For Quick Alerts
ALLOW NOTIFICATIONS  
For Daily Alerts

ಬೆನ್ನು ನೋವಿನ ಉಪಶಮನಕ್ಕೆ ಸರಳ ಸೂತ್ರ

By manu
|

ಆಧುನಿಕತೆ ತನ್ನೊಂದಿಗೆ ಅನಾಗರೀಕತೆಯನ್ನೂ ಕೊಂಡೊಯ್ಯುತ್ತದೆ ಎನ್ನುತ್ತದೆ ಒಂದು ಸುಭಾಷಿತ. ಇಂದಿನ ದಿನಕ್ಕೆ ಅನ್ವಯಿಸುವುದಾದರೆ ಈ ಮಾತು ಅನಾರೋಗ್ಯಕ್ಕೂ ಸಲ್ಲುತ್ತದೆ. ಏಕೆಂದರೆ ಆಧುನಿಕ ಜೀವನದಲ್ಲಿ ನಮಗೆ ಲಭ್ಯವಿರುವ ಸೌಲಭ್ಯಗಳನ್ನು ಅನುಭವಿಸುತ್ತಿರುವ ನಾವು ನಮ್ಮ ದೇಹಗಳಿಗೆ ನಿಸರ್ಗ ಅಗತ್ಯವೆಂದು ನೀಡಿದ್ದ ವ್ಯಾಯಾಮ ಮತ್ತು ಚಟುವಟಿಕೆಗಳನ್ನು ಕಡಿಮೆ ಮಾಡಿಬಿಟ್ಟಿದ್ದೇವೆ. ನಾಟಿ ವಿದ್ಯೆಗೆ ವಿದಾಯ ಹೇಳಿ ಹಳ್ಳಿಯಿಂದ ನಗರ ಸೇರಿರುವವರು ಕುಳಿತು ಕೆಲಸ ಮಾಡುವ ಅಭ್ಯಾಸದಿಂದಾಗಿ ಬೆನ್ನು ನೋವು ಈಗ ಸಾರ್ವತ್ರಿಕವಾಗಿದೆ.

ಬೆನ್ನುನೋವನ್ನು ಪರಿಗಣಿಸಿದರೆ ಇದಕ್ಕೆ ಹಲವು ಕಾರಣಗಳು ನಮ್ಮ ಸೋಮಾರಿತನದಿಂದಲೇ ಬಂದಿರುವುದು ಕಂಡುಬರುತ್ತದೆ. ತಜ್ಞರ ಪ್ರಕಾರ ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು, ನಮ್ಮ ಆಹಾರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಕೊರತೆ, ಅಗತ್ಯ ಪೋಷಕಾಂಶಗಳ ಕೊರತೆ, ಅನಗತ್ಯವಾದ ಪೋಷಕಾಂಶಗಳನ್ನು ಬಲವಂತವಾಗಿ ತುರುಕುವುದು (ಸಿದ್ಧ ಆಹಾರಗಳ ಮೂಲಕ), ಕೆಲಸ ಮುಗಿಸುವ ಭರದಲ್ಲಿ ಹೆಚ್ಚು ಕಾಲ ಕುಳಿತುಕೊಳ್ಳುವುದು, ಸ್ಥೂಲಕಾಯ ಮೊದಲಾದವು ಬೆನ್ನುನೋವಿಗೆ ಕಾರಣವಾಗಿವೆ.

ಈ ನೋವು ಚಿಕ್ಕದಾಗಿ ಪ್ರಾರಂಭವಾದರೂ ನಾವು ಮಾಡುವ ಅಸಡ್ಡೆಯಿಂದ ತೀವ್ರತರದ ನೋವಾಗಿ ಮಾರ್ಪಾಡು ಹೊಂದಬಹುದು! ಇನ್ನುಳಿದಂತೆ ಈಗಾಗಲೇ ಇರುವ ಇತರ ಕಾಯಿಲೆಗಳು, ಸಂಧಿವಾತ, ಮಹಿಳೆಯರಲ್ಲಿ ರಜೋ ನಿವೃತ್ತಿ, ಹಿಂದೆ ನಡೆಸಿದ್ದ ಶಸ್ತ್ರಚಿಕಿತ್ಸೆ ಮೊದಲಾದವೂ ಬೆನ್ನು ನೋವನ್ನು ಹುಟ್ಟುಹಾಕಬಹುದು ಅಥವಾ ಇದ್ದ ನೋವನ್ನು ಹೆಚ್ಚಿಸಬಹುದು.

