For Quick Alerts
ALLOW NOTIFICATIONS  
For Daily Alerts

ಅಂಗಾಂಗ ಊನವಾದರೆ ಡಯಾಬಿಟಿಸ್ ಕಾರಣವೇ?

By Dr. Arpandev Bhattacharyya
|
Diabetes Organ Damage

ಡಯಾಬಿಟಿಸ್ ನಿಂದ ಯಾವ ಯಾವ ಅಂಗಗಳು ಊನವಾಗುತ್ತವೆ?

ನಿಯಂತ್ರಣವಿಲ್ಲದ ಮಧುಮೇಹದಿಂದ ಕಣ್ಣು, ಕಿಡ್ನಿ ಹಾಗೂ ನರ ದೌರ್ಬಲ್ಯ ಉಂಟಾಗುತ್ತದೆ. ಡಯಾಬಿಟಿಸ್ ನಿಂದ ಹೆಚ್ಚಿನ ಸಕ್ಕರೆ ಪ್ರಮಾಣ ನಿಮ್ಮಲ್ಲಿದ್ದರೆ, ರಕ್ತ ಸಂಚಲನೆ ಕೂಡಾ ವ್ಯತ್ಯಯಗೊಳ್ಳುತ್ತದೆ. ಅಧಿಕ ರಕ್ತದೊತ್ತಡ, ಸ್ಥೂಲಕಾಯ ಹಾಗೂ ಅಧಿಕ ಕೊಲೆಸ್ಟ್ರಾಲ್ ಇವೆಲ್ಲವೂ ಡಯಾಬಿಟಿಸ್ ನ ಜೊತೆಜೊತೆಗೆ ಬರುವ ಸಮಸ್ಯೆಗಳಾಗಿವೆ. ಇದರ ಜೊತೆಗೆ ಹೃದಯದ ಮೇಲೂ ಒತ್ತಡ ಉಂಟಾಗುತ್ತದೆ.

ಮಧುಮೇಹಿಗಳಿಗೆ ಕಣ್ಣಿನ ತೊಂದರೆ ಬಂದರೇನು ಮಾಡಬೇಕು?

ಸಕ್ಕರೆ ಕಾಯಿಲೆಯುಳ್ಳವರು ಕಣ್ಣಿನ ತೊಂದರೆ ಕಂಡು ಬಂದರೆ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇಲ್ಲದಿದ್ದರೆ ಡಯಾಬಿಟಿಸ್ ಮಾರಕವಾಗಿ ಪರಿಣಮಿಸಿ ನಿಮ್ಮ ಕಣ್ಣನ್ನೇ ತಗೆಯಬಲ್ಲದು. ಮೊದಲಿಗೆ ದೃಷ್ಟಿ ದೋಷ ಬಗ್ಗೆ ಯಾವುದೇ ಸೂಚನೆ ಸಿಗದಿದ್ದರೂ, ಆಗಿಂದಾಗ್ಗೆ ಕಣ್ಣಿನ ರೆಟಿನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕಣ್ಣಿನ ನೋವು, ಉರಿ ಕಂಡುಬಂದಾಗ, ವೈದ್ಯರ ಬಳಿ ನಿಮಗೆ ಡಯಾಬಿಟಿಸ್ ಇರುವುದನ್ನು ತಪ್ಪದೇ ಹೇಳಿ, ಸೂಕ್ತ ಚಿಕಿತ್ಸೆ ಪಡೆಯಿರಿ.

ಪಾದಗಳ ಮೇಲೆ ಡಯಾಬಿಟಿಸ್ ಪರಿಣಾಮವೇನು?

ಅನಿಯಂತ್ರಿತ ಡಯಾಬಿಟಿಸ್ ನಿಂದ ಪಾದಗಳಿಗೆ ತೊಂದರೆ ಉಂಟಾಗುವುದು ಸಹಜ. ಈ ಕೆಳಗಿನ ಸಮಸ್ಯೆಗಳು ಕಾಣಿಸಿದರೆ, ದಯವಿಟ್ಟು ವೈದ್ಯರನ್ನು ಕಾಣಿರಿ.

