿದೆ. ವ್ಯಾಯಮದ ಸಮಯದಲ್ಲಿ ದೇಹದಲ್ಲಿ ಬಿಸಿ ಉತ್ಪತ್ತಿಯಾಗುತ್ತದೆ ಹಾಗೂ ಇದನ್ನು ತಣಿಸಲು ತಕ್ಷಣವೇ ಮಂಜುಗಡ್ಡೆ ಬೆರೆಸಿದ ಪಾನೀಯ ಸೇವಿಸಿದರೆ ಇದು ದೇಹದ ತಾಪಮಾನಗಳಲ್ಲಿ ಆಗಾಧ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಹಾಗೂ ಇದು ನೇರವಾಗಿ ಜೀರ್‍ಣಾಂಗಗಳ ಮೇಲೆ ಪ್ರಭಾವ ಬೀರಬಹುದು.

ಇದರ ಜೊತೆಗೇ ವ್ಯಾಯಾಮದ ಬಳಿಕ ದೇಹ ನೇರವಾಗಿ ನೀರನ್ನು ಹೀರಿಕೊಳ್ಳಲಾರದು. ಆದ್ದರಿಂದ ನೀರು ಕುಡಿಯುವುದರಿಂದ ಪ್ರಯೋಜನವೂ ಇಲ್ಲ. ಕೆಲವು ವ್ಯಕ್ತಿಗಳಿಗೆ ವ್ಯಾಯಾಮದ ಬಳಿಕ ತಣ್ಣೀರು ಸೇವಿಸಿದಾಕ್ಷಣ ಹೊಟ್ಟೆ ನೋವು ಎದುರಾಗುತ್ತದೆ. ಏಕೆಂದರೆ ಈ ತಂಪುತನ ಜೀರ್ಣಾಂಗಗಳಿಗೆ ಆಘಾತವನ್ನೇ ನೀಡಿರುತ್ತದೆ, ಇದು ನೋವಿನ ರೂಪದಲ್ಲಿ ಪ್ರಕಟಗೊಳ್ಳುತ್ತದೆ.

ಈ ಕಾರಣಗಳು ನಿಮ್ಮ ನೀರಿನ ಬಳಕೆಯನ್ನು ಸಂಪೂರ್ಣವಾಗಿ ಕಡಿತಗೊಳಿಸುತ್ತವೆ ಎಂದೇನೂ ಇಲ್ಲ. ಏರುತ್ತಿರುವ ತಾಪಮಾನದಲ್ಲಿ ನಿಮ್ಮ ದೇಹವನ್ನು ಎಲ್ಲಾ ಸಮಯದಲ್ಲೂ ಸಾಕಷ್ಟು ಆರ್ದ್ರತೆ ಒದಗಿಸುವುದು ಅತ್ಯಗತ್ಯ. ಕೋಣೆಯ ಉಷ್ಣಾಂಶದಲ್ಲಿ ಅಥವಾ ಬೆಚ್ಚಗಿನ ನೀರಿನ ಪ್ಯಾಕ್‌ನಲ್ಲಿರುವ ನೀರನ್ನು ಸೇವಿಸುವುದರಿಂದ ಕೇವಲ ಹೆಚ್ಚಿನ ಜಲಸಂಚಯನ ಮತ್ತು ಜೀರ್ಣಕ್ರಿಯೆ ಶೀಘ್ರಗೊಳ್ಳುವುದನ್ನು ಹೊರತುಪಡಿಸಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.

ಇದು ನೈಸರ್ಗಿಕ ಜೀರ್ಣಕಾರಿ ಕಿಣ್ವಗಳ ಉತ್ತಮ ಪ್ರಚೋದನೆಗೆ ಕಾರಣವಾಗುತ್ತದೆ ಮತ್ತು ಸುಗಮ ಮತ್ತು ಉತ್ತಮ ಜೀರ್ಣಕ್ರಿಯೆಯನ್ನು ಖಾತ್ರಿಗೊಳಿಸುತ್ತದೆ. ಬಿಸಿನೀರು ಆಹಾರವನ್ನು ಸುಲಭವಾಗಿ ಒಡೆಯುತ್ತದೆ ಮತ್ತು ನಿಮ್ಮ ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ಇದು ನೈಸರ್ಗಿಕ ರಕ್ತ ಶುದ್ಧೀಕರಣವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ದೇಹದ ನೈಸರ್ಗಿಕ ತ್ಯಾಜ್ಯವಿಲೇವಾರಿ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಅದ್ಭುತ ದ್ರವವನ್ನು ಹೆಚ್ಚು ಹೆಚ್ಚಾಗಿ ಕುಡಿಯಿರಿ. ಆದರೆ ಇದು ಸಾಮಾನ್ಯ ತಾಪಮಾನದಲ್ಲಿರಲಿ ಅಥವಾ ಉಗುರು ಬೆಚ್ಚಗಿರಲಿ, ಶೀತಲವಂತೂ ಬೇಡವೇ ಬೇಡ.

English summary

Reasons Why You Should Not Drinkl Chilled This Summer

During summer we feel to drink cold water. Here are why you should not drink chilled water in summer, read on,
Story first published: Saturday, February 22, 2020, 20:14 [IST]
X
Desktop Bottom Promotion