ಬೆನ್ನುನೋವನ್ನು ಪೂರ್ಣವಾಗಿ ಒಮ್ಮೆಲೇ ಕಡಿಮೆಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಬೆನ್ನುಹುರಿ ಬೆನ್ನುಮೂಳೆಯೊಂದಿಗೇ ಮಿಳಿತವಾಗಿದೆ. ದೇಹದ ಇಡಿಯ ಭಾರ ಬೆನ್ನುಮೂಳೆಯ ಕೆಳಭಾಗದ ತಟ್ಟೆ (disc) ಮೇಲೆ ಅತಿ ಹೆಚ್ಚಾಗಿ ಬೀಳುತ್ತದೆ. ಇದೇ ಕಾರಣದಿಂದ ಬೆನ್ನು ನೋವು ಬೆನ್ನುಮೂಳೆಯ ಅತಿಕೆಳಗಿನ ಭಾಗದಲ್ಲಿಯೇ ಹೆಚ್ಚಾಗಿರುತ್ತದೆ. ಈ ನೋವನ್ನು ಕಡಿಮೆಗೊಳಿಸಲು ಸುಲಭ ಉಪಾಯಗಳಿವೆ. ಆಯುರ್ವೇದದ ಪ್ರಕಾರ ಬೆನ್ನು ನೋವಿದ್ದರೆ ಆ ಭಾಗಕ್ಕೆ ಆರಾಮ ನೀಡುವ ಬದಲು ಹೆಚ್ಚು ಚಟುವಟಿಕೆ ನೀಡಿ.

ಇದರಿಂದಾಗಿ ಇಲ್ಲಿ ಹೆಚ್ಚಿನ ರಕ್ತಸಂಚಾರವಾಗಿ ನೈಸರ್ಗಿಕವಾಗಿ ನೋವು ಕಡಿಮೆಗೊಳ್ಳಲು ಸಾಧ್ಯವಾಗುತ್ತದೆ.ಬೆನ್ನುನೋವಿನ ಕುರಿತು ನಡೆಸಿದ ಸಂಶೋಧನೆಗಳ ಮೂಲಕ ಮೂರು ದಿನಕ್ಕೂ ಹೆಚ್ಚು ಕಾಲ ಚಟುವಟಿಕೆ ಇಲ್ಲದಿದ್ದರೆ ಬೆನ್ನುನೋವು ಅತಿರೇಕಕ್ಕೆ ತಲುಪುವ ಸಾಧ್ಯತೆಗಳಿವೆ! ಈ ನಿಟ್ಟಿನಲ್ಲಿ ತಜ್ಞರು ನೀಡಿರುವ ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ...

ಗೋಧಿ ಹುಲ್ಲಿನ ಜ್ಯೂಸ್ ಕುಡಿಯಿರಿ

ಗೋಧಿ ಹುಲ್ಲಿನ ಜ್ಯೂಸ್ ಕುಡಿಯಿರಿ

ಬೆನ್ನುಮೂಳೆಗೆ ಶಕ್ತಿಯನ್ನು ನೀಡುವ ಬೆನ್ನಿನ ಸ್ನಾಯುಗಳು ಶಕ್ತಿಹೀನವಾದರೂ ನೋವು ಉಲ್ಬಣಿಸುತ್ತದೆ. ಈ ಸ್ನಾಯುಗಳನ್ನು ಬಲಪಡಿಸಲು ಗೋಧಿ ಹುಲ್ಲಿನ ಜ್ಯೂಸ್ ಅತ್ಯುತ್ತಮವಾಗಿದೆ. ಇದರ ನಿಯಮಿತ ಸೇವನೆಯಿಂದ ಬೆನ್ನಿನ ಸ್ನಾಯುಗಳು ಬಲಗೊಂಡು ಹಳೆಯ ನೋವನ್ನೂ ಕಡಿಮೆಗೊಳಿಸಬಲ್ಲುದು.