1. ತರಚು ಗಾಯವಾದರೂ ನಿರ್ಲಕ್ಷಿಸಬೇಡಿ. ಸಾಧ್ಯವಾದರೆ, ಪಾದಗಳಿಗೆ ಗಾಯವಾಗದಂತೆ ತಡೆಗಟ್ಟಿ.
2. ರಕ್ತ ಸಂಚಲನದಲ್ಲಿ ಇಳಿಮುಖ ಕಂಡು ಬರುವುದರಿಂದ ಗಾಯ ವಾಸಿಯಾಗುವುದು ನಿಧಾನ.
3. ಮಧುಮೇಹಿಗಳಿಗೆ ಸೋಂಕು ರೋಗದ ಭೀತಿ ಇದ್ದದ್ದೇ. ಚರ್ಮ ಸೋಂಕುಗಳು ಹರಡಿದರೆ, ಕೂಡಲೇ ವೈದ್ಯರನ್ನು ಕಂಡು ಸಲಹೆ ಪಡೆಯಿರಿ. ಗಾಯ ಸೆಪ್ಟಿಕ್ ಆಗಿ ವ್ರಣ ಆಗಲು ಎಂದಿಗೂ ಬಿಡಬಾರದು.

ಪಾದಗಳ ಸಂರಕ್ಷಣೆ ಅತಿಮುಖ್ಯ: ಹೆಚ್ಚು ನೀರಿನಲ್ಲಿ ಕೆಲಸ ಮಾಡುವ ಹೆಂಗಳೆಯರು ಪಾದ, ಹಿಮ್ಮಡಿ, ಬೆರಳುಗಳನ್ನು ಒಣಗಿಸಿಕೊಳ್ಳುವುದು ಅಗತ್ಯ. ಉಗುರುಗಳನ್ನು ಕಾಲಕಾಲಕ್ಕೆ ಕತ್ತರಿಸುವುದು ಒಳ್ಳೆಯದು ಹಾಗೂ ಒಣಗಿದ ತ್ವಚೆಯನ್ನು ಸಂರಕ್ಷಿಸಲು ಮಾಯ್ ಸ್ಚರೈಸರ್ ಹಚ್ಚಬಹುದು. ಪಾದಗಳ ಹಿಮ್ಮಡಿ ಒಡೆದಿದ್ದರೆ, ಸೂಕ್ತವಾದ ಕ್ರೀಮ್ ಹಚ್ಚಿ ವಾಸಿಮಾಡಿಕೊಳ್ಳಬೇಕು. ಇದು ಎಲ್ಲಾ ಮಧುಮೇಹಿಗಳಿಗೆ ಅನ್ವಯಿಸುತ್ತದೆ.

ಮಧುಮೇಹಿಗಳ ಪಾದಗಳಿಗೆ ಎಚ್ಚರಿಕೆ ಸೂಚನೆಗಳು

ಒಂದು ನಿಮಿಷ ವ್ಯರ್ಥ ಮಾಡದೇ ವೈದ್ಯರನ್ನು ಕಂಡು ಗಾಯ ವಾಸಿ ಮಾಡಿಕೊಳ್ಳುವ ವಿಧಾನದ ಬಗ್ಗೆ ಚರ್ಚಿಸಿ, ವೈದ್ಯರು ನೀಡುವ ಔಷಧಿಗಿಂತ ಮನೆಯಲ್ಲಿ ರೋಗಿಗಳು ತೆಗೆದುಕೊಳ್ಳುವ ಎಚ್ಚರಿಕೆ ಕ್ರಮಗಳು ಬಹು ಮುಖ್ಯ. ಇದ್ದಕ್ಕಿದ್ದಂತೆ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಹುಣ್ಣು, ಸ್ನಾಯು ಸೆಳೆತ, ಬಿದ್ದ ಗಾಯ ಮುಂತಾದ ತೊಂದರೆಗಳಿದ್ದರೆ ಕೂಡಲೇ ಡಾಕ್ಟರ್ ಶಾಪ್ ಗೆ ಪಾದ ಬೆಳೆಸಿ. ಗಾಯವನ್ನು ಹಾಗೆ ಬಿಟ್ಟರೆ ಗ್ಯಾಂಗ್ರೀನ್ ಆಗಿ ಕಾಲೇ ಕತ್ತರಿಸಬೇಕಾದೀತು. ನಡಿಗೆ ನಂತರ ಕಾಲುಗಳಲ್ಲಿ ಉಂಟಾಗುವ ನೋವಿಗೆ claudication ಎನ್ನಲಾಗುತ್ತದೆ. ರಕ್ತ ಹೀನತೆಯಿಂದ ಈ ರೀತಿ ನೋವು ಕಾಣಿಸಿಕೊಳ್ಳುವುದಲ್ಲದೆ, ಕಾಲಿನ ಬಣ್ಣ ಕೂಡಾ ಬಿಳಿಚಿಕೊಂಡು ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದ ರೀತಿ ಕಲೆಗಳು ಉಂಟಾಗುತ್ತದೆ. ಈ ರೀತಿ ತೊಂದರೆ ಕಂಡು ಬಂದರೆ ತ್ವರಿತವಾಗಿ ವೈದ್ಯಕೀಯ ನೆರವು ಪಡೆಯಬೇಕು,