ಆರಾಮ ಮಾಡದಿರಿ, ಚಟುವಟಿಕೆಗಳನ್ನು ಮುಂದುವರೆಸಿ

ಆರಾಮ ಮಾಡದಿರಿ, ಚಟುವಟಿಕೆಗಳನ್ನು ಮುಂದುವರೆಸಿ

ಬೆನ್ನುನೋವಿಗೆ ನೋವು ಕೊಡುವುದೇ ಒಂದು ಚಿಕಿತ್ಸೆ. ಹೋಮಿಯೋಪಥಿ ಪದ್ಧತಿಯಲ್ಲಿ ಜನಪ್ರಿಯವಾದ ಈ ಪದ್ದತಿಯನ್ನು ಆಧುನಿಕ ವಿಜ್ಞಾನವೂ ಅನುಮೋದಿಸಿದೆ. ಈ ಪ್ರಕಾರ ಬೆನ್ನು ನೋವು ಇದೆ ಎಂದು ಆರಾಮ ಮಾಡುವುದು ಸರ್ವಥಾ ಸಲ್ಲದು. ಸಾಧ್ಯವಾದಷ್ಟು ಚಟುವಟಿಕೆಗಳನ್ನು ನಡೆಸುತ್ತಾ ಇರಬೇಕು. ಆದರೆ ಈ ನಿಟ್ಟಿನಲ್ಲಿ ಬೆನ್ನುಮೂಳೆಯ ಮೇಲೆ ಪೂರ್ಣವಾದ ಭಾರ ಬೀಳದಂತೆ ಕ್ರಮಗಳನ್ನು ಅನುಸರಿಸಬೇಕಾದುದು ಅಗತ್ಯ. ಸಹಿಸಲು ಸಾಧ್ಯವಾದಷ್ಟು ನೋವಿದ್ದರೆ ಪ್ರಾರಂಭದಲ್ಲಿ ಕೊಂಚ ನೋವು ಕಂಡುಬಂದರೂ, ಕೆಲನಿಮಿಷದ ನಡಿಗೆ, ಮೆಟ್ಟಲೇರುವುದು (ನಿಧಾನವಾಗಿ) ಅಥವಾ ಇಳಿಯುವುದು, ಬಾಗುವುದು, ಸೂಕ್ತವಾದ ಯೋಗಾಸನಗಳನ್ನು ಅನುಸರಿಸುವುದು, ಒಟ್ಟಾರೆ ನಿಮಗೆ ಸೂಕ್ತವೆನಿಸಿದ ವ್ಯಾಯಾಮವನ್ನು ದಿನದ ಯಾವುದೇ ಹೊತ್ತಿನಲ್ಲಿ ಅನುಸರಿಸಿ.

ನಿಮ್ಮ ಕುಳಿತುಕೊಳ್ಳುವ ಭಂಗಿಯನ್ನು ಬದಲಿಸಿ

ನಿಮ್ಮ ಕುಳಿತುಕೊಳ್ಳುವ ಭಂಗಿಯನ್ನು ಬದಲಿಸಿ

ಸಾಮಾನ್ಯವಾಗಿ ನಾವು ಆರಾಮವಾಗಿ ಕುಳಿತುಕೊಳ್ಳುವ ಭರದಲ್ಲಿ ಬೆನ್ನು ಮೂಳೆಯನ್ನು ಕಮಾನಿನಂತೆ ಬಾಗಿಸುತ್ತೇವೆ. ಚಿಕ್ಕವಯಸ್ಸಿನಲ್ಲಿ ಈ ಪರಿ ಹೆಚ್ಚಿನ ಪರಿಣಾಮವನ್ನು ಬೀರದೇ ಇದ್ದರೂ ಕ್ರಮೇಣ ಬೆನ್ನುಮೂಳೆಯ ಕೆಳಗಿನ ತಟ್ಟೆಗಳು ಜಖಂಗೊಂಡು ಬೆನ್ನುನೋವು ನೀಡುತ್ತವೆ. ಇದಕ್ಕೆ ಸುಲಭ ಉಪಾಯವೆಂದರೆ ನೆಟ್ಟಗೆ ಕುಳಿತುಕೊಳ್ಳುವುದು.ಕುರ್ಚಿಯಲ್ಲಿ ನೆಟ್ಟಗೆ ಕುಳಿತುಕೊಳ್ಳುವುದು ಕೊಂಚ ಕಷ್ಟಕರವಾದುದರಿಂದ ಚಿಕ್ಕ ದಿಂಬೊಂದನ್ನು ಕುರ್ಚಿಯ ಬೆನ್ನಿನ ಕೆಳಭಾಗದಲ್ಲಿರಿಸುವ ಮೂಲಕ ಬೆನ್ನುಮೂಳೆ ನೆಟ್ಟಗಿರುವ ಭಂಗಿಯನ್ನು ಪಡೆಯಬಹುದು. ಇತ್ತೀಚಿನ ಕುರ್ಚಿಗಳು ಈ ಭಂಗಿಯನ್ನು ಅನುಸರಿಸುವಂತೆಯೇ ವಿನ್ಯಾಸಗೊಳಿಸಲಾಗುತ್ತಿದೆ. ಸಾಧ್ಯವಾದರೆ ಉತ್ತಮ ಗುಣಮಟ್ಟದ ಕುರ್ಚಿಯನ್ನು ನಿತ್ಯದ ಕೆಲಸಗಳಿಗಾಗಿ ಬದಲಿಸಬಹುದು.

ದಿನಕ್ಕೊಮ್ಮೆ ಪೂರ್ಣ ಪ್ರಮಾಣದ ನಿದ್ದೆ ಮಾಡಿ

ದಿನಕ್ಕೊಮ್ಮೆ ಪೂರ್ಣ ಪ್ರಮಾಣದ ನಿದ್ದೆ ಮಾಡಿ

ನಮಗೆ ದಿನಕ್ಕೆ ಎಂಟು ಘಂಟೆಗಳ ಕಾಲ ನಿದ್ದೆಯ ಅಗತ್ಯವಿದೆ. ಆದರೆ ಕೆಲಸದ ಭರದಲ್ಲಿ ಈ ನಿದ್ದೆಯನ್ನೂ ಕಡಿಮೆ ಮಾಡಿ ಕೆಲಸವನ್ನು ಹೆಚ್ಚಿಸುವುದು ಅಥವಾ ದಿನಕ್ಕೆರಡು ಹೊತ್ತಿನಲ್ಲಿ ಚಿಕ್ಕ ಚಿಕ್ಕ ನಿದ್ದೆಗಳನ್ನು ಮಾಡುವುದು ಬೆನ್ನುನೋವನ್ನು ಹೆಚ್ಚಿಸಲು ಕಾರಣವಾಗಿವೆ. ಬೆನ್ನುನೋವಿದ್ದರೆ ದಿನಕ್ಕೊಂದು ಪೂರ್ಣಪ್ರಮಾಣದ ನಿದ್ದೆಯನ್ನು ಪಡೆಯಲು ತಜ್ಞರು ಸಲಹೆ ನೀಡುತ್ತಾರೆ. ಇದರಿಂದಾಗಿ ಇಡಿಯ ಶರೀರದ ಸ್ನಾಯುಗಳು ಅಗತ್ಯವಾದ ವಿಶ್ರಾಂತಿ ಪಡೆಯುತ್ತವೆ. ಒಂದು ವೇಳೆ ಬೆನ್ನಿನ ಸ್ನಾಯುಗಳಲ್ಲಿ ಉರಿಯೂತ ಕಂಡುಬಂದಿದ್ದರೆ ಪೂರ್ಣ ಪ್ರಮಾಣದ ವಿಶ್ರಾಂತಿಯಿಂದಲೇ ಇದು ಶಮನಗೊಳ್ಳುತ್ತದೆ. ಕಡಿಮೆ ನಿದ್ದೆಯಲ್ಲಿ ಇದು ಪೂರ್ಣವಾಗಿ ಶಮನವಾಗದೇ ಚಟುವಟಿಕೆ ಪ್ರಾರಂಭವಾಗುತ್ತಿದ್ದಂತೆಯೇ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ.