ಕಿಡ್ನಿ ಮೇಲೆ ಡಯಾಬಿಟಿಸ್ ಪರಿಣಾಮವೇನು?

ಮಧುಮೇಹಿಗಳಿಗೆ ಕಿಡ್ನಿ ವೈಫಲ್ಯ ಕೂಡಾ ಪ್ರಾಥಮಿಕ ಹಂತದಲ್ಲಿ ತಿಳಿಯುವುದಿಲ್ಲ. ಆದ್ದರಿಂದ ವರ್ಷಕ್ಕೊಮ್ಮೆಯಾದರೂ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಮೂತ್ರದಲ್ಲಿನ ಪ್ರೋಟಿನ್ ಹಾಗೂ ರಕ್ತದಂಶದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೂತ್ರದಲ್ಲಿ ಪ್ರೋಟಿನ್ ಅಂಶ ಸೋರಿಕೆಯಾಗುತ್ತಿರುವುದು ಕಂಡು ಬಂದರೆ ಡಯಾಬಿಟಿಸ್ ನಿಂದ ಕಿಡ್ನಿಗೆ ತೊಂದರೆ ಆರಂಭವಾಗಿದೆ ಎಂದರ್ಥ. ಇದೇ ರೀತಿ ಕಿಡ್ನಿಯಿಂದ ಪ್ರೋಟಿನ್ ಸೋರಿಕೆಯಾಗುತ್ತಿದ್ದರೆ ಕಿಡ್ನಿ ವೈಫಲ್ಯವಾಗುವುದು ಗ್ಯಾರಂಟಿ. ಅದೃಷ್ಟವಶಾತ್, ಈ ಸೋರಿಕೆ ತಡೆಗಟ್ಟಲು ಈಗ ಚಿಕಿತ್ಸೆ ಲಭ್ಯವಿದ್ದು, ಕಿಡ್ನಿಯನ್ನು ರಕ್ಷಿಸಬಹುದಾಗಿದೆ. ಇನ್ನೊಂದು ವಿಷ್ಯ, ಕಿಡ್ನಿಯ ಅಲ್ಟ್ರಾಸೌಂಡ್ ಸ್ಕ್ಯಾನ್ ಯಾವುದೇ ರೀತಿಯಲ್ಲಿ ಡಯಾಬಿಟಿಸ್ ದಾಳಿಗೊಳಗಾದ ಕಿಡ್ನಿಯನ್ನು ಗುರುತಿಸಲು ಸಹಾಯಕವಾಗುವುದಿಲ್ಲ.

ಡಯಾಬಿಟಿಸ್ ರೋಗಿಗಳು ಕಾಲಕಾಲಕ್ಕೆ ಇಡೀ ದೇಹದ ಪರೀಕ್ಷೆ ಮಾಡಿಸಿಕೊಂಡು ರೋಗ ನಿರ್ಣಯಿಸಿಕೊಳ್ಳುವುದು ಒಳಿತು. ಪ್ರಾಥಮಿಕ ಹಂತದಲ್ಲಿ ಗುರುತಿಸಲಾಗದ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಾಯಕವಾಗಲಿದೆ.

English summary

Diabetes Damage | Diabetes Organ Damage | Health Check up | ಡಯಾಬಿಟಿಸ್| ಅಂಗಾಂಗ ಊನ | ಆರೋಗ್ಯ ತಪಾಸಣೆ|

Diabetes can damage body parts. Most effect body organs are eyes and kidneys. Thus, regular check up of diabetes patients is required.
X
Desktop Bottom Promotion