ಲಘು ವ್ಯಾಯಾಮಗಳನ್ನು ಮಾಡಿ

ಲಘು ವ್ಯಾಯಾಮಗಳನ್ನು ಮಾಡಿ

ವಿಶ್ರಾಂತಿ ಬೆನ್ನುನೋವಿಗೆ ಮಾರಕ. ಸಾಧ್ಯವಿದ್ದಷ್ಟೂ ಚಟುವಟಿಕೆಯಿಂದಿರಿ. ನಿಮಗೆ ಸಾಧ್ಯವಾದ ವ್ಯಾಯಾಮಗಳನ್ನು ಮಾಡುತ್ತಾ ಇರಿ. ನಡಿಗೆ ಮತ್ತು ಕೈಕಾಲುಗಳನ್ನು ಚಾಚುವುದು ಅತ್ಯುತ್ತಮ ವ್ಯಾಯಾಮಗಳು.ನಿಮಗೆ ಸೂಕ್ತವೆನಿಸಿದ ಇತರ ಯಾವುದೇ ವ್ಯಾಯಾಮವನ್ನು ನಿಯಮಿತವಾಗಿ ಅನುಸರಿಸಿ.

ಸೂಕ್ತ ಯೋಗಾಸನಗಳನ್ನು ಅನುಸರಿಸಿ

ಸೂಕ್ತ ಯೋಗಾಸನಗಳನ್ನು ಅನುಸರಿಸಿ

ಬೆನ್ನುನೋವು ಕಡಿಮೆಗೊಳಿಸಲೂ ಹಲವು ಯೋಗಾಸನಗಳಿವೆ. ಹೆಚ್ಚಿನ ನೋವಿದ್ದರೆ ಮಾರ್ಜ್ಯಾಸನ, ಭಾರದ್ವಾಜಾಸನ ಮತ್ತು ಮಸ್ತ್ಯಾಸನ ಉತ್ತಮ ಆಸನಗಳಾಗಿವೆ. ಕಡಿಮೆ ನೋವಿದ್ದರೆ ಅರ್ಧ ಮಸ್ತ್ಯೇಂದ್ರಾಸನ, ಉಷ್ಟ್ರಾಸನ, ಧನುರಾಸನ, ಸೇತು ಬಂಧ ಸರ್ವಾಂಗಾಸನ, ಅಧೋಮುಖ ಶ್ವಾನಾಸನ ಮೊದಲಾದ ಆಸನಗಳು ಸೂಕ್ತವಾಗಿವೆ. ಯೋಗಾಸನಗಳಲ್ಲಿ ಭಂಗಿಯ ಜೊತೆಗೇ ಉಸಿರಾಟವನ್ನೂ ನಿಯಂತ್ರಿಸಬೇಕಾದುದರಿಂದ ಸ್ನಾಯುಗಳು ಉತ್ತಮವಾದ ಸೆಳೆತವನ್ನು ಪಡೆದು ರಕ್ತಸಂಚಾರವನ್ನು ಹೆಚ್ಚಿಸಿ ಬೆನ್ನುನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.

ಪರ್ಪಾಟಕ ಮೂಲಿಕೆಯ ರಸವನ್ನು ಸೇವಿಸಿ

ಪರ್ಪಾಟಕ ಮೂಲಿಕೆಯ ರಸವನ್ನು ಸೇವಿಸಿ

ಕನ್ನಡದಲ್ಲಿ ಪರ್ಪಾಟಕ ಅಥವಾ ಕಲ್ಲು ಸೂಸಿಗೆ ಎಂಬ ಗಿಡಮೂಲಿಕೆ (Comfrey Herb) ಯ ಎಲೆಗಳನ್ನು ನೀರಿನಲ್ಲಿ ಸುಮಾರು ಒಂದು ಘಂಟೆ ಕುದಿಸಿ ಸೋಸಿದ ನೀರು ಕುಡಿಯುವುದರಿಂದಲೂ ಬೆನ್ನುನೋವು ಕಡಿಮೆಯಾಗುತ್ತದೆ. ಈ ನೀರಿನಲ್ಲಿ ವಿವಿಧ ಪ್ರೋಟೀನುಗಳು, ವಿಟಮಿನ್, ಖನಿಜಗಳಿದ್ದು ಬೆನ್ನುನೋವನ್ನು ಶಮನಗೊಳಿಸಲು ಸಹಕಾರಿಯಾಗಿವೆ.

ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಸೇವಿಸಿ

ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಸೇವಿಸಿ

ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಹೇರಳವಾಗಿರುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಬೆನ್ನುನೋವು ಶೀಘ್ರವಾಗಿ ಕಡಿಮೆಯಾಗುವುದು. ಹಸಿರು ಸೊಪ್ಪು, ಮೊಟ್ಟೆ, ಹಾಲು, ಬಾಳೆಹಣ್ಣು, ಒಣಫಲಗಳು, ಸೇಬು, ಅಂಜೂರ ಮೊದಲಾದವುಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ನಮಗೆ ನೇರವಾಗಿ ಲಭ್ಯವಾಗದೇ ಇರುವುದರಿಂದ ಬಿಸಿಹಾಲಿಗೆ ಕೊಂಚ ಜೇನನ್ನು ಸೇರಿಸಿ ಕುಡಿಯುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ಬಿಸಿ ತಾಗಿಸಿ

ಬಿಸಿ ತಾಗಿಸಿ

ದೇಹಕ್ಕೆ ಬಿಸಿಯನ್ನು ನೀಡುವ ಬಿಸಿನೀರಿನ ಬಾಟಲುಗಳು ಅಥವಾ ಎಲೆಕ್ಟ್ರಿಕ್ ಉಪಕರಣಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳನ್ನು ಉಪಯೋಗಿಸಿ ಬೆನ್ನಿನ ಕೆಳಭಾಗಕ್ಕೆ ಶಾಖ ನೀಡುವುದರಿಂದ ಬೆನ್ನುನೋವು ಶೀಘ್ರ ಶಮನ ಪಡೆಯುತ್ತದೆ. ಸಾಂಪ್ರಾದಾಯಿಕ ವಿಧಾನದಂತೆ ಕಲ್ಲುಪ್ಪನ್ನು ಬಿಸಿಮಾಡಿ ಬಟ್ಟೆಯಲ್ಲಿಟ್ಟು ಶಾಖ ನೀಡುವುದರಿಂದಲೂ ಬೆನ್ನುನೋವು ಶೀಘ್ರ ಕಡಿಮೆಯಾಗುತ್ತದೆ.

ಆರಾಮದಾಯಕ ಪಾದರಕ್ಷೆಗಳನ್ನು ತೊಡಿರಿ

ಆರಾಮದಾಯಕ ಪಾದರಕ್ಷೆಗಳನ್ನು ತೊಡಿರಿ

ಆರಾಮದಾಯಕವಲ್ಲದ ಪಾದರಕ್ಷೆಗಳೂ ಬೆನ್ನುನೋವನ್ನು ಹೆಚ್ಚಿಸಬಹುದು. ನಿಮ್ಮ ಶೂ ಅಥವಾ ನಿತ್ಯದ ಪಾದರಕ್ಷೆಗಳು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ. ಹಿಮ್ಮಡಿ ಎತ್ತರವಿರದ, ಸಾಧ್ಯವಾದರೆ ಚಪ್ಪಟೆಯಾದ ಪಾದರಕ್ಷೆಗಳನ್ನು ಧರಿಸಿ.

English summary

Simple Tips To Relieve Backache

In today's life almost all people are suffering from backache. This is due to our lifestyle and wrong posture during work. The food we eat is low in calcium and other nutrients that play an important role in strengthening muscles and bones. We sit for a longer period of time at work and are unmindful of the body posture.
X
Desktop Bottom Promotion